(ಎಲ್ಲರೂ ನರ್ತಿಸುತ್ತ ಬರುತ್ತಾರೆ)

ಮೇಳ : ಬಂದಾನೊ ಬಂದಾನೊ
ಎಳಿಸ್ವಾಮಿ ಬಂದಾನೊ
ಕಿಟ್ಟು ಸ್ವಾಮಿ ಬಂದಾನೊ
ಮಣ ಮಣ ಮಂತ್ರವ
ಜಪಿಸುತ ನಿಂತಾನೊ
ಮಹಿಮೆಯ ತೋರಿಸುತ||
ಕಾವಿಯ ಹೊದ್ದಾನೊ
ಜಪಸರ ಹಿಡಿದಾನೊ
ಮಣ ಮಣ ಮಂತ್ರವ
ಗೊಣಗುತ ನಿಂತಾನೊ
ಜಗದೊಳಗೆ|
ಇರದಂಥ|
ಮಹಿಮೆಗಳ|
ಮೆರೆದಾನೊ||
ನಮೋ ನಮೋ ನಿನಗೆ
ಕಿಟ್ಟೂ ಸ್ವಾಮಿ
ನಮೋ ನಮೋ ನಿನಗೆ
ಕಿಟ್ಟೂ ಸ್ವಾಮಿ||
ಕಿಟ್ಟೂ ಮಹಾಸ್ವಾಮಿಗೆ ಜೈ ಜೈ ಜೈ||

(ನರ್ತಿಸುತ್ತ ಈ ಹಾಡಾದ ಮೇಲೆ-ಹಿಂದೆ ಕಿಟ್ಟಿ ಸನ್ಯಾಸಿಯ ವೇಷದಲ್ಲಿ ನಿಂತಿದ್ದಾನೆ. ಒಂದು ಕಡೆ ರಾಜ, ರಾಜಕುಮಾರಿ, ಮತ್ತು ಪರಿವಾರ ಇದೆ. ಜಗದ್ಗುರು ಕಿಟ್ಟೂಗೆ ಜಯಕಾರವಾದ ಮೇಲೆ ಮ ಮಾ ಮಿ ಮೀ ಮು ಮೂ ಮೆ ಮೇ ಮೈ ಮೊ ಮೋ ಮೌ ಮಂ ಮಃ| ಎ ಬಿ ಸಿ ಡಿ ಇ ಎಫ್ ಜಿ ಎಚ್ ಐ ಜೆ ಕೆ ಎಲ್ ಎಮ್ ಎನ್ ಒ ಪಿ ಕ್ಯೂ ಆರ್ ಎಸ್ ಟೀ ಯೂ ವಿ ಡಬ್ಳು ಎಕ್ಸ್ ವಾಯ್ ಜಡ್ಡಃ|  ಎಂದು ಮಂತ್ರ ಗುಣುಗಿ ಬೂದಿ ಊದುತ್ತಾನೆ. ಮೈ ಮೇಲೆ ಮರಗಿಡಗಳ ಚಿತ್ರಗಳನ್ನುಳ್ಳ ಆನೆ ಆಕಡೆ ಈಕಡೆ ಓಡುತ್ತದೆ. ರಾಜನ ಪರಿವಾರದವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಶಿಷ್ಯರ ಜಯಕಾರವಾಗುತ್ತದೆ. ಜನ ಅಡ್ಡ ಬೀಳುತ್ತಾರೆ. ರಾಜ ‘ಹೋಗಮ್ಮಾ ಜಗದ್ಗುರು ಕಿಟ್ಟೂ ಸ್ವಾಮಿಗೆ ಮಾಲೆ ಹಾಕೆಂದು’ ಹೇಳುತ್ತಾನೆ. ರಾಜಕುಮಾರಿ ಕಿಟ್ಟಿಗೆ ಮಾಲೆ ಹಾಕುತ್ತಾಳೆ. ಮತ್ತೆ ಜಯಕಾರವಾಗುತ್ತದೆ. ಅಷ್ಟರಲ್ಲಿ ಕಿಟ್ಟಿಯ ಅಜ್ಜಿ ‘ಎಲ್ಲಿದೀಯೋ ಕಿಟ್ಟೀ’-ಎಂದು ಬರುತ್ತಾಳೆ. ‘ನೋಡಜ್ಜಿ, ಹತ್ತ ಪೈಸಾದಲ್ಲೇ ಮದುವೆ ಮಾಡಿಕೊಂಡೆ, ಅದೂ ರಾಜಕುಮಾರೀನ!’ ಎನ್ನುತ್ತಾನೆ ಕಿಟ್ಟಿ, ಮತ್ತೆ ಜಯಕಾರವಾಗುವಾಗ)-

-ತೆರೆ-