(ಕಿಟ್ಟಿ ಟಗರಿನೊಂದಿಗೆ ಕುಣಿಯುತ್ತ ಬರುವನು. ಮಳೆ ಬರುತ್ತಿದೆ, ಒಂದು ಮನೆ, ಒಳಮನೆ, ಪಡಸಾಲೆ ಕಾಣುತ್ತಿದೆ. ಒಳ ಮನೆಯಲ್ಲಿ ಒಬ್ಬ ಮುದುಕ, ಅವನ ಮಗ.)

ಮೇಳ : ಮಡಕೆ ಹೋಗಿ ಟಗರು ಬಂತು ಲಾ ಲಾ ಲಾ
ಮಡಕೆ ಹೋಗಿ ಟಗರು ಬಂತು ಲಾ ಲಾ ಲಾ
(ಮುದುಕ ನರಳುತ್ತಾ ಮಲಗಿದ್ದಾನೆ. ಮಗ ಅತ್ತಿತ್ತ ಅಡ್ಡಾಡುತ್ತಿದ್ದಾನೆ. ಪಡಸಾಲೆಯಲ್ಲಿ ಕಿಟ್ಟಿ ಟಗರಿನೊಂದಿಗೆ ಬಂದು ಮಲಗುತ್ತಾನೆ)

ಮುದುಕ : ಸಾಯತೇನೊ ಮಗಾ ಛಳಿ ಛಳಿ ಛಳಿ ಛಳಿ!
ಕಂಬಳಿ ಹೊಚ್ಚೂ ಮಗಾ ಛಳಿ ಛಳಿ ಛಳಿ!

ಮಗ : ಗಟ್ಟಿ ಜೀವ ಮಾಡಿಕೊಂಡು ಹೇಗೊ ಮಲಗಪ್ಪಾ, ಇನ್ನೇನು ಬೆಳಗಾಯ್ತು.

ಭಾಗವತ : ಯಾಕೆ, ಈ ಮುದುಕನಿಗೆ ಏನಾಗಿದೆ?

ಮಗ : ಏನ್ಹೇಳಲಿ ಭಾಗವತರೇ, ಮುದುಕ, ವಯಸ್ಸಾಗಿದೆ, ಛಳೀ ಸಹಿಸವೊಲ್ಲ.

ಭಾಗವತ : ಮುದುಕ ಅಂತಿ, ವಯಸ್ಸಾಗಿದೆ ಅಂತಿ, ಅದು ಹ್ಯಾಗೆ ಛಳಿ ತಡಕೊಂಡಾನು? ಇನ್ನೇನಾದರೂ ಇದ್ದರೆ ಹೊಚ್ಚು.

ಮಗ : ಎಲ್ಲಾ ಆಯ್ತು ಭಾಗವತರೇ, ಮನೆಯಲ್ಲಿರೋದೆಲ್ಲ ಹೊಚ್ಚಿಯಾಯ್ತು. ನಾನು ಉಟ್ಟಿರೋದು ಇದೊಂದು ಪಂಚೆ ಇದೆ.

ಭಾಗವತ : ಹಾ ಅದನ್ನೂ ಹೊಚ್ಚಿ ಬಿಡಬೇಡ. ಇಲ್ಲೆಲ್ಲಾ ಮಕ್ಕಳಿದ್ದಾರೆ.

(ಹೊರಗಡೆ ಗೊರಕೆ ಶಬ್ದ)

ಮಗ : ಹೊರಗಡೆ ಯಾರೋ ಗೊರಕೆ ಹೊಡೆಯೋ ಹಾಗೆ ಕೇಳ್ಸುತ್ತಲ್ಲ ಯಾರು? ನೋಡೋಣ.

(ಹೊರಗೆ ಬಂದು ನೋಡುತ್ತಾನೆ)

ಏನಿದು! ಇಂಥಾ ಛಳಿಯಲ್ಲಿ ಈ ಹುಡುಗ ಏನೇನೊ ಖಬರಿಲ್ಲದೆ ಮಲಗಿದ್ದಾ ನಲ್ಲ! ಇದರ ರಹಸ್ಯ ತಿಳೀಲೇಬೇಕು. ಅಯ್ಯಾ ಯಾರು ನೀನು?

(ಗೊರಕೆ)
ಸುಖನಿದ್ದೆ ಹೊಡೀತಿದಾನೆ. ಅಯ್ಯಾ ಯಾರಪ್ಪಾ ನೀನು?

(ಗೊರಕೆ)
ಆಯ್ತಲ್ಲ, ನಿದ್ದೆ ಹೊಡೀತಾ ಇದ್ದೀಯಂತ ಗೊತ್ತಾಯ್ತು. ಇನ್ನು ಮೇಲಕ್ಕೇಳು.

ಕಿಟ್ಟಿ : (ಆಕಳಿಸುತ್ತ) ಯಾಕ್ರಿ ಎಬ್ಬಿಸ್ತೀರಿ? ಯಾರು ನೀವು?

ಮಗ : ಚೆನ್ನಾಗಿದೆ. ನನ್ನ ಮನೆಗೆ ಬಂದು, ನನ್ನನ್ನೇ ಯಾರು ನೀವು ಅಂತ ಕೇಳೋದೆ! ಅಯ್ಯಾ, ನಾನು ಈ ಮನೆ ಯಜಮಾನ. ಅಂದರೆ ನೀನೀಗ ಮಲಗಿರೋದು ನನ್ನ ಮನೆ ಚಾವಡಿ. ಆ ಟಗರು ಕಟ್ಟಿದ್ದೀ ನೋಡು-ಅದು ನನ್ನ ಮನೆ ಕಂಬ. ನೀನೀಗ ಎದ್ದು ಕೂತೀದಿ ನೋಡು, ಅದು ನನ್ನ ಮನೆ ನೆಲ. ಇಲ್ಲಿ ಮಲಗಬೇಕಾದರೆ ನನ್ನ ಪರವಾನಿಗಿ ಬೇಕು.

ಕಿಟ್ಟಿ : ಹೌದಾ? ನಮಸ್ಕಾರ ಯಜಮಾನರೆ.

ಮಗ : ನಮಸ್ಕಾರ.

ಕಿಟ್ಟಿ : ನೆಲದ ಯಜಮಾನರೆ, ಇದೊಂದು ರಾತ್ರಿ ನಾನಿಲ್ಲಿ ಮಲಗಬಹುದೇ?

ಮಗ : ಆಗಬಹುದು.

ಕಿಟ್ಟಿ : ಕಂಬದ ಯಜಮಾನರೆ, ಈ ರಾತ್ರಿ ಈ ಕಂಬಕ್ಕೆ ನನ್ನ ಟಗರು ಕಟ್ಟಬಹುದಾ?

ಮಗ : ಆಗಬಹುದು.

ಕಿಟ್ಟಿ : ಗುಡ್‌ನೈಟ್‌.

ಮಗ : ಇನ್ನೊಂದು ಮಾತು. ಅಯ್ಯಾ ಇಂಥಾ ಕೊರೆಯೋ ಛಳಿಯಲ್ಲಿ ಅಷ್ಟೊಂದು ನಿರಂಬಳವಾಗಿ ಒಂದೂ ಹೊದಿಕೆಯಿಲ್ಲದೆ ಮಲಗಿದ್ದೀಯಲ್ಲಾ-ಹೇಗೆ?

ಕಿಟ್ಟಿ : ಹೇಳಲೇಬೇಕಾ?

ಮಗ : ಹೌದು ಹೌದು.

ಕಿಟ್ಟಿ : ಹೇಳದಿದ್ದರೆ-

ಮಗ : ನಮ್ಮಪ್ಪ ಒಳಗೆ ಛಳಿಯಿಂದ ಸಾಯ್ತಿದಾನೆ. ನಾನು ಆಶ್ಚರ್ಯದಿಂದ ಸಾಯುತಾ ಇದೀನಿ-ಹೇಳಪ್ಪಾ.

ಕಿಟ್ಟಿ : ಹಾಗಿದ್ದರೆ ಹೇಳತೀನಿ.

ಮಗ : ಹೇಳು.

ಕಿಟ್ಟಿ : ಇದರಲ್ಲಿ ಹೇಳೋದೇನಿದೇರಿ? ಪಕ್ಕದಲ್ಲಿ ಟಗರು ಕಟ್ಟಿದೇನೆ. ಈ ಟಗರು ನನ್ನ ಮೈ ಛಳಿಯನ್ನೆಲ್ಲ ಮೇಯ್ತದೆ. ನಾನು ಆರಾಮಾಗಿ ಮಲಗತೇನೆ, ಅಷ್ಟೇ. ಇಲ್ಲಿ ನನಗೀಗ ಶಕೆ ಆಗತಾ ಇದೆ. ಸುಮ್ಮನೆ ಮರ್ಯಾದೆಗಂಜಿ ಸುಮ್‌ಕಿದೇನೆ

ಅಷ್ಟೆ.

ಮಗ : ಅಯ್ಯಾ, ನೀ ದೊಡ್ಡವನಪ್ಪಾ.

ಕಿಟ್ಟಿ : ಹೌದಾ? ಮದುವೆ ಆಗೋವಷ್ಟು ದೊಡ್ಡವನಾ?

ಮಗ : ಮದುವೆ? ಮಕ್ಕಳು ಹಡೆಯೋವಷ್ಟು ದೊಡ್ಡವನಯ್ಯಾ ನೀನು.

ಕಿಟ್ಟಿ : ಹೌದ? (ದೇವರಂತೆ ನಿಂತು) ನಿಮಗೇನು ವರ ಬೇಕೊ ಕೇಳ್ರಿ. ಕೊಡತೇನೆ.

ಮಗ : ಅಯ್ಯಾ ನನ್ನ ತಂದೆಗೆ ವಯಸ್ಸಾಗಿದೆ. ಛಳಿ ತಡೀಲಾರದೆ ಸಾಯ್ತಿದಾನೆ. ದಯಮಾಡಿ ನಿನ್ನ ಟಗರು ಕೊಟ್ಟು ಉಪಕಾರ ಮಾಡತೀಯಾ?

ಕಿಟ್ಟಿ : ಅಯ್ಯಯ್ಯೋ, ಸಿಕ್ಕಿಬಿದ್ದೆ. ಏನು ಸ್ವಾಮಿ? ವರ ಕೇಳಿಕೊ ಅಂದರೆ ಟಗರು ಕೇಳೊದೆ?

ಮಗ :  ಮನೆಯಲ್ಲಿ ಹೆಣ್ಣುಮಕ್ಕಳೇ ಇಲ್ಲ. ವರ ತಗೊಂಡೇನು ಮಾಡಲಿ? ಇದೊಂದು ಟಗರು ಕೊಟ್ಟುಬಿಡು ಸಾಕು.

ಕಿಟ್ಟಿ : ಸ್ವಾಮಿ, ರೂಪಾಯಿ ನಾನೂರು ಕೊಟ್ಟು ಈ ಸ್ಪೆಶಲ್ ಟಗರು ಕೊಂಡೀನಿ. ನಿಮಗೆ ಕೊಡಲಾ?

ಮಗ : ಅಯ್ಯಾ, ನಾನೂರ ಮೇಲೆ ಒಂದು ನೂರು ಹೆಚ್ಚು ಕೊಡತೀನಿ. ಏನೊ ನನ್ನ ತಂದೆ ಸಾಯೋ ಕಾಲ್ದಲ್ಲಿ ನೆಮ್ಮದಿಯಿಂದ ಸಾಯಲಿ ಅಂತ ನನ್ನ ಆಸೆ, ದಯಮಾಡಿ ಇಲ್ಲೆನ್ನಬೇಡ. ರೂಪಾಯಿ ತರತೇನೆ….

(ಒಳಗೆ ಹೋಗುವನು)

ಕಿಟ್ಟಿ : ಏನು ಭಾಗವತರೇ, ಇಲ್ಲಿದ್ದೀರಿ-

ಭಾಗವತ : ನಿನ್ನ ಸಾಹಸಗಳಿಗೆಲ್ಲ ತಾಳ ಹಾಕಬೇಕಲ್ಲಪಾ!

ಕಿಟ್ಟಿ : ಅಡ್ಡಿಯಿಲ್ಲಪಾ?

ಭಾಗವತ : ಅಕೋ ಬಂದ.

ಮಗ : (ಬಂದು) ತಗೊಳ್ಳಪಾ ಐನೂರು ರೂಪಾಯಿ.

ಕಿಟ್ಟಿ : ಅದೇನೊ ಸರಿ. ಆದರೆ ಹ್ಯಾಗಪ್ಪಾ ಕೊಡಲಿ? ಈ ಭಾಗವತರು ಒಂದು ಮಾತು ಹೇಳಿದರೆ-

ಮಗ : ಹೇಳಿ ಭಾಗವತರೇ ಪ್ಲೀಸ್!

ಭಾಗವತ : ಛೇ ಛೇ ಕಿಟ್ಟೀ, ನೀನುಂಟು, ನಿನ್ನ ವ್ಯವಹಾರ ಉಂಟು. ಮಧ್ಯದಲ್ಲಿ ನನ್ನ ಸಿಗ ಹಾಕ್ಬೇಡ. ನಿನು ಓಡಿ ಹೋದ ಮೇಲೂ ಸ್ವಲ್ಪ ಹೊತ್ತು ನಾ ಇಲ್ಲೇ ಇರಬೇಕು.

ಕಿಟ್ಟಿ : ಸರಿ. ಆಗಲಿ, ನಿಮ್ಮ ತಂದೆ ನನಗೂ ತಂದೆ ಆದ ಹಾಗೆ. ಹ್ಯಾಗೂ ಸಾಯೋ ವಯಸ್ಸಿಗೆ ಬಂದಿದಾನೆ. ನೆಮ್ಮದಿಯಿಂದ ಸತ್ತರೆ ನಿಮ್ಮ ಹಾಗೆ ನನಗೂ ಸಂತೋಷ. ಕೊಡಿ ಕೊಡಿ.

(ದುಡ್ಡು ಇಸಿದುಕೊಳ್ಳುವನು. ಮಗ ಟಗರು ತಕ್ಕೊಂಡು ಒಳಗೆ ಹೋಗುವನು.)

ಕಿಟ್ಟಿ : ನಾನಿನ್ನು ಬರಲೆ?

ಮಗ : ಬೆಳತನಕ ಇದ್ದು ಹೊಗಪ್ಪಾ

ಕಿಟ್ಟಿ : ಸಾಧ್ಯವೆ? ಬರತೇನೆ. ಭಾಗವತರೇ, ತಾಳ ಹಾಕಿ.

(ಸಂಗೀತ. ಕಿಟ್ಟಿ ಹೋಗುವನು. ಮಗ ಟಗರು ಒಯ್ದು ತಂದೆಯ ಬಳಿ ಕಾಲುದೆಸೆ ಕಟ್ಟುವನು. ಟಗರು ಮುದುಕನನ್ನು ಹಾಯುವುದು. ಛಳಿ ಮೇಯುತ್ತಿದೆಯೆಂದು ಮಗ ಭಾವಿಸುವನು.)

ಮಗ : ನೋಡಿದಿರಾ ಭಾಗವತರೇ, ಟಗರು ಛಳಿ ಮೇಯಲಿಕ್ಕೆ ಸುರು ಮಾಡಿತು. ಐನೂರು ರೂಪಾಯಿ ಟಗರಿಗೆ ಹೆಚ್ಚೆ? ಆದರೆ ಮಾಡೋ ಕೆಲಸ! ಛೇ, ಛೇ ಸಾವಿರ ರೂಪಾಯಿ ಕೊಟ್ಟರೂ ಕಡಿಮೆ. ನೋಡಿ ಭಾಗವತರೇ, ನನ್ನ ತಂದೆಸುಮ್ಮನೆ ಮಲಗಿಬಿಟ್ಟನಲ್ಲ. ಆ ಟಗರು ಕೊಟ್ಟೋನ ಹೊಟ್ಟೆ ತಣ್ಣಗಿರಲಿ.

ಭಾಗವತ : ಅಯ್ಯಾ, ನಿನ್ನ ತಂದೆ ಯಾಕೋ ಸುಮ್ಮನಾದರು. ಏನಾಯ್ತು ನೋಡ ಹೋಗು.

ಮಗ : ಯಾಕೋ ಆರಾಮಾಗಿ ಮಲಗಿದಾನಲ್ಲ.

ಭಾಗವತ : ಆರಾಮಾಗಿ ಮಲಗಿದಾರೆ ನಿಜ. ಜೀವಂತವಾಗಿದಾರಾ-ಅಂತ.

ಮಗ : ಏನಂದಿರಿ?

(ಗಡಿಬಿಡಿಯಿಂದ ಹೋಗಿ ನೋಡುವನು.)

ಮೋಸವಾಯ್ತಲ್ಲ ಭಾಗವತರೇ, ನನ್ನ ತಂದೆ ಸತ್ತೇ ಹೋಗಿದಾನೆ. ಅಯ್ಯೋ ಐನೂರು ರೂಪಾಯಿ ಕೊಟ್ಟು ಕೈಯಾರೆ ಕೊಲ್ಲಿಸಿದ ಹಾಗಾಯ್ತಲ್ಲಾ! ಅವನೆಲ್ಲಿ ಹೋಗ್ತಾನೋ ನೋಡ್ತೀನಿ.

ಭಾಗವತ : ಅಯ್ಯಾ ಅಯ್ಯಾ ಈ ಹೆಣ?

ಮಗ : ಸತ್ತ ಹೋಯಿತು.

(ಅವಸರದಲ್ಲಿ ಹೋಗುವನು, ಸಂಗೀತ)