ಮೇಳ : ಮಡಕೆ ಹೋಗಿ ಟಗರು ಬಂತು ಲಾ ಲಾ ಲಾ
ಟಗರು ಹೋಗಿ ದುಡ್ಡು ಬಂತು ಲಾ ಲಾ ಲಾ

(ಹಾಡುತ್ತ ಕಿಟ್ಟಿ ಕಾಡಿನಲ್ಲಿ ಬರುತ್ತಿದ್ದಾನೆ. ಕರಡಿ ಬರುತ್ತದೆ. ಅದರೊಂದಿಗೆ ಗುದ್ದಾಡಿ ಓಡಲು ಪ್ರಯತ್ನಿಸುತ್ತಾನೆ. ಕರಡಿ ಬಿಡುವುದಿಲ್ಲ. ದುಡ್ಡು ಕೆಳಗೆ ಬೀಳುತ್ತದೆ. ಗುದ್ದಾಡುತ್ತ)

ಕಿಟ್ಟಿ : ಅಯ್ಯೋ ಮನುಷ್ಯರಾದರೆ ಮೋಸ ಮಾಡಬಹುದಿತ್ತು. ಈ ಕರಡಿಗೆ ಹ್ಯಾಗಪ್ಪಾ ಮೋಸ ಮಾಡೋದು? ಆ ಭಾಗವತನಾದರೂ ಇದ್ದಿದ್ದರೆ ಚೆನ್ನಾಗಿರೋದು. ಏ ಕರಡಿ ಏ ಏ………

(ದೂರದಿಂದ ಭಗವಂತನ ಹಾಡು)

ಭಗವಂತ : ಹುಡಿಗೇರೊಳಗೆ ಹುಡಿಗಿ ಚೆಂದ
ಹೇಮಮಾಲಿನಿ!
ಹುಡಿಗೇರೊಳಗೆ ಹುಡಿಗಿ ಚೆಂದ
ಹೇಮಮಾಲಿನಿ||

ಕಿಟ್ಟಿ : ಇದ್ಯಾವನೋ ತಮಿಳು ಸಿನಿಮಾದ ಭಗವಂತನ ಹಾಗೆ ಬರ್ತಿದಾನೆ!

(ಭಗವಂತನ ಕುದುರೆ ಹತ್ತಿ ಸಮೀಪ ಬರುವನು. ಕಿಟ್ಟಿ ಮತ್ತು ಕರಡಿಯ ಗುದ್ದಾಟ ನೋಡಿ ಆಶ್ಚರ್ಯದಿಂದ ನಿಲ್ಲುವನು.)

ಕಿಟ್ಟಿ : ಭಗವಂತನಿಗೆ ನಮಸ್ಕಾರ.

ಭಗವಂತ : ಎಲಾ! ಇವನಿಗೆ ನನ್ನ ಹೆಸರು ಹ್ಯಾಗೆ ಗೊತ್ತಾಯ್ತು?

ಕಿಟ್ಟಿ : ನನಗೊತ್ತಿಲ್ಲದೇನು! ಈ ರೂಪ! ಈ ಕುದುರೆ! ಒಳ್ಳೆ ರಾಜೇಶ್ ಖನ್ನಾ ಥರಾ ಇದೀರಾ. ನಿಮ್ಮನ್ನ ಹೇಮಮಾಲಿನಿ ನೋಡಬೇಕು.

ಭಗವಂತ : ಎಲಾ ಎಲಾ! ನನಗೆ ಹೇಮಾಮಾಲಿನಿ ತುಂಬ ಇಷ್ಟ ಅಂತ ಇವನಿಗೆ ಹ್ಯಾಗೆ ಗೊತ್ತಾಯ್ತು? ಅಯ್ಯಾ, ಸೋತೆ. ನನ್ನ ಹೆಸರು ಭಗವಂತ ಹೌದು. ನನಗೆ ಹೇಮಾಮಾಲಿನಿ ತುಂಬ ಇಷ್ಟ ಹೌದು. (ಕುದುರೆ ಇಳಿದು) ಬೇಗನೆ ಹೇಳು-ಏನು ಮಾಡಿದರೆ ನನಗೆ ಹೇಮಾಮಾಲಿನಿ ಸಿಗತಾಳೆ?

ಕಿಟ್ಟಿ : ಅದಿರ್ಲಿ, ನೀವು ಹೀಗ್ಯಾಕೆ ಡ್ರೆಸ್ ಮಾಡಿಕೊಂಡೀರಿ ಅಂತ ಮೊದಲು ಹೇಳಿ.

ಭಗವಂತ : ಇಷ್ಟೆಲ್ಲಾ ಹೇಳಿದವನು ಅದು ಗೊತ್ತಿಲ್ಲವೆ ನಿನಗೆ? ಅದೇ ಆ ‘ದಿಲ್ ಧಡಕಣ್’ ಅಂತ ಪಿಚ್ಚರ್ ಇತ್ತಲ್ಲಾ-ಅದರಲ್ಲಿ ಹೇಮಾಮಾಲಿನಿ ಪಾರ್ಕ್‌ನಲ್ಲಿದ್ದಾಗ ರಾಜೇಶ್ ಖನ್ನಾ ಹೀಗೇ ಬರೋದಿಲ್ಲವೆ?

ಕಿಟ್ಟಿ : ಈಗಲೂ ಬರ್ತಾಳೇನೋ ಅಂತ ಬಂದಿರಿ.

ಭಗವಂತ : ಹೆಹ-ನಿನ್ನಿಂದ ಮುಚ್ಚಿಟ್ಕೊಳ್ಳೋದೇನಿದೆ?

ಕಿಟ್ಟಿ : ಇದೆಲ್ಲಾ ಖರ್ಚಿನ ಬಾಬತ್ತು ಭಗವಂತಾ. ನೀನ್ಯಾವುದೋ ಹಳ್ಳೀ ಗೌಡಾ. ನಿನ್ನ ನೋಡಿದರೆ ಎಸ್ಸೆಲ್ಸಿ ದಾಟಿಲ್ಲಾ ಅಂತ ಕಾಣ್ಸತ್ತೆ. ದುಡ್ಡು? ಸಿಕ್ಕಬಹುದು ವರ್ಷಕ್ಕೆ ಹತ್ತೆಂಟ ಸಾವಿರ. ಒಂದು ದಿನಕ್ಕೇ ಸಾವಿರ ಖರ್ಚಮಾಡೋ ಹುಡುಗಿ ಸಿಗತಾಳಾ?

ಭಗವಂತ : (ಸುತ್ತ ದುಡ್ಡನ್ನು ಗಮನಿಸಿ) ಅದಿರಲಿ, ಅದ್ಯಾಕೆ ಹೀಗೆ ಸುತ್ತ ದುಡ್ಡು ಬಿದ್ದಿದೆ? ಯಾಕೆ ಹೀಗೆ ಕರಡಿ ಜೊತೆ ಗುದ್ದಾಡ್ತಾ ಇದ್ದಿ? ನಿನ್ನ ವಿಷಯ ಹೇಳಲೇ ಇಲ್ಲಾ.

ಕಿಟ್ಟಿ : ಇದೊ ಈ ಕರಡಿ ಇದೆಯಲ್ಲ-ನಂದೆ. ದಿನಾಲು ಸಾವಿರ ರೂಪಾಯಿ ಕಕ್ಕತದೆ.ಈ ಹೊತ್ತು ಅದ್ಯಾಕೋ ಐನೂರು ರೂಪಾಯಿ ಮಾತ್ರ ಕಕ್ಕಿದೆ. ಅದಕ್ಕೆ ಇನ್ನಷ್ಟು ಹೊತ್ತು ಹಿಡಕೊಂಡು ಮಿಕ್ಕನಾದ ಐನೂರು ರೂಪಾಯಿ ಕಕ್ಕಸ್ತಾ ಇದೀನಿ.

ಭಗವಂತ : ಐಡಿಯಾ! ಗುರು! ನೀನೇ ಕಾಪಾಡಬೇಕು. ನನ್ನ ಹತ್ತಿರ ಇದೊಂದು ಕುದುರೆ ಇದೆ. ಇದನ್ನ ತಗೊಂಡು ಈ ಕರಡಿ ಕೊಟ್ಟು ಬಿಡು. ನಿನ್ನ ಹೆಸರು ಹೇಳಿ ಹೇಮಾಮಾಲಿನೀನ್ನ ಮದುವೆ ಮಾಡಿಕೊಳ್ಳುತ್ತೇನೆ.

ಕಿಟ್ಟಿ : ಛೇ, ಛೇ, ಇದೊಳ್ಳೆದಾಯ್ತಲ್ಲ. ದುಡ್ಡು ಕಕ್ಕೋ ಕರಡಿ ಇಲ್ಲಿದೇಂತ ತೋರಿಸಿದರೆ, ತೋರಿಸಿದ ಕೈನೇ ನುಂಗತಿ! ಹೋಗ್ಹೋಗು, ನನಗೇನೋ ಕಣ್ಣೀರಿಟ್ಟು ಅಳೋ ರನ್ನ ಕಂಡರೆ ವಪರೀತ ಕರುಣೆ ಬರತದೆ ನಿಜ. ದಯಮಾಡಿ ಅಳಬೇಡ,
ಸುಮ್ಮನೆ ಹೊರಟ್ಹೋಗು.

ಭಗವಂತ : ಗುರು, ನನ್ನನ್ನ ನಿನ್ನ ಹಾಗೆ ತಿಳಿದವರು ಯಾರಿದ್ದಾರೆ? ನೀನು ಈ ಕರಡಿ ಕೊಟ್ಟು ಕಾಪಾಡದೆ ಹೊದರೆ ಹೇಮಾಮಾಲಿನಿ ನನಗೆ ಸಿಕ್ಕೋದಿಲ್ಲ. ಅವಳು ಸಿಕ್ಕದೆ ಹೋದರೆ ನಾನು ನೇಣು ಹಾಕಿಕೊಂಡು ಸಾಯೋದು ಖಂಡಿತ.

ಕಿಟ್ಟಿ : ಭಗವಂತಾ, ನೀ ಹೀಗೆಲ್ಲ ಹೇಳಬೇಡ, ನನಗಾಗಲೇ ಸ್ವಲ್ಪ ಸ್ವಲ್ಪ ಕರುಣೆ ಬರತಾ ಇದೆ. ಅಳಬೇಡ.

ಭಗವಂತ : ನಿನ್ನ ಕರುಣೆಗಾಗಿ ಹೇಳ್ತಾ ಇಲ್ಲ ಗುರು. ನನ್ನಾಣೆ, ನಿನ್ನಾಣೆ, ಕೂತವರಾಣೆ-ಹೇಮಮಾಲಿನಿ ಸಿಕ್ಕದೇ ಹೊದರೆ ನನಗೆ ಹುಚ್ಚೀ ಹಿಡೀತದೆ.

(ಅಳತೊಡಗಿದನು)

ಕಿಟ್ಟಿ : ಆಯ್ತಲ್ಲಾ, ಅತ್ತೇಬಿಟ್ಟೆಯಾ? ನಿನಗೆ ನಾ ಮೊದಲೇ ಹೇಳಿದ್ದೆ-ಅಳೋರನ್ನ ಕಂಡರೆ ನನಗೆ ಕರುಣೆ ಬರತದೆ ಅಂತ. ಬಂದೇ ಬಿಡ್ತಲ್ಲ. ಹಾಳಾಗಿ ಹೋಗು. ಬಾ ಈ ಕರಡಿ ಹೀಗ್ಹಿಡಿ.

(ಕರಡಿಗೂ ಭಗವಂತನಿಗೂ ಗಂಟು ಹಾಕಿ ಹೊರಡುವನು.)

ಕಿಟ್ಟಿ : ಭಾಗವತರೇ, ಏನಂತೀರಿ?

ಭಾಗವಂತ : ಅಯ್ಯಾ, ನಿನ್ನ ಮಹಿಮೆ ಆಗಾಧವಪ್ಪಾ. ನಮ್ಮ ಪಕ್ಷಾಂತರಿ ರಾಜಕಾರಣಿ ಗಳಿಗೂ ಇಷ್ಟು ಬುದ್ಧಿಯಿಲ್ಲವಲ್ಲಯ್ಯ!

ಕಿಟ್ಟಿ : ಸಾಕು, ಸಾಕು, ಗುಟ್ಟು ಬಯಲಾಗೋದರಲ್ಲೇ ನಾ ಹೊರಡಬೇಕು. ಎಲ್ಲಿ ಸಂಗೀತ ಕೊಡಿ-

(ಸಂಗೀತ, ಕಿಟ್ಟಿ ಹೋಗುವನು. ಭಗವಂತ ಕರಡಿಯೊಂದಿಗೆ ಹೋರಾಡುತ್ತಿರುವನು, ಸ್ವಲ್ಪ ಹೊತ್ತಾದ ಮೇಲೆ.)

ಭಗವಂತ : ಏನಿದು! ಆಗಲೇ ಮೂರು ಘಂಟೆಯಾಯ್ತು. ಒಂದು ರೂಪಾಯೀನೂ ಕಕ್ಕಲಿಲ್ಲವೇ? ಅಬ್ಬಬ್ಬಾ ಎಂಥಾ ಒರಟು ಕರಡಿ ಇದು? ಮೈಯೆಲ್ಲಾ ಪರಚಿಬಿಟ್ಟಿತು. ಮೊದಲನೇ ದಿನವೇ ಹೀಗಾದರೆ ಮುಂದೆ ದಿನಾಲೂ ಹ್ಯಾಗಪ್ಪಾ ಮಾಡೋದು? ಸಾವಿರ ಕಕ್ಕಿಸಲಿಕ್ಕೆ ಹಗಲು ರಾತ್ರಿ ಈ ಕರಡಿ ಜೊತೆ ಗುದ್ದಾಡಿದರೆ ಹೇಮಾಮಾಲಿನಿ ಹತ್ತರ ಯಾವಾಗ ಹೋಗೊದು? ಅಯ್ಯಯ್ಯೊ! ಮೇಲೇ ಬರತಾ ಇದೆ! ಎಪ್ಪಾ, ಬರ್ಯೋ ಬರ್ಯೋ

(ಮಗ, ಮುದುಕಿ ಬರುತ್ತಾರೆ. ಅವರನ್ನು ನೋಡಿ ಕರಡಿ ಭಗವಂತನನ್ನು ಬಿಟ್ಟು ಓಡಿ ಹೋಗುವುದು.)

ಮಗ : ಹಾ ಇಲ್ಲಿದೆ ನನ್ನ ದುಡ್ಡಿನ ಚೀಲ!

ಭಗವಂತ : ಅಯ್ಯೊ, ನನ್ನ ಕರಡಿ ಒಡಿಹೋಯ್ತು. ದಿನಕ್ಕೆ ಸಾವಿರ ಕಕ್ಕೋ ಕರಡಿ ಹೇಮಾಮಾಲಿನಿ ಸಹಿತ ಓಡಿಹೋಯ್ತು. ರೀ ಯಾರೀ ಅದು? ನನಗಷ್ಟಾದರೂ ಉಳೀಲಿ ಬಿಡಿರಿ.

ಮಗ : ಇದು ನನ್ನ ದುಡ್ಡು.

ಭಗವಂತ : ಅಯ್ಯೋ ಸುಮ್ಮನೆ ಹೋಗರಿ.

ಮಗ : ರೀ, ಇಲ್ಲೊಬ್ಬ ಬುಶ್‌ಶರ್ಟ್ ಹಾಕಿದ ಹುಡುಗಾ ಬಂದಿದ್ನಾ?

ಭಗವಂತ : ಹೌದು.

ಮಗ : ಅವನೇ ತಾನೇ ನಿನಗೆ ಈ ದುಡ್ಡು ಕೊಟ್ಟದ್ದು?

ಭಗವಂತ : ಹೌದ್ಹೌದು, ನನ್ನ ಕುದುರೆ ತಕ್ಕೊಂಡು ಈ ಕರಡಿ ಬಿಟ್ಟು ಹೋದನಲ್ಲಾ! ಮದುವೆಯಾಗಿ ಹೇಮಾಮಾಲಿನಿ ಜೊತೆ ಗುದ್ದಾಡೋಣ ಅಂದರೆ ಈ ಕರಡಿ ಜೊತೆ ಗುದ್ದಾಡೋ ಹಾಗೆ ಮಾಡಿ ಹೋದ.

ಮುದಿಕಿ : ನೋಡಿದೆಯಾ ಇವನಿಗೂ ಮೋಸ ಮಾಡಿದಾನೆ! ನೋಡಪ್ಪಾ, ಆ ಹುಡುಗಾ ನಮಗೂ ಮೋಸ ಮಾಡಿದ್ದಾನೆ. ಬೇಕಾದರೆ ನೀನೂ ನಮ್ಮ ಜೊತೆ ಬಾ. ಅವನನ್ನ ಹಿಡೀಲಿಕ್ಕೇ ಹೊರಟಿದೇವೆ.

ಭಗವಂತ : ಹೌದಾ? ನಾನೂ ಬರತೀನಿ. ಅದೆಲ್ಲಿ ಹೋಗತಾನೋ ನೋಡೋಣ.

ಮಗ : ನಡೀರಿ.

(ಸಂಗೀತ. ಎಲ್ಲರೂ ಹೋಗುವರು)