(ಮಡಕೆ, ಅಕ್ಕಿ ಹಿಡಿದುಕೊಂಡು ಕುಣಿಯುತ್ತ ಕಿಟ್ಟಿ ಬರುತ್ತಾನೆ. ಮುದುಕಿಯೊಬ್ಬಳು ನೂಲುತ್ತ ಕುಳಿತಿದ್ದಾಳೆ. ಪಕ್ಕದಲ್ಲೇ ಟಗರು ಇದೆ.)

ಮೇಳ : ಐದು ಪೈಸೆಗಕ್ಕಿ ಬಂತು ಲಾ ಲಾ ಲಾ
ಐದು ಪೈಸೆಗೆ ಮಡಕೆ ಬಂತು ಲಾ ಲಾ ಲಾ ಲಾ||

ಕಿಟ್ಟಿ : ಆಹಾ! ಈ ಟಗರು ಎಷ್ಟೊಂದು ಚೆನ್ನಾಗಿದೆ! ಎಷ್ಟು ಚೆನ್ನಾಗಿ ಹಾಡತ್ತದೆ. ಈ ಟಗರೇ ಇಷ್ಟು ಚೆನ್ನಾಗಿರಬೇಕಾದರೆ ಇದನ್ನು ಸಾಕಿದ ಮುದಕಿ ಎಷ್ಟು ಒಳ್ಳೆಯವಳಿರಬೇಕು! ಟಗರಜ್ಜೀ ಟಗರಜ್ಜೀ, ಈ ಟಗರು ನಿಂದೇ ತಾನೆ?

ಮುದಿಕಿ : ಹೌದಪ್ಪ ಮಗಾ, ನಂದೇ.

ಕಿಟ್ಟಿ : ನನಗ್ಗೊತ್ತಿತ್ತು. ಇಷ್ಟೊಂದು ಒಳ್ಳೆ ಟಗರು ನಿಂದೇ ಇರಬೇಕು ಅಂತ. ಇದಕ್ಕೆ ಮದುವೆ ಮಾಡೀಯಾ ಟಗರಜ್ಜಿ?
ಮುದಿಕಿ : ಟಗರಿಗೆ ಮದುವೆ? ಒಳ್ಳೇ ಹುಡುಗ! ಇನ್ನೂ ಮಾಡಿಲ್ಲಪ್ಪ. ಒಂದು ಹೆಣ್ಣು

ಸಿಕ್ಕಿದ ಮೇಲೆ ಮಾಡೋಣಾಂತ ಬಿಟ್ಟಿದ್ದೇನೆ.

ಕಿಟ್ಟಿ : ಆಹಾ ಏನು ಬುದ್ಧಿವಂತಿಕೆ! ಏನು ತಿಳುವಳಿಕೆ! ಇಷ್ಟು ಬುದ್ಧಿ ನಮ್ಮಜ್ಜಿಗಿದ್ದಿದ್ದರೆ ಇಲ್ಲಿಗ್ಯಾಕೆ ಬರತಿದ್ದೆ! ನೀನೇ ನನಗೆ ಅನ್ನ ಬೇಯಿಸಲಿಕ್ಕೆ ತಕ್ಕವಳು. ನೋಡು ಟಗರಜ್ಜಿ, ಅಕ್ಕೀ ಇದೆ, ಮಡಕೆ ಇದೆ, ಸ್ವಲ್ಪ ಅನ್ನಾ ಬೇಯಿಸಿ ಹಾಕತೀಯಾ? ನಿನ್ನ ಹತ್ತರಾನೇ ಯಾಕೆ ಬಂದೆ ಅಂತ ಕೇಳು.

ಮುದಿಕಿ : ಸರೀನಪ್ಪಾ, ನನ್ನ ಹತ್ತಿರಾನೇ ಯಾಕೆ ಬಂದೆ?

ಕಿಟ್ಟಿ : ನೋಡು, ನಾನು ಒಳ್ಳೆಯವರು ಬೇಯಿಸಿದ ಅನ್ನ ಮಾತ್ರ ಉಣ್ಣೋದು. ಈ ಊರಿನಲ್ಲಿರೋರೆಲ್ಲ, ಇಲ್ಲಾ ದಡ್ಡರು. ಇಲ್ಲಾ ಮೂರ್ಖರು. ನಿನ್ನ ನೋಡು-ನೀ ಮೂರ್ಖಳಾ?

ಮುದಿಕಿ : ಅಲ್ಲ.

ಕಿಟ್ಟಿ : ಧಡ್ಡಳಾ?

ಮುದಿಕಿ : ಅಲ್ಲಾ.

ಕಿಟ್ಟಿ : ಅದಕ್ಕೇ ನಿನ್ನ ಹತ್ತಿರ ಬಂದೆ. ಅನ್ನ ಬೇಯಿಸಿ ಹಾಕತೀಯಾ?

ಮುದಿಕಿ : ಇಷ್ಟೇನೊ? ನೀನೆಲ್ಲಿ ಟಗರು ಕೇಳ್ತೀಯೊ ಅಂತಿದ್ದೆ. ಕೊಡು ಬೇಯಿಸಿ ಹಾಕತೇನೆ.

ಕಿಟ್ಟಿ : ಹಾಗಿದ್ದರೆ ಟಗರಜ್ಜಿ, ನಾನು ನದೀಗೆ ಹೋಗಿ ಸ್ನಾನ ಮಾಡಿಕೊಂಡು ಬರ್ತೀನಿ. ಅಷ್ಟರಲ್ಲಿ ನೀ ಅನ್ನ ಬೇಯಿಸಿಡು. ಹಾ…..

(ಮಡಕೆ, ಅಕ್ಕಿ ಕೊಟ್ಟು ಹೋಗುವನು)

ಮುದಿಕಿ : ಬಲ್‌ನನ ಮಗಾ ಇವನು! ಒಳ್ಳೆಯವನು ಅಂತ ಹೊಗಳಿದರೆ ಉದ್ದಿನ ವಡೇ ತರ ಉಬ್ಬತಾಳೆ, ಅನ್ನಾ ಬೇಯಿಸಿ ಹಾಕತಾಳೆ-ಅಂದ್ಕೊಂಡಿದಾನೆ. ನಾನೆಷ್ಟು ಒಳ್ಳೆಯವಳು ಅಂತ ನನಗ್ಗೊತ್ತಿಲ್ಲವೆ? ಭಾಗವತರೇ,

ಭಾಗವತ : ಏನಮ್ಮಾ?

ಮುದಿಕಿ : ನಾನು ಯಾರೂಂತ ನಿಮಗೆ ಗೊತ್ತು ತಾನೆ?

ಭಾಗವತ : ಇಲ್ಲಮ್ಮ ಯಾರು ನೀನು? ಏನ್ನಿನ್ನ ಮಹಿಮೆ?

ಮುದಿಕಿ : ಊರಿನಾಗೆ ಹಿರಿಯವಳು
ಹದ್ದಿನ ವಯಸ್ಸಿನವಳು
ಏನೆಲ್ಲ ಉಂಡವಳು ಕಂಡವಳು ಮಗನೆ
ಅಡಗೂಲಜ್ಜಿಯು ನಾನು||

ನಾನೆಂಬೊ ಪುಂಡರಿಗೆ
ಪಂಗನಾಮ ಹಚ್ಚಿದವಳು
ಠಕ್ಕರ ಲೆಕ್ಕಕ್ಕೆ ಕೊಕ್ಕೆ ಹಾಕಿದೆ ನಾನು
ಮಣ್ಣ ಮುಕ್ಕಿಸಿದವಳು||

ತಿಳಿದ ಬಂತಾ ಭಾಗವತರೇ?

ಭಾಗವತ : ಆದೇನು ಚೆನ್ನಾಗಿ ತಿಳಿಸಿ ಹೇಳಮ್ಮಾ.

ಮುದಿಕಿ : ಹದ್ದಿಗಾದಷ್ಟು ವಯಸ್ಸಾಯ್ತು ನನಗೆ. ಏನೆಲ್ಲ ಕಂಡವಳು, ಉಂಡವಳು ನಾನೆಂಬೊ ಪುಂಡರಿಗೆ ಪಂಗನಾಮಾ ಹಚ್ಚಿದವಳು. ಠಕ್ಕರನ್ನ ಮಣ್ಣ ಮುಕ್ಕಿಸಿ ದವಳು. ಎಂಥೆಂಥವರನ್ನೋ ಲಾಗಾ ಹಾಕಿಸಿ ಹಣ್ಣಾದವಳು ನಾನು-ನನ್ನ ಎದುರಿಗೆ ಈ ಪುಟ್ಟ ಚಿಗುರೆ?

ಭಾಗವತ : ಛೇ ಛೇ, ಪಾಪ ಹುಡುಗ ನಿನ್ನನ್ನ ತಪ್ಪ ತಿಳಿದುಕೊಂಡಿದಾನೆ.

ಮುದಿಕಿ : ನಾನೇನ ಮಾಡ್ತೀನಿ ಗೊತ್ತಾ? ಕೊಟ್ಟದ್ದರಲ್ಲಿ ಅರ್ದಾ ಅಕ್ಕಿ ನಾ ಇಟ್ಟುಕೊಂಡು ಅರ್ಧಾ ಅಕ್ಕಿ ಬೇಯಿಸಿ ಹಾಕತೇನೆ. ನಾ ಇಟ್ಟಕೊಂಡದ್ದು ಇವನಿಗೆ ಹ್ಯಾಗೆ ತಿಳಿದೀತು? ಅಲ್ಲವಾ?

ಭಾಗವತ : ಭಲಾ ಮುದಿಕಿ ನೀನು.

ಮುದಿಕಿ : ಅವನ ಮುಂದೆ ಹೇಳಬೇಡಿ.

ಭಾಗವತ : ಇಲ್ಲಮ್ಮಾ.

(ಅರ್ಧ ಅಕ್ಕಿ ಮುಚ್ಚಿಟ್ಟುಕೊಳ್ಳುವಳು. ಇನ್ನರ್ಧ ಬೇಯಿಸತೊಡಗುವಳು. ಕಿಟ್ಟಿಯ ಆಗಮನ. ಸಂಗೀತ)

ಕಿಟ್ಟಿ : ಗೊತ್ತಾಯ್ತು, ಗೊತ್ತಾಯ್ತು, (ಸಂಗೀತ) ಗೊತ್ತಾಯ್ತೂ ಅಂದೆ. (ಸಂಗೀತ)
ಎಷ್ಟು ಸಲ ಹೇಳಿದರೂ ಅದೇ ಮಾತು, ಕೇಳಿಸಿ ಬಮತು ಅಂತ ಹೇಳಲಿಲ್ಲಾ?

ಮುದಿಕಿ : ಯಾರ ಜೊತೆ ಮಾತಾಡ್ತಿದಾನೆ? ಅಪ್ಪಾ ನನ್ನ ಕರೆದೆಯಾ?

ಕಿಟ್ಟಿ : ಇಲ್ಲಾ ಅಜ್ಜಿ?

ಮುದಿಕಿ : ಮತ್ತೇನೂ ಮಾತಾಡತಿದ್ದೆ?

ಕಿಟ್ಟಿ : ಈ ಮಡಕೆ ಏನೋ ಹೇಳ್ತಾ ಇತ್ತು. ಅದಕ್ಕೆ ಏನೊ ಹೇಳ್ತಾ ಇದ್ದೆ.

ಮುದಿಕಿ : ಮಡಕೆ ಏನೊ ಹೇಳ್ತಾ ಇತ್ತಾ? ಮಡಕೆ ಮಾತಾಡೀತೇನೊ ಮಗಾ?

ಕಿಟ್ಟಿ : ಹೌದು ಟಗರಜ್ಜಿ. ಈ ಮಡಕೆ ಮಾತಾಡತ್ತೆ.

ಮುದಿಕಿ : ಹೌದಾ? ಏನು ಮಾತಾಡಿತು?

ಕಿಟ್ಟಿ : ಆ? ಏನ ಹೇಳಿತು? ನಾನು ಅಕ್ಕಿ ಕದ್ದೆನಂತಾ? ಅಯ್ಯಯ್ಯೋ! (ಸಮೀಪ ಬಂದು) ನಾ ಅಕ್ಕಿ ಕದ್ದದ್ದೇನೊ ನಿಜ. ಆದರೆ ಏನ ಮಗಾ, ಮಡಕೆ ಮಾತಾಡೋದಂದರೇನು? ನಾ ಕದ್ದದ್ದು ಅದಕ್ಕೆ ತಿಳಿಯೋದಂದರೇನು? ಅಬ್ಬಬ್ಬಾ! ಮಗಾ-

ಕಿಟ್ಟಿ : ಆಂ?

ಮುದಿಕಿ : ಎಲ್ಲಿ ಸಿಗ್ತು ಮಗಾ ಈ ಮಡಕೆ? ಎಷ್ಟು ಕೊಟ್ಟೆ? ಬಾ ಊಟಾ ಮಾಡು ಊಟಾ… (ತಿನ್ನಿಸುವಳು)

ಕಿಟ್ಟಿ : ಅದನ್ನೆಲ್ಲ ಏನ್ಕೇಳ್ತಿ ಅಜ್ಜಿ? ಕೈತುಂಬ ದುಡ್ಡು ಕೊಟ್ಟು ದೂರದ ಊರಿನಿಂದ ತಂದೆ.

ಮುದಿಕಿ : ಮಗಾ, ನಾನೂ ಮುದಿಕಿ, ವಯಸ್ಸಾಯ್ತು. ನನಗೆ ಯಾರೂ ನಿನ್ನ ಹಾಗೆ ಮಕ್ಕಳಿಲ್ಲ ಮರಿಯಿಲ್ಲ. ಒಂದೇ ಒಂದು ಬಿದ್ದುಕೊಂಡಿದೇನೆ. ಸಾಯೋತನಕ ಕಾಲ ಕಳೆಯೋದೇ ಕಷ್ಟ. ಮಾತಾಡಿಕೊಂಡಿರ್ಲಿಕ್ಕೆ ಈ ಮಡಕೆ ಕೊಡ್ತೀಯಾ?

ಕಿಟ್ಟಿ : ಏನಂದೆ? ಈ ಮಾತಾಡೋ ಮಡಕೆ ನಿನಕ್ಕೊಡೋದೆ?

ಮುದಿಕಿ : ಪುಕ್ಕಟೆ ಬೇಡ. ನಿನಗೆ ಕೊಡೋದಕ್ಕೆ ನನ್ನ ಹತ್ತರ ಕೈತುಂಬ ದುಡ್ಡಿಲ್ಲ, ಇದೊಂದು ಟಗರು ಇದೆ. ಇದನ್ನೆ ತಗೊಂಡು ಆ ಮಡಕೆ ಕೊಡ್ತೀಯಾ?

ಕಿಟ್ಟಿ : ಅಜ್ಜಿ ಈ ಮಡಕೆ ಬೆಲೆ ಏನು? ಈ ಪಿಸ್ ಟಗರಿನ ಬೆಲೆ ಏನು? ಛೇ ಛೇ ನಿನ್ನ ಬಿಟ್ಟು ಇನ್ನು ಯಾರಾದರೂ ಈ ಮಾತು ಹೇಳಿದ್ದರೆ ರೇಗಿ ಬಿಡುತ್ತಿದ್ದೆ.

ಮುದಿಕಿ : ಮಗಾ, ನೀನೇ ನನ್ನ ಮೊಮ್ಮಗ ಆಗಿದ್ದರೆ ಹೀಗಂತಿದ್ಯಾ? ಅನ್ನಾ ಬೇಯಿಸಿ ಹಾಕಿದ್ದಕ್ಕಾದರೂ ಒಪ್ಪಿಕೊಳ್ಳಪಾ.

ಕಿಟ್ಟಿ : ಇನ್ನೇನ ಮಾಡಲಿಕ್ಕಾಗತ್ತಜ್ಜಿ? ಅನ್ನದ ಋಣ. ಇಲ್ಲಾ ಅಂದರೆ ಆಗತ್ತಾ? ನೀ ಬೇರೆಯಲ್ಲ. ನನ್ನಜ್ಜಿ ಬೇರೆಯಲ್ಲ. ಬೇರೆಯವರಾಗಿದ್ದರೆ ಇಂಥಾ ಹತ್ತು ಟಗರಿಗೂ ಈ ಮಡಕೆ ಕೊಡತಿರಲಿಲ್ಲ. ಹೋಗಲಿ ಮಡಕೆ ತಗೊ, ಟಗರು ಕೊಡು.

ಮುದಿಕಿ : ತಗೊ ತಗೊ (ಉತ್ಸಾಹದಿಂದ ಕೊಡುವಳು. ಕಿಟ್ಟಿ ಟಗರಿನೊಂದಿಗೆ ಹೊರಡು ವನು.) ಏನಮ್ಮಾ ಮಡಕೆಮ್ಮಾ? ಹ್ಯಾಗಿದ್ದಿ? ಚೆನ್ನಾಗಿದ್ದೀಯಾ? ಯಾಕೆ ಮಾತಾಡವೊಲ್ಲೆ? ಹುಡುಗ ಮಾರಿದನಂತ ಕೋಪವಾ ನಿಂಗೆ? ನೀನೇನೂ ಕಾಳಜಿ ಮಾಡಬ್ಯಾಡ, ಆತ ನಿನ್ನನ್ನು ಹ್ಯಾಗೆ ನೋಡಿಕೊಳ್ತಿದ್ದನೋ ನಾನೂ ಹಾಗೇ ನೋಡಿಕೊಳ್ತೇನೆ. ಆಯ್ತಾ? ಯಾಕೋ ಮಾತೇ ಆಡವೊಲ್ದು. ಮಡಕೆಮ್ಮಾ ಚೆನ್ನಾಗಿದ್ದೀಯಾ? ಕಿವಿ ಕೇಳಿಸುತ್ತೋ ಇಲ್ಲವೋ. ನನ್ನ ಹಾಗೆ ಇದಕ್ಕೂ ವಯಸ್ಸಾಗಿದೆಯೋ ಏನೊ. ಏ ಮಡಕೆಮ್ಮಾ. (ಎತ್ತಿ ಕುಕ್ಕುವಳು. ಮಡಕೆ ಒಡೆಯುವುದು) ಆ? ಇದೂ ಎಲ್ಲಾ ಮಡಕೆ ಥರಾನೇ ಇದೆ. ಇದರಲ್ಲೇನಿದೆ? ನಾನು ಸೇರು ಅಂದರೆ ಆ ಪೋರ ನನಗೇ ಸವ್ವಾಸೇರು ಮಾಡಿಬಿಟ್ಟನೆ? ಎಲಾ ಎಲಾ ನನಮಗನೆ, ಇರು ನೋಡ್ತೇನೆ. ಎಷ್ಟುದೂರ ಓಡಿ ಹೋಗ್ತಿ ನನ್ನ ತಪ್ಪಿಸಿ? ಅಯ್ಯಾ ಭಾಗವತರೇ-

ಭಾಗವತ : ಏನಮ್ಮಾ ಕರೆದೆ?

ಮುದಿಕಿ : ನೋಡಿದಿರಾ ಈ ಹುಡುಗ ನನಗೇ ಸವ್ವಾಸೇರು ಮಾಡಿದ್ದು?

ಭಾಗವತ : ನೋಡಿದೆ. ಅದೇನೋ ಪುಂಡರು ಠಕ್ಕರಿಗೆಲ್ಲಾ ಮಣ್ಣು ಮುಕ್ಕಿಸಿದವಳು ಅಂತ ಹೇಳ್ತಿದ್ದೆ-

ಮುದಿಕಿ : ಇನ್ನೂ ನೋಡ್ತಾ ಇರಿ, ಸವ್ವಾಸೇರು ಯಾರೂಂತ ತಿಳೀತದೆ. ಭಾಗವತ : ಅಸಾಧ್ಯ ಹುಡುಗ, ಅಸಾಧ್ಯ ಹುಡುಗ!

(ಹೊರಡುವಳು)