(ಒಂದೂರಿನ ಪೇಟೆ, ಮಡಕೆ ಮಾರುವ ಕುಂಬಾರ್ತಿ, ಅಕ್ಕಿ ಮಾರುವ ಶೆಟ್ಟಿ ಕುಣಿಯುತ್ತ ಬರುತ್ತಾರೆ. ಪರಸ್ಪರ ನೋಡುತ್ತ, ನಗುತ್ತ ಒಲವು ಸೂಚಿಸುತ್ತಾರೆ.)

ಕುಂಬಾರ್ತಿ : ಮಡಕೆ ಬೇಕೆ ಮಡಕೆ ಬೇಕೆ ಮಡಕೆ ಬೇಕೆ?

ಶೆಟ್ಟಿ : ಅಕ್ಕಿ ಬೇಕೆ ಅಕ್ಕಿ ಬೇಕೆ ಅಕ್ಕೀ ಬೇಕೆ?

ಕುಂಬಾರ್ತಿ : ಒಡೆದೇನಂದರ ಒಡೆಯೋದಿಲ್ಲ
ಮುರಿದೇನಂದರ ಮುರಿಯೋದಿಲ್ಲ
ಹೊಚ್ಚ ಹೊಸ ಮಣ್ಣಿನ ಮಡಕೆ||

ಶೆಟ್ಟಿ : ಬಂಗಾರ ಕಟ್ಟಿ ಬೆಳ್ಳೀ ಬಣ್ಣ
ಕೋಲಾರಕ್ಕಿ ಸಣ್ಣ ಸಣ್ಣ
ಇಂದಿರ ಭೋಗ ಏನ ರುಚಿಯನ್ನ||

ಕಿಟ್ಟಿ : (ಪ್ರವೇಶಿಸಿ) ಅಯ್ಯೋ, ಯಾವೂರಪ್ಪಾ ಇದು? ಹಸಿವಾಗ್ತಾ ಇದೆ. ಊಟಾಮಾಡಿ ಸಿಟ್ಟು ಮಾಡಬೇಕಿತ್ತು. ಹಾಳದ್ದು ಊಟಾ ಮಾಡಿದರೆ, ನಾ ಸಿಟ್ಟು ಮಾಡಿದ್ದು ಅಜ್ಜಿಗೆ ತಿಳಿಯೋದೇ ಇಲ್ಲ. ಈಗೇನ್ಮಾಡ್ಲಿ?

ಕುಂಬಾರ್ತಿ : ಮಡಕೆ ಬೇಕೆ, ಮಡಕೆ?

ಶೆಟ್ಟಿ : ಅಕ್ಕಿ ಬೇಕೆ, ಅಕ್ಕಿ?

ಕಿಟ್ಟಿ : ಅಮ್ಮಾ, ಈ ಮಡಕೆ ಬೆಲೆ ಎಷ್ಟು?

ಕುಂಬಾರ್ತಿ : ಅದಕ್ಕೆ ಐದು ರೂಪಾಯಿ.

ಕಿಟ್ಟಿ : ಇದಕ್ಕೆ?

ಕುಂಬಾರ್ತಿ : ಹತ್ತು ರೂಪಾಯಿ.

ಕಿಟ್ಟಿ : ಇದಕ್ಕೆ ಅಬ್ಬಬ್ಬಾ ಅಂದ್ರೆ ಐದ ಪೈಸಾ ಕೊಡತೇನೆ, ಕೊಡತೀಯಾ?

ಕುಂಬಾರ್ತಿ : ನೀನೆಂಥ ವ್ಯಾಪಾರ ಮಾಡ್ತಿ ತಗಿ ತಗಿಯೊ. ಹತ್ತ ರೂಪಾಯಿ ಮಡಕೆಗೆ ಐದ ಪೈಸಾ ಕೊಡತಾನಂತೆ. ಪಾಪ ಪುಟ್ಟ ಹುಡುಗ!

ಕಿಟ್ಟಿ : ನೋಡಮ್ಮಾ, ಮಡಕೆ ಕೊಟ್ಟರೆ ಕೊಡು ಬಿಟ್ಟರೆ ಬಿಡು, ನನಗೆ ಪುಟ್ಟ ಹುಡುಗಾ ಅಂತ ಮಾತ್ರ ಹೇಳಬ್ಯಾಡ. ಸಕಾಲದಲ್ಲಿ ಮದುವೆ ಆಗಿದ್ದರೆ ನನಗೂ ನಿನ್ನ ವಯಸ್ಸಿನ ಮಗಳಿರತಿದ್ಲು.

ಕುಂಬಾರ್ತಿ : ಅವಯ್ಯಾ! ಆಯ್ತಪಾ, ಚೆಲುವಾ ಅನ್ನಲಾ?

ಕಿಟ್ಟಿ : ಆಗಬಹುದು.

ಕುಂಬಾರ್ತಿ : ಚೆಲುವಾ, ಐದು ಪೈಸೆಗೆ ಮಡಕೆ ಬರೋದಿಲ್ಲಪ.

ಶೆಟ್ಟಿ : ಮಡಕೆ ಏನ್ಮಾಡ್ತಿ? ಅಕ್ಕಿ ತಗೊ ಅಕ್ಕಿ.

ಕಿಟ್ಟಿ : ಶೆಟ್ಟಿ ಅಬ್ಬಬ್ಬಾ, ಅಂದರೆ ಐದ ಪೈಸೆ ಕೊಡತೇನೆ, ಒಂದು ಕೇಜಿ ಅಕ್ಕಿ ಕೊಡತೀಯಾ?

ಶೆಟ್ಟಿ : ಯಾವನಪ್ಪ ಇವನು? ಐದ ಪೈಸೆಗೆ ಕೇಜಿ ಅಕ್ಕಿ ಕೇಳ್ತಾನೆ? ಯಾವನೋ ಪುಟ್ಟ ಹುಡುಗ, ಪಾಪ!

ಕಿಟ್ಟಿ : ಶೆಟ್ಟಿ, ಅಕ್ಕಿ ಕೊಡು ಬಿಡು, ಪುಟ್ಟ ಹುಡುಗಾ ಅಂತ ಮಾತ್ರ ಹೇಳಬೇಡ. ನನಗೂ ಸಕಾಲದಲ್ಲಿ ಮಕ್ಕಳಾಗಿದ್ದರೆ ನಿನ್ನಂಥಾ ಮಗ ಇರತಿದ್ದ.

ಶೆಟ್ಟಿ : ಎಲಾ ಇವನಾ! ಇನ್ನೇನಪ್ಪಾ, ನಿನಗೆ ತಾತಾ ಅನ್ನಲಾ?

ಕಿಟ್ಟಿ : ಆಗಬಹುದು.

ಶೆಟ್ಟಿ : ತಾತಾ, ಐದ ಪೈಸೆಗೆ ಅಕ್ಕಿ ಬರೋದಿಲ್ಲ. ಹೊರಟ್ಹೋಗು. ತಾತ! ನನ್ನ ತಾತಾ!

ಕುಂಬಾರ್ತಿ : ಚೆಲುವ! ಘನ ಚೆಲುವ!

(ಹಿಂದೆ ಸರಿಯುತ್ತ ಇಬ್ಬರೋ ಪರಸ್ಪರ)

ಶೆಟ್ಟಿ : ನನ್ನ ತಾತ ಅವನು!

ಕುಂಬಾರ್ತಿ : ಪಾಪ ಯಾವೂರ ಹುಡುಗನೋ! ತಪ್ಪಿಸಿಕೊಂಡು ಬಂದಿದಾನೋ ಏನೋ?

ಶೆಟ್ಟಿ : ಯಾವೂರಪ್ಪ ನಿಂದು?

ಕಿಟ್ಟಿ : ಮೇಲ್ಗಡೆ ಊರಿಂದ ಬಂದೆ.

ಶೆಟ್ಟಿ : ಮೇಲ್ಗಡೆ ಊರು? ಅದೇನೋ ಕೈಲಾಸ, ವೈಕುಂಠ ಅಂತಾರೆ ಆ ಊರಾ?

ಕುಂಬಾರ್ತಿ : ಮೇಲ್ಗಡೆ ಊರು? ಅದೇನೋ ಸ್ವರ್ಗ ಗಿರ್ಗ ಅಂತಾರೆ ಆ ಊರೇನಪ್ಪಾ?

ಕಿಟ್ಟಿ : ಹೌದು.

ಶೆಟ್ಟಿ : ಆ ಏನಂದೆ? ಕೈಲಾಸದವನ? ಅಯ್ಯಾ ತಾತ, ನನ್ನ ಯಜಮಾನಿ ಮೇಲೆ
ಹೋಗಿ ಐದಾರು ವರ್ಷ ಆಯ್ತು. ಅವಳನ್ನೇನಾದರೂ ನೋಡಿದಿಯಾ?

ಕಿಟ್ಟಿ : (ಬದಿಗೆ ಕರೆದು) ಒಂದು ಮೂಗಿದೆ, ಎರಡು ಕಣ್ಣಿವೆ, ಒಂದೇ ತಲೆ ಇದೆ, ಸೀರೆ ಉಟ್ಟಿದಾಳೆ, ಅವಳೇ ತಾನೆ?

ಶೆಟ್ಟಿ : ಹಾ ಹಾ ಅವಳೇ ಕಣಪ್ಪ, ನೋಡಿದಿಯಾ?

ಕಿಟ್ಟಿ : ಅಯ್ಯೊ, ನೋಡದೇನು? ದಿನಾಲು ಶೆಟ್ಟಜ್ಜಿ-ಶೆಟ್ಟಜ್ಜಿ ಅಂತ ಎಷ್ಟೊಂದು ಆಟ ಆಡತೇನೆ, ಆಕೆ ಜೊತೆ.

ಶೆಟ್ಟಿ : ಅಯ್ಯೊ ಅಯ್ಯೊ! ನೋಡಿದಿಯಾ? ಅವಳ ಜೊತೆ ದಿನಾಲು ಆಟ ಆಡ್ತೀಯಾ? ಕೇಳಿದೆಯೇನೇ ಕುಂಬಾರ್ತಿ, ಈ ತಾತ ನನ್ನ ಹೆಂಡತೀನ್ನ ದಿನಾಲು ನೋಡ ತಾನಂತೆ ಕೈಲಾಸದಲ್ಲಿ! ಹ್ಯಾಗಿದಾಳೆ? ದಿನಾಲು ನನ್ನ ನೆನಪಿಸಿಕೊಳ್ತಾಳಾ?

ಕಿಟ್ಟಿ : ಅದ್ಯಾಕೋಪಾ. ದೇವರ ಹತ್ತರ ಅದೇನೊ ಗೊಣಗತಿದ್ಲು.

ಶೆಟ್ಟಿ : ದೇವರ ಹತ್ತರ? ಅದೇನಪ್ಪಾ?

ಕಿಟ್ಟಿ : (ಪಕ್ಕಕ್ಕೊಯ್ದು) ನೀನೇನೊ ಇತ್ತೀಚೆ ನಿನ್ನ ಯಜಮಾನೀನ ಮರತು ಕುಂಬಾರ್ತಿನ್ನ ನೋಡಿ, ಹಲ್ಲ ಕಿಸೀತಿ ಅಂತೆ!

ಶೆಟ್ಟಿ : ಆ? ಛೇ ಛೇ, ಶಿವ ಶಿವಾ! ನಾನು? (ಸ್ವಗತ) ಇದೂ ಅವಳಿಗೆ ಗೊತ್ತಾಗಿ ಬಿಟ್ಟಿತೆ? (ಕುಂಬಾರ್ತಿಯನ್ನು ಗಮನಿಸಿ) ತಾತ, ನಿನ್ನ ಆಮೇಲೆ ನೋಡ್ತೇನೆ… ಅಕ್ಕಿ ಬೇಕಾದರೆ ತಗೊಂಡ್ಹೋಗು, ಹಾ.

ಕುಂಬಾರ್ತಿ : ಅಯ್ಯಾ ಚೆಲುವಾ, ನೀ ಸ್ವರ್ಗಾನೂ ನೋಡೀಯಾ?

ಕಿಟ್ಟಿ : ಸ್ವರ್ಗ ಅಲ್ಲ ಅದು ಗಿರ್ಗ ಅಂತ.

ಕುಂಬಾರ್ತಿ : ಹಾ ಗಿರ್ಗ, ಏನಪಾ, ನನ್ನ ಯಜಮಾನ ಅಲ್ಲಿಗೆ ಹೋಗಿ ಹತ್ತು ವರ್ಷ ಆಯ್ತು. ಅವನ್ನೇನಾದರೂ ನೋಡೀಯಾ?

ಕಿಟ್ಟಿ : (ಪಕ್ಕಕ್ಕೆ ಕರೆದುಕೊಂಡು ಹೋಗಿ) ಯಾವನು ಕುಂಬಾರ ತಾನೆ?

ಕುಂಬಾರ್ತಿ : ಹೂ.

ಕಿಟ್ಟಿ : ಎರಡು ಕಿವಿ ಇವೆ, ಎರಡು ಕಣ್ಣು, ಒಂದು ಮೂಗು, ಆದರೆ ಒಂದೇ ಬಾಯಿ, ಧೋತರ ಉಡತಾನಲ್ಲ?

ಕುಂಬಾರ್ತಿ : ಅಯ್ಯೊ ಅಯ್ಯೊ! ಅವನೇ ಕಣಪ್ಪ, ಮಾರಾಯ ನನ್ನೊಬ್ಬಳನ್ನೇ ಬಿಟ್ಟುಹೋದ. ಹ್ಯಾಗಿದಾನೆ? ನನ್ನ ನೆನಪಿಸಿಕೊಳ್ತಾನಾ?

ಕಿಟ್ಟಿ : ಅದೇನೋಮ್ಮ ಯಾಕೋ ಚಡಪಡಿಸ್ತಿದ್ದ ದೇವರ ಹತ್ತರ.

ಕುಂಬಾರ್ತಿ : ದೇವರ ಹತ್ತಿರ ಚಟಪಡಿಸ್ತಿದ್ದ? ಯಾಕೆ?

ಕಿಟ್ಟಿ : ನೀನೇನೊ ಕುಂಬಾರನ್ನ ಮರೆತು ಶೆಟ್ಟೀನ ನೋಡ್ತಾ ಇದ್ದೀಯಂತೆ!

ಕುಂಬಾರ್ತಿ : (ಸ್ವಗತ) ಆಂ? ಅಯ್ಯೋ ನನ್ನ ಶಿವನೆ! ನಾನು? ಇದೂ ಅವನಿಗೆ ಗೊತ್ತಾಗಿ ಬಿಡೋದೆ? (ಶೆಟ್ಟಿಯನ್ನು ಗಮನಿಸಿ) ಆಯ್ತು ಚೆಲುವಾ, ನಾನು ಆಮೇಲೆ ಬಂದು ನೋಡತೇನೆ. ಬೇಕಾದರೆ ಐದ ಪೈಸೆಗೇ ಮಡಕೆ ತಗೊಂಡ್ಹೋಗು, ಹಾ?

ಶೆಟ್ಟಿ : ತಾತ, ಅದಕ್ಕೆ ದೇವರು ಏನ್ಹೇಳಿದಾ?

ಕುಂಬಾರ್ತಿ : ಹಾ, ಅಂದ್ಹಾಗೆ ದೇವರು ಏನ್ಹೇಳಿದಾ?

ಕಿಟ್ಟಿ : ಎನ್ಹೇಳಿದಾ?

ಶೆಟ್ಟಿ, ಕುಂಬಾರ್ತಿ : ಹೂ, ಹೂ, ದೇವರು ಏನ್ಹೇಳಿದಾ?

ಕಿಟ್ಟಿ : ಏನೂ ಹೇಳಲಿಲ್ಲ.

ಶೆಟ್ಟಿ : ತಾತ, ನೀನೇ ದೇವರು ಅಂತಿಟ್ಟಿಕೊ -ನೀ ಏನ ಹೇಳತಿ?

ಕುಂಬಾರ್ತಿ : ಹೇಳಪಾ, ನೀನೇ ದೇವರು-ನೀ ಏನ ಹೇಳ್ತಿ ಹೇಳು.

ಕಿಟ್ಟಿ : ನೀನು ಕುಂಬಾರ ಅಂತ ಹೆಸರಿಟ್ಟುಕೊಂಡು, ನೀನು ಶೆಟ್ಟಜ್ಜಿ ಅಂತ ಹೆಸರಿಟ್ಟುಕೊಂಡು ಮದುವೆಯಾಗಿರಿ ಅಷ್ಟೆ.

ಇಬ್ಬರೂ : ದೇವರೂ ಅಂದರೆ ನೀನಪ್ಪ. ನಿನ್ನ ಹಾಗಿರಬೇಕು, ನೀನೊಬ್ಬ ಸಣ್ಣ ದೇವರಪ್ಪ.

ಶೆಟ್ಟಿ : ತಗೊ ತಗೊ ಅಕ್ಕಿ.

ಕುಂಬಾರ್ತಿ : ತಗೊ ತಗೊ ಮಡಕೆ.

ಕಿಟ್ಟಿ : ತಗೊ ಐದು ಪೈಸಾ, ತಗೊ ಐದು ಪೈಸಾ.

ಶೆಟ್ಟಿ : ಬಾರೆ ನನ್ನ ಶೆಟ್ಟಜ್ಜಿ.

ಕುಂಬಾರ್ತಿ : ಬಾರೊ ನನ್ನ ಕುಂಬಾರ.

(ನಿರ್ಗಮನ)