ಮೇಳ : ದುಡ್ಡ ಹೋಗಿ ಕುದುರೆ ಬಂತು ಲಾ ಲಾ ಲಾ
ಕುದುರೆ ಹೋಗಿ ಆನೆ ಬಂತು ಲಾ ಲಾ ಲಾ||

(ಕಿಟ್ಟಿ ಆನೆಯೊಂದಿಗೆ ಪ್ರವೇಶಿಸುವನು)

ಕಿಟ್ಟಿ : ಇಲ್ಲೀತನಕ ಅವರಿವರನ್ನ ಮೋಸ ಮಾಡಿ ಆನೆಯಾಯ್ತು. ಈ ಆನೇನ್ನ ಮಾರಬಾರದು, ಇಟ್ಟಕೋಬಾರದು. ಮದುವೆ ಅಂತೂ ಆಗಲೇ ಇಲ್ಲ. ಇದು ಯಾವೂರು ಭಾಗವತರೇ, ಬಹಳ ವಿಚಿತ್ರವಾಗಿದೆ.

ಭಾಗವತ : ಇದು ಕುರಿಯೂರು ಅಂತ. ಇಲ್ಲಿ ಒಬ್ಬ ರಾಜ ಇದಾನೆ. ಅವನಿಗೆ ಒಬ್ಬಳು ಮಗಳಿದಾಳೆ. ಸುಂದರಿ. ನಿನಗೆ ತಕ್ಕವಳು, ಆದರೆ ಏನು ಮಾಡೋದು? ಮದುವೆ ಆಗೋದಿಲ್ಲ ಅಂತ ಹಟ ಹಿಡಿದಿದಾಳೆ.

ಕಿಟ್ಟಿ : ಯಾಕೆ?

ಭಾಗವತ : ಅವಳದ್ದೊಂದು ಶರ್ತ್ ಇದೆ.

ಕಿಟ್ಟಿ : ಅದೇನು ಭಾಗವತರೇ?

ಭಾಗವತ : ಹಿಂದೆ ಹಿಂಡು ಶಿಷ್ಯರಿರಬೇಕು. ಮುಂದೆ ಹಿಂಡು ಶಿಷ್ಯರಿರಬೇಕು. ವಯಸ್ಸು ಇಪ್ಪತ್ತಕ್ಕೆ ಮೀರಿರಬಾರದು. ಅಂಥಾ ಒಬ್ಬ ಸಣ್ಣ ಗುರು ಬಂದು ಬೆಟ್ಟ ಹಿಂದೋ ಡಿಸಬೇಕು. ಮುಂದೋಡಿಸಬೇಕು. ಹಾಗೆ ಮಾಡಬಲ್ಲ ಎಳೆಯ ಸ್ವಾಮಿಯನ್ನೇ ಮದುವೆಯಾಗುತ್ತೇನೆ ಅಂತ ಹಟ ಹಿಡಿದಿದ್ದಾಳೆ.

ಕಿಟ್ಟಿ : ಕಷ್ಟ ಬಂತಲ್ಲ ಭಾಗವತರೆ.

ಭಾಗವತ : ಇಲ್ಲೀತನಕ ಅನೇಕರು ಬಂದು, ಪ್ರಯತ್ನ ಮಾಡಿ, ಸೋತು, ಸೋತು ತಲೆ ಹೊಡಿಸಿಕೊಂಡು ಹೋದರು.

ಕಿಟ್ಟಿ : ತಲೆ ಹೊಡಿಸಿಕೊಂಡು?

ಭಾಗವತ : ಹೂ ಮತ್ತೆ. ರಾಜಕುಮಾರಿ ಸಿಗ್ತಾಳೇಂತ ಸಿಕ್ಕ ಸಿಕ್ಕವರು ಬಂದು ಪ್ರಯತ್ನ ಮಾಡಿದರೆ ಆಗ್ತದಾ? ದೊಡ್ಡ ದೊಡ್ಡ ಮಾಂತ್ರಿಕರು, ತಾಂತ್ರಿಕರಿಗೇ ಸಾಧ್ಯವಾಗಲಿಲ್ಲ.

ಕಿಟ್ಟಿ : ಸರಿ. ಈಗ ನಾನೊಬ್ಬ ಉಳಿದಿದೇನೆ ಅನ್ನಿ.

ಭಾಗವತ : ನಿನ್ನಿಷ್ಟವಪ್ಪ ಅದು.

ಕಿಟ್ಟಿ : ಹಾಗಾದರೆ ಹೊರಟು ಹೋಗೋದೇ ಒಳ್ಳೇದು. ಇಲ್ಲದಿದ್ದರೆ ರಾಜಕುಮಾರಿ ಮೇಲೆ ಮನಸ್ಸಾಗಿ ನಾನೂ ತಲೆ ಹೊಡಿಸ್ಕೊಂಡು ಹೋಗೋದಾಗಬಹುದು. ಮುಂದಿನೂರಿಗೆ ಹೋಗಿ, ಇರೋ ಆನೇನಾದರೂ ಮಾರಿ, ಸಿಕ್ಕಂಥ ಹೆಣ್ಣು
ಮದುವೆ ಮಾಡಿಕೊಂಡು ಹೋಗಬಹುದು.

(ಹೊರಡುವನು. ಅಷ್ಟರಲ್ಲಿ ಮುದುಕಿ, ಮಗ, ಭಗವಂತ, ಸೂಳೆ ನಾಲ್ವರೂ ಬರುವರು)

ನಾಲ್ವರು : ಸಿಕ್ಕೆಯೋ ನನ್ನ ಸರದಾರ!

ಮುದುಕಿ : ಎಲ್ಲೋ ನನ್ನ ಟಗರು!

ಮಗ : ಎಲ್ಲೋ ನನ್ನ ದುಡ್ಡು?

ಭಗವಂತ : ಎಲ್ಲೋ ನನ್ನ ಕುದುರೆ?

(ಕಿಟ್ಟಿ ತಬ್ಬಿಬ್ಬಾಗಿ ಅವರಿಗೆಲ್ಲ ಕೂತುಕೊಳ್ಳ ಹೇಳುವನು. ರಾಜಕೀಯ ಮುಖಂಡರ ಧಾಟಿಯಲ್ಲಿ)

ಕಿಟ್ಟಿ : ಮಹನೀಯರೆ ಮತ್ತು ಮಹಿಳೆಯರೆ, ನಾನು ನಿಮಗೆ ಮೋಸ ಮಾಡಿದೆ ಅಂತ ನಿಮಗೂ ತಿಳಿದದ್ದು ಸಂತೋಷ, ಈಗಲಾದರೂ ನಿಮಗನಿಸಿರಬೇಕು-ನಾನು ಬಹಳ ಪ್ರಾಮಾಣಿಕ ಅಂತ. ಯಾಕೆಂದರೆ ನಾನು ನಿಮಗೆ ತಡವಾಗಿ ಯಾದರೂ ತಿಳಿಯುವ ಹಾಗೆ ಮೋಸ ಮಾಡಿದೆ. ನಮ್ಮ ಮಂತ್ರಿಗಳ ಹಾಗೆ ಕೊನೇತನಕ ನಿಮಗೆ ತಿಳಿಯದ ಹಾಗೆ ಮೋಸ ಮಾಡಬಹುದಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ಹೌದಾ?

ಎಲ್ಲರೂ : ಹೌದು ಹೌದು.

ಕಿಟ್ಟಿ : ಅಷ್ಟೇ ಅಲ್ಲ, ನಾನು ಮಾಡಿದ ತಪ್ಪನ್ನ ಸರಿಪಡಿಸಬಲ್ಲೆ-ನಿಮಗೆಲ್ಲ ಸಂತೋಷವಾಗುವ ಹಾಗೆ.

ಎಲ್ಲರೂ : ಅದು ಹ್ಯಾಗಪ್ಪಾ?

ಕಿಟ್ಟಿ : ಹೀಗೆ: ಆನೆಯನ್ನು ಈ ನರ್ತಕಿಗೆ ಕೊಡತೇನೆ. ಅವಳು ಕುದುರೆ ಕೊಡತಾಳೆ. ಕುದುರೆ ಈ ಭಗವಂತನಿಗೆ ಕೊಡತೇನೆ. ಅವನು ದುಡ್ಡು ಕೊಡತಾನೆ. ದುಡ್ಡನ್ನ ಈ ಮಗನಿಗೆ ಕೊಡತೇನೆ. ಅವನು ಟಗರು ಕೊಡತಾನೆ. ಟಗರು ಈ
ಮುದುಕಿಗೆ ಕೊಡತೇನೆ. ಆಯ್ತಾ?

ಎಲ್ಲರೂ : ಹೌದಲ್ಲ?

ಕಟ್ಟಿ : ಇಷ್ಟೆ, ಅದು ಇರೋದು ಇಷ್ಟೆ. ನಾ ಹೆಳೋದು ಇಷ್ಟೆ. ನೀವೆಲ್ಲ ದೊಡ್ಡವರು. ಅಂತಃಕರಣ ಇದ್ದವರು, ಆದರೆ ಮುಗ್ಧರು. ನಾನು ಇಷ್ಟೆಲ್ಲಾ ಕೊಟ್ಟರೆ ನಿಮಗೆ ನೆಮ್ಮದಿ ಸಿಕ್ಕೀತ? ಈ ಮುದುಕಿ ಸಾಯೋ ಕಾಲಕ್ಕೆ ಮಾತಾಡಿಕೊಂಡಿರಲಿಕ್ಕೆ
ಸಂಗಾತಿ ಬೇಕು ಅಂದಳು. ಅವಳ ಟಗರು ಅವಳಿಗೆ ಸಿಕ್ಕರೆ ಸಂಗಾತಿ ಸಿಕ್ಕ ಹಾಗಾಯ್ತು? ಈತನ ತಂದೆ ತೀರಿ ಹೋದ. ದುಡ್ಡು ಸಿಕ್ಕರೆ ತೀರಿಹೋದ ತಂದೆ ಸಿಗ್ತಾನಾ? ಭಗವಂತಾ, ನಿನ್ನ ಕುದುರೆ ಸಿಕ್ಕರೆ ಹೇಮಮಾಲಿನಿ ಸಿಗತಾಳಾ? ನರ್ತಕಿಯಮ್ಮಾ ನಿನ್ನ ಆನೆ ನಿನಗೆ ಸಿಕ್ಕರೆ ಸಿನಿಮಾದಲ್ಲಿ ನಿನ್ನ ಸೊಂಟ ಮೂಡಿತಾ?

ಎಲ್ಲರೂ : ಹೌದಲ್ಲ! ಮುಂದೇನ್ಮಾಡೋಣ! ಏನಪ್ಪಾ ಮಾಡೋಣ? ನೀನೇ ಒಂದು ದಾರಿ ಹೇಳು.

ಕಿಟ್ಟಿ : ನೀವೆಲ್ಲ ನಾ ಹೇಳಿದ ಹಾಗೆ ಕೇಳಿದರೆ ನಿಮ್ಮ ಆಸೆಗಳನ್ನೆಲ್ಲಾ ಪೂರೈಸಬಲ್ಲೆ.

ಭಗವಂತ : ಕೇಳ್ತೀವಪ್ಪಾ, ನಾವೆಲ್ಲ ನಿನ್ನ ಕುರಿಗಳು ಅಂತ ತಿಳಿಕೊ. ಎಲ್ಲಿ ಎಲ್ಲರೂ ಒಂದು ಸಲ ಕುರಿಗಳ ಹಾಗೆ ಕೂಗ್ರಿ ನೊಡೋಣ.

ಎಲ್ಲರೂ : ಬ್ಯಾ ಬ್ಯಾ.

ಕಿಟ್ಟಿ : ನೀವೆಲ್ಲ ನನ್ನ ಶಿಷ್ಯರಾಗಬೇಕು. ನಮ್ಮ ಉಪಾಯ ಫಲಿಸಿ ನಾನು ರಾಜನಾದರೆ ನಿಮ್ಮ ಆಸೆಗಳೆಲ್ಲಾ ಫಲಿಸುತ್ತವೆ.

ಭಗವಂತ : ಹೇಮಾಮಾಲಿನಿ ಸಿಗತಾಳಾ?

ಸೂಳೆ : ಸಿನಿಮಾದಲ್ಲಿ ನನ್ನ ಸೊಂಟ ಮೂಡುತ್ತಾ?

ಕಿಟ್ಟಿ : ಅಗತ್ಯವಾಗಿ. ಭಾಗವತರೇ,

ಭಾಗವತ : ಯಾಕಪ್ಪ ಕರೆದೆ?

ಕಿಟ್ಟಿ : ನೀವು ಈ ಊರ ರಾಜನ ಬಳಿಗೆ ಹೋಗಿ-ನಾಳೆ ಬೆಳಿಗ್ಗೆ, ಸೂರ್ಯೋದಯಕ್ಕೆ ಮುಂಚೆ ಜಗದ್ಗುರು ಕಿಟ್ಟೂ ಸ್ವಾಮಿ ಶಿಷ್ಯ ಸಮೇತ ಬಂದು ಬೆಟ್ಟವನ್ನು ಹಿಂದಕ್ಕೆ ಮುಂದಕ್ಕೆ ಓಡಿಸ್ತಾರೆ ಅಂತ ತಿಳಿಸಿ.

ಭಾಗವತ : ಆಗಲಪ್ಪ.

ಕಿಟ್ಟಿ : ನಮ್ಮ ಆನೆ ಎಲ್ಲಿ? ಭಗವಂತ, ಈ ಆನೆಯ ಮೇಲೆ ಗಿಡ, ಮರ, ಬಳ್ಳಿ, ಮುಂತಾಗಿ ಕಾಡಿನ ಚಿತ್ರ ಬಿಡಿಸು, ಬೇಗ. ಮಾಡಬೇಕಾದ ಕೆಲಸ ಬೇಕಾದಷ್ಟಿದೆ!

(ಹೋಗುವರು)