(ಕಿಟ್ಟಿಯ ಆಗಮನ. ಹತ್ತಿರ ನೋಡಿ ಕಂಬಳಿ ಹೊದ್ದು ಮಲಗುತ್ತಾನೆ. ಅಜ್ಜಿ ಅದು ಇದು ಕೆಲಸ ಮಾಡುತ್ತ ಬರುತ್ತಾಳೆ.)

ಅಜ್ಜಿ : ಏ ಕಿಟ್ಟೀ, ಏಳೊ ಮೇಲೇಳೊ. ಏಳೊ ಅಂದರೆ ಏಳಬೇಕು. ಸ್ಕೂಲಿಗೆ ಹೊತ್ತಾಗೋಯ್ತು. ಏಳೋ ಅಂದ್ರೆ.

ಭಾಗವತ : (ಆಗಮಿಸಿ) ಇದೇನು? ನಾನು ಬರೋದರೊಳಗೇ ನಾಟಕ ಸುರುವಾಗಿ ಬಿಟ್ಟದೆ! ಯಾರು ಈ ಮುದುಕಮ್ಮ? ಯಾರನ್ನ ಎಬ್ಬಿಸ್ತಿದಾಳೆ? ಏ ಏ ಮುದುಕಮ್ಮ, ತಡಿ ತಡಿ. ಏನಿದು? ನಾನು ಬರೋದರೊಳಗೇ ನಾಟಕ ಸುರು ಮಾಡೋದೆ? ಹೇಳಿಲ್ಲಾ ನಿನಗೆ? ಶಾಸ್ತ್ರದ ಪ್ರಕಾರ ನಾಟಕ ಸುರುವಾಗಬೇಕು. ಆಮೇಲೆ ನಿನ್ನ ಪ್ರವೇಶ ಅಂತ? ಈ ಮುದಿಕೇರ ಹಣೇಬರಾನೇ ಇಷ್ಟು. ಈಗ ಮೊದಲು ನನ್ನ ಮಾತಿದೆ. ಸ್ವಲ್ಪ ಆಚೆ ಹೋಗ್ತೀಯಾ?

ಅಜ್ಜಿ : ಯಾರೋ ತಮ್ಮಾ ನೀನು?

ಭಾಗವತ : ನಾನು ಯಾರು? ಇದೊಳ್ಳೆದಾಯ್ತಲ್ಲ, ನಾನು ಭಾಗವತ. ರಂಗದ ಮೇಲೆ ನಿಮ್ಮಂಥವರು ಬರ್ತೀರಲ್ಲ: ನಿಮ್ಮನ್ನ ಈ ಪ್ರೇಕ್ಷಕರಿಗೆ ಪರಿಚಯ ಮಾಡಿಸಬೇಕು. ನಮ್ಮ ಆಟದ ವಿಷಯ ಹೇಳಬೇಕು. ಅದು ಬಿಟ್ಟು ಯಾರಂತ ನನ್ನೇ ಕೇಳ್ತಿದ್ದೀಯಾ! ಬಲೇ ಮುದುಕಿ ನೀನು! ಸ್ವಲ್ಪ ಆಚೆ ಹೋಗ್ತೀಯಾ?

ಅಜ್ಜಿ : ಯಾವನಯ್ಯಾ ನೀನು? ನನ್ನ ಮನೆ, ನನ್ನ ಮೊಮ್ಮಗ, ನನ್ನ ಮಾತು. ನನಗೇ ಆಚೆ ಹೋಗಂತೀಯಾ. ನನ್ನ ಯಜಮಾನ ಕೂಡ ಹಾಗ್ಹೇಳಲಿಲ್ಲ.

ಭಾಗವತ : ಓಹೋ! ಈ ಪಾತ್ರಗಳಿಗೆಲ್ಲಾ ಆಗಲೇ ಜೀವ ಬಂದುಬಿಟ್ಟಿದೆ. ಇವನ್ನೀಗ ಕಂಟ್ರೋಲ್ ಮಾಡೋದೇ ಕಷ್ಟ. ಆಯ್ತಮ್ಮಾ ನಾನು ಭಾಷಣಾ ಮಾಡೋ ದಿಲ್ಲ, ಒಂದೆರಡು ಮಾತು ಹೇಳ್ತೇನೆ. ಸ್ವಲ್ಪ ತೆಪ್ಪಗಿರ್ತೀಯಾ?

ಅಜ್ಜಿ : ಅದೇನೊ ಬೇಗನೆ ಮುಗಸು. ನಾನು ಇಷ್ಟರಲ್ಲೇ ಬರತೇನೆ.

(ಹೋಗುವಳು)

ಭಾಗವತ : ಪ್ರೇಕ್ಷಕ ಮಕ್ಕಳಲ್ಲಿ ವಿಜ್ಞಾಪನೆ. ಈ ಹೊತ್ತು ನಾವು ಆಡೋ ಆಟ ಕಿಟ್ಟೀ ಕಥೆ. ಕಿಟ್ಟಿ ನಿಮ್ಮ ಹಾಗೇ ಒಬ್ಬ ಹುಡುಗ. ವಯಸ್ಸು ಎಷ್ಟೋ ಇರಬಹುದು. ಮದುವೆ ವಯಸ್ಸಂತೂ ಖಂಡಿತ ಅಲ್ಲ, ಬೇಕಾದರೆ ನೀವೇ ನೋಡಿ-ಎಲ್ಲಿ ಕಿಟ್ಟೀ? ಕಿಟ್ಟೀ, ಏ  ಕಿಟ್ಟೀ-

ಕಿಟ್ಟಿ : (ಮಲಗಿಕೊಂಡೇ) ಏನು ಭಾಗವತರೇ?

ಭಾಗವತ : ಅಪ್ಪಾ, ನೀನು ನಮ್ಮ ಕಥಾನಾಯಕ. ಆಟದ ಆರಂಭದಲ್ಲಿ ನಮ್ಮ ಪ್ರೇಕ್ಷಕರಿಗೆ ನಿನ್ನ ಪರಿಚಯ ಮಾಡಿಕೊಡಬೇಕು. ಈಚೆ ಬರತೀಯಾ?

ಕಿಟ್ಟಿ : ನಮ್ಮ ಜ್ಜಿ ಇಲ್ಲ ತಾನೆ?

ಭಾಗವತ : ಯಾಕೆ ಹೆದರಿದೆಯಾ?

ಕಿಟ್ಟಿ : (ಎದ್ದು ಬಂದು) ಹೆದರಲಿಲ್ಲ ಭಾಗವತರೇ, ರೇಗಿಕೊಂಡು ಎದ್ದು ಬಂದೆ!

ಭಾಗವತ :  ರೇಗಿಕೊಂಡು? ಆಯರ ಮೇಲೆ?

ಕಿಟ್ಟಿ : ನಿಮ್ಮ ಮೇಲೆ.

ಭಾಗವತ : ನನ್ನ ಮೇಲೆ? ಅದ್ಯಾಕಪ್ಪ?

ಕಿಟ್ಟಿ : ನನ್ನ ಮದುವೆ ಮಾಡಬಾರದು ಅಂತಲಾ ನಿಮ್ಮ ಅಭಿಪ್ರಾಯ?

ಭಾಗವತ : ಛೇ ಛೇ, ನಾನೂ ಗಂಡಸಲ್ವೇನಪ್ಪಾ ನಿನ್ನ ಹಾಗೆ.

ಕಿಟ್ಟಿ : ಮತ್ತೆ, ನನಗೆ ಮದುವೆ ವಯಸ್ಸಾಗಿಲ್ಲ ಅಂದಿರಿ. ನನಗೆ ಮದುವೆ ವಯಸ್ಸಾಗಿಲ್ಲ
ಅಂತ ನಿಮಗೆ ಹ್ಯಾಗೆ ಗೊತ್ತಾಯ್ತು?

ಭಾಗವತ : ನೋಡಿದರೇ ತಿಳಿಯುತ್ತಲ್ಲ-ಮೀಸೆ ಮೂಡಿಲ್ಲ, ಗಡ್ಡ ಬಂದಿಲ್ಲ.

ಕಿಟ್ಟಿ : ಏನಂದಿರಿ? (ಹೆದರಿಸುವನು)

ಭಾಗವತ : ಆಯ್ತಪ್ಪ, ನಿನಗೂ ವಯಸ್ಸಾಗಿದೆ, ಸರಿತಾನೆ?

ಕಿಟ್ಟಿ : ನನಗಲ್ಲ, ನನಗೆ ವಯಸ್ಸಾಗಿಲ್ಲ ಅಂದ್ರೆಲ್ಲಾ, ಆ ನಿಮ್ಮ ಪ್ರೇಕ್ಷಕರಿಗೆ ಹೇಳಿಕೊಳ್ಳಿ.

(ಹೋಗಿ ಮಲಗುವನು)

ಭಾಗವತ : ಎಲಾ ಇವನ!

ಅಜ್ಜಿ : (ಬಂದು) ಏ ಕಿಟ್ಟೀ, ಏಳೋ ಮೇಲೇಳೊ. ಏಳೊಂದ್ರೆ ಏಳಬೇಕು. ಏಳ್ರಾಜಾ, ಏಳೂ ಜಾಣಾ-ಅಯ್ಯೊ ಈ ಹುಡುಗನ್ನ ಏನ್ಮಾಡಿ ಎಬ್ಬಿಸಲಿ? ಏ ಕಿಟ್ಟಿ, ಏಳ್ತಿಯೊ? ಹಿರಿಯರನ್ನ ಕರಸಲೊ? ಅಯ್ಯಾ ಭಾಗವತರೇ,

ಭಾಗವತ : ಏನಮ್ಮಾ ಕರದೆ?

ಅಜ್ಜಿ : ನನ್ನ ಮೊಮ್ಮಗ ಕಿಟ್ಟಿ, ನಿನ್ನೆಯಿಂದ ಒಂದು ಮಾತಾಡಿಲ್ಲ. ಒಂದು ನಕ್ಕಿಲ್ಲ, ಒಂದು ಉಂಡಿಲ್ಲ, ತಿಂದಿಲ್ಲ, ಸುಮ್ಮನೆ ಮಲಗಿಬಿಟ್ಟಿದಾನೆ. ನೀವಾದರೂ ಎಬ್ಬಿಸಿ ಉಪಕಾರ ಮಾಡತೀರಾ?

ಭಾಗವತ : ಓಹೊ! ನಿನ್ನೆಯಿಂದ ಹೀಗೇ ಬಿದ್ದುಕೊಂಡಿದಾನಾ?

ಅಜ್ಜಿ : ಹೂ.

ಭಾಗವತ : ಹಾಗಿದ್ದರೆ ಈ ಕೇಸು ಭಾಳಾ ಸಿರಿಯಸ್ಸು. ಅಲ್ಲಮ್ಮಾ ಯಾಕೆ ಹೀಗೆ ಮಲಗಿದಾನಂತೆ?

ಅಜ್ಜಿ : ಆತ ಹೇಳಿದರಲ್ಲವೆ?

ಭಾಗವತ : ಏನಾದರೂ ತಿಂಡಿ ಕೇಳಿದ್ನಾ?

ಅಜ್ಜಿ : ಇಲ್ಲಾ.

ಭಾಗವತ : ಏನಾದರೂ ಆಟಿಗೆ ಬೇಡಿ ಅತ್ತನಾ?

ಅಜ್ಜಿ : ಇಲ್ಲಾ.

ಭಾಗವತ : ಯಾರ ಜೊತೆಗಾದರೂ ಜಗಳ ಆಡಿದ್ನಾ?

ಅಜ್ಜಿ : ಇಲ್ಲಾ.

ಭಾಗವತ : ತಿಂಡೀ ಕೇಳಿಲ್ಲಾ, ಆಟಿಗೆ ಬೇಡಿಲ್ಲಾ, ಜಗಳ ಆಡಿಲ್ಲ…ತಾಯೀ ಈತನಿಗೆ ಮದುವೆ ಮಾಡಿದ್ದೀಯಾ?

ಕಿಟ್ಟಿ : (ಮೇಲೆದ್ದು) ಕೇಳಿ ಭಾಗವತರೇ, ಅದನ್ನ ಮಾಡಿದಾಳೇನು ಕೇಳಿ.

ಭಾಗವತ : ಏನನ್ನ?

ಕಿಟ್ಟಿ : ನೀವಾಗಲೇ ಏನೋ ಅಂದಿರಲ್ಲ, ಅದನ್ನ.

ಭಾಗವತ : ಅಂದರೆ, ಮದುವೇನಾ?

ಕಿಟ್ಟಿ : ಹೂ ಹೂ. ಅದನ್ನೆ ಮಾಡಿದಾಳೇನು ಕೇಳಿ.

ಅಜ್ಜಿ : ಅಯ್ಯೊ ಶಿವನೆ! ನಿನ್ನಂಥಾ ಚಿಕ್ಕವನಿಗೆ ಮದುವೇನಾ?

ಕಿಟ್ಟಿ : ನಾನು ಚಿಕ್ಕವನೊ ದೊಡ್ಡವನೊ! ಅದನ್ನ ಹೇಳೋಳು ನನ್ನ ಹೆಂಡತಿ,
ನೀವಲ್ಲ.

ಭಾಗವತ : ಏನು ಕಲಿಕಾಲ ಬಂತಪ್ಪ?

ಕಿಟ್ಟಿ : ಏನ್ರಿ ಕಲಿಕಾಲ ಅಂತೀರಿ. ಕಲಿಕಾಲ್ದಲ್ಲಿ ಯಾರೂ ಮದುವೇನೇ ಆಗಬಾರದಾ? ‘ಬೆಳೆದು ನಿಂತಿದಾನೆ, ಮದುವೆ ಮಾಡಮ್ಮಾ’ ಅಂತ ಹೇಳೋದ ಬಿಟ್ಟು, ಏನೇನೋ ಹೇಳ್ತೀರಾ. ಅಜ್ಜೀ, ಮಾಡಜ್ಜಿ ಮದುವೆ.

ಅಜ್ಜಿ : ಛೇ ಛೇ-

ಕಿಟ್ಟಿ : ಅಜ್ಜೀ-

ಅಜ್ಜಿ : ಅಬ್ಬಬ್ಬಾ! ಇನ್ನೂ ಚಿಗರ ಮೀಸೆ ಮೂಡಿಲ್ಲಾ-

ಕಿಟ್ಟಿ : ಅಜ್ಜೀ-
ಅಜ್ಜೀ ಅಜ್ಜೀ ಹುಡಿಗಿ ಬೇಕು
ನನಗೆ ಮದುವೆ ಮಾಡಬೇಕು||
ಹಾಕಮ್ಮ ಗಂಟು
ಭಾರೀ ಅರ್ಜೆಂಟು
ಮೀಸೆ ಮೂಡಿಲ್ಲಾಂತ ಹೇಳಬೇಡ ಕುಂಟನೆಪ||
ನಿಂತೇನೆ ಉದ್ದಾ
ಎದೀತನಕಾ ಬೆಳದಾ
ಮೀಸೆ ಮೂಡಿಲ್ಲಾಂತ ಹೇಳಬ್ಯಾಡ ಕುಂಟನೆಪ||
ಕೇಳಿ ಬಂತಾ ಅಜ್ಜೀ-

ಅಜ್ಜಿ : ಸಾಧ್ಯವೆ?

ಭಾಗವತ : ಸಾಧ್ಯವೆ?

ಕಿಟ್ಟಿ : ನಿಮ್ಮಿಬ್ಬರಿಗೂ ಬುದ್ದಿಯಿಲ್ಲಾಂತ ಹೇಳೋದೇ ಇದಕ್ಕಾಗಿ. ಭಾಗವತರೇ ನಿನ್ನೆ ಏನಾಯ್ತು ಗೊತ್ತಾ?

ಭಾಗವತ : ಇಲ್ಲಪಾ.

ಕಿಟ್ಟಿ : ಚಿನ್ನಿದಾಂಡ ಆಡ್ತಿದೆ, ಮಕ್ಕಳೊಂದಿಗೆ.

ಭಾಗವತ : ನಿನ್ನ ಮಕ್ಕಳೊಂದಿಗಾ?

ಕಿಟ್ಟಿ : ಬೇರೆಯವರ ಮಕ್ಕಳೊಂದಿಗೆ. ಆಗ ಚಿನ್ನೀ ಹೊಡೆದೆ. ಹೋಗಿ ಒಬ್ಬ ಹೆಂಗಸಿನ ತಲೆಗೆ ಹೊಡೀತು. ಅವಳು ಬಿರಿ ಬಿರೀ ಹೀಗೆ ಬಂದ್ಲು. ಏನಂದ್ಲು ಗೊತ್ತಾ?

ಅಜ್ಜಿ : ಎನಂದ್ಲು?

ಕಿಟ್ಟಿ : ಹೇಳಜ್ಜಿ ನೋಡೋಣ; ಏನಂದಿರಬೇಕು?

ಅಜ್ಜಿ : ‘ಹೋಗೋ ಬರೋ ಜನ ನೋಡಿ ಚಿನ್ನಿದಾಂಡ ಆಡಬೇಕು ಮಗಾ’-
ಅಂದಿರಬೇಕು.

ಕಿಟ್ಟಿ : ಊಹೂ, ನಿವ್ಹೇಳಿ ಭಾಗವತರೇ ನೋಡೋಣ, ಏನಂದಿರಬೇಕು?

ಭಾಗವತ : ‘ರಸ್ತೆ ಮೇಲಲ್ಲ, ಬಯಲಲ್ಲಿ ಚಿನ್ನಿದಾಂಡ ಆಡಬೇಕಪಾ’- ಅಂದಿರಬೇಕು.

ಕಿಟ್ಟಿ : ಅದಕ್ಕೇ ನಿಮಿಬ್ಬರಿಗೂ ಬುದ್ದಿಯಿಲ್ಲಾ ಅಂತ ಅಂದದ್ದು. ಎನಂದ್ಲು ಗೊತ್ತಾ? ಹೀಗೆ ಬಿರಿ ಬಿರಿ ನನ್ನ ಹತ್ತಿರ ಬಂದ್ಲು. ‘ಲೋ ಅಯೋಗ್ಯ, ಇಷ್ಟುದ್ದ ಬೆಳೆದು ನಿಂತೀಯಾ, ಸಕಾಲದಲ್ಲಿ ಮದುವೆ ಆಗಿದ್ದರೆ ಇಷ್ಟೊಂದ ಜನ ಮಕ್ಕಳ ತಂದೆ ಆಗತಿದ್ದೆ, ನಾಚಿಕೆ ಆಗೋಲ್ಲಾ? ಯಾರೋ ನಿನ್ನ ಬೆಳೆಸಿದವರು? ಜೋಪಾನ ಮಾಡಿದವರು? ಅವರಿಗಾದರೂ ಮಾನ ಮರ್ಯಾದೆ ಇಲ್ಲಾ?’-

ಅಜ್ಜಿ : ಅಂದಳಾ?

ಕಿಟ್ಟಿ : ಹೂ. ಹೀಗೇ ಅಂದ್ಲು!

ಅಜ್ಜಿ : ಅಯ್ಯೊ ಶಿವನೆ, ನನ್ನ ಮಾನ ಮರ್ಯಾದೆಯೆಲ್ಲಾ ಹೋಯ್ತಲ್ಲೊ!

ಕಿಟ್ಟಿ : ಕುಡಲೇ ನನಗೊಂದು ಮದುವೆ ಮಾಡು. ನಿನಗೂ ಮಾನ ಮರ್ಯಾದೆ ಇದೆ ಅಂತ ಅವಳನ್ನ ಹುಡುಕ್ಕೊಂಡ ಹೋಗಿ, ಹೇಳಿ ಬರ್ತೀನಿ.

ಅಜ್ಜಿ : ಅಯ್ಯೊ ಶಿವನೆ! ತಂದೆ ತಾಯಿ ಇಲ್ಲದ ನಿನ್ನನ್ನ ಇಷ್ಟೊಂದು ಕಷ್ಟಪಟ್ಟು ಬೆಳಸಿದ್ದೆಲ್ಲಾ ವ್ಯರ್ಥವಾಯ್ತಲ್ಲೊ!

ಕಿಟ್ಟಿ : ಅದಕ್ಕೇ ಈಗೊಂದು ಮದುವೆ ಮಾಡು, ಎಲ್ಲಾ ಸಾರ್ಥಕವಾಗತದೆ.

ಅಜ್ಜಿ : ಅದ್ಯಾಕಜ್ಜಿ ಯೋಚನೆ ಮಾಡ್ತಿ? ನನ್ನ ಹತ್ತಿರ ಹತ್ತು ಪೈಸೆ ಇದೆ. ಒಂದು ಪೈಸೆ ವಧುವಿಗೆ ಸೀರೆ, ಒಂದು ಪೈಸೆ ನನ್ನ ಬಟ್ಟೆ, ಒಂದು ಪೈಸೆ ಊಟ, ಒಂದು ಪೈಸೆ ಪುರೋಹಿತರ ಫೀಜು, ಒಂದು ಪೈಸೆ ಹಾಸಿಗೆ, ಹತ್ತರಲ್ಲಿ ಇನ್ನೆಷ್ಟುಉಳೀತು ಭಾಗವತರೇ?

ಭಾಗವತ : ಓ ಇನ್ನೂ ಐದು ಪೈಸೆ ಉಳಿಯಿತು.

ಕಿಟ್ಟಿ : ಅದನ್ನ ನನ್ನ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟುಬಿಡು.

ಭಾಗವತ : ಮತ್ತೆ ಹುಡಿಗಿ?

ಕಿಟ್ಟಿ : ಅದೇನು ಮಹಾ! ಯಾವುದಾದರೂ ಕಾಲೇಜ ಕಡೆ ಹೋದರೆ ಯದ್ವಾ ತದ್ವಾ ಹುಡಿಗೀರು ಸಿಗತಾರೆ!

ಅಜ್ಜಿ : ಹತ್ತ ಪೈಸಾದಲ್ಲಿ ಮದುವೆ! ಭಾಗವತರೇ ಇರೋನೊಬ್ಬ ಮೊಮ್ಮಗ. ಅವನಿಗೋ ಮದುವೆ ಹುಚ್ಚು ನೆತ್ತಿಗೇರಿಬಿಟ್ಟಿದೆ, ಏನು ಮಾಡೋದು?

ಕಿಟ್ಟಿ : ಮದುವೆ.

ಅಜ್ಜಿ : ಭಾಗವತರೇ,

ಭಾಗವತ : ಏನಜ್ಜಿ?

ಅಜ್ಜಿ : ಏನ್ಮಾಡೋದು ಅಂತ ನಿಮ್ಮನ್ನ ಕೇಳಿದೆ.

ಭಾಗವತ : ಹೇಳ್ತಾನಲ್ಲಾ ಮದುವೆ ಅಂತ.

ಕಿಟ್ಟಿ : ಅಜ್ಜಿ ನನಗಿದೆಯಲ್ಲಾ ಸರಿಬರೋದಿಲ್ಲ. ನೀನೇನು ಈ ಹತ್ತು ಪೈಸಾದಲ್ಲಿ ಮದುವೆ ಮಾಡ್ತಿಯೊ, ಅಥವಾ ನಾನೇ ಮಾಡಿಕೊಂಡು ಬರಲೊ?

ಅಜ್ಜಿ : ಇವನ ಮಾತ ಕೇಳಿ ನನಗೂ ಹುಚ್ಚು ಹತ್ತುತಾ ಇದೆಯಲ್ಲ ಭಾಗವತರೇ!

ಕಿಟ್ಟಿ : ಸರಿ ಸರಿ ಈ ಹತ್ತು ಪೈಸಾದಲ್ಲೇ ಮದುವೆ ಮಾಡಿಕೊಂಡು ಬರ್ತೀನಿ ನೋಡ್ತಾ ಇರಿ.

(ಭಾಗವತ, ಅಜ್ಜಿ ಕಿಟ್ಟೀ ಕಿಟ್ಟೀ ತಡೆಯೋಎನ್ನುತ್ತಿರುವಂತೆ ಕಿಟ್ಟಿ ಹೋಗುವನು.)