ಒಂದು ನೂರ ಐವತ್ತು ವರ್ಷಗಳ ಹಿಂದೆ ಇಂಗ್ಲೆಂಡಿನಿಂದ ಭಾರತಕ್ಕೆ ವ್ಯಾಪರಕ್ಕೆಂದು ಬಂದ ಇಂಗ್ಲಿಷರ ಕಂಪನಿ ಕ್ರಮೇಣ ಇಲ್ಲಿ ಸಮ್ರಾಜ್ಯವನ್ನು ಕಟ್ಟಲು ಪ್ರಾರಂಭಿಸಿತ್ತು. ಆಗಲೆ ಭಾರತದ ಹಲವು ಪ್ರದೇಶಗಳನ್ನು ತನ್ನ ಅಂಗೈಯಲ್ಲಿ ಸೇರಿಸಿಕೊಂಡಿತ್ತು.

ಹಲವು ರಾಜರೂ ಅವರಿಗೆ ತಲೆಬಾಗಿ ತಮ್ಮ ಸಿಂಹಾಸನವನ್ನು ಉಳಿಸಿಕೊಂಡಿದ್ದರು.

ಕನ್ನಡನಾಡಿನ ಒಬ್ಬ ವೀರವನಿತೆ ಇಂಗ್ಲಿಷರ ಸೈನ್ಯವನ್ನು ಎದುರಿಸಿ ನಿಂತಳು, ಸೈನ್ಯ ತನ್ನ ಕೋಟೆಯನ್ನು ಮುತ್ತಿದಾಗ ಈ ಕೋಮಲೆ ಸೈನ್ಯದ ಕಣ್ಣಾದಳು, ಸ್ಪೂರ್ತಿಯಾದಳು, ತಾನೇ ಕುದುರೆ ಏರಿ ಕತ್ತಿ ಹಿಡಿದು ಹೋರಾಡಿದಳು. ಈ ವೀರಶ್ರೀಯ ಹೆಸರು ಕಿತ್ತೂರು ಚೆನ್ನಮ್ಮ. ಹೀಗೆಯೇ ವೀರಾವೇಶದಿಂದ ಇಂಗ್ಲಿಷರೊಡನೆ ಹೋರಾಡಿ ಪ್ರಾಣ ಒಪ್ಪಿಸಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಹೆಸರನ್ನು ನಾವೆಲ್ಲ ಕೇಳಿದ್ದೇವೆ, ಅಲ್ಲವೆ?

ವೀರ ರಾಣಿ ಲಕ್ಷ್ಮೀಬಾಯಿ ಸ್ವಾತಂತ್ರಕ್ಕಾಗಿ ಪ್ರಾಣ ಒಪ್ಪಿಸುವುದಕ್ಕೆ ಸುಮಾರು ಮೂವತೈದು ವರ್ಷಗಳ ಹಿಂದೆ ಕನ್ನಡನಾಡಿನಲ್ಲಿ ಈ ದಿವ್ಯತಾರೆ ಬೆಳಗಿತು.

ಕಿತ್ತೂರುರಾಜ ಮನೆತನ

ಆ ಕಾಲಕ್ಕೆ ಕಿತ್ತೂರ ನಾಡು ಒಳ್ಳೆಯ ಆಯಕಟ್ಟಿನ ಸ್ಥಾನವನ್ನು ಪಡೆದಿತ್ತು. ಈ ಸಂಸ್ಥಾನದ ಪಶ್ಚಿಮ ಭಾಗಗಳು ಮಲೆನಾಡಿನ ಗುಡ್ಡ ಕಂದರಗಳಿಂದ ತುಂಬಿಕೊಂಡು ಪೂರ್ವದ ಭಾಗಗಳು ಬಯಲು ಪ್ರದೇಶವಾಗಿ ಒಳ್ಳೇ ಫಲವತ್ತಾಗಿದ್ದವು ಅಂದು ಕಿತ್ತೂರು ಯುದ್ಧತಂತ್ರದ ದೃಷ್ಟಿಯಿಂದ ಮಹತ್ವದ ಸ್ಥಾನವನ್ನು ಪಡೆದುಕೊಂಡಿತ್ತು. ಅದು ಸ್ವಯಂ ಸಂರಕ್ಷಣೆಗೆ ಅನುಕೂಲವಾಗಿತ್ತು. ದಾಳಿಕಾರರಿಗೆ ಪ್ರತಿಕೂಲವಾಗಿತ್ತು.

ಇಲ್ಲಿಯ ನೆಲ ಸಾರವತ್ತಾದುದು. ಮಳೆಯ ಭರವಸೆ ಇರುತ್ತಿತ್ತು. ಹವಾ ಸಂತೊಷವನ್ನು ಉಂಟು ಮಾಡುವಂತಹುದು, ಉತ್ಸಾಹಪೂರಕ ಜನರು, ದುಡಿತವನ್ನು ಮೆಚ್ಚಿದ ರೈತರು, ದುಡಿತದಲ್ಲಿ ದೇವರನ್ನು ಕಾಣುತ್ತಿದ್ದರು. ಆದುದರಿಂದ ಕಿತ್ತೂರು ಸಂಪನ್ನ ನಾಡಾಗಿತ್ತು.

ಕಿತ್ತೂರಿನ ಜನ ಸ್ವಾತಂತ್ರಪ್ರಿಯರು. ಸಾಹಸ ಪ್ರಿಯರು. ತಾಯ್ನಾಡಿನ ಬಗ್ಗೆ ಇವರಿಗೆ ಬಹು ಮಮತೆ.

ಕಿತ್ತೂರ ದೊರೆಗಳು ವೀರಪರಂಪರೆಗಳನ್ನು ಬೆಳೆಸಿಕೊಂಡು ಬಂದ ಧರ್ಮನಿಷ್ಠರು. ಪ್ರಜೆಗಳನ್ನು ಮಕ್ಕಳಂತೆ ನೋಡುವವರು, ದೇಶಪ್ರೇಮಿಗಳು. ಈ ದೊರೆಗಳಲ್ಲಿ ಮಲ್ಲಸರ್ಜ ದೊರೆಯು ಬಹಳ ಪ್ರಸಿದ್ಧಿ ಪಡೆದ ದೊರೆಯಾಗಿದ್ದನು. ಇವನು ೧೭೮೨ ರಿಂದ ೧೮೧೬ರ ವರೆಗೆ ಆಳಿದನು.

ಈ ನಾಡಿನ ಕೇಂದ್ರ ಸ್ಥಳವೇ ಕಿತ್ತೂರು. ಇದು ಬೆಳಗಾವಿ ಧಾರವಾಡ ನಗರಗಳ ನಡುವಿನ ಹೆದ್ದಾರಿಯ ಪಕ್ಕದಲ್ಲಿದೆ. ಇದು ಈಗ ಸಾಮಾನ್ಯ ಗ್ರಾಮ. ಇಲ್ಲಿ ಹೆಣ್ಣು ಮಕ್ಕಳಿಗಾಗಿ ಒಂದು ಸೈನಿಕ ಶಾಲೆಯು ಸ್ಥಾಪನೆಯಾಗಿದೆ. ಬ್ರಟಿಷರ ಕರಾಳ ಆಡಳಿತವನ್ನು ಪ್ರತಿಭಟಿಸಿ, ಸ್ವಾತಂತ್ರದ ವೀರ ಬಾವುಟವನ್ನು ಮೇಲೆತ್ತಿ ಹಿಡಿದು, ಈ ಗೌರವ ರಕ್ಷಣೆಗಾಗಿ ತನ್ನ ಸಾರ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾಕೀರ್ತಿ ಈ ಕಿತ್ತೂರಿಗೆ ಸಲ್ಲುತ್ತದೆ.

ವೀರಕಥೆ

ಬ್ರಟಿಷರನ್ನು ಪ್ರತಿಭಟಿಸಿ ಹೋರಾಡಿದ ಭಾರತೀಯ ವೀರ ಮಹಿಳೆಯರಲ್ಲಿ ಕಿತ್ತೂರಿನ ರಾಣಿ ಚನ್ನಮ್ಮ ಮೊದಲಿಗಳು. ಈ ತಾಯಿ ಕನ್ನಡನಾಡಿನ ಹೆಮ್ಮೆಯ ಸ್ವತ್ತು. ಭಾರತದ ವೀರ ಪುತ್ರಿ. ಚೆನ್ನಮ್ಮನ ನಿಷ್ಠೆ, ಧೈರ್ಯ, ಸಾಹಸಗಳು ತಲೆತಲಾಂತರದಿಂದ ಮೂಡಿಬಂದ ಕೆಚ್ಚೆದೆಯ ಕಾವ್ಯವಾಗಿವೆ. ಲಾವಣಿ ಹಾಡುಗಳಾಗಿವೆ.

೧೮೨೪ರಲ್ಲಿ ಈ ವೀರ ವನಿತೆ ನಡೆಸಿದ ಸಂಗ್ರಾಮವು ೧೮೫೭ ರ ಸ್ವಾತಂತ್ರ ಸಂಗ್ರಾಮಕ್ಕೆ ಸ್ಪೂರ್ತಿದಾಯಕವಾಯಿತು. ರಾಣಿ ಚೆನ್ನಮ್ಮ ತನ್ನ ಈ ಸ್ವಾತಂತ್ರದ ಜ್ಯೋತಿಯನ್ನು ಉರಿಸಿದಳು. ತಾನೂ ಉರಿದು ಅಮರಳಾದಳು. ಭಾರತದ ವೀರಸಂತಾನರಲ್ಲಿ, ಅವರ ರಕ್ತದ ಕಣಕಣಗಳಲ್ಲಿ, ಧಮನಿ ಧಮನಿಗಳಲ್ಲಿ, ಸ್ವಾತಂತ್ರ ಮಂತ್ರದ, ವೀರವ್ರತದ ಕಾವನ್ನು ಹರಿಯಬಿಟ್ಟಳು.

ಬಾಲ್ಯ ವಿಧ್ಯಾಭ್ಯಾಸ

ಚೆನ್ನಮ್ಮ ಕಿತ್ತೂರಿನ ಸೊಸೆ; ಕಾಗತಿಯ ಮಗಳು. ಕಿತ್ತೂರಿನ ಆಡಳಿತಕ್ಕೆ ಒಳಗಾದ ಊರು ಕಾಗತಿ. ಬೆಳಗಾವಿಯಿಂದ ಐದು ಮೈಲಿನ ಆಚೆ ಬೆಟ್ಟದ ಮಧ್ಯದಲ್ಲಿ ನಿಂತಿದೆ ಈ ಚಿಕ್ಕ ಊರು ಕಾಗತಿ.

ಈ ಇತಿಹಾಸ ನಡೆದ ಕಾಲದಲ್ಲಿ ಕಾಗತಿಯ ದೇಸಾಯಿ ಮನೆತನದಲ್ಲಿ ಧೂಳಪ್ಪ ಗೌಡ ಹೆಸರಾಗಿದ್ದರು. ಇವರು ಯುದ್ಧಕಲೆಯಲ್ಲಿ ನಿಷ್ಣಾತರಾಗಿದ್ದರು. ಕಿತ್ತೂರಿನ ಅರಸು ಮನೆತನದ ವಿಷಯದಲ್ಲಿ ಕಾಗತಿ ದೇಸಾಯಿಯವರಿಗೆ ಬಹಳ ಅಭಿಮಾನ.

ಕಾಗತಿ ದೇಸಾಯರ ಮನೆತನದಲ್ಲಿ ೧೭೭೮ ರಲ್ಲಿ ಹೆಣ್ಣು ಮಗುವೊಂದು ಜನಿಸಿತು. ರಾಜಕಳೆಯಿಂದ ಬೆಳಗುತ್ತಿದ್ದ ಈ ಮಗುವೇ ಮುಂದೆ ಕಿತ್ತೂರಿನ ಸುಪ್ರಸಿದ್ಧ ರಾಣಿ ಚೆನ್ನಮ್ಮನಾದಳು. ಮಗು ಜನಿಸಿದಾಗ ಜಂಗಮ ಮೂರ್ತಿಗಳು ಜನನ ಮುಹೂರ್ತವನ್ನು ಪರಿಶೀಲಿಸಿ ಈ ಮಗು ನಾಡಿನ ರಾಣಿಯಾಗಿ ವೀರಮಾತೆಯಾಗಿ ವಿಖ್ಯಾತಿಯಾಗುವುದಾಗಿ ಭವಿಷ್ಯ ನುಡಿದರು. ಈ ಭವಿಷ್ಯವನ್ನು ಕೇಳಿದ ಧೂಳಪ್ಪಗೌಡರು ಮಗಳನ್ನು ಆ ರೀತಿ ಪೋಷಿಸಬೇಕೆಂದು ನಿಶ್ಚಯ ಮಾಡಿದರು.

ಹುಡುಗಿ ಚೆನ್ನಮ್ಮ ಯುದ್ಧ ವಿದ್ಯೆಗಳನ್ನು ಕಲಿತಳು.

ಆಕೆಯ ಶಿಕ್ಷಣಕ್ಕಾಗಿ ಶ್ರೇಷ್ಠರಾದ ಇಬ್ಬರು ಗುರುಗಳನ್ನು ನಿಯಮಿಸಿದರು. ಅವರು ಅವಳಿಗೆ ಎಲ್ಲ ಶಾಸ್ತ್ರಗಳನ್ನೂ, ಶಿವಶರಣರ, ವೀರರ ಜೀವನ ವೃತ್ತಾಂತಗಳನ್ನೂ, ಮಹಾ ಆದರ್ಶಗಳನ್ನೂ ಬೋಧಿಸತೊಡಗಿದರು.

ಬೆಳೆಬೆಳೆದಂತೆ ಚೆನ್ನಮ್ಮ ಸಾಹಿತ್ಯ, ಸಂಗೀತ, ಸಂಸ್ಕೃತಿ, ಇತಿಹಾಸ ಹಾಗೂ ರಾಜಕಾರಣಗಳಲ್ಲಿ ಜ್ಞಾನವನ್ನು ಸಂಪಾದಿಸತೊಡಗಿದಳು. ಹುಡುಗಿಯರಿಗೆ ಉಚಿತವಾದ ಈ ವಿದ್ಯೆಗಳನ್ನು ಕಲಿತದ್ದು ಮಾತ್ರವಲ್ಲ, ರಾಜ ಮನೆತನದ ಗಂಡುಹುಡುಗರು ಕಲಿಯುವ ಕುದುರೆ ಸವಾರಿ ಮತ್ತು ಯುದ್ಧ ವಿದ್ಯೆಗಳನ್ನೂ ಕಲಿತಳು.

ಚನ್ನಮ್ಮನಿಗೆ ಈಗ ಹದಿನಾರು ವರ್ಷ ಬಹಳ ಚೆಲುವೆ. ಧೀಮಂತಳು, ಶ್ರೀಮಂತಳು, ಶೂರಳು ಬಿಲ್ಲು ಬಾಣ ಹಿಡಿದು ಬೇಟೆಯಾಡುತ್ತಿದ್ದಳು. ಕುದುರೆ ಸವಾರಿ ಮಾಡುತ್ತದ್ದಳು. ಭರ್ಜಿ ಎಸೆತ, ಕತ್ತಿ ವರಸೆಗಳಲ್ಲಿ ಅವಳು ಅಪ್ರತಿಮ ಜಾಣೆಯಾಗಿದ್ದಳು.

ಕಿತ್ತೂರ ರಾಣಿ

ಕಿತ್ತೂರಿನ ದೊರೆ ಮಲ್ಲಸರ್ಜ ಈ ಚಿನ್ನಮ್ಮ ಸುಂದರೆಯ ಬಗೆಗೆ ಸಾಕಷ್ಟು ಕೇಳಿ ತಿಳಿದುಕೊಂಡಿದ್ದನು. ತರುಣಿಯಾದ ಚೆನ್ನಮ್ಮ ಮಲ್ಲಸರ್ಜ ದೊರೆಯ ಕೀರ್ತಿ ಪರಾಕ್ರಮಗಳನ್ನು ಕೇಳಿ ಮಾರುಹೋಗಿದ್ದಳು.

ಹಿರಿಯರು ಈ ದಾಂಪತ್ಯವನ್ನು ಹೊಂದಿಸಿದರು. ಮದುವೆ ಬಹು ಸಂಭ್ರಮದಿಂದ ವೈಭವದಿಂದ ನಡಿಯಿತು.

ಮಲ್ಲಸರ್ಜ ದೊರೆಯ ಹಿರಿಯ ಹೆಂಡತಿ ರುದ್ರಮ್ಮ ಚೆನ್ನಮ್ಮನನ್ನು ಸವತಿಯೆಂದು ಭಾವಿಸಲಿಲ್ಲ. ತಂಗಿಯೆಂದು ಪ್ರೀತಿಸತೊಡಗಿದಳು. ಚೆನ್ನಮ್ಮ ಹಿರಿಯ ರಾಣಿಯನ್ನು ಅಕ್ಕನಂತೆ ಗೌರವಿಸತೊಡಗಿದಳು.

ಈ ಸಂಸಾರದಲ್ಲಿ ಪ್ರೀತಿ ಹಾಲುಜೇನಾಗಿ ಹರಿಯಿತು.

ಚೆನ್ನಮ್ಮ ಕೇವಲ ರಾಣಿಯಾಗಿ ಅರಮನೆಯ ಅಲಂಕಾರವಾಗಲು ಬಯಸಲಿಲ್ಲ. ರಾಜ್ಯದ ಆಗುಹೋಗುಗಳಲ್ಲಿ ಆಸಕ್ತಿಯನ್ನು ತಳೆದು ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪತಿಯ ಬಲಗೈಯಾದಳು.

ಕಿತ್ತೂರಿನ ಜನತೆ ಚೆನ್ನಮ್ಮನನ್ನು ಮಹಾತಾಯಿಯೆಂದೇ ತಿಳಿದುಕೊಂಡರು. ಅಷ್ಟು ಜನತಾ ಸಂಪರ್ಕವನ್ನು ಈ ತಾಯಿ ಗಾಢವಾಗಿರಿಸಿಕೊಂಡಿದ್ದಳು.

ಅಕ್ಕ ರುದ್ರಮ್ಮ ರಾಣಿಯ ಮಕ್ಕಳನ್ನು ಚೆನ್ನಮ್ಮ ತನ್ನ ಮಕ್ಕಳಂತೆ ನೋಡಿಕೊಳ್ಳತೊಡಗಿದಳು. ಅವರೇ ರಾಜ್ಯಕ್ಕೆ ಉತ್ತರಾಧಿಕಾರಿಗಳು. ಆ ರೀತಿ ಅವರಿಗೆ ತರಬೇತಿಯನ್ನು ಕೊಡತೊಡಗಿದಳು.

ಚೆನ್ನಮ್ಮ ನಾಡಿನ ಕಣ್ಣಾದಳು.

ಶಿವಲಿಂಗರುದ್ರ ಸರ್ಜ

ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದ ಕಿತ್ತೂರಿನ ಅರಮನೆಗೆ ಈಗ ವಜ್ರಾಘಾತವಾಗುವಂತಹ ಪ್ರಸಂಗ ಬಂದಿತು. ವಂಚನೆಯಿಂದ ಪೇಶ್ವೆಯರು ಮಲ್ಲಸರ್ಜನನ್ನು ಸೆರೆಹಿಡಿದುಕೊಂಡು ಹೊಗಿದ್ದವರು ಅವನು ಕಾರಾಗೃಹದಲ್ಲಿ ತೀಕ್ಷ್ಣ ಬೇನೆಗೆ ತುತ್ತಾದ ಕೂಡಲೇ ಬಿಡುಗಡೆ ಮಾಡಿದರು. ಆದರೆ ದಾರಿಯಲ್ಲಿಯೇ ಮಲ್ಲಸರ್ಜ ತನ್ನ ಕೊನೆಯುಸಿರನ್ನೆಳೆದದ್ದು ದೈವದುರ್ವಿಪಾಕವಾಯಿತು. ಇದು ಆದದ್ದು ೧೮೧೬ ರಲ್ಲಿ.

ಕಿತ್ತೂರು ದುಃಖದ ಕಡಲಿನಲ್ಲಿ ಮುಳುಗಿತು. ಚೆನ್ನಮ್ಮ ತತ್ತರಿಸಿಹೋದಳು. ಆದರೆ ಅವಳು ಧೈರ್ಯವನ್ನು ತಂದುಕೊಂಡು ದುಃಖವನ್ನು ಸಹಿಸಿದಳು. ಹಿರಿಯ ಮಗ ಶಿವಲಿಂಗರುದ್ರ ಸರ್ಜನ್ನು ಪಟ್ಟಕ್ಕೆ ಕೂಡಿಸಿ ರಾಜ್ಯದ ಆಡಳಿತಸೂತ್ರವು ಸರಾಗವಾಗುವಂತೆ ನೋಡಿಕೊಂಡಳು. ಈ ಚೆನ್ನಮ್ಮ ಚಿಕ್ಕಮ್ಮನ ಮಾರ್ಗದರ್ಶನದಲ್ಲಿ ಶಿವಲಿಂಗರುದ್ರ ಸರ್ಜನು ೧೮೧೬ ರಿಂದ ೧೮೨೪ ರವರೆಗೆ ಚೆನ್ನಾಗಿ ರಾಜ್ಯಭಾರವನ್ನು ಮಾಡಿದನು.

ಕಿತ್ತೂರಿನ ದುರ್ದೈವ, ಶಿವಲಿಂಗರುದ್ರ ಸರ್ಜನು ೧೮೨೪ರಲ್ಲಿ ಲಿಂಗೈಕ್ಯನಾದದ್ದರಿಂದ ಚೆನ್ನಮ್ಮನ ಚಿಂತೆ ಪರ್ವತಪ್ರಾಯವಾಯಿತು.

ರಾಜ್ಯದ ಹೊಣೆ ಹೊತ್ತ ಚೆನ್ನಮ್ಮ

ಶಿವಲಿಂಗರುದ್ರ ಸರ್ಜ ಸಾಯುವುದಕ್ಕೆ ಸ್ವಲ್ಪ ಕಾಲ ಮೊದಲೇ ಕಾಯಿಲೆ ಬಿದ್ದ. ಚೆನ್ನಮ್ಮನಿಗೆ ಸದಾ ರಾ‌ಜ್ಯದ ಯೊಚನೆಯೇ. ಶಿವಲಿಂಗರುದ್ರ ಸರ್ಜ ಕಾಯಿಲೆ ಬಿದ್ದಾಗಲೇ ಮುಂದೇನು ಗತಿ ಎಂದು ಬುದ್ಧಿವಂತಳೂ ದೂರ ದೃಷ್ಟಿಯವಳೂ ಆದ ಚೆನ್ನಮ್ಮ ಆಲೋಚಿಸಿದಳು. ಚೆನ್ನಮ್ಮ ಶಿವಲಿಂಗಪ್ಪನೆಂಬ ಬಾಲಕನನ್ನು ಶಿವಲಿಂಗ ಸರ್ಜನಿಗೆ ದತ್ತಕ ಮಾಡಿಕೊಂಡಳು. ಶಿವಲಿಂಗ ಸರ್ಜ ತೀರಿಕೊಂಡನಂತರ ದತ್ತು ಮಗನ ಹೆಸರಿನಿಂದ ರಾಜ್ಯದ ಕಾರಭಾರವನ್ನು ನಡೆಸಲಾರಂಭಿಸಿದಳು.

ಎಡರುಗಳಿಗೆ, ದುಃಖಗಳಿಗೆ ಎದೆಗುಂದದ ವೀರ ಮಹಿಳೆ ಚೆನ್ನಮ್ಮ !

ದೊಡ್ಡ ವಿಪತ್ತು

ಈಗ ಚೆನ್ನಮ್ಮನ ಕೀರ್ತಿ ಇನ್ನಷ್ಟು ಪಸರಿಸಿತು. ಈಗ ಅವಳು ಕೇವಲ ನಾಡಮಾತೆಯಷ್ಟೇ ಆಗದೆ ವೀರ ಸೇನಾನಿಯಾಗುವ ಪ್ರಸಂಗವೂ ಬಂದಿತು. ಈ ಪ್ರಸಂಗವೇ ಚೆನ್ನಮ್ಮನ ಇತಿಹಾಸ. ಭಾರತದಲ್ಲಿ ಕಿತ್ತೂರಿನ ಕೀರ್ತಿ ಸ್ಫೂರ್ತಿಯಾಗಲು ಚೆನ್ನಮ್ಮನ ಗಂಡುಗಲಿತನವೇ ಭೇರಿಯನ್ನು ಮೊಳಗಿಸಿತು.

ಸಾಯುವ ಮೊದಲು ಶಿವಲಿಂಗರುದ್ರ ಸರ್ಜನು ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಮಾಡಿಕೊಂಡನಲ್ಲವೇ? ಧಾರವಾಡದಲ್ಲಿ ಆಗ ಕಲೆಕ್ಟರನೂ ಮತ್ತು ಬ್ರಿಟೀಷರ ಮುಖ್ಯ ಪೊಲಿಟಿಕಲ್ ಏಜಂಟನೂ ಆಗಿದ್ದ ಥ್ಯಾಕರೆ ಈ ದತ್ತಕವನ್ನು ನಿರಾಕರಿಸಿದನು. ಇದರಿಂದ ಇಂಗ್ಲಿಷರ ಹಾಗೂ ಕಿತ್ತೂರಿನ ದೊರೆಗಳ ಮಧುರ ಬಾಂಧವ್ಯವು ಕೊನೆಗೊಂಡಿತೆಂದೇ ಹೇಳಬೇಕು ಮೊದಲಿನಿಂದ ಥ್ಯಾಕರೆಗೆ ಕಿತ್ತೂರಿನ ಮೇಲೆ ಕಣ್ಣು ೧೮೨೨ ರಲ್ಲಿ ಅವನು ದೇಸಾಯಿಗೆ, “ನೀನು ಕಳ್ಳರಿಗೆ ಸಹಾಯ ಮಾಡುತ್ತಿದ್ದೀಯೆ. ನಿನ್ನಿಂದ ಮತ್ತು ಈ ಕಳ್ಳಕಾಕರಿಂದ ಸುತ್ತಮುತ್ತಲಿನವರಿಗೆ ತೊಂದರೆ ಆಗುತ್ತಿದೆ” ಎಂದು ಕಾಗದ ಬರೆದಿದ್ದ. ಇದನ್ನೆ ಕಾರಣ ಮಾಡಿಕೊಂಡು ಕಿತ್ತೂರನ್ನೆ ನುಂಗುವ ಯೋಚನೆ ಅವನದು. ಶಿವಲಿಂಗರುದ್ರ ಸರ್ಜ ಮರಣಹೊಂದಿದ್ದು ಅವನಿಗೆ ಅನುಕೂಲವೇ ಆಯಿತು. ಶಿವಲಿಂಗಪ್ಪ ಕಿತ್ತೂರಿನ ಸಿಂಹಾಸನಕ್ಕೆ ಅಧಿಕಾರಿ ಎಂದು ಬ್ರಿಟಿಷರು ಒಪ್ಪುವುದಿಲ್ಲ ಎಂದು ಸಾರಿದ.

ಇಲ್ಲಿಯ ವೈರದ ಮೊಳಕೆಯ ಅಂಕುರವಾಯಿತು. ಈ ದತ್ತಕ ಪ್ರಕರಣವನ್ನೇ ದೊಡ್ಡದು ಮಾಡಿ ಕಿತ್ತೂರ ರಾಜ್ಯಾಡಳಿತದಲ್ಲಿ ಕೈ ಹಾಕಿ ಆ ಸಂಸ್ಥಾನವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬುದೇ ಥ್ಯಾಕರೆಯ ಸಂಚು ಆಗಿತ್ತು. ಇದು ಅಪ್ರಾಮಾಣಿಕ ಇಂಗ್ಲಿಷ್ ಮನೋವೃತ್ತಿಯೂ ಮಹತ್ವಾಕಾಂಕ್ಷೆಯೂ ಆಗಿತ್ತು. ಅರಮನೆಯಲ್ಲಿರುವ ಅಪಾರ ಭಂಡಾರದ ಮೇಲೆ ಥ್ಯಾಕರೆಯ ಹದ್ದಿನ ಕಣ್ಣು ಕುಳಿತಿತು!

ಇಂಗ್ಲಿಷರ ಈ ಮನೋವೃತ್ತಿಯು ಚೆನ್ನಮ್ಮನನ್ನು ಚಕಿತಗೊಳಿಸಿತು. ದತ್ತು ತೆಗೆದುಕೊಳ್ಳುವುದು ರಾಜನಿಗೆ ಸಂಬಂಧಿಸಿದ ವಿಷಯ. ಇದಕ್ಕೂ ಇಂಗ್ಲಿಷರಿಗೂ ಏನು ಸಂಬಂಧ? ಇದು ರಾಣಿ ಚೆನ್ನಮ್ಮನ ದೃಷ್ಟಿ.

ಥ್ಯಾಕರೆ ಬಹು ದರ್ಪದಿಂದ ನಡೆದುಕೊಂಡ. ಅಶಾಂತಿಯ ನೆಪ ಮಾಡಿ ಕಿತ್ತೂರ ಅರಮನೆಯ ಭಂಡಾರಕ್ಕೆ ಬೀಗಮುದ್ರೆಯನ್ನು ಹಾಕಿದ. ಕೊನೆಯ ನಿರ್ಣಯವಾಗುವವರೆಗೆ ಅದರ ವ್ಯವಸ್ಥೆಯನ್ನು ನೋಡಲು ಕನ್ನೂರ ಮಲ್ಲಪ್ಪಶೆಟ್ಟಿ ಮತ್ತು ಹಾವೇರಿ ವೆಂಕಟರಾಯ ಎಂಬವರನ್ನು ನಿಯಮಿಸಿದ.

ತನ್ನ ಅರಮನೆಯ ಭಂಡಾರಕ್ಕೆ ಇಂಗ್ಲಿಷರ ಮುದ್ರೆ! ಅದನ್ನು ಕಾಯುವವರು ಇಂಗ್ಲಿಷರ ನೌಕರರು! ಇದು ಅಧಿಕಪ್ರಸಂಗದ ಅವಮಾನಕಾರಕ ಘಟನೆಯೆಂದು ಚೆನ್ನಮ್ಮ ಬಗೆದಳು. ಅವಳ ಆತ್ಮಾಭಿಮಾನ ಸಿಡಿದೆದ್ದಿತು. ಆದರೂ ಕಿತ್ತೂರಿನ ಒಳಿತನ್ನು ಯೋಚಿಸಿ ಅವಳು ಒಮ್ಮಲೆ ಶಾಂತಿಯನ್ನು ಕದಡಲಿಲ್ಲ.

ಶಿವಲಿಂಗ ಸರ್ಜನ ಆಕಾಲಿಕ ಮರಣದಿಂದ ಇಡೀ ಸಂಸ್ಥಾನವು ದುಃಖದಲ್ಲಿ ಮುಳುಗಿದಾಗ ಕಿತ್ತೂರಿನಲ್ಲಿಯೇ ಇದ್ದ ಥ್ಯಾಕರೆಯ ಬಾಯಿಂದ ಒಂದು ಸಹಾನುಭೂತಿಯ ಶಬ್ದವೂ ಹೊರಬೀಳಲಿಲ್ಲ. ಅವನ ದೃಷ್ಟಿಯೆಲ್ಲ ಕಿತ್ತೂರನ್ನು ಕಬಳಿಸುವುದರಲ್ಲಿಯೇ ಕೇಂದ್ರೀಕೃತವಾಗಿತ್ತು.

ಕಿತ್ತೂರಿನ ಜನರ ಭಕ್ತಿ ರಾಣಿ ಚನ್ನಮ್ಮನ ಮೇಲೆ ವಿಶೇಷವಾಗಿದ್ದಿತು. ದತ್ತಕ ಮಗನು ಇನ್ನೂ ಚಿಕ್ಕವನಾಗಿದ್ದನು. ದಿವಂಗತ ದೇಸಾಯಿಯ ವಿಧವೆಯು ತೀರಾ ಚಿಕ್ಕವಳಾಗಿದ್ದರಿಂದ ಸಂಸ್ಥಾನವನ್ನು ಮುನ್ನಡೆಸುವ ಹೊಣೆಯನ್ನು ಕುಶಾಗ್ರಮತಿಯಾದ ಚೆನ್ನಮ್ಮನು ನಿರ್ವಹಿಸಬೇಕಾಯಿತು. ಸಂಸ್ಥಾನಕ್ಕೆ ಇಂಗ್ಲಿಷರಿಂದ ಬಂದ ಗಂಡಾಂತರವನ್ನು ತೊಡೆದುಹಾಕಲು ಅವಳು ಸಜ್ಜಾಗಬೇಕಾಯಿತು.

ಕಿತ್ತೂರ ನಾಡೆಲ್ಲ ಒಂದಾಗಿ ನಿಂತಿತು

ಚೆನ್ನಮ್ಮ ಸ್ವಾಭಿಮಾನಿ, ಸ್ವತಂತ್ರಪ್ರಿಯೆ, ಅವಳು ನಿಷ್ಪಕ್ಷಪಾತತನ ಹಾಗೂ ನ್ಯಾಯಬುದ್ದಿಗೆ ಹೆಸರಾಗಿದ್ದಳು. ಅವಳು ದೃಢ ಮನಸ್ಸಿನ ಧೀರ ಮಹಿಳೆ.

ಈಗ ಬಂದ ಗಂಡಾಂತರ ಅರಿವನ್ನು ರಾಣಿ ಚೆನ್ನಮ್ಮ ಪ್ರಜೆಗಳ ಸಭೆಯನ್ನು ಕರೆದು ನಿವೇದಿಸಿದಳು.

“ಇಡಿಗಾಳಾದರೆ ಬದುಕವೆವು; ಬಿಡಿಗಳಾದರೆ ಸಾಯುವೆವು” ಎಂದು ಒಗ್ಗಟ್ಟಿನ ಮಂತ್ರವನ್ನು ಭೋಧಿಸಿದಳು.

ಕಿತ್ತೂರಿನ ಹಿರಿಯರು ಹಾಗೂ ಮುಖಂಡರು ಸಂಸ್ಥಾನ ಕಾಯ್ದುಕೊಳ್ಳುವ ಪ್ರತಿಜ್ಞೆ ಮಾಡಿದರು. “ಸಂಸ್ಥಾನದ ಐಕ್ಯವನ್ನು ಕಾಯ್ದುಕೊಂಡು ಹೋಗುತ್ತೇವೆ” ಎಂದು ಅವರೆಲ್ಲರೂ ತಮ್ಮ ಶಸ್ತ್ರಾಸ್ತ್ರಗಳನ್ನು ಮುಟ್ಟಿ ಆಣೆ ಮಾಡಿದರು.

ಕಿತ್ತೂರ ನಾಡು ಒಂದಾಗಿ ನಿಂತಿತು.

ಇದು ಚೆನ್ನಮ್ಮರಾಣಿಯ ಅದ್ಭತ ಸಂಘಟನಾ ಶಕ್ತಿಯ ಮಾದರಿಯಾಗಿತ್ತು. ಇದನ್ನು ತಿಳಿದ ಥ್ಯಾಕರೆ ಕಂಗೆಟ್ಟಿದ್ದರಲ್ಲಿ ಅಚ್ಚರಿಯಿಲ್ಲ.

ಮೊದಲ ಸಂಧಾನ

ಈ ಸಂಘಟನೆಯನ್ನು ಮುರಿಯಲು ಥ್ಯಾಕರೆ ನಾನಾ ರೀತಿಯ ಹಂಚಿಕೆಗಳನ್ನು ಹೂಡಿದನು.

ಅರಮನೆಯವರನ್ನು ನಿಂದಿಸತೊಡಗಿದನು. ಭಂಡಾರವನ್ನು ತನ್ನ ಸ್ವಾಧೀನಪಡಿಸಿಕೊಂಡದ್ದರಿಂದ ಸ್ವಾಭಿಮಾನಿಗಳಾದ ಕಿತ್ತೂರಿನವರು ಉರಿದೆದ್ದರು. ಚೆನ್ನಮ್ಮ ಮತ್ತು ಶಿವಲಿಂಗ ಸರ್ಜನ ವಿಧವೆ ಪತ್ನಿ ವೀರಮ್ಮ ಇವರಲ್ಲಿ ವೈಮನಸ್ಯ ಉಂಟಾಗುವಂತೆ ಪ್ರಯತ್ನ ಮಾಡಿದನು. ಅರಮನೆಯಲ್ಲಿ ದೊಡ್ಡ ಒಡಕನ್ನು ಹುಟ್ಟಿಸಿ ಚೆನ್ನಮ್ಮನನ್ನು ಬಲಹೀನ ಮಾಡಬೇಕೆಂದು ಯೋಚಿಸಿದನು.

ಅವನ ಕೊನೆಯ ಹೊಂಚು ಕಿತ್ತೂರ ಕೋಟೆಯನ್ನು ವಶಪಡಿಸಿಕೊಳ್ಳುವುದೇ ಆಗಿತ್ತು.

ಸಂಧಾನ ಮಾರ್ಗದಿಂದ ಸಂಸ್ಥಾನವನ್ನು ಉಳಿಸಿಕೊಳ್ಳಬೇಕೆಂದು ರಾಣಿ ಸಾಕಷ್ಟು ಪ್ರಯತ್ನಿಸತೊಡಗಿದಳು. ಪ್ರಸಂಗ ಬಂದರೆ ಯದ್ಧಕ್ಕೂ ಅಣಿಯಾಗಬೇಕೆಂದು ಯುದ್ಧದ ಸಿದ್ಧತೆಯನ್ನು ಮಾಡತೊಡಗಿದಳು. ತನ್ನ ಪರವಾಗಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ವಿಷಯವನ್ನು ತಿಳಿಸಿ ವಾದ ಮಾಡಲು ಲಿಂಗಭಟ್ಟ ಮತ್ತು ರಾಜಪ್ಪ ಎಂಬ ಇಬ್ಬರು ವಕೀಲರನ್ನು ಕಳುಹಿಸಿದಳು. ಜೊತೆಗೇ ಯುದ್ಧಕ್ಕೆ ಅಣಿಯಾಗಲು ಕೋಟೆಕೊತ್ತಲಗಳನ್ನು ಭದ್ರಮಾಡಿಕೊಂಡಳು.ಬೇರೆ ಬೇರೆ ಸ್ಥಳಗಳ ಅಧಿಕಾರಿಗಳನ್ನು ಕರೆಸಿಕೊಂಡಳು. ರಾಜ್ಯದ ರಕ್ಷಣೆಯನ್ನು ಕುರಿತು ಅವರ ಜೊತೆಗೆ ಆಲೋಚನೆ ನಡೆಸಿದಳು. ಕೋಟೆ ಬತೇರಿಗಳ ಮೇಲೆ ತೋಪುಗಳನ್ನು ಇರಿಸಿದಳು. ಕೊಲ್ಲಾಪುರದ ಮಹಾರಾಜನ ಬಳಿಗೆ ರಾಯಭಾರಿಯನ್ನು ಕಳುಹಿಸಿದಳು; “ನಾವು ಕಷ್ಟದಲ್ಲಿದ್ದೇವೆ, ಸಹಾಯ ಮಾಡಿ” ಎಂದು. ಅವನು ಭಾರತೀಯ ರಾಜ- ಕಿತ್ತೂರಿನಿಂದ ಬಂದ ರಾಯಬಾರಿಯನ್ನು ಹಿಡಿದು ಬ್ರಟಿಷರಿಗೆ ಒಪ್ಪಿಸಿದ. ಬ್ರಟಿಷರನ್ನು ಸಂತೋಷಪಡಿಸಿದ! “ಶಾಂತಿಗೆ ಬದ್ಧರು, ಯುದ್ಧಕ್ಕೂ ಸಿದ್ಧರು” ಎಂಬುದು ರಾಣಿಯ ಘೋಷಣೆಯ ರೀತಿಯಾಗಿತ್ತು.

ಕಿತ್ತೂರ ಸಂಸ್ಥಾನಕ್ಕೆ ಥ್ಯಾಕರೆ ಹಾಗೂ ಚಾಪ್ಲಿನ್ನರು ಕಂಟಕರಾಗಿದ್ದರು. ಇದನ್ನರಿತ ರಾಣಿ ರಾಜತಾಂತ್ರಿಕ ಚಟುವಟಿಕೆಗಳನ್ನು ಪ್ರಾರಂಭಿಸಿದಳು. ಮುಂಬಯಿಯ ಗವರ್ನರ್ ಎಲ್ಫಿನ್‌ಸ್ಟನ್ ಸಾಹೇಬನ ಮೇಲೆ ಪ್ರಭಾವ ಬೀರಲು ಬೇಕಾದಷ್ಟು ಪ್ರಯತ್ನ ಮಾಡಿದಳು.

ಯುದ್ಧವೇ ಘಟಿಸಿತು

ಈ ಶಾಂತಿಯುತ ಸಂಧಾನ ಪ್ರಯತ್ನಗಳು ಫಲಿಸಲಿಲ್ಲ. ಕಿತ್ತೂರು ಈಗ ಮದ್ದಿನ ಗುಡ್ಡದ ಮೇಲೆ ನಿಂತಂತಾಯಿತು. ಎಲ್ಲ ಕಡೆಗೂ ಸ್ಫೋಟಕ ಪರಿಸ್ಥಿತಿಯ ನಿರ್ಮಾಣವಾಯಿತು.

ಕಿತ್ತೂರಿನ ಸಣ್ಣ ಸೈನ್ಯ; ಕಂಪನಿ ಸರ್ಕಾರದ್ದೂ ಪ್ರಬಲವಾದ ಸೈನ್ಯ. ಇದು ಕಿತ್ತೂರಿನ ವೀರರಿಗೆ ತಿಳಿದ ಮಾತಾಗಿತ್ತು. ಆದರೆ ಈಗ ಮಾರ್ಗವೇ ಉಳಿಯಲಿಲ್ಲ. ಸ್ವಾತಂತ್ರ ಇಲ್ಲವೇ ಪರಾಧೀನತೆ – ಯಾವುದನ್ನು ಆರಿಸಿಕೊಳ್ಳಬೇಕು ? ಎಂತಹ ವಿಪತ್ತು ಬಂದರೂ ಮೂದಲಿನದನ್ನೇ ಆರಿಸಿಕೊಳ್ಳುವ ದೃಢ ಪ್ರತಿಜ್ಞನೆಯನ್ನೆ ಕಿತ್ತೂರಿನ ಬಂಟರು ಮಾಡಿದರು. ಕಿತ್ತೂರಿನ ಜನತೆ ಸರ್ವತ್ಯಾಗಕ್ಕೆ ಸಿದ್ಧರಾದರು.

ಕುತಂತ್ರಿಯಾದ ಥ್ಯಾಕರೆಸಾಹೇಬನು ರಾಣಿ ಚೆನ್ನಮ್ಮನನ್ನು ನೋಡಲು ಬಯಸಿದನು. ಈ ಮೊದಲೆ ಸಾಕಷ್ಟು ಅವಮಾನಗೊಳಿಸಿ ಮುಂಗೈ ಜೋರಿನಿಂದ ಕಿತ್ತೂರನ್ನು ಆಕ್ರಮಿಸಬೇಕೆಂದು ಬಯಸಿದ ಈ ಚಂಡಕ ನರಿಯ ಮೇಲೆ ಯಾರಿಗೂ ವಿಶ್ವಾಸವಿರಲಿಲ್ಲ. ಆದುದರಿಂದ ಅವನ ಬಯಕೆಯನ್ನು ಕಿತ್ತೂರಿನ ಪ್ರಮುಖರು ನಿರಾಕರಿಸಿದರು.

ಥ್ಯಾಕರೆಗೆ ಏನಾದರೂ ಒಂದು ನೆವ ಬೇಕಾಗಿತ್ತು. ತಾನೇ ಜಗಳ ತೆಗೆಯಲು ಸನ್ನದ್ಧನಾದ.

ಮಹಾನವಮಿಯ ಸವಾಲು

೧೮೨೪ ನೇಯ ಇಸವಿ ಅಕ್ಟೋಬರ್ ೨೨ ನೇ ದಿನಾಂಕ. ಮಹಾನವಮಿ. ಹಿಂದುಗಳಿಗೆ ಬಹು ದೊಡ್ಡ ಹಬ್ಬ.

ಬ್ರಿಟಿಷರ ಸೈನ್ಯ ಕಿತ್ತೂರಿನ ಮುಂದೆ ಕಾಣಿಸಿಕೊಂಡಿತು.

ಥ್ಯಾಕರೆ, ಅವನ ಕೈಕೆಳಗೆ ಕ್ಯಾಪ್ಟನ್ ಬ್ಲಾಕ್ ಎಂಬಾತ, ಐನೂರು ಮಂದಿ ಸೈನಿಕರು ಮತ್ತು ತುಪಾಕಿಗಳೊಂದಿಗೆ ಬಂದರು.

ಸ್ವತಃ ಚೆನ್ನಮ್ಮ ರಾಣಿ ಕುದುರೆಯೇರಿ ಕತ್ತಿ ಹಿಡಿದು ರಣರಂಗವನ್ನು ಪ್ರವೇಶಿಸಿದಳು

ಥ್ಯಾಕರೆಯು ಕ್ಯಾಪ್ಟನ್ ಬ್ಲಾಕ್‌ನಿಗೆ ತುಪಾಕಿಗಳನ್ನು ಕೋಟೆಯೊಳಗೆ ತರಲು ಹೇಳಿದನು. ದೊಡ್ಡ ದೊಡ್ಡ ಬಾಗಿಲುಗಳ ಹತ್ತಿರ ತೋಪುಗಳನ್ನು ಇಡಿಸಿದನು.

ಕಿತ್ತೂರಿನ ಜನರಿಗೆ ಇದರ ಮರ್ಮ ತಿಳಿಯಿತು. ಕೋಟೆಯ ಹೊರಬಾಗಿಲನ್ನು ಮುಚ್ಚಲಾಯಿತು. ಸ್ವಾತಂತ್ರ ವೀರರಿಂದ ಕಿಕ್ಕಿರಿದು ತುಂಬಿತು.

ಚೆನ್ನಮ್ಮ ಈಗ ಪ್ರಕಟವಾಗಲೇಬೇಕಾಯಿತು. ಅವಳ ಬಿನ್ನಹದ ಮೇರೆಗೆ ಅಂಬಡಗಟ್ಟಿ, ಸಂಗೊಳ್ಳಿ, ಅಂಕಲಗಿ, ಹೆಗ್ಗೇರಿ, ಹೂಲಿ, ಮದಿನಟ್ಟಿ, ಹುಣಸಿಕಟ್ಟಿ, ವಣ್ಣೂರು, ತಲ್ಲೂರು ಮೊದಲಾದ ಗ್ರಾಮಗಳಿಂದ ದಂಡು ಕಿತ್ತೂರಿನ ಸಹಾಯಕ್ಕೆ ಧಾವಿಸಿ ಬಂದಿತು.

ಚೆನ್ನಮ್ಮ ಊಟ ನಿದ್ರೆಗಳನ್ನು ಮರೆತು ಕಿತ್ತೂರಿನ್ನು ರಕ್ಷಿಸಿಕೊಳ್ಳಲು ಅನವರತ ದುಡಿಯತೊಡಗಿದಳು. ಪುರಷ ಉಡಿಗೆಯನ್ನು ತೊಟ್ಟು ಕೈಯಲ್ಲಿ ಖಡ್ಗವನ್ನು ಹಿಡಿದು ದೊಡ್ಡ ಕುದುರೆಯನ್ನೇರಿ ಸೈನಿಕ ತರಬೇತನ್ನು ಸ್ವತಃ ನೋಡಿಕೊಳ್ಳತೊಡಗಿದಳು.

“ಕಿತ್ತೂರನ್ನು ಈ ಪುಂಡರಿಂದ ರಕ್ಷಿಸು, ಭಗವಂತಾ!” ಎನ್ನುವುದೇ ಅವಳ ಪೂಜಾ ಮಂತ್ರ ಧ್ಯಾನವಾಯಿತು.

ಕಿತ್ತೂರಿನ ಒಳಗೆ ರಣೋತ್ಸಾಹ ತುಂಬಿ ತುಳುಕತೊಡಗಿತು. ಮುದುಕರು ಯುವಕರಾದರು. ಕಿತ್ತೂರಿನ ಹೆಂಗೆಳೆಯರು ರಣಚಂಡಿಗಳಾಗಿ ಶಕ್ತಿಯ ಅವತಾರದಂತೆ ಸಿಡಿದೆದ್ದರು. ಬದುಕಿ ಕಿತ್ತೂರನ್ನು ಕಾಯಬೇಕು, ಇಲ್ಲವೆ ಸತ್ತು ಸ್ವರ್ಗವನ್ನು ಸೇರಬೇಕು. “ಹರಹರ ಮಹಾದೇವ”! ಎಂಬ ರಣಗರ್ಜನೆ ಗಡಚಿಕ್ಕಿತು.

ಈ ರಣೋತ್ಸಾಹವನ್ನು ನೋಡಿ ಥ್ಯಾಕರೆಯ ಸಿಟ್ಟು ನೆತ್ತಿಗೇರಿತ್ತು. ಅವನು ಗುಂಡು ಹಾರಿಸಿ ತನ್ನ ಮನೋಗತವನ್ನು ಸೂಚಿಸಿದನು. ಗುಂಡಿಗೆ ಪ್ರತಿ ಗುಂಡು ಹಾರಿತು.

ಥ್ಯಾಕರೆ ಮತ್ತೆ ತುಪಾಕಿಗಳನ್ನು ತರಿಸಿ ಸಜ್ಜಾದನು. “ಇಪ್ಪತ್ತು ನಿಮಿಷಗಳಲ್ಲಿ ಕೋಟೆಯ ಬಾಗಿಲನ್ನು ತೆರೆಯದಿದ್ದರೆ ಅದನ್ನು ಒಡೆಯಲಾಗುವುದು. ಕಿತ್ತೂರನ್ನು ಸುಟ್ಟುಬಿಡಲಾಗುವುದು” ಎಂದು ಥ್ಯಾಕರೆ ಚೀರತೊಡಗಿದನು.

ಇದು ಕನ್ನಡಿಗರ ಆತ್ಮಾಭಿಮಾನವನ್ನು ಕೆರಳಿಸಿತು. ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಮಹಾಮುಖಂಡ ಗುರುಸಿದ್ದಪ್ಪ ಎಲ್ಲರೂ ಸಮಾಲೋಚನೆ ಮಾಡಿದರು. ಯುವಕರು ಪೂತ್ಕರಿಸತೊಡಗಿದರು: “ಹೆಬ್ಬಾಗಿಲನ್ನು ತೆರೆಯಿರಿ. ಇಂಗ್ಲಿಷರನ್ನು ಧೂಳೀಪಟ ಮಾಡುತ್ತೇವೆ! ಕಿತ್ತೂರಿನ ಸೇಡನ್ನು ತೀರಿಸಿಕೊಳ್ಳೋಣ, ನಮ್ಮ ರಾಜ್ಯದಕ್ಕೆ ಕೈಹಾಕಿದ ನೀಚರನ್ನು ಸದೆಬಡಿಯೋಣ, ಉನ್ಮತ್ತ ಥ್ಯಾಕರೆಗೆ ಪಾಠ ಕಲಿಸೋಣ!”.

ಯುವಜನ ಸಜ್ಜಾದರು.

ಖಣ್… ಖಣ್… ಖಡಲ್… ಢಂ.. ಎಂಬ ಘೋರ ಸಪ್ಪಳವನ್ನು ಕೇಳಿದ ಯುವಕರು ಅದು ಕೋಟೆಯ ಗೊಡೆಯನ್ನು ಒಡೆಯುತ್ತಿರುವ ಸಪ್ಪಳವೆಂಬುದನ್ನು ಅರಿತುಕೊಂಡರು. ಸೈನಿಕರಿಗೆ ಇದನ್ನು ನೋಡುತ್ತಾ ಕುಳಿತುಕೊಳ್ಳುವದು ಅಸಾಧ್ಯವಾಯಿತು.

ಇನ್ನೇನು, ಇಪ್ಪತ್ತು ನಿಮಿಷಗಳ ಅವಧಿ ಮುಗಿಯಿತು. ಕೋಟೆಗೆ ಮುತ್ತಿಗೆ ಹಾಕಲು ಬ್ರಿಟಿಷ್ ಅಧಿಕಾರಿಗಳು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ

“ಹರಹರ ಮಹಾದೇವ! ಚೆನ್ನಮ್ಮರಾಣಿಗೆ ಜಯವಾಗಲಿ, ಕಿತ್ತೂರ ಲಕ್ಷ್ಮಿಗೆ ಜಯವಾಗಲಿ” ಎಂಬ ಜಯಘೋಷದ ಮಧ್ಯದಲ್ಲಿ ಕೋಟೆಯ ಬಾಗಿಲನ್ನು ತೆಗೆದ ಜನರು ಆಯುಧಪಾಣಿಗಳಾಗಿ ಹೊರಬಿದ್ದರು. ಇಂಗ್ಲೀಷ ಸೈನ್ಯದ ಮೇಲೆ ಎರಗಿದರು.

ಇಂಗ್ಲೀಷ್ ಸೈನ್ಯ ಹೀಗಾಗಬಹುದೆಂದು ತಿಳಿದುಕೊಂಡಿರಲಿಲ್ಲ. ಇದು ಮಿಂಚಿನ ದಾಳಿಯಾಗಿತ್ತು. ಗುಸಿದ್ದಪ್ಪನ ಸೈನ್ಯಶಕ್ತಿ ಇಲ್ಲಿ ಮಿಂಚಿನ ಕುದುರೆಯಾಗಿತ್ತು. ಸ್ವತಃ ಚೆನ್ನಮ್ಮರಾಣಿಯು ಕುದುರೆ ಏರಿ ಕತ್ತಿ ಹಿಡಿದು ರಣರಂಗವನ್ನು ಪ್ರವೇಶಿಸಿದಳು. ಕಿತ್ತೂರಿನ ಸೈನ್ಯಕ್ಕೆ ಉತ್ಸಾಹ ತುಂಬಿತುಳುಕಿತು.

ಇಂಗ್ಲೀಷರ ಮದ್ದುಗುಂಡು, ಆಯುಧಗಳನ್ನು ಕಿತ್ತೂರ ವೀರರು ವಶಪಡಿಸಿಕೊಂಡರು. ಕೈಗೆ ಸಿಕ್ಕ ಇಂಗ್ಲೀಷ್ ಅಧಿಕಾರಿಗಳನ್ನು ಕಡಿದುಹಾಕಿದರು, ನುಚ್ಚು ನೂರು ಮಾಡಿದರು. ಥ್ಯಾಕರೆ ಕಕ್ಕಾಬಿಕ್ಕಿಯಾದನು. ಕಿತ್ತೂರಿನ ಈ ಅಪರಿಮಿತ ಶಕ್ತಿಯನ್ನು ಕಂಡು ಅವನ ಜಂಘಾಬಲವೇ ಅಡಗಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸುವುದು ತನಗೆ ಸಾಧ್ಯವಿಲ್ಲವೆಂಬ ಮಾತು ಅವನಿಗೆ ಸೂರ್ಯಪ್ರಕಾಶದಷ್ಟು ಸ್ಪಷ್ಟವಾಯಿತು ಶತ್ರುಗಳ ಮೇಲೆ ಸಿಡಿದೆದ್ದ ಕಿತ್ತೂರಿನ ಬಂಟರು ವೈರಿಗಳ ರುಂಡಗಳನ್ನು ಚೆಂಡಾಡತೊಡಗಿದರು. ಯುದ್ಧದ ಕಾವು ಏರತೊಡಗಿತು. ಅದೇ ಈಗ ಕಿತ್ತೂರಿನ ಬಂಟರು ದ್ರೋಹಿಗಳಾದ ಕನ್ನೂರ ಮಲ್ಲಪ್ಪ, ಕನ್ನೂರ ವೀರಪ್ಪ, ಸರದಾರ ಮಲ್ಲಪ್ಪರ ಕಥೆ ಮುಗಿಸಿದ್ದರು.

ಸರದಾರ ಗುರುಸಿದ್ದಪ್ಪನು ಈ ಕಾಳಗದ ಕಹಳೆಯನ್ನು ಊದಿ ಸೂತ್ರವನ್ನು ಹಿಡಿದು ಹೋರಾಡತೊಡಗಿದನು.

ಥ್ಯಾಕರೆ ನಿಸ್ಸಹಾಯಕನಾದನು. ಅವನಿಗೆ ಗಂಡಾಂತರದ ಅರಿವಾಯಿತು. ತನ್ನ ಪ್ರಾಣರಕ್ಷಣೆಗಾಗಿ ಅವನು ಕೈಯಲ್ಲಿ ಕರಾಳವಾದ ಪಿಸ್ತೂಲನ್ನು ಹಿಡಿದು ಕುದುರೆಯನ್ನೇರಿ ಕೋಟೆಯ ಬಾಗಿಲ ಕಡೆಗೆ ಧಾವಿಸತೊಡಗಿದನು.

ಗಂಡುಡುಗೆಯನ್ನುಟ್ಟ ವೀರರಾಣಿ ಚೆನ್ನಮ್ಮ ಧಾವಿಸಿ ಬರುತ್ತಿರುವ ಥ್ಯಾಕರೆಯನ್ನು ನೋಡಿ ಹಲ್ಲುಕಡಿದಳು. ಅವಳು ಸುತ್ತಲೂ ನೋಡಿದಾಗ ಅಲ್ಲಿ ಸಂಗೊಳ್ಳಿ ರಾಯಣ್ಣ, ಅಂಗರಕ್ಷಕ ಆಮಟೂರ ಬಾಳಪ್ಪ ಕೋವಿಗಳನ್ನು ಹಿಡಿದು ನಿಂತಿದ್ದರು.

“ಥ್ಯಾಕರೆಯನ್ನು ಸೆರೆ ಹಿಡಿಯಿರಿ. ಅವನನ್ನು ಕೊಲ್ಲಬೇಡಿರಿ” ಎಂಬ ರಾಣಿ ಆಜ್ಞೆಮಾಡಿದಳು. ಸಂಗೊಳ್ಳಿ ರಾಯಣ್ಣನು ಈ ಆಜ್ಞೆಯನ್ನು ಪಾಲಿಸಲು ಸನ್ನದ್ದನಾಗಿ ತನ್ನ ಕುರುಬ ಬಂಟರೊಡನೆ ಥ್ಯಾಕರೆಯನ್ನು ಸುತ್ತುವರಿಯಲು ಮುಂಬರಿಸಿದನು. ಅಷ್ಟರಲ್ಲಿ ಆಮಟೂರ ಬಾಳಪ್ಪನು ಥ್ಯಾಕರೆಯ ಕೈಯಲ್ಲಿದ್ದ ಕರಾಳ ಅಸ್ತ್ರವನ್ನು ನೋಡಿದನು. ಅದರ ಗುರಿಗೆ ರಾಣಿ ಚೆನ್ನಮ್ಮನ ಬಲಿ ಎಂಬ ಸಂದೇಹ ಬಂದೊಡನೆ ಈ ಸ್ವಾಮಿನಿಷ್ಠ ಅಂಗರಕ್ಷಕನಾದ ಅಮಟೂರ ಬಾಳಪ್ಪನು ಗುರಿಹಿಡಿದು ಥ್ಯಾಕರೆಯ ಮೇಲೆ ಗುಂಡು ಹಾರಿಸಿದನು. ಹಾರಿಸಿದ ಗುಂಡು ಹುಸಿಹೋಗಲಿಲ್ಲ.

ಥ್ಯಾಕರೆ ರಕ್ತದ ಮಡುವಿನಲ್ಲಿ ಉರುಳಿಬಿದ್ದನು. ಕುತಂತ್ರಿಯೂ ಕಾರಸ್ತಾನಿಯೂ ಆದ ಈ ಸಾಹೇಬನ ದೇಹವನ್ನು ರೊಚ್ಚಿಗೆದ್ದ ಜನ ಚೂರುಚೂರು ಮಾಡಿದರು (ಈ ನೀಚಪಾತ್ರನ ದೇಹವನ್ನು ಆಮೇಲೆ ಇಂಗ್ಲೀಷರು ಧಾರವಾಡದಲ್ಲಿ ಹೊಳಿ, ಸ್ಮಾರಕದ ಸ್ತಂಭವನ್ನು ನೆಟ್ಟರು. ಅದನ್ನು ಈಗಲೂ ನೋಡಬಹುದು).

ಹಾಂ! ಹಾಂ! ಅನ್ನುವಷ್ಟರಲ್ಲಿ ಈ ಕೆಲಸ ನಡೆದು ಹೋಯಿತು. ಕಂಪನಿಯ ಅನೇಕ ಕೆಲಸಗಾರರನ್ನು ಕೊಲ್ಲಲಾಯಿತು. ಕೆಲವರು ಜೀವನದ ರಕ್ಷಣೆಗಾಗಿ ಓಡಿಹೋದರು. ಕೆಲವರು ಅಲ್ಲಲ್ಲಿ ಅವಿತುಕೊಂಡರು. ಇವರಲ್ಲಿ ಸ್ಟೀವನ್‌ಸನ್, ಈಲಿಯಟ್ ಹಾಗೂ ಶ್ರೀನಿವಾಸರಾವ್ ಇದ್ದರು.

ಇವರನ್ನು ಹೊರಗೆಳೆದು ಹೊಡೆಯಬೇಕೆಂದು ಕಿತ್ತೂರ ಶೂರರು ಖಡ್ಗ ಜಳಪಿಸಿದಾಗ ಚೆನ್ನಮ್ಮರಾಣಿ ಹಾಗೂ ಗುರುಸಿದ್ದಪ್ಪನವರು ಅಡ್ಡ ಬಂದರು. “ಅವರನ್ನು ಕೊಲ್ಲಬೇಡಿ, ಸೆರೆ ಹಿಡಿಯಿರಿ” ಎಂದರು. ಸೆರೆಮನೆಯಲ್ಲಿ ಅವರನ್ನು ಗೌರವದಿಂದ ನಡೆಸಿಕೊಳ್ಳಲು ರಾಣಿ ಸೂಚನೆಕೊಟ್ಟಳು.

ಇಂಗ್ಲೀಷರಿಗೆ ಇದು ಮೊದಲ ಸೋಲು. ಕಿತ್ತೂರಿನ ರಾಣಿ ಕೊಟ್ಟ ಈ ಪೆಟ್ಟಿನಿಂದ ಕಂಪೆನಿ ಸರ್ಕಾರವೇ ತತ್ತರಿಸಿತು. ಇದು ತಮಗಾದ ಮಹಾ ಅವಮಾನವೆಂದು ಇಂಗ್ಲೀಷ ಜನ ಕುದಿಯತೊಡಗಿದರು. ಸೇಡಿನ ಭಾವನೆ ಅವರಲ್ಲಿ ಒಂದಕ್ಕೆ ಹತ್ತಾಗಿ ಉರಿಯಹತ್ತಿತು.

ಇಂಗ್ಲೀಷರ ಸೇಡಿನ ತೀರ್ಮಾನ

ಕಿತ್ತೂರಿನ ರಾಣಿಗೆ ಇಂಗ್ಲೀಷ್ ಸೈನ್ಯ ಸೋತಿತು, ಥ್ಯಾಕರೆ ಸತ್ತ ಎಂಬ ಸುದ್ದಿ ಆಗ ದಕ್ಖಣದ ಕಮೀಷನರ್ ಆಗಿದ್ದ ಚಾಪ್ಲಿನ್ ಎಂಬಾತನಿಗೆ ತಿಳಿಯಿತು. ಅವನಿಗೆ ಸಿಡಿಲು ಬಡಿದಂತಾಯಿತು. ಇಂಗ್ಲೀಷರಿಗಾದ ಈ ಸೋಲು, ಅಪಮಾನಗಳ ಸೇಡು ತೀರಿಸಿಕೊಳ್ಳಲೇಬೇಕೆಂದು ಅವನು ನಿರ್ಧರಿಸಿದನು.

ಈಗ ಕಿತ್ತೂರಿನ ಮೇಲೆ ಅವಸರ ಮಾಡಿ ಹೋಗುವಂತಿರಲಿಲ್ಲ. ಅದರ ಶಕ್ತಿಯ ಆಳಕ್ಕೆ ಅವನು ಬೆದರಿದನು. ಕಿತ್ತೂರಿನಲ್ಲಿರುವ ಸೈನ್ಯ ಸಾಮಗ್ರಿಗಳನ್ನು ತಿಳಿದ ಅವನು ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡೇ ಕೊನೆಯ ಪೆಟ್ಟನ್ನು ಹಾಕಬೇಕೆಂದು ಸನ್ನದ್ದನಾಗತೊಡಗಿದನು.

ಮೊದಲು, ಕಿತ್ತೂರಿನ ಸೈನ್ಯಕ್ಕೆ ಸೆರೆಸಿಕ್ಕ ತನ್ನ ಕಡೆಯವರನ್ನು ಬಿಡಿಸಿಕೊಳ್ಳಬೇಕು ಎಂದು ಚಾಪ್ಲಿನ್ ಯೋಚಿಸಿದ. “ಅವರನ್ನು ಬಿಡುಗಡೆ ಮಾಡಬೇಕು” ಎಂದು ಚೆನ್ನಮ್ಮನಿಗೆ ಹೇಳಿಕಳುಹಿಸಿದ.

“ಮತ್ತೆ ಇಂಗ್ಲೀಷರು ಕಿತ್ತೂರಿನ ಆಡಳಿತದಲ್ಲಿ ಕೈಹಾಕುವುದಿಲ್ಲ ಎಂದು ಮಾತುಕೊಡಲಿ, ಬಂದಿಗಳನ್ನು ಬಿಡುಗಡೆ ಮಾಡೋಣ. ಇಲ್ಲವಾದರೆ ಆ ಮಾತೇ ಇಲ್ಲ” ಎಂದಳು ರಾಣಿ.

ಚಾಪ್ಲಿನನಿಗೆ ಕಷ್ಟವಾಯಿತು. ಕಿತ್ತೂರನ್ನು ಇಂಗ್ಲೀಷರ ಮುಷ್ಠಿಯಲ್ಲಿ ಹಿಡಿಯುವುದೇ ಅವನ ಉದ್ದೇಶವಾಗಿರುವಾಗ ಮಾತು ಕೊಡುವುದು ಹೇಗೆ?

“ಇಂಗ್ಲೀಷ್ ಸೆರೆಯಾಳುಗಳನ್ನೆಲ್ಲ ಬಿಟ್ಟುಬಿಡಿ, ಹಾಗೆ ಮಾಡಿದರೆ ನಿಮ್ಮ ಕಡೆ ಗುರುಸಿದ್ದಪ್ಪ ಒಬ್ಬನನ್ನು ಬಿಟ್ಟು ಉಳಿದವರನೆಲ್ಲ ಕ್ಷಮಿಸುತ್ತೇವೆ” ಎಂದು ಹೇಳಿಕಳುಹಿಸಿದ. “ಸೆರೆಯಾಳುಗಳನ್ನು ಕ್ಷೇಮವಾಗಿ ನೋಡಿಕೊಳ್ಳುವುದು ನಿಮ್ಮ ಹೊಣೆ, ಎಚ್ಚರಿಕೆ!” ಎಂದು ಎಚ್ಚರಿಸಿದ.

ಇಂಗ್ಲೀಷರು ಮತ್ತೆ ಕಿತ್ತೂರಿನ ಸುದ್ದಿಗೆ ಬರುವುದಿಲ್ಲ ಎಂದು ಭರವಸೆ ಕೊಡದೆ, ತಾನು ಹಿಸಿದ ಸೆರೆಯಾಳುಗಳನ್ನು ಬಿಡುಗಡೆ ಮಾಡಲು ವೀರರಾಣಿ ಚೆನ್ನಮ್ಮಾಜಿ ಒಪ್ಪಲಿಲ್ಲ.

ಇಂಗ್ಲೀಷರೂ ಕಿತ್ತೂರಿನವರೂ ಮತ್ತೆ ಯುದ್ಧಕ್ಕೆ ಸಿದ್ದರಾದರು.

ಬೆಳಗಾವಿಯಲ್ಲಿದ್ದ ಇಂಗ್ಲೀಷರ ಸೈನ್ಯವು ಕಿತ್ತೂರ ಕೋಟೆಯನ್ನು ಭೇದಿಸುವಷ್ಟು ಬಲಶಾಲಿಯಾಗಿಲ್ಲ ಎಂಬುದನ್ನು ತಿಳಿದ ಚಾಪ್ಲಿನ್ ಬೇರೆ ಬೇರೆ ಭಾಗಗಳಿಂದ ಸೈನ್ಯವನ್ನು ಕರೆಸತೊಡಗಿದನು.

ಥ್ಯಾಕರೆಯ ಅಧಿಕಪ್ರಸಂಗದಿಂದ ಮಾತ್ರ ಕಿತ್ತೂರಿನಲ್ಲಿ ರಕ್ತಪಾತ ಸಂಭವಿಸಿತೆಂಬುದನ್ನು ಇಂಗ್ಲೀಷ್ ಅಧಿಕಾರಿಗಳು ಕೂಡ ಈಗ ಸೇಡಿನ ಮನೋಭಾವನೆಯನ್ನೆ ತಳೆದರು.

ಅವರು ಪರಿಸ್ಥಿತಿಯನ್ನು ಶಾಂತವಾಗಿ ಸರಿಪಡಿಸಲು ಯೋಚಿಸಲಿಲ್ಲ; ಬದಲಾಗಿ ಇನ್ನೊಂದು ರಕ್ತಪಾತ ಮಾಡಿ ಥ್ಯಾಕರೆಯ ಸಾವಿನ ಸೇಡು ತೀರಿಸಿಕೊಳ್ಳಬೇಕೆಂದು ಕುರುಡು ತುಪಾಕಿಗಳನ್ನು ಹಿಡಿಯತೊಡಗಿದರು.

ಕಿತ್ತೂರಿಗಾದ ಅನ್ಯಾಯವನ್ನು ಯಾರೂ ಅರಿತುಕೊಳ್ಳಲಿಲ್ಲ. ರಕ್ತವನ್ನು ರಕ್ತದಿಂದಲೇ ತೊಳೆಯಬೇಕೆಂದು ಆಂಗ್ಲರು ಸರ್ವಸಿದ್ಧತೆ ಮಾಡಿಕೊಳತೊಡಗಿದರು.

ಸ್ವಾತಂತ್ರದ ಈ ಹೋರಾಟಕ್ಕೆ ಇಂಗ್ಲೀಷರು “ದಂಗೆ” ಎಂದರು. ಶಾಂತಿಸ್ಥಾಪನೆಗಾಗಿ ಈ ದಂಗೆಯನ್ನು ಅಳಿಸಬೇಕೆಂದು ಸಾರತೊಡಗಿದರು.

ಶಾಂತಿ ಸ್ಥಾಪನೆ ಬೂಟಾಟಿಕೆಯಾಗಿತ್ತು.

ಮತ್ತೆ ಘರ್ಷಣೆ

ಧಾರವಾಡದ ಅಸಿಸ್ಟೆಂಟ್ ಕಲೆಕ್ಟರನಾದ ವಾಕರ್ ಫುಲ್ಲರ್ಟನ್ ಎಂಬಾತನು ಬೆಳಗಾವಿಯ ಅಧಿಕಾರಿಗಳಿಗೆ ಹೆಚ್ಚಿನ ಸೈನ್ಯದ ನೆರವನ್ನು ಕೋರಿ ಕಾಗದ ಬರೆದನು. “ತ್ವರೆ ಮಾಡಿರಿ, ತ್ವರೆ ಮಾಡಿರಿ, ಧಾವಿಸಿರಿ, ಧಾವಿಸಿರಿ. ಕೂಡಲೆ ಕಿತ್ತೂರಿಗೆ ಸೈನ್ಯ ಕಳಿಸಿರಿ.  ತಡಮಾಡಬೇಡಿರಿ. ಇಂಗ್ಲೀಷರೆಲ್ಲ ಗಂಡಾಂತರ ಸ್ಥಿತಿಯಲ್ಲಿದೇವೆ” ಎಂಬರ್ಥದ ಕಾಗದವನ್ನು ನೋಡಿ ಬೆಳಗಾವಿ ವಿಭಾಗದ ಸೈನ್ಯದ ಸೇನಾಪತಿಯಾದ ಕರ್ನಲ್ ಪಿಯರಸನ್ನನು ಮ್ಯಾಕ್ ಲೀಡನ ನಾಯಕತ್ವದಲ್ಲಿ ಭಾರೀ ಸೈನ್ಯ ಕಳಿಸಿದನು.

ಸೊಲ್ಲಾಪುರ ಹಾಗೂ ಬೇರೆ ಬೇರೆ ಸ್ಥಳಗಳ ಸೇನಾಪತಿಗಳಿಗೆ ತಕ್ಷಣ ಸೈನ್ಯ ಕಳಿಸಬೇಕೆಂಬ ಆಜ್ಞೆ ಹೋಯಿತು. ಪಿಯರಸನ್‌ನ ಆಜ್ಞೆಯಂತೆ ಬೆಳಗಾವಿ, ಸೊಲ್ಲಾಪುರಗಳಿಂದ ಕಂಪೆನಿ ಸೈನ್ಯ ಬಂದುದಲ್ಲದೆ, ಬಳ್ಳಾರಿ, ಬೆಂಗಳೂರಿನಿಂದಲೂ ಸೈನ್ಯ ಧಾವಿಸಿ ಬಂದಿತು. ಆರ್ಕಾಟಿನ ಅಶ್ವದಳವು ಹೊರಡಲು ಸಜ್ಜಾಗಿ ನಿಂತಿತು. ಹೀಗೆ ದಕ್ಷಿಣ ಭಾರತದ ಇಂಗ್ಲೀಷ್ ಸೈನ್ಯವೆಲ್ಲ ಕಿತ್ತೂರ ಮುತ್ತಿಗೆಗೆ ಸಿದ್ಧವಾಯಿತು.

ಇಂಗ್ಲೀಷರು ಭಾರಿ ಯುದ್ಧಸಿದ್ಧತೆಯಲ್ಲಿ ತೊಡಗಿರುವರೆಂಬ ಸುದ್ದಿಯನ್ನು ಚೆನ್ನಮ್ಮ ತನ್ನ ಬೇಹುಗಾರರ ಮೂಲಕ ತಿಳಿದುಕೊಂಡಿದ್ದಳು.

"ಇದು ಕಿತ್ತೂರಿನ ಪ್ರತಿಷ್ಠೆಯ ಪ್ರಶ್ನೆ!"

ಇದು ಕಿತ್ತೂರಿನ ಅಳಿವು ಉಳಿವುಗಳ ಪ್ರಶ್ನೆ ಎಂದು ಅವಳಿಗೆ ಸ್ಪಷ್ಟವಾಗಿತ್ತು. ಈ ವೀರ ಮಹಿಳೆ ರಕ್ಷಣೆಗಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಯನ್ನು ಮಾಡಿಕೊಂಡಳು.

ಮದ್ದುಗುಂಡಿನ ಸಂಗ್ರಹ ತೃಪ್ತಿಕರವಾಗಿತ್ತು. ಸೈನ್ಯಕ್ಕೆ ಕೊಡುತ್ತಿರುವ ಯುದ್ಧ ತರಬೇತಿ ಅಪೂರ್ವವಾಗಿತ್ತು. ಬೇಕಾದಷ್ಟು ಜನಸಂಗ್ರಹವೂ ಆಗಿತ್ತು. ಧಾನ್ಯ ಸಂಗ್ರಹವೂ ಆಗಿತ್ತು.
ಕಿತ್ತೂರಿನ ಜನರನ್ನೆಲ್ಲ ಕೋಟೆಯಲ್ಲಿ ಕರೆದು ಚೆನ್ನಮ್ಮ ಹೇಳಿದಳು: “ನನ್ನ ಪ್ರಿಯ ಬಂಧುಗಳೆ, ವೈರಿ ಬಲಾಢ್ಯನಾಗಿದ್ದಾನೆ. ನಮ್ಮವರೇ ನಮಗೆ ಉರುಲು ಆಗಿದ್ದಾರೆ. ಆದರೆ ಇದು ಕಿತ್ತೂರಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಾವು ಹೇಡಿಗಳಾಗಿ ಶರಣಾಗತರಾಗಿ ಇಂಗ್ಲೀಷರ ಅಧೀನರಾಗಿ ಜೀವ ಕಳೆಯಬೇಕು. ಇಲ್ಲವೆ ಗಂಡುಗಲಿಗಳಾಗಿ ವೀರರಂತೆ ಹೋರಾಡಿ ವೀರಮರಣವನ್ನಾದರೂ ಒಪ್ಪಲು ಸಿದ್ಧವಿರಬೇಕು! ಏನೆನ್ನುತ್ತೀರಿ?

ರಾಣಿಯ ಮಾತು ಮುಗಿಯುವ ಮುನ್ನವೇ ಸಹಸ್ರ ಸಹಸ್ರ ಕಂಠಗಳು, “ಮರಣಕ್ಕೆ ನಾವು ಅಂಜುವುದಿಲ್ಲ, ನಾವು ಎಂದಿಗೂ ಶರಣಾಗತರಾಗುವುದಿಲ್ಲ” ಎಂದು ಉಗ್ಗಡಿಸಿದವು.

ಕಿತ್ತೂರಿನಲ್ಲಿ ಯುದ್ಧದ ವಾತಾವರಣ ರಣರಣಿಸತೊಡಗಿತು. ಸುಮಾರು ಹದಿನಾರುಸಾವಿರ ಜನರು ಆಯುಧ ಧರಿಸಿ ಕಿತ್ತೂರಿನ ರಣಯಜ್ಞನದಲ್ಲಿ ಧುಮುಕಲು ಸಿದ್ಧರಾದರು.

ಈಗ ಚೆನ್ನಮ್ಮಜಿ ನುರಿತ ಸೇನಾಪತಿಯಂತೆ ಕೆಲಸ ಮಾಡಬೇಕಾಯಿತು. ಹೊರಗಿನಿಂದ ಬರುವ ಇಂಗ್ಲೀಷ್ ಸೈನಿಕರನ್ನು ಅಲ್ಲಲ್ಲಿ ತಡೆಯುವಂತೆ ವ್ಯೂಹ ರಚಿಸಿದಳು. ಆಯಕಟ್ಟಿನ ಸ್ಥಳಗಳಲ್ಲಿ ಗಡಿರಕ್ಷಣಾಪಡೆಗಳನ್ನು ಹುರಿದುಂಬಿಸಿದಳು. ಸ್ವಾತಂತ್ರ ರಕ್ಷಣೆಗಾಗಿ ಕಿತ್ತೂರಿನ ಬಂಟರು ಮಲಪ್ರಭಾ ನದಿಯ ದೋಣಿಗಳನ್ನು ನಾಶಪಡಿಸಿದರು.

ಇಂಗ್ಲೀಷರು ಇದಕ್ಕೆ ಕಿತ್ತೂರಿನ ಬಹಿರಂಗ ಬಂಡಾಯವೆಂದು ಕರೆದು ಸುತ್ತುಮುತ್ತಲೂ ಅಪಪ್ರಚಾರ ಮಾಡತೊಡಗಿದರು.

ಈಗ ಉಭಯ ಪಕ್ಷಗಳು ಕೊನೆಯ ನಿರ್ಣಾಯಕ ಹೋರಾಟಕ್ಕೆ ಸಿದ್ಧವಾದವು.

ಇಂಗ್ಲೀಷರು ಆಕ್ರಮಣಕಾರಿ ಯುದ್ಧವಾಗಿತ್ತು. ಕಿತ್ತೂರಿನ ಚೆನ್ನಮ್ಮನದು ಸ್ವಸಂರಕ್ಷಣೆಯ ಹೋರಾಟವಾಗಿತ್ತು. ಇದು ನ್ಯಾಯಸಮ್ಮತವಾಗಿತ್ತು.

ಇಂಗ್ಲೀಷರದು ಬಲಾಢ್ಯ ಸೈನ್ಯಶಕ್ತಿಯಾಗಿರುವುದರಿಂದ ಯುದ್ಧ ಮಾಡುವುದು ಅಪಾಯಕರ ಎಂಬ ಧ್ವನಿಯೂ ಎದ್ದಿತು ಕಿತ್ತೂರಿನಲ್ಲಿ. ಆದರೆ ಇದು ಬೆರಳೆಣಿಕೆಷ್ಟು ಜನರ ಧ್ವನಿಯಾಗಿತ್ತು. ಜನರು ತೀರ ರಣೋತ್ಸಾಹವನ್ನು ತಳೆದಿದ್ದರು. ರಾಣಿ ಚೆನ್ನಮ್ಮ, ಸರದಾರ ಗುರಸಿದ್ಧಪ್ಪ, ಅವರಾದಿ ವೀರಪ್ಪ ಮೊದಲಾದ ಹಿರಿಯರು ಕಿತ್ತೂರ ಪ್ರಜೆಗಳು ಶರಣಾಗತರಾಗುವುದು ಮಹಾ ಹೇಡಿತನವೆಂದೂ ಕೊನೆಯವರೆಗೆ ಹೋರಾಡುವುದೇ ಶ್ರೇಯಸ್ಕರವೆಂದೂ ನಿರ್ಧರಿಸಿದರು. ಈ ಅಭಿಪ್ರಾಯದವರು ಬಹುಸಂಖ್ಯೆಯಲ್ಲಿದ್ದರು.

ಇವರು ಎಂತಹ ತ್ಯಾಗಕ್ಕೂ ಸಿದ್ಧರಾದರು.

ದ್ರೋಹ

ಕಿತ್ತೂರ ಮಾನರಕ್ಷಣೆಗಾಗಿ ಸಮಗ್ರ ಕಿತ್ತೂರೇ ಏಕದೇಹದಂತೆ ಎದ್ದು ನಿಂತಿತು. ರಾಣಿಯಿಂದ ಹಿಡಿದು ತೀರ ಬಡಬಗ್ಗರವರೆಗೆ ಜನ ಸ್ವಾತಂತ್ರಕ್ಕಾಗಿ ಹೋರಾಡಲು ಸಿದ್ಧರಾಗಿದ್ದರು. ಪ್ರಾಣವನ್ನೇ ಪಣವಾಗಿ ಒಡ್ಡಿದರು ಪರಾಕ್ರಮ – ಸ್ವಾಭಿಮಾನಗಳು ಗಾಳಿಯಲ್ಲಿ ಬೆರೆತುಹೋಗಿದ್ದ ಇಂತಹ ಅಗ್ನಿಪರೀಕ್ಷೆಯ ಕಾಲದಲ್ಲಿಯೂ ಕಿತ್ತೂರಿನಲ್ಲಿ ಕೆಲವರು ಸ್ವಾರ್ಥಿಗಳಿದ್ದರು. ಅವರಿಗೆ ಬೇಕಾಗಿದ್ದದ್ದು ಹಣ. ತಮ್ಮ ರಾಜ್ಯ ಮತ್ತು ಸ್ವಾತಂತ್ರವನ್ನು ಮಾರಿಯಾದರೂ ಹಣ ಸಂಪಾದಿಸುವ ಹಂಬಲ ಈ ನಾಚಿಕೆ ಇಲ್ಲದ ದ್ರೋಹಿಗಳದು. ಇಂಗ್ಲೀಷರು ಇವರಿಗೆ ಹಣ ಕೊಡಲು ಸಿದ್ಧರಾದರು. ಕೆಲ ರಹಸ್ಯಗಳನ್ನು ವೈರಿಗಳಿಗೆ ತಿಳಿಸತೊಡಗಿದರು. ಕಿತ್ತೂರಿನ ಮದ್ದಿನ ಮನೆಯನ್ನು ನಾಶಗೊಳಿಸದರು. ಇಂಥವರ ಪತ್ತೆ ಹಚ್ಚಿ ಕಿತ್ತೂರಿನವರು ಕನ್ನೂರ ವೀರ ಸಂಗಪ್ಪ ಮತ್ತು ಹುರಕಡ್ಲಿ ಮಲ್ಲಪ್ಪ ಮೊದಲಾದವರಿಗೆ ಮರಣದಂಡನೆ ವಿಧಿಸಿದರು.

ಪರಿಸ್ಥಿತಿ ಅನಾಹುತದತ್ತ ಸಾಗತೊಡಗಿತು. ಈ ಗಂಭೀರ ಪ್ರಸಂಗದಲ್ಲಿ ಕೊನೆಯ ನಿರ್ಧಾವನ್ನು ತೆಗೆದುಕೊಳ್ಳುವ ಹೊಣೆ ಚೆನ್ನಮ್ಮನ ಮೇಲೆ ಬಿದ್ದಿತು. ಕಿತ್ತೂರ ಗೌರವವು ಚೆನ್ನಮ್ಮನಿಗೆ ಪ್ರಾಣಕಿಂತಲೂ ಹೆಚ್ಚಿನದಾಗಿತ್ತು.

ಚೆನ್ನಮ್ಮರಾಣಿ ಯುದ್ಧಪ್ರಿಯಳಾಗಿರಲಿಲ್ಲ. ಎಂತಲೇ ಅವಳು ಇದನ್ನು ತಪ್ಪಿಸಲು ನಿಯೋಗಿಗಳ ಮೂಲಕ ಸಂಧಾನ ಪ್ರಯತ್ನ ನಡೆಸಿದಳು. ಆದರೆ ಇಂಗ್ಲೀಷರು ಈ ಸಂಧಾನ ಮಾರ್ಗದಲ್ಲಿ ಮುಳ್ಳುಗಳನ್ನು ಹರವಿದರು. ಅವರು ಮತ್ತೆ ಮತ್ತೆ ಕಪಟ ನಾಟಕ ಆಡಹತ್ತಿದರು.

ಕಿತ್ತೂರನ್ನು ವಶಪಡಿಸಿಕೊಳ್ಳುವುದೇ ಅವರ ಯೋಜನೆಯಾಗಿತ್ತು. ಚೆನ್ನಮ್ಮ ಬಹಳಷ್ಟು ತಾಳ್ಮೆಯನ್ನು ತೋರಿದಳು. ರಕ್ತಪಾತವನ್ನು ತಪ್ಪಿಸಲು ಶತಪ್ರಯತ್ನ ಮಾಡತೊಡಗಿದಳು.

ಆದರೆ ಯಾವ ಪ್ರಯತ್ನೂ ಫಲಕಾರಿಯಾಗಲಿಲ್ಲ.

ಸೆರೆಮನೆಯಲ್ಲಿದ್ದ ಇಂಗ್ಲೀಷ್ ಕೈದಿಗಳನ್ನು ಬಿಡುಗಡೆ ಮಾಡಿ ಚೆನ್ನಮ್ಮ ಸದ್ಭಾವನೆ ತೋರಿದಳು. ಆದರೆ ಅವರ ಬಿಡುಗಡೆಯಾದ ಕೂಡಲೆ ಇಂಗ್ಲೀಷ್ ಅಶ್ವದಳವು ಮುತ್ತಿಗೆಗಾಗಿ ಧಾವಿಸತೊಡಗಿತು. ಚಾಪ್ಲಿನ್ನನು ಕೋಟೆಯನ್ನು ತೆರವು ಮಾಡಿ ಶರಣಾಗತಳಾಗಲು ರಾಣಿಗೆ ತಿಳಿಸಿದನು. ಬ್ರಿಟಿಷ್ ಸರ್ಕಾರಕ್ಕೆ ತಲೆಬಾಗಬೇಕೆಂದು ಅಂಜಿಕೆ ದರ್ಪವನ್ನು ತೋರಿಸಿದನು.

ಸಂಪೂರ್ಣ ಸಿದ್ಧತೆಯಾಗುವವರೆಗೆ ಪತ್ರವ್ಯವಹಾರದ ಆಟ ಹೂಡಿ ಚಾಪ್ಲಿನ್ನನು ಬೇಕೆಂದೇ ಕಿತ್ತೂರ ಮುತ್ತಿಗೆಯನ್ನು ವಿಳಂಬಮಾಡತೊಡಗಿದನು.

ಈಗ ಸಿದ್ಧತೆ ಪೂರ್ಣವಾಯಿತು.

ದಾಳಿ

ಚಾಪ್ಲಿನ್ನನು ಡಿಸೆಂಬರ್ ೩ನೇ ತಾರೀಕಿನಂದು ಸೈನ್ಯಾಧಿಕಾರಿಗೆ ಕೋಟೆಯ ಮೇಲೆ ದಾಳಿ ಮಾಡಲು ಆಜ್ಞಾಪಿಸಿದನು. ಮುಂದೆ ೨೪ ತಾಸುಗಳಲ್ಲಿ ಫಿರಂಗಿಗಳನ್ನು ಹಚ್ಚಿ ಕೋಟೆಯ ಮೇಲೆ ಇಂಗ್ಲೀಷರು ಆಕ್ರಮಣ ಮಾಡಿದರು. ಗೋಡೆಗಳು ಬಿರುಕು ಬಿಟ್ಟವು. ಇದೇ ವೇಳೆಯಲ್ಲಿ ಇಂಗ್ಲೀಷರ ಹಸ್ತಕದಿಂದ ಮದ್ದಿನ ಉಗ್ರಾಣದಲ್ಲಿ ಭಾರಿ ಮೋಸವು ನಡೆದು ಹೋಯಿತು. ಆದರೂ ಎದೆಗುಂದದೆ ಕಿತ್ತೂರ ವೀರ ಸೈನಿಕರು ನಾಡಿಗಾಗಿ ಜೀವದ ಹಂಗುತೊರೆದು ಕಾದಿದರು. ಭಾರಿ ಸಾವು – ನೋವು ಎರಡೂ ಕಡೆಯಲ್ಲಿ ಉಂಟಾದವು.

ಚೆನ್ನಮ್ಮರಾಣಿ ಗುರುಸಿದ್ದಪ್ಪನೊಡನೆ ಸಮಾಲೋಚನೆ ಮಾಡಿದಳು. ಬಲಾಢ್ಯ ಇಂಗ್ಲೀಷರ ಸೈನ್ಯವನ್ನು ಮುಂದೆ ತಾವು ತಡೆಯುವುದು ಸಾಧ್ಯವಿಲ್ಲವೆಂದು ಗೊತ್ತಾಯಿತು.

ಶತ್ರುಗಳ ಕೈಯಲ್ಲಿ

ಮುಂದೇನು? ಯದ್ಧವನ್ನು ಮುಂದುವರೆಸಬೇಕೆ? ಅಪಾರವಾದ ವ್ಯರ್ಥ ಪ್ರಾಣಹಾನಿಯಾಗುವುದು. ಅಲ್ಲದೆ ಇಂಗ್ಲೀಷರು ಚೆನ್ನಮ್ಮರಾಣಿಯ ಮೇಲೆ ಸೇಡು ತೀರಿಸಿಕೊಳ್ಳಲು ಅವಳನ್ನು ಅವಮಾನ ಮಾಡಲು ಹೊಂಚು ಹಾಕುತ್ತಿರುವ ಸುದ್ದಿ ಬೇಹುಗಾರರಿಂದ ತಿಳಿಯಿತು. ಎಂತಹ ಪ್ರಸಂಗ ಬಂದರೂ ಚೆನ್ನಮ್ಮ ರಾಣಿ ಇಂಗ್ಲೀಷರ ಕೈಗೆ ಸಿಗಬಾರದೆಂದು ಅವಳ ಸನ್ಮಿತ್ರರು ಹೇಳತೊಡಗಿದರು. ಮೂರು ದಿನಗಳ ಕಾಲ ಎರಡು ಸೈನ್ಯಗಳ ನಡುವೆ ಘೋರವಾದ ಯುದ್ಧವಾಯಿತು. ೧೮೨೪ರ ಡಿಸಂಬರ್ ತಿಂಗಳಲ್ಲಿ ಕಿತ್ತೂರ ಕೋಟೆ ಶತ್ರುಗಳ ವಶವಾಯಿತು. ರಾಶಿ ರಾಶಿಯಾಗಿ ಬಿದ್ದ ಹೆಣಗಳನ್ನು ತುಳಿದುಕೊಂಡು, ತಳ್ಳಿಕೊಂಡು ಇಂಗ್ಲೀಷ್ ಸೈನಿಕರು ಕೋಟೆಯನ್ನು ಪ್ರವೇಶಿಸಲು ಪ್ರಾರಂಭಿಸಿದರು.

ರಾಣಿ ಚೆನ್ನಮ್ಮಜೀ ಇದನ್ನು ಕಂಡಳು. ಅವಳನ್ನು ಕಂಡರೆ ಇಂಗ್ಲೀಷರು ಕೆಂಡಕಾರುತಿದ್ದರು. ಮೊದಲು ಅವರ ಕೈಯಿಂದ ಪಾರಾಗಿ ಹೋಗಿ ಮುಂದಿನ ಯೋಚನೆಯನ್ನು ಮಾಡುವುದೇ ಸರಿ ಎಂದು ಅವಳಿಗೂ ಅವಳ ಸಲಹೆಗಾರರಿಗೂ ತೋರಿತು..

ರಾಣಿಯೂ ಗುರುಸಿದ್ದಪ್ಪ ಮೊದಲಾದ ಮುಖ್ಯರೂ ಕೋಟೆಯ ಕಿರಿಗಿಂಡಿಯಿಂದ ಹೊರಬಿದ್ದರು. ಸಂಗೋಳ್ಳಿಯ ಕಡೆಗೆ ಧಾವಿಸಿದರು. ಆದರೆ ಅವರು ಕೋಟೆಯಿಂದ ಗುಪ್ತವಾಗಿ ಹೋಗುವ ಪ್ರಯತ್ನದಲ್ಲಿರುವಾಗಲೆ ಚೆನ್ನಮ್ಮನನ್ನು ಬಂಧಿಸಲಾಯಿತು. ಅವಳೊಡನೆ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಮೊದಲಾದವರನ್ನು ಬಂಧಿಸಲಾಯಿತು. ಅವರಾದಿ ವೀರಪ್ಪನು ಮಾತ್ರ ಕೆಲವರೊಡನೆ ತಪ್ಪಿಸಿಕೊಂಡು ಕೋಟೆಯಿಂದ ಪಾರಾಗಿ ಹೋದನು.

ಅತ್ಯಂತ ಧೈರ್ಯಶಾಲಿನಿ, ಮಹಾಮುತ್ಸದ್ದಿ, ಕನ್ನಡದ ಕೆಚ್ಚಿನ ರಾಣಿ ಈಗ ವೈರಿಗಳ ಸೆರೆಯಾಳಾಗುವ ದುರ್ಧರ ಪ್ರಸಂಗವನ್ನು ಎದುರಿಸಬೇಕಾಯಿತು.

ಗುರುಸಿದ್ದಪ್ಪ ಕಿತ್ತೂರ ಯುದ್ಧದ ಮುಖ್ಯಕಾರ್ಯವಾಹಕನಾಗಿದ್ದನು ಚೆನ್ನಮ್ಮನ ಅತ್ಯಂತ ನಂಬಿಕೆಯ ಮನುಷ್ಯನಾಗಿದ್ದನು. ಇವನನ್ನು ಬೆಳಗಾವಿಯ ಸೆರೆಮನೆಯಲ್ಲಿ ಇಡಲಾಯಿತು.

ಚೆನ್ನಮ್ಮರಾಣಿಯನ್ನು ಸುಮಾರು ಐದು ವರ್ಷಗಳ ಕಾಲ ಬೈಲಹೊಂಗಲದಲ್ಲಿ ಸೆರೆಮನೆಯಲ್ಲಿಡಲಾಯಿತು. ಈ ದಿನಗಳಲ್ಲಿ ಅವಳ ಒಲವು ಆಧ್ಯಾತ್ಮದ ಕಡೆಗೆ ಹರಿಯಿತು. ಶಿವಪೂಜೆ, ಪ್ರಾರ್ಥನೆಗಳಲ್ಲಿ ಅವಳು ತನ್ಮಯಳಾಗತೊಡಗಿದಳು. ಪುರಾಣ ಪ್ರವಚನ, ಪವಿತ್ರ ಗ್ರಂಥ ಪಾರಾಯಣಗಳೇ ಅವಳ ಚಟುವಟಿಕೆಗಳು.

ಕಿತ್ತೂರ ನೆನಪಾದೊಡನೆ ಅವಳ ಕಣ್ಣು ತುಂಬುತ್ತಿದ್ದವು. ಮತ್ತೆ ಮತ್ತೆ ಈ ಅಸಹಾಯಕ ಪರಿಸ್ಥಿತಿಯಲ್ಲಿಯೂ ಬಿಡುಗಡೆಗಾಗಿ ಮನಸ್ಸು ಹಾತೊರೆಯುತ್ತಿತ್ತು.

ಆದರೆ ಇದು ಸಾಧ್ಯವಿಲ್ಲವೆಂದಾಗ ನಿಡಿದಾದ ನಿಟ್ಟುಸಿರು ಹೊರಸೂಸುತ್ತಿತ್ತು.

ಚೆನ್ನಮ್ಮಜಿ ಸೆರೆಯಲ್ಲಿದ್ದರೂ ಅವರ ವೀರಬಂಟರಲ್ಲಿ ಹಲವರು ಆಗಾಗ ವೇಷಮರೆಸಿ ಬಂದು ಅವಳನ್ನು ಕಾಣುತ್ತಿದ್ದರು. ಹೊರಗಿನ ಸುದ್ದಿಯನ್ನು ತಿಳಿಸುತ್ತಿದ್ದರು. ಇಂಗ್ಲೀಷರನ್ನು ಸೋಲಿಸಲು ತಾವು ಮಾಡುತ್ತಿದ್ದ ಪ್ರಯತ್ನಗಳನ್ನು ವಿವರಿಸುತ್ತಿದ್ದರು. ಅವರಿಗೆಲ್ಲ ಚೆನ್ನಮ್ಮಾಜಿ ಸ್ವಾತಂತ್ರದ ವಿರಶ್ರೀಯಾಗಿದ್ದಳು. ಸಂಗೊಳ್ಳಿ ರಾಯಣ್ಣನಂತಹ ದೇಶಭಕ್ತರು ಅವಳಿಂದ ಸ್ಫೂರ್ತಿ ಪಡೆದರು. ಅವಳ ಆಶೀರ್ವಾದವನ್ನು ಬಯಸಿದರು.

ದಿನಗಳು ಕಳೆದವು. ತಿಂಗಳುಗಳು ಸರಿದವು, ವರ್ಷಗಳು ಜಾರಿಹೋದವು. ಇಂಗ್ಲೀಷರ ಬಲ ಕುಂದುವ ಮತ್ತೆ ಕಿತ್ತೂರು ಸ್ವತಂತ್ರವಾಗುವ ಸೂಚನೆ ಕಾಣಲೇ ಇಲ್ಲ! ಈ ವ್ಯಸನವೇ ಅವಳನ್ನು ತಿನ್ನಹತ್ತಿತು.

ಈ ದುಃಖದಲ್ಲಿ ಕೊರಗಿ ಚೆನ್ನಮ್ಮರಾಣಿ ೧೮೨೯ ನೇ ಫೆಬ್ರವರಿ ೨ ರಂದು ತೀರಿಕೊಂಡಳು. ಆಗ ಆಕೆಗೆ ೫೧ ವರ್ಷ.

ಇಂಗ್ಲೀಷರ ಕುತಂತ್ರವು ಫಲಿಸಿತು. ಕಿತ್ತೂರನ್ನು ಬಲಿ ತೆಗೆದುಕೊಂಡಿತು. ಆದರೆ ಕಿತ್ತೂರಿನ ವೀರರು ತೋರಿದ ಧೈರ್ಯ, ಶೌರ್ಯ, ಸಾಹಸಗಳ ಚರಿತ್ರೆಯನ್ನು ಬಲಿ ತೆಗೆದುಕೊಳ್ಳಲು ಸಾಧ್ಯವೇ? ಚೆನ್ನಮ್ಮರಾಣಿ ತನ್ನ ಅಮರವಾದ ಇತಿಹಾಸವನ್ನು ಸ್ಥಾಪಿಸಿದಳು. ಅವಳ ಕಥೆ ಕನ್ನಡಿಗರಿಗೆ ಅಮರ ಕಥೆ. ಜಗತ್ತಿನ ಕೆಲವೇ ಕೆಲವು ಐತಿಹಾಸಿಕ ಧೀರ ಮಹಿಳೆಯರಲ್ಲಿ ಚೆನ್ನಮ್ಮನಿಗೆ ಅಪೂರ್ವ ಸ್ಥಾನ ಸಿಗುವುದರಲ್ಲಿ ಸಂದೇಹವಿಲ್ಲ. ಅವಳ ಸ್ವಾಭಿಮಾನ, ದೇಶಾಭಿಮಾನ, ಪ್ರಜಾವಾತ್ಸಲ್ಯ, ನ್ಯಾಯಪ್ರತಿಪಾದನೆ, ಶೌರ್ಯ ಧೈರ್ಯ ಮುತ್ಸದ್ದಿತನಗಳು ಅವಳ ಹಿರಿಯ ಶಾಸನ ಬರೆದಿವೆ.

ಜಾನಪದ ಕವಿಗಳು ತಮ್ಮ ಲಾವಣಿಗಳಲ್ಲಿ ಚೆನ್ನಮ್ಮನ ಹೆಸರನ್ನು ಅವರ ಮಾಡಿದರು.

ಕಿತ್ತೂರ ಚೆನ್ನಮ್ಮ ಸುತ್ತೂರ ಒಡತ್ಯಾಗಿ |
ಕತ್ತಿ ಕವಚಗಳ ಉಡುಪುಟ್ಟೋ |
ಕತ್ತಿ ಕವಚಗಳ ಉಡುಪುಟ್ಟೋದ ಅಬ್ಬರದಿ |
ಬತ್ತಲಗುದರಿಯ ಜಿಗಿದಾಳೋ ||
ರಪ್ಪ ರಪ್ಪೆಂದು ಓಡೀತೂ ||
ರಪ್ಪರಪ್ಪೆಂದು ಓಡೀತು – ಅಮಟೂರ
ಬಾಳಪ್ಪ ಗುಂಡಿಟ್ಟ ಥ್ಯಾಕರೇಗೋ ||

ಸಾವಿರಾರು ಕವಿಗಳು ಇಂಥ ಕವನಗಳನ್ನು ಹಾಡಿ ಚೆನ್ನಮ್ಮನ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.