ಅಲ್ಲಪ್ಪನಗೌಡನ ಮಾತನು ಮೀರಿ
ಮಲ್ಲೇಂದ್ರ ಹಿಂದಕ್ಕೆ ಬರಲಿಲ್ಲ ಸಾರಿ
ನಿಲ್ಲದೆ ಪಟ್ಟದ ಆನೆಯನೇರಿ
ಇಲ್ಲಿಂದ ಒದಗಿ ಬಂದಿತು ಇದಿಮಾರಿ          ೬೧

ಅರುವತ್ತು ಸಾವಿರ ಫೌಜವ ಕೂಡಿ
ಹರಿಭಕ್ತ ಬಾಜೀರಾಯನ ಒಡಗೂಡಿ
ಸೆರೆಹೊಕ್ಕನು ಪುಣ್ಯದರಮನೀ ನೋಡಿ
ಭೇರಿ ದುಂದುಭಿ ಕರಿ ತೋಫಿನ ಗಾಡಿ         ೬೨

ಊರ ಬಿಟ್ಟು ಹರದಾರಿ ಇಳಿದಿತು ದಂಡು
ಘೋರಾಗಿ ಫೌಜೆಲ್ಲ ಆದೀತು ಬಂಡು
ನೂರಾರು ವೈರಿಯ ಕಣ್ಣೀಲೆ ಕಂಡು
ಪೂರ ಘಾತವ ಮಾಡಿದ ಅಲ್ಲಪ್ಪಗೌಂಡ       ೬೩

ಸುತ್ತಿನ ದೇಶಪಾಂಡೆಯರೆಲ್ಲರು ಕೂಡಿ
ಹತ್ತು ವರ್ಷದ ಬಾಕಿ ಲೆಖ್ಖವ ಮಾಡಿ
ಎಂತೆಂಥವರಿಗೆ ಹಾಕಿದ ಬೇಡಿ
ಸತ್ತರ ಬಿಡಲಿಲ್ಲ ಕಟ್ಯಾರ ಕೂಡಿ      ೬೪

ಬೈಲೂರ ದೇಶಪಾಂಡೆರೆಲ್ಲರ ಮನಹೇಸಿ
ಬಲ್ಲೀದ ಬಾಜೀರಾಯನ ಓಲೈಸಿ
ತಲೆಯ ಮೇಲಿನ ಕಳಸ ನೆಲಕ ಅಪ್ಪಳಿಸಿ
ಮಲ್ಲೇಂದ್ರ ಮಾಡಿದ ಉಪದ್ರವ ನೆನಸಿ       ೬೫

ಕೇಳಿ ಶ್ರೀಮಂತನು ಆದಾನು ಸಿಟ್ಟ
ಒಳಗ ಮುದೋಳದವರ ಮನೆಯನು ಕೊಟ್ಟ
ತಿಳಿಯ ಬಂದ ಕುದುರಿಯ ಚೌಕಿಯ ಇಟ್ಟ
ಕಳೆಗುಂದಿ ಮಲ್ಲೇಂದ್ರ ಕೈಕಾಲು ಬಿಟ್ಟ        ೬೬

ಕಿತ್ತೂರ ಪುರದೊಳು ನೀಲವ್ವ ತಾಯಿ
ಸತ್ಯುಳ್ಳ ಮಲ್ಲೇಂದ್ರ ಭೂಪಗ ಮಾಯಿ
ಮತ್ತ ಬರಲಿಲ್ಲ ಬಿಡತಾಳ ಬಾಯಿ
ಅತತ ಹೋದನು ಮಲ್ಲಸರ್ಜದೇಸಾಯಿ      ೬೭

ಮಡದಿ ಚನ್ನವ್ವನು ಚಿಂತಿಲೆ ಬಾಳ
ಸಡಗರ ಸಂಪತ್ತು ಬಿಟ್ಟು ಮನೆಯೊಳು
ಒಡೆಯ ಮಲ್ಲೇಂದ್ರ ಒಡಸಾಗ್ಯಾಳ
ಕೂಡಿ ಮಾತಾಡಿ ಚನ್ನವ್ವತಾಯಿಗಳು         ೬೮

ಗಂಡಮಾಲೆ ಹುಣ್ಣು ಹುಟ್ಟೀತು ಆಗ
ಬೆಂಡಾಗಿ ಒಣಗಿದ ಗೌಡನು ಬೇಗ
ಕಂಡೇನು ಶೇಗುಣಿಸಿ ಪುರವನು ಹ್ಯಾಗ
ಗಂಡುಮಕ್ಕಳ ಕಾಣದಂಗಾದೀತ್ಹೀಗ          ೬೯

ಡೋಲಿಯೊಳಗೆ ಕುಂತು ಪುಣೇವ ಬಿಟ್ಟು
ಮಲ್ಲೇಂದ್ರ ಭೂಪನ ಪುಣ್ಯವಳವಟ್ಟು
ಆಲದ ಶೇಗುಣಿಸಿ ಪುರಕೆ ತಾ ಹೊಂಟು
ಗಲ್ಲವೊಡೆದು ಗೌಡ ತಾ ಪ್ರಾಣವ ಬಿಟ್ಟ       ೭೦

ಶೇಗುಣಿಸಿ ಗೌಡನು ಎಂತೆಂಥ ಧನಿಕ
ಆಗ ಮಲ್ಲೇಂದ್ರನು ಮಾಡಿದ ದುಃಖ
ಈಗ ಖರ್ಚನು ಮಾಡಬೇಕೆಂದು ರೊಕ್ಕ
ಆಗಲೆ ಹೋದನು ಕಾರಭಾರಿ ಪಕ್ಕ ೭೧

ಈಗ ಸಂಗಪ್ಪನು ಕರದಾನು ಭೂಪ
ಕರದಾನು ಕಣ್ಣುಕೆಂಪಗೆ ಮಾಡಿ ಕೋಪ
ದೊರೆ  ಮಲ್ಲಸರ್ಜನು ಹೇಳಿದ ಶಾಪ
ದರಬಾರಕ್ಹೋಗಂದ ದಿನ ಹತ್ತು ಕೇಪ         ೭೨

ಮಾಣಿಕೇಶ್ವರನಲ್ಲಿ ಮುನಿದಾರು ಅವರು
ಪ್ರಾಣ ಸಂಕಟವನ್ನು ಮಾಡಿದರವರು
ಜಾಣ ಕಾರಕೂನರು ಕೊಡಲಿಲ್ಲ್ಯಾರು
ಕ್ಷೋಣಿಕ್ಷೋಣಿ ದ್ರವ್ಯ ಸೂರಿಮಾಡಿದರು        ೭೩

ಬಾಜೀರಾಯನ ಭೆಟ್ಟಿ ಮಾಡವರಿಲ್ಲ
ರಾಜರಾಜರ ಕೂಡಿ ಬೆರಗಾದರಲ್ಲ
ತೇಜಿ ಏರಿಹೋದರ ಪರವಾನಿಗಿಲ್ಲ
ರಾಜ ಮಲ್ಲೇಂದ್ರನು ಸೊರಗಿದನಲ್ಲ ೭೪

ವೀರಸಂಗಪ್ಪಗ ಹೇಳಿದ ಅರಸ
ಕರ್ಹಾಡ ತಾಳದೊಳು ಆಯಿತು ಸರಸ
ವೀರಸಂಗಪ್ಪಗ ಮಾಡಿದ ಬರಸ
ಇರಬೇಕು ಮತ್ತೆ ಇನ್ನೇನು ವರುಷ  ೭೫

ಬಾಜೀರಾಯನು ಬಂದು ಹೊಕ್ಕಾನು ತೋಟ
ರಾಜರಾಜರು ಕೂಡಿ ಆಡಿ ನೀರಾಟ
ಮೋಜೀಲೆ ಮಲ್ಲೇಂದ್ರಗ್ಹೇಳಿದ ಊಟ
ರಾಜಾಧಿಪತಿ ಬಾಜೀರಾಯನು ಶ್ರೇಷ್ಠ         ೭೬

ಶೀಲವಂತನು ಮಲ್ಲಸರ್ಜನು ಭೂಪ
ಒಲ್ಲೆನೂಟಕೆಂದರೆ ಬಂದೀತು ಪಾಪ
ಬಲ್ಲೀದ ಶ್ರೀಮಂತ ಮಾಡ್ಯಾನು ಕೋಪ
ಮಲ್ಲಸರ್ಜನು ಮುಂದಕ್ಹಾಕಿದ ಲಾಪ          ೭೭

ಕಾಂತ ಶ್ರೀಮಂತನಿಗ್ಹೇಳಿದರಲ್ಲ
ಕಿತ್ತೂರ ದೇಸಾಯಿ ಊಟಕ್ಕೆ ಒಲ್ಲ
ಸತ್ಯುಳ್ಳ ಶಿವಭಕ್ತ ಉತ್ತಮ ಶೀಲ
ಮತ್ತೆ ಫರಾಳಕ್ಕೆ ಬರುವ ಕುಶಾಲ   ೭೮

ಅರಮನೀ ರಂಗಮಂಟಪವ ಸಾರಿಸಿ
ಪರಿಪರಿಯ ಹಣ್ಣು ಸಕ್ಕರಿ ತರಿಸಿ
ದೊರೆ ಮಲ್ಲಸರ್ಜನನ ಬೇಗನೆ ಬರಿಸಿ
ಪರಿಪೂರ್ಣ ಪಂಚಫಳಾರವ ಬೆರೆಸಿ ೭೯

ನಾಕು ಸಾವಿರ ಜನ ಮಾಡಿ ಫಳಾರ
ಫಕ್ಕನೆ ತರಿಸಿದ ಪಾತರಮ್ಯಾಳ
ಪಕ್ಕಾಕಾರಕೂನನಿಗೆ ಹೇಳಿ ಕಿವಿಯೊಳ
ಲೆಕ್ಕವಿಲ್ಲದೆ ಜನ ಕೂಡೀತು ಬಾಳ   ೮೦

ಭರ್ಜರಿ ತಸರೀಪ ತರಿಸಿದ ಬ್ಯಾಟಿ
ಮೂರು ಸಾವಿರ ಬಿದ್ದ ಜರದ ದುಪ್ಪಟ್ಟಿ
ಸುರ್ತಿ ಜೋಡಿನೆಳಿ ಮುತ್ತಿನ ಕಂಠಿ
ಮಾಡಿದ ಮಲ್ಲಸರ್ಜಗ ಕೈಮುಟ್ಟಿ    ೮೧

ಕನಸಿನೊಳಗೆ ಬಾಪುಸಾಹೇಬನ ಕಂಡು
ತೊನಸಿಹಾಳ ಗೌಡನ ಮಗಳನೆತ್ತಿಕೊಂಡು
ಮುನಿಸು ಮಾಡಬೇಡ ಮಗನೆ ಪ್ರಚಂಡ
ಅನುವಾಗಿ ಮದುವಿಯ ಮಾಡು ತಕ್ಕೊಂಡು ೮೨

ಸುಂದ್ರ ಮಲ್ಲೇಂದ್ರನ ನಡುವಿನ ಪುತ್ರ
ಚಂದ್ರಮನಕಿಂತ ಚಲುವ ಸಮರ್ಥ
ಅಂದಳದೊಳು ತಾ ಮಾಡಿದ ಮೂರ್ತ
ತಂದನು ಕಿತ್ತೂರ ಪುರಕೊಂದು ಗುರ್ತ       ೮೩

ವೀರಪ್ಪದೊರೆಗಳು ಬಂದದ್ದು ಕೇಳಿ
ಅರಮನಿ ಹಿರಿಯರು ಹರುಷ ತಾಳಿ
ದೊರೆ ಮಲ್ಲಸರ್ಜನ ಬರಲಿಲ್ಲ ದಾಳಿ
ಹಿರಿಯಣ್ಣ ಬಾಪುಸಾಹೇಬನ ಕೇಳಿ   ೮೪

ಅಳಿಯನ ಕಾಣದ ಅತ್ತೆವ್ವ ಮರುಗಿ
ಕಳೆಗುಂದಿ ಕೈಕಾಲು ಶರಿರವು ಸೊರಗಿ
ಬಳಗ ನೋಡಲಿಕ್ಕೆ ಬರಲಿಲ್ಲ ತಿರುಗಿ
ಹೊಳೆವ ಚಂದ್ರಸಾಲಿ ಮೇಲೆ ಉಪ್ಪರಗಿ      ೮೫

ದೊಡ್ಡವ್ವನ ದನಿಯನು ಕಾಣದೆ ಮತ್ತ
ಹಿಂಡ ಮಂದಿಯ ಮುಂದೆ ನೋಡಿದಳು ಕುಂತ
ಕೆಂಡಗಣ್ಣಿನ ಶಿವ ಕರೆದಾನು ಅತ್ತ
ಮಾಡಿದ ಪ್ರಭುವಿನ ಪಾದವ ನಿತ್ಯ   ೮೬

ಅಪ್ಪ ಮಲ್ಲೇಂದ್ರಗ ಪ್ರೀತಿಯಿಟ್ಟಳು
ಬಾಪುಸಾಹೇಬನಿಗೆ ಧೈರ್ಯ ಕೊಟ್ಟಳು
ಚಪ್ಪಳಿಕ್ಕಿ ಚೆಲು ತೊಟ್ಟಿಲ ಕಟ್ಟಿದಳು
ಮುಪ್ಪಿನತ್ತೆವ್ವ ಪ್ರಾಣ ಬಿಟ್ಟಾಳು      ೮೭

ರುದ್ರವ್ವನ ಹೆಸರು ಅಡಗೀತು ಇಂದು
ಚಂದ್ರಕಾಂತಿವಳ ಪುತ್ರರು ಬಂದು
ಸುಂದ್ರ ಮಲ್ಲೇಂದ್ರಗ ಕಾಗದವೊಂದು
ಮಲ್ಲೇಂದ್ರನ ಕೈಯಾಗ ಕೊಟ್ಟರು ತಂದು     ೮೮

ಬರೆದ ಕಾಗದ ಮಲ್ಲೇಂದ್ರನು ನೋಡಿ
ಧರಣಿ ಮೇಲೆ ಬಿದ್ದು ತಾ ಹೊರಳಾಡಿ
ಮೂರು ಮಕ್ಕಳ ಪರದೇಶಿ ಮಾಡಿ
ಹರನೊಳು ಅತ್ತೆವ್ವ ಹೋದಳೆ ಕೂಡಿ          ೮೯

ಬಾದ್ದುರ ಸೆರೆಯನು ಐದಾಗ ಅತ್ತೆ
ಸಾಧಿಸಿ ಜಪತಪ ಮಾಡಿದಿ ನಿತ್ಯೆ
ಮಹದೇವನ ಪೂಜೆ ಮಾಡಿದಿ ಅತ್ತೆ
ಹೋದಂಥ ದೇಶಗತಿ ನಿಲ್ಲಿಸಿದಿ ಮತ್ತೆ         ೯೦

ಅತ್ತತ್ತು ಮಲ್ಲೇಂದ್ರ ಬಿದ್ದನು ನೆಲಕೆ
ಮುತ್ತಿನ ಸರಗಳು ಹರದಾವು ಪದಕೆ
ಉತ್ತಮ ಶುಭಗಳು ಆಗಲಿಕ್ಕೆ
ಹತ್ತೀತು ಮಲ್ಲಸರ್ಜನ ಜೀವಕ್ಕೆ      ೯೧

ಚಿಂತೀಲೆ ಸೊರಗಿದ ಮಲ್ಲೇಂದ್ರಭೂಪ
ನಿತ್ಯ ದಿನದಿನಕೊಂದಾದನು ರೂಪ
ಹತ್ತೀತು ಶರಿರಕ್ಕೆ ಹಿಮಜ್ವರ ತಾಪ
ಹಂತೇಲಿದ್ದವರಿಗೆ ಮಾಡಿದ ಕೋಪ ೯೨

ಮೂರು ವರುಷ ಕುಳಿತು ಮಲ್ಲೇಂದ್ರ ಪುಂಡ
ಮರ ಕಾಲಗತಿ ಬರುವದ ಕಂಡ
ದೊರೆ ಮಲ್ಲಸರ್ಜನು ಯೋಚನೆಗೊಂಡ
ಬರೆದು ಸಿಕ್ಕೇದ ಪತ್ರ ಕಳಿಸಿದ ಪುಂಡ ೯೩

ನೇಮದಿ ಪುಣ್ಯದ ಶಹರವ ಬಿಟ್ಟು
ರಾಮಲಿಂಗಪ್ಪನು ಅಲ್ಲಿಂದ ಹೊಂಟು
ತಮ್ಮಗಳಿಗೆ ತಿಗಡಿ ಹೊಂಗಲ ಕೊಟ್ಟು
ಬ್ರಹ್ಮ ಬರೆದ ಬಾಪುಸಾಹೇಬನು ಶ್ರೇಷ್ಠ       ೯೪

ಆರು ದಿನಕ ಬಂದು ರಾಮಲಿಂಗಪ್ಪ
ಅರಸಿ ಚನ್ನವ್ವಗ ಹೇಳಿದ ಶಾಪ
ಧರೆಗೆ ಅರಸು ಬಾಪುಸಾಹೇಬನು ಭೂಪ
ಬಾರವ್ವ ಶಿಕ್ಕೆ ಹಾಕಿ ಹಾರಸೂನು ತೋಫ    ೯೫

ವಿಸ್ತಾರ ದಿನದಲ್ಲಿ ಸದರವ ಮಾಡಿ
ಸಮಸ್ತರು ಮಕ್ಕಳು ಬಂದರು ಕೂಡಿ
ಮತ್ಸರ ತಾಯಿ ಚನ್ನವ್ವ ದಯಮಾಡಿ
ಸ್ವಸ್ತಾಗಿ  ಶಿಕ್ಕೆ ಹಾಕಿ ಮಗನ ಕೊಂಡಾಡಿ     ೯೬

ರಾಮಲಿಂಗಪ್ಪನ ಕೇಳ್ಯಾಳು ಸುದ್ದಿ
ದೊರೆ ಮಲ್ಲೇಂದ್ರಗ ಹುಟ್ಟಿತ್ಯಾಕಿಂಥ ಬುದ್ಧಿ
ಪುರದೊಳು ಮಹಾಪ್ರಸಾದವ ನೀಡಿ
ತರಿಸಬೇಕೆಂದಳು ಪುರುಷನ ಸುದ್ದಿ ೯೭

ಸಕ್ಕರಿ ಹಂಚಿ ಸಿಕ್ಕೇವ ಹಾಕಿದಕ
ದುಃಖ ಮಾಡುತ ನಡದಾರು ಪುಣೇಕ
ಸುಖದಿಂದ ಅರಮನ್ಯಾಗಿರುವದಿನ್ಯಾಕ
ಗಕ್ಕನೆ ಬಂದಾರು ತಿಗಡಿಯ ಪುರಕ           ೯೮

ಅರ್ಥ ಖರ್ಚು ಮಾಡಿ ಬೆಳದೀತು ವಿಘ್ನ
ಕರ್ತೀಕ ಮಾಸದಿ ತುಳಸಿಯ ಲಗ್ನ
ಕರ್ತೃ ಬಾಜೀರಾಯ ಮಾಡಿದ ಆಜ್ಞಾ
ತುರ್ತ ಪ್ರಮುಖರು ಬರುವ ಸಂಜ್ಞಾ           ೯೯

ಹತ್ತು ಸಾವಿರ ಜನ ಬಂದೀತು ಎಲ್ಲ
ಕಿತ್ತೂರ ದೊರೆ ತಾ ನೋಡ ಬರಲಿಲ್ಲ
ಮತ್ತೆ ಶ್ರೀಮಂತನು ಮಾಡಿದ ಗುಲ್ಲಾ
ಛತ್ರಚಾಮರ ರಾಹುತರ ಕಳುಹಿದನಲ್ಲಾ      ೧೦೦

ಕರೆಯ ಬಂದವರೆಲ್ಲಾ ಬೆರಗಾಗಿ ನೋಡಿ
ಶರಿರದ ನಾಡಿಯ ಹಿಡದು ಮಾತಾಡಿ
ಭರದಿಂದ ಬಂದಾರೋ ಅರಮನಿಗೋಡಿ
ದೊರೆ ಮಲ್ಲಸರ್ಜನ ಕಳುಹೊ ದಯಮಾಡಿ   ೧೦೧

ಹೇಳಲಿಲ್ಲ್ಯಾಕೆಂದು ಮಾಡಿದ ಸಿಟ್ಟಾ
ಒಳ್ಳೇ ಬಣ್ಣದ ಮೇಣೇವ ಕೊಟ್ಟಾ
ಬಾಳ ರಾತ್ರಿಯೊಳು ಪುಣೇವ ಬಿಟ್ಟಾ
ತಿಳದು ಬಂದಿಳಿದಾರೊ ಖಾತ್ರಿಯ ಘಟ್ಟಾ     ೧೦೨

ಸಕ್ಕರಿನೀರಿನ ಆಧಾರ ಮಾಡಿ
ಚಕ್ಕನೆ ಬಂದರು ಎಡೆಯೂರ ನೋಡಿ
ಮುಕ್ಕಣ್ಣ ವೀರಭದ್ರನ ಕೊಂಡಾಡಿ
ಲೆಕ್ಕವಿಲ್ಲದೆ ಅಯ್ಯಗೋಳಿಗೆ ನೀಡಿ   ೧೦೩

ಅರಸು ಮಲ್ಲೇಂದ್ರನು ಹರುಷದಿ ಕಂಡು
ತರಿಸಿದ ಕಿತ್ತೂರ ಅರಮನೆ ದಂಡು
ವರ ಸುತಸತಿ ಸೊಸ್ತೇರ ಹಿಂಡು
ಗುರಸಿದ್ಧಪ್ಪ ನೀ ಬಾರೊ ಕರಕೊಂಡು         ೧೦೪

ಶವಶಂಕ್ರೆಪ್ಪನ ಪುತ್ರನ ನೋಡಿ
ದೊರೆ ಬಾಪುಸಾಹೇಬ ವ್ರತವ ಮಾಡಿ
ಹರುಷದಿ ಅಣ್ಣತಮ್ಮರ ಒಡಗೂಡಿ
ಹರ ದುರದುಂಡಿ ಪಾದವ ಕೊಂಡಾಡಿ         ೧೦೫

ಮಡದಿ ಚನ್ನವ್ವನು ಪಾಲ್ಕಿಯನೇರಿ
ಸಡಗರ ಕುದುರೆಯ ತಿರವುತ ಪೇರಿ
ಹಿಡದಾರು ದುರದುಂಡಿ ಅರಭಾವಿ ದಾರಿ
ಒಡೆಯ ಮಲ್ಲೇಂದ್ರನ ಬಂದೀತು ಸ್ವಾರಿ      ೧೦೬

ಮಕ್ಕಳ ಪಾಲಿಕೆ ಕಂಡು ಮಲ್ಲೇಂದ್ರ
ಚಕ್ಕನೆ ಮೇಣೇವ ಇಳಿಸಿ ದೇವೇಂದ್ರ
ದುಃಖ ಮಾಡಿದ ಬಾಪುಸಾಹೇಬನು ಸುಂದ್ರ
ತೆಕ್ಕಿಯೊಳಗ ಬಿಗಿದಪ್ಪಿ ಮಲ್ಲೇಂದ್ರ           ೧೦೭

ಪುತ್ರರ ಮೂವರ ಮಕ್ಕಳ ಹರಿಸಿ
ಹೊತ್ತ ಸೆಲ್ಲೇದಿಂದ ಕಣ್ಣೀರ ಒರಿಸಿ
ಮುತ್ತು ಮಾಣಿಕದೊಂದು ಮಾಲಿಯ ತರಿಸಿ
ಪೃಥ್ವಿಪತಿ ಬಾಪುಸಾಹೇಬಗ ಧರಿಸಿ ೧೦೮

ಹರಹರ ಎನುತಲಿ ಒಳಿಯಾಕ ಬಂದು
ಹರ ದುರದುಂಡಿಗೆ ಕಾಣಿಕೆ ತಂದು
ವರಗಳ ಎಣಿಸಿ ತಂದಾರು ನೂರೊಂದು
ದುರದುಂಡಿ ಪಾದವ ಕಂಡೇವು ಎಂದು       ೧೦೯

ಕಷ್ಟಬಿಟ್ಟು ತಾನು ತಂದಂಥ ವಾರ್ತಿ
ಅಷ್ಟುರ ಮುಂದ ತಾ ಹೇಳಿದ ವಾರ್ತಿ
ಪಟ್ಟದ ಚನ್ನವ್ವ ತಂದಳು ಆರ್ತಿ
ಇಟ್ಟರು ಮುತ್ತುಮಾಣಿಕ ಮನಪೂರ್ತಿ         ೧೧೦

ಮಡದಿ ಮಕ್ಕಳು ಮಾತಾಡುತ ಕುಳಿತು
ಮಡದಿ ಚನ್ನವ್ವನು ಹೇಳ್ಯಾಳು ನಿಂತು
ಒಡೆಯ ಲಾಲಿಸು ಎನ್ನ ಕನಸಿನ ಹೊತ್ತು
ಒಡದೀತು ನತ್ತಿನ ಮೇಲಿನ ಮುತ್ತು ೧೧೧

ಸತಿಯ ಚನ್ನವ್ವನ ಪ್ರೀತಿಯ ಅರಸ
ಮತಿವಂತಿ ಕೇಳು ನಾ  ಹೋಗಿ ಮೂರು ವರ್ಷ
ಮುತ್ತು ಒಡದೀತಂದರ ಕನಸೀನ ಸರಸ
ಚಿತ್ತಕ್ಕ ತಾರದೆ ಮಾಡಿದ ಹರುಷ    ೧೧೨

ಹತ್ತುಸಾವಿರ ನಿತ್ಯ ಜಂಗಮಕುಣಿಸಿ
ಬೆತ್ತಾಸ ಹಣ್ಣು ಸಕ್ಕರಿ ದಣಿದಣಿಸಿ
ಮತ್ತೊಂದು ರೂಪಾಯಿ ಎಣಿಯೆಣಿಸಿ
ಭಕ್ತಿ ಮಾಡಿದ ಜಂಗಮಜನಕೆ ಉಣಿಸಿ         ೧೧೩

ಬೇಡಿದ ಬಯಕೆಯು ಮನಸಿನ ಇಚ್ಛೆ
ಕೂಡಿಸಿಕೊಟ್ಟನು ಮಹದೇವನು ಮೆಚ್ಚೆ
ನೋಡಿ ಬಂದಾರೊ ಹೊಂಗಲವನು ನೆಚ್ಚಿ
ಓಡಿ ಹೋದಾವು ಇಲ್ಲಿಗಿದಿಗಾಳು ಬಿಚ್ಚಿ        ೧೧೪

ಹೊಂಗಲ ಹೊಕ್ಕಾನು ಮಲ್ಲೇಂದ್ರ ಪುಂಡ
ಜಂಗಮರೆಡಬಲ ಮಾರ್ಬಲ ದಂಡ
ಸಂಗನಬಸವನ ಶರಣರ ಹಿಂಡ
ಮಾಂಗಲ್ಯ ಆಶೀರ್ವಾದವನು ಕೈಕೊಂಡ     ೧೧೫

ಬಳ್ಳೋಡಿ ವೀರನ ಪಾದಕ್ಕೆ ಬಂದು
ಬೆಳ್ಳಿ ಬಂಗಾರ ಮುತ್ತು ಕಾಣಿಕೆ ತಂದು
ಒಳ್ಳೇ ವಜ್ರಮಾಲಿ ಹಾಕಿದ ಒಂದು
ಫಾಳಲೋಚನ ಎನ್ನ ಸಲಹು ನೀನೆಂದು      ೧೧೬

ನಾಲ್ಕಾರು ಸಾವಿರ ಮೂರ್ತಿಗೆ ನೀಡಿ
ರೊಕ್ಕ ರೂಪಾಯಿ ವರಬಿಕ್ಷವೀಡಾಡಿ
ಮುಕ್ಕಣ್ಣ ವೀರಭದ್ರನ ಕೊಂಡಾಡಿ
ದುಃಖ ಹೆಚ್ಚಿತು ಮಲ್ಲಸರ್ಜನ ನೋಡಿ         ೧೧೭

ಶರಿರದ ವ್ಯಾಧಿ ಹೆಚ್ಚಾಗಿ ಪ್ರಬಲಾ
ದೊರೆ ಮಲ್ಲಸರ್ಜ ಆದಾನೊ ಗಾಲಮೇಲಾ
ಕರಜುರ ಪಾನ ಸಕ್ಕರೆ ತಾನು ಒಲ್ಲಾ
ಎರಡುದ್ದ ಧರಿಸಿದ ಅವಸಾನ ಕಾಲಾ         ೧೧೮

ಹತ್ತು ಸಾವಿರ ಜನ ದುಃಖಿಸಿಕೊಂಡು
ಕಿತ್ತೂರ ಮಾರ್ಗವ ಹಿಡದೀತು ದಂಡು
ಮತ್ತ ಶಿವಬಸಪ್ಪ ತಾ ಹಣ್ಣ ತಕ್ಕೊಂಡು
ಬೆತ್ತಾಸ ಕಜ್ಜೂರ ಸಕ್ಕರಿ ಬೆಂಡು     ೧೧೯

ಮಲ್ಲೇಂದ್ರಗೆರಗಿದನು ಶಿವಬಸಪ್ಪ
ಮೆಲ್ಲನೆ ಎಚ್ಚತ್ತು ಮಲ್ಲೇಂದ್ರ ಭೂಪ
ಅಲ್ಲೇ ಕೇಳಿದ ಶಿವಬಸಪ್ಪನ್ನ ಸಾಪ
ಕಿಲ್ಲೇದ ಮ್ಯಾಲ್ಯಾಕ ಹಾರತಾವು ತೋಪ     ೧೨೦