ಒಡೆಯಗ ಮಾಡಿದ ಕುರ್ಸೆಸ ಬಗ್ಗಿ
ಒಡೆಯ ಬಂದರೆಂದು ನಾಡೆಲ್ಲ ಹಿಗ್ಗಿ
ಬಡಜಂಗಮರಿಗೆ ಆದೀತು ಸುಗ್ಗಿ
ಹೊಡಿತಾನು ಐದು ತೋಫ ಹಿಗ್ಗಿಗ್ಗಿ ೧೨೧

ಅಂತ್ಯಕಾಲಕ್ಕೆ ಭೆಟ್ಟಿ ಆದೀತು ನಿನ್ನ
ಸತ್ಯುಳ್ಳ ಬುದ್ದಿ ಹಿಂದಾದೀತು ಎನ್ನ
ಸುತರ ಸವನ ಬ್ಯಾಗಕ್ಕಾಗೋ ನೀ ಬೆನ್ನ
ಹಿತದಿಂದ ದೇಶಗತಿ ನಡಿಸೋ ನೀ ಮುನ್ನ   ೧೨೨

ಶನಿವಾರ ಸಂಜಿಕೆ ಬಂದಿತೊ ಸ್ವಾರಿ
ಚಂದುಳ್ಳ ಹೊಂಡೇದ ಬಸವಾನ ತೋರಿ
ಕಂದರ ಕಾಣದಾಂಗ ಆದೀತೊ ಮೋರಿ
ಇಂದ್ಯಾರಿಗ್ಹೇಳಲಿ ಕಂದನ ಸೂರಿ    ೧೨೩

ಒಡೆಯರ ಚೌಕಿಮಠದೊಳು ಬಂದು
ನುಡಿದನು ಮಕ್ಕಳ ಕೂಡಿ ಮತ್ತೊಂದು
ಸಡಗರ ಅರಮನಿ ಹೊಗಲಿಲ್ಲ ಬಂದು
ಹಿಡಿದು ಆಕಳ ದಾನಕೊಟ್ಟ ನೂರೊಂದು      ೧೨೪

ಮೂರು ತಾಸಿಗೆ ಬಂದು ಅರಮನೆ ಹೊಕ್ಕ
ಬೋರ್ಯಾಡಿ ಚನ್ನವ್ವ ಮಾಡ್ಯಾಳೊ ದುಃಖ
ಮಾರಾರಿ ಮಲ್ಲೇಂದ್ರಗ ಹತ್ತಿತೋ ಬಿಕ್ಕ
ಅರಮನಿಯವರಿಗೆಲ್ಲಾ ತಪ್ಪಿತೋ ದಿಕ್ಕ       ೧೨೫

ದುಃಖ ಮಾಡಲಿಬೇಡ ಚನ್ನವ್ವ ತಾಯಿ
ಮುಕ್ಕಣ್ಣ ಮುನಿದ ಮೇಲಿಲ್ಲ ಉಪಾಯಿ
ಭಿಕ್ಷ ಕೊಡಿಸು ವಿರಕ್ತರಿಗೆ ರೂಪಾಯಿ
ಮೋಕ್ಷವಾಗಲಿ ಮಲ್ಲಸರ್ಜ ದೇಸಾಯಿ       ೧೨೬

ಅಳಬೇಡೊ ನೀ ನನ್ನ ಒಡಹುಟ್ಟಿದಣ್ಣ
ಹೊಳೆವ ಗಲ್ಲ ಮೋರಿ ತೀರಿತೊ ಬಣ್ಣ
ತಳಮಳಗೊಳುತಲಿ ತಿರುವ್ಯಾರೊ ಕಣ್ಣ
ಬಳಗಕ್ಕ ಬ್ಯಾಗಿ ಇಕ್ಕಿದ್ಯೋ ನಮ್ಮಣ್ಣ          ೧೨೭

ಎಡಬಲ ಪುತ್ರರು ಬಿಡುತಾರೊ ಬಾಯಿ
ನಡುವಿನ ಮಗನು ವೀರಪ್ಪ ದೇಸಾಯಿ
ಬಡಕೋಬ್ಯಾಡ ನನ್ನ ಹಡದಂಥ ತಾಯಿ
ಬೆಡತಾರೊ ಪ್ರಾಣ ಮಲ್ಲೇಂದ್ರ ದೇಸಾಯಿ    ೧೨೮

ಅರುಣೋದಯ ಕಾಲಕ್ಕೆ ಶರಣ ಮಲ್ಲೇಂದ್ರ
ಮರಣಾದ ಮರ್ತ್ಯದರಸು ದೇವೇಂದ್ರ
ಹರಣ ಹಾರುದ ಕಂಡು ಮಗ ಮಾರಸುಂದ್ರ
ಧರೆಗೆ ಕರಗಿದಂಥ ಪೌರ್ಣಮಿ ಚಂದ್ರ         ೧೨೯

ಒಡೆಯ ಮಲ್ಲೇಂದ್ರನು ಸತ್ತಾನು ಭೂಪ
ಹೊಡೆದಾರು ಎಣಿಯಿಣಿಸಿ ಐವತ್ತು ತೋಫ
ಅಡಗೀತು ಮಲ್ಲೇಂದ್ರ ಭೂಪನ ರೂಪ
ಒಡೆಯ ಶ್ರೀವೀರೇಶ ಮಾಡಿದ ಕೋಪ        ೧೩೦

ಸದರಿಗೆ ತಂದಾರು ಮಲ್ಲೇಂದ್ರ ದೊರೆಯ
ಎದೆಯು ಒಡೆದು ಬಾಪುಸಾಹೇಬನು ಹಿರಿಯ
ಮದನಾರಿ ಮಹಾದೇವ ಹೋಯಿತು ಸಿರಿಯು
ಒದಗೀತು ನಿಮಗೀಗ ಮರಣದ ಪರಿಯು     ೧೩೧

ಕೋರಿಮೀಸಿ ಮುತ್ತು ವಜ್ರವ ಇಡಿಸಿ
ನೂರುವರದೊಂದು ಡಗಲಿಯ ತೊಡಿಸಿ
ಸೂರತಿ ಮುತ್ತಿನ ತುರಾಯ ಮುಡಿಸಿ
ಮಾರಾಯ ಢಾಲಪಟ್ಟಿ ತಾನವ ಕೊಡಿಸಿ      ೧೩೨

ಭರಿಜರಿ ಪೈಠಣಿ ಶೆಲ್ಲೇವ ಹೊಚ್ಚಿ
ಜರದ ಮುಂಡಾಸದ ಮೇಲೆ ಶಿರಪೇಚ ಹಚ್ಚಿ
ಕರದ ಮುಂಗೈಗೆ ಕಟ್ಟ್ಯಾರೊ ಪೋಚಿ
ಗುರದ ಕೊಟ್ಟಾರು ಬಲಗೈಯಗವಚಿ          ೧೩೩

ಹಾರ ಹೂವಿನ ಮಾಲಿ ವಿಭೂತಿಯ ಧರಿಸಿ
ಬೆರಿಸಿ ಕಸ್ತೂರಿ ಪರಿಮಳವ ಹರಿಸಿ
ತರತರಪುದಿನ ಗಿಡವಾನು ಇರಿಸಿ
ದೊರಿ ಕದಕದ ನಗುಹಾಂಗ ಶೃಂಗರಿಸಿ       ೧೩೪

ನೆರೆದ ಜಂಗಮರೆಲ್ಲಾ ಪಾದವ ಇಟ್ಟು
ದೊರೆ ಮಲ್ಲಸರ್ಜಗಾಶೀರ್ವಾದ ಕೊಟ್ಟು
ವರವಸ್ತ್ರ ವರಗಳ ಭಿಕ್ಷವ ಕೊಟ್ಟು
ವರಸುತ ಸತಿಯರು ಹೋಗುವರು ಬಿಟ್ಟು     ೧೩೫

ಸತಿಯು ಚನ್ನವ್ವನು ದುಃಖವ ಮಾಡಿ
ಪತಿಯು ಪಾದದ ಮೇಲೆ ಬಿದ್ದು ಹೊರಳ್ಯಾಡಿ
ಕ್ಷಿತಿಯೊಳು ಎನ್ನನು ಪರದೇಶಿ ಮಾಡಿ
ಹಿತದಿಂದ ಹರನೊಳು ಹೋದಿರಿ ಕೂಡಿ       ೧೩೬

ಸತಿಯು ಚನ್ನವ್ವನು ಕಳವಳಗೊಂಡು
ಸತಿಯರು ಒಯ್ದಾರು ಒಳಗೆತ್ತಿಕೊಂಡು
ಸುಂದ್ರ ಮಲ್ಲೇಂದ್ರನ ಮೋರೆಯ ಕಂಡು
ಘಾತವಾದೀತೆಂದು ಎದೆಯ ಬಡಕೊಂಡು    ೧೩೭

ಕಲ್ಲುಮಠದ ಪ್ರಭುದೇವರು ಬಂದು
ಎಲ್ಲ ಮಕ್ಕಳನು ಒಳಿಯಕ್ಕ ತಂದು
ಎಲ್ಲರಿಗೆ ಬುದ್ಧಿ ಹೇಳಿದರೊಂದು
ಮಲ್ಲಸರ್ಜನು ಮುಕ್ತಿಪಡೆದನು ಇಂದು        ೧೩೮

ಮುತ್ತಿನ ಸೆರಗಿನ ಸೀರೆಯನುಟ್ಟು
ಹತ್ತು ಹೊನ್ನಿನ ಜರದ ಕುಪ್ಪುಸ ತೊಟ್ಟು
ಕಸ್ತೂರಿ ತಿಲಕದ ಬೊಟ್ಟುಗಳಿಟ್ಟು
ವಸ್ತ್ರ ಆಭರಣ ಜೋಡಿಸಿ ಇಟ್ಟು      ೧೩೯

ಮುತ್ತಿನ ಆರತಿ ಕೈಯಾಗ ಹಿಡಿದು
ಮತ್ತೆ ಮಲ್ಲೇಂದ್ರಗ ಬಂದಾಳೋ ನಡೆದು
ಎತ್ತಿದಳಾರುತಿ ಕೈಯಾಗ ಹಿಡಿದು
ಸತಿಯು ಸುತರ ಬಿಟ್ಟು ಹೋಗುವರೆ ಮಡಿದು          ೧೪೦

ಒಡೆಯ ಚನ್ನವ್ವನ ಅರ್ಭಾಟ ಬಹಳ
ನಡುವಿನ ಪುತ್ರನು ಹಿಡಿದ ಕೈಗಳ
ಬಡಕೋಬ್ಯಾಡ ತಾಯಿ ಎದಿಯೆದಿ ಬಾಯ್ಗಳ
ನೋಡು ಮಲ್ಲಸರ್ಜನ ವದನಗಳ   ೧೪೧

ಪರದೇಶಿ ವಿರಕ್ತ ಮೂರ್ತಿಗಳೆಲ್ಲ
ದೊರೆ ಮಲ್ಲಸರ್ಜಗಿದಿರಾರು ಇಲ್ಲ
ಶರಣ ಸದ್ಭಕ್ತರ ಭಕ್ತಿಯ ಬಲ್ಲ
ಹರುವಾಯಿತಿಂದಿಗೆ ಧರ್ಮಗಳೆಲ್ಲ   ೧೪೨

ಕರಣಿಕ ಕುಲಕರ್ಣಿ ರಾರಭಾರಿಯರು
ವರ ಮಕ್ಕಳೆಂಬುವ ನಿಸ್ಪೃಹರು
ಬೋರ್ಯಾಡಿ ಅಳತಾರೊ ಪುಣೇದವರು
ದೊರೆ ಮಲ್ಲಸರ್ಜನ ಮಕ್ಕಳೆಂಬವರು ೧೪೩
ಹತ್ತು ಸಾವಿರ ಕೂಡಿ ಮಾಡಿ ಆಳಾಪ
ಮತ್ತೆ ಸತ್ತನು ಮಲ್ಲೇಂದ್ರ ಭೂಪ
ಪುತ್ರರ ಅಗಲಿ ಹೋದುದು ಪಾಪ
ಎಂಥ ರಂಡೇರು ನಿನಗೆ ಕೊಟ್ಟರು ಶಾಪ      ೧೪೪

ಏಳು ಉಪ್ಪರಗಿ ವಿಮಾನವ ಕಟ್ಟಿ
ಬಿಳಿಯ ಜರದ ಶಲ್ಲೆ ತೆಗೆದಾರೊ ಪಟ್ಟಿ
ಮೇಲೆ ಮುಚ್ಚಿದರು ಜರದ ದುಪ್ಪಟ್ಟಿ
ಬೆಳ್ಳಿ ಮುತ್ತಿನ ಗಂಟೆ ಸರಗಳ ಕಟ್ಟಿ ೧೪೫

ಕಳಸ ಇಟ್ಟನು ಸೂರ್ಯ ಚಂದ್ರರ ಸಮಾನ
ಒಳಗ ಕಟ್ಟಿದ ನಾಕಾರು ಕಮಾನ
ಇಳಿದು ಬಂದಿತೇನೊ ಕೈಲಾಸದ ವಿಮಾನ
ನಳಿನಾಕ್ಷಿಯರು ಪಾಡಿದರು ಸೋಬಾನ       ೧೪೬

ಕಲ್ಲು ಮಠದೊಳು ನೆಲವನು ಅಗಿದು
ಮಲ್ಲಸರ್ಜಗ ಸಮಾಧಿಯು ತೆಗೆದು
ಬಲ್ಲಿದ ಬಸವನು ತಗದಾನು ಅಗಿದು
ಮಲ್ಲಸರ್ಜನ ಸಮಾಧಿಯು ಮುಗಿದು         ೧೪೭

ಬಾಳಿಕಂಬದ ಮೇಲೆ ಹಾಕಿ ಹಂದರವ
ತಳಿರು ತೋರಣ ಕಟ್ಟಿ ಮಾಡಿ ಸುಂದರವ
ಹೊಳೆವ ನಂದಿಯ ರಚಿಸಿ ಮುಂದೆ ತಂದಿರುವ
ತಳತಳಿ ರಂಗವಾಲಿಯನು ತುಂಬಿರುವ      ೧೪೮

ಸುತ್ತಲೆ ರುದ್ರಾಕ್ಷಿ ಸರವನು ಕಟ್ಟಿ
ಮತ್ತೆ ಬರೆದರೋ ಕೈಲಾಸದ ಸೃಷ್ಟಿ
ಚಿತ್ರ ಬಸವಲಿಂಗ ಕಾಗದ ಪಟ್ಟಿ
ಪತ್ರಿ ವಿಭೂತಿ ನೂರಾರು ಬುಟ್ಟಿ      ೧೪೯

ಕಸ್ತೂರಿ ಸಾರಣಿ ಸುತ್ತಿನ ಗೋಡಿ
ವಿಸ್ತಾರ ಪುನಗು ಜವದಿಯ ತೀಡಿ
ಸಮಸ್ತರು ನಂದಿಮುಖ ಸುತ್ತಲು ಹೂಡಿ
ಸಮಸ್ತರು ಕ್ರಿಯೆ ಸಮಾಧಿಯ ಮಾಡಿ         ೧೫೦

ನೆರೆದ ಜನರೆಲ್ಲಾ ಮರಮರ ಮರುಗಿ
ಪರಿವಾರ ಪ್ರಜೆಯೆಲ್ಲಾ ಬಂದಿತು ತಿರುಗಿ
ದೊರೆ ಮಲ್ಲಸರ್ಜ ಸಮಾನದುಪ್ಪರಿಗಿ
ಹರದಿ ಚನ್ನವ್ವ ಕಂಡು ಶವದ ಮೇಲೊರಗಿ    ೧೫೧

ಪುರುಷನ ಬಿಗಿದಪ್ಪಿ ಸತಿಯು ಮುಂಡಾಡಿ
ಅರಸನ ಸ್ಥಿತಿಗತಿ ಆಗ ಕೊಂಡಾಡಿ
ವರಪುತ್ರ ಬಾಳಾಸಾಹೇಬನ ಮುಖನೋಡಿ
ಮರಣಾಗಲಿಲ್ಲವನ ಲಗ್ನವ ಮಾಡಿ   ೧೫೨

ಮುತ್ತಿನ ಸೆರಗಿನ ಸೀರಿ ಜರತಾರ
ರತ್ನ ಖಚಿತವಾದ ಹೆಳಲ ಭಂಗಾರ
ಪತಿಯ ಕಳಿಸಿಕೊಟ್ಟ ವಸ್ತ ಮನಾರ
ಹಿತದಿಂದ ಇಡುವಾಭರಣ ವಿಸ್ತಾರ ೧೫೩

ಮದುವೆಯ ಸಂಭ್ರಮ ಮಾಡಿದಿ ಬಾಳು
ಸುದತಿಯ ತಕ್ಕೊಂಡಿ ಸೊಲ್ಲಾಪುರದೋಳು
ಮದುವೆಯ ಮಾಡೊಂದು ಮಾರ್ಗಶಿರದೋಳು
ಇದನೆಲ್ಲ ಹೇಳಿದಿ ಶ್ರೀಮಂತರೋಳು          ೧೫೪

ಮಠದಾಗ ಹೇಳಿದಿ ಪ್ರೀತಿಂದ ಪತಿಯೇ
ಸಿಟ್ಟು ಬಿಡಿಸಿ ಬಹಳ ಮಾಡಿದಿ ರತಿಯೇ
ಸೆಟ್ಟಿ ಸೊಲ್ಲಾಪುರದ ಪಟ್ಟದ ಸತಿಯೇ
ಘಟ್ಟಿ ಮಾಡಿಸಿದೆನು ಕೇಳೊಂದ ಸತಿಯೇ     ೧೫೫

ಬಂದೇರಿ ದುರದುಂಡಿ ಸ್ವಾಮಿಯ ತಳಕ
ಚೆಂದುಳ್ಳ ಬೆಳಗಾಗ ಕೂಡಿದ ಬಳಿಕ
ಚಂದ್ರಸಮಾನ ಪ್ರಭೆ ಕಂಡನು ಬೆಳಕ
ಒಂದೊಂದು ನೇತ್ರವು ತಾರೆಯ ಜುಳಕ      ೧೫೬

ವಂಟಮುರಿ ಪ್ರಭುಗೊಂಡ ದೇಸಾಯಿ ಬಂದು
ಪೈಠಾಣಿ ಶೆಲ್ಲೇವ ತಸರೀಪ ತಂದು
ದಿಟವಾಗಿ ಮತ್ತೆ ಕೇಳಿದು ಒಂದೊಂದು
ಪಟ್ಟದ ವರ್ತಮಾನವು ಹ್ಯಾಂಗ ಮುಂದು     ೧೫೭

ವೀರಪ್ಪ ದೇಸಾಯಿಗ್ಹೊಂಗಲ ಕೊಟ್ಟಿ
ದೊರೆ ಬಾಳಾಸಾಹೇಬಗ ತಿಗಡಿಯ ಕೊಟ್ಟಿ
ಧರೆಗೆ ಅರಸು ಬಾಪುಸಾಹೇಬನು ಹುಟ್ಟಿ
ಹರದಿ ಸಿಕ್ಕೆ ಹಾಕಿದಳು ಕೈಮುಟ್ಟಿ ೧೫೮
ಕಲ್ಲೂರ ಚನಬಸಪ್ಪನ ಕಳುಹಿಕೊಟ್ಟು
ಸೊಲ್ಲಾಪುರದ ನಿಬ್ಬಣ ಬರಬ್ಯಾಡೊ ಬಿಟ್ಟು
ಅಲ್ಲಿಂದ ಮುಂದಕ ಬಾರೋ ನೀ ಹೊಂಟು
ಶಿವಬಸಪ್ಪಗ ಪತ್ರ ಬರೆದಿರೇಳೆಂಟು           ೧೫೯

ಮದುವಿಗೆ ಬರಬೇಕೊ ವಂಟಮುರಿ ದೊರೆಯೆ
ದಾದಸುಬನರಾವ ಪರಿವಾರ ಪ್ರಜೆಯೆ
ಮುದದಿಂದ ಕಳುಹುವೆನು ಕರೆಯೆ
ಕದಕದ ನಗುತಲಿ ಹೇಳಿದಿ ದೊರೆಯೆ         ೧೬೦

ಕಿತ್ತೂರಿಗೆ ಹೋಗಿ ಮುಹೂರ್ತವ ತೆಗೆಸಿ
ಉತ್ತರ ಕಳುಹುವೆನು ವಂಟಮುರಿಗೆ ಬರೆಸಿ
ಪಾತ್ರ ಕೇಳಿದಿ ಪುಣ್ಯದೆಂಕಾಟನರಸಿ
ಆರ್ತಿ ಮಾಡೇನು ಪುಣ್ಯದಾಕೆಯ ತರಿಸಿ      ೧೬೧

ಅರ್ತಿಂದ ಮಠದಾಗ ಹೇಳಿದಿ ಭೂಪ
ವ್ಯರ್ಥ ಮಾಡಿದಿ ಎನ್ನ ಜನ್ಮದ ಪಾಪ
ಗುರ್ತ ಮರಿಯಲಾರೆ ದೊರೆ ನಿನ್ನ ರೂಪ
ಕರ್ತ ಮಲ್ಲೇಂದ್ರ ನೀ ಮಾಡಿದಿ ಕೋಪ       ೧೬೨

ಹರಹರಯೆನುತಲಿ ಜನವೆಲ್ಲಾ ಬಂದು
ದೊರೆ ಮಲ್ಲಸರ್ಜನ ನೀ ಮಾನಕ್ಕೆ ತಂದು
ಗುರುಲಿಂಗಪ್ಪನ ಬಲಭಾಗದಿ ನಿಂದು
ಗುರುಲಿಂಗಪ್ಪನ ಬಲಭಾಗದಿ ನಿಂದು
ನೆರೆದ ಜನರೆಲ್ಲಾ ಉಗೆಯುಗೆಯೆಂದು         ೧೬೩

ಹಿಡಿ ತೇಜಿ ಎಡಬಲ ಚಾಮರ ಹರಸುತ
ಕಿಡಿಬಿಡಿ ಭೇರಿ ದುಂದುಭಿ ಬಾರಿಸುತ
ನುಡಿವ ನೌಬತ್ತು ಮೇಲೆ ಏರಿಸುತ
ನುಡಿವ ನೌಬಾಜಿ ಬಿಡದೆ ಬಾರಿಸುತ          ೧೬೪

ಆರ್ಭಾಟ ಇಕ್ಕೀತು ವಾದ್ಯವು ಎಲ್ಲಾ
ಶರ್ಭಾವತಾರದ್ಹಾಂಗ ವಾದ್ಯೇದ ಗುಲ್ಲಾ
ಹರದಾರಿ ಕೇಳುವದು ವಾದ್ಯೇದ ಸೊಲ್ಲಾ
ಆರ್ಭಢೋಲಿ ಫೌಜು ದೊರೆಯ ಎಡಬಲಾ    ೧೬೫

ಒಡೆಯ ಚನ್ನವ್ವನ ಹಿಡಿದಾರು ಮತ್ತ
ಒಡೆಯ ಬಾಪುಸಾಹೇಬನ ದೊರೆಗಳ ಸುತ್ತ
ಬಿಡಿಮುತ್ತು ವಿಮಾನ ಮೇಲೆ ಹಾರಿಸುತ
ಎಡಬಲ ಭಟ್ಟಂಗಿ ಆಗ ಸಾರಿಸುತ   ೧೬೬

ವಿಳ್ಯೇದ ಮುಸುಕಿಲೆ ಮುಚ್ವಿತೊ ದಾರಿ
ಬೆಳ್ಳಿ ಬಂಗಾರ ಹೂವ ಮಾಡ್ಯಾರು ಸೂರಿ
ಬೆಳ್ಳಿ ಬೆತ್ತದ ಭಟ್ಟಂಗಿ ಭೇರಿ
ಮಲ್ಲಸರ್ಜಗ ಇದಿರಿಲ್ಲೆಂದು ಸಾರಿ   ೧೬೭

ನೇಮದಿ ಹಡದಿಯ ಹಾಸುತ ಜನರು
ಸಮಾಧಿಯ ಕಟ್ಟೆಗೆ ಬಂದು ಎಲ್ಲಾರು
ದಮ್ಮಯ್ಯಗಳು ಒಳಗಿಳಿದಯ್ಯನವರು
ಶಂಭುರಾರಿಯ ಶತಕ ವೃತ್ತ ಓದಿದರು        ೧೬೮

ಮ್ಲಲ್ಲೇಂದ್ರ ಭೂಪನ ಇಳಿವ್ಯಾರು ತೆಳಗ
ಶಲ್ಲೆ ಮುಂಡಾಸ ಅಂಗಿ ಕಳಿದಾರು ಒಳಗ
ಬೆಲ್ಲಪತ್ರಿ ಧರಿಸಿ ಪೂರಿಗೊಳ್ವಾಗ
ಮಲ್ಲಸರ್ಜನ ಮೋರೆ ನೋಡಿರಿ ಬಳಗ       ೧೬೯

ಸತಿಯು ಚೆನ್ನವ್ವನು ಪತಿ ಮೋರೆಯ ಕಂಡು
ಪತಿಯ ಮುಂದೆ ಎದೆಯ ಬಡಬಡಕೊಂಡು
ರತ್ನದ ಗುಳದಾಳಿ ಕರಿಮಣಿ ಗುಂಡು
ಹಿತವಾದ ಕಾಜಿನ ಬಳಿ ಒಡಕೊಂಡು         ೧೭೦

ಅರಸನ ಹೊಟ್ಟೀಲೆ ಹುಟ್ಟಿ ರಾಜ್ಯವ ಪಡೆದಿ
ಮೂರು ವರುಷ ಹೋಗಿ ಪುಣೇದಿ ತಡದಿ
ಎರವ ಮಾಡಿ ಈಗ ಹರನೊಳು ನಡದಿ
ಮೂರು ಬೊಗಸಿ ಮಣ್ಣ ಒಗೆದಾಳೊ ಮಡದಿ   ೧೭೨

ಬಾಪುಸಾಹೇಬ ಕಂಡ ತಂದೆಯ ಮೋರಿ
ಇಪ್ಪತ್ತು ಮಂದಿಯು ಹಿಡಿದಾರು ಮೀರಿ
ಅಪ್ಪನ್ಹಂತೆಲೆ ಬೀಳಬೇಕೆಂದು ಹಾರಿ
ಬಾಪುಸಾಹೇಬನ ಪ್ರಾಣ ಹೋದೀತು ಮೀರಿ ೧೭೩

ನಡುವಿನ ಪುತ್ರನು ಮಾರಿಯ ಕಂಡ
ಒಡೆಯಗ ಮಾಡಿದಾ ದೀರ್ಘದಂಡ
ಬಿಡದೆ ಕಣ್ಣೀರು ಉದರಿಸಿಕೊಂಡ
ಬಡಕೊಂಬುವ ತಾಯಿಯ ಕೈಯ ಹಿಡಕೊಂಡ         ೧೭೪

ಚಿಕ್ಕಮಕ್ಕಳ ದುಃಖ ಹೇಳಲಿನ್ನೆಷ್ಟು
ಮಕ್ಕಳೆಲ್ಲರನು ಕಳುಹಿ ತಾ ಕೊಟ್ಟು
ಮಕ್ಕಳೊಳಗೆ ಶಿವಬಸಪ್ಪನು ಶ್ರೇಷ್ಠ
ಚಕ್ಕನೆ ಮಲ್ಲೇಂದ್ರಗೆ ಮಣ್ಣಾವ ಕೊಟ್ಟ         ೧೭೫

ಆಕಳ ನೂರೊಂದು ದಾನವ ಕೊಟ್ಟ
ಮಕ್ಕಳ ರಮಸಾಕ ಅರಮನೆಗೆ ಹೊಂಟ
ಚಿಕ್ಕ ತಮ್ಮಗೋಳ ಕೈಯಲಿ ಕೊಟ್ಟ
ದುಕ್ಕ ಸೈರಿಸು ಬಾಪುಸಾಹೇಬ ಅಷ್ಟ         ೧೭೬

ಹರಹರ ಎನ್ನುತಲಿ ಹರಸಿದರಾಗ
ಹರನೊಳು ಮಲ್ಲೇಂದ್ರ ಬೆರೆದನು ಬೇಗ
ದೊರೆಯು ಮಲ್ಲೇಂದ್ರ ಮರಣಾದನು ಹೀಗ
ಗುರು ಶಾಂತವೀರಣ್ಣ ಹೇಳಿದನೀಗ ೧೭೭