ಒಂದಾನೊಂದು ಕಾಲದಲ್ಲಿ
ಒಂದು ಹುಲ್ಲುಗಾವಲಿನಲ್ಲಿ
ಒಂದು ಮಹಾ ಪುಕ್ಕಲಾದ ಪುಟಾಣಿ ಹುಳುವಿತ್ತು.
ವಿಸ್ತಾರವಾದ ಈ ಜಗತ್ತಿನಲ್ಲಿ
ಬಹುಶಃ ಇದ್ದಿರಲಾರದು ಇದಕ್ಕಿಂತಲೂ
ಸಣ್ಣ ಪ್ರಾಣಿ.
ಈ ಕ್ಷುದ್ರ ಕೀಟಕ್ಕೆ ಗಾಳಿ ಎಂದರೇ ಭಯ
ಆದ್ದರಿಂದ ಏನು ಮಾಡಿತು ಅಂದರೆ.
ಬೆವರು ಸುರಿಸುತ್ತ, ತೇಕುತ್ತಾ ತೋಡಿಯೇ ತೋಡಿತು
ಒಂದು ಪುಟ್ಟ ಬಿಲವನ್ನು
ಈ ಕೆಲಸಕ್ಕೆ ಅದು ತೆಗೆದುಕೊಂಡದ್ದು
ಇಡೀ ಒಂದು ವರ್ಷವನ್ನು!

ಒಂದು ದಿನ ಈ ಪುಟ್ಟ ಹುಳು ಈ ಬಿಲದೊಳಗೆ
ಹಾಯಾಗಿ ಕವುಚಿಕೊಂಡು ಮಲಗಿರುವಾಗ,
ಅದೆಲ್ಲಿಂದಲೋ ಮಂದವಾದ, ತೀರಾ ಮಂದವಾದ
ಜಗತ್ತಿನಲ್ಲಿಯೇ ಅತ್ಯಂತ ಮಂದವಾದ
ಗಾಳಿಯೊಂದು ಬೀಸಿ, ಒಂದೇ ಒಂದು ಸಣ್ಣ
ಧೂಳಿನ ಚೂರು ಬಿಲದೊಳಗೆ ಬಿತ್ತು.
ಜಗತ್ತಿನಲ್ಲೇ ಅತ್ಯಂತ ಚಿಕ್ಕದಾದ ಈ
ಪುಕ್ಕಲು ಹುಳು, ಜಗತ್ತಿನಲ್ಲೇ ಯಾರೂ
ಕೇಳಲಾರದಷ್ಟು ಯಾತನೆಯಿಂದ ಸಣ್ಣಗೆ ನರಳಿ
ಸತ್ತೇ ಹೋಯಿತು!

– ಅಮಾನೊತದಾಕ್ಷಿ (ಜಪಾನ್)