ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ‘ಉಷಾಕಿರಣ’ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಆ ಲೇಖನಗಳ ಜೊತೆಯಲ್ಲಿ ನಾನು ಹಲವೆಡೆ ಮಾಡಿದ ಉಪನ್ಯಾಸಗಳನ್ನು ಜೋಡಿಸಲಾಗಿದೆ. ಲೇಖನಗಳನ್ನು ಪ್ರಕಟಿಸಿದ ‘ಉಷಾಕಿರಣ’ದ ಸಂಪಾದಕರಿಗೂ ಇದನ್ನು ಓದಿ ಮೆಚ್ಚಿ ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದ ಓದುಗರಿಗೂ ಕೃತಜ್ಞತೆಗಳು.

ಕನ್ನಡ ವಿಶ್ವವಿದ್ಯಾಲಯ ನಾನು ಸಾಕ್ಷಾತ್ಕರಿಸಿದ ಒಂದು ಮೂರ್ತರೂಪ. ಎಪ್ಪತ್ತರ ದಶಕದಲ್ಲಿ ಹಂಪಿಯ ಸ್ಥಿತಿಯನ್ನು ಕಂಡು ಮರುಗಿದ ನಾನು ಎಂಬತ್ತರ ದಶಕದಲ್ಲಿ ‘ಹಂಪಿ ಪುನರುತ್ಥಾನ’ ಸಮಿತಿಯನ್ನು ರಚಿಸಲು ಕಾರಣಕರ್ತನಾದೆ. ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯದಿಂದ ಹಲವಾರು ಉತ್ಖನನ ಪ್ರಕ್ರಿಯೆಗಳನ್ನು ಕೈಗೊಂಡುದಲ್ಲದೆ, ಹಂಪಿಯನ್ನು ಉತ್ತಮ ಪ್ರವಾಸೀ ಕೇಂದ್ರವನ್ನಾಗಿ ರೂಪಿಸಿತು. ಕ್ರಮೇಣ ಯುನೆಸ್ಕೋ ಅದ್ಭುತ ಪವಾಡ ಸದೃಶ ಎಂಬಂತೆ ಈ ಪ್ರದೇಶವನ್ನು ‘ವಿಶ್ವಪರಂಪರೆ’ (World Heritage) ಯನ್ನಾಗಿ ಘೋಷಿಸಿತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ವೈಭವದ ಮಹಾ ಸಂಕೇತವಾದ ಹಂಪಿಯಲ್ಲಿ ವಿಶಿಷ್ಟ ರೀತಿಯ ವಿಶ್ವವಿದ್ಯಾಲಯ ರೂಪುಗೊಳ್ಳಬೇಕೆಂಬುದು ನನ್ನ ಕನಸಾಗಿತ್ತು. ಆ ಕನಸಿನ ಅನೇಕ ಗರಿಗಳು ಒಂದೊಂದಾಗಿ ಮೂಡಿ ಬರಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲ್ಬುರ್ಗಿ, ಡಾ. ಎಚ್.ಜೆ. ಲಕ್ಕಪ್ಪಗೌಡ ಮತ್ತು ಈಗಿರುವ ಡಾ. ಬಿ.ಎ. ವಿವೇಕ ರೈಯವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಜೊತೆ ಜೊತೆಯಲ್ಲಿ ದುಡಿದ ಮತ್ತು ದುಡಿಯುತ್ತಿರುವ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರ ಕೊಡುಗೆ ಗಣನೀಯ. ಇನ್ನೂ ಹಲವಾರು ಗರಿಗಳು ಮುಂದೆ ಕೂಡ ಮೂಡಬೇಕು. ಇದೊಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿ, ಬೆಳೆದು ನಿಲ್ಲಬೇಕು. ಜಗತ್ತಿನ ಸಾಂಸ್ಕೃತಿಕ ಮೇರು ಸಂಸ್ಥೆಯಾಗಿ ಬೆಳೆಯಬೇಕು. ಆಗ ಮಾತ್ರ ನನ್ನ ಕನಸು ಪೂರ್ಣವಾಗಿ ಸಾಕಾರವಾಗಲು ಸಾಧ್ಯವಿದೆ.

ಭಾರತ ನೆಚ್ಚಿ ಬಂದ ಮೌಲ್ಯಗಳು ಇಂದು ಸಂಕುಚಿತ ಸಾಂಪ್ರದಾಯಿಕ ವ್ಯಾಖ್ಯಾನಗಳಾಗಿ ಅಪವ್ಯಯಗೊಳ್ಳುತ್ತಿದೆ. ಇತಿಹಾಸಕಾರರೆಂದು ಕರೆದುಕೊಳ್ಳುವ ಕೆಲವರು ತಮ್ಮ ಮತೀಯ ಮತ್ತು ಜಾತೀಯ ಒಲವುಗಳಿಂದಾಗಿ ಆ ಪ್ರಾಚೀನ ಮೌಲ್ಯಗಳನ್ನು ಮಲಿನಗೊಳಿಸುತ್ತಿದ್ದಾರೆ. ಇವುಗಳ ಬಗ್ಗೆ ಅತಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಮಾಧ್ಯಮಿಕ ಹಂತದ ಪಠ್ಯಪುಸ್ತಕವೊಂದರ ಪುಟಗಳ ಮೇಲೆ ನಾನು ಇತ್ತೀಚೆಗೆ ಕಣ್ಣು ಹಾಯಿಸಿದಾಗ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಹುತಾತ್ಮರನ್ನು ರಾಷ್ಟ್ರದ್ರೋಹಿಗಳೆಂದು ಚಿತ್ರಿಸಲಾಗಿತ್ತು. ಎಳೆಮಕ್ಕಳ ಮನಸ್ಸಿನಲ್ಲಿ ದುಷ್ಪರಿಣಾಮ ಮಾಡುವ ಇಂತಹ ಪಠ್ಯಪುಸ್ತಕಗಳ ಬಗ್ಗೆ ಏನನ್ನಬೇಕೋ? ಸರಕಾರ ಕೂಡಲೇ ಇದರ ಬಗ್ಗೆ ಗಮನಹರಿಸಿ ಸರಿಪಡಿಸಬೇಕಾಗಿದೆ.

ಸಂಪ್ರದಾಯಗಳ ಪಂಜರಗಳಲ್ಲಿ ಭಾರತೀಯರನ್ನು ಮತ್ತೆ ತಳ್ಳುವ ಪ್ರಯತ್ನಗಳಿಗೆ ಕಡಿಮೆಯಿಲ್ಲ. ಓರ್ವ ಮಠಾಧೀಶರೊಬ್ಬರು “ಏಕಲವ್ಯ ಮಹಾದುಷ್ಟ, ಕಾರಣ ಅವನು ಜರಾಸಂಧನ ಜೊತೆ ಸೇರಿ ಕೃಷ್ಣನ ವಿರುದ್ಧ ಸಮರ ಮಾಡಿದ” ಎನ್ನುವಷ್ಟರ ಮಟ್ಟಿಗೆ ತಮ್ಮ ಧಾರ್ಷ್ಟ್ಯವನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಹತ್ತು ಹಲವಾರು ಘಟನೆಗಳನ್ನು ಗಮನಿಸಿದಾಗ ನಾವು ಬೌದ್ದಿಕ ಅಧೋಗತಿಯ ಕಡೆಗೆ ಸಾಗುತ್ತಿದ್ದೇವೆಯೋ ಎಂಬ ಅನುಮಾನ ಬರುತ್ತಿದೆ.

ನಾನು ಇತ್ತೀಚೆಗೆ ಥೈಲ್ಯಾಂಡಿನ ಬ್ಯಾಂಕ್‌ಕಿಗೆ ಹೋದಾಗ ಜಗತ್ತಿನಲ್ಲಿಯೇ ಅತಿ ಬೃಹತ್ತಾಗಿರುವ ಹೊಸ ವಿಮಾನ ನಿಲ್ದಾಣವನ್ನು ಕಂಡೆ. ಅಲ್ಲಿ ವಿಸ್ತಾರವಾದ ಒಂದು ಅಂತಸ್ತಿನಲ್ಲಿ ‘ಸಮುದ್ರ ಮಂಥನ’ದ ಬೃಹತ್ ಸ್ಥಿರ ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಅದೊಂದು ಪರಿವರ್ತನಾಶೀಲ ಮನೋಭೂಮಿಕೆಯನ್ನು ಸಾರುವ ಪ್ರತಿಮಾ ವಿಶೇಷ. ಬೌದ್ಧರೇ ಬಹುಮತೀಯರಿರುವ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಧರ್ಮದ ಸಂಕೇತ ನಿಂತಿರುವುದು ಅವರ ಔದಾರ್ಯ, ಸಹನೆ ಮತ್ತು ಪರಿವರ್ತನಾಶೀಲತೆಗೆ ಸಾಕ್ಷಿಯಾಗಿದೆ. ಆ ಹಂತವನ್ನು ನಮ್ಮ ಭಾರತ ಎಂದು ತಲುಪುವುದೋ ಕಾದು ನೋಡಬೇಕಾಗಿದೆ!

ಜಾತಿ-ಮತಗಳ ತಿಕ್ಕಾಟ ಎಂದಿಗಿಂತಲೂ ಇಂದು ಹೆಚ್ಚಾಗಿದೆ. ದೇಶದ ಸಭ್ಯತೆಯ ಮೇಲಿನ ದಾಳಿಯ ನೋವಿನಿಂದ ಒನ ಬೊಬ್ಬಿಟ್ಟರೂ ಕೆಲವರಿಗೆ ನಗುವ ಪರಿಪಾಠ ಹೆಚ್ಚಾಗಿದೆ.

“ಪಂಥಾಭಿಮಾನ, ಮತಾಂಧತೆ, ಧರ್ಮದ ಅಂಧಶ್ರದ್ಧೆ ಇವು ಭಯಂಕರ ರಾಕ್ಷಸರು-ಇವೇ ಜನತೆ ಹಾಗೂ ನಾಗರಿಕತೆಯ ಅಧಃಪತನ, ನಾಶ ಹಾಗೂ ನರಳಾಟಕ್ಕೆ ಮೂಲಭೂತ ಕಾರಣವಾಗಿದೆ. ಹಿಂದೂಧರ್ಮ ಹೋರಾಟದಿಂದ ರೂಪಿತಗೊಂಡುದಲ್ಲ. ಇದು ಯಾವುದೇ  ಸಿದ್ಧಾಂತ ಅಥವಾ ತತ್ವವನ್ನು ನಂಬಲು ಒತ್ತಾಯಿಸುವುದಿಲ್ಲ. ಆದರೆ ಯಾವುದನ್ನೂ ಪ್ರಶ್ನಿಸದೇ ಸುಮ್ಮನೆ ನಂಬುವಂತೆ ಅರ್ಥಮಾಡಿಕೊಳ್ಳುವಂತೆ ಹಾಗೂ ತಾದಾತ್ಮ್ಯತೆ ಬೆಳೆಸಿಕೊಂಡು ಅದರಲ್ಲಿ ಐಕ್ಯವಾಗುವಂತೆ ಈಗ ಧರ್ಮದ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ. ಮೂಢನಂಬಿಕೆ ಮನುಷ್ಯನ ದೊಡ್ಡ ವೈರಿಯಾದರೆ ಮತಾಭಿಮಾನ ಅದಕ್ಕಿಂತಲೂ ಹೇಯವಾದುದು. ಮನುಷ್ಯನ ದೇಹಕ್ಕೆ ಎರಡು ಕಣ್ಣುಗಳಿರುವಂತೆ ಅವನ ಧರ್ಮಕ್ಕಿರುವ ಎರಡು ಕಣ್ಣುಗಳು ಅಹಿಂಸೆ ಮತ್ತು ಸತ್ಯ” – ಸ್ವಾಮಿ ವಿವೇಕಾನಂದರ ಸಂದೇಶ. ಮತದ ಹೆಸರಿನಲ್ಲಿ ನಾವಿಂದೇನು ಮಾಡುತ್ತೇವೆ ಎಂಬುದನ್ನು ಆತ್ಮವಿಮರ್ಶೆ ಮಾಡಬೇಕು.

ಶ್ರವಣಬೆಳಗೊಳದ ದೊಡ್ಡ ಬೆಟ್ಟ ಪ್ರಕೃತಿ. ಅದರ ಶಿಖರದ ಗೊಮ್ಮಟಮೂರ್ತಿ ಸಂಸ್ಕೃತಿ; ಕಾವೇರಿ ಪ್ರಕೃತಿ, ಅದರ ಇಕ್ಕೆಲದ ಗದ್ದೆ, ತೋಟಗಳು, ಬತ್ತದ ಕಾಳು ಅದರ ಸಂಸ್ಕೃತಿ.

ಗೋವಿನ ಕಥೆ : ಹುಲಿ ಆಕಳನ್ನು ತಿನ್ನುವುದು ಪ್ರಕೃತಿ, ಆಕಳಿನ ಸತ್ಯವನ್ನು ಹುಲಿ ಮೆಚ್ಚಿದ್ದು ಸಂಸ್ಕೃತಿ, ಗೋವು ತನ್ನ ಕರುವಿನ ವಿಷಯ ಹೇಳಿದ್ದು ಸಂಸ್ಕೃತಿ ಒಟ್ಟಿನಲ್ಲಿ ಪುಣ್ಯಕೋಟಿಯ ಕಥೆಯಲ್ಲಿರುವುದು ಭಾರತೀಯ ಸಂಸ್ಕೃತಿ.

ಪ್ರಕೃತಿಯಲ್ಲಿರುವುದೆಲ್ಲಾ ಮನುಷ್ಯನಲ್ಲಿದೆ. ಅದರ ಜೊತೆಗೆ ಇತರ ಸೃಷ್ಟಿಯಲ್ಲಿ ಕಾಣಲಾರದ ಹೆಚ್ಚಿನ ಶಕ್ತಿಯೂ ಮನುಷ್ಯನಲ್ಲಿದೆ. ಆ ವಿಶೇಷ ಶಕ್ತಿಯೇ ಅವನ ಶುಭ ಪ್ರತೀಕ್ಷೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ಎಲ್ಲಾ ಕಾಲದಲ್ಲೂ ಅತಿ ಸ್ನೇಹಿತರಾಗಿರ ಲಾಗದು. ಅದೇ ಮನುಷ್ಯ ಈ ಮಿತಿಯನ್ನು ದಾಟಿ ಮುಂದಕ್ಕೆ ಹೋಗದಿದ್ದಲ್ಲಿ ಆಕೆಗೆ ಗುಲಾಮನಾದಾನು. ಪ್ರಕೃತಿ-\ಗುಣಸ್ವರೂಪಿ; ಅದೆಂದರೆ : ಸತ್ತ್ವ, ರಜಸ್ಸು ಹಾಗೂ ತಮಸ್ಸು.

ನಮ್ಮ ಮನದಲ್ಲಿ ಹರಿಯುತ್ತಿರುವ ಅಮೆಜಾನ್ ನದಿ ಅಥವಾ ನಯಗರಾ ಜಲಪಾತದ ಅರಿವು ನಮಗಿಲ್ಲ. ವಸಂತವು ಬಂದಾಗ ಕೋಗಿಲೆಯು ಕೂಗುವುದು. ಶ್ರಾವಣ ಬರುವಾಗ ನವಿಲು ಕುಣಿಯುವುದು, ಹೂವು ಅರಳಿದಾಗ ದುಂಬಿಯು ಹಾಡುವುದು, ಪ್ರಜಾರಾಜ್ಯ ಬಂದಾಗ ಬಡವ ಬಲ್ಲಿದನಾಗುವುದು ಸಹಜ. ಇಂತಹ ಸಹಜತೆಗೆ ವಿರುದ್ಧವಾದಾಗ ಕ್ರೌರ್ಯ ತಾಂಡವವಾಡುತ್ತದೆ.

ಕುರುಕ್ಷೇತ್ರ ಯುದ್ಧವನ್ನು ತನ್ನ ವೈಯಕ್ತಿಕ ಸಮಸ್ಯೆ ಎಂದು ಭಾವಿಸುವವರೆಗೂ ಅರ್ಜುನನಿಗೆ ತನ್ನ ಸಮಸ್ಯೆಗೆ ಉತ್ತರ ಸಿಗುವುದಿಲ್ಲ. ಇಂತಹ ಯುದ್ಧಕ್ಕೆ ಎಲ್ಲರೂ ಸಾಮೂಹಿಕವಾಗಿ ಬಾಧ್ಯಸ್ತರೆಂದು ಅರ್ಜುನನಿಗೆ ಅರಿವಾಗುತ್ತಿದ್ದಂತೆ ಅವನ ಸಮಸ್ಯೆ ಸೂರ್ಯನ ಎದುರಿನ ಮೋಡದಂತೆ ಕರಗಿಹೋಯಿತು. ನಾವೆಲ್ಲರೂ ಜೀವನವೆಂಬ ಕುರುಕ್ಷೇತ್ರದ ಯುದ್ಧ ಭೂಮಿಯ ಮೇಲೆ ನಿಂತಿರುವ ಅರ್ಜುನರು ಎಂಬುದನ್ನು ಆಗಾಗ್ಯೆ ನೆನಪಿಸಿಕೊಳ್ಳಬೇಕು.

ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಗ್ರಂಥದ ಮುದ್ರಣದ ಜವಾಬ್ದಾರಿಯನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.

ಇಲ್ಲಿನ ಕೆಲವು ಲೇಖನಗಳಲ್ಲಿ ನನ್ನ ಈ ಚಿಂತನೆಗಳನ್ನು ಕ್ರೋಡೀಕರಿಸಲು ಪ್ರಯತ್ನಿಸಿದ್ದೇನೆ. ಸಹೃದಯರು ಪ್ರೀತಿಯಿಂದ ಸ್ವೀಕರಿಸುವರೆಂಬುದು ನನ್ನ ನಂಬುಗೆ.

ಎಂ. ವೀರಪ್ಪ ಮೊಯಿಲಿ
“ಕೌಸ್ತುಭ”
ಬೆಂಗಳೂರು