ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ದಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ದಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯಕ್ಷೇತ್ರದಲ್ಲಿ ಸಮಾನ ಆಸಕ್ತಿ ಮತ್ತು ಪರಿಶ್ರಮವುಳ್ಳ ಹಿರಿಯ ಮುತ್ಸದ್ದಿಗಳಾದ ಶ್ರೀ ಎಂ. ವೀರಪ್ಪ ಮೊಯಿಲಿ ಅವರ ಸಂಸ್ಕೃತಿ ಚಿಂತನೆಯ ೬೫ ಲೇಖನಗಳ ಸಂಕಲನ ಕಿರುದಾರಿಹೆದ್ದಾರಿಯನ್ನು ಪ್ರಕಟಿಸಲು ಕನ್ನಡ ವಿಶ್ವವಿದ್ಯಾಲಯ ಅಭಿಮಾನಪಡುತ್ತದೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸ್ಥಾಪನೆಯಲ್ಲಿ ಮುಖ್ಯರಾದವರೂ ಕನ್ನಡ ಸಂಸ್ಕೃತಿಯ ಮಹತ್ವದ ಚಿಂತಕರೂ ಆಗಿರುವ ಶ್ರೀ ಎಂ. ವೀರಪ್ಪ ಮೊಯಿಲಿ ಅವರು ತಮ್ಮ ಜನಪರ ಸಾಮಾಜಿಕ ಕಾಳಜಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಮೂಲಕ ನಿರಂತರ ಕ್ರಿಯಾಶೀಲರಾಗಿರುವವರು. ಸಾಹಿತಿಯಾಗಿ ಅವರ ಸಾಗರ ದೀಪ, ಕೊಟ್ಟ ಮತ್ತು ತೆಂಬರೆ ಕಾದಂಬರಿಗಳು ಹಾಗೂ ಶ್ರೀರಾಮಾಯಣ ಮಹಾನ್ವೇಷಣಂ ಮಹಾಕಾವ್ಯದಂತಹ ಕೃತಿಗಳು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ವಿಶಿಷ್ಟವಾದ ಪ್ರಭಾವವನ್ನು ಬೀರಿವೆ. ಜನಪರ ಧೋರಣೆಯನ್ನು ತನ್ನ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಿಸಿರುವ ಶ್ರೀಮೊಯಿಲಿ ಅವರು ಈ ಸಂಕಲನದ ಲೇಖನಗಳಲ್ಲಿ ಅವುಗಳಿಗೆ ಬದ್ಧತೆಯ ಆಕಾರಗಳನ್ನು ಕೊಟ್ಟಿದ್ದಾರೆ. ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ, ಇತಿಹಾಸ, ರಾಜಕೀಯ, ಆರ್ಥಿಕ ವ್ಯವಸ್ಥೆ, ಆಡಳಿತ ಸುಧಾರಣೆ, ನ್ಯಾಯಾಂಗ, ಗ್ರಾಮೀಣಾಭಿವೃದ್ದಿ, ಧರ್ಮ, ತತ್ತ್ವಶಾಸ್ತ್ರದ ವಿಷಯ ಗಳಿಗೆ ಸಂಬಂಧಿಸಿದ ಇಲ್ಲಿನ ಲೇಖನಗಳು, ವಿಷಯ ವೈವಿಧ್ಯ, ಬದ್ಧತೆ ಮತ್ತು ಸ್ಪಷ್ಟ ದಾರ್ಶನಿಕ ದೃಷ್ಟಿಕೋನಗಳಿಂದ ಕರ್ನಾಟಕದ ಸಾಂಸ್ಕೃತಿಕ ಚಿಂತನೆಗೆ ಮುಖ್ಯ ಕೊಡುಗೆ ಗಳಾಗಿವೆ. ಶ್ರೀ ಮೊಯಿಲಿ ಅವರ ಅಪಾರವಾದ ಅಧ್ಯಯನ, ವಿಸ್ತಾರವಾದ ಅನುಭವ, ಆಳವಾದ ಚಿಂತನೆ ಮತ್ತು ಬದ್ಧತೆಯ ನಿಲುವು­-ಇವು ಇಲ್ಲಿನ ಎಲ್ಲಾ ಲೇಖನಗಳಲ್ಲಿ ವಜ್ರದಷ್ಟು ಸ್ಪಷ್ಟವಾಗಿವೆ ಮತ್ತು ಗಟ್ಟಿಯಾಗಿವೆ. ಕನ್ನಡ ವಿಶ್ವವಿದ್ಯಾಲಯವನ್ನು ವಿಶೇಷವಾಗಿ ಪ್ರೀತಿಸುವ ಶ್ರೀ ಎಂ. ವೀರಪ್ಪ ಮೊಯಿಲಿ ಅವರು ತಮ್ಮ ಚಿಂತನೆಯ ಲೇಖನಗಳ ಸಂಕಲನ ವನ್ನು ಪ್ರಕಟಿಸಲು ಒಪ್ಪಿಕೊಂಡಿರುವುದಕ್ಕಾಗಿ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.. ವಿವೇಕ ರೈ
ಕುಲಪತಿ