ಕೇಂದ್ರ ರಾಜ್ಯ ಮತ್ತು ಅನುದಾನೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಬಗ್ಗೆ ಸಾಕಷ್ಟು ಜಿಜ್ಞಾಸೆ ತಲೆದೋರಿದೆ. ಅವುಗಳ ಜೊತೆಯಲ್ಲಿ ವಿಕಲ್ಪತೆಗಳು, ಅಪಾರ್ಥಗಳು ಸೇರಿಕೊಂಡು ಒಂದು ರೀತಿಯ ಪರಸ್ಪರ ಅವಿಶ್ವಾಸದ ಮತ್ತು ಭಿನ್ನಾಭಿಪ್ರಾಯದ ವಾತಾವರಣ ಉದ್ಭವಿಸಿವೆ.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕೂಡ ಸುಮಾರು ೩-೪ ದಶಕಗಳಿಂದ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಮತ್ತು ಸರ್ಕಾರೇತರ (ಅನುದಾನೇತರ) ಸಂಸ್ಥೆಗಳಲ್ಲಿ, ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ಸಂಸ್ಥೆಗಳಲ್ಲಿ ಮೀಸಲಾತಿ ಸುಗಮವಾಗಿ ನಡೆದುಕೊಂಡೇ ಬಂದಿದೆ. ಇದರಿಂದಾಗಿ ಯಾವುದೇ ಜಾತಿ ವೈಷಮ್ಯ ಅಥವಾ ಜಾತಿಯ ಅಂತರ್‌ಕಲಹ ತಲೆದೋರಿರಲಿಲ್ಲ. ಪ್ರತಿಭಾ ಕ್ಷೇತ್ರ ಇದರಿಂದ ವಿಸ್ತಾರವಾಗಿದೆಯೇ ಹೊರತು ಸಂಕುಚಿತವಾದ ಪ್ರಸಂಗಗಳಿಲ್ಲ. ಅಲ್ಲದೆ ಇಡೀ ರಾಷ್ಟ್ರದ ಒಟ್ಟು ಉತ್ಪನ್ನದಲ್ಲಿ ದಕ್ಷಿಣ ಭಾರತದ ಕೊಡುಗೆ ಸಿಂಹಪಾಲು.

ಮಂಡಲ್ ಮೀಸಲಾತಿ ವಿವಾದದಲ್ಲಿ ಅಂದಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಪಿ.ಬಿ. ಸಾವಂತ್ ಅವರು ಈ ಕೆಳಕಂಡಂತೆ ಉದ್ಗರಿಸಿದ್ದಾರೆ. “ಪ್ರತಿಭೆ ಇಲ್ಲದ ವಿದ್ಯಾರ್ಥಿಗಳು ಮೀಸಲಾತಿಯ ಮೂಲಕ ಶಿಕ್ಷಣ ಸಂಸ್ಥೆಗಳಿಗೆ ನುಗ್ಗಿದ್ದಾ ರೆಂಬುದು ವಾಸ್ತವಿಕವಾದ ಸತ್ಯವಲ್ಲ. ಯಾವುದೇ ಉನ್ನತ ಸಂಸ್ಥೆಗಳಿಗೆ ವಿದ್ಯಾರ್ಥಿ ಪ್ರವೇಶ ಪಡೆಯಬೇಕಾದಲ್ಲಿ ಎಲ್ಲರಿಗೂ (ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗ) ಕನಿಷ್ಠ ಗುಣಾಂಕಗಳನ್ನು ಗಳಿಸಬೇಕೆಂಬ ನಿಯಮಗಳಿವೆ. ಇದು ಉದ್ಯೋಗ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಕ್ಕೆ ಹಿಂದುಳಿದ ವರ್ಗದ ವಿದ್ಯಾರ್ಥಿ ಗಳು/ಅಭ್ಯರ್ಥಿಗಳು ಸೇರಬೇಕಾದರೆ ತೀವ್ರವಾದ ಸ್ಪರ್ಧೆಯಿದೆ. ಅಂತಹ ಸಂದರ್ಭದಲ್ಲಿ ಜನರಲ್ ಕೋಟಾ (ಸಾಮಾನ್ಯ) ವಿದ್ಯಾರ್ಥಿಗಳಿಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಗುಣಾಂಕಗಳ ಅಂತರ ಅತ್ಯಂತ ಕಡಿಮೆ ಇರುತ್ತದೆ. ಇದು ಸಮೀಕ್ಷೆಯಿಂದ ತಿಳಿದುಬಂದಿದೆ”.

ಈ ಬಗ್ಗೆ ನಡೆದ ಜಸ್ಟೀಸ್ ಪಿ.ಬಿ. ಸಾವಂತ್ ಅವರ ತೀರ್ಪಿಗೆ ಪುಷ್ಟಿಕರವಾಗಿ ಅಕ್ಟೋಬರ್ ೭, ೧೯೯೦ರಲ್ಲಿ ಹಿಂದೂ ಪತ್ರಿಕೆಯಲ್ಲಿ ಬಂದ ತಮಿಳುನಾಡು ಸಮೀಕ್ಷೆಯಲ್ಲಿ ದೊರಕಿದ ವಿವರಗಳು ಈ ಮೇಲೆ ಕಾಣಿಸಿದಂತಿದೆ.

ಜಸ್ಟೀಸ್ ಪಿ.ಬಿ. ಸಾವಂತ್ ಅವರೇ ಹೇಳಿದಂತೆ ಮಂಡಲ್ ಮೀಸಲಾತಿ ರಾಜ್ಯ (ಎ.ಎ.ಆರ್. ೧೯೯೩ ಎಸ್.ಸಿ. ಪ್ಯಾರಾ ೩೭೯) ಯಾವ ತರ್ಕದಿಂದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಲ್ಲಿ ಕಡಿಮೆಯಿದೆ? ತಮಿಳುನಾಡಿನ ಮೆಡಿಕಲ್ ಕಾಲೇಜ್‌ನಲ್ಲಿ ಕೂಡ ೨೦೦೫ರ ಮಾಹಿತಿ ಈ ಕೆಳಗೆ ನಮೂದಿಸಿದಂತಿದೆ.

ಎಂ.ಬಿ.ಬಿ.ಎಸ್.

 

.ಸಿ. ಬಿ.ಸಿ. ಎಂ.ಬಿ.ಸಿ.
೨೯೪.೮೩ ೨೯೪.೫೯ ೨೯೨.೫೦

ಕಾಕತೀಯ ವಿಶ್ವವಿದ್ಯಾಲಯದ ಡಾ. ಪರಮಾಜಿಯವರ ಸಮೀಕ್ಷೆಯ ಪ್ರಕಾರ ವೃತ್ತಿಪರ ಕಾಲೇಜಿಗೆ ಸೇರಿದ ಮೀಸಲಾತಿ ಹುಡುಗರು ಎಲ್ಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಮುಂದುವರಿದ ಅಥವಾ ಜನರಲ್ ಕೋಟಾಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಪ್ರತಿಭೆಯಲ್ಲಿ ಮೀರಿಸಿದ ವಿಚಾರ ತಿಳಿದುಬಂದಿದೆ.

ತಮಿಳುನಾಡಿನ ಅಣ್ಣಾವಿಶ್ವವಿದ್ಯಾಲಯ, ಭಾರತೀದಾಸನ್ ವಿಶ್ವವಿದ್ಯಾಲಯ, ತಿರುಚ್ಚಿ ವಿಶ್ವವಿದ್ಯಾಲಯಗಳಲ್ಲದೆ ಆಂಧ್ರದ ಉಸ್ಮಾನಿಯಾ ವಿಶ್ವವಿದ್ಯಾಲಯಗಳಲ್ಲೂ ಕೂಡ ಹಿಂದುಳಿದ ವರ್ಗ ಅಥವಾ ಪರಿಶಿಷ್ಟವರ್ಗ, ಜನಾಂಗದವರ ವಿಶ್ವವಿದ್ಯಾಲಯಗಳ ಸೇರ್ಪಡೆಯ ಅನಂತರ ಪ್ರತಿಭೆಯ ಹಿನ್ನಡೆಯಾಗಿದೆ ಎಂಬ ಬಗ್ಗೆ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಜಗತ್ತಿನ ಅಥವಾ ರಾಷ್ಟ್ರದ ಯಾವುದೇ ಎಂಜಿನಿಯರ್‌ಗಳು ಅಥವಾ ವಿಜ್ಞಾನಿಗಳು ಅಥವಾ ವೈದ್ಯರು ಅಥವಾ ವೃತ್ತಿಪರರು ಶ್ರೀಮಂತ ವರ್ಗದಿಂದಲೇ ಬರಬೇಕೆಂಬುದೇ ಜಗತ್ತಿನ ಅಥವಾ ರಾಷ್ಟ್ರದ ಒಟ್ಟು ಪ್ರಗತಿಯ ದೃಷ್ಟಿಯಿಂದ ಅನಿವಾರ‍್ಯವೆಂಬುದಕ್ಕೆ ಯಾವ ಸೈದ್ಧಾಂತಿಕ ಅಥವಾ ವೈಜ್ಞಾನಿಕ ಆಧಾರವಿಲ್ಲ.

ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳು ಯಾವುದೇ ರಾಷ್ಟ್ರದ ಪ್ರಗತಿಗೆ ಎಲ್ಲ ವರ್ಗದವರನ್ನು ಒಳಗೊಳ್ಳುವುದು ಅನಿವಾರ‍್ಯವೆಂದು ವಾದ ಮಾಡುತ್ತಿರುವಾಗ ಭಾರತದ ಉದ್ಯಮಪತಿಗಳು ಮತ್ತು ಬುದ್ದಿವಂತರೆಂದು ಹೇಳಿಕೊಳ್ಳುವ ಕೆಲವೇ ವರ್ಗದವರು ಇಂತಹ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ತೀವ್ರ ವಿರೋಧ ಒಡ್ಡುತ್ತಿರುವುದು ಪ್ರಜಾಪ್ರಭುತ್ವ ದಲ್ಲಿ ಒಂದು ವಿರೋಧಾಭಾಸವೇ ಸರಿ. ಅತ್ಯಂತ ಶ್ರೀಮಂತ ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯಂತಹ ಸಂಸ್ಥೆ ಕೂಡ ಅಲ್ಪಸಂಖ್ಯಾತ ವೈವಿಧ್ಯಮಯ ಗುಂಪುಗಳನ್ನು ರಚಿಸಿ ಜನಾಂಗೀಯ ಮತ್ತು ಕಪ್ಪು ಜನರನ್ನು ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯಲ್ಲಿ ತೊಡಗಿಸಿ ಅದರ ಸಂಸ್ಥೆಗಳಲ್ಲಿ ಸೇರಿಸಿಕೊಳ್ಳುವ ಪ್ರಗತಿಪರ ಧೋರಣೆಯನ್ನು ಅನುಸರಿಸುತ್ತಿದೆ.

ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಯ ರಾಷ್ಟ್ರವೆಂದು ಹೇಳಿಕೊಳ್ಳುತ್ತಿರುವ ಭಾರತೀಯರಿಗೆ ಇದು ತಲೆತಗ್ಗಿಸಿಕೊಳ್ಳುವ ವಿಚಾರ.