ವೃತ್ತಿಪರ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದು ಮಾಡಿದ ತಮಿಳುನಾಡು ಸರ್ಕಾರದ ಆಜ್ಞೆಯನ್ನು ತಮಿಳುನಾಡು ಉಚ್ಚ ನ್ಯಾಯಾಲಯ ಅನೂರ್ಜಿತಗೊಳಿಸಿದೆ. ತಮಿಳುನಾಡು ಉಚ್ಚ ನ್ಯಾಯಾಲಯದ ಈ ತೀರ್ಪು ರಾಷ್ಟ್ರದಲ್ಲಿ ಬಿರುಸಿನಿಂದ ನಡೆಯುತ್ತಿರುವ ಸಾಮಾನ್ಯ ಪರೀಕ್ಷಾ ವಿಧಾನದ ರಾಷ್ಟ್ರೀಯ ಚರ್ಚೆಗೆ ತಾತ್ಕಾಲಿಕ ವಿರಾಮವನ್ನು ನೀಡಿದೆ. ಆದರೆ ಮುಂದೆ ಬರುವ ವರ್ಷದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಬಗ್ಗೆ ರಾಷ್ಟ್ರೀಯ ಸಂವಾದ ಇನ್ನೂ ಹೆಚ್ಚಿನ ಸಂಘರ್ಷದ ಸ್ವರೂಪವನ್ನು ಪಡೆಯುವುದರಲ್ಲಿ ಅನುಮಾನವಿಲ್ಲ.

ರಾಷ್ಟ್ರದ ಶ್ರೇಷ್ಠ ನ್ಯಾಯಾಲಯ ಅಕ್ಟೋಬರ್ ೨೦೦೨ರಲ್ಲಿ ನೀಡಿದ ತೀರ್ಪಿನಲ್ಲಿ ಕೂಡ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಎತ್ತಿಹಿಡಿದಿದ್ದಾರೆ. ಕ್ಯಾಪಿಟೇಶನ್ ಶುಲ್ಕ ಹೇರುವ ಖಾಸಗಿ ಸಂಸ್ಥೆಗಳ ಅಧಿಕಾರವನ್ನು ಕೂಡ ತಳ್ಳಿ ಹಾಕಿದೆ. ಅಲ್ಲದೆ ಖಾಸಗಿ ಸಂಸ್ಥೆಗಳು ಶಿಕ್ಷಣದ ವಿಚಾರದಲ್ಲಿ ಸಾರ್ವಜನಿಕ ದತ್ತಿ ಸಿದ್ಧಾಂತದ ಮೇಲೆ (charitable) ನಡೆಯ ಬೇಕೆಂದು ಕೂಡ ಆದೇಶಿಸಿರುತ್ತದೆ. ಭಾರತದ ಶ್ರೇಷ್ಠ ನ್ಯಾಯಾಲಯ ದೇಶದ ಮುಂದೆ ಬಗೆಹರಿಸದ ಪ್ರಶ್ನೆ – ಸರ್ಕಾರ ಮತ್ತು ಖಾಸಗಿ ಸಂಸ್ಥೆಯೊಳಗಿನ ಸೀಟುಗಳ ಪ್ರಮಾಣ, ಹೇರಬೇಕಾದ ಶುಲ್ಕದ ನಿಷ್ಕರ್ಷೆ ಮತ್ತು ಖಾಸಗಿಯವರ ಪಾಲಿಗೆ ಬಂದ ಸೀಟುಗಳನ್ನು ಹೇಗೆ ತುಂಬಿಸಬೇಕೆಂಬ ಪ್ರಶ್ನೆ! ಆದರೆ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಕೂಡ ಪ್ರತ್ಯೇಕ ಅಥವಾ ಒಂದೇ ಸ್ವರೂಪದ ಪ್ರವೇಶ ಪರೀಕ್ಷೆಯನ್ನು ನಡೆಸಿ ಪ್ರತಿಭೆಯನ್ನು ಕಡೆಗಣಿಸದಂತೆ, ಕ್ಯಾಪಿಟೇಶನ್ ಶುಲ್ಕವನ್ನು ಹೇರದಂತೆ ಸ್ಪಷ್ಟವಾದ ತೀರ್ಪನ್ನು ನೀಡಿದೆ. ಸೀಟುಗಳನ್ನು ಹಂಚುವ ವಿಚಾರದಲ್ಲಿ ಮತ್ತು ಟ್ಯೂಶನ್ ಫಿಸ್‌ನ್ನು ನಿಗದಿಗೊಳಿಸುವ ಬಗ್ಗೆ ಕೇಂದ್ರ ಸಾರ್ಕರದ ಶಾಸನವೇ ಸೂಕ್ತ ಪರಿಹಾರ. ಈ ಶಾಸನ ಅನುಷ್ಠಾನಕ್ಕೆ ಬರುವವರೆಗೆ ಈ ಕ್ಷೇತ್ರದಲ್ಲಿರುವ ಗೊಂದಲ ಪರಿಹಾರವಾಗುವುದು ಕಷ್ಟಸಾಧ್ಯವಾದ ವಿಚಾರ.

ಈ ಲೇಖನದ ಲೇಖಕರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸೃಜಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ರಾಷ್ಟ್ರದಲ್ಲಿ ಮೊಟ್ಟಮೊದಲನೆಯದಾಗಿ ಜಾರಿ ಮಾಡಿದ ರಾಜ್ಯ ಕರ್ನಾಟಕ ವಾಗಿತ್ತು. ಮೇಲಿನ ಪದ್ಧತಿಯನ್ನು ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಅನುಸರಿಸಿದವು ಮತ್ತು ಕರ್ನಾಟಕದ ಅನುಭವವನ್ನು ಅಧ್ಯಯನ ಮಾಡಿದ ಮೇಲೆ ಚೀನಾ ಕೂಡ ಅನುಸರಿಸಿತು. ಸಿ.ಇ.ಟಿ. ಪದ್ಧತಿಯು ೧೯೯೩ರಿಂದ ೨೦೦೨ರವರೆಗೆ ರಾಷ್ಟ್ರ ಮತ್ತು ಜನಸಮುದಾಯ ಒಪ್ಪಿಕೊಂಡ ಪಾರದರ್ಶಕ ಪದ್ಧತಿ. ಈ ಪದ್ಧತಿಯು ಖಾಸಗಿ ವೃತ್ತಿಪರ ಕಾಲೇಜುಗಳ ಪ್ರವೇಶಕ್ಕೆ ಮೂರು ನಿಯಮಗಳನ್ನು ವಿಧಿಸಿತ್ತು. ಅಂದರೆ “ಶುಲ್ಕರಹಿತ ಸ್ಥಾನಗಳು (ಶೇ. ೬೦) ಶುಲ್ಕಸಹಿತ ಸ್ಥಾನಗಳು (ಶೇ. ೨೫) ಮತ್ತು ಆಡಳಿತ ವರ್ಗದ ಸ್ಥಾನಗಳು (ಶೇ. ೧೫). ಬೇರೆ ಬೇರೆ ರಾಜ್ಯಗಳ ಮೀಸಲಾತಿ ನೀತಿಯನ್ನು ಕೂಡ ಈ ಪದ್ಧತಿಯೊಂದಿಗೆ ಅಳವಡಿಸಲಾಯಿತು. ಸಿ.ಇ.ಟಿ. ಪದ್ಧತಿಯು ದೇಶದಲ್ಲಿ, ಅದರಲ್ಲಿಯೂ ಕರ್ನಾಟಕ ರಾಜ್ಯದಲ್ಲಿ ಒಂದು ಸಾಮಾಜಿಕ ಮತ್ತು ಶಿಕ್ಷಣ ಕ್ರಾಂತಿಯ ನಾಂದಿ ಹಾಡಿತು. ಗ್ರಾಮೀಣ, ಕೊಳಚೆ ಪ್ರದೇಶಗಳಲ್ಲಿ ವಾಸಿಸುವ, ಮಧ್ಯಮವರ್ಗ ಅಥವಾ ತೀವ್ರ ತುಳಿತಕ್ಕೊಳ ಗಾಗಿರುವ ಸಮುದಾಯಗಳಿಂದ ಬಂದಂಥ ಮಕ್ಕಳು ಕೂಡ ಡಾಕ್ಟರ್‌ಗಳು ಮತ್ತು ಇಂಜಿನಿಯರ್‌ಗಳಾಗಿ ದೇಶದಲ್ಲಿ ಮತ್ತು ವಿದೇಶದಲ್ಲಿ ಲಾಭದಾಯಕವಾದ ಉದ್ಯೋಗವನ್ನು ಪಡೆಯಲು ಸಾಧ್ಯವಾಯಿತು. ಕರ್ನಾಟಕದ Information Technology ಜಗತ್ತಿನಲ್ಲೇ ಜಿಗಿತವನ್ನು ಮತ್ತು ಪರ್ಯಾಯ ಸಿಲಿಕಾನ್ ವ್ಯಾಲಿಯೆಂದು ಕೀರ್ತಿ ಪಡೆಯಲು ಈ ವೃತ್ತಿಪರ ಶಿಕ್ಷಣದ ಪುರೋಗಾಮೀ ನೀತಿ ಕಾರಣವಾಯಿತು.

ದುರದೃಷ್ಟವಶಾತ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರತಿನಿಧಿಸುತ್ತಿದ್ದ ನ್ಯಾಯವಾದಿಗಳು ಶ್ರೇಷ್ಠ ನ್ಯಾಯಾಲಯದ ಗಮನಕ್ಕೆ ಸರಿಯಾದ ಅಂಶಗಳನ್ನು ತಾರದೆ ಅಕ್ಟೋಬರ್ ೨೦೦೨ರ ತೀರ್ಪಿನಿಂದ ಅರ್ಹ ಮತ್ತು ತುಳಿತಕ್ಕೊಳಗಾದ ಸಮುದಾಯಕ್ಕೆ ಬರಸಿಡಿಲು ಹೊಡೆದಂತಾಯಿತು. ಶೈಕ್ಷಣಿಕ ಅರಾಜಕತೆಯ ಸುಳಿಗಾಳಿ ಅಲೆದಾಡಿತು.

೨೦೦೨ರ ಜನವರಿಯಲ್ಲಿ ಫ್ರಾಂಕ್ ನ್ಯೂಮನ್ ಮತ್ತು ಲಾರಾ ಕೆ. ಕೌಟ್ಯುರಿಯರ್‌ರಿಂದ ಹೊರತರಲ್ಪಟ್ಟ ಯು.ಎನ್.ಡಿ.ಪಿ.ಯ ವರದಿಯಲ್ಲಿ ಹೀಗಿದೆ. “ಉನ್ನತ ಶಿಕ್ಷಣವನ್ನು ಮುಕ್ತ ಮಾರುಕಟ್ಟೆಗೆ ಬಿಟ್ಟುಬಿಟ್ಟರೆ, ಸಾಕಷ್ಟು ಹೆಚ್ಚು ಪ್ರಮಾಣದ ಜನಸಂಖ್ಯೆಯು-ಗಣನೀಯವಾದ ವೆಚ್ಚದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲಾರದವರು-ಆಪತ್ತನ್ನು ಎದುರಿಸ ಬೇಕಾಗುತ್ತದೆ. ಮಾರುಕಟ್ಟೆಯ ಶಕ್ತಿಗಳು ಅಟ್ಟಹಾಸಗೈದಾಗ, ಅನಿರೀಕ್ಷಿತ ಪರಿಣಾಮಗಳತ್ತ ಸಾಗುವ ಬದಲು ಸರಿಯಾದ ಮಾರ್ಗಕ್ಕೆ ಒಯ್ಯುವುದು ಒಳ್ಳೆಯದು”. ಅದರಲ್ಲಿ ಇನ್ನೂ ಹೇಳಿರುವುದೇನೆಂದರೆ “ಹೊಸ ಆರ್ಥಿಕತೆಯಿಂದ ಸಕ್ರಿಯ ನಾಗರಿಕರನ್ನು ತಯಾರಿಸುವುದಕ್ಕೆ ಜನಸಂಖ್ಯೆಯ ಹೆಚ್ಚಿನವರನ್ನು ಸುಶಿಕ್ಷಿತರನ್ನಾಗಿ ಮಾಡಲು ಸಮಾಜವು ಪ್ರಯತ್ನಿಸುತ್ತಿರುವಂತೆ ಉನ್ನತ ಶಿಕ್ಷಣವು ಹೊಸ ಬೇಡಿಕೆ-ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶಿಕ್ಷಣದ ಪ್ರಯೋಜನಗಳನ್ನು ಪಡೆಯದಿರುವ ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯದ ಹಿನ್ನೆಲೆ ಯಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಭವಿಷ್ಯದ ಯೋಜನೆಗಳ ವ್ಯಾಕುಲತೆಯೇನೆಂದರೆ ಮಾರುಕಟ್ಟೆ ಗುರಿಯಿರುವ ಪದ್ಧತಿಯು-ಪಾವತಿ ಮಾಡಲಾಗದಿರುವ ಅಥವಾ ಹೆಚ್ಚಿನ ಸಂಪನ್ಮೂಲಗಳ ಅಗತ್ಯವಿರುವವರನ್ನು ಕೈಬಿಡಲಾಗುತ್ತದೆ. ಈ ಪ್ರವೃತ್ತಿಯು ಅಮೆರಿಕಾದಲ್ಲಿ ಆಗಲೇ ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲಿ ಶಿಕ್ಷಣದ ಪ್ರವೇಶಗಳು ಬೆಲೆ ಸಮರವಾಗಿ ಪರಿಣಮಿಸುತ್ತಿವೆ. ಕಡಿಮೆ ಆದಾಯದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗಿರಿಸುವುದು ಯಾವುದೇ ದೇಶಕ್ಕೆ ಹಾನಿಕಾರಕವಾಗುತ್ತದೆ”.

ಅಮೆರಿಕಾದಂತಹ ದೇಶವೂ ಕೂಡ ಶುಲ್ಕವನ್ನು ಕಡಿಮೆ ಮಾಡಲು ಯೋಚಿಸುತ್ತಿದೆ. ಭಾರತದಲ್ಲಿ ಸಮಾಜವು ಸಮಾನತೆಯಲ್ಲಿದೆ ಎಂದು ಊಹಿಸಿ ದೇಶವು ಏಕರೂಪದ ಶುಲ್ಕದ ನೇರವಾದ ಹೊದಿಕೆಯಲ್ಲಿ ತನ್ನನ್ನು ತಾನು ವಂಚಿಸುತ್ತಿದೆ. ಈಗ ವೃತ್ತಿ ಶಿಕ್ಷಣ ಪ್ರವೇಶ ಅರಾಜಕ ಸ್ಥಿತಿಗೆ ಮುಟ್ಟಿದೆ ಮತ್ತು ವಿದ್ಯಾರ್ಥಿಗಳನ್ನು ಆತ್ಮಹತ್ಯೆಗಳ ಕಡೆಗೆ ಎಳೆದಿದ್ದು ಜೀವನದಲ್ಲಿ ಅವಕಾಶಗಳಿಂದ ವಂಚಿತರಾಗುವಂತೆ ಮಾಡಿದೆ.

ಸಾಮಾನ್ಯ ಪ್ರವೇಶ ಪರೀಕ್ಷೆ PUC Board, CBSE, ICSE ಮತ್ತು ಹೊರದೇಶಗಳ ಬೇರೆ ಬೇರೆ ವೈವಿಧ್ಯಗಳ ತಾರತಮ್ಯವನ್ನು ಹೋಗಲಾಡಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಏಕಸ್ವರೂಪದಿಂದ ಮಾಪನ ಮಾಡುವ ಅತ್ಯಂತ ಪಾರದರ್ಶಕ ಮತ್ತು ವ್ಯವಸ್ಥಿತ ಸ್ವರೂಪ ವಾಗಿದೆ. ರಾಷ್ಟ್ರ ಮತ್ತು ಪರರಾಷ್ಟ್ರಗಳ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿಯೂ ಈ ವಿಧಾನವನ್ನು ಅನುಸರಿಸಲಾಗಿದೆ. ಪಟ್ಟಣ, ಗ್ರಾಮಾಂತರ ಮತ್ತು ಶ್ರೀಮಂತ, ಬಡ ಸಮುದಾಯದ ಮಕ್ಕಳ ಪ್ರತಿಭೆಯನ್ನು ಅಳೆಯುವ ಸಾಮಾನ್ಯ ಮಾಪನವೇ CET ಪದ್ಧತಿ ಯಾಗಿದೆ. ಗ್ರಾಮಾಂತರ ಪ್ರದೇಶಕ್ಕೆ ಅಥವಾ ಯಾವುದೇ ವರ್ಗಗಳಿಗೆ ತಾರತಮ್ಯ ಅಥವಾ ಅನ್ಯಾಯದ ವಿಚಾರವನ್ನು ಖಾಸಗಿ ಆಡಳಿತ ಮಂಡಳಿಯವರು ಆಗಾಗ ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ವಾದಿಸುವುದನ್ನು ಕಾಣುತ್ತೇವೆ. ಆದರೆ ೧೯೯೩ರಲ್ಲಿ ಈ ರಾಷ್ಟ್ರದಲ್ಲಿ ಜಾರಿಗೆ ಬಂದ CET ವ್ಯವಸ್ಥೆ ಅಥವಾ ರಾಷ್ಟ್ರ ಮತ್ತು ಪರರಾಷ್ಟ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನದಲ್ಲಿರುವ ಈ ಪದ್ಧತಿಯನ್ನು ಅತ್ಯಂತ ಪ್ರಗತಿಪರ ಶೈಕ್ಷಣಿಕ ಸುಧಾರಣೆ ಎಂದು ಪರಿಗಣಿಸಲಾಗಿದೆ. ಆದುದರಿಂದ ಈ ಪದ್ಧತಿಯನ್ನು ಕೈಬಿಡುವುದು ಒಂದು ಪ್ರತಿಗಾಮಿ ಹೆಜ್ಜೆಯಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ಸಮಾಜವನ್ನು ವಿಭಜಿಸುವ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಖಾಸಗಿ ಮತ್ತು ಸರ್ಕಾರದ ಯೋಜನೆಗಳು ಆದ್ಯತೆಯ ಮೇರೆಗೆ ರೂಪುಗೊಳ್ಳಬೇಕು.

ನೂರಕ್ಕೆ ಶೇ. ೬೭ ರಷ್ಟು ಜನ ನಿರಕ್ಷರಸ್ಥರಿರುವ ದೇಶದಲ್ಲಿ ಶೇ. ೬ರಷ್ಟು ಕೂಡ ಪ್ರೌಢಶಾಲೆಯ ಅನಂತರ ಶಿಕ್ಷಣ ಪಡೆಯಲಾಗದ ಸಂದಿಗ್ಧತೆಯಲ್ಲಿ ಶೇ. ೦.೦೫ರಷ್ಟು ಕೂಡ ವೃತ್ತಿಪರ ಶಿಕ್ಷಣದ ಹೆದ್ದಾರಿಗೆ ಬರಲಾಗದ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರವೃತ್ತಿ ತಡೆಗಟ್ಟಬೇಕು. ವೃತ್ತಿ ಶಿಕ್ಷಣ ಬಯಸುವ ೧೯೯೩ರ ಮೊದಲು ಯಾವ ಅವಕಾಶವೂ ಇಲ್ಲದೇ ನಲುಗುತ್ತಿದ್ದ ಜನಾಂಗಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (CET) ವರದಾನವಾಗಿ ಬಂದಿದೆ. ಇದನ್ನು ಯಾವುದೇ ನೆವನದಿಂದ ಅಪಹರಿಸುವ ಪಟ್ಟಭದ್ರ ಹಿತಾಸಕ್ತಿಗಳ ಕೈಮೇಲಾಗದಂತೆ ತಡೆಯುವುದು ಅನಿವಾರ‍್ಯ.

ತಮ್ಮ ಜೀವನದಲ್ಲಿ ೧೯೯೩ ರಿಂದ ಹೊಸ ಕ್ಷಿತಿಜದ ಬೆಳಕನ್ನು ಕಂಡ ಮಧ್ಯಮವರ್ಗದ, ಬಡ, ಗ್ರಾಮೀಣ ಮತ್ತು ನಗರದ ಸಮುದಾಯದ ಆಶಾಕಿರಣಗಳನ್ನು ಮಬ್ಬುಗೊಳಿಸುವ ಪಿತೂರಿಗೆ ಸರ್ಕಾರ, ನ್ಯಾಯಾಲಯ ಮತ್ತು ಸಮುದಾಯ ಮಾರುಹೋಗಬಾರದು.