೧೯೯೩ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದ ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಕ್ರಿಯೆ ಭಾರತದ ಶ್ರೇಷ್ಠ ನ್ಯಾಯಾಲಯ ಟಿ.ಎಂ.ಎ. ಪೈ ಫೌಂಡೇಶನ್ ಅಕ್ಟೋಬರ್ ೨೦೦೨ರಂದು ತೀರ್ಪು ನೀಡುವವರೆಗೆ ಸುಗಮವಾಗಿ ನಡೆಯಿತು. ಆ ವ್ಯವಸ್ಥೆಯ ದಾಮಾಶಯದ ಪ್ರಕಾರ ಶೇ. ೮೫ರಷ್ಟು ರಾಜ್ಯ ನಡೆಸುತ್ತಿರುವ ಸಿ.ಇ.ಟಿ. ವ್ಯವಸ್ಥೆ ಪ್ರಕಾರವೂ, ಶೇ. ೧೫ರಷ್ಟು ಖಾಸಗಿ ಆಡಳಿತೆಗೂ ನೀಡಲಾಗಿತ್ತು. ಇದರಲ್ಲಿ ಶೇ. ೫೦ರಷ್ಟು ಫ್ರೀ ಸೀಟ್ ಎಂದೂ ಉಳಿದ ಶೇ. ೩೫ರಷ್ಟು ಪೇಮೆಂಟ್ ಸೀಟ್ ಎಂತಲೂ ನಿಗದಿಗೊಳಿಸಲಾಗಿತ್ತು. ಕರ್ನಾಟಕ ಸರ್ಕಾರ ನಡೆಸುತ್ತಿದ್ದ ಸಿ.ಇ.ಟಿ. ನೂರಕ್ಕೆ ನೂರು ಪಾಲು ಪಾರದರ್ಶಕವಾಗಿದ್ದು, ಯಾವುದೇ ರೀತಿಯ ಕ್ಯಾಪಿಟೇಶನ್ ಫಿಸ್ ಅಥವಾ ಪ್ರಭಾವಕ್ಕೆ ಒಳಗಾಗಿರಲಿಲ್ಲ. ಅತ್ಯಂತ ಕಡುಬಡವರ ಮಕ್ಕಳು ಡಾಕ್ಟರ್, ಇಂಜಿನಿಯರ್, ಡೆಂಟಿಸ್ಟ್ ಅಥವಾ ಇನ್ನಿತರ ವೃತ್ತಿಪರ ಶಿಕ್ಷಣಕ್ಕೆ ಸೇರುವ ಅವಕಾಶವಿತ್ತು. ಸಾಮಾಜಿಕ ನ್ಯಾಯ ಮತ್ತು ಪ್ರತಿಭೆ ಎಂಬ ಅವಳಿ ಧ್ಯೇಯವನ್ನು ನಿರ್ವಹಿಸುವ ಅತ್ಯಂತ ಮಾದರಿ ಆಡಳಿತ ಪರಿಕ್ರಮವಾಗಿತ್ತು. ಪಿ.ಯು.ಸಿ. ಯಿಂದ ಶೇ. ೫೦ರಷ್ಟು ಮತ್ತು ಸಿ.ಇ.ಟಿ.ಯಿಂದ ಶೇ. ೫೦ರ ಈ ದಾಮಾಶಯದಲ್ಲಿ ರ‍್ಯಾಂಕುಗಳನ್ನು ನಿರ್ಣಯಿಸಲಾಗುತ್ತಿತ್ತು. ಮೀಸಲಾತಿಯಿಂದ ಕಾಲೇಜುಗಳಿಗೆ ಸೇರಿದ ಮಕ್ಕಳು ಕೂಡ ಪ್ರತಿಭೆಯ ಮೂಸೆಯಲ್ಲಿ ಹೊರಬಂದು ಅನ್ಯರ ಜೊತೆಯಲ್ಲಿ ಪೈಪೋಟಿ ನಡೆಸುವ ಔನ್ನತ್ಯವನ್ನು ಪಡೆಯುತ್ತಿದ್ದರು.

೨೦೦೨ರಲ್ಲಿ ಟಿ.ಎಂ.ಎ. ಪೈ ತೀರ್ಪು ಬಂದ ಮೇಲೆ ನೂರಾರು Writ Petitionಗಳು ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್‌ಗಳಲ್ಲಿ ದಾಖಲಾದಾಗ ಇಡೀ ರಾಷ್ಟ್ರದಲ್ಲಿ ವೃತ್ತಿ ಶಿಕ್ಷಣದ ಬಗ್ಗೆ ಕ್ಷೋಭೆ ಏರ್ಪಟ್ಟಿತ್ತು. ಈ ಗೊಂದಲ ನಿವಾರಿಸುವ ದೃಷ್ಟಿಯಲ್ಲಿ ಇಸ್ಲಾಮಿಕ್ ಅಕಾಡೆಮಿ ಕೇಸಿನಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟೀಕರಣ ನೀಡಿತ್ತು. ಸ್ಪಷ್ಟೀಕರಣದಿಂದ ಮತ್ತಷ್ಟು ಗೊಂದಲ ಏರ್ಪಟ್ಟಾಗ ಇನಾಂದಾರ್ ಕೇಸನ್ನು ಸುಪ್ರಿಂಕೋರ್ಟ್ ಪರಿಗಣಿಸಿ ಮೂರನೇ ಬಾರಿ ತನ್ನ ತೀರ್ಪನ್ನು ನೀಡಿತ್ತು. ಮೂರು ತೀರ್ಪು ಕೂಡ ವೃತ್ತಿಪರ ಶಿಕ್ಷಣದ ಬಗ್ಗೆ ಶಾಶ್ವತ ಪರಿಹಾರ ನೀಡಲಾಗಲಿಲ್ಲ. ಕೇಂದ್ರ ಶಾಸನ ಅಥವಾ ರಾಜ್ಯ ಶಾಸನಗಳ ಅನಿವಾರ್ಯತೆಯ ಬಗ್ಗೆ ಶ್ರೇಷ್ಠ ನ್ಯಾಯಾಲಯ ಮತ್ತೆ ಆಗ್ರಹ ಪಡಿಸಿತು.

ಭಾರತ ಸರ್ಕಾರ ವೃತ್ತಿಪರ ಶಿಕ್ಷಣದ ಬಗ್ಗೆ ಶಾಶ್ವತ ಪರಿಹಾರವನ್ನು ಮತ್ತು ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಮತ್ತು ಜನಾಂಗ ಹಾಗೂ ಇನ್ನಿತರ ವಿಶೇಷ ವರ್ಗದ ಬಗ್ಗೆ ಪ್ರವೇಶ ನೀತಿಯನ್ನು ನಿರೂಪಿಸುವ ದೃಷ್ಟಿಯಿಂದ Article ೧೫(೫)ಕ್ಕೆ ಒಂದು ಮಹತ್ತರ  ಮತ್ತು ಕ್ರಾಂತಿಕಾರಿ ತಿದ್ದುಪಡಿ ಜನವರಿ ೨೦೦೬ ರಂದು ತಂದಿತ್ತು. ಈ ತಿದ್ದುಪಡಿಯಿಂದ ರಾಜ್ಯ ಸರ್ಕಾರಗಳಿಗೆ ವೃತ್ತಿ ಶಿಕ್ಷಣದ ಬಗ್ಗೆ ಮತ್ತು ಈ ಬಗ್ಗೆ ನಡೆದ ಗೊಂದಲದ ನಿವಾರಣೆಯ ಬಗ್ಗೆ ಕಾನೂನನ್ನು ರಚಿಸುವ ಅಧಿಕಾರವನ್ನು ನೀಡಲಾಗಿತ್ತು. ಈ ತಿದ್ದುಪಡಿ ಬಂದ ಕೂಡಲೇ ರಾಷ್ಟ್ರದಲ್ಲಿ ಎಲ್ಲಾ ಗೊಂದಲಗಳಿಗೆ ಒಂದು ಅಂತಿಮ ಶ್ರೀಕಾರ ಹಾಡುವ ಆಶಾಂಕುರವಾಯಿತು.

ಕರ್ನಾಟಕ ರಾಜ್ಯ ಸರ್ಕಾರ ಕಳೆದ ಅಧಿವೇಶನದ ಕೊನೆಯ ದಿವಸ ಕರ್ನಾಟಕ ವೃತ್ತಿ ಶಿಕ್ಷಣದ ಬಗ್ಗೆ ಒಂದು ಮಸೂದೆ ಮಂಡಿಸಿ ಅದೇ ದಿವಸ ಒಪ್ಪಿಗೆಯನ್ನು ಕೂಡ ಪಡೆಯಿತು. ಆದರೆ ಸಂವಿಧಾನ ತಿದ್ದುಪಡಿಯ ಲಾಭವನ್ನು ಪಡೆಯದೆ ವೃತ್ತಿಶಿಕ್ಷಣವನ್ನು ಮತ್ತಷ್ಟು ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿಸಲಾಯಿತು. ರಾಷ್ಟ್ರದ ಉಚ್ಚ ನ್ಯಾಯಾಲಯ ತಾತ್ಕಾಲಿಕ ಪರಿಹಾರದ ಬಗ್ಗೆ ಸಂವಿಧಾನದ Article 142 ಪ್ರಕಾರ ಶುಲ್ಕ ನಿಗದಿ ಮತ್ತು ಸೀಟಿನ ನಿಷ್ಕರ್ಷೆಯ ಬಗ್ಗೆ ಮಾಡಿದ ಎರಡು ಸಮಿತಿಗಳನ್ನು ರದ್ದುಗೊಳಿಸಿ ಶುಲ್ಕ ನಿಗದಿಗೊಳಿಸುವ ಮತ್ತು ಖಾಸಗಿ ಆಡಳಿತ ಮಂಡಳಿ ಮತ್ತು ಸರ್ಕಾರದ ಸಿ.ಇ.ಟಿ.ಯ ಸೀಟುಗಳ ಪುನರ್ ವಿಂಗಡಣೆಯ ವ್ಯವಸ್ಥೆಯ ಬಗ್ಗೆ ಸ್ಪಷ್ಟವಾದ ಕಾನೂನನ್ನು ತರಬೇಕಿತ್ತು. ಅದರ ಬದಲು ರಾಜ್ಯ ತನ್ನ ಸಿ.ಇ.ಟಿ. ವ್ಯವಸ್ಥೆಯನ್ನು ಅನುದಾನಿತ ಮತ್ತು ಸರಕಾರಿ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ವರ್ಗ ಮತ್ತು ಜನಾಂಗಕ್ಕೆ ನಿಗದಿಗೊಳಿಸಿದ ಅನುದಾನೇತರ ಸಂಸ್ಥೆಗಳ ಶೇಕಡ ೫೦ರಷ್ಟು ಭಾಗವನ್ನು ವಿತರಿಸುವ ಅಧಿಕಾರವನ್ನು ಕೂಡ ಬಿಟ್ಟು ಕೊಡಲಾಯಿತು. ಶುಲ್ಕವನ್ನು ಎಲ್ಲಾ ಸೀಟುಗಳಿಗೂ ಕೂಡ ಸರಿಸಮಾನವಾಗಿ ನಿಗದಿಗೊಳಿಸುವ ಅಧಿಕಾರ ಕೂಡ ಶುಲ್ಕ ನಿಷ್ಕರ್ಷೆಗೊಳಿಸುವ ಸಮಿತಿಗೆ ವಹಿಸಲಾಯಿತು. ಇದರ ಒಟ್ಟು ಪರಿಣಾಮವಾಗಿ ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಮತ್ತು ಜನಾಂಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ ಉಳಿದವರಂತೆ ದುಬಾರಿ ಶುಲ್ಕವನ್ನು ತೆರಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲದೆ ಖಾಸಗಿ ಮ್ಯಾನೇಜಮೆಂಟ್‌ಗಳಲ್ಲಿ ಈ ಸೀಟುಗಳನ್ನು ಪಡೆಯುವ ಮತ್ತು ಶುಲ್ಕ ತೆರುವ ವ್ಯವಸ್ಥೆಯಿರುವುದರಿಂದ ಕ್ಯಾಪಿಟೇಶನ್ ಫಿಸ್‌ನ ಹಾವಳಿ ಮತ್ತೆ ಉದ್ಭವಿಸುವ ಭೀತಿಯಿದೆ. ಕರ್ನಾಟಕದ ಹಿಂದಿನ ವ್ಯವಸ್ಥೆಯ ಪ್ರಕಾರ ಸರ್ಕಾರದ ಸೀಟು ಸಿ.ಇ.ಟಿ. ಮೂಲಕವೇ ಕಡಿಮೆ ಫಿಸನ್ನು ತೆರುವ ವ್ಯವಸ್ಥೆಯನ್ನು ಕೆಲವಂಶ ಜನರಲ್ ಕೆಟೆಗರಿಯ ವಿದ್ಯಾರ್ಥಿ ಸಮುದಾಯಕ್ಕೂ ಮತ್ತು ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಮತ್ತು ಜನಾಂಗಕ್ಕೂ ಒದಗಿಸಬಹುದಿತ್ತು. ಈ ಅವಕಾಶದಿಂದ ವಿದ್ಯಾರ್ಥಿ ಸಮುದಾಯ ಇಂದು ವಿಮುಖವಾಗಿದೆ. ಖಾಸಗಿ ಆಡಳಿತ ಮಂಡಳಿಗೆ NRI ಶೇ. ೧೫ ಮತ್ತು ಉಳಿದ ಶೇ. ೮೫ ಕೂಡ ವಹಿಸಿದ ಕಾರಣ ಹಿಂದೆ ಒದಗಿಸಲಾದ NCC, Ex-Defence, Sports, Anglo-Indian, ಹೊರನಾಡ ಕನ್ನಡಿಗರು, ಗಡಿನಾಡ ಕನ್ನಡಿಗರು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ ಇದ್ದ ವಿಶೇಷ ರಿಯಾಯತಿಯನ್ನು ಕೂಡ ಕಿತ್ತು ಹಾಕಲಾಗಿದೆ. ಖಾಸಗಿ ಆಡಳಿತೆಯ ಎಲ್ಲಾ ಸೀಟುಗಳಿಗೆ ದೇಶದ ಎಲ್ಲಾ ರಾಜ್ಯದವರು ಅರ್ಜಿಯನ್ನು ಹಾಕಿ ಸೀಟುಗಳನ್ನು ಪಡೆಯಬಹುದಾಗಿದೆ. ಇದರಿಂದ ಎಲ್ಲಾ ವರ್ಗದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೂ ಅನ್ಯಾಯವಾಗಿದೆ. ಇದರಿಂದ ಯಾವ ಉದ್ದೇಶದಿಂದ ರಾಜ್ಯದಲ್ಲಿ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲಾಗಿತ್ತೋ ಆ ಉದ್ದೇಶ ನಿಷ್ಫಲವಾಗುತ್ತದೆ.

ರಾಜ್ಯದ ಕಾಲೇಜುಗಳ ಸೀಟಿಗಾಗಿ ಹತಾಶೆಯಿಂದ ಪರದಾಡುವ ದುಸ್ಥಿತಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಇಂದು ತಳ್ಳಲಾಗಿದೆ. ರಾಜ್ಯದಲ್ಲಿ ಸರಿಯಾದ ಕಾನೂನನ್ನು ತರುವ ಅಧಿಕಾರವಿದ್ದರೂ ಸಮಾಲೋಚನೆಯ ಮೂಲಕ ಖಾಸಗಿ ಆಡಳಿತ ಮಂಡಳಿಗಳನ್ನು ಜೊತೆಯಲ್ಲಿ ನಿರ್ವಹಿಸುವ ಯಾವ ಪ್ರಯತ್ನವನ್ನು ಕೂಡ ಸರ್ಕಾರ ಮಾಡಲಿಲ್ಲ. ರಾಜ್ಯ ಸರ್ಕಾರ ತಾನು ರಚಿಸಿದ ಕಾನೂನಿನ ಮೂಲಕ ಕೈಕಾಲು ಕಟ್ಟಿ ಖಾಸಗಿ ಆಡಳಿತ ಮಂಡಳಿಗೆ ಶರಣಾಗತಿ ಆಗುವ ಪರಿಸ್ಥಿತಿ ಮಾತ್ರವಲ್ಲದೆ ರಾಜ್ಯದ ಎಲ್ಲಾ ವಿದ್ಯಾರ್ಥಿ ಸಮುದಾಯ ಅಸಹಾಯಕವಾಗಿ ಅನಾಥ ಭಾವನೆಯಲ್ಲಿ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

೧೯೯೩ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಇಡೀ ರಾಷ್ಟ್ರದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿ ಮಾಡಿದ ಕೂಡಲೇ ಕಾನೂನು ಮತ್ತು ಶಿಕ್ಷಣ ತಜ್ಞರ ಒಂದು ಸಮಿತಿ ರಚಿಸಿ ಮುಂದೆ ಬರುವ ಕಾನೂನು ತೊಡಕನ್ನು ನಿವಾರಿಸುವ ಹಿನ್ನೆಲೆಯಲ್ಲಿ ವೃತ್ತಿಪರ ಶಿಕ್ಷಣದ ಬಗ್ಗೆ ಸಮಗ್ರವಾದ ಕಾನೂನನ್ನು ರೂಪಿಸಲು ಆದೇಶಿಸಲಾಗಿತ್ತು. ವೃತ್ತಿಪರ ಶಿಕ್ಷಣದ ಬಗ್ಗೆ ಸಮಗ್ರವಾದ ಕಾನೂನಿನ ಕರಡು ವರದಿಯನ್ನು ಮಾರ್ಚ್ ೧೯೯೫ರಲ್ಲಿ ಅಂದಿನ ಸರ್ಕಾರಕ್ಕೆ ನೀಡಲಾಗಿತ್ತು. ಆದರೆ ಆ ಕಾನೂನನ್ನು ಮಂಜೂರು ಮಾಡುವುದರಲ್ಲಿ ಅಂದಿನ ಸರ್ಕಾರ ವಿಫಲವಾಯಿತು. ಆ ಕಾನೂನನ್ನು ಜಾರಿಗೆ ತಂದಿದ್ದರೆ ರಾಜ್ಯದಲ್ಲಿ ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ಯಾವುದೇ ಕಾನೂನು ತೊಡಕು ಬರುತ್ತಿರಲಿಲ್ಲ. ಅಂದಿನ ನಿರ್ಲಕ್ಷ್ಯತೆ ಮತ್ತು ಇಂದಿನ ನಿರ್ಲಕ್ಷ್ಯತೆ ಒಟ್ಟು ಸೇರಿ ರಾಜ್ಯದ ವಿದ್ಯಾರ್ಥಿ ಸಮುದಾಯ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.

ರಾಷ್ಟ್ರದ ಉಚ್ಚ ನ್ಯಾಯಾಲಯ ಕೂಡ ತಮ್ಮ ಅನೇಕ ತೀರ್ಪುಗಳಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದ ಕಾನೂನನ್ನು ತಂದು ಸಮಸ್ಯೆಯನ್ನು ಬಿಡಿಸಿಕೊಳ್ಳುವ ಆದೇಶ ನೀಡಿತ್ತು. ಆದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‌ನ ತೀರ್ಪಿನ ಸುಳಿಯಿಂದ ಹೊರಬರಲಾರದೆ, ಸಂವಿಧಾನದ ತಿದ್ದುಪಡಿಯ ಪರಿಹಾರವನ್ನು ಪಡೆಯಲಾಗದೆ ಇಂದು ನಿಸ್ಸಹಾಯಕವಾಗಿದೆ. ಇದೊಂದು ಸರ್ಕಾರದ ಸ್ವಯಂಕೃತ ಅಪರಾಧ. ಬಿಕ್ಕಟ್ಟುಗಳನ್ನು ಸುಗ್ರೀವಾಜ್ಞೆಯ ಮೂಲಕ ಸರಿಪಡಿಸಿ ಸೀಟು ವಿತರಿಸುವ ಮತ್ತು ಶುಲ್ಕವನ್ನು ಬಡವರಿಗೆ ಪ್ರತ್ಯೇಕವಾಗಿ ನಿಗದಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರ ಮತ್ತೆ ಪಡೆಯದಿದ್ದರೆ ಪ್ರತಿಭಾವಂತ ಜನಾಂಗದವರ ಪಾಲಿಗೆ ವೃತ್ತಿಪರ ಶಿಕ್ಷಣ ಕಾಲೇಜುಗಳು ಮರೀಚಿಕೆ ಯಾಗುತ್ತದೆ.