ರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳಾದ AIIMS, IITs, IIMs ಮತ್ತು ಕೇಂದ್ರ ವಿಶ್ವವಿದ್ಯಾನಿಲಯಗಳಲ್ಲಿ ಹಿಂದುಳಿದ ಮೀಸಲಾತಿಯನ್ನು ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ತೀವ್ರ ಪ್ರತಿಭಟನೆ ಭುಗಿಲೆದ್ದಿದೆ. ಕೆಲವು ವರ್ಗದ ವಿದ್ಯಾರ್ಥಿ ಸಮುದಾಯ ಈ ಬಗ್ಗೆ ಸಂಘರ್ಷದ ದಾರಿ ಹಿಡಿದಿದ್ದಾರೆ. ಕೇಂದ್ರ ಸರ್ಕಾರದ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಮತ್ತು ಜನಾಂಗದ ಮೀಸಲಾತಿಯನ್ನು ವಿ.ಪಿ. ಸಿಂಗ್ ಸರ್ಕಾರ ಮಂಡಲ್ ಆಯೋಗದ ಅನುಷ್ಠಾನದ ಮೂಲಕ ತರುವ ಪ್ರಸ್ತಾವನೆ ಬಂದಾಗ ಇದಕ್ಕಿಂತಲೂ ತೀವ್ರವಾದ ಹಿಂಸಾಚಾರ ಮತ್ತು ಪ್ರತಿಭಟನೆ ನಡೆದಿತ್ತು. ೧೯೯೧ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸಾಂತ್ವನದ ಮಾರ್ಗವನ್ನು ಕಂಡುಕೊಂಡು ಮೀಸಲಾತಿ ಜಾರಿಗೊಳಿಸಿತ್ತು.

೨೦೦೦ ವರ್ಷಗಳಿಂದ ಈ ದೇಶವನ್ನು ಬಾಧಿಸುತ್ತಿರುವ ಜಾತಿಯ ಕೆಟ್ಟ ಪದ್ಧತಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಮಾರಕವಾಗಿದೆ. ಈ ಪದ್ಧತಿಯನ್ನು ಶಿಕ್ಷಣದ ಕ್ರಾಂತಿಯ ಮೂಲಕ ಹೋಗಲಾಡಿಸಬಹುದೇ ಹೊರತು ಅನ್ಯಥಾ ಸಾಧ್ಯವಿಲ್ಲ. ಈ ತಾರತಮ್ಯ ಮತ್ತು ವ್ಯಾತ್ಯಾಸವನ್ನು ಹೋಗಲಾಡಿಸಲು ಮೀಸಲಾತಿ ಶಾಶ್ವತವಾದ ಪರಿಹಾರವಲ್ಲದಿದ್ದರೂ ಒಂದು ವಿಧಾನವೆಂದು ಪರಿಗಣಿಸಲಾಗಿದೆ. ಉಚ್ಚ-ನೀಚ ಜಾತಿಗಳ ಒತ್ತಡದಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಏರುಪೇರುಗಳಾಗಿವೆ. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ/ಜನಾಂಗ ಅನೇಕ ಅವಕಾಶಗಳಿಂದ ವಿವಂಚಿತರಾಗಿರುವುದು ಒಂದು ವಾಸ್ತವ ಮತ್ತು ಕಟುಸತ್ಯ.

ಯು.ಪಿ.ಎ. ಸರ್ಕಾರದ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಕೂಡ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸ್ಥಿರೀಕರಣ/ಮೀಸಲಾತಿ ಪ್ರಸ್ತಾವವಿದೆ. ಭಾರತದ ರಾಷ್ಟ್ರಪತಿ ಗಳು ಕೂಡ ಯು.ಪಿ.ಎ. ಸರ್ಕಾರದ ಮೊದಲ ಜಂಟಿ ಅಧಿವೇಶನದಲ್ಲಿ ಉದ್ಯೋಗ ಸ್ಥಿರೀಕರಣ/ಮೀಸಲಾತಿಯ ಸೂಕ್ಷ್ಮತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಗತ್ತಿನ ಅಮೇರಿಕ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದಂತಹ ರಾಷ್ಟ್ರಗಳಲ್ಲಿ ಕೂಡ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸ್ಥಿರೀಕರಣದ ಬಗ್ಗೆ ಅನೇಕ ವಿಧಿ ವಿಧಾನಗಳ ಕಾನೂನನ್ನು ರೂಪಿಸಲಾಗಿದೆ. ಸಮಾಜದ ತಾರತಮ್ಯವನ್ನು ಹೋಗಲಾಡಿಸುವ ಚರ್ಚೆ ಬರೀ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಇದೊಂದು ಪ್ರಶ್ನೆಯಾಗಿದೆ. ಆಯಾಯ ರಾಷ್ಟ್ರಗಳಲ್ಲಿ ಇದರ ಪರಿಹಾರಕ್ಕಾಗಿ ಸಾಮಾಜಿಕ ಸಮಾನತೆಯನ್ನು ಸ್ಥಿರೀಕರಿಸುವ ಬಗ್ಗೆ ನಾನಾ ಮಾರ್ಗೋಪಾಯ ಗಳನ್ನು ಕಂಡು ಹುಡುಕಲಾಗಿದೆ. ಈ ವಿಚಾರವನ್ನು ಅಮೇರಿಕದಲ್ಲಿ ಮೊದಲು ಅನುಷ್ಠಾನಕ್ಕೆ ತಂದವರು ಅಂದಿನ ಅಧ್ಯಕ್ಷರಾದ ಜಾನ್ ಎಫ್. ಕೆನಡಿ. ಅವರ ಮಾತಿನಲ್ಲೇ ಹೇಳುವುದಿದ್ದರೆ “ತಾರತಮ್ಯದ ಕ್ರೂರ ವ್ಯಾಧಿಗೆ ಯಾವುದೇ ರಾಜ್ಯ ಅಥವಾ ವಿಭಾಗದ ಗಡಿಯಿಲ್ಲ. ಇವರ ಮೇಲೆ ನಡೆಸುವ ಧಾಳಿ ವಿಶಾಲ ವ್ಯಾಪ್ತಿಯನ್ನು ಹೊಂದಬೇಕಾಗಿದೆ. ಖಾಸಗಿ, ಸಾರ್ವಜನಿಕ ರಾಜ್ಯ ಮತ್ತು ಸ್ಥಳೀಯ ಪರಿಧಿಯನ್ನು ಶಾಸನ ಮತ್ತು ಆಡಳಿತಾತ್ಮಕ ವಿಧಾನದಲ್ಲಿ ಇದರ ಬಗ್ಗೆ ಹೋರಾಟ ನಡೆಸಬೇಕಾಗಿದೆ”.

ಅನೇಕ ವರ್ಷಗಳ ಆಡಳಿತ ಅನುಭವ ರಾಜ್ಯ ಮತ್ತು ರಾಷ್ಟ್ರದ ಉಚ್ಚ ನ್ಯಾಯಾಲಯಗಳ ಕಾನೂನು ಸಂಘರ್ಷದ ಅನಂತರ ಆರ್ಥಿಕ ಮಾನದಂಡ ಪರಿಗಣಿಸದೆ ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡವೇ ಮೀಸಲಾತಿಗೆ ಯೋಗ್ಯ ಮತ್ತು ನ್ಯಾಯಯುತವೆಂದು ನಿಷ್ಕರ್ಷೆ ಮಾಡಲಾಯಿತು. ಈ ಸೂತ್ರಕ್ಕೆ ರಾಷ್ಟ್ರೀಯ ಸಮ್ಮತಿಯೂ ದೊರಕದೆ ಪ್ರತಿಭಾನ್ವೇಷಣೆಯನ್ನು ಸೀಮಿತ ಸಮುದಾಯಕ್ಕೆ ಮಾತ್ರ ಅನ್ವಯಿಸುವುದರಿಂದ ರಾಷ್ಟ್ರದ ವಿಸ್ತಾರವಾದ ಪ್ರತಿಭಾ  ಸ್ಫೋಟದಲ್ಲಿ ತಡೆಯನ್ನೊಡ್ಡಿದಂತಾಗುತ್ತದೆ. ಇಂತಹ ವಿಸ್ತೃತ ಉದಾರ ಧೋರಣೆಯನ್ನು ಪ್ರತಿಭೆಯ ಉತ್ಕರ್ಷಕ್ಕೆ ಮಾರಕವೆನ್ನುವುದು ಪ್ರತಿಗಾಮಿ ನೀತಿಯಾಗಿದೆ.

ದೆಹಲಿಯ AIIMS ವಿದ್ಯಾರ್ಥಿ ಸಮುದಾಯ ಮೀಸಲಾತಿ ವಿರೋಧ ಸಂಘರ್ಷದ ಹಾದಿಯನ್ನು ಹಿಡಿದಿರುವರೋ ಅದೇ ವಿದ್ಯಾರ್ಥಿ ಸಮುದಾಯ ಹಲವು ವರ್ಷಗಳ ಹಿಂದೆ ಶೇಕಡ ೩೩ನ್ನು AIIMS ನ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಸಮುದಾಯಕ್ಕೆ ಸ್ನಾತಕೋತ್ತರ ವರ್ಷಗಳಿಗೆ ಮೀಸಲಾತಿಯನ್ನು ಒದಗಿಸಬೇಕೆಂದು ಚಳುವಳಿಯನ್ನು ಹೂಡಿದ್ದರು. ಅದೇ ಪ್ರಕಾರ ಮೀಸಲಾತಿಯನ್ನು ನೀಡಲಾಗಿ ದೆಹಲಿ ಉಚ್ಚ ನ್ಯಾಯಾಲಯ ರದ್ದುಪಡಿಸಿತ್ತು. ಅದರ ವಿರುದ್ಧ ವಿದ್ಯಾರ್ಥಿ ಸಮುದಾಯ ಊರ್ಜಿತಗೊಳಿಸಬೇಕೆಂದು ಮೇಲ್ಮನವಿಯನ್ನು ಸಲ್ಲಿಸಿತ್ತು. ಆ ಮೇಲ್ಮನವಿಯನ್ನು ಆಂಶಿಕವಾಗಿ ಸ್ಥಿರೀಗೊಳಿಸಿದ ಭಾರತದ ಉಚ್ಚ ನ್ಯಾಯಾಲಯ AIIMS ನ ಶೈಕ್ಷಣಿಕ ಪರಿಷತ್ತು (Academic Couneil) ಅಂತಿಮ ನಿರ್ಣಯ ಕೈಗೊಳ್ಳಬಹುದೆಂದು ತೀರ್ಮಾನಿಸಿದೆ. ಕಾರಣವೇನೇ ಇರಲಿ ಅಂಕಗಳ ಮಟ್ಟವನ್ನು ಕೆಳಗಿಳಿಸಿ ಮೀಸಲಾತಿಯ ಫಲವನ್ನು ಅನುಭವಿಸಿ ಪ್ರತಿಭೆಯ ವಾದವನ್ನು ಮುಂದುವರಿಸಿ ಸಂಘರ್ಷದ ಹಾದಿಯನ್ನು ಹಿಡಿದಿರುವ ದಾರಿ ಇಬ್ಬಗೆಯ ನೀತಿಯಾಗಿದೆ. ಪ್ರತಿಭೆ ಎಂದರೆ ಒಂದು ಹಂತದ ಮಾನದಂಡವಾಗುವುದಿಲ್ಲ. ಅದೊಂದು ನಿರಂತರ ಶಿಕ್ಷಣ ಹಂತದಲ್ಲಿ ನಡೆಯುವ ಪ್ರಕ್ರಿಯೆ, ಒಂದು ಸಾಮಾಜಿಕ ಪರಂಪರೆಯಿಂದ ಬಂದ ವಿದ್ಯಾರ್ಥಿ ಸಮುದಾಯ ಒಂದೊಂದು ರೀತಿಯಲ್ಲಿ ಸ್ಪಂದಿಸಬಹುದು. ಶಿಕ್ಷಣದ ಮಟ್ಟದ ವಾತಾವರಣದ ಪೈಪೋಟಿ ಯಲ್ಲಿ ಅನುಕೂಲಕರವಲ್ಲದ ಸಾಮಾಜಿಕ ಹಿನ್ನೆಲೆಯಿಂದ ಬಂದ ಮೇಲ್‌ಸ್ತರಕ್ಕೆ ಏರಿದ ಪ್ರಸಂಗಗಳು ಅಪರೂಪವಲ್ಲ. ಅವಕಾಶದ ಹೆಬ್ಬಾಗಿಲನ್ನೇ ತೆರೆದಾಗ ಪ್ರತಿಭೆ ಉಜ್ವಲವಾಗಿ ಅರಳುವುದನ್ನು ರಾಷ್ಟ್ರ ಮತ್ತು ಜಾಗತಿಕ ಜೀವನದಲ್ಲಿ ಕಂಡುಕೊಂಡಿರುವ ಸತ್ಯ. ಅದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರ್ವರ ಪಾಲಿಗೆ ಮುಕ್ತವಾಗಿ ತೆರೆದಿಟ್ಟಾಗ ಅವರ ವಿರೋಧ ವಾಗಿ ಸಂಘರ್ಷಣೆಯ ದಾರಿಯನ್ನು ಹಿಡಿಯುವುದು ಸಾಧುವಲ್ಲ.

ದಕ್ಷಿಣ ಆಫ್ರಿಕಾ ಕೂಡ (Equal Employment Opportunity Act. 1998) ಸಮಾನ ಉದ್ಯೋಗ ಅವಕಾಶದ ಕಾಯ್ದೆ ೧೯೯೮ನ್ನು ಕೂಡ ಮಂಜೂರು ಮಾಡಿ ಲಿಂಗಭೇದ ಮತ್ತು ಸಮುದಾಯ ವ್ಯತ್ಯಾಸವನ್ನು ಹೋಗಲಾಡಿಸುವ ದೊಡ್ಡ ಶಸ್ತ್ರಚಿಕಿತ್ಸೆಯನ್ನೇ ನಡೆಸಿದ್ದಾರೆ.

ಭಾರತದ ಪ್ರಥಮ ಪ್ರಧಾನಿ ೧೯೬೧ ಮಧುರೈನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ನಡೆದ ಸಭೆಯಲ್ಲಿ ಈ ರೀತಿ ಉದ್ಗರಿಸಿದ್ದಾರೆ. ‘ಸಾಮಾಜಿಕ ಹಿಂದುಳಿಕೆಯಿಂದ ರಾಷ್ಟ್ರ ವಿಭಜನ ಶಕ್ತಿಗಳು ತಲೆ ಎತ್ತುತ್ತವೆ’ ಇವುಗಳನ್ನು ಹೋಗಲಾಡಿಸಲು ಸಾಮಾಜಿಕ ಕ್ರಮದ ಆವಶ್ಯಕತೆಯಿದೆ. ಕೇಂದ್ರ ಸರ್ಕಾರ ಆರು ಸಚಿವರ ಸಮಿತಿ ಶ್ರೀ ಶರದ್ ಪವಾರ್‌ರವರ ಅಧ್ಯಕ್ಷತೆಯಲ್ಲಿ ಖಾಸಗಿ ಕ್ಷೇತ್ರದ ಮೀಸಲಾತಿಯ ಬಗ್ಗೆ ವಿವೇಚನೆ ನಡೆಸಿರುತ್ತಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮತ್ತು ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಖಾಸಗಿ ವಲಯದಲ್ಲಿ ಕೂಡ ಮೀಸಲಾತಿ ನೀತಿ, ಸಾರ್ವತ್ರಿಕ ಸಮ್ಮತಿ ಕೂಡ ಪಡೆದಿದ್ದಾರೆ. ಡಾ. ಎಂ. ಆನಂದಕೃಷ್ಣನ್, ಅಧ್ಯಕ್ಷರು, Madras Institute of Development Studies ಅವರು ಹೇಳುವಂತೆ ಯಾವುದೇ ಶೈಕ್ಷಣಿಕ ಗುಣಮಟ್ಟ ಮೀಸಲಾತಿಯ ವಿಧಾನದಿಂದ ಕುಂಠಿತವಾಗಿಲ್ಲ.

ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಕೂಡ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮೀಸಲಾತಿಯ ಮುಖಾಂತರ ಸೇರಿದ ಮೀಸಲಾತಿ ವಿದ್ಯಾರ್ಥಿಗಳು ಪ್ರತಿಭಾ ಓಟದಲ್ಲಿ ಹಿಂದುಳಿದಂತೆ ಕಂಡುಬಂದಿಲ್ಲ. ಅವರು ಕೂಡ ಉಳಿಯದವರಂತೆ ಪ್ರತಿಭೆಯ ಹೆದ್ದಾರಿಯಲ್ಲಿ ಔನ್ನತ್ಯಮಟ್ಟ ಉಳಿಸಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ. ಮೀಸಲಾತಿ ಪ್ರತಿಭಾ ಕ್ಷೇತ್ರಕ್ಕೆ ವಿಶೇಷ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ವೃತ್ತಿ ಶಿಕ್ಷಣ ಅಥವಾ ಉನ್ನತ ಮಟ್ಟದ ಉದ್ಯೋಗ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಸೇರಿದಂತೆ ತಡೆಯು ವುದರಿಂದ ಪ್ರತಿಭೆ ರಾಷ್ಟ್ರದ ಕ್ಷೇತ್ರ ಸಂಕುಚಿತವಾಗುತ್ತದೆ ಹೊರತು ಸಂಪನ್ನವಾಗುವುದಿಲ್ಲ.

ಪರಿವರ್ತನೆಯಾಗುತ್ತಿರುವ ರಾಷ್ಟ್ರದ ಮತ್ತು ಜಾಗತಿಕ ಕ್ಷೇತ್ರಕ್ಕೆ ಸ್ಪಂದಿಸಿ ವೈಜ್ಞಾನಿಕವಾದ ಹೊಸ ಚಿಂತನೆ ಮೀಸಲಾತಿ/ಸ್ಥಿರೀಕರಣದ ಹೊಸ ವ್ಯವಸ್ಥೆಯಲ್ಲಿ ಮೂಡಿಬರಬೇಕಾಗಿದೆ. ಈ ಬಗ್ಗೆ ಸಕಾರಾತ್ಮಕವಾದ ಚಿಂತನೆ ಮತ್ತು ಚರ್ಚೆಗೆ ನಾಂದಿ ಹಾಡಬೇಕಾಗಿದೆ. ರಾಷ್ಟ್ರದ ಸಮಗ್ರ ಮುನ್ನೋಟದ ದೃಷ್ಟಿಯಿಂದ ಹೊಸ ಚಿಂತನೆ ಮತ್ತು ಹೊಸ ಸ್ವರೂಪ ರಾಷ್ಟ್ರವನ್ನು ಹೊಸ ಕ್ಷಿತಿಜದ ಕಡೆಗೆ ಒಯ್ಯಬೇಕಾಗಿದೆ.