೨೧ನೇ ಶತಮಾನದ ಮೊದಲ ಮಹಾಮಸ್ತಕಾಭಿಷೇಕ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಫೆಬ್ರವರಿ ೮ ರಿಂದ ಪ್ರಾರಂಭವಾಗಿದೆ. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕವು ಒಂದು ಸ್ಮರಣೀಯ ಘಟನೆಯೆಂದು ಸದಾ ಉಲ್ಲೇಖಿಸಲ್ಪಡುತ್ತದೆ. ಕ್ರಿ.ಶ. ೯೮೧ ಮಾರ್ಚ್ ೧೩ ರಂದು ಗಂಗರಸರ ಮಹಾಮಾತ್ಯ ಚಾವುಂಡರಾಯನು ಮೊದಲ ಮಹಾಮಸ್ತಕಾಭಿಷೇಕ ಮಾಡಿಸಿದ ನೆಂದು ದಾಖಲೆಗಳು ಹೇಳುತ್ತವೆ. ಬಾಹುಬಲಿಯನ್ನೇ ಗೊಮ್ಮಟೇಶ್ವರನೆಂದು ಕರೆಯಲಾಗುತ್ತಿದೆ. ಭಾರತೀಯ ವಾಸ್ತುಶಿಲ್ಪಕ್ಕೆ ಜೈನಧರ್ಮ ಕೊಟ್ಟ ಕೊಡುಗೆ ಅನನ್ಯವಾಗಿದೆ. ಒರಿಸ್ಸಾದ ಹಾಥಿಗೂಪ್, ಬಿಹಾರ, ಗಿರ‍್ನಾರ್, ಕಾಥೆವಾಡ ಮೊದಲಾದ ಕಡೆಯಿರುವ ಜೈನ ಚೈತ್ಯಾಲಯಗಳು ಭಾರತೀಯ ವಾಸ್ತುಶಿಲ್ಪದ ವಿಕಸನ ಕೇಂದ್ರಗಳು. ಶ್ರವಣಬೆಳಗೊಳದ ಗೊಮ್ಮಟನ ನಿರ್ಮಾಣದ ಶಿಲ್ಪಕ್ಕೆ ಎಲ್ಲಿಂದ ಸ್ಫೂರ್ತಿ ಬಂತೆಂಬುದು ಅನೇಕರ ಕುತೂಹಲ ವಾಗಿದೆ. ಪಂಪನ ಆದಿಪುರಾಣದಲ್ಲಿ ಬಾಹುಬಲಿಯ ಭವ್ಯ ವ್ಯಕ್ತಿತ್ವ ಚಿತ್ರಿತವಾಗಿದೆ. ಕಾವ್ಯಭಾವ ಸಾಕ್ಷಾತ್ಕಾರದ ಸಿದ್ದಿ-ಗೊಮ್ಮಟ. ಬಾದಾಮಿಯ ಐದನೆಯ ಗುಹೆಯಲ್ಲಿ ಬಾಹುಬಲಿಗೆ ಸಂಬಂಧಪಟ್ಟ ಮೂರ್ತಿಗಳು ದೊರೆಯುತ್ತವೆ. ಪ್ರಾಯಶಃ ಚಾವುಂಡರಾಯ ಹಾಗೂ ಅವನ ಕಾಲದ ಶಿಲ್ಪಗಳು ಅಲ್ಲಿಂದಲೇ ಪ್ರೇರಣೆ ಪಡೆದಿರಲು ಸಾಧ್ಯ. ಬಾಹುಬಲಿಯ ಕಥನ ಜಿನಸೇನಾಚಾರ್ಯರ ‘ಪೂರ್ವಪುರಾಣ’ದಲ್ಲಿ ಉಲ್ಲೇಖಿತವಾಗಿದೆ. ಆದಿಕವಿ ಪಂಪನ ಆದಿಪುರಾಣದಲ್ಲೂ ಬಾಹುಬಲಿಯ ಕಥೆ ಬರುತ್ತದೆ. ಮೊದಲ ತೀರ್ಥಂಕರರಾದ ಆದಿನಾಥರ ಮಗ ಬಾಹುಬಲಿ ಅಣ್ಣ ಭರತನ ರಾಜ್ಯದಾಸೆಗೆ ಸಾತ್ವಿಕ ಪ್ರತಿಭಟನೆ ನೀಡಿ ತಾನು ಗೆದ್ದ ರಾಜ್ಯವನ್ನು ಅವನಿಗೆ ಹಿಂದಿರುಗಿಸಿ ಮಹಾತ್ಯಾಗಿ ಎನಿಸಿಕೊಂಡನು. ಭಾರತೀಯ ಪುರಾಣದಲ್ಲಿ ಬಾಹುಬಲಿ, ಭರತ, ಕರ್ಣ ಮೊದಲಾದ ಪಾತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಪ್ರಾಯಶಃ ಭಾರತೀಯ ಮನೋಭಾವದಲ್ಲಿ ತ್ಯಾಗ, ಮನುಷ್ಯ ಅನುಸರಿಸಬೇಕಾದ ಮೊದಲ ಮೌಲ್ಯವಾಗಿದೆ. ನಮ್ಮೆಲ್ಲ ಸಂಕಷ್ಟಗಳಿಗೆ ಸ್ವಾರ್ಥವೇ ಕಾರಣವೆಂದೂ ತ್ಯಾಗದಿಂದ ಮಾತ್ರ ಹೊರಬರಹುದೆಂದೂ ನಮ್ಮ ಪುರಾಣಗಳು ಧ್ವನಿಸುತ್ತವೆ. ನಮ್ಮ ಎಲ್ಲಾ ಗೊಂದಲಗಳಿಗೆ ನಾವು ಇತಿಹಾಸ ಪುರಾಣವನ್ನು ಒಟ್ಟೊಟ್ಟಿಗೆ ಅಧ್ಯಯನ ಮಾಡಿ ಅವುಗಳಲ್ಲಿರುವ ಮೌಲ್ಯ ಗಳನ್ನು ಮರೆಯುವುದು ಕಾರಣವಾಗಿದೆ. ಪ್ರತಿಯೊಂದು ಧರ್ಮಕ್ಕೆ ಎರಡು ರೂಪಗಳಿವೆ. ಒಂದು ವಿಚಾರಾತ್ಮಕ, ಮತ್ತೊಂದು ಆಚಾರಾತ್ಮಕ. ವಿಚಾರಾತ್ಮಕ ಧರ್ಮ ಸದಾ ಹೊಸತನ ವನ್ನು ಬಯಸಿದರೆ, ಆಚರಾತ್ಮಕ ಧರ್ಮ ಯಥಾಸ್ಥಿತಿಯನ್ನು ಬಯಸುತ್ತದೆ. ಜೈನ ಪುರಾಣದಲ್ಲಿ ಉಲ್ಲೇಖಿತವಾಗಿರುವ ಬಾಹುಬಲಿಯ ಕಥೆ ಪುರಾಣದ ಸಂಕೇತ. ಮಹಾಮಸ್ತಕಾಭಿಷೇಕ ಎಂಬುದು ಮನುಷ್ಯನ ಸ್ವಾರ್ಥ, ದುರಾಸೆ ಹಾಗೂ ಆಸೆಬುರುಕುತನ ಗಳನ್ನು ತೊಳೆಯಬೇಕೆನ್ನುವ ಮಹಾಸಂಕೇತ ಅಲ್ಲಿದೆ. ಪುರಾಣಗಳ ಉದ್ದೇಶವು ಸಂಕೇತ ಗಳನ್ನು ಧ್ವನಿಸುವುದಷ್ಟೆ. ಸಂಕೇತವೆಂದರೆ ಕೈಮರವೇ ಹೊರತು ದಾರಿಯಲ್ಲ. ಆದರೆ ಇತಿಹಾಸ ವಾಸ್ತವಿಕವಾಗಿ ನಡೆದ ಘಟನೆಗಳನ್ನು ರಾಗದ್ವೇಷಗಳಿಲ್ಲದೆ ಚಿತ್ರಿಸಿ ಅವುಗಳಿಂದ ಮನುಕುಲ ಕಲಿಯಬಹುದಾದ ಪಾಠಗಳೇನೆಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಮೊದಲ ತೀರ್ಥಂಕರನ ಮಗನಾದ ಬಾಹುಬಲಿಯ ಕಥೆಯು ಮಹಾನ್ ಮೌಲ್ಯಗಳನ್ನು ಬಿತ್ತರಿಸುತ್ತದೆ. ಇದರಲ್ಲಿರುವ ಎಷ್ಟೋ ವಿಚಾರಗಳನ್ನು ಅನುಸರಿಸುವುದು ಅಸಾಧ್ಯದ ಮಾತು. ೨೪ನೇ ತೀರ್ಥಂಕರರು ಜೈನ ಧರ್ಮದ ಸ್ಥಾಪಕರೆಂದು ಹೇಳಲಾಗಿದ್ದು ಅವರ ಮಾತುಗಳು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿವೆ. ಜೈನ ಧರ್ಮದ ಮುಖ್ಯ ತತ್ವಗಳಾದ ಅಹಿಂಸೆ, ಸತ್ಯಾಗ್ರಹ ಹಾಗೂ ತ್ಯಾಗ ಇಂದಿಗೂ ಬೇಕೆನಿಸುವ ಗುಣಗಳು; ಕಳೆದ ಶತಮಾನದಲ್ಲಿ ಮಹಾತ್ಮಾಗಾಂಧೀಜಿ ಯವರಿಗೆ ಪ್ರೇರಣೆ ನೀಡಿದ ತತ್ವಗಳಿವು.

ಜೈನಧರ್ಮವು ಉತ್ತರ ಭಾರತದಲ್ಲಿ ಜನಿಸಿದ್ದರೂ ಅದು ತನ್ನ ವೈಭವದ ದಿನಗಳನ್ನು ಕಂಡಿದ್ದು ದಕ್ಷಿಣ ಭಾರತದಲ್ಲಿ ಎನ್ನಬಹುದು. ಅದರಲ್ಲೂ ವಿಶೇಷವಾಗಿ ಕರ್ನಾಟಕ ರಾಜ್ಯ ಜೈನ ಧರ್ಮವನ್ನು ಪೋಷಿಸಿದ ಮಾತೃಸ್ಥಾನವೆಂದು ಪ್ರಸಿದ್ದಿಯಾಗಿದೆ. ಜೈನಕಾಶಿ ಯೆಂದು ಖ್ಯಾತವಾಗಿರುವ ಮೂಡಬಿದ್ರೆ ವಿಶ್ವದ ಪ್ರಮುಖ ಜೈನಕೇಂದ್ರಗಳಳ್ಲಿ ಒಂದು. ಭಗವಾನ್ ಮಹಾವೀರ ಪ್ರಚಾರಪಡಿಸಿದ ನೇರ ಮತ್ತು ನಿರ್ದಿಷ್ಟ ಸಿದ್ಧಾಂತಗಳು ಧವಳ ಮತ್ತು ಜಯಧವಳ ಗ್ರಂಥದಲ್ಲಿ ಅಡಕವಾಗಿದೆ. ಇದೊಂದು ಜೈನ ಸಿದ್ಧಾಂತದ ಮೂಲ ಆಕರ ಗ್ರಂಥ. ಭಾರತದ ಇತಿಹಾಸದಲ್ಲಿ ಧರ್ಮ ಸಿದ್ಧಾಂತದ ಮೂಲ ಆಕರ ಗ್ರಂಥ ಮೊದಲು ದೊರಕಿದ್ದು ಮೂಡಬಿದ್ರಿಯಲ್ಲಿ. ಕರ್ನಾಟಕದಲ್ಲಿ ಜನಿಸಿದ ಅನೇಕ ಮತಗಳು ಈ ಗ್ರಂಥದಿಂದ ತಮ್ಮ ನಿರ್ದಿಷ್ಟ ಸ್ವರೂಪವನ್ನು ಸ್ಪಷ್ಟಪಡಿಸಿಕೊಂಡಿದ್ದವು. ತತ್ವಗಳಲ್ಲಿ ಭಿನ್ನಾಭಿಪ್ರಾಯ ಇದೆ ಹೊರತು ವ್ಯಕ್ತಿಗಳ ಮಧ್ಯೆ ಅಲ್ಲವೆಂಬ ಮಹಾನ್ ತತ್ವವನ್ನು ನಮ್ಮ ಪೂರ್ವಿಕರು ಅರಿತಿದ್ದರು. ಈಗ ತತ್ವಗಳಲ್ಲಿ ಭಿನ್ನಾಭಿಪ್ರಾಯವೆಂಬುದು  ಮರೆಯಾಗಿ ವ್ಯಕ್ತಿಗತ ಸಂಘರ್ಷ ಪ್ರಾರಂಭವಾಗಿರುವುದೇ ಎಲ್ಲ ಸಮಸ್ಯೆಗಳಿಗೂ ಮೂಲವಾಗಿದೆ.

ಜೈನಧರ್ಮವು ಮತವಲ್ಲ. ಅದೊಂದು ತಾತ್ವಿಕ ಸಿದ್ಧಾಂತ. ಸಾರ್ವತ್ರಿಕ ಸತ್ಯಗಳ ಪರಮ ಸಿದ್ಧಾಂತ. ನಮ್ಮಲ್ಲಿ ಜೈನಧರ್ಮ, ವೈದಿಕ ಧರ್ಮದ ಮೇಲೆ ಪ್ರಭಾವ ಬೀರಿದೆ. ವೈದಿಕ ಧರ್ಮದಲ್ಲಿ ಸಸ್ಯಾಹಾರದ ಬಗ್ಗೆ ಬದ್ಧತೆ ಮೂಡಿಸಿದ ಪ್ರಭಾವ ಜೈನಧರ್ಮಕ್ಕೆ ಸೇರುತ್ತದೆ. ವೈದಿಕ ಧರ್ಮದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಜೈನ ಕವಿಗಳು ಬಳಸಿಕೊಂಡು ಅತ್ಯುತ್ತಮವಾದ ರೀತಿಯಲ್ಲಿ ಲೌಕಿಕ ಕಾವ್ಯ ರಚಿಸಿದ್ದಾರೆ. ಆದಿಕವಿ ಪಂಪ, ಕವಿಚಕ್ರವರ್ತಿಗಳಾದ ಪೊನ್ನ, ರನ್ನ, ರತ್ನಾಕರವರ್ಣಿ ಮೊದಲಾದವರನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಜೈನರು ೬೬ ಮಹಾನ್ ಪುರುಷರ ಕಥೆಯನ್ನು ಹೇಳುವುದರ ಮೂಲಕ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.

ಶೈವರು ೬೩ ಪುರಾತನರ ಕಥೆಯ ಮೂಲಕ ಶೈವ ಸಿದ್ಧಾಂತವನ್ನು ಹೇಳಿದ್ದಾರೆ. ಜೈನಧರ್ಮದ ಪ್ರಭಾವದಿಂದ ಅರಬ್ ದೇಶದ ಪ್ರಸಿದ್ಧ ಕವಿ ಸೂಫಿ ಪಂಥದ ‘ಅಬ್ದುಲ್ ಅಲ್ಲಾ’ (ಕ್ರಿ.ಶ. ೯೭೩-೧೦೫೮) ಎಂಬ ಸಂತ ತನ್ನ ನೈತಿಕ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಏಸುಕ್ರಿಸ್ತ ಹೇಳಿದ ವಿಶ್ವಮಾನವ ತತ್ವ ಕೂಡ ಜೈನ ಸಿದ್ಧಾಂತದಿಂದಲೇ ಹೊರಹೊಮ್ಮಿತೆಂದು ಇತಿಹಾಸಕಾರರು ಬರೆಯುತ್ತಾರೆ. ಏಸು ಒಮ್ಮೆ ಹೇಳಿದ ಮಾತು ಹೀಗಿದೆ : “ನೀವು ನಿಮ್ಮ ಹತ್ತಿರ ಬಂಗಾರ, ಬೆಳ್ಳಿ ಅಥವಾ ಅಂಗಿ ಅರಿವೆಗಳನ್ನು ಕೂಡ ಇಟ್ಟುಕೊಳ್ಳಬೇಡಿ”. ಇದು ಹೆಚ್ಚು ಕಡಿಮೆ ಜೈನ ಧರ್ಮದ ಸಂದೇಶವೇ ಆಗಿದೆ. ಚೀನಾದ ಮಹಾನ್ ತತ್ವಜ್ಞಾನಿ ಕನ್‌ಫ್ಯೂಶಿಯಸ್ ಜೈನ ಸಿದ್ಧಾಂತಗಳಿಗೆ ಸಾಕಷ್ಟು ಋಣಿಯಾಗಿದ್ದರು. ಜರ್ಮನಿಯ ಪತ್ರಕರ್ತ ವಾಲ್ಟರ್ ಲೀಫರ್ ಹೇಳುವ ಮಾತು: “ಭಾರತ ಆಧ್ಯಾತ್ಮಿಕ ಶಕ್ತಿ ಬಳಸಿಕೊಂಡಿದೆ, ಮಹಾವೀರ ತೀರ್ಥಂಕರರು ಯಾರನ್ನೂ ಕೊಲ್ಲಕೂಡದೆಂದು ಬೋಧಿಸಿದ್ದಾರೆ. ಆ ಮಾತು ಗಳನ್ನು ಶ್ರದ್ಧೆಯಿಂದ ಕೇಳದಿದ್ದರೆ ಜಗತ್ತು ಮಹಾಯುದ್ಧಕ್ಕೆ ಅಣಿಯಾಗಬೇಕಾಗುತ್ತದೆ” ಇಂತಹ ಮಾತುಗಳನ್ನು ಆತ ವಿಶ್ವದ ಎರಡನೇ ಮಹಾಯುದ್ಧದ ಪೂರ್ವದಲ್ಲಿಯೇ ಹೇಳಿದ್ದನೆಂಬುದು ಉಲ್ಲೇಖಿಸಬೇಕಾದ ವಿಚಾರ.

ಬ್ರಿಟಿಷ್ ಸೈನ್ಯದಲ್ಲಿ ಹಿರಿಯ ಅಧಿಕಾರಿಯಾಗಿದ್ದ ಥಾಮಸ್ ಹೆಚ್. ಲಾರೆನ್ಸ್: “ವಿಶ್ವಶಾಂತಿ ಬಯಸುವವರೆಲ್ಲ ಅಹಿಂಸಾ ತತ್ವವನ್ನು ಪಾಲಿಸಲೇಬೇಕು” ಎನ್ನುತ್ತಾನೆ. ಆಧುನಿಕ ಯುಗದಲ್ಲೂ ಕೂಡ ಅಹಿಂಸೆ ಹೇಡಿಯ ಆಯುಧವಾಗಿರಲಿಲ್ಲವೆಂಬುದನ್ನು ಮಹಾತ್ಮಾ ಗಾಂಧೀಜಿಯವರು ತೋರಿಸಿಕೊಟ್ಟಿರುತ್ತಾರೆ. ಜೈನಧರ್ಮ ಹೇಳುವ ಆತ್ಮಶುದ್ದಿ ಕ್ರಿಯೆಗೆ ಎಂತಹ ಮಹತ್ವವಿದೆ ಎಂಬುದನ್ನು ಇಂದಿನ ಮನಃಶಾಸ್ತ್ರಜ್ಞರು ಒತ್ತಿ ಹೇಳಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಗೊಮ್ಮಟ ಮಹಾಮಸ್ತಕಾಭಿಷೇಕವು ಕೇವಲ ಧಾರ್ಮಿಕ ಕ್ರಿಯೆಯ ಹಂತದಲ್ಲಿ ನಿಲ್ಲಬಾರದು. ಅದು ಮನುಷ್ಯನ ಮೃಗೀಯತ್ವದ ಪರಿವರ್ತನೆಗೆ ಸಹಾಯಕವಾಗಬೇಕು.