ಸ್ಪರ್ಧಾತ್ಮಕ ಜಗತ್ತಿನ ಆರ್ಥಿಕ ಪರಿವರ್ತನೆಯಲ್ಲಿ ಜ್ಞಾನವು, ಸರಕು ಮತ್ತು ಸೇವೆಯಲ್ಲಿ ರೂಪಾಂತರಗೊಳ್ಳುವುದೆ ಆಗಿದೆ. ಇಂದಿನ ಸಂಕ್ರಮಣ ಕಾಲದಲ್ಲಿ ಸಮಗ್ರ ಪ್ರತಿಭಾನ್ವೇಷಣೆಯ ಹೊಸ ಮನ್ವಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಾರಂಭವಾಗ ಬೇಕು. ಆದರೆ ಭಾಷಾ ಮಾಧ್ಯಮದ ಗೊಂದಲ, ಎಲ್ಲಾ ಹಂತದ ಶೈಕ್ಷಣಿಕ ಅರಾಜಕತೆ, ಯೋಗ್ಯ ಗುಣಮಟ್ಟದ ಶಿಕ್ಷಣದ ಕೊರತೆ ಮತ್ತು ವ್ಯಾಪಾರೀಕರಣ ಮುಂತಾದ ಗೊಂದಲ ದಿಂದ ಶಿಕ್ಷಣ ಕವಲು ದಾರಿಯಲ್ಲಿದೆ.

ಭಾಷೆ ಶಿಕ್ಷಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಬದಲಾವಣೆ ಆಗುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ಚಿಂತನಾಗತಿಗಳ ನಾಗಾಲೋಟದಲ್ಲಿ ಮಾತೃಭಾಷೆ ಮತ್ತು ಆಂಗ್ಲ ಭಾಷೆಯ ತಾಕಲಾಟದಲ್ಲಿ ಯಾವುದರಲ್ಲಿಯೂ ಸಂಪೂರ್ಣ ಹಿಡಿತವನ್ನು ಪಡೆಯಲಾರದೆ ಶಿಕ್ಷಣರಂಗ ಡೋಲಾಯಮಾನದಲ್ಲಿದೆ. ಭಾಷೆ ಹೊಸಲಲ್ಲಿ ಹಾಸುವ (Doormat) ಕಾಲೊರಸು ಅಲ್ಲ. ಅದು ನಿರ್ದಿಷ್ಟವಾದ ಜನರ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಬದುಕನ್ನು ಶ್ರೀಮಂತಗೊಳಿಸಬೇಕೇ ಹೊರತು ಹೊರಗಿನ ರಾಷ್ಟ್ರ ಅಥವಾ ಸಮಾಜದ ಆವಶ್ಯಕತೆಗಳನ್ನು ಪೂರೈಸುವ ಸಾಧನವಾದರೆ ಪ್ರದೇಶದ ಅಥವಾ ರಾಷ್ಟ್ರದ ಬದುಕಿಗೆ ಅದು ಎಂದಿಗೂ ಪೂರಕವಾಗುವುದಿಲ್ಲ. ನಮ್ಮ ನಮ್ಮ ಮಾತೃಭಾಷೆ ಇಂದಿನ ಅಥವಾ ಮುಂದಿನ ಚಿಂತನಾಲಹರಿ ಅಥವಾ ಹೊಸ ಜೀವನಮಾರ್ಗಗಳ ನ್ಯೂನತೆ, ರಾಷ್ಟ್ರದ ಮತ್ತು ಜಗತ್ತಿನ ಬದಲಾವಣೆಯ ಕ್ಷಿತಿಜವನ್ನು ಅರ್ಥೈಸಿಕೊಳ್ಳುವಂತಿರಬೇಕು. ಅಲ್ಲದೆ ಹೊಸ ಅಭಿವ್ಯಕ್ತಿ ಮತ್ತು ಜ್ಞಾನಕ್ಷಿತಿಜಗಳನ್ನು ಸ್ಪರ್ಶಿಸುವಂತಿರಬೇಕು. ಭಾಷಾ ಮಾಧ್ಯಮ ತಮ್ಮ ತಮ್ಮ ಮಧ್ಯೆ ಪ್ರದೇಶ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಪರಿಣಾಮ ಕಾರಿ ಸಂವಾದಗಳಿಗೆ ಸ್ಪಂದಿಸಬೇಕು. ಆ ರೀತಿಯಲ್ಲಿ ಸ್ಪಂದಿಸುವ ಲೋಕಶಕ್ತಿಯನ್ನು ಸಂಪೂರ್ಣವಾಗಿ ಪಡೆದಿರಬೇಕು. ಹಿಂದಿನ ಯಾವುದೇ ಭಾಷೆಯ ವೈಭವ ಅಥವಾ ಶಕ್ತಿ ಇಂದಿನ ಜನಮನಕ್ಕೆ ಸ್ಪಂದಿಸದಿದ್ದರೆ ಆ ಮಾಧ್ಯಮ ದುರ್ಬಲವಾಗುತ್ತದೆ. ತನ್ಮೂಲಕ ಜನರ ಮಧ್ಯೆ ಸಂವಹನ ಪ್ರಕ್ರಿಯೆಗೆ ಪ್ರತಿಕ್ರಿಯಿಸಲಾಗುವುದಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಗಳು ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೆ ಇಂತಹ ಜ್ಞಾನದ ಸಶಸ್ತ್ರೀಕರಣವನ್ನು ಪ್ರತಿಬಿಂಬಿಸದಿದ್ದರೆ ರಾಷ್ಟ್ರದ ಮತ್ತು ಜಗತ್ತಿನ ಜ್ಞಾನದ ಮಾರುಕಟ್ಟೆಯಲ್ಲಿ ನಾವು ಅಪ್ರಸ್ತುತರಾಗುತ್ತೇವೆ. ಅಂದರೆ ಮಾತೃಭಾಷೆಯ ಸಂಪೂರ್ಣ ಹಿಡಿತವಿಲ್ಲದಿದ್ದರೆ ಪರಸ್ಪರ ಸಂವಹನ ಪ್ರಕ್ರಿಯೆ ದುರ್ಬಲವಾಗುತ್ತದೆ. ಆದರೆ ಶಿಕ್ಷಣದ ಜ್ಞಾನ ಸಂವಹನ ಮಾತೃಭಾಷೆಯ ಮಾಧ್ಯಮದಲ್ಲಿ ಜಾಗತಿಕ ಶಕ್ತಿಯ ಪ್ರತಿಸೃಷ್ಟಿ ಇರಬೇಕು. ದುರ್ಬಲ ಭಾಷೆ ದುರ್ಬಲರನ್ನೇ ಸೃಷ್ಟಿಸುತ್ತದೆ. ಜನರನ್ನು ಮತ್ತಷ್ಟು ಕುಬ್ಜರನ್ನಾಗಿಸುತ್ತದೆ. ಪ್ರಸಕ್ತ ಆಂಗ್ಲ ಮಾಧ್ಯಮ ಅಥವಾ ಮಾತೃಭಾಷಾ ಶಿಕ್ಷಣ ಜಾಗತಿಕ ಅಥವಾ ರಾಷ್ಟ್ರ ನಿರೀಕ್ಷೆಗೆ ಸ್ಪಂದಿಸದಿರುವುದು ನಮ್ಮ ದೌರ್ಭಾಗ್ಯ. ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯ ಭದ್ರ ಬುನಾದಿಯಿಲ್ಲದ ಜ್ಞಾನ ವಿವೇಕದ ಫಲ ನೀಡದ ಬಂಜೆ ವೃಕ್ಷವಿದ್ದಂತೆ. ರಾಷ್ಟ್ರಭಾಷೆಯಂತೂ ಹಿಂದಿಯ ಮೇಲಿನ ದ್ವೇಷ ಅಥವಾ ನಕಾರಾತ್ಮಕ ಧೋರಣೆಯಿಂದ ಮರೀಚಿಕೆಯಾಗಿದೆ. ಮಾತೃಭಾಷೆ ಯನ್ನಾದರೂ ಸದೃಢಗೊಳಿಸೋಣ. ಮಾಧ್ಯಮವೇ ಭಾಷಾ ಪಾಂಡಿತ್ಯಕ್ಕೆ ಸಾಧನವೆಂದು ಹೇಳಲಾಗುವುದಿಲ್ಲ. ಆದರೆ ಆಯಾಯ ಭಾಷಾ ಮಾಧ್ಯಮದಡಿಯಲ್ಲಿ ಅಥವಾ ಅಷ್ಟೇ ಶಕ್ತಿಯುತವಾದ ಇನ್ನಿತರ ಭಾಷೆಗಳನ್ನು ಶೈಕ್ಷಣಿಕ ಪದವಿಯೊಂದಿಗೆ ಸರಿಜೋಡಿಸಿದಾಗ ಅದ್ಭುತವಾದ ಭಾಷೆ, ಜ್ಞಾನ ಮತ್ತು ವಿವೇಕದ ಸಂವಹನ ಸಾಧ್ಯವಾಗುತ್ತದೆ.

ನಮ್ಮ ದೇಶದ ಈಗಿನ ಪರಿಸ್ಥಿತಿಯಲ್ಲಿ ಕಡಿಮೆ ಪಕ್ಷ ಪ್ರೌಢಶಾಲಾ ಶಿಕ್ಷಣದವರೆಗೆ ಮಾತೃಭಾಷೆಯನ್ನು ಶಕ್ತಿಯುತ ಮಾಧ್ಯಮವನ್ನಾಗಿಸಿ ಅದರ ಜೊತೆ ಜೊತೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲಭಾಷೆಯನ್ನು ಕೂಡ ಕಲಿಸಿದಾಗ ಬಹುಶಃ ನಮ್ಮ ಜನರ ಜ್ಞಾನ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಿಜವಾಗಿ ರಾಷ್ಟ್ರದಮಟ್ಟಿಗೆ ಹಿಂದಿ ರಾಷ್ಟ್ರಭಾಷೆ ಯಾಗಿ ನಮ್ಮ ಮಧ್ಯೆ ಬೆಳೆಸುವುದು ಇಂದು ಸಾಧ್ಯವಾಗದಿದ್ದರೂ, ಮುಂದೆಯಾದರೂ ರಾಷ್ಟ್ರದ ಪ್ರಗತಿ ಮತ್ತು ಭಾವೈಕ್ಯತೆಯ ದೃಷ್ಟಿಯಿಂದ ಅನಿವಾರ‍್ಯ. ಆದರೆ ರಾಷ್ಟ್ರಭಾಷೆಯ ಈ ಕೊಂಡಿ ನಮ್ಮ ನಮ್ಮ ಪ್ರಾದೇಶಿಕ, ಸಂಕುಚಿತ ಅಥವಾ ರಾಜಕೀಯ ಭಾವನಾ ಲಹರಿಯಲ್ಲಿ ಕೊಚ್ಚಿಕೊಂಡು, ಆಂಗ್ಲಭಾಷೆ ತನ್ನ ಸ್ಥಾನವನ್ನು ಭದ್ರಪಡಿಸಿತು. ಆದರೆ ಪುನಃ ಹಿಂದಿ ರಾಷ್ಟ್ರಭಾಷೆಯಾಗಿ ತನ್ನ ಸ್ಥಾನಗಳಿಸುವವರೆಗೆ ಆಂಗ್ಲ ಭಾಷೆಯೇ ರಾಷ್ಟ್ರದ ಪ್ರಗತಿ ಮತ್ತು ಭಾವೈಕ್ಯದ ಸಂಪರ್ಕ ಮಾಧ್ಯಮವಾಗಿ ಉಳಿದಿರುವುದು ವಿಪರ್ಯಾಸ! ಆದರೆ ಅದು ಅನಿವಾರ್ಯ. ಅಂದರೆ ಮಾತೃಭಾಷೆಯನ್ನು ಕುಂಠಿತಗಳಿಸುವುದೆಂಬ ಅರ್ಥವಲ್ಲ. ಆದರೆ ಭಾಷಾ ಗೊಂದಲದ ನೆಪದಲ್ಲಿ ನಮ್ಮ ಸಮುದಾಯವನ್ನು ಬಲಿಕೊಡುವ ಪ್ರವೃತ್ತಿಗೆ ಇತಿಶ್ರೀ ಹಾಡಲೇಬೇಕು. ಆಂಗ್ಲ ಭಾಷೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಂಯೋಜಿಸುವುದು ರಾಷ್ಟ್ರವನ್ನು ಸ್ಪರ್ಧಾತ್ಮಕ ಹೆದ್ದಾರಿಯಲ್ಲಿ ಕೊಂಡುಹೋಗಲು ಇಂದು ಅನಿವಾರ‍್ಯವೆಂಬುದನ್ನು ಮರೆಯಲಾಗದು. ನಮ್ಮ ಮಕ್ಕಳ ಭವಿಷ್ಯವನ್ನು ನಮ್ಮ ನಮ್ಮ ಭಾವಸಮುದ್ರದಲ್ಲಿ ಮುಳುಗಿಸಬಾರದು. ಈ ಬಗ್ಗೆ ನಿರ್ದಿಷ್ಟ ಮತ್ತು ವಸ್ತುನಿಷ್ಠ ನೀತಿ ರೂಪಿಸಬೇಕಾಗಿದೆ.

ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆ, ಗಣಿತ, ಪರಿಸರ ಮತ್ತು ಸಾಮಾಜಿಕ ವಿಜ್ಞಾನದ ತಳಹದಿ – ಒಟ್ಟೂ ಶಿಕ್ಷಣದ ಸಮಗ್ರ ಅಭಿವೃದ್ದಿಯಲ್ಲಿ ಪ್ರಮುಖವಾಗಿರುತ್ತದೆ. ಇತ್ತೀಚೆಗೆ ನಡೆಸಿದ ಶೈಕ್ಷಣಿಕ ಸಮೀಕ್ಷೆಯಿಂದ ಬಿಹಾರ, ಕರ್ನಾಟಕ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಮೇಲ್ಕಾಣಿಸಿದ ಮೂರು ವಿಷಯಾನುಕ್ರಮಣದಲ್ಲಿ ರಾಷ್ಟ್ರದಲ್ಲೇ ಅತ್ಯಂತ ಕಡಿಮೆ ಅಂಕಗಳನ್ನು (ಅಂದರೆ ಅತ್ಯಂತ ಕನಿಷ್ಠ ಶಿಕ್ಷಣಮಟ್ಟವನ್ನು) ಪಡೆದಿದೆ. ಈ ಬೆಳವಣಿಗೆ ಮುಂದೆ ಶಿಕ್ಷಣಮಟ್ಟದ ತಳಪಾಯವನ್ನೇ ಅಲುಗಾಡಿಸಬಹುದು. ತೀವ್ರ ಮತ್ತು ಕ್ರಾಂತಿಕಾರೀ ಬದಲಾವಣೆಗಳ ಬಗ್ಗೆ ಈ ನಾಲ್ಕು ರಾಜ್ಯಗಳಲ್ಲಿ ಚಿಂತನೆ ನಡೆಸಿ ತಮ್ಮ ಶಿಕ್ಷಣ ವ್ಯವಸ್ಥೆ ಸರಿಪಡಿಸದಿದ್ದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕಾರ್ಮೋಡ ಕವಿಯಬಹುದು.

ಅತ್ಯಂತ ಕಡಿಮೆ ಅಂಕಗಳನ್ನು ಹೊಂದಿರುವ ರಾಜ್ಯ (The top low scorers in the Country)
ಕೊನೆ ಅಂಕ Mean*

  ಭಾಷೆ ಗಣಿತ ಪರಿಸರ ಮತ್ತು ಸಾಮಾಜಿಕ ವಿಜ್ಞಾನ
ಬಿಹಾರ ೫೩.೮ ೪೪.೫ ೫೩.೫
ಕರ್ನಾಟಕ ೩೫.೭ ೨೯.೨ ೩೬.೮
ಮಹಾರಾಷ್ಟ್ರ ೩೨.೬ ೨೬.೫ ೩೫.೨
ರಾಜಸ್ಥಾನ ೫೩.೩ ೪೮.೨ ೫೨.೨

ಕರ್ನಾಟಕದ ಪರಿಸ್ಥಿತಿ ಕೂಡ ಮೇಲಿನ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಚಿಂತಾಜನಕವಾಗಿದೆ.

ಸ್ವಾತಂತ್ರ್ಯ ದೊರಕಿ ೫೮ ವರ್ಷಗಳಾದರೂ ೨೫ ವಯಸ್ಸಿಗೆ ಮೀರಿದವರಲ್ಲಿ ಶೇ. ೫೦ರಷ್ಟು ಜನರು ಯಾವುದೇ ರೀತಿಯ ಶಿಕ್ಷಣ ಪಡೆದಿಲ್ಲ. ಉಳಿದ ಶೇ. ೨೫ ಮಂದಿ ಅರ್ಧಂಬರ್ಧ ಪ್ರಾಥಮಿಕ ಶಿಕ್ಷಣ ಪಡೆದವರಾಗಿದ್ದಾರೆ. ಶೇ. ೮ ಮಂದಿ ಮಾತ್ರ ಪ್ರೌಢಶಾಲೆಗಳನ್ನು ಅಥವಾ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಈಗ ರೂಪಿಸಿದ ಸರ್ವಶಿಕ್ಷಣ ಅಭಿಯಾನ ಪ್ರಕಾರ ೨೦೦೭ನೇ ಇಸವಿಯ ಮೊದಲು ಪ್ರತಿಯೊಂದು ಮಗು ಕೂಡ ಪ್ರಾಥಮಿಕ ಶಿಕ್ಷಣ, ೨೦೧೦ರ ಒಳಗಡೆ ಈ ರೀತಿಯಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ ವಿದ್ಯಾರ್ಥಿಗಳೆಲ್ಲರೂ ೮ನೇ ತರಗತಿಯನ್ನು ಮುಗಿಸಿರಬೇಕೆಂದು ದೀಕ್ಷಾಬದ್ಧವಾದ ಧೋರಣೆ ಕೈಗೊಂಡಿದೆ. ಈ ಲೇಖನವನ್ನು ಬರೆದ ಕೃತಿಕಾರರು ೧೯೯೨-೯೩ರಲ್ಲೇ ಈ ಆಂದೋಲನವನ್ನು ಕೈಗೆತ್ತಿಗೊಂಡಾಗ UNESCO ಈ ಆಂದೋಲನಕ್ಕೆ ಒಂದು ಜಾಗತಿಕ ಸ್ವರೂಪವನ್ನು ನೀಡಿತ್ತು. ಮಾನವ ಸಂಪನ್ಮೂಲದ ಪ್ರಗತಿಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿ, ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಆದುದರಿಂದ ಕರ್ನಾಟಕ ಈಗ ಚೇತರಿಸಿ ಮುನ್ನಡೆ ಸಾಗಬೇಕಾದ ಅವಶ್ಯಕತೆಯಿದೆ.

ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ಸಮಗ್ರವಾದ ಶಿಕ್ಷಣ ಪ್ರಕ್ರಿಯೆಯ ಬದಲಾವಣೆಯ ಜೊತೆಯಲ್ಲಿ ಪೂರಕವಾದ ಬಂಡವಾಳವನ್ನು ಮಾನವ ಸಂಪನ್ಮೂಲದ ಅಭಿವೃದ್ದಿಗೆ ಒದಗಿಸದಿದ್ದಲ್ಲಿ ಭಾರತ ಸ್ಪರ್ಧಾತ್ಮಕ ಯುಗದ ಹೆದ್ದಾರಿಯಲ್ಲಿ ಕುಸಿದು ಹೋಗಬಹುದು. ಶಿಕ್ಷಣವನ್ನು ವ್ಯಾಪಾರದ ಸರಕೆಂದು ಪರಿಗಣಿಸುತ್ತಿರುವ ಇಂದಿನ ಜಾಗತಿಕ ಓಟದಲ್ಲಿ ಭಾರತ ತನ್ನತನವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ನಡೆಸಿದ ೧೦೦ ಗ್ರಾಮಗಳ ಸಮೀಕ್ಷೆಯಲ್ಲಿ ಪ್ರತಿಯೊಂದು ಗ್ರಾಮದ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಸೇರಿದ ವಿದ್ಯಾರ್ಥಿನಿಯರಲ್ಲಿ ಪ್ರೌಢಶಾಲೆಗೆ ಬರುವಾಗ ಓರ್ವ ಹುಡುಗಿ ಮಾತ್ರ ಉಳಿಯುತ್ತಾಳೆಂದರೆ ನಮ್ಮ ಶಿಕ್ಷಣದ ವ್ಯವಸ್ಥೆಯ ದುರಂತದ ಅರಿವಾಗುತ್ತದೆ. ಆಶ್ಚರ್ಯವೆಂದರೆ NCERT ಯಂತಹ ಶಿಕ್ಷಣ ವ್ಯವಸ್ಥೆಯ ರಾಷ್ಟ್ರೀಯ ಜವಾಬ್ದಾರಿ ಹೊತ್ತ ಸಂಸ್ಥೆ ೨೦೦೪ ರ ಮೊದಲು ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಸಭೆಯನ್ನು ಕರೆದಿಲ್ಲವೆಂದರೆ ದಿವ್ಯ ನಿರ್ಲಕ್ಷ್ಯದ ಪೂರ್ಣ ಪರಿಚಯವಾಗುತ್ತದೆ.

ಉತ್ತಮ ಶಿಕ್ಷಣ ಎಲ್ಲರ ಪಾಲಿಗೆ ದಕ್ಕುವ ಮತ್ತು ಉತ್ತಮ ವ್ಯವಸ್ಥೆಯ ಪಠ್ಯಪುಸ್ತಕಗಳ, ಶಿಕ್ಷಕರ ಮತ್ತು ಪರೀಕ್ಷಾ ಕ್ರಮಗಳ ದುರ್ಬಲತೆಯಿಂದ ಒಟ್ಟು ಶಿಕ್ಷಣ ವ್ಯವಸ್ಥೆ ಸೊರಗಿಹೋಗಿದೆ. ಮಕ್ಕಳಲ್ಲಿ ಪ್ರಶ್ನಿಸುವ ಅನ್ವೇಷಣ ಮನೋಭೂಮಿಕೆ ಮರೆಯಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಮುಖ್ಯವಾಹಿನಿಯ ಪ್ರತಿಭಾನ್ವೇಷಣೆಯ ಕ್ಷಿತಿಜದಲ್ಲಿ ತನ್ನತನವನ್ನು ಮರೆಯುತ್ತಿರುವ ಭಾರತ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರಪಾತಕ್ಕೆ ಉರುಳುತ್ತಿರುವ ದೃಶ್ಯ ಅತ್ಯಂತ ದಾರುಣವಾಗಿದೆ. ಶಿಕ್ಷಣವೇ ಒಂದು ಸಮುದಾಯದ ಆತ್ಮವೆಂದು ಸಾರುತ್ತಿರುವ ನಮ್ಮ ರಾಷ್ಟ್ರದ ಉಜ್ವಲ ಪರಂಪರೆ ಇಂದು ಭೂತಾಕಾರವಾಗಿ ನಿಂತಿರುವ ಶೈಕ್ಷಣಿಕ ದೌರ್ಬಲ್ಯದ ಸವಾಲುಗಳಿಗೆ ಉತ್ತರ ನೀಡಬೇಕಾಗಿದೆ. ಸಮಗ್ರ ನಾವೀನ್ಯತಾ ಪರಿವರ್ತನಾಶೀಲ ಶಿಕ್ಷಣ ನೀತಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಇಂದಿನ ಅನಿವಾರ್ಯತೆಯಾಗಿದೆ.