ಧರ್ಮದ ಬೋಧನೆಗೆ ತಾತ್ತ್ವಿಕ ತಳಹದಿಯನ್ನು ಹಾಕಿಕೊಟ್ಟ ಬ್ರಹ್ಮಸೂತ್ರದ ಅಗ್ರಗಣ್ಯ ಭಾಷ್ಯಗಳನ್ನು ನೀಡಿದ್ದು ದ್ರಾವಿಡನಾಡು. ಅತ್ಯಂತ ಭಾವನಾತ್ಮವಾದ ಸ್ತುತಿಗೀತೆ ಗಳನ್ನು ಹಾಡಿದ ಶೈವ ಹಾಗೂ ವೈಷ್ಣವ ಗಾಯಕರನ್ನು ನೀಡಿದ್ದೂ ಈ ನಾಡೇ.

ಅಂತೆಯೇ ಬ್ರಹ್ಮಾತಿರಕ್ತವಾದ ಸಕಲ ಪ್ರಪಂಚಕ್ಕೂ ಬ್ರಹ್ಮನೇ ಪೂರ್ಣ ಹಾಗೂ ಸ್ವತಂತ್ರ ಕಾರಣನೆಂದು ಪ್ರತಿಪಾದಿಸಿದರು. ಈ ತಥ್ಯದ ಪ್ರತಿಪಾದನೆಗೆ ಮಧ್ವಾಚಾರ್ಯರು ನಾಲ್ಕು ಭಾಷ್ಯಗಳನ್ನು ರಚಿಸಿದರು. ೧. ಬ್ರಹ್ಮಸೂತ್ರಭಾಷ್ಯ ೨. (ಋಗ್ವೇದದ ಆರಂಭದ ಕೆಲವು ಮಂತ್ರಗಳಿಗೆ ಮಾತ್ರ) ಋಗ್‌ಭಾಷ್ಯ ೩. ಹತ್ತು ದಾರ್ಶನಿಕ ಉಪನಿಷತ್ತುಗಳಿಗೆ ದಶೋಪನಿಷತ್ ಭಾಷ್ಯ ಹಾಗೂ ೪. ಗೀತಾಭಾಷ್ಯ ಅವರು ಇವುಗಳಲ್ಲದೆ ಮಹಾಭಾರತ ಹಾಗೂ ಭಾಗವತಕ್ಕೆ ವ್ಯಾಖ್ಯಾನರೂಪವಾದ ಭಾರತ ತಾತ್ಪರ್ಯ ನಿರ್ಣಯ ಮತ್ತು ಭಾಗವತ ತಾತ್ಪರ್ಯ ನಿರ್ಣಯಗಳನ್ನೂ, ಬ್ರಹ್ಮಮೀಮಾಂಸೆಗೆ ಸಹಾಯಕವಾಗುವ ದಶಪ್ರಕರಣ ಗ್ರಂಥಗಳನ್ನೂ ಮತ್ತು ಮಾನವನ ಸಮಗ್ರ ಜೀವನವೂ ಬ್ರಹ್ಮಜಿಜ್ಞಾಸಾ ಪರವಾಗಿರಬಹುದು ಎನ್ನುವ ತತ್ತ್ವವನ್ನು ಬೋಧಿಸಲು ಇತರ ಹಲವಾರು ಗ್ರಂಥಗಳನ್ನೂ ರಚಿಸಿದರು. ಮಧ್ವಾಚಾರ್ಯರು ರಚಿಸಿದ ಗ್ರಂಥಗಳು ಒಟ್ಟು ಮೂವತ್ತೇಳು. ಮಧ್ವಾಚಾರ್ಯರ ಕೃತಿಗಳಲ್ಲಿ ಏಕವಾಕ್ಯತೆಯು ಚೆನ್ನಾಗಿ ತೋರಿಬರುತ್ತದೆ. ಇವರ ಒಂದೊಂದು ಗ್ರಂಥವೂ ಒಂದೊಂದು ವ್ಯಾಖ್ಯೆಯೋ ಎಂಬಂತೆ ತೋರುತ್ತದೆ. ಆದ್ದರಿಂದಲೇ ಇವರ ಸಮಗ್ರ ಕೃತಿಗಳು ಒಂದೇ ಗ್ರಂಥದ ಬೇರೆ ಬೇರೆ ಭಾಗಗಳು ಅಥವಾ ಅಧ್ಯಾಯಗಳು ಎಂಬಂತೆ ಭಾಸವಾಗುತ್ತವೆ.

ಮಧ್ವಾಚಾರ್ಯರು ಗ್ರಂಥಗಳಿಗೆ ವ್ಯಾಖ್ಯಾನವನ್ನು ಬರೆದವರಲ್ಲಿ ಅಗ್ರಗಣ್ಯರಾದ ಜಯತೀರ್ಥರು ‘ತತ್ತ್ವಪ್ರಕಾಶಿಕಾ’ದ ಆರಂಭದಲ್ಲಿ ತಮ್ಮ ವ್ಯಾಖ್ಯಾನವನ್ನು ‘ಸಂಗಮ್ಯಂತೇ ಗುರ್ರ‍ೋರ್ಗಿರಃ’ (‘ಗುರುಗಳ ಮಾತುಗಳನ್ನೇ ಒಂದೆಡೆ ಕ್ರೋಡೀಕರಿಸುವೆನು’ ಎಂದು ಸ್ಪಷ್ಟಪಡಿಸಿದ್ದಾರೆ).

ಮಧ್ಯಾಚಾರ್ಯರು ತಮ್ಮ ವಾದಸರಣಿಯಲ್ಲಿ ಪ್ರಮಾಣಗಳಿಗೆ ಆದ್ಯತೆಯನ್ನು ಕೊಟ್ಟಿದ್ದಾರೆ. ಇವರ ವಸ್ತುತತ್ತ್ವ ವಿವೇಕವೂ ಸಹ ಪ್ರಮಾಣಪೋಷಿತವಾದುದಾಗಿದೆ. ಅವರು ತತ್ತ್ವವನ್ನು ಪ್ರಮೇಯ (ಎಂದರೆ ಯಥಾರ್ಥ ಜ್ಞಾನಸಿದ್ಧವಾದುದು) ಎಂದು ಹೇಳಿರುವುದರ ತಾತ್ಪರ್ಯವೂ ಇದೇ. ಅವರು ತತ್ತ್ವಾನ್ವೇಷಣೆಯ ಕೊನೆಯ ಹಂತದಲ್ಲಿ ಶ್ರುತಿಜನ್ಯವಾದ ಜ್ಞಾನವೇ ಪ್ರಮಾಣ ಮತ್ತು ಶ್ರುತಿ ಪ್ರತಿಪಾದಿತನಾದ ಬ್ರಹ್ಮನೇ ಪ್ರಮೇಯ ಎಂಬ ನಿರ್ಣಯಕ್ಕೆ ಬಂದಿರುತ್ತಾರೆ. ಸಾಮಾನ್ಯತಃ ವೇದವೆಂದು ಪ್ರಸಿದ್ಧವಾಗಿರುವ ವಾಙ್ಮಯವನ್ನೇ ಅವರು ಶ್ರುತಿ ಎಂದು ಕರೆದಿರುತ್ತಾರೆ. ಇತರರು ತಥ್ಯಕ್ಕೆ ಅನುಗುಣವಾದ ವೇದವಾಕ್ಯಗಳನ್ನು ಪ್ರಮಾಣವಾಗಿ ಗ್ರಹಿಸಿದರೆ ಮಧ್ವಾಚಾರ್ಯರು ವೇದವಾಕ್ಯಗಳಿಂದಲೇ ತಥ್ಯವನ್ನು ಪ್ರತಿಪಾದಿಸುತ್ತಾರೆ.

ಭೇದ ಮತ್ತು ಅಭೇದಗಳಲ್ಲಿ ಯಾವುದಾದರೂ ಒಂದನ್ನೇ ಮುಖ್ಯವೆಂದು ಗ್ರಹಿಸುವುದು ಬಂಧಕ್ಕೆ (ದುಃಖಕ್ಕೆ) ಕಾರಣ ಎಂದು ಮಧ್ವಾಚಾರ್ಯರು ತೋರಿಸುತ್ತಾರೆ. ಜ್ಞಾನರಹಿತವಾದ ಕರ್ಮವು ನಿಜಕ್ಕೂ ಆತ್ಮನನ್ನು ಅಂಧನನ್ನಾಗಿಯೂ, ಜ್ಞಾನವಿಮುಖನನ್ನಾಗಿಯೂ ಮಾಡುತ್ತದೆ ಎಂದು ತೋರಿಸುತ್ತಾರೆ. ಜ್ಞಾನವೇ ವ್ಯಕ್ತಿಯ ನೈತಿಕ ಶುದ್ದಿಗೆ ಕಾರಣ; ಇದೇ ಸತ್ತ್ವ ಶುದ್ದಿ.

ಏಕೆಂದರೆ ಪ್ರಪಂಚವು ಸತ್ಯವಲ್ಲದೇ ಹೋದರೆ, ಚೇತನಾಚೇತನಾತ್ಮಕವಾದ ಈ ಸಕಲ ಪ್ರಪಂಚಕ್ಕೂ ಮೂಲಕಾರಣನೆಂದಾಗಲೀ ಆಧಾರನೆಂದಾಗಲೀ ಬ್ರಹ್ಮನನ್ನು ಅರಿಯಲು ಅವಕಾಶವೇ ಇರುತ್ತಿರಲಿಲ್ಲ. ಅವರು ತಮ್ಮ ವಿಚಾರಸರಣಿಯಲ್ಲಿ ಪ್ರಪಂಚ ಸತ್ಯತ್ವ ಅಥವಾ ಮಿಥ್ಯತ್ವದ ಸಾಧನೆಗೆ ಹೋಗಲಿಲ್ಲ. ಅವರ ಅಭಿಪ್ರಾಯದಂತೆ ಜಿಜ್ಞಾಸೆಗೆ ಜ್ಞಾನ, ಜ್ಞಾನದ ಪ್ರತಿಹಂತದಲ್ಲೂ ತಾವು ತಾಳುವ ನಿಲುವು ಮುಂದಿನ ಜಿಜ್ಞಾಸೆಯೇ ಪ್ರಚೋದಕವಾದಾಗ ಮಾತ್ರ ಅದು ನಿರ್ದಿಷ್ಟವಾಗುವುದು. ಆದ್ದರಿಂದಲೇ ಅವರು ಸರ್ವದಾ ಅವಿರತವಾಗಿ ಜಿಜ್ಞಾಸೆಯು ಸಾಗುತ್ತಿರಬೇಕೆಂದು ಬೋಧಿಸುತ್ತಾರೆ:

೧. ಸಾಮಾನ್ಯ ಅರ್ಥದಲ್ಲಿ ಪ್ರಮಾಣದ ಗ್ರಹಿಕೆ. ಇತರ ದಾರ್ಶನಿಕರು ಅಂಗೀಕರಿಸಿರುವ ವಿಚಾರಸರಣಿಯಲ್ಲಿ ಅವರೂ ಸಹ ಪ್ರತ್ಯಕ್ಷ ಅನುಮಾನ ಮತ್ತು ಆಗಮ ಎಂಬ ಮೂರು ಪ್ರಮಾಣಗಳನ್ನು ಅಂಗೀಕರಿಸುತ್ತಾರೆ.

೨. ಯುಕ್ತ್ಯನುಸಂಧಾನ.

೩. ಉಪದೇಶದ ಹಂತ, ಈ ಹಂತದಲ್ಲಿ ಜಿಜ್ಞಾಸುವಿಗೆ ಶ್ರುತಿಸ್ಮೃತಿಗಳನ್ನು ಬೋಧಿಸ ಲಾಗುವುದು.

೪. ಜಿಜ್ಞಾಸೆಯ ಹಂತ; ಇದೇ ನಿಜವಾದ ಅರ್ಥದಲ್ಲಿ ತತ್ತ್ವಶಾಸ್ತ್ರ.

ಜ್ಞಾನವು ಸ್ವಭಾವತಃ ಯಥಾರ್ಥವೇ. ಅದು ಯಥಾರ್ಥವಾಗಿಯೇ ತೋರುತ್ತದೆ. ಯಥಾರ್ಥ ಜ್ಞಾನಕ್ಕೆ ವಿಷಯವಾದುದೇ ಪ್ರಮೇಯ; ಮಧ್ವಾಚಾರ್ಯರ ಮತದಂತೆ ಅದು ಸತ್ಯ.

ಮಧ್ವಾಚಾರ್ಯರು ಪಂಚಭೇದಗಳನ್ನು ಅಂಗೀಕರಿಸಿದ್ದಾರೆ; ೧. ಜೀವ ಮತ್ತು ಈಶನಿಗಿರುವ ಭೇದ. ೨. ಜೀವ ಜೀವರಲ್ಲಿರುವ ಭೇದ ೩. ಜಡ ಮತ್ತು ಮತ್ತು ಜೀವನಲ್ಲಿರುವ ಭೇದ ೪. ಜಡ ಜಡರಲ್ಲಿರುವ ಭೇದ. ಜಡ ಮತ್ತು ಈಶ್ವರಲ್ಲಿನ ಭೇದ ವೇದಗಳು ಮತ್ತು ಉಪನಿಷತ್ತುಗಳಿಂದ ಪ್ರತಿಪಾದಿತವಾದ ಏಕೇಶ್ವರವಾದವನ್ನು ಮಧ್ವಾಚಾರ್ಯರು ತಮ್ಮ ಬ್ರಹ್ಮ ಮೀಮಾಸಂಸಾಶಾಸ್ತ್ರದಿಂದ ಪರಾಕಾಷ್ಠೆಗೆ ಏರಿಸಿರುತ್ತಾರೆ. ಅವರದು ನಿಜಕ್ಕೂ ಬ್ರಹ್ಮನಾದ. ಭಾರತೀಯ ಸಂಸ್ಕೃತಿಗೆ – ಏಕೆ ವಿಶ್ವಕ್ಕೆ ಅವರ ಕೊಡುಗೆ ಏನೆಂದರೆ – ತತ್ತ್ವ ಜಿಜ್ಞಾಸೆ ಎಂದರೆ ಆಧ್ಯಾತ್ಮಿಕ ಸಾಧನೆ. ಶ್ರುತಿಯು ಕೇವಲ ಶಬ್ದ ಪ್ರಮಾಣವಲ್ಲ. ತತ್ತ್ವಶಾಸ್ತ್ರದ ಅಭಿವ್ಯಕ್ತಿ. ಬ್ರಹ್ಮಮೀಮಾಂಸೆಯು ತತ್ತ್ವಶಾಸ್ತ್ರಗಳಲ್ಲೆಲ್ಲಾ ಶ್ರೇಷ್ಠ ರೂಪವಾದುದು. ಜೀವನದಲ್ಲಿ ಕರ್ತೃತ್ತ್ವ ರೂಪವೇ ಬಂಧಕ್ಕೆ ಕಾರಣ. ತಾನು ಪರತಂತ್ರನೆಂಬ ಅರಿವುಂಟಾದಾಗ ಮಾತ್ರ ನಿಜಕ್ಕೂ ಜೀವನು ಕರ್ತೃವಾಗಿರುತ್ತಾನೆ. (ಪರಾಧೀನ ಕರ್ತೃತ್ವವಿದೆ) ಈ ಪ್ರಪಂಚದ ಸತ್ಯತ್ವವನ್ನೂ ಸಾರ್ಥಕ್ಯವನ್ನೂ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದೇ ಪರಮ ಸತ್ಯವನ್ನರಿಯುವ ಸರಿಯಾದ ಮಾರ್ಗ. ಪರಮಸತ್ಯವು ಗುಣಪೂರ್ಣ, ನಿರ್ದೋಷ, ಜ್ಞೇಯ, ಗಮ್ಯ ಮತ್ತು ಗುರು. ಈ ಎಲ್ಲಾ ಕಾರಣದಿಂದಾಗಿ ನಾರಾಯಣನೆಂದು ಆ ತತ್ತ್ವವನ್ನು ಕರೆದಿದ್ದಾರೆ. ಈ ತತ್ತ್ವವನ್ನು ಅರಿತಾಗ ಮಾತ್ರ ಆತ್ಮನಿಗೆ ಶಾಂತಿ ದೊರೆಯುವುದು. ಈ ತತ್ತ್ವವನ್ನರಿಯದಿರುವುದು ಪ್ರಪಂಚಕ್ಕೂ ಬ್ರಹ್ಮಕ್ಕೂ ಅಭೇದವನ್ನು ಕಲ್ಪಿಸಲು ಕಾರಣ ಮತ್ತು ಪರಿಣಾಮವಾಗಿ ಶೋಕ ಮೋಹಕ್ಕೂ ಕಾರಣ ವಾಗುವುದು. ಬ್ರಹ್ಮಮೀಮಾಂಸಾ ಶಾಸ್ತ್ರದ ನಿರಂತರ ಅಭ್ಯಾಸದಿಂದ ಈ ಅನುಭವವನ್ನು ಹೊಂದಲು ಸಾಧ್ಯ. ತತ್ತ್ವಗಳನ್ನು ಯಥಾರ್ಥವಾಗಿ ಗ್ರಹಿಸಿ ರಾಜಕೀಯ, ರಾಷ್ಟ್ರೀಯ ಮತ್ತು ಸಾಮಾಜಿಕ ಪುನಾರಚನೆಯನ್ನು ಮಾಡುವುದೇ ಮಾನವರ ಉದ್ಧಾರಕ್ಕಿರುವ ಮಾರ್ಗವೆಂದು ಅವರು ಒತ್ತಿ ಹೇಳುತ್ತಾರೆ. ಹೀಗೆಂದು ಮನಸ್ಸಿನಲ್ಲಿ ವಿಚಾರ ಬಂದರೂ ಸಾಕು ಅದರಿಂದ ಆನಂದ ಲಭಿಸುವುದೆಂಬುದನ್ನು ತೋರಿಸಿದ್ದಾರೆ. ಆನಂದಕ್ಕೆ ಕಾರಣವಾದ ಇಂತಹ ಶಾಸ್ತ್ರವನ್ನು ರಚಿಸಿದ ಕಾರಣ ಅವರು ‘ಆನಂದತೀರ್ಥ’ರೆಂದು ಪ್ರಸಿದ್ಧರಾಗಿದ್ದಾರೆ.

ಮಧ್ವಾಚಾರ್ಯರು ಒಬ್ಬ ವಿಜ್ಞಾನಿಯಂತೆ ಆಧ್ಯಾತ್ಮವನ್ನು ತಾರ್ಕಿಕ ಜಗತ್ತಿನಲ್ಲಿ ಪರಿಷ್ಕರಿಸಿ ಮೇಲೆತ್ತಿದವರು. ಬುದ್ದಿಯ ಗತಿಗಳು ಅನಂತ; ಮನಸ್ಸಿಗೆ ವಿಲಾಸಗಳು ಅನಂತ; ಸತ್ಯದ ಕಿರಣಗಳು ಅನಂತ; ಸೌಂದರ್ಯದ ಅಲಗುಗಳು ಅನಂತ; ಜೀವಗಳು ಅನಂತ; ಜಗತ್ತು ಅನಂತ; ಜೀವ ಜಗತ್ತುಗಳ ಋಣಾನುಬಂಧಗಳು ಅನಂತ; ಈ ನಾನಾ ಅನಂತತೆಗಳ ಉಲ್ಲೋಲ ಕಲ್ಲೋಲಗಳ ನಡುವೆ ನಿಲ್ಲಲು ಒಂದಿಷ್ಟು ಗಟ್ಟಿನೆಲವನ್ನು ಹುಡುಕಿ ಕೊಡುವವನು ವಿಜ್ಞಾನಿ. ಸ್ವಭಾವ, ಸತ್ಯ, ಸೌಂದರ್ಯ, ಧರ್ಮ, ಆನಂದ, ಜೀವನ ಇವೆಲ್ಲವೂ ಒಂದೇ ವಸ್ತುವಿನ ಅನೇಕ ಪ್ರಕಾರಗಳು. ಮಾನವನು ಜ್ಞಾನವನ್ನು ಹೇಗೋ ವಿವೇಕವನ್ನು ಹೆಚ್ಚಿಸಿಕೊಳ್ಳದಿದ್ದರೆ ಅವರ ಜ್ಞಾನವು ಹೆಚ್ಚಿದಂತೆ ದುಃಖವೂ ಹೆಚ್ಚುತ್ತದೆ ಎಂಬ ನಿತ್ಯ ಸತ್ಯವನ್ನು ಜಗತ್ತಿಗೆ ಮಧ್ವಾಚಾರ್ಯರು ಸಾರಿದರು. ಕಾಲಕಾಲಕ್ಕೆ ಮಹಾಭಾರತ/ರಾಮಾಯಣದಂತಹ ಪ್ರಭಾವಶಾಲಿ ಗ್ರಂಥಗಳು ಆಯಾ ಯುಗಧರ್ಮ-ದೇಶಧರ್ಮ ಗಳನ್ನುನುಸರಿಸಿ ಜನತೆಯ ಕೈಸೇರಬೇಕು. ಅದಕ್ಕಾಗಿಯೇ ಕೃಷ್ಣಾವತಾರವನ್ನು ಪೂರ್ಣಾವತಾರ ಎನ್ನಲಾಗಿದೆ. ಅವನ ಜೀವನ ಮತ್ತು ವ್ಯಕ್ತಿತ್ವ ನಾನಾಮುಖ ಸಂಕೀರ್ಣವೂ ಬಹುವರ್ಣ ರಂಜಿತವೂ ಆದದ್ದು; ಐತಿಹಾಸಿಕ – ಪೌರಾಣಿಕ, ಪ್ರಾಕೃತ-ಅಪ್ರಾಕೃತ, ಆಧ್ಯಾತ್ಮಿಕ-ರಾಜಕೀಯ ಇತ್ಯಾದಿಯಾಗಿ ಹಲವು ಆಯಾಮಗಳು ಕೃಷ್ಣಚೇತನಕ್ಕಿದೆ. ಅವನ ಚರಿತ್ರೆಯಲ್ಲಿ ರಾಸಲೀಲೆಯ ಲಾಲಿತ್ಯ ಒಂದು ಕಡೆ ನಮ್ಮನ್ನು ಆಕರ್ಷಿಸಿದರೆ, ಜಗತ್ತಿನಲ್ಲೇ ಅದ್ವಿತೀಯವಾದ ಭಗವದ್ಗೀತಾ ಬೋಧೆಯ ಭವ್ಯತೆ ಇನ್ನೊಂದು ಕಡೆ. ಬೃಂದಾವನದಲ್ಲಿ ಕೊಳಲೂದುತ್ತಾ ಗೋಪಿಯರನ್ನು ಸೆಳೆಯುವ ಕೃಷ್ಣ ಒಂದು ದಿಕ್ಕಾದರೆ, ಕುರುಕ್ಷೇತ್ರದಲ್ಲಿ ಪಾಂಚಜನ್ಯವನ್ನೂದುತ್ತ ವಿಶ್ವರೂಪವನ್ನು ತೋರುವ ಕೃಷ್ಣ ಇನ್ನೊಂದು ದಿಕ್ಕು.

ರಾಮನ ಬದುಕಿನಲ್ಲಿ ಪವಾಡಗಳ ಮೆರೆತ ಕಡಿಮೆ; ಕೃಷ್ಣನ ಬದುಕಿನಲ್ಲಿ ಇದರ ಮೇಲಾಟವೇ ಎದ್ದು ಕಾಣುತ್ತದೆ ಎಂದು ಯಾರಾದರೂ ಹೇಳಿಯಾರು. ಅದಕ್ಕೆ ಕಾರಣವಿಷ್ಟೆ.  ರಾಮನ ಬದುಕನ್ನು ಬಣ್ಣಿಸುವ ಗ್ರಂಥ ರಾಮಾಯಣವೊಂದೇ. ಅದು ಮೂಲ ಆಕರ. ಆದರೆ ಕೃಷ್ಣನ ಪಾತ್ರ ಪ್ರಮುಖವಾದುದೇ ಆದರೂ ಅಲ್ಲಿ ಅವನು ಬಹುಮಟ್ಟಿಗೆ ಮನುಷ್ಯ ಮಾತ್ರನೇ. ಆದರೆ ಜನಪ್ರೀತಿಯನ್ನು ಪಡೆದುಕೊಂಡ ಭಾಗವತ, ಹರಿವಂಶ, ಹಲವು ಪುರಾಣಗಳು ಕೃಷ್ಣನನ್ನೇ ನಾಯಕನನ್ನಾಗಿ ಇರಿಸಿಕೊಂಡು ಸಿದ್ಧವಾಗಿವೆ. ಇವುಗಳಲ್ಲೆಲ್ಲ ಇವನ ಮನುಷ್ಯತ್ವ ಮೇಲೆ ಒತ್ತು ಕಡಿಮೆ. ದೇವತ್ವದ ಮೇಲೆ ಒಲವು ಹೆಚ್ಚು ಹೀಗಾಗಿ ಅದ್ಭುತ ಪ್ರಸಂಗಗಳ ಸುರಿಮಳೆ ಅಲ್ಲಿರುವುದು ಸಹಜವೇ. ವ್ಯಕ್ತಿಯ ಮನಸ್ಸು ವ್ಯಷ್ಟಿ ಮನಸ್ಸು; ಸಮೂಹದ ಮನಸ್ಸು ಸಮಷ್ಟಿ ಮನಸ್ಸು. ಮೊದಲನೆಯದು ತರಂಗದಂತೆ, ಎರಡನೆಯದು ಸಾಗರದಂತೆ! ಸಮಷ್ಟಿ ಮನಸ್ಸು ದೇಶ ದೇಶಕ್ಕೂ ಬದಲಾಯಿಸುವಂತೆ ಕಾಲಕಾಲಕ್ಕೂ ಬದಲಾಗುತ್ತದೆ. ಅದನ್ನು ಯುಗಶಕ್ತಿ, ಯುಗಮನಸ್ಸು, ಯುಗದೇವತೆ ಎಂದು ನಾನಾ ವಿಧವಾಗಿ ಕರೆಯುತ್ತಾರೆ. ಇಂತಹ ಸಮಷ್ಟಿ ಮನಸ್ಸಿನ ದ್ರಷ್ಟಾರರು ಮಧ್ವಾಚಾರ್ಯರು.

ಮಧ್ವಾಚಾರ್ಯರು ಸಾಂಸ್ಕೃತಿಕ ಕತ್ತಲಿನಲ್ಲಿ ಆಂದೋಳನದ ಜ್ಯೋತಿ ಹಚ್ಚಿದರು. ಯಕ್ಷಗಾನ ಮುಂತಾದ ಜಾನಪದ ಪ್ರಕಾರಗಳಿಗೆ ಉತ್ತೇಜವನ್ನು ನೀಡಿ ಭಕ್ತಿಮಾರ್ಗದ ಹೊಸ ಅನ್ವೇಷಣೆ ನಡೆಸಿ ಆಧ್ಯಾತ್ಮಿಕ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದರು.