ಭಾರತೀಯ ಧರ್ಮದಲ್ಲಿ ಎರಡು ವಿಧ: ಒಂದು ಸನಾತನ ಧರ್ಮ-ಅದು ಸಾರ್ವಕಾಲಿಕವಾದುದ್ದು; ವಿಶ್ವಧರ್ಮವೂ ಆಗಿರುತ್ತದೆ. ಎರಡನೆಯದು ದೇಶಕಾಲೋಚಿತ ಧರ್ಮ – ಇದು ಆಯಾ ಕಾಲ ಅಥವಾ ದೇಶಕ್ಕೆ ಪ್ರತಿಕ್ರಿಯಿಸಿದ ಧರ್ಮವಾಗಿರುತ್ತದೆ. ಇದು ಎಲ್ಲಾ ಕಾಲಕ್ಕೂ ಯುಕ್ತವಾಗಿರುವುದಿಲ್ಲ. ಅದನ್ನು ಎಲ್ಲಾ ಕಾಲಕ್ಕೂ ಅನ್ವಯಿಸಲು ಪ್ರಯತ್ನಿಸಿದಾಗ ಸಮಕಾಲೀನ ಸಂವೇದನೆಗೆ ಸೋಲಾಗುತ್ತದೆ. ಭಾರತೀಯ ಸಂಸ್ಕೃತಿ ಮತ್ತು ಧರ್ಮದಲ್ಲಿ ಸ್ಪಷ್ಟತೆ ಇಲ್ಲದಾಗ ಭ್ರಮೆ ಮತ್ತು ಮಿಥ್ಯಾಕಲ್ಪನೆಗಳು ಸಂಸ್ಕೃತಿಗೆ ಕೆಟ್ಟ ಹೆಸರನ್ನು ತರುವ ಸಾಧ್ಯತೆವಿದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ತತ್ವ, ಭೇದ, ಸತ್ಯ ಮತ್ತು ಸಹಜ ಶೀರ್ಷಿಕೆಯಲ್ಲಿ ಭಾರತೀಯ ಸ್ವಾಮಿಗಳೊಬ್ಬರು ಅಮೆರಿಕದಲ್ಲಿ ಈ ರೀತಿ ವ್ಯಾಖ್ಯಾನಿ ಸಿದ್ದಾರೆ – “ಏಕತೆ ಮತ್ತು ಸಹಜ ಸಮಾನತೆಗಳ ಬೋಧನೆ ಸುಲಭ. ಅದರ ಸಾಧನೆ ಕಷ್ಟ ಈ ಎರಡೂ ಆದರ್ಶಗಳು ಎಲ್ಲಾ ವೇದಿಕೆಗಳಿಂದ ಕೇಳಿಬರುತ್ತವೆ. ಅವುಗಳು ವ್ಯಾವಹಾರಿಕ ವಲ್ಲ. ಕಾರಣ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಅಸಾಧ್ಯ. ಹಲವೊಮ್ಮೆ ಏಕತೆ ಮತ್ತು ಸಮಾನತೆಗಳನ್ನು ಹುಡುಕಿ ತೆಗೆಯುತ್ತಾರೆ; ತಾವು ಮತಾತೀತರೆಂದು ಹೇಳುವ ವ್ಯಕ್ತಿಗಳೇ ಯಾವುದಾದರೂ ಜಾತಿ-ಮತಗಳಿಗೆ ಅಂಟಿಕೊಂಡಿರುತ್ತಾರೆ. ಸ್ವಯಂ ಘೋಷಿತ ಜಾತ್ಯತೀತರು ಮತ್ತು ಸಮಾಜವಾದಿಗಳು ಇತರರಿಗಿಂತ ಹೆಚ್ಚು ಅಪಾಯಕಾರಿಯಾಗಿದ್ದು, ಸಾಮಾಜಿಕ ಸಾಮರಸ್ಯಕ್ಕೆ ಬೆದರಿಕೆಯೊಡ್ಡುತ್ತಾರೆ. ಎಲ್ಲರೂ ಸಮಾನರೆಂದೇ ಘೋಷಿಸುವ ಇವರು ವಾಸ್ತವವಾಗಿ ಕೆಲವರು ಹೆಚ್ಚು ಮತ್ತು ಕೆಲವರು ಕಡಿಮೆ ಎಂದು ಪಿಸುಗುಟ್ಟುತ್ತಾರೆ. ಈ ಕಾರಣಕ್ಕಾಗಿಯೇ ೧೨ನೇ ಶತಮಾನದ ಮಹಾದಾರ್ಶಕನಿಕರಾದ ಆಚಾರ್ಯ ಮಧ್ವರು “ಭೇದತತ್ವವು ಸತ್ಯ ಮತ್ತು ಸಹಜ ಎಂದು ಸಾಧಿಸಿದರು”. ಇಂತಹ ವ್ಯಾಖ್ಯಾನಗಳಿಂದಲೇ ತತ್ವಗಳು ಮತ್ತು ತತ್ವಪ್ರತಿಪಾದಕರು ಅಪ್ರಸ್ತುತರಾಗುತ್ತಾರೆ ಮತ್ತು ನಮ್ಮ ಸಿದ್ಧಾಂತಗಳು ಪಳೆಯುಳಿಕೆಗಳಾಗುತ್ತವೆ.

ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಅವಲೋಕನ ಮಾಡಿದರೆ ಸಪ್ತರ್ಷಿಗಳಲ್ಲಿ ಯಾರೊಬ್ಬರೂ ಮೇಲುಜಾತಿಯವರಾಗಿರಲಿಲ್ಲ. ಅವರೆಲ್ಲರೂ ಸತ್ಯಪಥವಿಡಿದು ಅನ್ವೇಷಣೆ ನಡೆಸಿ ಕ್ಷಿತಿಜ ಪಥ ಪಡೆದವರು. ಸಾಂಖ್ಯ-ಶಪಚ, ಅಗಸ್ತ್ಯ-ಕಬ್ಬಿಲ, ದಧೀಚಿ-ಕೀಲಿಗ, ದುರ್ವಾಸ-ಮಚ್ಚಿಗ, ಕಶ್ಯಪ-ಕಮ್ಮಾರ, ರೋಮಜ-ಕಂಚುಗಾರ, ಕೌಂಡಿಲ್ಯ-ನಾವಿದ. ಇವರೆಲ್ಲರೂ ಅವರ ಸಾಧನೆ ಮತ್ತು ಶ್ರಮ ಸಂಸ್ಕಾರದಿಂದ ಮೇಲ್‌ಸ್ತರಕ್ಕೆ ಏರಿದರು. ನಮ್ಮ ಪರಂಪರೆಯ ಪ್ರಕಾರ ತಾಯಿ ಭಾರತಿಯ ಪ್ರಾರ್ಥನೆ ಹೀಗಿದೆ; “ಯಾವನು ಏಕೈಕನಾಗಿ ರುವನೋ, ಎಲ್ಲಾ ವರ್ಣವಿಭೇದಗಳನ್ನು ಮೀರಿರುವನೋ, ಎಲ್ಲಾ ವಸ್ತುಗಳನ್ನು ಅವುಗಳ ಅಂತ್ಯದವರಿಗೆ ಅರಿತಿರುವನೋ ಆ ತಿಳಿವಿನ ಮೂಲಕ ನಮ್ಮನ್ನು ಪರಸ್ಪರ ಒಗ್ಗೂಡಿಸಲಿ”. ಬೌದ್ದಿಕ ಪ್ರಕ್ರಿಯೆಯು ವಿಜ್ಞಾನದ ನಿರಂತರ ಅನ್ವೇಷಣೆ ಬೆಳೆದಂತೆ ಅದನ್ನು ಪಳಗಿಸಿಕೊಳ್ಳುವ ನಿರಂತರ ಪ್ರಕ್ರಿಯೆಯೂ ಧರ್ಮಾನ್ವೇಷಣೆಯ ಅಂಗವಾಯಿತು. ಅನ್ವೇಷಣಾ ಪ್ರಧಾನವಾದ ವಿಜ್ಞಾನ ಮತ್ತು ನಿಯಂತ್ರಣ ಪ್ರಧಾನವಾದ ಧರ್ಮ ಸಮತಾನದಲ್ಲಿ ಹೆಜ್ಜೆಯಿಡಬೇಕಾದುದು ಯುಗದ ಅಭೀಪ್ಸೆಯಾಗಿದೆ. ಮಾನವನು ಇಂದು ತಾನಿರುವ ಭೌತಿಕ ಪರಿಸರವನ್ನು ನಿಯಂತ್ರಿ ಸುವ ಯಶಸ್ವೀ ಪಥದಲ್ಲಿ ಸಾಗುತ್ತಿರಬಹುದು. ಆದರೆ ತನ್ನನ್ನಾಗಲಿ, ಸಮುದಾಯವನ್ನಾಗಲಿ ನಿಯಂತ್ರಿಸುವ ದಾರಿಯಲ್ಲಿ ಬಹುದೂರ ಕ್ರಮಿಸಬೇಕಾಗಿದೆ. ಅಂತಿಮ ಗುರಿ ತಲುಪುವ ವೈಜ್ಞಾನಿಕ ಅನ್ವೇಷಣೆಗೆ ತೊಡಗಿಸಬೇಕಾಗಿದೆ. ಸಮುದಾಯದ ಅನೈಕ್ಯತೆಯ ಫಲಶ್ರುತಿಯೇ ಇಂದೋ ನಾಳೆಯೋ ನಡೆಯಲಿರುವ ಅಣುಬಾಂಬಿನ ಸ್ಫೋಟನೆಗೆ ಆಧಾರವಾಗಬಹುದು. ಪ್ರಾಯಶಃ ಈಗ ನಾವು ನಮ್ಮ ಸಾಮಾಜಿಕ ಕಟ್ಟುಪಾಡುಗಳಲ್ಲಿ ಬಹಳ ದೊಡ್ಡ ಬದಲಾವಣೆ ಯನ್ನು ತರಲು ಯತ್ನಿಸುತ್ತಿದ್ದೇವೆ. ಪ್ರಪಂಚ ಅಂತಹ ಬದಲಾವಣೆಗಳಿಗೆ ಸಿದ್ಧವಾಗಿ ನಿಂತಿದೆ. ಈ ಬದಲಾವಣೆಗಳು, ಸಾಮಾಜಿಕವಾಗಿ ಮುನ್ನೋಟದ ದಿಕ್ಕಿನಲ್ಲಿಹೆಚ್ಚು ಉದಾರ ಪೂರ್ಣ ಆಗದಿದ್ದ ಪಕ್ಷದಲ್ಲಿ, ಅವು ಸಮಾಜದ ಹಿನ್ನಡೆಗೆ ಅನಿವಾರ‍್ಯ ಕಾರಣಗಳಾಗಿ ಬಿಡುತ್ತವೆ. ಬದಲಾವಣೆಗಳನ್ನು ಅಪೇಕ್ಷಿಸಿದರೆ ಸಾಲದು; ಅದಕ್ಕಾಗಿ ದುಡಿದರೂ ಸಾಲದು; ನಮ್ಮ ಅತ್ಯಂತ ಉದಾರವಾದ ಆಕಾಂಕ್ಷೆಗಳಲ್ಲೂ ಇರಬಹುದಾದ ಅಪಾಯಗಳನ್ನೂ ಗುರುತಿಸುವುದನ್ನು ನಾವು ಕಲಿಯಬೇಕು. ನಮ್ಮ ಸ್ವಭಾವದಲ್ಲಿರುವ ಕೆಲವು ವಿಪರ್ಯಾಸಗಳು ನಮ್ಮನ್ನು ಎತ್ತಕಡೆ ಕೊಂಡೊಯ್ಯುತ್ತದೆಂಬುದನ್ನು ಅರಿತಿರಬೇಕು. ಅಮಾಯಕರು, ಮುಗ್ಧರು ನಾಗರಿಕತೆಯ ರಥದ ಚಕ್ರಗಳಿಗೆ ಸಿಕ್ಕು ಹತರಾಗುತ್ತಿದ್ದ ಕಾಲದಲ್ಲಿಯೇ ಬುದ್ಧ, ಮಹಾವೀರ, ಗಾಂಧೀಜಿಯವರು ಅಹಿಂಸೆಯ ತತ್ವ ಬೋಧಿಸಿದರು. ದಾಸ್ಯ, ಗುಲಾಮಗಿರಿ ತತ್ವಕ್ಕೆ ಪ್ರತಿಯಾಗಿ ಅವರು ಸಮಾನತೆಯ ತತ್ವನ್ನು ಪ್ರತಿಪಾದಿಸಿದರು. ಬುದ್ಧ, ಮಹಾವೀರ ಗಾಂಧೀಜಿ ಇವರು ತಮ್ಮ ಚಿಂತನೆಗಳಲ್ಲಿ ತಮ್ಮ ತಮ್ಮ ಕಾಲಕ್ಕೆ ಸ್ಪಂದಿಸಿದರು. ಆದರೆ ಕಾಲದ ಗತಿಯನ್ನು ಬದಲಾಯಿಸುವುದು ಮಾತ್ರ ಅವರಿಗೆ ಮೀರಿದ್ದಾಗಿತ್ತು. ಯಾವುದೇ ಸಂಸ್ಕೃತಿ ಸ್ಥಾವರವಲ್ಲ; ಚಲನಶೀಲ. ಅದರ ಚಲನೆಗೆ ಇರುವ ಒತ್ತಡಗಳು ಹಲವಾರು. ಆ ಒತ್ತಡಗಳ ಕೋಟೆ ನೆಲಸಮ ಮಾಡಲೆಂದೇ ಬೇರೆ ಬೇರೆ ರಾಷ್ಟ್ರಗಳಲ್ಲಿ ವಿವಿಧ ಅವತಾರಗಳ ಆವಿರ್ಭಾವವಾಗಿದೆ. ಈ ಅವತಾರಗಳ ಆಶಯಗಳನ್ನು ಮರೆತ ಜನಾಂಗ, ನಾಗರಿಕತೆ ಅಥವಾ ರಾಷ್ಟ್ರ ಕೇವಲ ಪಳೆಯುಳಿಕೆಗಳಾಗುತ್ತವೆ. ಪಕ್ಷಿಯು ನೆಲಕ್ಕೆ ಅಂಟಿದ ಪ್ರಾಣಿಯಲ್ಲ. ಮುಗಿಲಿನಲ್ಲಿ ಮಿನುಗುವ ನಕ್ಷತ್ರವೂ ಅಲ್ಲ. ಅದು ನೆಲ ಮುಗಿಲುಗಳ ನಡುವಿನ ಅವಕಾಶದಲ್ಲಿ ನಿರಂತರವಾಗಿ ಚಲಿಸುತ್ತಿರುವ ಚೇತನ. ಆರೋಹಣ-ಅವರೋಹಣದ ಚಲನೆ ಯಲ್ಲಿ ಅದು ಯುಗಮುಖಿ ಅಥವಾ ಸಮಾಜಮುಖಿಯಾಗಿರುತ್ತದೆ. ಧರ್ಮ ಮತ್ತು ರಾಜಕಾರಣ ಯಾವುದೇ ಕಾಲದಲ್ಲೂ ಸಮಾಜ ವ್ಯವಸ್ಥೆಯನ್ನು ರೂಪಿಸುವ ಜನಜೀವನದ ಮೇಲೆ ಗಾಢ ಪ್ರಭಾವ ಬೀರುವ ಪ್ರಬಲ ಶಕ್ತಿಗಳು. ಅವೆರಡೂ ಸಮಕಾಲೀನವಾದಾಗ ಸಮಾಜ ಅರಳುತ್ತದೆ. ಇಲ್ಲದಿದ್ದರೆ ಮುದುಡಿ ಅಧೋಮುಖಿಯಾಗುತ್ತದೆ. ಕಾಶ್ಮೀರದಲ್ಲಿ ಪ್ರಚಲಿತವಿದ್ದ ಸುಮಾರು ೨೦೦೦ ತಂತ್ರ ಆಗಮಗಳನ್ನು ಕಲೆಹಾಕಿ, ಅಭ್ಯಸಿಸಿ ಅವುಗಳೆಲ್ಲವು ಗಳ ಸಾರವನ್ನು ಮೊದಲು ತಂತ್ರಾಲೋಕ, ಆಮೇಲೆ ತಂತ್ರಸಾರವೆಂಬ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ ಆಚಾರ್ಯ ಅಭಿನವಗುಪ್ತಪಾದರು. ಅವರು ತಾಂತ್ರಿಕ ಗುರುವನ್ನು ಸಿಂಹ ಮತ್ತು ಕಪ್ಪೆಗೆ ಹೋಲಿಸುತ್ತಾರೆ. ಅವನು ಸಿಂಹ; ಯಾಕೆಂದರೆ ಗ್ರಂಥಗಳ ದಟ್ಟ ಕಾಡಿನಲ್ಲಿ ಧೈರ್ಯವಾಗಿ ಓಡಾಡಬಲ್ಲ. ಅವನು ಕಪ್ಪೆ ಕೂಡ, ಯಾಕೆಂದರೆ ಗ್ರಂಥಗಳ ಕಾಡಿನಲ್ಲಿ ಒಂದು ಕಡೆಯಿಂದ ಎಲ್ಲಿ ಬೇಕೋ ಅಲ್ಲಿಗೆ ಇನ್ನೊಂದು ಕಡೆಗೆ ನೆಗೆದು ಹೊಸ ಹೊಸ ಸಂಬಂಧಗಳನ್ನು ತೋರಿಸಿಕೊಡಬಲ್ಲ. ಇಂತಹ ಚಲನಶೀಲತೆಯಿಲ್ಲದ ಸಮಾಜ ಅಥವಾ ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯವಿಲ್ಲ. ಯಜಮಾನ ಸಂಸ್ಕೃತಿ ತನ್ನನ್ನು ಪ್ರಶ್ನಿಸಿದ ಅಥವಾ ತನಗೆ ತೊಡಕೊಡ್ಡಿದ ಎಲ್ಲರನ್ನೂ, ರಾಕ್ಷಸರಾಗಿ, ದುಷ್ಟರಾಗಿ ಚಿತ್ರಿಸುತ್ತದೆ. ವಾಸ್ತವದಲ್ಲಿ ನಾಶ ಮಾಡುತ್ತದೆ. (ಯುದ್ಧ ಗೆದ್ದು ಬಂದ ಯುಧಿಷ್ಠಿರನನ್ನು ಆಶೀರ್ವದಿಸುವಾಗ, ಚಾರ್ವಾಕನು ನುಗ್ಗಿ ನಿನ್ನ ವಿಜಯ ಅಪವಿತ್ರವೆಂದು ಕೂಗಲು, ಪುರೋಹಿತರು ಅವನನ್ನು ಕೊಲ್ಲುತ್ತಾರೆ) ಹೀಗೆ ಪ್ರತಿಭಟಿಸಿದವರನ್ನು ಬಲಿ-ಏಕಲವ್ಯ-ಶಂಭೂಕರಂತೆ ಬಲಿಯಾದ ವರನ್ನು, ಇಂದಿನ ಜಗತ್ತು ಗೌರವಿಸುತ್ತದೆ. ಬಂಡಾಯ ಮನೋಗುಣವಿದ್ದುದರಿಂದಲೇ ಭಾರತದಲ್ಲಿ ಸಹಸ್ರಾರು ಚಿಂತಕರು, ಪ್ರವಾದಿಗಳು ತಮ್ಮ ಛಾಪನ್ನು ಮೆರೆಸಿದರು. ಈ ಯುಗ ಅಮೃತವನ್ನೂ ವಿಷವನ್ನೂ ಸಮಾನವಾಗಿ ಎರಡೂ ಕೈಗಳ ಬೊಗಸೆಯಲ್ಲಿ ಪ್ರತಿ ಯೊಂದು ಸಮುದಾಯದ ಮುಂದೆಯೂ ಒಡ್ಡಿದೆ. ಸಮುದಾಯಗಳು, ಅರ್ಥಾತ್ ಅವುಗಳ ಪರಂಪರೆಗಳು ಹೇಗೆ ಅಮೃತ ಮತ್ತು ವಿಷವನ್ನು ಅರಗಿಸಿಕೊಳ್ಳಬಲ್ಲವು ಎಂಬುದರಲ್ಲಿ ನಮ್ಮೆಲ್ಲರ ಅಸ್ತಿತ್ವ ಅಡಗಿರುತ್ತದೆ. ಅನೇಕ ಸಮುದಾಯಗಳು ವಿಷವನ್ನು ಕುಡಿದೇ ಆ ಮೆಲೆ ಅಮೃತವನ್ನು ಕುಡಿದು ಜೀವವನ್ನು ಉಳಿಸಿಕೊಂಡು ತಮ್ಮ ಪರಂಪರೆಗಳಿಗೆ ಹೊಸ ಜೀವವನ್ನು ತಂದುಕೊಳ್ಳಬೇಕಾಗಿದೆ. ಭಗವದ್ಗೀತೆಯಲ್ಲಿ ವೈದಿಕ ಸಂಸ್ಕೃತಿಗೆ ವಿರುದ್ಧವಾದ ಸಂಸ್ಕೃತಿಯಿದೆ. ಅದನ್ನು ಮರೆತು ಬಿಟ್ಟಿದ್ದೇವೆ. ಯಜ್ಞವೆನ್ನುವುದಕ್ಕೆ ಬೇರೆ ಅರ್ಥವನ್ನೇ ಶ್ರೀಕೃಷ್ಣ ಭಗವಂತನು ನೀಡಿದ ವಿಚಾರ ಗೌಣವಾಗುತ್ತದೆ. ಮಿಥ್ಯಾ ಕಲ್ಪನೆಗಳೇ ಪ್ರಧಾನ ಭೂಮಿಕೆಯನ್ನು ಪಡೆಯುತ್ತವೆ.

ಕ್ರೌಂಬ್ ಎಂಬ ಇತಿಹಾಸಕಾರ, ‘ಭಾರತವು ಏಷ್ಯಾಖಂಡದ ಇಟಲಿ; ಅಷ್ಟೇ ಅಲ್ಲದೆ ಅದೊಂದು ಅದ್ಭುತಗಳ ನಾಡು, ಕಲೆಯ ನೆಲೆ, ಚೆಲುವಿನ ಬೀಡು, ಧರ್ಮದ ಕ್ಷೇತ್ರದಲ್ಲಿ ಅದು ಪ್ರಪಂಚದ ಗರ್ಭಗುಡಿ. ಭಾರತ ಎಂದರೆ ಧರ್ಮ! ಈ ಧರ್ಮ ಯುಗಧರ್ಮಗಳಿಗೆ  ಸ್ಪಂದಿಸುತ್ತಾ ಹೊಸ ಶಬ್ದ, ಹೊಸ ವ್ಯಾಕರಣ, ಹೊಸ ಆಶಯಗಳನ್ನು ತುಂಬಿಸಿಕೊಂಡು ಚಲನಶೀಲತೆಯಿಂದ ನಿರಂತರವಾಗಿ ಹರಿವ ನದಿಯಾಗಿ ಮುಂದೆ ಹೊಸ ಅನ್ವೇಷಣೆ ಗಳೊಂದಿಗೆ ಸಾಗಿದೆ. ಈ ಭಾರತೀಯ ಸಂಸ್ಕೃತಿಯ ಮಹಾಪ್ರವಾಹವನ್ನು ತುಂಬಲು ಸಿಂಧೂ ಕಣಿವೆ, ಆರ್ಯ ದ್ರಾವಿಡ, ಆಸ್ಟ್ರಿಕ್, ಸಿಥಿಯನ್, ಗ್ರೀಕ್, ಹೂಣ, ಇರಾನಿಯನ್, ಮುಂಗೋಲಿಯನ್ ಮತ್ತೆ ಸೆಮೆಟಿಕ್ (ಅಂದು ಇಸ್ಲಾಂ ಮತ್ತು ಕ್ರೈಸ್ತ) ಮತಗಳು ತಮ್ಮ  ತಮ್ಮ ವಾಹಿನಿಯನ್ನು ಹರಿಸಿವೆ. ಕಾಲಕಾಲಕ್ಕೆ ಅಷ್ಟೊಂದು ಸಂಸ್ಕೃತಿಗಳು ಭಾರತದಲ್ಲಿ ಸೇರಿ ಸಂಗಮಗೊಂಡಂತೆ ಪ್ರಪಂಚದ ಬೇರೆಲ್ಲಿಯೂ ಆಗಲಿಲ್ಲ. ತನ್ನ ಸಹಿಷ್ಣುತೆಯಿಂದ ಪ್ರೇರಿತವಾಗಿ ಭಾರತರಾಷ್ಟ್ರ ಎಲ್ಲ ಬಗೆಯ ಧರ್ಮಶ್ರದ್ಧೆಗೂ ಎಡೆಗೊಟ್ಟಿತು. ಆ ಕಾಲದಲ್ಲಿ ತನ್ನಲ್ಲಿದ್ದ ಉದಾರತೆಯಿಂದ ಅನ್ಯಸಂಸ್ಕೃತಿಗಳ ಅಂಶವನ್ನು ಮೈಗೂಡಿಸಿ ತನ್ನ ಸಂಸ್ಕೃತಿಯನ್ನು ಸುತ್ತಮುತ್ತ ದೇಶಗಳಿಗೆ ಪ್ರಸರಿಸಲು ಭಾರತಕ್ಕೆ ಸಾಧ್ಯವಾಯಿತು. ಆಮೇಲೆ ಕದಮುಚ್ಚಿ ಒಳಗೆ ಕುಳಿತುಕೊಂಡು ಬಿಟ್ಟಿತು. ಜೀವಂತವಾಗಿರುವ ಸಕಲ ಧರ್ಮಗಳೂ ಭಾರತದ ಧಮನಿ ಯಲ್ಲಿ ಹಾಸುಹೊಕ್ಕಾಗಿದೆ. ಈ ಬಹುಮುಖೀ ಮೌಲ್ಯಗಳ ಅಣುಅಣುಗಳನ್ನು ಬೇರ್ಪಡಿಸಲು ಯತ್ನಿಸಿದಾಗ ಭಾರತೀಯತೆ ಸ್ಫೋಟಗೊಂಡು ಭಸ್ಮವೆನಿಸಬಹುದು. ಈ ಸತ್ಯದ ಹುಡುಕಾಟ ದಲ್ಲಿ ಭಾರತ ಸದಾ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗಿದೆ’.

ಭಾರತವು ವಿಶ್ವಧರ್ಮದ ಮೂಲತತ್ವಗಳನ್ನು ಹೇರಳವಾಗಿ ತನ್ನ ಒಡಲಲ್ಲಿ ಸೇರಿಸಿ ಕೊಂಡಿದೆ. ಮ್ಯಾಕ್ಸ್‌ಮುಲ್ಲರ್, “ಪ್ರಪಂಚದ ಎಲ್ಲಾ ಕಡೆಯಲ್ಲಿ ಮಾನವಮತಿಯು ತನ್ನ ಅಮೂಲ್ಯವಾದ ಪ್ರಜ್ಞಾಶಕ್ತಿಗಳನ್ನು ಸಂಪೂರ್ಣವಾಗಿ ವಿಕಾಸಗೊಳಿಸಿದೆ. ಜೀವನದ ಬೃಹತ್ ಘೋರ ಸಮಸ್ಯೆಗಳನ್ನು ಅತ್ಯಂತ ಆಳವಾಗಿ ಶೋಧಿಸಿದೆ ಮತ್ತು ಕೆಲವು ಸಮಸ್ಯೆಗಳಿಗಾದರೂ ಪ್ಲೇಟೋ ಮತ್ತು ಕ್ಯಾಂಟ್‌ರ ಗ್ರಂಥಗಳನ್ನು ಅಧ್ಯಯನ ಮಾಡಿದವರೂ ಕೂಡ ಪ್ರಶಂಸೆ ಮಾಡತಕ್ಕ ಪರಿಹಾರಗಳನ್ನೊದಗಿಸಿದೆ” ಎಂದು ಹೇಳಿದ್ದಾರೆ.

ಸಂಸ್ಕೃತ ಭಾಷೆಯಲ್ಲಿ ಧರ್ಮದ  ಅರ್ಥವೆಂದರೆ ಶಾಸನ, ಪದ್ಧತಿ, ಕರ್ತವ್ಯ, ಹಕ್ಕು, ನ್ಯಾಯ, ಶೀಲ, ಕಲ್ಪ, ಸತ್ಕಾರ್ಯ, ಕ್ರಿಯಾಗುಣ. ಇವುಗಳಲ್ಲಿ ಯಾವುದೊಂದರ ಉಲ್ಲಂಘನೆ ಯಾದರೂ ಧರ್ಮದ ಅವನತಿಯಾಗುತ್ತದೆ. ಆದುದರಿಂದ ಮತವೇ ಧರ್ಮವೆಂಬ ಮೌಢ್ಯದಿಂದ ನಾವು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ. ಮತ ಸಿದ್ಧಾಂತಗಳು ಒಂದು ಪ್ರದೇಶದ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಹೆಪ್ಪುಗಟ್ಟಿದ ಒಂದು ನಿಶ್ಚಲ ಪ್ರತೀಕವಲ್ಲದೆ, ಅದೇ ಧರ್ಮವಲ್ಲ ಅಥವಾ ಅದೇ ಆ ಪ್ರದೇಶದ, ಆ ಜನಾಂಗದ ಸಂಸ್ಕೃತಿಯಲ್ಲ.

ಸಂಸ್ಕೃತಿಯು ಒಟ್ಟು ಸಾಗರ ಗರ್ಭದ ಒಂದು ಉತ್ಪತ್ತಿ ಅಷ್ಟೇ. ಅದೇ ಸಂಸ್ಕೃತಿಯಲ್ಲ. ಸಂಸ್ಕೃತಿಯಿಂದ ಬೇರ್ಪಡಿಸಿದ ಮತ ಒಂದು ಬಂಜರು ದ್ವೀಪವಾಗಿ ಅನಾಗರಿಕ ಆವಾಸ ವಾಗುತ್ತದೆ. ಅಲ್ಲಿ ಧನದಾಹೀ ಸ್ವಾರ್ಥ, ಮೃಗತ್ವ ಪ್ರವೃತ್ತಿಗಳು ಹುಟ್ಟಿಕೊಳ್ಳುತ್ತವೆ. ಯಾವುದೇ ಒಂದು ಜನಾಂಗ, ದೇಶ, ಪ್ರದೇಶದ ಸಂಸ್ಕೃತಿಗೆ ಯಾವುದೇ ಮತ ಉತ್ತಾರಾಧಿಕಾರಿ ಯಾಗುವುದಿಲ್ಲ ಅಥವಾ ಆ ಸಂಸ್ಕೃತಿಯ ಗುತ್ತಿಗೆ ಹಿಡಿಯಲು ಆಗುವುದಿಲ್ಲ. ಆಗ ಮತೀಯ ಅಂಧತ್ವ ಅಥವಾ ದುರಾಭಿಮಾನ ಮನೆ ಮಾಡುತ್ತದೆ. ಆದರೆ ಆ ತತ್ವಗಳು ಯಾವುದೇ ಪಂಥೀಯ, ಮತೀಯ ಅಥವಾ ದೇಶೀಯ, ಪ್ರಾದೇಶಿಕ ಮತ್ತು ಭಾಷಿಕ ಸೀಮಿತ ಗಡಿಯಲ್ಲಿ ಬಂಧಿತವಾಗಕೂಡದು.

ಋಗ್ವೇದ – “ಯಾರೂ ಒಬ್ಬರಿಗಿಂತೊಬ್ಬರು ಮೇಲುಕೀಳಲ್ಲ. ಎಲ್ಲರೂ ಸಹೋದರರೆ. ಪ್ರತಿಯೊಬ್ಬರೂ ಪರಸ್ಪರರ ಹಿತಾಸಕ್ತಿಗೆ ದುಡಿಯಬೇಕು ಮತ್ತು ಒಗ್ಗಟ್ಟಾಗಿ ಪ್ರಗತಿ ಸಾಧಿಸಬೇಕು” ಎಂದು ಹೇಳುತ್ತದೆ. ಅಥರ್ವಣವೇದ ಕೂಡ “ಎಲ್ಲರಿಗೂ ಆಹಾರ ಮತ್ತು ನೀರಿನಲ್ಲಿ ಸಮಾನವಾದ ಹಕ್ಕಿದೆ” ಎಂದು ಹೇಳಿದೆ. ಮನುಸ್ಮೃತಿ ಕೂಡ ‘ರಾಜನಾದವನು ತನ್ನ ಎಲ್ಲಾ ಪ್ರಜೆಗಳನ್ನು ತಾರತಮ್ಯವಿಲ್ಲದೆ ಬೆಂಬಲಿಸಬೇಕು. ಭೂಮಿತಾಯಿ ಯಾವ ರೀತಿಯಲ್ಲಿ ಎಲ್ಲ ಜೀವಿಗಳನ್ನು ತಾಯಿಯಂತೆ ನೋಡುತ್ತಾಳೋ ಆ ರೀತಿಯ ಮಾತೃಭಾವನೆ ಯಿಂದ ಕಾಣಬೇಕು’ ಎಂದು ಹೇಳಿದೆ. ಭ್ರಮೆಯಿಂದ ಜಾತಿ, ಮತ, ಧರ್ಮವೆಂಬ ಭೇದಭಾವನೆ ಇಂದು ಪರಾಕಾಷ್ಠೆಗೆ ತಲುಪಿದೆ. ಬಹುಶಃ ವೇದಗಳಲ್ಲಿ ಹೇಳುವಂತೆ ‘ಮನುಷ್ಯನಂತೆ ಚಲಿಸುತ್ತಿರುವುದಾದರೂ ಒಳಗಿರುವುದು ಮೃಗತ್ವವೇ! ಇದೇ ನಮ್ಮ ಈಗಿನ ಭ್ರಮೆ ಮತ್ತು ಮಿಥ್ಯಾ ಕಲ್ಪನೆಗಳಿಗೆ ಕಾರಣವಾಗಿರಬಹುದು. ನಮ್ಮ ಎಲ್ಲಾ ಅಜ್ಞಾನ, ಮಿಥ್ಯಾ ಕಲ್ಪನೆಗಳನ್ನು ಸಂಸ್ಕರಿಸುವ ಅನಿವಾರ್ಯತೆ ಈಗಿದೆ.

ಸ್ವಾಮಿ ವಿವೇಕಾನಂದರ ಕೆಲವು ನುಡಿಮುತ್ತುಗಳು ಇಂದಿನ ವಿಕಲ್ಪಗಳಿಗೆ ಖಂಡಿತವಾಗಿ ಪರಿಹಾರವನ್ನು ಸೂಚಿಸಬಹುದು: “ತುಳಿತಕ್ಕೊಳಗಾದ ಲಕ್ಷಗಟ್ಟಲೆ ಬಡಜನರ ರಕ್ತದಿಂದ, ಅವರ ಶ್ರಮದ ಫಲದಿಂದ ವಿದ್ಯಾಭ್ಯಾಸವನ್ನು ಪಡೆದು ಸುಖ ಸೌಕರ್ಯಗಳಲ್ಲಿ ತೇಲಾಡು ವವರು ಆ ಜನರ ಒಳಿತನ್ನು ಕುರಿತು ಸ್ವಲ್ಪವಾದರೂ ಯೋಚಿಸದಿದ್ದರೆ ಅಂಥವರನ್ನು ದೇಶದ್ರೋಹಿಗಳೆನ್ನುತ್ತೇವೆ. ಇತಿಹಾಸದ ಯಾವ ಕಾಲದಲ್ಲಿ ಶ್ರೀಮಂತರು, ಪೂಜಾರಿಗಳು, ಶಕ್ತರಾದ ಆಳುವವರು ಬಡಜನರನ್ನು ಕುರಿತು ಯೋಚಿಸಿದ್ದೀರಿ? ನಿಮ್ಮ ಶಕ್ತಿಯ ಸ್ಥಾನಮಾನಗಳ ಸರ್ವಸ್ವವೂ ದಮನಕ್ಕೊಳಗಾದ ಅವರಿಂದ ಬಂದುದಲ್ಲವೆ? ಭಾರತದ ದುಸ್ಥಿತಿಗೆ ಕಾರಣ ಬಡಜನರ ನಿರ್ಲಕ್ಷ್ಯ! ಧರ್ಮದ ಗುತ್ತಿಗೆ ಹಿಡಿದವರು ಶತಮಾನಗಳ ಕಾಲ ಈ ಜನಸಮೂಹವನ್ನು ತುಳಿಯುತ್ತ ಹೋದರು. ಕಟ್ಟಕಡೆಗೆ ಈ ಭಾರತದ ಬಡಜನರು ತಾವು ಮನುಷ್ಯರೆಂಬುದನ್ನೂ ಮರೆತರು. ನಮ್ಮ ಧನಾಢ್ಯ ಪೂರ್ವಜರು ಸಾಮಾನ್ಯ ಜನಸಮೂಹವನ್ನು ತಾವು ಮನುಷ್ಯರೆಂಬುದನ್ನು ಮರೆಯುವವರೆಗೂ ತುಳಿಯುತ್ತ ಹೋದರು”. ವಿವೇಕಾನಂದರು ಮುಂದುವರೆದು; “ಅಸಹಾಯಕತೆ ಭಾರತದ ಅಧಃಪತನಕ್ಕೆ ಇನ್ನೊಂದು ಮುಖ್ಯ ಕಾರಣವಾದುದೇ ದೇಶದ ವಿದ್ಯಾಭ್ಯಾಸ ಮತ್ತು ಬೌದ್ದಿಕ ತರಬೇತಿಯನ್ನು ರಾಜಶಕ್ತಿಯ ಪ್ರಭಾವ, ವಂಶಪಾರಂಪರ್ಯದ ಹೆಮ್ಮೆ ಅಭಿಮಾನಗಳಿಂದ ಕೈಬೆರಳಣಿಕೆಯ ಕೆಲವೇ ಮಂದಿ ತಮ್ಮ ವಶವಿರಿಸಿಕೊಂಡಿದ್ದು ಭಾರತದ ಬಡವನಿಗೆ, ಕೆಳಜಾತಿಯವನಿಗೆ, ಯಾವ ಸಹಾಯವೂ ಇಲ್ಲದಿರುವುದು. ಯಾರೊಬ್ಬ ಸ್ನೇಹಿತರೂ ಇಲ್ಲದಿರುವುದು. ಅವರೆಷ್ಟೇ ಪ್ರಯತ್ನಿಸಿದರೂ ಮೇಲೇರಲು ಅವರಿಗೆ ಸಾಧ್ಯವಿಲ್ಲ. ದಿನದಿನವೂ ಅವರು ಕೆಳಕೆಳಗೆ ಕುಸಿಯುತ್ತಿದ್ದಾರೆ. ಕ್ರೂರ ಸಮಾಜದಿಂದ ಬೀಳುತ್ತಿರುವ ಏಟುಗಳು ಎಲ್ಲಿಂದ ಬರುತ್ತಿವೆ ಎಂಬುದನ್ನರಿಯದೆ ಅನುಭವಿಸುತ್ತಿದ್ದಾರೆ” ಎಂಬುದಾಗಿ ಉದ್ಗರಿಸಿದರು. ಅಂದು ವಿವೇಕಾನಂದರು ಹೇಳಿದ ಮಾತು ಇಂದಿಗೂ ಪ್ರಸ್ತುತ – “ತನ್ನ ಸಹೋದರನನ್ನೂ ಕೆಳಕ್ಕೆ ತಳ್ಳುವ ಯಾರಾದರೂ ತನ್ನ ಅಧಃಪತನದಿಂದ ತಪ್ಪಿಸಿಕೊಳ್ಳಬಲ್ಲನೇ? ಇತರರಿಗೆ ಹಿಂಸೆ, ನೋವುಗಳನ್ನುಂಟು ಮಾಡುವವನು ಎಂದಾದರೂ ತನಗೇ ಕೇಡನ್ನುಂಟು ಮಾಡಿಕೊಳ್ಳ ದಿರಲಾರನೇ? ಬ್ರಾಹ್ಮಣ ಮತ್ತು ಕ್ಷತ್ರಿಯರ ಒಟ್ಟು ದಬ್ಬಾಳಿಕೆ ಇಂದು ಅವರ ತಲೆಯ ಮೇಲೆ ಚಕ್ರಬಡ್ಡಿ ಸಹಿತ ಹಿಂದಿರುಗುತ್ತಿದೆ, ತಪ್ಪಿಸಿಕೊಳ್ಳಲಾಗದ ಕರ್ಮ ನಿಯಮದ ಫಲವನ್ನೇ ಅವರಿಂದ ಅನುಭವಿಸಬೇಕಾಗಿದೆ. ಒಂದು ಸಾವಿರ ವರ್ಷದ ದಾಸ್ಯ ಮತ್ತು ಪತನವೇ ಆ ಫಲ. ಜಾತಿಧರ್ಮದ ತಳಪಾಯದ ಗೋಜಿಗೆ ಹೋಗಿ ಅಲ್ಲಿ ಕೈಯಾಡಿಸಿದ್ದೇ ನಾವು ಕೆಳಗೆ ಬಿದ್ದಿರುವ ನಿಜವಾದ ಕುರುಹು. ನೀವು ಜಾತಿ ಧರ್ಮ ಎಂದು ಯಾವುದನ್ನು ಕರೆಯುತ್ತಿರೋ ಅದು ಸದ್ಯ ಇರುವುದಕ್ಕಿಂತ ವ್ಯತಿರಿಕ್ತವಾದುದು. ಮೊದಲು ನಿಮ್ಮ ಶಾಸ್ತ್ರಗಳನ್ನು ಚೆನ್ನಾಗಿ ಓದಿ, ಆಗ ನಿಮಗೆ ಸುಲಭವಾಗಿ ತಿಳಿಯುವ ಅಂಶ ಇದು; ಶಾಸ್ತ್ರವು ಹೇಳುವ ಜಾತಿ, ಧರ್ಮ, ದೇಶದ ಎಲ್ಲಾ ಭಾಗಗಳಿಂದಲೂ ಎಂದೋ ಕಣ್ಮರೆಯಾಗಿದೆ”. ಜನರು ಕರ್ಮಕಾಂಡದ ವಿಧಿವಿಧಾನಗಳಿಂದ ಬಳಲಿ ಬೇಸತ್ತು ಚಕಿತರಾಗಿ ಗುಂಪು ಗುಂಪಾಗಿ ಭೌತಿಕವಾದಿಗಳ ಜೊತೆ ಸೇರಿಕೊಂಡರು. ಇಲ್ಲಿ ಆ ಜಾತಿ ಪ್ರಶ್ನೆಯ ಪ್ರಾರಂಭ. ಕರ್ಮಕಾಂಡ, ತತ್ವ, ಚರ್ಚೆ ಮತ್ತು ಭೌತಿಕವಾದ ಇವುಗಳೊಳಗಿನ ತ್ರಿಕೋನ ಹೋರಾಟ ಪರಿಹಾರವಿಲ್ಲದ ಸಮಸ್ಯೆಯಾಗಿ ಇಂದಿನವರೆಗೂ ಬಂದಂಥದ್ದು. ಯಾವ ಸಮಾಜದಲ್ಲಿ ಶ್ರೇಷ್ಠತಮ ನೀತಿ ಸತ್ಯಗಳ ಅನುಷ್ಠಾನ ಸಾಧ್ಯವಾಗುವುದೋ ಅದೇ ಶ್ರೇಷ್ಠಸಮಾಜ. ಇದೇ ನನ್ನ ಅಭಿಪ್ರಾಯ. ಸಮಾಜದಲ್ಲಿ ಶ್ರೇಷ್ಠ ಸತ್ಯವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲದೆ ಇದ್ದರೆ ಅದು ಸಾಧ್ಯವಾಗುವಂತೆ ಮಾಡಿ. ಇದನ್ನು ಎಷ್ಟು ಬೇಗ ಮಾಡುತ್ತೀರೋ ಅಷ್ಟು ಒಳ್ಳೆಯದು. ಈ ರೀತಿ ಸ್ತ್ರೀ ಪುರುಷರು ಒಂದು ಆದರ್ಶಕ್ಕೆ ನಿಲ್ಲಬೇಕು. ಸತ್ಯವನ್ನು ನಿರ್ಭಯವಾಗಿ ನಂಬಿ, ನಿರ್ಭಯವಾಗಿ ಅನುಷ್ಠಾನಕ್ಕೆ ತನ್ನಿ. ಇವೆರಡರಲ್ಲಿ ಯಾವುದು ಸರಿಯಾದ ಆದರ್ಶವೋ, ಯಾರಿಗೆ ಗೊತ್ತು! ಪಾಶ್ಚಾತ್ಯರ ತಾತ್ಕಾಲಿಕ ಶಕ್ತಿ ಮತ್ತು ಅಧಿಕಾರವೋ ಅಥವಾ ಪೌರ್ವಾತ್ಯರ ಸಹಿಷ್ಣುಶಕ್ತಿಯೋ?

ಬುದ್ಧ, ಬಸವೇಶ್ವರ, ರಾಮಕೃಷ್ಣ ಪರಮಹಂಸ, ಸ್ವಾಮಿವಿವೇಕಾನಂದ ಮತ್ತು ಮಹಾತ್ಮಾ ಗಾಂಧಿಯವರು ಭಾರತೀಯ ಸಂಸ್ಕೃತಿಯ ಸನಾತನ ಸಂದೇಶವನ್ನು ಹೊರಗೆಡವಿದರು. ಅಲ್ಲಲ್ಲಿ ಬರುವ ದೇಶೋಚಿತ, ಕಾಲೋಚಿತ ಧರ್ಮ ಮೀಮಾಂಸೆಗಳನ್ನು ಸಂಪ್ರದಾಯದ ಸಂರಕ್ಷಣೆಗೆ ಮುಂದೊಡ್ಡುವ ಪ್ರವೃತ್ತಿ ಇಂದು ನಿಲ್ಲಬೇಕಾಗಿದೆ. ಧರ್ಮವು ಪಂಥ ನಿಷ್ಠೆಯಿಂದ ಸೊರಗುತ್ತದೆ. ಈ ಭ್ರಮೆಗಳಾಚೆ ಅನ್ವೇಷಣೆ ಕ್ಷಿತಿಜದೆಡೆ ಸಾಗಬೇಕು. ಜಾತಿ, ಇಂಡೋ ಆರ್ಯನ್‌ರು ತಮ್ಮ ಪ್ರಭುತ್ವವನ್ನು ಉಳಿಸಿ ಬೆಳೆಸಲು ಬಿತ್ತಿದ ಯಜಮಾನ ಸಂಸ್ಕೃತಿಯ ಪ್ರತೀಕ. ಅದನ್ನು ಇಂದು ಶಾಶ್ವತಗೊಳಿಸುವ ಪ್ರಯತ್ನ ಪ್ರವಾಹದ ವಿರುದ್ಧ ಈಜಾಡುವ ಪ್ರಕ್ರಿಯೆಯಾಗಿದೆ. ಸಮಕಾಲೀನ ಸಮುದಾಯಕ್ಕೆ ಇದು ಸ್ವೀಕೃತವಾಗುವುದಿಲ್ಲ. ಪ್ರಕೃತಿ ನಮ್ಮ ಹುಟ್ಟಿನೊಡನೆ ಸಿದ್ಧವಾಗಿ ಬರುತ್ತದೆ. ಸಂಸ್ಕೃತಿ ನಮ್ಮ ದುಡಿಮೆಯಿಂದ ಮಾತ್ರ ಸಾಧ್ಯವಾಗುತ್ತದೆ. ಇದನ್ನು ಅರಿತಾಗ ಮಾತ್ರ ಮತ, ಜಾತಿ, ಪಂಥಗಳ ಜಂಜಾಟದಿಂದ ಭಾರತೀಯ ಜನಾಂಗ ಎದ್ದೇಳಲು ಸಾಧ್ಯವಾಗುತ್ತದೆ.

ಹಿಂದಿನ ಆಚಾರ್ಯ ಮತ್ತು ಸಂತರಿಗೆ ಶಾಸ್ತ್ರಜ್ಞಾನದ ಜೊತೆಯಲ್ಲಿ ವಾಸ್ತವಿಕ ಪ್ರಾಪಂಚಿಕ ಜ್ಞಾನವೂ ಇತ್ತು. ಅವರೆಲ್ಲರೂ ಆಧ್ಯಾತ್ಮಿಕ ಪ್ರಜಾಪ್ರಭುತ್ವದ ಹೊಸ ಮನ್ವಂತರಗಳನ್ನು ಸೃಜಿಸಿದರು. ಮಹಾತ್ಮಗಾಂಧಿಯವರು ಮತೀಯ ಮೂಲಭೂತತನವನ್ನು ಹೋಗಲಾಡಿಸಲು ‘ಸರ್ವಧರ್ಮ ಸಂಭವ” ಹೊಸ ಸಂದೇಶ ಸಾರಿದರು. ಅದು ಇಂದಿನ ಭಾರತೀಯ ಜನಾಂಗದ ಬೀಜ ಮಂತ್ರವಾಗಬೇಕು. ಆಗ ಮಾತ್ರ ನಮ್ಮ ಮಧ್ಯೆಯಿರುವ ಕ್ಷೋಭೆ, ಅಸಹನೆ ಮತ್ತು ಪರಸ್ಪರ ಬೆಳೆಯುತ್ತಿರುವ ದ್ವೇಷಸಂಸ್ಕೃತಿ ಅಳಿದು ಪ್ರೀತಿ-ವಿಶ್ವಾಸ ಮನಸ್ಸನ್ನು ಆಳುತ್ತವೆ. ಅಮೆರಿಕದ ನೆಲದಲ್ಲಿ ನಮ್ಮ ಧಾರ್ಮಿಕ ಗುರುಗಳು ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ವಿಚಾರ ಮಾತನಾಡುವಾಗ ವಿಶೇಷವಾದ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಯಿದೆ. ಇಲ್ಲದಿದ್ದರೆ ಭಾರತೀಯತೆ ಮತ್ತು ಭಾರತೀಯ ಧರ್ಮ, ವಿಶ್ವವಿಚಾರ ಚಿಂತನೆಯಲ್ಲಿ ಔನ್ನತ್ಯವನ್ನು ಕಳೆದುಕೊಂಡು ಕುಬ್ಜವಾಗುತ್ತದೆ.