ಬೌದ್ಧ ಧರ್ಮ ಭಾರತದ ರಾಷ್ಟ್ರೀಯ ಧರ್ಮ. ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಅದು ದೇಶದ ಹಣೆಬರಹವನ್ನು ತಿದ್ದಿತು; ಮೊಟ್ಟ ಮೊದಲ ಬಾರಿಗೆ ಬೌದ್ಧ ಧರ್ಮ ಸಮಾನವಾದ ಸಾಂಸ್ಕೃತಿಕ ಸಮನ್ವಯ ಮತ್ತು ಸಂಘಟನೆಯಿಂದ ಭಾರತವನ್ನು ಒಗ್ಗೂಡಿಸಿತು.

ಬೌದ್ಧ ಧರ್ಮ ಜನಸಾಮಾನ್ಯರ ಮೊಟ್ಟ ಮೊದಲ ಧರ್ಮ; ಅದು ಜನರ ಮೇಲೆ ಬಲವಂತವಾಗಿ ಹೇರಿದ ಧರ್ಮವಲ್ಲ. ಜನರೇ ಸ್ವೇಚ್ಛೆಯಿಂದ, ಒಪ್ಪಿಕೊಂಡ ಧರ್ಮ; ವಿಜ್ಞಾನ ಮತ್ತು ಕಲೆ, ಸಾಹಿತ್ಯ ಮತ್ತು ಧರ್ಮ, ವಾಣಿಜ್ಯ ಮತ್ತು ಕೈಗಾರಿಕೆ, ಆಂತರಿಕ ಅಭಿವೃದ್ದಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಮುಂತಾದ ರಂಗಗಳಲ್ಲಿ ರಾಷ್ಟ್ರದ ಅಪಾರ ಅಂತಃಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಬೌದ್ಧಧರ್ಮ ಹೊರಗೆಡಹಿತು; ಒಟ್ಟಿನಲ್ಲಿ ಅಂದಿನಿಂದ ಇಂದಿನವರೆಗೂ ಭಾರತವನ್ನು ಒಂದು ಮಹಾನ್ ರಾಷ್ಟ್ರವನ್ನಾಗಿ ಬೆಳೆಸಿತು.

ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಗಳಿಸಿದ ಉನ್ನತ ಹಿರಿಮೆ ಪ್ರಪಂಚದ ಅತ್ಯಂತ ಪ್ರಾಚೀನವೂ ಅತ್ಯಂತ ದೊಡ್ಡ ವಸತಿ ವಿಶ್ವವಿದ್ಯಾನಿಲಯವೂ ಆಗಿದ್ದ ಸುಮಾರು ಕ್ರಿ.ಶ. ೪೦೦ರಲ್ಲಿ ಸ್ಥಾಪಿತವಾದ ನಲಂದದ ಜಗತ್ ಪ್ರಸಿದ್ಧ ಬೌದ್ಧ ವಿಶ್ವವಿದ್ಯಾನಿಲಯದಲ್ಲಿ ವಿಪುಲವಾಗಿ ಮೈತಳೆದಷ್ಟು ಮಟ್ಟಿಗೆ ಬೇರೆಲ್ಲೂ ಕಾಣಲಿಲ್ಲ. ರಾಜ ಮಹಾರಾಜರು ಮತ್ತು ಶ್ರೀಮಂತರು ಈ ಮಹಾವಿದ್ವಾಸಂಸ್ಥೆಯ ಅಭಿವೃದ್ದಿಗಾಗಿ ತಮ್ಮ ಸಂಪತ್ತನ್ನು ವಿನಿಯೋಗಿಸಲು ಹರ್ಷ ಪಡುತ್ತಿದ್ದರು. ಸನ್ಯಾಸಿ ಮಠಗಳು, ಸಭಾಂಗಣಗಳು, ಗ್ರಂಥಾಲಯಗಳು, ದೇವಸ್ಥಾನಗಳು, ಕೆರೆಗಳು ಮತ್ತು ತೋಟಗಳನ್ನು ನಿರ್ಮಿಸಿದರು; ವಾಸ್ತುಶಿಲ್ಪದ ಕೌಶಲ್ಯ ಮತ್ತು ಸೌಂದರ್ಯಕ್ಕೆ ಮಾದರಿಗಳಾಗಿದ್ದವು. ೨೦೦ ಗ್ರಾಮಗಳನ್ನು ಹೊಂದಿದ್ದ ಈ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಜಮೀನಿನ ಅಪಾರ ದತ್ತಿಗಳನ್ನೂ ನೀಡಿದರು. ಚೀನಾದ ಸಾಂಸ್ಕೃತಿಕ ರಾಯಭಾರಿ ಹುಯನ್‌ತ್ಸಾಂಗ್ ಬಂದಿದ್ದ ಸಮಯದಲ್ಲಿ, ಭಾರತ, ಹೊರ ದೇಶಗಳಿಂದಲೂ ೧೦,೦೦೦ ವಿದ್ಯಾರ್ಥಿಗಳು ಬಂದಿದ್ದರು. ವಿಶ್ವವಿದ್ಯಾನಿಲಯದ ಮಹಾನ್ ವಿದ್ವಾಂಸರ ಕೀರ್ತಿ ಹೊರ ದೇಶಗಳಿಗೂ ಹರಡಿ ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಸುಮಾರು ನೂರು ವೇದಿಕೆಗಳಿಂದ ಪ್ರವಚನಗಳು ನಡೆಯುತ್ತಿದ್ದವು. ಅಲ್ಲಿ ಎಂಟು ಸಭಾಂಗಣಗಳಿದ್ದವು; ೩೦೦ ಕೊಠಡಿ ಗಳಿದ್ದವು; ವಿಶ್ವವಿದ್ಯಾನಿಲಯದ ಗ್ರಂಥ ಭಂಡಾರ ದೊಡ್ಡದಾಗಿದ್ದು ಮೂರು ಕಟ್ಟಡಗಳನ್ನು ವ್ಯಾಪಿಸಿತ್ತು. ಅವುಗಳಲ್ಲಿ ಒಂದು ಒಂಬತ್ತು ಅಂತಸ್ತಿನ ಭವನವಾಗಿತ್ತು. ದೂರದ ಸ್ಥಳಗಳಿಂದ ಸಾವಿರಾರು ವಿದ್ವಾಂಸರು ವಿಚಾರ ವಿನಿಮಯಕ್ಕಾಗಿ ಬರುತ್ತಿದ್ದರು. ಪ್ರಶ್ನೋತ್ತರಗಳಿಗೆ ದಿನದ ಕಾಲಮಾನ ಸಾಲುತ್ತಿರಲಿಲ್ಲ. ಶಿಕ್ಷಣದಲ್ಲಿ ತುಂಬಾ ಉನ್ನತ ಮಟ್ಟವನ್ನು ಕಾಯ್ದು ಕೊಳ್ಳಲಾಗಿತ್ತು; ಯೋಗ್ಯತೆಯ ಕಠಿಣ ಪರೀಕ್ಷೆಯ ನಂತರವೇ ಪ್ರವೇಶಕ್ಕೆ ಅಪ್ಪಣೆ ದೊರಕುತ್ತಿತ್ತು; ವೈಯಕ್ತಿಕ ಬೋಧನೆಯನ್ನು ಕೊಡಲಾಗುತ್ತಿತ್ತು; ಬೋಧಿಸಲಾಗುತ್ತಿದ್ದ ವಿಷಯಗಳು ಬೌದ್ಧ ಧರ್ಮ ಮತ್ತು ಹಿಂದೂ ಧರ್ಮದ ಗ್ರಂಥಗಳನ್ನೂ, ಹೇತುವಿದ್ಯೆ ಮತ್ತು ಶಬ್ದವಿದ್ಯೆ, ಚಿಕಿತ್ಸಾವಿದ್ಯೆ (ಔಷಧಶಾಸ್ತ್ರ), ತಂತ್ರ ಮತ್ತು ಸಾಂಖ್ಯಗಳನ್ನೂ ಒಳಗೊಂಡಿದ್ದವು. ಜ್ಞಾನಪ್ರಸಾರ ಮಾಡಲು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಲು ಬೌದ್ಧ ಧರ್ಮವನ್ನು ಹರಡಲು, ತಮ್ಮನ್ನು ಆಹ್ವಾನಿಸಿದ ವಿದೇಶಗಳಿಗೆ ಮಾರ್ಗದರ್ಶನ ನೀಡಲು ಇಲ್ಲಿಂದ ಪ್ರಚಾರಕರು ಹೋಗುತ್ತಿದ್ದರು. ಈ ವಿಶ್ವವಿದ್ಯಾನಿಲಯದ ಕೀರ್ತಿ ಜಗತ್‌ಪ್ರಸಿದ್ಧವಾಗಿತ್ತು. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಎಲ್ಲೇ ಹೋದರೂ ಗೌರವಕ್ಕೆ ಪಾತ್ರರಾಗುತ್ತಿದ್ದರು. ಅದು ನಿಜವಾಗಿಯೂ ‘ವಿಶ್ವವಿದ್ಯಾನಿಲಯ’ವೇ ಆಗಿತ್ತು. ಅದರ ಒಂದು ಲಾಂಛನ : “ಕ್ಷಮೆಯಿಂದ ಕೋಪವನ್ನು ಗೆಲ್ಲಬೇಕು” ಎಂಬುದಾಗಿತ್ತು. ವಿಶ್ವದಲ್ಲಿ ಇಂದು ಭಾರತ ತನ್ನ ಶಿಕ್ಷಣ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದರೂ, ಔನ್ನತ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗಲಿಲ್ಲ. ಅಲ್ಲದೆ ರಾಷ್ಟ್ರದ ೪೦೦ ಮಿಲಿಯ ಜನ ಈಗಲೂ ನಿರಕ್ಷರಕುಕ್ಷಿಗಳಾಗಿರುವುದು ನಮ್ಮ ಪರಂಪರೆಯ ಅಧಃಪತನವನ್ನು ಸಾರುತ್ತದೆ.

ರಾಷ್ಟ್ರೀಯ ಧರ್ಮವಾದ ಬೌದ್ಧ ಧರ್ಮವನ್ನು ನಾಗರಿಕ ಪ್ರಪಂಚದ ಎಲ್ಲಾ ಭಾಗಗಳಲ್ಲಿ ಅಂದರೆ ಗ್ರೀಸ್, ಚೀನಾ, ಜಪಾನ್, ಟಿಬೆಟ್, ಬರ್ಮಾ, ಸಿಲೋನ್ ಮುಂತಾದ ದೇಶಗಳಲ್ಲಿ ಹರಡುತ್ತ, ಲೌಕಿಕ ಮತ್ತು ಆಧ್ಯಾತ್ಮಿಕ ಜ್ಞಾನವಾಹಿನಿಯನ್ನು ಹರಿಯಿಸುತ್ತಿದ್ದ ನಲಂದ ವಿಶ್ವವಿದ್ಯಾನಿಲಯದಂಥ ಸುಪ್ರಸಿದ್ಧ ವಿದ್ಯಾಸಂಸ್ಥೆಗಳಿಂದ ಮಾನವ ಜನಾಂಗ ಪ್ರಯತ್ನಿಸದಿದ್ದ ಅಗಾಧ ಧಾರ್ಮಿಕ ಸಹನೆ ಮತ್ತು ಮಾನವ ಭ್ರಾತೃತ್ವವನ್ನು ಬೋಧಿಸಿ ಅದನ್ನು ಅನುಷ್ಠಾನ ಮಾಡುತ್ತ ಭಾರತ ತಾನು ‘ಮನುಕುಲದ ಅಧ್ಯಾತ್ಮ ಜನನಿ’ ಎಂಬ ಹೆಸರನ್ನು ಸ್ಥಾಪಿಸಿತು.

ಜಗತ್ತಿನ ಇತಿಹಾಸದಲ್ಲಿ ಕ್ರಿ.ಪೂ. ಆರನೇ ಶತಮಾನ ಅದ್ವಿತೀಯ ಘಟನೆಗಳ ಸಂಪುಟವಾಗಿದೆ. ಲೋಕೋದ್ಧಾರಿಗಳಾದ ಮಹಾನುಭಾವರಲ್ಲಿ ಅನೇಕರು ಜನಿಸಿದ್ದು ಆ ಸಮಯದಲ್ಲೇ. ಗ್ರೀಸಿನಲ್ಲಿ ಪರ್ಮನೈಡ್ಸ್, ಎಂಪಿಡೋಕ್ಲೆಸ್ ಮುಂತಾದ ಅನುಭಾವಿಗಳೂ, ಇರಾನಿನಲ್ಲಿ ಝರತ್ರುಷ್ಟ ಮಹಾಶಯನೂ, ಚೈನಾದಲ್ಲಿ ತಾವೂ ಮತ್ತು ಕನ್‌ಫ್ಯೂಶಿಯಸ್ ಮಹಾನುಭಾವರೂ, ಭಾರತದಲ್ಲಿ ಮಹಾವೀರ, ಬುದ್ಧ ಭಗವಾನರೂ ಅವತರಿಸಿದ ಪರ್ವ ಕಾಲ. ಅಂದಿನ ವಿಶ್ವ ಸಮಸ್ಯೆಗಳಿಗೆ ಜೀವಂತ ಸಂದೇಶವನ್ನು ಸಾರಿದ ಮಹಾನುಭಾವರು ಅವತರಿಸುವುದಕ್ಕೆ ಆಯಾ ರಾಷ್ಟ್ರಗಳ ಪ್ರಾಚೀನ ಹಿನ್ನೆಲೆಯೂ ಕಾರಣವಾಗುತ್ತದೆ.

ಸರ್ವ ಜೀವಾವಳಿಗೆ ಲೇಸನ್ನು ಬಯಸುವ ಸಂಸ್ಕೃತಿಯ ಬೇರುಗಳು ಭಾರತೀಯ ದರ್ಶನ ಪರುಷ ಮಣಿಗಳೆನಿಸಿದ ವೇದೋಪನಿಷತ್ತುಗಳಲ್ಲಿರುವುದು ಸತ್ಯ. ಆದರೆ ಅದು ಕಾಲ ಧರ್ಮಕ್ಕೆ ಅನುಗುಣವಾಗಿ ರೂಪಾಂತರವಾದಂತೆ ತೋರ್ಪಟ್ಟ ಸಂದರ್ಭಗಳು ಚರಿತ್ರೆಯಲ್ಲಿ ಸಿಕ್ಕುತ್ತವೆ. ಬುದ್ಧನಿಂದ ಹಿಡಿದು ಬಸವಣ್ಣನವರೆಗೆ ಮತ್ತೆ ಮಹಾತ್ಮ ಗಾಂಧೀಜಿಯವರ ಸಾಧನಾಯುಗದವರೆಗೆ ಅಹಿಂಸೆಯೇ ಪರಮ ಧರ್ಮವೆಂದೂ, ದಯೆಯೇ ಧರ್ಮದ ಮೂಲವೆಂದೂ ಸಾರಲಾಗಿದೆ.

ಧರ್ಮಾನುಯಾಯಿಗಳು ಮೂಲತತ್ವಗಳನ್ನು ಮರೆತು ಶ್ರುತಿಸಂದೇಶಗಳ ಬಾಹ್ಯಾರ್ಥ ವನ್ನು ಮಾತ್ರ ಅಳವಡಿಸಿಕೊಂಡು ಕರ್ಮಕಾಂಡದ ನಿಯಮಾವಳಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದರು. ಇದರಿಂದ ಅಪಾರ ಅನರ್ಥ ಪರಂಪರೆಯೇ ಸಂಭವಿಸಿತು. ಯಜ್ಞ ಯಾಗಾದಿಗಳು ಪ್ರಚಲಿತವಾದವು. ಯಾಗಕರ್ಮಗಳಲ್ಲಿ ಪ್ರಾಣಿವಧೆಯೂ ಮಾಂಸಭಕ್ಷಣವೂ ಹೆಚ್ಚಿತು. ಅಹಿಂಸಾ ವಾದಿಗಳ ಮುಂದೆ ‘ಸರ್ವಮೇಧೇ ಸರ್ವಂಹನ್ಯಾತ್’ ಎಂದರೆ ಯಾಗಗಳಲ್ಲಿ ಸರ್ವಪ್ರಾಣಿಗಳನ್ನು ಕೊಲ್ಲುವುದಕ್ಕೆ ಅವಕಾಶವಿದೆ ಎಂದು ಉತ್ತರಿಸುತ್ತಾ ಸ್ವಾರ್ಥಪರರೂ ಜಿಹ್ವಾ ಚಾಪಲ್ಯಚಿತ್ತರೂ ವಾದ ಮಾಡುತ್ತಾ ಪ್ರಾಣಹಿಂಸೆಗೆ ವೇದ ವಾಕ್ಯಗಳ ಪೋಷಣೆ ಪಡೆಯಲಾರಂಭಿಸಿದರು.

ಆದುದರಿಂದಲೇ ಜಗತ್ತಿನ ಜನಸಮುದಾಯದಲ್ಲಿ ಐದನೇ ಎರಡು ಭಾಗ ಜನರು ಬೌದ್ಧ ಸಂಪ್ರದಾಯ ಸಂಸ್ಕೃತಿಗಳ ಅನುಚರರಾದರು. ತಿಳಿನೀರಿನ ಅಡಿಯಲ್ಲಿರುವ ಪಂಕದಲ್ಲಿ ಸಂಜನಿಸಿದ ಕಮಲವು ಲೋಕಕ್ಕೆ ಮಧು ಪರಿಮಳಗಳನ್ನು ನೀಡುವಂತೆ ಭಾರತೀಯ ಸಂಸ್ಕೃತಿಯ ದಿವ್ಯಸಾಗರದಲ್ಲೇ ಜನಿಸಿದ ಬುದ್ಧಾರವಿಂದವು ವಿಶ್ವದ ಮೋಕ್ಷ ಮಧುವಾಗಿ, ಜ್ಞಾನಪರಿಮಳವಾಗಿ ಪರಿಣಮಿಸಿತು.

ಭಾರತದಲ್ಲಿ ಸಾಮೂಹಿಕವಾಗಿ ಕೊಚ್ಚಿ ಹಾಕುವುದು, ದಹಿಸುವುದು ಬಹಳ ಸರಳವೆಂದೇ ಹೇಳಬೇಕು. ದಲಿತರು ಹಿಂದೂ ಧರ್ಮದ ಹೊರಗಿದ್ದು ಬದುಕಿದರೂ ಅನೇಕ ಅನ್ಯಾಯ ಅತ್ಯಾಚಾರಗಳಿಗೆ ಬಲಿಯಾಗುತ್ತಿದ್ದರೂ ಕೇಳುವವರಿಲ್ಲ.

ಸರ್ವಮತ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಭಾರತೀಯ ಧರ್ಮದ ಅನ್ವೇಷಣೆ ನಡೆಯಬೇಕಾದ ಅನಿವಾರ್ಯತೆ ಬಂದಿದೆ. ಬಹುಶಃ ಐದನೇ ಶತಮಾನದಲ್ಲಿ ಅಂದರೆ ಗುಪ್ತರ ಕಾಲದಲ್ಲಿ ಈ ಮಹತ್ವದ ಅನ್ವೇಷಣೆ ನಡೆಯಿತು. ಅದರ ಪರಿಣಾಮವಾಗಿ ರಾಮಾಯಣ ಮತ್ತು ಮಹಾಭಾರತಗಳ ಪರಿಷ್ಕರಣೆಯಾಯಿತು. ಭಗವದ್ಗೀತೆಯ ಆವಿಷ್ಕಾರ ವಾಯಿತು. ಭಗವದ್ಗೀತೆಯ “ಉದ್ಧರೇತ್ ಆತ್ಮಾನಾಂ ಆತ್ಮನಾ ಆತ್ಮನಂ” : ‘ನಿನ್ನ ಆತ್ಮ ನಿನ್ನನ್ನು ಉದ್ಧಾರ ಮಾಡಬೇಕೆಂಬ’ ಸಂದೇಶ ಇದಕ್ಕೊಂದು ಸಾಕ್ಷಿ. ಯಾವನೇ ಧಾರ್ಮಿಕ ನಾಯಕ ತನ್ನ ಕಾಲ ಮೀರಿ ಬೆಳೆಯುತ್ತಾನೆ. ಇಂತಹಾ ಪರಿವರ್ತನಾ ಪ್ರಕ್ರಿಯೆಗೆ ಭಾರತೀಯ ಸಂಸ್ಕೃತಿಯಲ್ಲಿ ಅವತಾರದ ಸ್ವರೂಪ ನೀಡಿದ್ದೇವೆ. ಬುದ್ಧಾವತಾರದ ಅನಂತರ ಈ ಪರಿವರ್ತನೆಯ ಪ್ರಕ್ರಿಯೆ ನಿಂತಂತೆ ಭಾಸವಾಗುತ್ತದೆ. ಭಾರತದಲ್ಲಿ ಬುದ್ಧನ ಸಂದೇಶ ಸಮರ್ಪಕವಾಗಿ ಹರಡುತ್ತಿದ್ದರೆ ಜಾತಿ ವ್ಯತ್ಯಾಸ ಅಳಿಯುತ್ತಿತ್ತು. ಅನೈಕ್ಯತೆ ಬೆಳೆಯುತ್ತಿರಲಿಲ್ಲ. ಪರದಾಸ್ಯದ ಸುಳಿಯಲ್ಲಿ ಸಿಲುಕುತ್ತಿರಲಿಲ್ಲ. ಭಾರತದ ವೈಚಾರಿಕ ದಿಗ್ವಿಜಯದ ಫಲ ಜಪಾನ್, ಚೀನಾದಂತಹ ದೇಶಗಳಿಗೆ ದಕ್ಕಿದರೂ, ಭಾರತದ ಪಾಲಿಗೆ ಮರೀಚಿಕೆಯಾಯಿತು. ಬುದ್ಧ ಪ್ರಚುರಗೊಳಿಸಿದ ಆಧ್ಯಾತ್ಮಿಕ ಪ್ರಜಾಪ್ರಭುತ್ವ ಸಾರ್ವತ್ರೀಕರಣಗೊಂಡು ರಾಷ್ಟ್ರ ವಿಶ್ವದ ಪ್ರಜಾಪ್ರಭುತ್ವದ ದಿವ್ಯಬಿಂದುವಾಗುತ್ತಿತ್ತು. ಅಲ್ಲಿ ಆಷಾಢಭೂತಿತನವಿರಲಿಲ್ಲ, ಮುಖವಾಡವಿರಲಿಲ್ಲ. ನೂರಕ್ಕೆ ನೂರುಪಾಲು ಪಾರದರ್ಶಕತನವಿತ್ತು. ಮನುಜನಲ್ಲಿ ಕರ್ತವ್ಯ ಜಾಗೃತಿಯ ಪ್ರಜ್ಞಾ ಲಹರಿಯಿತ್ತು. ಚೈನಾದ ಶ್ರೇಷ್ಠ ಸುಧಾರಕ ಮತ್ತು ಪ್ರಥಮ ಪ್ರಧಾನಿ ಸನ್ ಯೂತ್ ಸೆನ್ ಉದ್ಗರಿಸಿದ ಶೈಲಿ ಅಸಾಧಾರಣ: “ಬೌದ್ಧ ಧರ್ಮ ಅನುಸರಿಸಿದರೆ ಜಗತ್ತಿಗೆ ಶಾಂತಿ ನೀಡಬಹುದು”. ಸಂಯುಕ್ತ ರಾಷ್ಟ್ರ ಸಂಸ್ಥೆಯ ಸ್ಥಾಪಕ ಪ್ರಮುಖರಾದ ಅಮೇರಿಕದ ಅಧ್ಯಕ್ಷ ವುಡ್ರೋವಿಲ್ಸನ್ ‘ಯುದ್ಧಗಳು ಮನಸ್ಸಿನಲ್ಲಿ ಜನ್ಮತಾಳುತ್ತವೆ…” ಎಂದು ಹಾಕಿದ ತಳಪಾಯ ಬುದ್ಧನ ಶಾಂತಿ ಸಂದೇಶದ ಆಧಾರದಿಂದ ಒಡಮೂಡಿದೆ.

ಬುದ್ಧ ಈ ನೆಲದ ಸರ್ವಶ್ರೇಷ್ಠ ಶಾಂತಿದೂತ. ವೈಚಾರಿಕ ಪಥವನ್ನು ತುಳಿಯುವುದರ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದ ಗೌತಮನು ಬಾಲ್ಯದಿಂದಲೂ ಜೀವಪರ ನಿಲುವಿಗೆ ಬದ್ಧನಾಗಿರುವಂತಹ ವ್ಯಕ್ತಿ. ದುಃಖ ಪೀಡಿತರ ದಮನೀಯ ಸ್ಥಿತಿಯನ್ನು ಕಂಡು ಮರುಗುತ್ತಿದ್ದವನು. ಮಾನವೀಯ ಮೌಲ್ಯಗಳ ರಕ್ಷಕನಾಗಿರುವ ಬುದ್ಧ ‘ಮಾನವ                           ದುಃಖಕ್ಕೆ ಕಾರಣಗಳೇನು? ಅವುಗಳನ್ನು ಹೇಗೆ ನಿವಾರಿಸಬಹುದು?’ ಎಂಬುದರ ಬಗ್ಗೆ ಜೀವಿತದುದ್ದಕ್ಕೂ ಚಿಂತಿಸಿ ಪರಿಹಾರಗಳನ್ನು ಕಂಡುಹಿಡಿದ ಪ್ರತಿಫಲವೇ ಬೌದ್ಧಧರ್ಮ. ಪ್ರಪಂಚಕ್ಕೆ ಪಂಚಶೀಲಗಳನ್ನು ನೀಡಿದ ಮಹಾಪುರುಷ.

ಅಂಧಶ್ರದ್ಧೆ, ಕಂದಾಚಾರಗಳಿಂದ ಕೂಡಿದ ಸಮಾಜಕ್ಕೆ ಅಷ್ಟಾಂಗ ಮಾರ್ಗವನ್ನು ತುಳಿಯಲು ಬುದ್ಧ ಹೇಳಿದ್ದು ಹೀಗೆ:- ಶುದ್ಧವಾದ ದೃಷ್ಟಿಕೋನ, ಆಶೋತ್ತರ, ಮಾತು, ವರ್ತನೆ, ಜೀವನ, ಪ್ರಯತ್ನ, ಆಲೋಚನೆ, ಉದ್ದೇಶ, ಬುದ್ಧ ಯಜ್ಞ, ಯಾಗ, ಕಂದಾಚಾರ ಗಳನ್ನು ವಿರೋಧಿಸಿದ. ಬುದ್ಧನ ಪ್ರಕಾರ ಧರ್ಮವು ಮಾನವನ ಜೀವನ ಸಂಗತಿಗಳಿಗೆ ಸಂಬಂಧಿಸಿರಬೇಕು. ಹೊರತು ದೇವರು ಆತ್ಮ, ಸ್ವರ್ಗ, ನರಕ, ಭೂಮಿ, ಆದಿ, ಅಂತ್ಯ ಅಥವಾ ಇತರೇ ವಾದವಿವಾದಗಳಿಗಲ್ಲ. ಧರ್ಮವು ಸತ್ಯ, ಮೈತ್ರಿ, ಶೀಲ, ಕರುಣೆ ನೈತಿಕತೆಯಿಂದ ಕೂಡಿರಬೇಕು. ಮನುಷ್ಯ ಮತ್ತು ನೀತಿ ಧರ್ಮದ ಕೇಂದ್ರವಾಗಿರಬೇಕು. ಭಗವಾನ್ ಬುದ್ಧನ ಪ್ರಕಾರ ಹುಟ್ಟು ಶ್ರೇಷ್ಠವಲ್ಲ. ಮಾನವ ಮಾನವರಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ. ಒಳ್ಳೆಯ ಕಾರ್ಯ ಮಾಡುವುದರಿಂದ ಎಲ್ಲರೂ ಒಳ್ಳೆಯ ವರಾಗುತ್ತಾರೆ.

ಬುದ್ಧ ಹೇಳಿದ ಪಂಚಶೀಲಗಳನ್ನು ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಪಾಲಿಸುತ್ತಾನೋ ಅವನು ಬುದ್ಧತ್ವವನ್ನು ಪಡೆಯುತ್ತಾನೆ ಮತ್ತು ಸಮಾಜದ ಶಾಂತಿಗೆ ಕಾರಣೀಭೂತ ನಾಗುತ್ತಾನೆ. ಬುದ್ಧ ತನ್ನ ಬಿಕ್ಕು ಸಂಘದಲ್ಲಿ ಸುನೀತನಂತಹ ಅಸ್ಪೃಶ್ಯರನ್ನು ಮತ್ತು ಅಮ್ರಪಾಲಿಯಂತಹ ವೇಶ್ಯೆಯನ್ನು ಸೇರಿಸಿಕೊಂಡು ಅವರಿಗೆ ನ್ಯಾಯವಾಗಿ ದೊರಕಬೇಕಾದ ಮಾನವ ಗೌರವ ಮತ್ತು ಸಮಾನತೆಯನ್ನು ದೊರಕಿಸಿಕೊಟ್ಟ. ಮಹಾಕ್ರೂರಿ ಅಂಗುಲಿಮಾಲ ನನ್ನು ಮನುಷ್ಯನನ್ನಾಗಿಸಿದ ಕಾರ್ಯ ಬುದ್ಧ ಮಾಡಿದ. ಬೌದ್ಧ ಧರ್ಮ ಈ ಮಣ್ಣಿನ ಧರ್ಮ, ಪ್ರೀತಿ ಕರುಣೆ ನೀತಿಯ ಮೇಲೆ ನಿಂತಂತಹ ಧರ್ಮ.