ಅಂದು ಮೆಣಸಿನಹಾಡ್ಯ, ಅನಂತರ ಬರ್ಕಣ, ಮತ್ತೆ ದೇವರಬಾಳು; ನಕ್ಸಲ್ ಚಟುವಟಿಕೆ ಜುಲೈ ೩೦ ರಂದು ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ನೆಲಬಾಂಬ್ ಸ್ಫೋಟನದೊಂದಿಗೆ ಹೊಸ ಆಯಾಮ ಪಡೆದಿದೆ. ಜೂನ್ ೨೩ ರಂದು ಕುಂದಾಪುರ ದೇವರಬಾಳು ನಕ್ಸಲ್ ಎನ್‌ಕೌಂಟರ್ ನಂತರ ಸೇಡಿನ ಸಂಚು ಹೂಡುವ ವಿಚಾರವನ್ನು ಔದಾಸೀನ್ಯದಿಂದ ಪೋಲೀಸರು  ಕಂಡದ್ದು ವಿಪರ್ಯಾಸ. ಆಂಧ್ರಪ್ರದೇಶ ಮತ್ತು ಇನ್ನಿತರ ಪ್ರದೇಶದಿಂದ ಪಶ್ಚಿಮ ಘಟ್ಟದಲ್ಲಿ ಬಿಡಾರ ಹೂಡಿದ ನಕ್ಸಲರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ದೇಶಿ ನಿರ್ಮಿತ ಬಾಂಬ್‌ಗಳು ನಿರೀಕ್ಷಿತವಾಗಿದ್ದ ಪೋಲೀಸರ ವಿವೇಕಕ್ಕೆ ಹೊಳೆಯದಿದ್ದದ್ದು ದುರದೃಷ್ಟಕರ. ಅವರ ತಂತ್ರ ಯಶಸ್ಸು ಕಂಡಿದ್ದರೆ ಬಹುದೊಡ್ಡ ಮಟ್ಟದಲ್ಲಿ ಅನಾಹುತವಾಗುತ್ತಿತ್ತು. ಪೋಲೀಸರು ಪಾರಾದದ್ದು ಅವರ ಜಾಣಾಕ್ಷತನದಿಂದಲ್ಲ ನಕ್ಸಲೀಯರ ಅಜಾಗ್ರತೆಯಿಂದ!. ಪೊಲೀಸರು ಮುಖ್ಯ ರಸ್ತೆಗಳಲ್ಲಿ ಮಾತ್ರ ಸಂಚಾರ ಮಾಡಿದರೆ ನಕ್ಸಲೈಟ್ ಹಾವಳಿ ನಿಲ್ಲಿಸಲು ಸಾಧ್ಯವಿಲ್ಲ. ಕಾಡಿನೊಳಗೆ ಪ್ರವೇಶ ಮಾಡಿ ನಕ್ಸಲೈಟ್ ಜಾಲವನ್ನು ಭೇದಿಸಬೇಕಾಗಿದೆ.

ಕರ್ನಾಟಕ ಮತ್ತು ಪಶ್ಚಿಮ ಘಟ್ಟದ ನಕ್ಸಲೈಟ್ ವಿಚಾರದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ಯಾಕೇಜ್‌ಗಳನ್ನು ಹಿಂದಿನ ಸರ್ಕಾರ ಮತ್ತು ಇಂದಿನ ಸರ್ಕಾರ ಘೋಷಣೆ ಮಾಡುತ್ತಲೇ ಬಂದಿವೆ. ಹಿಂದಿನ ಸರ್ಕಾರ ೬೦ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದರೆ, ಇಂದಿನ ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ರೂ. ೩ ಕೋಟಿ, ಉಡುಪಿ ಜಿಲ್ಲೆಗೆ ರೂ. ೧ ಕೋಟಿ ಘೋಷಣೆ ಮಾಡಿ ಸಂಪುಟ ನಿರ್ಣಯವನ್ನು ನಾಲ್ಕು ತಿಂಗಳ ಹಿಂದೆ ಮಾಡಿದ್ದರೂ, ಇಂದಿನವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಚಿರಂಜೀವಿ ಸಿಂಗ್ ನೇತೃತ್ವದ ಸಮಿತಿ ಆ ಪ್ರದೇಶಕ್ಕೆ ಭೇಟಿಯಾದಾಗ ಸೈಕಲ್ ‘ಪ್ಯಾಕೇಜನ್ನು ಘೋಷಿಸಿದರೂ ಅನುಷ್ಠಾನವಾಗಿಲ್ಲ. ಹಣಕಾಸಿನ ಇಲಾಖೆಯ ದಿವ್ಯನಿರ್ಲಕ್ಷ್ಯ ರಾಜ್ಯದ ಕಾನೂನು ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ.

ಪಾವಗಡ ತಾಲ್ಲೂಕಿನಲ್ಲಿ ೧೯೭೨ ರಿಂದ ೨೦೦೫ರವರೆಗೆ ೧೫೧ ನಕ್ಸಲ್ ಚಟುವಟಿಕೆ ಪ್ರಕರಣಗಳು ದಾಖಲಾಗಿವೆ. ಆ ಭಾಗದಲ್ಲಿರುವ ಮಳೆಯ ಅಭಾವ, ಬೆಳೆಗಳ ನಾಶ, ನಿರುದ್ಯೋಗ, ಕುಡಿಯವ ನೀರಿನ ಅಭಾವ, ಮೂಲಸೌಕರ್ಯದ ಕೊರತೆ, ಜಮೀನ್ದಾರಿ ಪದ್ಧತಿಯ ವ್ಯವಸ್ಥೆ – ಇದರಿಂದ ನಕ್ಸಲೀಯರು ವಿಶೇಷ ಉತ್ತೇಜನ ಪಡೆಯುತ್ತಿದ್ದಾರೆ. ಈ ಲೇಖಕ ೧೯೮೯-೯೦ರಲ್ಲಿ ಯೋಜನಾ ಮಂತ್ರಿಯಾಗಿದ್ದಾಗ ರಾಜ್ಯದ ಗಡಿ ಪ್ರದೇಶದಲ್ಲಿ ತಾಲ್ಲೂಕಿಗೆ ತಲಾ ರೂ. ೨೦ ಲಕ್ಷ ಬಿಡುಗಡೆ ಮಾಡಿ ಗಡಿ ಅಭಿವೃದ್ದಿ ಯೋಜನೆ ಅನುಷ್ಠಾನ ಮಾಡಲಾಗಿತ್ತು. ಅದರಲ್ಲಿಯೂ ಅಂದು ಪ್ರಚಲಿತವಿದ್ದ ನಕ್ಸಲ್ ಪೀಡಿತ  ಪಾವಗಡ, ಚಿಂಚೋಳಿ ಮತ್ತು ರಾಯಚೂರು ತಾಲ್ಲೂಕುಗಳಿಗೆ ಸಾಮಾನ್ಯವಾಗಿ ೯೦ ಲಕ್ಷ ರೂ.ಗಳನ್ನು ವರ್ಷಕ್ಕೆ ಮಂಜೂರು ಮಾಡಿ ಕೃಷಿ ಕಾರ್ಮಿಕರಿಗೆ, ಸಣ್ಣ ರೈತರಿಗೆ ಅದರಲ್ಲೂ ಪರಿಶಿಷ್ಟ ಜನಾಂಗದವರಿಗೆ ಮನೆ, ಜಮೀನು ಮಾತ್ರವಲ್ಲದೆ ಅವರಿಗೆ ಕೃಷಿ ಮಾಡಲು ಬೇಕಾದ ಪಂಪ್‌ಸೆಟ್ ಇತ್ಯಾದಿ ಆರ್ಥಿಕ ಬೆಂಬಲ ನೀಡಲಾಗಿತ್ತು. ಈ ಕ್ರಮದಿಂದಾಗಿ ನಕ್ಸಲೈಟ್ ಚಟುವಟಿಕೆ ದಕ್ಷಿಣ ಕರ್ನಾಟಕಕ್ಕೆ ಆಕರ್ಷಿತವಾಗಲಿಲ್ಲ. ಪ್ಯಾಕೇಜ್ ಬಗ್ಗೆ ಮೇಲಿಂದ ಮೇಲೆ ಘೋಷಣೆ ಮಾಡಿ ಅಧಿಕಾರಿಗಳು ಹಿಂಡುಹಿಂಡಾಗಿ ಆ ಪ್ರದೇಶಕ್ಕೆ ಹೋಗಿದ್ದಾರೆ. ಆದರೆ ಸರ್ಕಾರ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಆ ಪ್ರದೇಶದ ಬಡಜನರು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಜನಪ್ರತಿನಿಧಿಗಳು ಕೂಡ ಇಚ್ಛಾಶಕ್ತಿ ಪ್ರದರ್ಶಿಸಿ ಆ ಪ್ರದೇಶದ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದರ ಜೊತೆಯಲ್ಲಿ ಜನರ ಜತೆಯಲ್ಲಿದ್ದು, ಅವರಲ್ಲಿ ವಿಶ್ವಾಸ ಬೆಳೆಸಬೇಕು. ಅವರ ಸಮಸ್ಯೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ನಕಾರಾತ್ಮಕ ಧೋರಣೆಯಿಂದ ಅವಿಶ್ವಾಸದ ಕಂದರ ಜಾಸ್ತಿಯಾಗುತ್ತದೆ.

ಕುದುರೆಮುಖ ನ್ಯಾಷನಲ್ ಪಾರ್ಕ್‌ನ ಅಧಿಕಾರಿಗಳು ಕೂಡ ಫೇಸ್-೧ ಭೂಸ್ವಾಧೀನ ಮತ್ತು ಪುನರ್‌ವಸತಿಯ ಯೋಜನೆಯನ್ನು ಒಂದೂವರೆ ವರ್ಷದ ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದರು. ಅದರ ಪ್ರಕಾರ ಕುದುರೆಮುಖ ಅಭಯಾರಣ್ಯ ಪ್ರದೇಶಕ್ಕೆ ರೂ. ೩೩.೨೩ ಕೋಟಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಪುನರ್‌ವಸತಿ ಮಾಡಬೇಕಾದ ಕುಟುಂಬದ ಸಂಖ್ಯೆ ೫೦, ಪುನರ್‌ವಸತಿಗೆ ಬೇಕಾದ ಭೂಮಿ ೨೦೦ ಎಕರೆ. ಒಂದು ಹಂತದಲ್ಲಿ ಈ ಕುಟುಂಬಗಳು ಸ್ಥಳಾಂತರ ಹೊಂದಲು ಸಿದ್ಧವಾಗಿದ್ದವು. ಆದರೆ ಸರ್ಕಾರ ಹಣ ಬಿಡುಗಡೆ ಮಾಡದೆ ಯಾವುದೇ ರೀತಿಯಲ್ಲಿ ಕ್ರಿಯಾಶೀಲವಾಗದೇ ಇದ್ದಾಗ ನಕ್ಸಲೈಟ್ ಉಗ್ರಗಾಮಿಗಳು ಜನರ ಮೇಲೆ ಇನ್ನಷ್ಟು ಹಿಡಿತ ಸಾಧಿಸಿದರು.

ಕುದುರೆಮುಖ ಅಭಯಾರಣ್ಯ ಅಂತಿಮ ಘೋಷಣೆ ಮಾಡುವ ಮೊದಲು ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಕಾನೂನು ಪ್ರಕಾರ ಸೂಚನೆ ಕೊಟ್ಟು ಪುನರ್‌ವಸತಿ ಮತ್ತು ಅವರ ಬೇಡಿಕೆಗಳ ಬಗ್ಗೆ ಸ್ಪಂದಿಸುವ ಕಾರ್ಯಕ್ರಮ ನಡೆದಿಲ್ಲವೆಂಬುದನ್ನು ವಿಶೇಷವಾಗಿ ಗುರುತಿಸಬೇಕು. ಈ ವಿಚಾರವನ್ನು ಜೆ.ಹೆಚ್. ಪಟೇಲ್ ಸರ್ಕಾರವಿರುವಾಗ ಈ ಲೇಖಕ ವಿಧಾನಸಭೆಯಲ್ಲಿ ಎತ್ತಿದ್ದರು. ಆದರೆ ರಾಷ್ಟ್ರದ ಶ್ರೇಷ್ಠ ನ್ಯಾಯಾಲಯದಲ್ಲಿ ತಮ್ಮನ್ನು ತಾವು ಉಳಿಸುವ ಆತುರದಲ್ಲಿ ಅಂದಿನ ಮುಖ್ಯಕಾರ್ಯದರ್ಶಿಗಳು ಅಥವಾ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದರು. ನ್ಯಾಯವಾಗಿ ನೀಡಬೇಕಾದ ಅವಕಾಶವನ್ನು ಆ ಪ್ರದೇಶದ ಜನರಿಗೆ ನೀಡದಿದ್ದರೂ ನೀಡಿದ್ದೇವೆಂಬ ತೋರಿಕೆ ಇಂದು ನಡೆಯುತ್ತಿರುವ ಪ್ರಮಾದಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಮರ್ಶೆ ನಡೆದು ಆ ಪ್ರದೇಶದಲ್ಲಿರುವ ಜನರಿಗೆ ಸಲ್ಲಬೇಕಾದ ನ್ಯಾಯದ ಬಗ್ಗೆ ಮರುಪರಿಶೀಲನೆ ನಡೆಯಬೇಕು. ಸ್ವಯಂ ಉದ್ಯೋಗದ ಪರಿಸರವನ್ನು ನಿರ್ಮಿಸಬೇಕು. ಕಾರ್ಯಕ್ರಮಗಳನ್ನು ಜನರ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಬೇಕು.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೂಮಾಲೀಕರು, ಗೇಣಿದಾರರು, ಕೃಷಿಕಾರ್ಮಿಕರ ಮಧ್ಯೆ ವಿಶೇಷ ಕ್ಷೋಭೆ ಸ್ಫೋಟಿಸಿದಾಗ ಅಂದಿನ ಸರ್ಕಾರ ಪ್ರಗತಿಪರ ಭೂಮಸೂದೆಯನ್ನು ಅನುಷ್ಠಾನ ಮಾಡಿದ್ದು, ಗೇಣಿದಾರರ ಮತ್ತು ಕೃಷಿಕಾರ್ಮಿಕರ ಸಮಸ್ಯೆಗಳಿಗೆ ಕ್ಲಪ್ತಕಾಲದಲ್ಲಿ ಸ್ಪಂದಿಸಿ ತಿದ್ದುಪಡಿಯನ್ನು ತಂದದ್ದು ಮಾತ್ರವಲ್ಲ. ಶಾಸಕರು, ಪೊಲೀಸರು ಮತ್ತು ಕಂದಾಯ ಇಲಾಖೆಯವರು ಗೇಣಿದಾರರ, ಕೃಷಿಕಾರ್ಮಿಕರ ಜೊತೆಯಲ್ಲಿ ನಿಂತು ಹೋರಾಟ ಮಾಡಿದ ಕಾರಣ ಯಾವುದೇ ನಕ್ಸಲ್ ಚಟುವಟಿಕೆಗಳು ಆ ಭಾಗದಲ್ಲಿ ತಲೆ ಎತ್ತಲಿಲ್ಲ. ಅಂತಹ ವಿಶ್ವಾಸದ ಭೂಮಿಕೆಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿದಾಗ ಬಹುಶಃ ನಕ್ಸಲೈಟ್ ತಲೆ ಎತ್ತುತ್ತಿರಲಿಲ್ಲ. ಈ ಲೇಖಕ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಸಕ್ರಮ ಕಾನೂನನ್ನು ರಚಿಸಿ ಜಾರಿಗೆ ತಂದು ಕರ್ನಾಟಕದಲ್ಲಿ ಲಕ್ಷಾಂತರ ಜನರಿಗೆ ಭದ್ರತೆಯ ಜೀವನ ನೀಡಿದರು. ಅನೇಕ ಪ್ರಕರಣಗಳು ಬಾಕಿಯಿದ್ದರೂ ಪ್ರಸಕ್ತ ಸರ್ಕಾರದಲ್ಲಿ ಅಕ್ರಮ-ಸಕ್ರಮ ಮನೆ ನಿವೇಶನ ಮತ್ತು ಮನೆ ನೀಡುವ ಕಾರ್ಯಕ್ರಮ ಸ್ಥಗಿತವಾಗಿದೆ. ಅಕ್ರಮ-ಸಕ್ರಮ ಸಮಿತಿ ಪುನರ್‌ರಚನೆಯಾಗದೆ ಗೊಂದಲ, ಅಸ್ಥಿರತೆ ಉಂಟಾಗಿದೆ. ಭೂ ಮಸೂದೆಯ ೭ಎ ಪ್ರಕರಣಗಳನ್ನು ಅಧಿಕಾರಿಗಳಿಗೇ ಬಿಟ್ಟು ಭೂ ಮಸೂದೆಯ ಮೂಲತತ್ವಕ್ಕೆ ತಿಲಾಂಜಲಿಯನ್ನು ನೀಡಲಾಗಿದೆ.

ನಕ್ಸಲ್ ಉಗ್ರಗಾಮಿಗಳ ಚಟುವಟಿಕೆಗಳನ್ನು ಚಿಗುರಿನಲ್ಲಿಯೇ ಚಿವುಟಿ ಹಾಕುವ ಕೆಲಸ ಕರ್ನಾಟಕ ಸರ್ಕಾರ ಈಗಲಾದರೂ ಮಾಡಲು ಕಟಿಬದ್ಧವಾಗಬೇಕು. ಇದೊಂದು ಸಾಧಿಸಲಾಗದ ಕಾರ್ಯವಲ್ಲ. ಮೂರು ಜಿಲ್ಲೆಯಲ್ಲಿ ಒಟ್ಟು ೬೦ ಜನರುಳ್ಳ ಪೊಲೀಸ್ ವಿಶೇಷ ಪಡೆಯಿಂದ ಸರಿಯಾದ ಆಧುನಿಕ ಆಯುಧಗಳಿಲ್ಲದೆ ಏನನ್ನು ಸಾಧಿಸಲಾಗುವುದಿಲ್ಲ. ರಾಷ್ಟ್ರದಲ್ಲಿ ಕರ್ನಾಟಕ ನಕ್ಸಲ್‌ಪೀಡಿತ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಹಂತಕ್ಕೆ ತಲುಪಿಲ್ಲ. ಸರ್ಕಾರ ಈ ಬಗ್ಗೆ ಮೂಕ ಪ್ರೇಕ್ಷಕವಾಗಬಾರದು. ಒಂದು ಕಡೆ ಕಾನೂನು ಸುವ್ಯವಸ್ಥೆ ಮತ್ತೊಂದೆಡೆ ಸಾಮಾಜಿಕ ಮತ್ತು ಆರ್ಥಿಕ ಕ್ರಮಗಳೂ ಪರಿಣಾಮಕಾರಿಯಾಗಿ ಜಾರಿಮಾಡಲು ತೊಡಗಬೇಕು. ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾದುನಿಲ್ಲುವ ಪ್ರವೃತ್ತಿ ನಿಲ್ಲಬೇಕು.