ಸಾಂಸ್ಕೃತಿಕ ಸಂಘರ್ಷ ಇಂದು ಜಾಗತಿಕ ನೆಮ್ಮದಿಯನ್ನು ಕಲಕುತ್ತಿದೆ. ಜಗತ್ತು ತನ್ನ ಸಹಸ್ರಮಾನದ ಅಭಿವೃದ್ದಿ ಗುರಿಗಳನ್ನು ತಲುಪಬೇಕಾದರೆ ಮಾನವತೆಯನ್ನು ತಲ್ಲಣಗೊಳಿಸುವ ಬಡತನ ನಿವಾರಿಸಬೇಕಾದರೆ ಈ ಸಂಘರ್ಷದಿಂದ ಪಾರಾಗಬೇಕಾಗಿದೆ. ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಾಂಡ್ ಟುಟು: “ವೈವಿಧ್ಯ ಮತ್ತು ವ್ಯತ್ಯಾಸಗಳಿಂದ ಹರ್ಷೋತ್ಕರ್ಷವನ್ನು ಪಡೆಯುವ ದಾರಿಯನ್ನು ಹುಡುಕಬೇಕು” ಇವುಗಳನ್ನು ಬರೀ ಶಾಸನ, ಸಂವಿಧಾನಗಳಿಂದ ಪಡೆಯಲಾಗುವುದಿಲ್ಲ. ಮಾನವೀಯ ಹಕ್ಕು ಮತ್ತು ಸರ್ವ ಜನಾಂಗೀಯ ಪ್ರೀತಿಯ ಭದ್ರ ಬುನಾದಿಯ ಮೇಲೆ ಉದಾತ್ತ ಸ್ವಾತಂತ್ರ್ಯದ ಹೊಳಪನ್ನು ಕಾಣದೆ ನೆಮ್ಮದಿ ಸಾಧ್ಯವಿಲ್ಲ.

ಒಂದು ಹೊಸ ರೀತಿಯ ಸಾಂಸ್ಕೃತಿಕ ಸುನಾಮಿ ಇಂದು ಜಾಗತಿಕ ಶಾಂತಿಯನ್ನು ನುಂಗುತ್ತಿದೆ. ಸಾಂಸ್ಕೃತಿಕ ಸ್ವಾತಂತ್ರ್ಯ, ವಿಶ್ವಮಾನವೀಯ ಮೌಲ್ಯಗಳಾದ ಸಹನೆ, ಸಾರ್ವತ್ರಿಕ ಮಾನವೀಯ ಹಕ್ಕುಗಳ ಮೌಲ್ಯ ಪುನರುತ್ಥಾನವಾಗಬೇಕು. ಅಸಹನೆ, ಮತಾಂಧತೆ ನಮ್ಮನ್ನು ಬಾಧಿಸುತ್ತಿರುವ ಮಹಾಪಿಡುಗುಗಳು. ಅಶೋಕ ಚಕ್ರವರ್ತಿಯ ಶಾಸನವೊಂದು: “ಒಳ್ಳೆಯ ಆಡಳಿತವು ಸಮಾಜದ ಮತ್ತು ಪ್ರಭುತ್ವದ ಸಹನೆಯಿಂದ ಫಲಿತವಾಗಿರುತ್ತದೆ” ಎಂದು ಸಾರಿದೆ.

ಕಳೆದ ವಾರ ಪಾಕಿಸ್ತಾನದ ಅಧ್ಯಕ್ಷ ಪರ್ವೆಜ್ ಮುಷರಫ್ ಸಾಂಸ್ಕೃತಿಕ ಸಂಘರ್ಷ ಹರಡುವ ಮದರಸಗಳನ್ನು ನಿಷೇಧ ಮಾಡುವ ಯೋಚನೆ ವ್ಯಕ್ತಪಡಿಸಿದರು. ಈ ಹೇಳಿಕೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರುವ ಒಂದು ಸರ್ವಾಧಿಕಾರಿಯಿಂದ ಬಂದರೂ ಜಾಗತಿಕ ನೆಮ್ಮದಿಯ ದೃಷ್ಟಿಯಿಂದ ಮೌಲಿಕವಾದುದು. ಮತವೇ ಪೆಡಂಬೂತವಾಗಿ ಜನಜೀವನವನ್ನು ಆಕ್ರಮಿಸಿ ಸಂವಿಧಾನೇತರ ಶಕ್ತಿಯಾಗಿ ಅವತಾರವೆತ್ತಿರುವಾಗ ದ್ವೇಷವನ್ನು ಗೆದ್ದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮಹಾಕಾರ್ಯವಾಗಬೇಕಾಗಿದೆ. ನಮ್ಮ ದೇಶದಲ್ಲಿಯೂ ಬೇರೆ ಬೇರೆ ಮತ ಮತ್ತು ಜಾತಿಯ ಹೆಸರಿನಲ್ಲಿ ಅಸಹನೆ ಮತ್ತು ದ್ವೇಷ ಗಳನ್ನು ಹರಡಲಿರುವ ವ್ಯಕ್ತಿ ಮತ್ತು ಸಂಸ್ಥೆಗಳ ವಿಚಾರದಲ್ಲಿ ವಿಶೇಷ ಜಾಗ್ರತೆ ವಹಿಸ ಬೇಕಾಗಿದೆ. ಪ್ಯಾಲೆಸ್ತೇನಿಯನ್ ಹಾಮಾಸ್‌ನ್ನು ಇಸ್ಲಾಂ ಆತಂಕವಾದವೆಂದು ಅನಿಲಬಾಂಬ್ ದಾಳಿಯನ್ನು ಯಹೂದಿ ಭಯೋತ್ಪಾದನೆ ಎಂದು ಹೆಸರಿಸುವ ಪ್ರವೃತ್ತಿ ಇಂದು ಜಾಸ್ತಿಯಾಗಿದೆ. ಈ ರೀತಿಯಲ್ಲಿ ಯಾವುದೇ ಕೆಲವು ಗುಂಪು ಅಥವಾ ವ್ಯಕ್ತಿಗಳ ಭಯೋತ್ಪಾದನೆಗೆ ಸಮುದಾಯವನ್ನೇ ಜವಾಬ್ದಾರಿ ಮಾಡುವ ಸೇಡಿನ ದಾವಾಗ್ನಿ ಜಗತ್ತನ್ನು ಆವರಿಸಿದೆ. ಇಸ್ಲಾಂ ಬಾಂಬ್, ಹಿಂದೂ ಬಾಂಬ್, ಕ್ರಿಶ್ಚಿಯನ್ ಬಾಂಬ್, ಯಹೂದಿ ಬಾಂಬ್, ಬೌದ್ಧ ಬಾಂಬ್, ಸಿಖ್ ಬಾಂಬ್, ತಮಿಳ್ ಬಾಂಬ್ ಎಂದು ಹೆಸರಿಡುವ  ಅಪಾಯಕಾರಿ ಪರಂಪರೆ ನಿಂತಾಗ ದುಶ್ಶಕ್ತಿಗಳನ್ನು ಗುರುತಿಸಿ ದಮನಿಸಬಹುದು. ಇಲ್ಲದಿದ್ದರೆ ಸುಮುದಾಯಗಳನ್ನು ಕೆರಳಿಸುವ ಸೇಡಿನ ಸುನಾಮಿ ರಕ್ತ ಬೀಜಾಸುರನಂತೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಪ್ರಚಂಡ ಸುಳಿಯನ್ನೇ ಎಬ್ಬಿಸುತ್ತದೆ. ಬಹುಶಃ ಆಫಘಾನ್‌ನ ತಾಲೀಬಾನ್ ಮತೀಯ ಉಗ್ರಗಾಮಿಗಳಿಂದ ಪ್ರಾರಂಭವಾಗಿ ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರನ್ನು ಸ್ಫೋಟಿಸಿ ಅಮೇರಿಕದ ಇರಾಕ್ ಧಾಳಿಯಲ್ಲಿ ತನ್ನ ಉಗ್ರಾವತಾರದ ನೃತ್ಯವನ್ನು ಮಾಡುತ್ತಿ ರುವ ಆತಂಕಕ್ಕೆ ಕೊನೆಯಿಲ್ಲದಾಗುತ್ತದೆ.

ಇಸ್ಲಾಂ ಶಬ್ದ ‘ಸಲಾಂ’ ಎಂಬ ಶಾಂತಿಯ ಮೂಲಬೀಜದಿಂದ ಹುಟ್ಟಿದೆ. ಇಸ್ಲಾಂ ಎಲ್ಲಾ ರೀತಿಯ ಹಿಂಸೆ ಮತ್ತು ಆಕ್ರಮಣಶಾಲಿ ಪ್ರವೃತ್ತಿಯನ್ನು ನಿಷೇಧಿಸುತ್ತದೆ. ಪವಿತ್ರ ಕುರಾನ್ ‘ನಿನ್ನ ಕೈಯಲ್ಲಿ ನನ್ನನ್ನು ದಮನ ಮಾಡಲು ಉಪಕ್ರಮಿಸಿದರೆ ನನ್ನ ಕೈಯನ್ನು ಬಾಚಿ ನಿನ್ನನ್ನು ದಮನಿಸುವುದಿಲ್ಲ. ಯಾಕೆಂದರೆ ನನಗೆ ಅಲ್ಲಾಹುವಿನ ಭಯವಿದೆ. ಯಾಕೆಂದರೆ ಅವನು ಶಾಂತಿ ಪ್ರವಾದಿ’ ಪವಿತ್ರ ಖುರಾನ್ ಹಿಂಸೆಯನ್ನು ಪ್ರತಿಬಂಧಿಸುತ್ತದೆ. “ಒಬ್ಬ ಅಮಾಯಕನನ್ನು ಕೊಲ್ಲುವುದೆಂದರೆ ಮಾನವೀಯತೆಯನ್ನೇ ಕೊಂದ ಹಾಗೆ: ಒಬ್ಬ ಅಮಾಯಕನನ್ನು ಉಳಿಸುವುದೆಂದರೆ ಮಾನವ ಕುಲವನ್ನೇ ಉಳಿಸಿದಂತೆ” ವಿಶ್ವದ ಎಲ್ಲಾ ಧರ್ಮದಲ್ಲೂ ಈ ರೀತಿಯ ಶಾಂತಿಯ ಮೂಲಮಂತ್ರವಿದೆ. ಆದರೆ ಪ್ರತಿ ಸಮುದಾಯ ದಲ್ಲೂ ಮತದ ಸಿದ್ಧಾಂತವನ್ನು ತಿರುಚಿ ಹಿಂಸೆಗೆ ಪ್ರಚೋದಿಸುವ ಪಂಗಡವೂ ಇದೆ.

ವಿಚಾರಹೀನ ಹಿಂಸೆ ಯಾವ ಮತೀಯರ ನೆಪದಿಂದ ಬಂದರೂ ಅದೊಂದು ಧರ್ಮ ವಿರೋಧಿ ಪ್ರವೃತ್ತಿಯೆಂದು ಸಾರಬೇಕು. ಅದನ್ನು ಬಿಟ್ಟು ನ್ಯೂಯಾರ್ಕ್, ಲಂಡನ್ ಬಗ್ದಾದ್‌ನಲ್ಲಿ ಅಥವಾ ಅಯೋಧ್ಯೆಯಲ್ಲಿ ನಡೆಯುವ ಧಾಳಿಗೆ ಇಸ್ಲಾಂ ಬಾಂಬ್ ಎಂದು ಐರಿಷ್ ರಿಪಬ್ಲಿಕ್‌ನವರು ಮಾಡಿದ ಧಾಳಿಗೆ ಕೆಥೋಲಿಕ್ ಭಯೋತ್ಪಾದನೆ ಎಂದು ಅಮ್ ಸಿನರಿಕ್ ಮೇಲೆ ಆದ ಅನಿಲ ಧಾಳಿಯನ್ನು ಬುದ್ದಿಶ್ ಬಾಂಬ್ ಎಂದು, ಗುಜರಾತಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಧಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಕರೆದು ದ್ವೇಷ ಹರಡುವ ಪ್ರವೃತ್ತಿ ನಿಲ್ಲಿಸಬೇಕು. ೧೮೫೭ರಲ್ಲಿ ನಡೆದ (ಬ್ರಿಟಿಷರು ಹೆಸರಿಸಿದ ಸಿಪಾಯಿದಂಗೆ) ಪ್ರಥಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುಖ್ಯ ಘಟನೆ: ಮೇಲ್ವರ್ಗಕ್ಕೆ ಸೇರಿದ ಹಿಂದೂ ಸೈನಿಕನೊಬ್ಬ ಕಲ್ಕತ್ತದ ಹತ್ತಿರ ಹಳ್ಳಿಯೊಂದರಲ್ಲಿ ತನ್ನ ಶಿಬಿರಕ್ಕೆ ಕುಡಿಯಲು ನೀರನ್ನು ಕೊಂಡೊಯ್ಯುತ್ತಿರುವಾಗ ಇಸ್ಲಾಂಗೆ ಸೇರಿದ ಸೈನಿಕನೊಬ್ಬ ಬಾಯಾರಿಕೆಯಿಂದ ಅಂಗಲಾಚಿದಾಗ ಈ ನೀರು ನಮ್ಮವರಿಗೆ ಬೇಕು. ನಿನಗೆ ನೀಡಿ ಮಲಿನಗೊಳಿಸಲಾಗದೆಂದು ಹೇಳಿದ. ಆಗ ಇಸ್ಲಾಂಗೆ ಸೇರಿದ ಸೈನಿಕನೊಬ್ಬ ಬ್ರಿಟಿಷರು ನಿನಗಿತ್ತ ಗುಂಡಿನ ಉಪಯೋಗ ಮಾಡುವಾಗ ಕಾಟ್ರಿಜಸ್‌ಗೆ ಹಂದಿಯ ಕೊಬ್ಬಿನ ಲೇಪ ಹಚ್ಚಿ ಪ್ರಯೋಗಿಸಬೇಕಾಗಿದೆ ಎಂದ. ತಕ್ಷಣ ಮತ್ತೋರ್ವ “ನಿನಗೆ ನೀಡಿದ ಗುಂಡನ್ನು ದನದ ಕೊಬ್ಬಿನ ಲೇಪ ಹಚ್ಚಿ ಪ್ರಯೋಗ ಮಾಡಬೇಕಾಗುತ್ತದೆ” ಎಂದ. ಆಗ ಎರಡು ಪಂಗಡದಲ್ಲೂ ವಿವೇಕೋದಯವಾಗಿ ‘ಮತೀಯವಾಗಿ ವಿಂಗಡಿಸಿ ಪರಸ್ಪರ ಮನಃಕ್ಲೇಷವನ್ನು ಹುಟ್ಟಿಸುತ್ತಿರುವ ಬ್ರಿಟಿಷರ ವಿರುದ್ಧ ನಾವು ದಂಗೆ ಏಳಬೇಕೆಂದು’ ಸೆಟೆದು ನಿಂತರು. ಅದೇ ದನ, ಅದೇ ಹಂದಿ ಅವರನ್ನು ಒಟ್ಟುಗೂಡಿಸಿದರೆ ಇಂದು ಸಾವಿರಾರು ಮತೀಯ ದಂಗೆಗಳು ಹಂದಿ ಮತ್ತು ದನಗಳ ನೆಪದಲ್ಲಿ ಹರಡುತ್ತಿವೆ. ಅಂದರೆ ೧೬೦ ವರ್ಷಗಳಾದರೂ ನಮ್ಮಲ್ಲಿ ಸಹಬಾಳ್ವೆ, ಸಹನೆ ಭಾರತೀಯತ್ವದ ಸದ್ಭಾವನೆಗಳು ಬೆಳೆಯದೆ ನಾವು ಮೌಲಿಕವಾಗಿ ಮತ್ತಷ್ಟು ಕುಬ್ಜ ರಾಗುತ್ತಿದ್ದೇವೆ. ನಿಜವಾದ ಧರ್ಮನಿಷ್ಠೆ, ಮತನಿಷ್ಠೆಯುಳ್ಳ ವ್ಯಕ್ತಿಗಳು ಶಾಂತಿ, ಸಹಬಾಳ್ವೆ ಯನ್ನು ಬಯಸುತ್ತಾರೆಯೇ ಹೊರತು ಹಿಂಸೆಯನ್ನಲ್ಲ. ಅಂತಾರಾಷ್ಟ್ರೀಯ ಸಂಸ್ಥೆಯ ಘೋಷಣೆಯ ಪ್ರಕಾರ ‘ಸಮರ ಮನಸ್ಸಿನಲ್ಲಿ ಮೊದಲು ನಡೆಯುತ್ತದೆ. ಅನಂತರ ಸಮುದಾಯ ಸಮುದಾಯದ ಮಧ್ಯೆ ಸ್ಫೋಟಗೊಳ್ಳುತ್ತದೆ’.

ಆದುದರಿಂದ ನಮ್ಮ ಮನಸ್ಸನ್ನು ಅಧರ್ಮ, ಮೌಢ್ಯ ಮತ್ತು ಭ್ರಮೆಗಳಿಂದ ಮಲೀನ ಗೊಳಿಸದೆ ವಿಶ್ವ ಭ್ರಾತೃತ್ವ ಭಾವನೆ ಬೆಳೆಸುವಂತೆ ಅಣಿಗೊಳಿಸಬೇಕು. ಸರ್ವಧರ್ಮಗಳು ಮಾನವನ ಆಯ್ಕೆಯ ಹೆದ್ದಾರಿಯನ್ನು ತೆರೆದುಕೊಡುತ್ತವೆ. ಆದರೆ ಈಗ ಕಂಡುಬರುವ ಮತ ಸಿದ್ಧಾಂತದ ತಪ್ಪು ವ್ಯಾಖ್ಯಾನ. ಫತ್ವಾ ಮತ್ತು ನಿಷೇಧದಂತಹ ನಕಾರಾತ್ಮಕ ಪ್ರತಿಗಾಮೀ ಧೋರಣೆಗಳು ಮಾನವೀಯ ಹಕ್ಕುಗಳನ್ನೇ ನಿರಾಕರಣೆ ಮಾಡುತ್ತಿವೆ. ಇಂತಹ ಅಸಂವಿಧಾನಿಕ ಮತ್ತು ಕಾನೂನುಬಾಹಿರ ಮತೀಯ ಪ್ರಬಂಧಕಗಳು ಧರ್ಮ ವಿರೋಧೀ ಪ್ರವೃತ್ತಿಗಳಾಗಿವೆ. ಧಾರ್ಮಿಕವೆನ್ನುವ ಪೈಶಾಚಿಕ ಆಚರಣೆಗಳನ್ನು ನಿರಾಕರಿಸುವ ವಿರೋಧಿ ಆಯಾಯ ಮತದ ಆಂತರಿಕ ಶಕ್ತಿಯಾದಾಗ ಮಾತ್ರ ಧರ್ಮ ಮಾನವ ಕಲ್ಯಾಣದ ದಾರಿದೀಪವಾಗುತ್ತದೆ. ಇದು ನಮ್ಮ ಜಾಗತಿಕ ಸಮಷ್ಟಿ ಬಾಳ್ವೆಯ ಅನಿವಾರ‍್ಯತೆ!