ಅಸಾಧಾರಣ ವ್ಯಕ್ತಿಗಳು ಸಾಮಾನ್ಯವಾಗಿ ಕಷ್ಟ-ಕೋಟಲೆಗಳ ಮಡುವಿನಲ್ಲಿಯೇ ಜೀವಿಸಬೇಕಾಗುತ್ತದೆ. ಆದರೆ, ಇಂತಹವರು ಅವುಗಳನ್ನೇ ತಮ್ಮ ಸಾಧನೆಗಳ ಸೋಪಾನ ವನ್ನಾಗಿಸಿಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳ ಯಶಸ್ಸಿಗೆ ಎರಡು ಸಂಗತಿಗಳು ಕಾರಣವಾಗುತ್ತವೆ: ಉನ್ನತ ಧೀಃಶಕ್ತಿ ಮತ್ತು ಪರಿಶುದ್ಧ ಚಾರಿತ್ರ್ಯ. ಮೊದಲನೆಯದು ಅವರಿಗೆ ಜ್ಞಾನ, ವ್ಯಾವಹಾರಿಕ ಪ್ರಜ್ಞೆ, ಕೌಶಲ್ಯ ಮತ್ತು ಸೂಕ್ಷ್ಮಗ್ರಾಹಿತ್ವಗಳನ್ನು ಕೊಟ್ಟರೆ, ಎರಡನೆಯದು ಸತ್ಯ, ಸೌಂದರ್ಯ, ನ್ಯಾಯ, ಪ್ರೀತಿ ಮತ್ತು ಸೃಜನಶೀಲತೆ – ಈ ಗುಣಗಳನ್ನು ನೀಡುತ್ತದೆ. ಅವರು ಈ ಗುಣಗಳನ್ನೇ ಆಯುಧಗಳನ್ನಾಗಿಸಿಕೊಂಡು ಬದುಕಿನ ಯುದ್ಧದಲ್ಲಿ ಹೋರಾಡುತ್ತಾರೆ.

ರಾಜಕೀಯವೆಂಬುದು ಪಂದ್ಯವನ್ನು ಗೆಲ್ಲುವ ಒಂದು ಕಲೆ ಮತ್ತು ಆ ಗೆಲುವಿಗೆ ಅವಶ್ಯಕವಿರುವ ಗುಣಗಳೆಂದರೆ ರಚನಾತ್ಮಕ ದೂರದೃಷ್ಟಿ, ನೈತಿಕ ಸ್ಥೈರ್ಯ, ಸತತ ಪರಿಶ್ರಮ, ಅಚಲ ನಿರ್ಧಾರ ಮತ್ತು ಎಲ್ಲಾ ಬಗೆಯ ನೋವನ್ನೂ ನುಂಗುವ ಅಗಾಧ ಸಹನಾ ಶಕ್ತಿ.

ನಿಜವಾಗಿಯೂ ಉತ್ಸಾಹವೆಂಬುದು ಒಂದು ಪ್ರಬಲ ಪ್ರೇರಕ ಶಕ್ತಿಯೇ ಅಹುದು; ಅದು ವ್ಯಕ್ತಿಯಲ್ಲಿ ಧೈರ್ಯವನ್ನು ಸೃಷ್ಟಿಸುತ್ತದೆ; ರಾಜಕೀಯವೂ ಒಂದು ಬಗೆಯ ಆಟ ಮತ್ತು ಆ ಆಟ ಬಹುಬೇಗ ಮುಗಿದು ಹೋಗುತ್ತದೆ. ಆದರೆ ಶ್ರೇಷ್ಠ ಜ್ಞಾನಾಕಾಂಕ್ಷೆಯಾದರೋ ಅಜರಾಮರವಾಗಿರುತ್ತದೆ. ಜ್ಞಾನವು ಮಾನವನನ್ನು ದೈವತ್ತಕ್ಕೇರಿಸುತ್ತದೆ. ಕಾರಣ ಜ್ಞಾನವೆಂದರೆ ಬೆಳಕು; ಜ್ಞಾನವೆಂದರೆ ಜೀವನ; ಜ್ಞಾನವೆಂದರೆ ಅಧಿಕಾರ ಮತ್ತು ಜ್ಞಾನವೆಂದರೆ ದೇವರು. ಇಡೀ ಬದುಕಿನ ಪ್ರಬಲಾಕಾಂಕ್ಷೆಯೆಂದರೆ ಜ್ಞಾನಾಕಾಂಕ್ಷೆ.

ಸದಾ ಪಾಲಿಸಬೇಕಾದ ಸೂತ್ರವೆಂದರೆ ‘ಒಳ್ಳೆಯ ಬದುಕನ್ನು ಬಾಳು, ಇತರರಿಗೆ ಒಳಿತನ್ನೇ ಮಾಡು’ ಎಂಬುದು. ನಾವು ಅತ್ಯಂತ ಗೌರವಿಸಬೇಕಾದ ತತ್ವಗಳೆಂದರೆ : ಕಾರ್ಯತತ್ಪರತೆ ಮತ್ತು ಪ್ರಾಮಾಣಿಕತೆ; ಪ್ರೀತಿ ಮತ್ತು ಔದಾರ್ಯ; ಸತ್ಯ ಮತ್ತು ನ್ಯಾಯ; ಜ್ಞಾನ ಮತ್ತು ಸ್ವಾತಂತ್ರ್ಯ ಹಾಗೂ ಶಾಂತಿ ಮತ್ತು ಅಭಿವೃದ್ದಿ.

‘ಭಾರತದಲ್ಲಿ ಜನಸಾಮಾನ್ಯರು ಮೇಲ್ವರ್ಗಗಳು ನಿರ್ಮಿಸಿರುವ ಶೋಷಣಾ ಚಕ್ರದಲ್ಲಿ ಅಸಹಾಯಕರಾಗಿ ಸಿಕ್ಕಿಬಿದ್ದಿದ್ದಾರೆ’ ಎಂಬುದು ಸ್ವಾಮಿ ವಿವೇಕಾನಂದರ ನುಡಿ. ನಮಗೀಗ ಬೇಕಾಗಿರುವುದು ಜಾಣ್ಮೆಗಿಂತ ಹೆಚ್ಚಾಗಿ ಅಂತಃಕರಣ, ಭಾವೋದ್ರೇಕಕ್ಕಿಂತ ಹೆಚ್ಚಾಗಿ ಕರುಣೆ; ಸಂಪತ್ತಿಗಿಂತ ಹೆಚ್ಚಾಗಿ ಜ್ಞಾನ; ಭೋಗಸಾಮಗ್ರಿಗಳಿಗಿಂತ ಹೆಚ್ಚಾಗಿ ನಂಬಿಕೆ ಮತ್ತು ಸಮರ ಸಂಘರ್ಷಕ್ಕಿಂತ ಹೆಚ್ಚಾಗಿ ಮಾನವೀಯತೆ.

ಎಲ್ಲಾ ಭಾರತೀಯರಲ್ಲಿ ಆತ್ಮಾವಲೋಕನವನ್ನು ಪ್ರಚೋದಿಸುವ ಎಲ್ಲ ಸಂದೇಶಗಳೂ ಸ್ವಾಮೀಜಿಯವರದಲ್ಲಿದ್ದವು. ‘ವೇದಾಂತದ ತವರೂರಾದ ಈ ನಮ್ಮ ದೇಶದಲ್ಲಿ ಯುಗ ಯುಗಗಳಿಂದ ಜನಸಾಮಾನ್ಯರನ್ನು ಸಮ್ಮೋಹನಗೊಳಿಸಲಾಗಿದೆ. ಅವರನ್ನು ಮುಟ್ಟುವುದೇ ಮಾಲಿನ್ಯ! ನಿರಾಶಾಮಯರಾಗಿ ಜನಸಿದ ಅವರು ನಿರಾಶಾಮಯರಾಗಿಯೇ ಉಳಿಯುತ್ತಾರೆ!’

ಕೆಳವರ್ಗದ ಜನತೆ ನಿಧಾನವಾಗಿ ಜಾಗೃತರಾಗುತ್ತಿದ್ದಾರೆ ಮತ್ತು ತಮ್ಮ ನ್ಯಾಯಯುತ ಹಕ್ಕುಗಳ ಹೋರಾಟಕ್ಕಾಗಿ ಸಂಘಟಿತರಾಗುತ್ತಿದ್ದಾರೆ. ಮೊದಲಿಗೆ ಯುರೋಪ್ ಮತ್ತು ಅಮೆರಿಕಾದ ಸಮುದಾಯದ ಜನ ಇಂತಹ ಜಾಗೃತಿ ಸಾಧಿಸಿ, ಈಗಾಗಲೇ ಹೋರಾಟ ಆರಂಭಿಸಿದ್ದಾರೆ. ಕೆಳವರ್ಗದವರು ನಡೆಸುತ್ತಿರುವ ಕೆಲವು ಹೋರಾಟಗಳು ಭಾರತದಲ್ಲಿಯೂ ಈ ರೀತಿಯ ಜಾಗೃತಿ ಉಂಟಾಗಿರುವುದಕ್ಕೆ ನಿದರ್ಶನವಾಗಿದೆ. ಏನೆಲ್ಲಾ, ಎಷ್ಟೆಲ್ಲಾ ಪ್ರಯತ್ನ ಮಾಡಿದರೂ, ಮೇಲ್ವರ್ಗದವರು ಇನ್ನು ಮುಂದೆ ಕೆಳವರ್ಗದವರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಮೇಲ್ವರ್ಗದ ಹಿತಾಸಕ್ತಿ ಇನ್ನು ಮುಂದೆ ಕೆಳವರ್ಗದವರ ನ್ಯಾಯಬದ್ಧ ಹಕ್ಕುಗಳನ್ನು ಒದಗಿಸಲು ಸಹಕರಿಸುವುದರಲ್ಲೇ ಉಳಿಯುತ್ತದೆ. ಇದು ಇಪ್ಪತ್ತನೆಯ ಶತಮಾನದಲ್ಲಿ ಭಾರತದ ಗುರಿ ಆದರೂ ಇದು ನೂತನ ಸಹಸ್ರಮಾನದ ಆರಂಭಕ್ಕೂ ಅನ್ವಯವಾಗುತ್ತಿದೆ.

ವಿಧಿಯೆಂದು ಭಯಭೀತರಾಗುತ್ತಿರುವ ಕಾಲದಲ್ಲಿ ಯೋಗ ವಾಸಿಷ್ಠದಲ್ಲಿ ವಸಿಷ್ಠರು ಶ್ರೀರಾಮನಿಗೆ ಹೇಳಿದ ಮಾತುಗಳು ಅತ್ಯಂತ ಪ್ರಸ್ತುತ :

“ವಿಧಿಯೆಂಬುದು ಮೂರ್ಖರ ಸೃಷ್ಟಿ ಮತ್ತು ಅಂತಹವರು ಅಪಾರ ಹಾನಿಗೊಳ ಗಾಗುತ್ತಾರೆ. ಜ್ಞಾನಿಗಳಾದರೋ ಸ್ವಪೌರುಷದಿಂದ ಸಾಧನೆಯ ಅತ್ಯುನ್ನತ ಶಿಖರವನ್ನೇ ರುತ್ತಾರೆ.” ಹಾಗಿದ್ದರೂ ತಮ್ಮ ಜೀವಮಾನವನ್ನೇ, ಅನಂತರ ರಾಷ್ಟ್ರಜೀವನ್ನೇ ಅವೈಜ್ಞಾನಿಕ ತಂತ್ರ ಮಂತ್ರಗಳಿಂದ ಅಸ್ಥಿರಗೊಳಿಸುವ ಪ್ರವೃತ್ತಿಯ ರಾಜಕೀಯ ಮತ್ತು ಇನ್ನಿತರ ಉನ್ನತ ಸ್ತರಗಳಲ್ಲಿರುವ ಜನರು ಕಡಿಮೆಯಾಗಿಲ್ಲ.

ಎರಡು ಸಹಸ್ರ ವರ್ಷಗಳ ಹಿಂದೆ ಯೇಸುಸ್ವಾಮಿಯವರು ಭಯರಹಿತ ಬದುಕಿನ ಗುಟ್ಟನ್ನು ಅನಾವರಣಗೊಳಿಸುತ್ತಾ ‘ಪರಿಪೂರ್ಣವಾದ ಪ್ರೀತಿಯು ಭಯವನ್ನು ನಿವಾರಿ ಸುತ್ತದೆ’ ಎಂಬ ಸಂದೇಶ ಸಾರಿದ್ದರು. ಶ್ರೀಮಂತರಿಗೆ ಅಗತ್ಯಕ್ಕಿಂತ ಹೆಚ್ಚು ಲಭ್ಯವಿದೆ; ಆದರೆ ಬಡವ ಬದುಕಿನಾದ್ಯಂತ ಹಸಿದಿರುತ್ತಾನೆ. ಆಹಾರಕ್ಕಾಗಿ ಅರಸುತ್ತಿರುತ್ತಾನೆ. ಅಸ್ತಿತ್ವಕ್ಕಾಗಿ ಹೋರಾಡುತ್ತಿರುತ್ತಾನೆ. ಯಾವುದೂ ಇಲ್ಲದ ವ್ಯಕ್ತಿಯು ತನ್ನ ಜೀವನವನ್ನು ಶ್ರೀಮಂತ ಮತ್ತು ಸೃಷ್ಟಿಶೀಲಗೊಳಿಸಬಹುದು. ಇದೇ ವೇಳೆ ಜಗತ್ತಿನ ಎಲ್ಲಾ ವಸ್ತುಗಳನ್ನು ಹೊಂದಿರುವ ವ್ಯಕ್ತಿ ಅದನ್ನು ಕಳೆದುಕೊಳ್ಳಲೂ ಬಹುದು ಮತ್ತು ನಷ್ಟ ಮಾಡಿಕೊಳ್ಳಬಹುದು.

ಪ್ರಧಾನಮಂತ್ರಿ ನೆಹರೂ ಅವರು ಹೇಳಿದ್ದರು : “ನಮ್ಮ ಜೀವಿತದ ಕಿರು ಅವಧಿಯಲ್ಲಿ ಒಂದೆಡೆ ರಚನಾತ್ಮಕ ಮತ್ತು ಸೃಷ್ಟಿಶೀಲ ಪ್ರಯತ್ನ, ಇನ್ನೊಂದೆಡೆ ವಿನಾಶಕಾರೀ ಎಂಬ ಎರಡು ಶಕ್ತಿಗಳು ಭಾರತದಲ್ಲಿ ಮತ್ತು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವುದನ್ನು ಗಮನಿಸಿದ್ದೇನೆ. ಕೊನೆಯಲ್ಲಿ ಯಾವುದು ಗೆಲವು ಸಾಧಿಸುತ್ತದೆ? ಮತ್ತು ನಾವು ಯಾವೆಡೆ ನಿಂತಿದ್ದೇವೆ? ನಮ್ಮೆಲ್ಲರಿಗೂ ಮತ್ತು ರಾಷ್ಟ್ರದ ನಾಯಕರಾಗಿ ಆಯ್ಕೆಯಾಗುವ, ಭವಿಷ್ಯದ ಹೊರೆಗಳನ್ನು ನಿಭಾಯಿಸುವವರಿಗೆ ವಿಶೇಷವಾಗಿ ಇದು ಪ್ರಬಲ ಪ್ರಶ್ನೆಯಾಗಿದೆ. ಭಾರತದಲ್ಲೇಕೆ ನಾಯಕರು ಅಧಿಕಾರರಹಿತರಂತೆ ಕಾಣಿಸುತ್ತಾರೆ? ಎಂಬ ಪ್ರಶ್ನೆ ಅನೇಕ ಬಾರಿ ನಮ್ಮನ್ನು ಚಿಂತಿಸುವಂತೆ ಮಾಡಿದೆ. ಘಟನೆಗಳು ಅವರನ್ನು ಮೂಲೆಗುಂಪಾಗಿಸುತ್ತಿದೆ. ಕ್ಷಿಪ್ರವಾಗಿ ಶಿಥಿಲವಾಗುತ್ತಿ ರುವಾಗ ನಿರಾಸೆ ಹೆಚ್ಚುತ್ತದೆ. ಭಾರತದ ಮುಂದೆ ಎರಡು ದಾರಿಗಳಿವೆ. ಜಗತ್ತಿನಲ್ಲಿ ಯಾವುದೇ ಮಹತ್ವವಿಲ್ಲದ ದೇಶವಾಗುವುದು ಅಥವಾ ಈ ಶಿಥಿಲೀಕರಣದ ಬೇರನ್ನೇ ಕಿತ್ತು ಪ್ರತೀ ವ್ಯಕ್ತಿಯು ತನ್ನ ಜವಾಬ್ದಾರಿಗಳ ಬಗ್ಗೆ ಜಾಗೃತನಾಗಿ ಈ ಪ್ರವಾಹದಲ್ಲಿ ಕೊಚ್ಚಿ ಹೋಗುವುದರ ವಿರುದ್ಧ ಸೆಟೆದು ನಿಲ್ಲುವುದು. ಆಗ ಈವರೆಗೆ ಕಾಣದಂತಹ ಸ್ವರೂಪದ ಹೊಸ ಸಮಾಜ ವೊಂದು ಉದಯಿಸುತ್ತದೆ”.

ನಮ್ಮ ಮನಸ್ಸು ಭದ್ರತೆಯ ಪುಟ್ಟ ಕೋಟೆಗಳನ್ನು ಕಟ್ಟಿಕೊಂಡಿರುತ್ತದೆ. ಎಲ್ಲಾ ವಿಚಾರಗಳು, ನಮ್ಮ ಸಂಬಂಧಗಳು, ಸಂತೃಪ್ತಿಗಳು, ನಿರೀಕ್ಷೆಗಳು ಹಾಗೂ ನಮ್ಮ ಭವಿಷ್ಯ ಗಳೆಲ್ಲದರ ಬಗ್ಗೆ ನಾವು ಖಚಿತಪಡಿಸಿಕೊಳ್ಳಬಯಸುತ್ತೇನೆ. ಇದಕ್ಕೆ ಧಕ್ಕೆಯಾಗದಂತೆ ನಾವು ಈ ಆಂತರಿಕ ಸೆರೆಮನೆಗಳನ್ನು ಕಟ್ಟಿಕೊಳ್ಳುತ್ತೇವೆ. ಯಾವುದೇ ಸಂಘರ್ಷ, ಯಾವುದೇ ಅಡ್ಡಿ ಆತಂಕಗಳಿಲ್ಲದ ವಲಯವೊಂದನ್ನು ಮನಸ್ಸು ಹಂಬಲಿಸುತ್ತಿರುವುದು ಆಶ್ಚರ್ಯ ಕರವಾಗಿದೆ.

ಪ್ರಕೃತಿ ನಮ್ಮ ಹುಟ್ಟಿನೊಡನೆ ಸಿದ್ಧವಾಗಿ ಬರುತ್ತದೆ. ಸಂಸ್ಕೃತಿ ನಮ್ಮ ದುಡಿಮೆಯಿಂದ ಮಾತ್ರ ಸಿದ್ಧವಾಗಿ ಬರುತ್ತದೆ. ರಾಜದಂಡ ಜೊತೆಯಲ್ಲಿ ಪೌರೋಹಿತ್ಯ ದಂಡವು ನಮ್ಮ ಸಮಾಜವನ್ನು ತನ್ನ ಭದ್ರಮುಷ್ಠಿಯಲ್ಲಿ ಇರಿಸಿಕೊಂಡಿದೆ. ಇದೇ ಭಾರತವನ್ನು ಪೀಡಿಸುತ್ತಿರುವ ಭಯ ಆತಂಕಗಳ ಮಹಾ ಪಿಡುಗು. ಈ ದಂಡ ಭಯಗಳಿಂದ ನಾವು ವಿಮೋಚನೆಯಾಗುವುದು ಅನಿವಾರ್ಯ. ಆಗ ಮಾತ್ರ ಸ್ವಾತಂತ್ರ್ಯದ ಗರಿಬಿಚ್ಚಿ ನಿರ್ಭಯವಾಗಿ ಹಾರಾಡಬಲ್ಲೆವು.

ಸ್ವಾಮಿ ವಿವೇಕಾನಂದರೆಂದಂತೆ : “ಜನಸಾಮಾನ್ಯರನ್ನು ಕಡೆಗಣಿಸಿದ್ದೇ ರಾಷ್ಟ್ರದ ಒಂದು ಮಹಾಪರಾಧ. ಮಹಾಪಾಪ. ನಮ್ಮ ಅಧಃಪತನಕ್ಕೆ ಇದು ಒಂದು ಕಾರಣ. ಭಾರತದಲ್ಲಿ ಇಬ್ಬಗೆಯ ಕೆಡುಕುಗಳಿವೆ. ಒಂದು ಸ್ತ್ರೀಯರನ್ನು ತಿರಸ್ಕಾರ ದೃಷ್ಟಿಯಿಂದ ನೋಡಿದ್ದು, ಇನ್ನೊಂದು ಜಾತಿಯ ನಿಯಮಗಳಿಂದ ಬಡವರನ್ನು ಬಂಧಿಸಿ ತುಳಿದದ್ದು, ನಮ್ಮ ಜನಸಮೂಹವನ್ನು ನೋಡಿ, ಅವರ ಮುಖದಲ್ಲಿ ದುಃಖದ ಛಾಯೆ ಹೇಗೆ ಹಬ್ಬಿದೆ! ಹೃದಯದಲ್ಲಿ ಉತ್ಸಾಹ ಧೈರ್ಯಗಳಿಲ್ಲ. ಕೈಕಾಲುಗಳಲ್ಲಿ ಶಕ್ತಿ ಇಲ್ಲ. ಸಣ್ಣಪುಟ್ಟ ಸಂಗತಿ ಗಳಿಗೂ ಹೆದರಿಕೊಳ್ಳುವ ಹೇಡಿಗಳಾಗಿಬಿಟ್ಟಿದಾರೆ. ಹಳ್ಳಿಯ ಗುಡಿಸಲುಗಳಲ್ಲಿ ಜೀವಿಸುತ್ತಿರುವ ನಿಜವಾದ ರಾಷ್ಟ್ರವೆನಿಸಿದ ಜನ ತಮ್ಮ ಮನುಷ್ಯತ್ವ ಮತ್ತು ವ್ಯಕ್ತಿತ್ವನ್ನೇ ಮರೆತಿದ್ದಾರೆ. ಈ ಜನಸಮೂಹಕ್ಕೆ ತಮ್ಮ ಆಂತರ್ಯದಲ್ಲಿನ ದಿವ್ಯ ಜ್ಯೋತಿಯನ್ನು ವ್ಯಕ್ತಗೊಳಿಸುವ ಅವಕಾಶವನ್ನು ಕೊಡಮಾಡಲಿಲ್ಲ”. ಅಂದು ವಿವೇಕಾನಂದರ ಅಂದಿನ ನುಡಿವಚನ ಇಂದೂ ಪ್ರಸ್ತುತ.

ನಮ್ಮ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ನಾಯಕತ್ವ ಇಂತಹ ಜಾಗೃತ ಸಮಾಜದ ನಿರ್ಮಾಣಕ್ಕೆ ಮನ ಮಾಡಬೇಕು. ಆ ನಾಯಕತ್ವದಲ್ಲಿ ಈ ಗುಣಮೌಲ್ಯ ಗಳಿರಬೇಕು.