ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಆದಿಗುರು ಶಂಕರಾಚಾರ್ಯರು (ಕ್ರಿ.ಶ. ೭೮೮-೮೨೦) ಮಹೋನ್ನತ ಸ್ಥಾನ ಪಡೆದಿದ್ದಾರೆ. ಅವರು ಪ್ರಪಂಚದ ಶ್ರೇಷ್ಠ ದಾರ್ಶನಿಕರು. ಅವರ ಪ್ರತಿಭೆ ವಿಶಿಷ್ಟವಾದುದು. ಅವರ ಭೌತಿಕ ದೇಹ ಮರೆಯಾಗಿ ಸಾವಿರದ ಮುನ್ನೂರು ವರ್ಷಗಳಾದರೂ ಅವರ ವಿಚಾರಧಾರೆ ಇಂದಿಗೂ ಜನಮನವನ್ನು ಆಳುತ್ತಿದೆ. ಶಂಕರಾಚಾರ್ಯರ ಬುದ್ದಿಶಕ್ತಿ, ವಿಚಾರ ನೈಪುಣ್ಯ, ಸರ್ವನ್ಯಾಯ ಬುದ್ದಿ, ಲೋಕಾನುಗ್ರಹ ದೃಷ್ಟಿ ಹಾಗೂ ಪ್ರತಿಭಾ ಸಾಮರ್ಥ್ಯ ಅಸದೃಶವಾದುದು.

ಅದ್ವೈತ ಎಂದರೆ ಪ್ರಪಂಚದಲ್ಲಿ ಎರಡಿಲ್ಲ. ಎಲ್ಲವೂ ಒಂದೇ. ಎಲ್ಲವೂ ಬ್ರಹ್ಮ; ಬ್ರಹ್ಮನು ಬೇರೆ, ನಾವು ಬೇರೆ ಅಲ್ಲ ಎಂಬ ತತ್ವ. ಪಾರಮಾರ್ಥಿಕವಾಗಿ ಮೇಲುಕೀಳು ಎನ್ನುವುದಿಲ್ಲ. ಎಲ್ಲವೂ ಬ್ರಹ್ಮ, ಎಲ್ಲವೂ ಪೂಜನೀಯ. ಮನುಷ್ಯರಾದ ನಮ್ಮಲ್ಲಿ ಮೇಲುಕೀಳು ಭಾವನೆ ಇರಬಾರದು. ನಾವೆಲ್ಲರೂ ಒಂದೇ ಎಂದು ಸಾರಿದರು.

ಪ್ರಪಂಚವನ್ನು ಮಾಯೆ ಎಂದು ಕರೆದರು. ಜಗತ್ತು ನಿತ್ಯವಲ್ಲ, ಶಾಶ್ವತವಲ್ಲ, ಬದಲಾವಣೆ ಆಗುತ್ತಿರುತ್ತದೆ. ನಮ್ಮ ಅಜ್ಞಾನದಿಂದ ಈ ಬದಲಾಗುತ್ತಿರುವ ವ್ಯಾಪಾರಗಳೇ ಸತ್ಯ ಎಂದು ಭಾವಿಸುತ್ತೇವೆ. ಈ ಎಲ್ಲಾ ವಸ್ತುಗಳು ಮತ್ತು ವ್ಯಾಪಾರಗಳ ಹಿಂದೆ ಇರುವ ಸತ್ಯ ಬ್ರಹ್ಮವೆ, ಮನುಷ್ಯನ ಆತ್ಮ ಬ್ರಹ್ಮನಿಂದ ಬೇರೆಯಿಲ್ಲ. ಬ್ರಹ್ಮನಿಗೆ ಕಾಲದ ಬಂಧನ ವಿಲ್ಲ, ದೇಶದ ಬಂಧನವಿಲ್ಲ, ಬ್ರಹ್ಮನು ಅನಾದಿ, ಅನಂತ ಬ್ರಹ್ಮನನ್ನು ವರ್ಣಿಸಲು ಸಾಧ್ಯವಿಲ್ಲ. ಈ ಬ್ರಹ್ಮದಲ್ಲಿ ಒಂದಾಗುವುದು ಆತ್ಮದ ಗುರಿಯಾಗಬೇಕು. ಇದಕ್ಕೆ ಅಜ್ಞಾನವನ್ನು ಹೋಗಲಾಡಿಸಿಕೊಳ್ಳಬೇಕು – ಇದು ಶಂಕರರ ಉಪದೇಶ.

ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಈ ಬಗ್ಗೆ ಹೇಳುವ ಮಾತೇ ಬೇರೆಯಿದೆ. “ಶಂಕರಾಚಾರ್ಯರು ಹೊಸದಾದ ಅದ್ವೈತ ಸಿದ್ಧಾಂತದ ಸಂಸ್ಥಾಪಕರಲ್ಲ. ಅದ್ವೈತ ಸಿದ್ಧಾಂತದ ಸಂಸ್ಥಾಪಕರೆಂಬುದು ತಪ್ಪು ಕಲ್ಪನೆ. ತಾವು ಅದ್ವೈತ ಸಂಪ್ರದಾಯದ ಸ್ಥಾಪಕರೆಂದು ಶಂಕರರು ಹೇಳಿಲ್ಲ. ಬಾದಾರಾಯಣ, ಉಪವರ್ಷ, ದ್ವೆವೀತಾಚಾರ್ಯ, ಸುಂದರ ಪಾರಿತ್ರ, ಗೌಡಪಾದ, ಮೊದಲಾದವರು ಅದ್ವೈತ ಸಿದ್ಧಾಂತದ ಪೂರ್ವ ಸೂರಿಗಳು. ಅವರು ಅನುಸರಿಸಿದ ಮಾರ್ಗ ವನ್ನು ಭರ್ತೃಪ್ರಪಂಚದ, ಬ್ರಹ್ಮನಂದಿ, ಮಂಡನ ಮಿಶ್ರ ಮೊದಲಾದವರು ಮೆಚ್ಚಿಕೊಂಡು ಆ ಕಡೆ ಸಾಗಿದ್ದರು. ಶಂಕರಾಚಾರ್ಯರು ಮೊದಲಿದ್ದ ದಾರಿಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಿದ ಮಾರ್ಗದರ್ಶಿ ಪ್ರವರ್ತಕರು. ಶಂಕರಾಚಾರ್ಯರ ಪ್ರತಿಭೆಯ ಫಲವಾಗಿ ವೇದಾಂತದಲ್ಲಿ ಏನೇನೋ ಸೇರ್ಪಡೆಯಾಗಿದ್ದ ಅಪಭ್ರಂಶ ವಿಚಾರಗಳು ತೊಲಗಿ ನೈರ್ಮಲ್ಯ ವನ್ನು ಪಡೆಯಿತು”.

ಅಂತಿಮ ಜ್ಞಾನವಾದ ಬ್ರಹ್ಮ ಸಾಕ್ಷಾತ್ಕಾರವು ಹೊಸದಾಗಿ ಸೃಷ್ಟಿಯಾಗುವುದಿಲ್ಲ. ಅದು ಆತ್ಮದ ಸ್ವರೂಪ, ಜ್ಞಾನದ ಸಾಕ್ಷಾತ್ಕಾರ ಮಾತ್ರ ತನ್ನ ಕೊರಳಲ್ಲಿ ಇದ್ದರೂ ಮರೆತುಬಿಟ್ಟ ಚಿನ್ನದ ಸರದಂತೆ ಅದು. ಅದ್ವೈತ ತತ್ವದ ಜ್ಞಾನವು ಯಾವ ಒಂದು ಪಂಗಡಕ್ಕಾಗಲಿ, ಮಠದ ಉಪಶಾಖೆಗಾಗಲಿ ಮೀಸಲಿಲ್ಲ. ಅದು ಪಂಡಿತರಿಗೆ ಕಾದಿರಿಸಿರುವುದಲ್ಲ. ಶ್ರೀಶಂಕರರು ಬ್ರಹ್ಮಜ್ಞಾನ ಪಡೆಯುವುದಕ್ಕೆ ಅಧಿಕಾರವನ್ನು ನಿರಾಕರಿಸಲಿಲ್ಲ. ಮನುಷ್ಯರಂತೆ ಬ್ರಹ್ಮ ಸಾಕ್ಷಾತ್ಕಾರದ ಸುಲಭ ಸಾಧನವನ್ನು ಅನುಮೋದಿಸಿ ತೋರಿಸಿದ್ದಾರೆ. ಆಧ್ಯಾತ್ಮ ಸಾಕ್ಷಾತ್ಕಾರಕ್ಕೆ ಎಲ್ಲರಿಗೂ ಅನ್ವಯಿಸಬೇಕಾದ ಒಂದೇ ಮಾರ್ಗವಿರುವುದಿಲ್ಲ. ಬೇರೆ ಬೇರೆ ಸಾಧಕರು ಬೇರೆ ಬೇರೆ ವಿಧಾನವನ್ನು ಅನುಸರಿಸುತ್ತಾರೆ. ಸಾಕ್ಷಾತ್ಕಾರವು ಎಲ್ಲರಿಗೂ ಸಾಧ್ಯವೆಂದು ಅದ್ವೈತದ ಅಭಿಪ್ರಾಯ.

ಮುಕ್ತನಾದವನು ಉತ್ತಮ ಅರ್ಥದಲ್ಲಿ ಕಲಾವಿದನೂ ಹೌದು. ಅವನ ಜೀವನದ ಲೆಕ್ಕಾಚಾರಗಳಲ್ಲಿ ಲಾಭನಷ್ಟಗಳ ಲೆಕ್ಕಾಚಾರವಿಲ್ಲ. ಉದ್ದೇಶಪಟ್ಟು ಯಾಂತ್ರಿಕವಾಗಿಯೇ ಅವನು ಯಾವ ಕಾರ್ಯವನ್ನೂ ಮಾಡಲಾರನು. ಅವನ ಕ್ರಿಯೆಗಳು ಕೇವಲ ಲೀಲಾತ್ಮಕ. ಯೋಗಕ್ಷೇಮದ ನಿಯಮಗಳಿಂದ ಅವನು ಬದ್ಧನಾದಲ್ಲಿ ಅವನಿಗೆ ಯಾವ ನಿಯಮಗಳೂ ಬೇಕಿಲ್ಲ. ಅವನಿಗೆ ಅವನೇ ನಿಯಮ.

ಮೋಕ್ಷ ವಿಷಯಕರವಾದ ಅದ್ವೈತಿಯ ಕಲ್ಪನೆಯು ಭಾರತೀಯ ತತ್ತ್ವಜ್ಞಾನದಲ್ಲಿ ಅಸದೃಶವಾದುದು. ಇದು ಒಂದು ಪ್ರಕಾರದ ಆತ್ಮಸಾಕ್ಷಾತ್ಕಾರ. ಹೊಸದೇನನ್ನೂ ವಶಪಡಿಸಿ ಕೊಳ್ಳುವ ಮಾತೇ ಇಲ್ಲಿಲ್ಲ. ಈಗಾಗಲೇ ಇದ್ದುದರ ಅರಿವನ್ನೇ ಮಾಡಿಕೊಂಡರೆ ಅದೇ ಸಾಕ್ಷಾತ್ಕಾರ. ಯಾವುದು ಈಗಾಗಲೇ ಇರುವುದಿಲ್ಲವೋ ಅದನ್ನು ಅಸ್ತಿತ್ವದಲ್ಲಿ ತರುವ ಪ್ರಶ್ನೆ ಇದಲ್ಲ. ವಿದ್ಯಾರಣ್ಯರ ಮಾತುಗಳಲ್ಲಿ ಹೇಳುವುದಾದರೆ, ಇದುವರೆಗೆ ನಮ್ಮ ಮೈಮೇಲೆಯೇ ಇದ್ದ, ಆದರೆ ಮರೆತು ಹೋದ ಬಂಗಾರದ ಒಡವೆಯನ್ನು ಮತ್ತೆ ಕೆಡದಂತಿಡುವುದೇ ಈ ಸಾಕ್ಷಾತ್ಕಾರ ಎಂಬುದು. ಅದೇನೂ ಮೇಲಿಂದ ಇಳಿದು ಬಂದ ಕಾಣಿಕೆಯಲ್ಲ. ಆದರೆ ಅದು ನಮ್ಮ ಒಳಗಿನಿಂದಲೇ ಬಂದ ತಿಳುವಳಿಕೆ ಮಾತ್ರ. ವಿವೇಕ ಪೂರ್ಣ ಚಿಂತನೆಗೆ ಅದ್ವೈತ ಬಹಳ ಬೆಲೆ ಕೊಡುತ್ತದೆಯಲ್ಲದೆ, ಅಂದವಾದ ಅಂಗೀಕಾರ ಅದಕ್ಕೆ ಸಮ್ಮತವಿಲ್ಲ.

ನೀನಾರು? ಎಂಬ ಪ್ರಶ್ನೆ ಉತ್ತರವಾಗಿ ಶಂಕರರು ದಶಶ್ಲೋಕಿಯೆಂದು ಪ್ರಸಿದ್ಧವಾಗಿರುವ ಹತ್ತು ಶ್ಲೋಕಗಳಲ್ಲಿ ನಿಜವಾದ ನಾನು ಎಂಬ ಪರಬ್ರಹ್ಮ ಸ್ವರೂಪವನ್ನು ನಿರೂಪಿಸಿದರು. ಈ ಹತ್ತೂ ಶ್ಲೋಕಗಳಲ್ಲಿ ಸತ್ಯ ಯಾವುದೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ಇಂದ್ರಿಯ ಗೋಚರವಾದ ಪ್ರಪಂಚದ ಎಲ್ಲಾ ವಿಷಯಗಳೂ ನಾಶವಾದ ಮೇಲೆ ಉಳಿಯುವುದೂ ಒಂದೇ – ಆತ್ಮಜಾಗ್ರತ ಸ್ಥಿತಿಯಲ್ಲಿ ಅನುಭವಕ್ಕೆ ಬರುವ ವಾಸ್ತವಿಕ ಜಗತ್ತೆಲ್ಲವೂ ಸ್ವಪ್ನ ಜಾಗ್ರತ ಸ್ಥಿತಿಯಲ್ಲಿ ಅನುಭವಕ್ಕೆ ಬರುವ ವಾಸ್ತವಿಕ ಜಗತ್ತೆಲ್ಲವೂ ಸ್ವಪ್ನ ಸ್ಥಿತಿಯಲ್ಲಿ ಅಮೂರ್ತವಾಗುತ್ತವೆ. ಆಕಾಶವು ನಾಶವಾದರೂ ಕಾಲದ ಚಲನೆ ನಿಂತರೂ ಆತ್ಮಕ್ಕೆ ಯಾವ ಹಾನಿಯೂ ಇಲ್ಲ. ಉಪನಿಷತ್ತುಗಳಲ್ಲಿ ಆತ್ಮ ಮತ್ತು ಬ್ರಹ್ಮ ಎಂಬ ಪದಗಳಿಂದ ಕರೆಯುವ ಅಚಲವಾದ ಸ್ಥಿರಸತ್ಯವೇ ಅದು. ಆತ್ಮವೆನ್ನುವುದು ಮಂಗಳಕರವಾದುದು, ಅತ್ಯಮೂಲ್ಯ ವಾದುದು. ಅದೇ ಅದ್ವೈತವಾದ ಸತ್-ಚಿತ್-ಆನಂದ. ಹೀಗೆ ದಶಶ್ಲೋಕಗಳಲ್ಲಿ ಶಂಕರರು ಪರಮತತ್ತ್ವದ ಪರಾಸತ್ಯವನ್ನು ಸಾರಿದ್ದಾರೆ.

ಶಂಕರರಲ್ಲಿ ಎಲ್ಲ ಪಂಥಗಳಿಗೂ, ಪಂಗಡಗಳಿಗೂ ಅದ್ವೈತವೇ ಉತ್ತರವಾಗಿತ್ತು. ಎಲ್ಲಾ ಪಂಥಗಳ ದೇವತೆಗಳೂ ಈಶ್ವರನ ಒಂದು ಮುಖ. ಈಶ್ವರನಲ್ಲಿ ಅವರೆಲ್ಲರೂ ಐಕ್ಯರಾಗುತ್ತಾರೆ. ಬ್ರಹ್ಮ, ವಿಷ್ಣು ಮತ್ತು ಶಿವ ಎಂಬ ತ್ರಿಮೂರ್ತಿಗಳಲ್ಲಿ ಕಾಣಿಸಿಕೊಳ್ಳುವ ಈಶ್ವರನೇ ವಿಶ್ವದ ಏಕಮೇವ ಕಾರಣ. ವಿವಿಧ ಪಂಥೀಯರು ತಮ್ಮ ಸಂಕುಚಿತ ದೃಷ್ಟಿಯನ್ನೂ ಹಠವನ್ನೂ ಬಿಟ್ಟು ಪಂಥೀಯ ಲಾಂಛನಗಳನ್ನು ಹಾಕುವುದುನ್ನು ತ್ಯಜಿಸಿ ಜೀವನ ಮಾರ್ಗ ದಲ್ಲಿಯೂ ಪೂಜಾವಿಧಾನದಲ್ಲಿಯೂ ಉನ್ನತ ಕ್ರಮಗಳನ್ನು ಅನುಸರಿಸಬೇಕೆಂದು ಬುದ್ದಿ ವಾದ ಹೇಳಿದರು.

ಶಂಕರಾಚಾರ್ಯರು ಭಾರತ ಪರ್ಯಟನೆಯಲ್ಲಿ ದಕ್ಷಿಣದಿಂದ ಉತ್ತರ, ಪೂರ್ವದಿಂದ ಪಶ್ಚಿಮಕ್ಕೆ ಸಂಚರಿಸಿದ ಬಗ್ಗೆ ದಾಖಲೆಗಳಿವೆ. ವಾಲ್ಮೀಕಿಯ ರಾಮ ಭಾವೈಕ್ಯದ ಸಂಕೇತವಾಗಿ ಉತ್ತರದಿಂದ ದಕ್ಷಿಣಕ್ಕೆ ಬಂದ. ದಕ್ಷಿಣ ಭಾರತದ ಶಂಕರರು ಉತ್ತರ ಭಾರತದ ಕೇದಾರ, ಒರಿಸ್ಸಾ, ಗುಜರಾತ್‌ಗಳಲ್ಲಿ ಧರ್ಮಪೀಠ ಸ್ಥಾಪಿಸಿದರು. ಶ್ರೀ ರಾಮನ ಸೇತು ಬಂಧನದಷ್ಟೇ ಶಂಕರರ ಧರ್ಮಪೀಠ ಸ್ಥಾಪನಾಕಾರ್ಯ ಕೂಡಾ ಮಹತ್ವಪೂರ್ಣವಾದುದು. ಶಂಕರಾಚಾರ್ಯರು ಎಂದೂ ಬತ್ತದ ಭಾರತದ ಶಕ್ತಿಕೇಂದ್ರವಿದ್ದಂತೆ.

ವೇದಾರ್ಥವೆಂದರೆ ಅಭ್ಯುದಯ ಪರವಾದ ಚಿಂತನೆ ಎಂಬುದು ಅವರ ಮತ. ಜನರು ಧರ್ಮ-ಅರ್ಥ-ಕಾಮಗಳೆಂಬ ಪುರುಷಾರ್ಥಗಳನ್ನು ಸ್ಥಾಪಿಸಬೇಕೆಂಬುದು ಆಚಾರ್ಯರ ಅಭಿಮತ. ಯಾವ ಜಾತಿ, ಮತ, ಪಂಥ-ಧರ್ಮಕ್ಕೇ ಸೇರಿರಲು  ಜ್ಞಾನಿಯಾಗಲು ಅಧಿಕಾರವಿದೆ ಎಂದು ಅವರು ಹೇಳುತ್ತಾರೆ. ಬಂಡಿ ಹೊಡೆಯುವ ರೈಕ್ವ, ಹೆಣ್ಣು ಮಗಳಾದ ವಾಚಕ್ಕವಿ, ಶೂದ್ರನಾದ ವಿದುರ, ಬೇಟೆಗಾರನಾದ ಧರ್ಮವ್ಯಾಧ ಬ್ರಹ್ಮಜ್ಞಾನಿಯಾಗಿರಲಿಲ್ಲವೇ? ಎಂದು ಅವರು ಪ್ರಶ್ನಿಸುತ್ತಾರೆ. ಅಂದರೆ ಸರ್ವರಿಗೂ ಜ್ಞಾನ ದಕ್ಕಬಲ್ಲದೆಂಬುದೇ ಅವರ ಸಿದ್ಧಾಂತ. ಶಂಕರರ ಪ್ರಕಾರ ಅದ್ವೈತ ಅಂದರೆ ಎರಡಿಲ್ಲ. ಎಲ್ಲವೂ ಒಂದೇ, ಎಲ್ಲವೂ ಬ್ರಹ್ಮ, ‘ಸರ್ವಂ ಖಲ್ವಿದಂ ಬ್ರಹ್ಮ’. ಬ್ರಹ್ಮ ಬೇರೆ ನಾವು ಬೇರೆ ಎಂಬ ಭಾವನೆಯಿರುವುದಿಲ್ಲ. ಎಲ್ಲವೂ ಬ್ರಹ್ಮನಾದ ಕಾರಣ ಎಲ್ಲವೂ ಪೂಜನೀಯ.

ಭಾರತೀಯ ಮತೀಯ ಸಾಮರಸ್ಯವನ್ನು ಪ್ರೋಶಂಕರರ ಪ್ರಥಮ ಕಾರ್ಯಗಳಲ್ಲಿ ಒಂದಾಗಿತ್ತು. ಅವರ ಅದ್ವೈತವೆಂಬ ಏಕತತ್ವದ ಆಧಾರದ ಮೇಲೆ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಪಟ್ಟರು. ಪರಸ್ಪರ ಧರ್ಮಗಳಲ್ಲಿ ಅನೇಕ ಪಂಥಗಳಿರಬಹುದು. ಆದರೆ ಅವುಗಳಲ್ಲಿ ಪರಸ್ಪರ ವೈಷಮ್ಯಗಳಿರಬಾರದು. ಅಲ್ಲದೆ ಯಾವೊಂದು ಪಂಥವೂ ಸತ್ಯ ಮತ್ತು ಪಾವಿತ್ರ್ಯಗಳ ಮೇಲೆ ಇದು ತನಗೇ ಮೀಸಲು ಎಂಬ ಸಂಪೂರ್ಣ ಹಕ್ಕನ್ನು ಹೊಂದಿರಬಾರದು. ಭಾರತೀಯ ಧರ್ಮದ ಆರು ಮುಖ್ಯ ಪಂಥಗಳನ್ನು ಶುದ್ದಿಗೊಳಿಸಿ ಸಮನ್ವಯಗೊಳಿಸಲು ಪ್ರಯತ್ನ ಮಾಡಿದುದರಿಂದಲೇ ಅವರನ್ನು ಷಣ್ಮತ ಸ್ಥಾಪಕಾಚಾರ‍್ಯ ಎಂದು ಕರೆಯುತ್ತಾರೆ. (ಶೈವ, ವೈಷ್ಣವ, ಸೌರ, ಗಾಣಪತ್ಯ ಮತ್ತು ಕೌಮಾರ ಎಂಬುದೇ ಆ ಷಣ್ಮತಗಳು.) ಬೇರೆ ಬೇರೆ ಪಂಥಗಳಲ್ಲಿ ಹೊಂದಾಣಿಕೆಯ ದೃಷ್ಟಿಯನ್ನು ಪ್ರೋಅನುಸರಿಸಿದ ಸ್ಪಷ್ಟಮಾರ್ಗದಲ್ಲಿ ಪಂಚಾಯತನ ಪೂಜೆಯನ್ನು ಜನಪ್ರಿಯಗೊಳಿಸಿದುದೂ ಒಂದು. ಈ ಪದ್ಧತಿಯು ಆದಿತ್ಯ. ಅಂಬಿಕಾ, ವಿಷ್ಣು, ಗಣಪತಿ ಮತ್ತು ಮಹೇಶ್ವರರ ಎಂಬ ಐದು ದೇವತೆಗಳ ಮೂರ್ತಿಗಳನ್ನು ಏಕಸ್ಥಳದಲ್ಲಿ ಪೂಜಿಸುವುದೇ ಆಗಿದೆ. ಅವುಗಳಲ್ಲಿ ಭಕ್ತನ ಇಷ್ಟದೇವತೆಗೆ ಪ್ರಧಾನ ಸ್ಥಾನವನ್ನು ಕೊಡುವುದು. ಅದ್ವೈತದ ಅನುಯಾಯಿಗಳು ಮಾರ್ಕಾಂಡೇಯ ಸಂಹಿತೆಯ ಪ್ರಕಾರ ಪಂಚಾಯತನ ಪೂಜೆಯನ್ನು ಮಾಡಬೇಕೆಂದು ಶಂಕರರು ತಮ್ಮ ಶಿಷ್ಯರಿಗೆ ಬೋಧಿಸಿದರು. ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ನೆಲೆಗೊಳಿಸಿದ ಗಣೇಶೋತ್ಸವದ ಒಟ್ಟು ಉದ್ದೇಶವು ಪರಸ್ಪರರನ್ನು ಒಂದುಗೂಡಿಸುವ ವಿಧಿ ವಿಧಾನವಾಗಿತ್ತು. ಆದರೆ ಅವುಗಳ ಉದ್ದೇಶವನ್ನು ದ್ವೇಷಬೀಜಗಳನ್ನು ಬಿತ್ತುವ ವೇದಿಕೆಗಳನ್ನಾಗಿ ಪರಿವರ್ತಿಸುತ್ತಿರುವ ಪ್ರವೃತ್ತಿ ಮಾತ್ರ ದುರದೃಷ್ಟಕರ.