ಮಲೆಯಾಳಿ ಸಂಸ್ಕೃತಿಗೆ ತನ್ನದೇ ಆದ ಕಂಪು, ಪೆಂಪಿದೆ. ಭೌಗೋಳಿಕ ರೂಪುರೇಷೆ ಈ ಸಂಸ್ಕೃತಿಗೆ ಮತ್ತಷ್ಟು ಮೆರುಗು ನೀಡಿದೆ. ಒಂದು ಕಡೆ ಪಶ್ಚಿಮಘಟ್ಟ, ಮತ್ತೊಂದು ಕಡೆ ಅರಬ್ಬೀಸಮುದ್ರ, ಅದರ ಮಧ್ಯೆ ಸಾಹಸಮಯ ಜೀವನ ನಡೆಸುವ ಪರಿಕ್ರಮ. ತನ್ನ ಭಾಷೆ, ಸಂಸ್ಕೃತಿ, ಸಂಸ್ಥೆ, ವೈವಿಧ್ಯ ಮತ್ತು ವರ್ಣಮಯ ವಸ್ತ್ರಭೂಷಣಗಳಿಂದ ವೈಶಿಷ್ಟ್ಯವನ್ನು ಪಡೆದಿದೆ. ದಕ್ಷಿಣ ಭಾರತದ ಪ್ರಮುಖವಾಗಿ ಚೇರಾ, ಜೋಳ, ಪಾಂಡ್ಯ ಮತ್ತು ಚಾಳುಕ್ಯ ಸಾಮ್ರಾಟರಿಂದ ಆಳಲ್ಪಟ್ಟಿದೆ. ಚೇರಾ ಸಾಮ್ರಾಟರು ಕೇರಳ ಅಂದರೆ (ಕಾರಾ) ಪ್ರದೇಶದ ಸಾರ್ವಭೌಮತ್ವವನ್ನು ಹೊಂದಿದ್ದರು. ಚೇರಾ ಮತ್ತು ಪಾಂಡ್ಯರ ಮಧ್ಯೆ ಆಗಾಗ ಸಮರ ಏರ್ಪಡುತ್ತಿತ್ತು. ಕ್ರಮೇಣ ಚೋಳ ಸಾಮ್ರಾಟರು ಕೇರಳ ಸಾಮ್ರಾಜ್ಯವನ್ನು ಆಳುತ್ತಿದ್ದರು.

ಕೇರಳ ಕಾಲಡಿಯಲ್ಲಿ ಜನ್ಮತಾಳಿದ ಜಗದ್ಗುರು ಆದಿಶಂಕರರ ಅದ್ವೈತ ಸಿದ್ಧಾಂತದ ಪ್ರಭಾವ ಪ್ರಬಲವಾಗಿತ್ತು. ಕೇರಳದ ಅನೇಕ ಜನಾಂಗ ಮತ್ತು ಮತಗಳ ಸಂಗಮ ಪ್ರದೇಶವಾಗಿ ಮತೀಯ ಸಹನೆ ಅಥವಾ ಜಾತ್ಯತೀತತೆಯೇ ಕೇರಳದ ಜೀವಾಳ. ತಿರುವನಂತಪುರಂನಲ್ಲಿರುವ ಹಿಂದೂ ದೇವಸ್ಥಾನ, ಮಸೀದಿ, ಚರ್ಚ್ (Cathedral) ಸನಿಹ ಸನಿಹದಲ್ಲಿ ನಿಂತಿವೆ. ಮತೀಯ ತಾರತಮ್ಯವನ್ನು ಕೇರಳದ ಯಾವ ಸಾಮ್ರಾಟರು ಪಡೆಯಲಿಲ್ಲ. ಎಲ್ಲಾ ಮತೀಯ ರನ್ನು (ಯಹೂದಿಗಳು ಸೇರಿ) ಸರಿ ಸಮಾನವಾಗಿ ನೋಡಿಕೊಳ್ಳುತ್ತಿದ್ದ ಪುಣ್ಯಭೂಮಿ. ಸೈಂಟ್ ಥಾಮಸ್ ಕೇರಳದ ಕೋಡುಂಗಲ್ಲೂರಿಗೆ ಪ್ರವೇಶಿಸಿದಾಗ ಸರ್ವರೂ ಹಾರ್ದಿಕವಾಗಿ ಸ್ವಾಗತಿಸಿದರು. ಯಹೂದಿಗಳು ಕೂಡ ಕ್ರಿ.ಶ. ೬೮ರಲ್ಲಿ ಕೊಡುಂಗಲ್ಲೂರಿಗೆ ಪ್ರವೇಶಿಸಿದಾಗ ಅಲ್ಲಿನ ಸಾಮ್ರಾಟ ಭಾಸ್ಕರ ರವಿವರ್ಮ ಬಿರುದು ಬಾವಲಿಗಳನ್ನು ನೀಡಿ ಸತ್ಕರಿಸಿದನು. ಕ್ರಿ.ಶ. ೬೪೪ರಲ್ಲಿ ಮಾಲಿಕ್ ಬಿನ್ ದಿನಾರ್ ಕೇರಳ ಪ್ರವೇಶಿಸಿ ಮಸೀದಿಗಳನ್ನು ನಿರ್ಮಿಸಿ ಇಸ್ಲಾಂ ಧರ್ಮವನ್ನು ಪ್ರಚುರಪಡಿಸಿದನು.

ಅಳಿಯ ಸಂತಾನ ಕಟ್ಟುಪಾಡು ಅಲ್ಲಿ ಸ್ಥಿರವಾಗಿ ನಿಂತಿದೆ. ನೃತ್ಯ, ನಾಟಕ, ಸಂಗೀತಕ್ಕೆ ಕೇರಳ ಸ್ವರ್ಗ ಭೂಮಿ. ಅಲ್ಲಿ ಕಥಕ್ಕಳಿ, ಒಟ್ಟಂತುಲ್ಲಾಲ್, ಚಾಕ್ಯರಕೂತು, ಕೃಷ್ಣನಟ್ಟಂ, ಪಾದಯಾನಿ, ಪವಕಥಕ್ಕಳಿ, ಥೆಯ್ಯಂ, ವೆಲಕಲಿ, ತಿರುವತಿರಕಲಿ, ಕೊಲಕಲಿ ಮುಂತಾದ ನೃತ್ಯ ಪ್ರಕಾರಗಳು ಕಲಾ ಭೂಮಿಕೆಯನ್ನು ಪ್ರಜ್ವಲಿಸುತ್ತಿವೆ. ಈ ಕಲಾ ಕಾರಂಜಿ ಜನತೆಯಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಅನುಕಂಪ, ರಂಜನೆ, ದುಃಖ, ಕೋಪ, ಆಶ್ಚರ್ಯ, ಬೀಭತ್ಸತೆ,  ಭಯ, ಸ್ಥೈರ್ಯ, ಸಾಹಸ ಗುಣಗಳನ್ನು ಪ್ರತಿಬಿಂಬಿಸುವುದರಿಂದಲೇ ಮಲೆಯಾಳಿಗಳ ವ್ಯಕ್ತಿತ್ವಕ್ಕೆ ಪುಟವೇರಿದೆ. ಕಥಕ್ಕಳಿ, ಮೋಹಿನಿಯಟ್ಟಂ ಅಂತೂ ರಾಜ್ಯ ಮತ್ತು ರಾಷ್ಟ್ರದ ಸೀಮೆಯನ್ನು ದಾಟಿ ವಿಶ್ವದ ಭೂಮಿಕೆಯಲ್ಲಿ ಮೆರೆಯುತ್ತಿದೆ. ಕೇರಳದಲ್ಲಿ ಪ್ರಚಲಿತವಿರುವ ಕಳರಿಪ್ಪಯಟ್ಟ್ ಎಂಬ ಸಮರಕಲೆ (Marshal Art) ವಿಶ್ವದ ಸಮರಕಲೆ ಪ್ರಪಂಚದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ನಾಟ್ಯಶಾಸ್ತ್ರದ ಭರತನಾಟ್ಯಂ ಕೇರಳದಲ್ಲಿ ತನ್ನ ಹೊಸತನವನ್ನು ಕಂಡಿತು.

ಇಂದು ಕೇರಳದಲ್ಲಿ ಮಾತ್ರವಲ್ಲ ದೇಶವಿಡೀ ಮಲೆಯಾಳಿಗಳು ಆಚರಿಸುತ್ತಿರುವ ಓಣಂ ಉತ್ಸವ ರಾಷ್ಟ್ರೀಯ ಉತ್ಸವವಾಗಿ ಉನ್ನತ ಸ್ತರವನ್ನು ಪಡೆದಿದೆ. ಸಮುದಾಯದ ಐಕ್ಯತೆ ಮತ್ತು ಸಾಮಾಜಿಕ ಸಮನ್ವಯತೆ ಓಣಂ ಉತ್ಸವದ ರಾಷ್ಟ್ರ ಮತ್ತು ವಿಶ್ವಸಂದೇಶ. ಓಣಂ ಉತ್ಸವದ ಹಿಂದೆ ಪೌರಾಣಿಕ ಐತಿಹ್ಯವಿದೆ. ದೇವತೆಗಳು ಕೇರಳದ ಚಕ್ರವರ್ತಿ ಅಸುರ ಮಹಾಬಲಿಯ ಉತ್ಕರ್ಷವನ್ನು ಕಂಡು ಅಸೂಯೆಯಿಂದ ಮಹಾವಿಷ್ಣುವನ್ನು ಪ್ರಾರ್ಥಿಸಿದರು. ಮಹಾಬಲಿಯನ್ನು ಸಾಮ್ರಾಜ್ಯ ವಿರಹಿತನಾಗಿಸುವ ಪಿತೂರಿ ಹೂಡಿದರು. ಮಹಾವಿಷ್ಣು ಭೂಮಿಗೆ ವಾಮನನಾಗಿ ಪ್ರವೇಶಿಸಿದ. ಮಹಾಬಲಿಯ ಔದಾರ್ಯತೆಯ ದುರ್ಬಲತೆಯನ್ನು ವಾಮನ ಕಂಡುಕೊಂಡು ಭೂತಳಕ್ಕೆ ಮಹಾಬಲಿಯನ್ನು ತಳ್ಳಿದ. ಮಹಾಬಲಿ ತನ್ನ ಸಾಮ್ರಾಜ್ಯವನ್ನೇ ವಾಮನನಿಗೆ ಧಾರೆ ಎರೆದು ಅತ್ಯಂತ ದೊಡ್ಡ ದಾನಿ ಎನಿಸಿದ. ಅವನ ಉತ್ಕೃಷ್ಟ ಔದಾರ್ಯ, ದಾನದಿಂದ ಮೆಚ್ಚಿದ ಮಹಾವಿಷ್ಣು ವರ್ಷಕ್ಕೊಮ್ಮೆ ತನ್ನ ಸಾಮ್ರಾಜ್ಯಕ್ಕೆ ಮರಳಿ ಬಂದು ತನ್ನ ಜನರ ಸಂದರ್ಶನ ಪಡೆಯುವ ಭಾಗ್ಯ ಒದಗಿಸಿದ. ಮಹಾಬಲಿಯ ವಾರ್ಷಿಕ ಮಹಾದರ್ಶನವನ್ನು ಓಣಂ ಮಹೋತ್ಸವವಾಗಿ ಆಚರಿಸ ಲಾಗುತ್ತಿದೆ. ಮಹಾಬಲಿಯನ್ನು ಮಣ್ಣಿನ ಸ್ವರೂಪದಲ್ಲಿ ರೂಪಿಸಿ ಅದಕ್ಕೆ ಫಲಪುಷ್ಪಗಳನ್ನು ಅರ್ಪಿಸಿ, ತ್ರಿಕ್ಕಕರ ಅಪ್ಪನ್ ಎಂದು ವಾಮನ ಅವತಾರವನ್ನು ಕೇಂದ್ರವಾಗಿಟ್ಟು ಆರಾಧಿಸುವ ಉತ್ಸವವಾಗಿರುತ್ತದೆ.

ಆಂಧ್ರದ ತಿರುಪತಿಯಲ್ಲಿ ಕೂಡ ಓಣಂ ಆಚರಿಸುತ್ತಾರೆ. ಕ್ರಿ.ಶ. ೧೦ನೇ ಶತಮಾನದ ನಂತರ ದಕ್ಷಿಣ ಭಾರತದ ಹಲವಾರು ಜಿಲ್ಲೆಗಳಲ್ಲಿ ಕೂಡ ಆಚರಿಸುತ್ತಿರುವುದು ದಾಖಲೆಯಾಗಿದೆ. ತಮಿಳಿನ ಸಂಗಮ ಯುಗದ ಮಾಂಗುಡಿ ಮರುದನಾರ್ ಎಂಬ ಅತ್ಯಂತ ಪ್ರಸಿದ್ದಿ ಹೊಂದಿದ ಮಹಾಕವಿ ಮದುರೈಯ ಪಾಂಡ್ಯನ್ ರಾಜಧಾನಿಯಲ್ಲಿ ಕೂಡ ಆಚರಿಸಲಾಗುತ್ತಿತ್ತು ಎಂದು ತನ್ನ ಮಹಾಕಾವ್ಯದಲ್ಲಿ ಹಾಡಿ ಕೊಂಡಾಡಿದ್ದಾನೆ. ಮಲೆಯಾಳಂ ವರ್ಷದ ಚಿಂಗಂ ತಿಂಗಳಲ್ಲಿ ಅಂದರೆ ಆಗಸ್ಟ್ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಓಣಂ ಆಚರಿಸಲಾಗುತ್ತದೆ. ಕೇರಳದ ಎಲ್ಲಾ ಜನಾಂಗದವರು ಓಣಂ ಮಹೋತ್ಸವದಲ್ಲಿ ಅನೇಕ ಶತಮಾನಗಳಿಂದ ಅತ್ಯಂತ ವಿಜೃಂಭಣೆಯಿಂದ ಭಾಗವಹಿಸುತ್ತಾರೆ. ಕೇರಳದ ಭವ್ಯ ಭೂತಕಾಲವನ್ನು ಮುಂದಿನ ಶಾಂತಿ ಮತ್ತು ಸಂಪದಕ್ಕಾಗಿ ಆಚರಿಸುವ ಪ್ರಮುಖ ಹಬ್ಬ ಇದು.

ಓಣಂ ಉತ್ಸವ ಅಥಂನಿಂದ ಪ್ರಾರಂಭವಾಗಿ ಒಂದು ಸಪ್ತಾಹ ಉತ್ತಿರಿಟ್ಟತಿಯವರೆಗೆ ನಡೆಯುತ್ತದೆ. ಅದರಲ್ಲಿ ಪ್ರಮುಖವಾಗಿ ಉತ್ತರದಂ, ತಿರುಓಣಂ, ಆವಿಟೊಮ್ ಮತ್ತು ಛಾತ್ಯಂ ಪ್ರಮುಖವಾದ ನಾಲ್ಕು ದಿವಸಗಳು. ಯುವ ಜನಾಂಗವಂತೂ ಈ ದಿನಗಳನ್ನು ಬಹು ಕಾತರತೆಯಿಂದ ಕಾಯುತ್ತಿರುತ್ತಾರೆ. ಅಥಂನ ದಿವಸ ಪುಷ್ಪಗಳನ್ನು ತಂದು ಅತ್ತಪ್ಪೊಕಲಂ ಎಂಬ ವರ್ಣಮಯ ರೂಪುರೇಷೆಯಿಂದ ಅಲಂಕರಿಸುತ್ತಾರೆ. ಇದೊಂದು ಬಹು ವರ್ಣಗಳ ರೂಪು ವಿಶೇಷ.

ಉತ್ಸವದ ಉತ್ಕೃಷ್ಟ ದಿವಸವೇ ತಿರುಓಣಂ. ಆ ದಿವಸ ಸ್ನಾನವನ್ನು ಗೈದು ದೇವಸ್ಥಾನಗಳಲ್ಲಿ ಪೂಜೆ ಅರ್ಪಿಸುತ್ತಾರೆ. ಅನಂತರ ಅತ್ಯಂತ ಸೊಗಸಾದ ಮತ್ತು ವೈಭವ ಪೂರ್ಣ ವಸ್ತ್ರಗಳನ್ನು ಧರಿಸುತ್ತಾರೆ. ಬಳಿಕ ಓಣಂ ಸಂಧ್ಯಾ ಎಂಬ ಮಹಾಭೋಜನದಲ್ಲಿ ಭಾಗವಹಿಸುತ್ತಾರೆ. ಅತ್ಯಂತ ಕಡುಬಡವನ ಗುಡಿಸಲಿನಲ್ಲಿಯೂ ಈ ಉತ್ಸವ ನಿರಾತಂಕವಾಗಿ ನಡೆಯುತ್ತದೆ. ಅನ್ನವೇ ಪ್ರಮುಖ ಭೋಜನ ವಸ್ತುವಾಗಿರುತ್ತದೆ. ಅದರ ಜೊತೆಯಲ್ಲಿ ವಿಧ ವಿಧದ ಪಲ್ಯ, ತರಕಾರಿ ಸಿದ್ಧತೆಗಳು. ಮನೆ ಮನೆಯಲ್ಲಿ ಮಹಾಭೋಜನದ ನಂತರ ಕ್ರೀಡಾದಿಗಳಲ್ಲಿ ಸರ್ವರೂ ಅವರವರ ಅಭಿರುಚಿಗೆ ತಕ್ಕಂತೆ ಭಾಗವಹಿಸುತ್ತಾರೆ. ಭೌತಿಕವಾಗಿ ಮತ್ತು ಮಾನಸಿಕವಾಗಿ ಹಾಡುತ್ತ, ನೃತ್ಯ ಮಾಡುವ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದು ರೂಢಿಯಾಗಿದೆ. ಪರಸ್ಪರ ಗೆಳೆಯರು, ಸಂಬಂಧಿಕರು ಮತ್ತು ಹಿರಿಯ ಒಂದು ಕಡೆ ಸೇರಿ ಸಮುದಾಯ ಪ್ರಜ್ಞೆಯಿಂದ ಮಿಲನ ಹೊಂದಿ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಕ್ರಮವೇ ಅತ್ಯದ್ಭುತ.

ಕೇರಳ ಸರ್ಕಾರ ಕೂಡ ಪ್ರವಾಸೋದ್ಯಮವನ್ನು ಬೆಳೆಸುವ ಮತ್ತು ಜನರು ಪಾಲ್ಗೊಳ್ಳುವ ಉದ್ದೇಶದಿಂದ ಒಂದು ವಾರವನ್ನು ಪ್ರವಾಸೋದ್ಯಮ ವಾರವಾಗಿ ಘೋಷಿಸುತ್ತಿದ್ದಾರೆ. ಇದೊಂದು ರಾಜ್ಯದ ಮಹೋತ್ಸವವಾಗುತ್ತದೆ. ಈ ಸಂದರ್ಭದಲ್ಲಿ ಪಾರಂಪರಿಕ ಕಲಾ ಪ್ರಕಾರಗಳು ಮತ್ತು ಕಲೋತ್ಸವಗಳು ವಿಜೃಂಭಿಸುತ್ತವೆ. ಅದರಲ್ಲಿಯೂ ರಾಜ್ಯದ ರಾಜಧಾನಿ ಯಾದ ತಿರುವನಂತಪುರಂನ ೧೨ ಕೇಂದ್ರಗಳಲ್ಲಿ ಪ್ರವಾಸಿಗಳಿಗೆ ಕೇರಳದ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಪರಂಪರೆಯ ಸಕೃದ್ದರ್ಶನವಾಗುತ್ತದೆ. ತಿರುವನಂತಪುರಂ ಮಾತ್ರವಲ್ಲದೆ ಎರ‍್ನಾಕುಲಂ ಮತ್ತು ಕೋಜಿಕೋಡ್‌ನಲ್ಲಿ ಕೂಡ ಇಂತಹ ಉತ್ಸವಗಳು ನಡೆಯುತ್ತವೆ. ಈ ಎಲ್ಲಾ ಮಹೋತ್ಸವಗಳ ಅರನ್‌ಮುಲಾ ಸ್ನೇಕ್ ಬೋಟ್ ರೇಸ್‌ನಲ್ಲೆ ಕೊನೆಗೊಳ್ಳುತ್ತದೆ. ಆ ಬೋಟ್ ರೇಸ್‌ನಲ್ಲಿ ಪಾರಂಪರಿಕ ವಸ್ತ್ರಭೂಷಣ ಧರಿಸಿದ ಪುರುಷರು ಸಾಮೂಹಿಕ ಗಾನದ ಮಧ್ಯೆ ತಮ್ಮ ಬೋಟುಗಳನ್ನು ನಡೆಸುತ್ತಾರೆ. ಇವೆಲ್ಲವೂ ಪ್ರವಾಸಿಗಳ ಮತ್ತು ಕೇರಳ ನಿವಾಸಿಗಳ ಕಣ್ಣಿಗೆ ಹಬ್ಬ ಮತ್ತು ಸಂಸ್ಕೃತಿಯ ಸಂಸ್ಕಾರದ ಪರಾಕಾಷ್ಠೆ.