೦೦೪ರಲ್ಲಿ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರ ನೇತೃತ್ವದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಲಭಿಸಿತು. ಅದರಿಂದಾಗಿ ಭಾರತದ ಅನೇಕ ಭಾಷಾ ವಲಯದಲ್ಲಿ ತಳಮಳ ಉಂಟಾಯಿತು. ತಮಿಳುನಾಡಿನವರು ಅನ್ಯ ಪ್ರಭಾವ ಬೀರಿ ಈ ಸ್ಥಾನಮಾನ ಗಿಟ್ಟಿಸಿದರೆಂದು ಕೆಲವರು ಹೇಳಿದ್ದುಂಟು. ಆದರೆ ವಾಸ್ತವ ಬೇರೆಯಾಗಿತ್ತು. ಎಂ.ಜಿ. ರಾಮಚಂದ್ರನ್ ಅವರ ಕಾಲದಲ್ಲೆ ನಡೆದ ವಿಶ್ವ ತಮಿಳು ಸಮ್ಮೇಳನದಲ್ಲಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಕೊಡಲೇಬೇಕೆಂಬ ನಿರ್ಣಯ ಅಂಗೀಕಾರವಾಯಿತು. ೨೦೦೦ದಿಂದ ಈಚೆಗೆ ತಮಿಳು ಭಾಷೆಯನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಬೇಕೆಂದು ಅನೇಕ ಲೇಖನ, ಮಾಹಿತಿ ಹಾಗೂ ಸಂಶೋಧನಾ ವರದಿಗಳನ್ನು ಇಂಟರ್‌ನೆಟ್‌ನಲ್ಲಿ ಹರಿಯಬಿಡಲಾಯಿತು. ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವ ದಶಕದ ಮೊದಲೇ ತಮಿಳುನಾಡಿನ ಬುದ್ದಿಜೀವಿಗಳು ತಮ್ಮ ಭಾಷೆಯ ಬಗ್ಗೆ ವಿದ್ವತ್ ವಲಯದಲ್ಲಿ ಪ್ರಭಾವ ಬೀರಲು ಮಾಡಿದ ಪ್ರಯತ್ನವನ್ನು ನಾವು ಮನಗಂಡಂತಿಲ್ಲ.

ಪ್ರಯತ್ನ ಸಾಕಷ್ಟಿಲ್ಲ

ಇಂದು ತಮಿಳಿಗೆ ಶಾಸ್ತ್ರೀಯ ಭಾಷಾ ಮಾನ್ಯತೆ ಲಭಿಸಿದ್ದರೆ, ಅದರಲ್ಲಿ ರಾಜಕಾರಣಿಗಳ ಪಾತ್ರಕ್ಕಿಂತ ಆ ಭಾಷೆಯ ವಿದ್ವಾಂಸರ ಕೊಡುಗೆಯೇ ಹೆಚ್ಚು ಕನ್ನಡವನ್ನು ನಮ್ಮ ರಾಜ್ಯದಲ್ಲಿ ಬೆಳೆಸಿದರೆ ಸಾಲದು; ಆಧುನಿಕ ಸೌಲಭ್ಯ ಬಳಸಿಕೊಂಡು ರಾಷ್ಟ್ರವ್ಯಾಪಿಯಾಗುವಂತೆ ಮಾಡಬೇಕು. ಅಲ್ಲದೆ, ವಿಶ್ವದ ಆಸಕ್ತ ಜನತೆಗೆ ಕನ್ನಡ ಭಾಷೆಯ ಎಲ್ಲಾ ಬೆಳವಣಿಗೆಗಳು ಇಂಟರ್‌ನೆಟ್‌ನಲ್ಲಿ ಸುಲಭವಾಗಿ ಲಭಿಸುವಂತೆಯೂ ಶ್ರಮಿಸಬೇಕು. ಈ ಎಲ್ಲಾ ಪ್ರಯತ್ನ ಗಳನ್ನು ಬಹಳ ಹಿಂದಿನ ಕಾಲದಿಂದಲೂ ತಮಿಳು ಭಾಷಾ ವಿದ್ವಾಂಸರು ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಕಷ್ಟಿಲ್ಲದ್ದರಿಂದ, ಕನ್ನಡ ಭಾಷೆಗೆ ಸ್ಥಾನಮಾನ ಇನ್ನೂ ಲಭಿಸಿಲ್ಲ.

ಸೌಲಭ್ಯ

ಯಾವುದೇ ಭಾಷೆ ಶಾಸ್ತ್ರೀಯ ಭಾಷೆಯೆಂದು ಮಾನ್ಯತೆ ಪಡೆದರೆ, ಆ ಭಾಷೆಯನ್ನಾಡುವ ಜನರಲ್ಲಿ ತಮ್ಮ ಭಾಷೆಯ ಬಗ್ಗೆ ಆದರ-ಅಭಿಮಾನ ಇಮ್ಮಡಿಗೊಳ್ಳುತ್ತದೆ. ಜೊತೆಗೆ ಭಾಷಾ ಅಭಿವೃದ್ದಿಗೆ ೩೦ ಕೋಟಿಗಳಷ್ಟು ಕೇಂದ್ರದಿಂದ ಅನುದಾನ, ಸಂಶೋಧನೆಗೆ ಫೆಲೋಶಿಪ್‌ಗಳು ದೊರೆಯುವುದಲ್ಲದೆ ವಿಶ್ವದ ಬೇರೆ ಬೇರೆ ಕಡೆ ಆ ಭಾಷೆಯ ಅಧ್ಯಯನ ಪೀಠ ಸ್ಥಾಪಿಸಬಹುದು. ಹೀಗೆ ಅನೇಕ ಸೌಲಭ್ಯಗಳು ಆ ಭಾಷೆಗೆ ದೊರೆಯುತ್ತವೆ.

ಮಾನದಂಡ

ಯಾವುದೇ ಭಾಷೆಯನ್ನು ಶಾಸ್ತ್ರೀಯ ಭಾಷೆಯೆಂದು ಘೋಷಿಸಲು ಕೇಂದ್ರ ಸರ್ಕಾರ ನಾಲ್ಕು ಮಾನದಂಡಗಳನ್ನು ನಿಗದಿ ಮಾಡಿದೆ. ಮೊದಲನೆಯದು ಆ ಭಾಷೆ ಒಂದು ಸಾವಿರ ವರ್ಷಗಳ ಐತಿಹಾಸಿಕ ದಾಖಲೆ ಹೊಂದಿರಬೇಕು. (ಈ ಅವಧಿಯನ್ನು ೧,೫೦೦ ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗುತ್ತಿದೆ) ಎರಡನೆಯದಾಗಿ ಶಾಸ್ತ್ರೀಯ ಭಾಷೆಯೆಂದು ಪರಿಗಣಿತವಾಗುವ ಭಾಷೆಗೆ ಪ್ರಾಚೀನ ಪರಂಪರೆಯಿರಬೇಕು ಹಾಗೂ ಆ ಭಾಷೆಯಲ್ಲಿ ಬಂದ ಕೃತಿಗಳ ಬಗ್ಗೆ ತಲೆಮಾರಿನಿಂದಲೂ ಗೌರವ ಭಾವನೆ ಮೂಡಿರಬೇಕು. ಮೂರನೆ ಯದಾಗಿ ಆ ಭಾಷೆಯ ಸಾಹಿತ್ಯ ಪರಂಪರೆ ಸ್ವಂತವಾಗಿದ್ದು, ಎರವಲು ತಂದಿದ್ದಾಗಿರಬಾರದು. ನಾಲ್ಕನೆಯದು ಆ ಸಾಹಿತ್ಯ ಪರಂಪರೆಯಲ್ಲಿ ಅವಿಚ್ಛಿನ್ನತೆಯನ್ನು ಭಾಷೆ ಉಳಿಸಿಕೊಂಡು ಬಂದಿರಬೇಕು ಅಥವಾ ಅವಿಚ್ಛಿನ್ನತೆ ಇಲ್ಲದಿದ್ದರೂ ಸಾಹಿತ್ಯದ ಸೃಷ್ಟಿಕಾರ್ಯ ನಡೆದಿರಬೇಕು. ಕೇಂದ್ರ ಸರ್ಕಾರ ಯಾವುದೇ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸಲು ಬೇಕಾದ ಎಲ್ಲ ಮಾನದಂಡಗಳನ್ನು ಕನ್ನಡ ಹೊಂದಿದೆ.

ಮಾನದಂಡ

ಮಾನದಂಡಗಳನ್ನು ಕನ್ನಡ ಭಾಷೆಯಲ್ಲಿ ಹೀಗೆ ಗುರುತಿಸಬಹುದು. ಬಹುಶಃ ಭಾಷಾ ಜಾಗತಿಕ ಚರಿತ್ರೆಯಲ್ಲಿ ಶಿಲ್ಪದಲ್ಲಿ ಕಾವ್ಯರಚನೆ ಮಾಡಿದ ಕಾರ್ಯ ಕನ್ನಡದಲ್ಲಿ ಮಾತ್ರ ೧,೫೦೦ ವರ್ಷಗಳ ಹಿಂದೆಯೇ ನಡೆದ ದಾಖಲೆಯಿದೆ. ಅದನ್ನು ಶ್ರವಣಬೆಳಗೊಳದ ಚಿಕ್ಕ ಬೆಟ್ಟದಲ್ಲಿ ಮತ್ತು ಬಾದಾಮಿಯಲ್ಲಿ ಕಾಣಬಹುದು. ಇದೊಂದು ಅದ್ಭುತ ಇತಿಹಾಸ ಹಾಗೂ ಮಹತ್ವದ ಪುರಾವೆ. ಕನ್ನಡ ಭಾಷೆ ಒಂದೂವರೆ ಸಾವಿರ ವರ್ಷಗಳಿಗಿಂತ ಹಳೆಯ ದೆಂಬುದರ ಬಗ್ಗೆ ಎರಡು ಮಾತಿಲ್ಲ. ಕ್ರಿ.ಪೂ. ೨೫೨ರ ಅಶೋಕನ ಶಾಸನದಲ್ಲಿ ‘ಇಸಿಲ’ ಎಂಬ ಸ್ಥಳನಾಮ ಶಬ್ದವನ್ನು ಪ್ರೊ. ಡಿ.ಎಲ್. ನರಸಿಂಹಾಚಾರ್ ಬಹಳ ಹಿಂದೆಯೇ ಸಂಶೋಧಿಸಿದ್ದಾರೆ. ಮುಂಜೇಶ್ವರದ ಗೋವಿಂದ ಪೈ ಕ್ರಿ.ಪೂ.ದಲ್ಲಿ ರಚಿತವಾದ ಗ್ರೀಕ್ ನಾಟಕದಲ್ಲಿ ಅನೇಕ ಕನ್ನಡದ ಶಬ್ದಗಳನ್ನು ಕಂಡುಕೊಂಡಿದ್ದಾರೆ. ಕ್ರಿ.ಶ.ದಿಂದಲೂ ಶ್ರವಣಬೆಳಗೊಳ ಭಾರತದ ಪ್ರಸಿದ್ಧ ಜೈನ ಯಾತ್ರಾಸ್ಥಳವಾಗಿತ್ತೆಂಬುದನ್ನು ಜೈನ ದಾಖಲೆಗಳು ಸಾರುತ್ತವೆ. ದ್ರಾವಿಡ ಭಾಷೆಯ ಖ್ಯಾತ ವಿದ್ವಾಂಸರಾದ ಡಾ. ಕೃಷ್ಣಮೂರ್ತಿಯವರೇ, ಕ್ರಿ.ಶ. ೪೫೦ರ ‘ಹಲ್ಮಿಡಿ’ ಶಾಸನವನ್ನು ಕನ್ನಡದ ಮೊದಲ ಶಾಸನವೆಂದು ಒಪ್ಪಿಕೊಂಡಿದ್ದಾರೆ. ಶಾತವಾಹನ, ಕದಂಬ, ಗಂಗ ಹಾಗೂ ಬಾದಾಮಿ ಚಾಳುಕ್ಯರ ಕಾಲದಲ್ಲಿ ಕನ್ನಡ ಭಾಷೆ ಜನಭಾಷೆಯಾಗಿತ್ತು ಎಂಬುದಕ್ಕೆ ನೂರಾರು ಶಾಸನಗಳ ಆಧಾರವಿದೆ. ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ (ಕ್ರಿ.ಶ. ೮೧೪ ರಿಂದ ೭೭) ರಚಿತವಾದ ‘ಕವಿರಾಜಮಾರ್ಗ’ ಕನ್ನಡ ಭಾಷೆಯ ಪ್ರಮುಖ ಲಕ್ಷಣ ಗ್ರಂಥವಾಗಿದೆ. ಇದು ಕನ್ನಡದ ಮೊದಲ ಕೃತಿ. ಕನ್ನಡದ ಪ್ರಾಚೀನತೆ ಬಗ್ಗೆ ತುಂಬಾ ಮಹತ್ವದ ವಿಚಾರಗಳನ್ನು ಈ ಗ್ರಂಥ  ನೀಡಿದೆ. ೫೦೦ ವರ್ಷಗಳ ಹಿಂದೆಯೇ ಕನ್ನಡ ಭಾಷೆಯಲ್ಲಿ ಕೃತಿ ರಚನೆಯಾಗಿರಬೇಕೆಂದು ಕವಿರಾಜಮಾರ್ಗದ ಅಧ್ಯಯನದಿಂದ ತಿಳಿಯಬಹುದು.

ಮಾನದಂಡ

ಸಾಹಿತ್ಯದ ಪ್ರಾಚೀನತೆಯ ಜೊತೆಗೆ ಅದರಲ್ಲಿ ಬಂದ ಕೃತಿಗಳು ಮುಂದಿನ ತಲೆಮಾರಿನ ವರೆಗೂ ಆದರ್ಶಪ್ರಾಯವಾಗಿರಬೇಕು ಎಂಬುದು. ಕನ್ನಡ ಮೊದಲ ಕವಿ ಪಂಪನ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯಂ ಅಥವಾ ಪಂಪಭಾರತ ಇಂದಿಗೂ ನಮ್ಮ ಜನಮನದಲ್ಲಿ ಶಾಶ್ವತ ಸ್ಥಾನಗಳಿಸಿವೆ. ರನ್ನ, ಹರಿಹರ, ರಾಘವಾಂಕ, ಚಾಮರಸ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ, ಷಡಕ್ಷರದೇವ ಮೊದಲಾದ ಅನೇಕ ಕವಿಗಳ ಪ್ರಭಾವ ಇಂದು ಬರೆಯುತ್ತಿ ರುವ ಕನ್ನಡದ ಪ್ರಮುಖ ಲೇಖಕರ ಮೇಲೆ ನಿಚ್ಚಳವಾಗಿ ಬಿದ್ದಿರುದನ್ನು ಕಾಣಬಹುದು. ಈ ಪ್ರಾಚೀನ ಸಾಹಿತ್ಯದ ಅಧ್ಯಯನ ನಡೆಸದಿರುವ ಯಾವ ವ್ಯಕ್ತಿಯೂ ಕನ್ನಡದಲ್ಲಿ ಸಮರ್ಥ ಲೇಖಕನಾಗಲು ಸಾಧ್ಯವಿಲ್ಲವೆಂಬಷ್ಟು ನಮ್ಮ ಸಾಹಿತ್ಯ ಪರಂಪರೆ ಸಮೃದ್ಧವಾಗಿದೆ.

ಮಾನದಂಡ

ಆ ಭಾಷೆಯಲ್ಲಿ ರಚಿತವಾದ ಸಾಹಿತ್ಯ ಸೃಷ್ಟಿ ಸ್ವಂತದ್ದಾಗಿರಬೇಕು ಎಂಬುದು. ಪ್ರಾಯಶಃ ಕನ್ನಡ ಸಾಹಿತ್ಯ ಪಂಪನ ಕಾಲದಿಂದಲೂ ತನ್ನ ವಿಶಿಷ್ಟ ಸ್ವಾತಂತ್ರ್ಯಪ್ರಿಯತೆಗೆ ಹೆಸರಾಗಿದೆ. ಪಂಪ ಮಹಾಕವಿ ಕಥಾವಸ್ತುವಿಗಾಗಿ ವ್ಯಾಸನಿಗೆ ಋಣಿಯಾಗಿದ್ದರೂ ಇದೇ ಕಾವ್ಯವನ್ನು ತನ್ನದೇ ಆದ ಚಿಂತನ ಕ್ರಮದಲ್ಲಿ ನಿರ್ವಹಿಸಿದ್ದಾನೆ. ಅಷ್ಟೇ ಅಲ್ಲ ಈ ಪರಂಪರೆಯನ್ನು ಆತ ತನ್ನ ಎಲ್ಲ ಮುಂದಿನ ಮಹಾಕವಿಗಳಿಗೂ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಕಂಡುಬರುವ ವಚನ ಹಾಗೂ ದಾಸ ಸಾಹಿತ್ಯ ಎಂಬ ಎರಡು ಸಾಹಿತ್ಯ ಪ್ರಕಾರಗಳು ಕನ್ನಡ ಭಾಷೆಗೆ ಲಭಿಸಿದ ಅಮೂಲ್ಯ ನಿಧಿ. ವಚನಕಾರರ ಹಾಗೂ ಹರಿದಾಸರ ಸೃಜನಶೀಲತೆ ಇಂದಿಗೂ ಕೂಡ ಗೌರವಿಸುವಂತಹ ಸಂಗತಿ.

ಮಾನದಂಡ

ಭಾಷೆ ತನ್ನ ಅವಿಚ್ಛಿನ್ನತೆಯನ್ನು ಕಾಯ್ದುಕೊಂಡು ಬಂದಿರಬೇಕು ಅಥವಾ ತನ್ನದೇ ಆದ ಬೇರೆ ದಾರಿ ಹಿಡಿದಾದರೂ ಕೂಡ ಸೃಜನಶೀಲತೆಯನ್ನು ಉಳಿಸಿಕೊಂಡಿದ್ದಾಗಿರಬೇಕು. ಕನ್ನಡ ಭಾಷೆ ೨೦೦೦ ವರ್ಷಗಳಿಂದಲೂ ಒಂದೇ ಸಮನಾದ ಅವಿಚ್ಛಿನ್ನತೆಯನ್ನು ಉಳಿಸಿಕೊಂಡು ಬಂದಿರುವುದು ಅಚ್ಚರಿಯ ಸಂಗತಿಯಾಗಿದೆ. ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತ್ಯಂತರಗಳ ನಡುವೆ ಕನ್ನಡನಾಡು ಅನೇಕ ಬದಲಾವಣೆಗಳನ್ನು ಕಂಡಿದೆ. ಕನ್ನಡ ನಾಡಿನಲ್ಲೂ ಅನೇಕ ಕ್ರಾಂತಿಕಾರಕ ಮಾರ್ಪಾಡುಗಳಾಗಿವೆ. ಆದರೆ, ಕನ್ನಡ ಭಾಷೆ ಈ ಎಲ್ಲಾ ಸ್ಥಿತ್ಯಂತರಗಳಿಗೂ ಸ್ಪಂದಿಸಿದ್ದರೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ತನ್ನದೇ ಆದ ಅವಿಚ್ಛಿನ್ನ ಪರಂಪರೆಯನ್ನು ಕಾಯ್ದುಕೊಂಡಿದೆ. ಆಧುನಿಕ ಯುಗದಲ್ಲೂ ಇಪ್ಪತ್ತು ಮಹಾಕಾವ್ಯಗಳು ಕನ್ನಡ ಭಾಷೆಯಲ್ಲಿ ರಚಿತವಾಗಿರುವುದು ಈ ಭಾಷೆಯಲ್ಲಿ ನಡೆದ ಅದ್ಭುತ ಸಾಹಿತ್ಯ ಕ್ರಿಯೆಯಾಗಿದೆ.

ನ್ಯಾಯೋಚಿತ

ಗ್ರೀಕ್, ಲ್ಯಾಟಿನ್, ಪರ್ಶಿಯನ್, ಹೀಬ್ರೂ ಸಂಸ್ಕೃತ ಮೊದಲಾದ ವಿಶ್ವದ ಪ್ರಾಚೀನ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದ ನಂತರ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿತು. ಸಾಹಿತ್ಯ ಸೃಷ್ಟಿಯಲ್ಲಿ ತಮಿಳಿಗಿಂತಲೂ ವಿಭಿನ್ನವಾದ ಪರಂಪರೆ ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಬೇಕಾಗಿರುವುದು ನ್ಯಾಯೋಚಿತ.