ಮಹಾರಾಷ್ಟ್ರದ ಸಂತರು ತಮ್ಮ ಮಾತೃಭಾಷೆಯ ಬಗ್ಗೆ ಪ್ರೀತಿ ಹೊಂದಿದ್ದಕ್ಕಿಂತ ಹೆಚ್ಚಾಗಿ ತಮ್ಮ ಜೀವನವನ್ನು ಉದಾತ್ತೀಕರಿಸಿಕೊಳ್ಳುವುದಕ್ಕೆ ಸಜ್ಜಾಗಿರದ ಶೋಷಿತರ ಹೃದಯವನ್ನು ಆ ಸಂತರ ಭಾಷೆ ಮುಟ್ಟಿದ್ದು ಮುಖ್ಯ ವಿಷಯ. ಹೀಗಾಗಿ ಸಂತವಾಣಿ ಮೇಲ್ವರ್ಗ ಮತ್ತು ಕೆಳವರ್ಗಗಳೆರಡನ್ನೂ ಉದಾತ್ತ ನೈತಿಕ ಮೌಲ್ಯಗಳಿಗೆ ಅಂಟಿಕೊಳ್ಳುವಂತೆ ಪ್ರೇರೇಪಿಸಿತು.

ಜ್ಞಾನೇಶ್ವರನಿಂದ ಸ್ಥಾಪಿತವಾದ ಮತ್ತು ನಾಮದೇವನಿಂದ ಶ್ರೀಮಂತವಾದ ಸಂತ ಪಂಥ ಮಹಾರಾಷ್ಟ್ರದಲ್ಲಿ ಒಂದು ತೀವ್ರ ಸಾಮಾಜಿಕ ಬದಲಾವಣೆಗೆ ಸಾಧನವಾಯಿತು. ಸಮಾಜದ ಕೆಳವರ್ಗಗಳ ಅನೇಕರು ತಮ್ಮ ರಚನೆಗಳಿಂದ ಮರಾಠಿ ಕಾವ್ಯವನ್ನು ಶ್ರೀಮಂತಗೊಳಿಸಿದರು. ಈ ಕಾಲವನ್ನು ದಿವಂಗತ ಆರ್.ಡಿ. ರಾನಡೆಯವರು ‘ಆಧ್ಯಾತ್ಮಿಕ ಪ್ರಜಾಪ್ರಭುತ್ವ ಕಾಲ’ ಎಂದು ಸರಿಯಾಗಿಯೇ ಕರೆದಿದ್ದಾರೆ. ನಾರದರಿಂದ ಹಿಡಿದು ಹಂತಕನ ಗುಂಡಿಗೆ ಬಲಿಯಾಗಿ ‘ರಾಮರಾಮ’ ಎಂದು ಪ್ರಾರ್ಣಾಪಣೆ ಮಾಡಿದ ಮಹಾತ್ಮಗಾಂಧೀಜಿಯವರೆಗೆ ಭಕ್ತಿಮಾರ್ಗ ವನ್ನು ಪುಷ್ಟೀಕರಿಸಿದ ಅನೇಕ ಮಹನೀಯರು ನಮ್ಮ ಇತಿಹಾಸದಲ್ಲಿ ಸೇರಿದ್ದಾರೆ.

ಕನ್ನಡ ನಾಡಿನ ಆರುನೂರು ವರ್ಷಗಳ ಹಿಂದೆ ಸಣ್ಣದೊಂದು ತೊರೆಯಾಗಿ ಹರಿಯತೊಡಗಿದ ದಾಸಪಂಥ ಮಹಾನದಿಯಾಯಿತು. ಅದರಿಂದ ಇಲ್ಲಿನ ನೆಲವೆಲ್ಲ ಫಲವತ್ತಾಯಿತು. ಕಾಲಕ್ರಮದಲ್ಲಿ ನದಿಯು ಸೀಳುಸೀಳಾಗಿ ನಾಡಿನ ಸಂಸ್ಕೃತಿ ಸಾಗರದಲ್ಲಿ ಸೇರಿಕೊಂಡಿತು. ಪುರಂದರದಾಸರ ಕಾಲದಲ್ಲಿ ಇದು ಪ್ರವಾಹಕವಾಗಿ ಹರಿದಿತ್ತು. ಹದಿನೈದು ಹದಿನಾರನೆಯ ಶತಮಾನಗಳಲ್ಲಿ ಅದರ ಓಟವೂ ವಿಸ್ತಾರವೂ ಹಿಗ್ಗಿದವು. ಅನಂತರ ನದಿಯ ರಭಸವು ಕಡಿಮೆಯಾದರೂ ಬರಗಾಲದಲ್ಲಿಯೂ ಬತ್ತದೆ, ನೆಲವನ್ನು ಬಗೆದರೆ ಒಸರುವ ಝರಿಯಂತೆ, ಅಲ್ಲಲ್ಲಿ ಹರಿಯಿತು. ನಮ್ಮ ಕಾಲಕ್ಕೂ ಅದು ಪೂರಾ ಮರೆಯಾಗಿಲ್ಲ. ಮರೆಯಾದೀತೆಂಬ ಆತಂಕವೇನೋ ಇದೆ.

ಪುರಂದರದಾಸರು ದಕ್ಷಿಣಾದಿ ಸಂಗೀತವು ಪರಿಪಕ್ವ ದಿಶೆಯನ್ನು ಮುಟ್ಟಲು ಕಾರಣರಾದರೆಂದು ಅವರನ್ನು ಕರ್ಣಾಟಕ ಸಂಗೀತ ಪಿತಾಮಹರೆಂದು ಪರಿಗಣಿಸಲಾಗಿದೆ. ಕನಕದಾಸರು ಪುರಂದರದಾಸರಂತೆಯೇ ಉಜ್ವಲವಾದ ವ್ಯಕ್ತಿತ್ವವುಳ್ಳವರು. ಕುರುಬರ ಕುಲದವರೆಂಬ ಕಾರಣದಿಂದ ಇವರನ್ನು ಆದರಿಸದವರ ಮೂಗು ಮುರಿದ ವ್ಯಾಸತೀರ್ಥರು ಇವರ ಹಿರಿಮೆಯನ್ನು ಕೊಂಡಾಡಿದ ಉಲ್ಲೇಖವಿದೆ. ಇಂದು ಈ ಪ್ರತ್ಯೇಕತಾ ಭಾವನೆ ಬೆಳೆಯಲು ಯಾರು ಕಾರಣರೋ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಕನಕದಾಸರು ಬಿಡಿಪದಗಳನ್ನಲ್ಲದೆ ಗ್ರಂಥಗಳನ್ನು ಕೂಡ ರಚಿಸಿದ್ದಾರೆ. ಜನಪ್ರಿಯ ವಾದುದು ಭಾಮಿನಿ ಷಟ್ಪದಿಯಲ್ಲಿರುವ ‘ಹರಿಭಕ್ತಿಸಾರ’. ಇದರ ಪದ್ಯಗಳು ಕನ್ನಡ ನಾಡಿನಲ್ಲೆಲ್ಲ ಹರಡಿವೆ. ‘ಮೋಹನ ತರಂಗಿಣಿ’ ‘ರಾಮಧಾನ್ಯಚರಿತೆ’ ‘ನಳಚರಿತ್ರೆ’ ಮತ್ತು ‘ನರಸಿಂಹಸ್ತವ’; ಮೊದಲನೆಯದೂ ಕಡೆಯದೂ ಸಾಂಗತ್ಯ ಶೈಲಿಯಲ್ಲಿವೆ. ಉಳಿದುವು ಭಾಮಿನಿಷಟ್ಪದಿಯಲ್ಲಿವೆ. ಜನಪದ ಭಾಷೆಯ ಪ್ರಯೋಗಗಳನ್ನೇ ಅಳವಡಿಸಿಕೊಂಡು ಕಾವ್ಯ ಗಾಂಭೀರ್ಯಕ್ಕೆ ಕುಂದು ಬರದಂತೆ ಉದಾತ್ತ ಭಾವನೆಗಳನ್ನು ಹೊರ ಹೊಮ್ಮಿಸಿರುವುದು ಕನಕದಾಸರ ವೈಶಿಷ್ಟ್ಯ. ಆದರೂ ಕನಕದಾಸರನ್ನು ಮಹಾಕವಿಯೆಂದು ಏಕೆ ಪರಿಗಣಿಸಿಲ್ಲವೋ, ಇಂದೂ ಯಕ್ಷ ಪ್ರಶ್ನೆಯಾಗಿದೆ!

ಯಾವುದೇ ಪಂಥ ಭಕ್ತಿಪಂಥವನ್ನು ಗುತ್ತಿಗೆ ತೆಗೆದುಕೊಂಡಿದೆಯೆಂದರೆ ಒಪ್ಪಲಾಗದು. ಕೊಂಡುಕೊಳ್ಳುವ ಸಂಸ್ಕೃತಿಯನ್ನು ಅಪಾರ್ಥವಾಗಿ ತಿಳಿದುಕೊಳ್ಳಲಾಗಿದೆ. “ಕೇವಲ ಹುಟ್ಟಿನಿಂದ ಯಾರೂ ಕುಲಜರಾಗುವುಲ್ಲ. ಅದರಲ್ಲೂ ಜಾತೀಯತೆಯ ಆಧಾರದ ಮೇಲೆಯೇ ವ್ಯವಹಾರಗಳು ನಡೆಯುತ್ತಿರುವ ಇಂದಿನ ಸಮಾಜಕ್ಕೆ ಸಂತ ದಾಸ ವಚನಕಾರರು ಮತ್ತು ಮಹಾಕವಿಗಳ ದೃಷ್ಟಿ ಅನಿವಾರ್ಯವಾಗಿದೆ. ಜಾತಿ, ಮತ-ಭೇದವಿಲ್ಲದೆ ಮನುಜಕುಲ ಒಂದೇ ಎಂದು ಭಾವಿಸಿದ ಈ ಹರಿಕಾರರು ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ, ನೈತಿಕತೆಗೆ ಕಾರಣಕರ್ತರಾಗಿದ್ದಾರೆ. ಈ ಜನಾಂದೋಲನವನ್ನೇ, ಅವರು ರಚಿಸಿದ ಕೀರ್ತನೆಗಳನ್ನೇ ಮತೀಯ, ಜಾತೀಯ ಭಾವನೆಗಳನ್ನು ಪ್ರಚೋದಿಸಿ ಪ್ರತ್ಯೇಕತಾ ಭಾವನೆಗಳನ್ನು ವರ್ಧಿಸಲು ಉಪಯೋಗಿಸುತ್ತಿರುವುದು ಸಾಂಸ್ಕೃತಿಕ ಪತನವೇ ಸರಿ” ಸಾಹಿತ್ಯ – ಸಂಸ್ಕೃತಿಯ ವಿಕೇಂದ್ರೀಕರಣ ಸಂತ-ದಾಸ-ವಚನ ಕ್ಷೇತ್ರದಿಂದ ಆಗಿದೆ. ಇದನ್ನು ಸಾಂಸ್ಥೀಕರಣ ಮಾಡಿ ಕಾವ್ಯಸಂಪದ, ಸ್ವೋಪ್ರಜ್ಞತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಧಾರ್ಮಿಕತ್ವವೇ ಪ್ರಧಾನವಾಗಿ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳು ಅಪಹರಿಸಲ್ಪಡುತ್ತಿವೆ. ಸಂತ ಪಂಥ ಸಮಾಜದ ಕೆಳವರ್ಗದಲ್ಲಿ ಹರಿಸಿದ ಪ್ರಜ್ಞಾಲಹರಿ ದಾಸ ಪಂಥದಲ್ಲಿ ಅಷ್ಟೊಂದು ಕ್ರಿಯಾಶೀಲವಾಗಲಿಲ್ಲ, ಏಕೆ? ಶೋಚನೀಯ! ಈ ಬಗ್ಗೆ ಆತ್ಮಾವಲೋಕನ ನಡೆಯಬೇಕಾಗಿದೆ.

ಪ್ರಾಚೀನ ಕಾಲದಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಭಕ್ತಿ ಉಚ್ಛ್ರಾಯ ಸ್ಥಿತಿ ಪಡೆದುಕೊಂಡಿತ್ತು. ಉತ್ತರ ಭಾರತದಲ್ಲೂ ಕೂಡ ಇದು ನಿಚ್ಚಳವಾಗಿ ಪ್ರಭಾವ ಬೀರಿದೆ. ಭಕ್ತಿ ಮಾರ್ಗದಿಂದ ಕೇವಲ ವ್ಯಕ್ತಿಗೆ ಮಾತ್ರ ಅನುಕೂಲವಾಗಿಲ್ಲ; ಸಮಾಜಕ್ಕೂ ಹೆಚ್ಚು ಅನುಕೂಲವಾಯಿತು.

ದೇವರ ದಾಸಿಮಯ್ಯನಂಥ ಒಬ್ಬ ನೇಕಾರ-ಅನುಭಾವಿ, ಕನಕದಾಸರಂಥ ಹಿಂದುಳಿದ ವರ್ಗದ ಮಹಾನುಭಾವ, ತುಕಾರಾಮರಂಥ ರೈತ ಸಮುದಾಯದಿಂದ ಬಂದ ಸಂತ ಹೇಳಿದರೆ ಜನ ನಂಬುತ್ತಾರೆ. ಜನತೆಯನ್ನು ಕಷ್ಟ ಕಾಲದಿಂದ ಮೇಲೆತ್ತಬಲ್ಲ ಶಕ್ತಿ ಭಕ್ತಿಪಂಥ  ಮಹಾನುಭಾವರಿಗೆ ಮಾತ್ರವಿತ್ತು. ಇದೊಂದು ರೀತಿ ಜನಾಂದೋಲನ ಕಾರ್ಯವೆಂದರೆ ತಪ್ಪಲ್ಲ.

ದಾಸ-ಸಂತ-ವಚನ ಸಂಸ್ಕೃತಿಯ ನಿಜವಾದ ಧರ್ಮವು ಜಾತಿ-ಕುಲವನ್ನು ಮೀರಿದುದು. ಭಕ್ತರಾದವರು ಜಗತ್ತಿನ ಯಾವ ಭಾಗದಲ್ಲಿದ್ದರೂ ಒಂದೇ ಜಾತಿ ವರ್ಗಕ್ಕೆ ಸೇರುತ್ತಾರೆ. ಈ ದೃಷ್ಟಿ ಎಲ್ಲಾ ಕಾಲಕ್ಕೂ ಮೌಲ್ಯವಾಗಿ ಉಳಿಯುವಂತಹದು. ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಕುಲದ ಪ್ರಶ್ನೆ ಬಂದಾಗ ಕರ್ಣನು ಕೊಡುವ ಉತ್ತರ ಕನಕದಾಸರ ದೃಷ್ಟಿಗೆ ಹತ್ತಿರವಾಗಿದೆ. ‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಮಣ್ಮುಕುಲಂ’ ಎಂಬ ಮಾತಿನಲ್ಲಿ ಬರುವ ಗುಣಮೌಲ್ಯವೇ ಕುಲವಲ್ಲದೆ, ಉಳಿದವು ಕುಲವಾಗಲಾರವು. ಕೇವಲ ಹುಟ್ಟಿನಿಂದ ಯಾರೂ ಕುಲಜರಾಗುವುದಿಲ್ಲ. ಅದರಲ್ಲೂ ಜಾತೀಯತೆಯ ಆಧಾರದ ಮೇಲೆಯೇ ವ್ಯವಹಾರಗಳು ನಡೆಯುತ್ತಿರುವ ಇಂದಿನ ಸಮಾಜಕ್ಕೆ ಸಂತ-ದಾಸ-ವಚನಕಾರರು ಮತ್ತು ಮಹಾಕವಿಗಳ ದೃಷ್ಟಿ ಅನಿವಾರ್ಯವಾಗಿದೆ. ಜಾತಿ, ಮತ-ಭೇದವಿಲ್ಲದೆ ಮನುಜಕುಲ ಒಂದೇ ಎಂದು ಭಾವಿಸಿದ ಈ ಹರಿಕಾರರು ಜನಸಾಮಾನ್ಯರಲ್ಲಿ ಆತ್ಮವಿಶ್ವಾಸ, ನೈತಿಕತೆಗೆ ಕಾರಣಕರ್ತರಾಗಿದ್ದಾರೆ. ಈ ಜನಾಂದೋಲನವನ್ನೇ, ಅವರು ರಚಿಸಿದ ಕೀರ್ತನೆಗಳನ್ನೇ ಮತೀಯ, ಜಾತೀಯ ಭಾವನೆಗಳನ್ನು ಪ್ರಚೋದಿಸಿ ಪ್ರತ್ಯೇಕತಾ ಭಾವನೆಗಳನ್ನು ವರ್ಧಿಸಲು ಉಪಯೋಗಿಸುತ್ತಿರುವುದು ಸಾಂಸ್ಕೃತಿಕ ಪತನವೇ ಸರಿ.

ವಚನಕಾರರು ಕನ್ನಡ ಕಾವ್ಯದ, ಸಾಹಿತ್ಯ ದಿಗಂತಗಳನ್ನು ವಿಸ್ತರಿಸಿದರು. ಮುಂದಿನ ಸಾಹಿತಿಗಳಿಗೆ ಕನ್ನಡ ಭಾಷೆಯ ಅದ್ಭುತ ಸಾಮರ್ಥ್ಯವನ್ನು ತೆರೆದು ತೋರಿಸಿದರು. ಹೊಸ ಕಾವ್ಯ ವಸ್ತುಗಳನ್ನೂ, ಕಾವ್ಯ ರೂಪಗಳನ್ನೂ ನೀಡಿದರು. ಆ ಕಾಲದ ಸಮಾಜ ವ್ಯವಸ್ಥೆಗೆ ವರ್ಣ ಧರ್ಮವೇ ತಳಹದಿ: ಸಾಂಸ್ಥಿಕ ಅಸಮಾನತೆ, ಮಡಿ ಮೈಲಿಗೆ ಸಂಕೀರ್ಣ ಭಾವ ಮತ್ತು ಜಾತಿ ಪದ್ಧತಿಯ ಈ ಮೂರು ಲಕ್ಷಣಗಳು ಸಮಾಜ ವ್ಯವಸ್ಥೆಗೆ ಆಧಾರಗಳಾಗಿದ್ದುವು. ಮೇಲಿನ ಹಂತಕ್ಕೇರುವುದಕ್ಕೆಂದು ಅಧೀನ ಜಾತಿಯವರು ಪ್ರಯತ್ನಿಸಿದ್ದೇ ಆದರೆ, ಆ ಪ್ರಯತ್ನಗಳು ವರ್ಣಧರ್ಮಕ್ಕೆ ಸೇರಿದ ಚೌಕಟ್ಟಿನಲ್ಲಿ ಮಾತ್ರ ನಡೆಯಬೇಕು. ತಪ್ಪಿದವರಿಗೆ ಧರ್ಮದಂಡ, ರಾಜದಂಡ, ತಲೆದಂಡ ಹೇರುತ್ತಿದ್ದ ಕಾಲ.

ಸಮಕಾಲೀನ ಪ್ರಪಂಚದಲ್ಲಿ ಪ್ರಬಲರಿಗೆ ಅಧೀನರಾಗಿದ್ದ ಬಹುಸಂಖ್ಯಾತರನ್ನೂ ಅವರ ಭದ್ರ ಸೆರೆಯಿಂದ ಪಾರು ಮಾಡಿ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಇತರರೊಂದಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಡುವುದೇ ಬಸವಣ್ಣನವರ ಉದ್ದಿಶ್ಯವಾಗಿದ್ದಿತು. ಅವರು ಸ್ಥಾಪಿಸಬೇಕೆಂದಿದ್ದ ಸಮಾಜವೇ ಶಿವನ ಸಮಾಜ. ಆ ಸಮಾಜ ದೃಷ್ಟಿಯ ಕಾರ‍್ಯದಲ್ಲಿ ಶ್ರದ್ಧೆ, ನಿಷ್ಠೆ, ತಾದಾತ್ಮ್ಯದಿಂದ ಅಂದರೆ ಭಕ್ತಿಯಿಂದ ದುಡಿಯುವವರನ್ನು ಅವರು ಲಿಂಗಪ್ರೇಮಿಯೆಂದೂ, ಜಂಗಮಪ್ರೇಮಿಯೆಂದೂ ಕರೆದರು. ಅಂತಹ ಕಾರ‍್ಯದಿಂದಲೆ ಮುಕ್ತಿ ಅಥವಾ ಐಕ್ಯವಿದೆಯೆಂದು ಬಸವಣ್ಣನವರ ನಂಬುಗೆ ಇತ್ತು.

‘ಮನುಷ್ಯನಲ್ಲಿ ದೇವರು, ದೇವರಲ್ಲಿ ಮನುಷ್ಯ; ಜಗತ್ತಿನಲ್ಲಿ ದೇವರು, ದೇವರಲ್ಲಿ ಜಗತ್ತು, ಸಮುದಾಯದಲ್ಲಿ ವ್ಯಕ್ತಿ, ವ್ಯಕ್ತಿಯಲ್ಲಿ ಸಮುದಾಯ ಅಡಕವಾಗಿವೆ’ ಎಂಬ ಬಸವಣ್ಣನವರ ಈ ಸಂದೇಶ ಅನ್ಯಾಯಗಳಿಗೆ ಈಡಾಗಿ ಬಳಲಿದ, ವಿಭಜಿತ ಮತ್ತು ವಂಚಿತ ಮಧ್ಯಕಾಲೀನ ಜಗತ್ತಿಗೆ ಎಷ್ಟು ಸುಸಂಗತವಾಗಿದ್ದಿತೋ ಅಣ್ವಸ್ತ್ರಗಳ ಯುದ್ಧಕ್ಕೆ ಹೆದರಿ ತಲ್ಲಣಿಸುತ್ತಿರುವ ಆಧುನಿಕ ಜಗತ್ತಿಗೂ ಅಷ್ಟೇ ಸುಸಂಗತವಾಗಿದೆ.

ಭಾರತೀಯ ಧರ್ಮದ ಹೊಸ ಅನ್ವೇಷಣೆ ಮತ್ತು ಉತ್ಖನನ ನಡೆಯಬೇಕು. ಆಗ ಮಾತ್ರ ಕೆಸರಿನ ಕೊಳದಲ್ಲಿ ಸಂಜನಿಸಿದ ಕಮಲವು ಲೋಕಕ್ಕೆ ಮಧು ಮತ್ತು ಪರಿಮಳಗಳನ್ನು ನೀಡುವಂತೆ ಭಾರತೀಯ ಸಂಸ್ಕೃತಿಯ ದಿವ್ಯ ಸಾಗರದಲ್ಲೇ ಜನಿಸಿದ ವಿಶ್ವದ ಮೋಕ್ಷ ಮಧುವಾಗಿ ಜ್ಞಾನಪರಿಮಳವಾಗಿ ಪರಿಣಮಿಸುತ್ತದೆ. ಆಗ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಮೇಲೇರುತ್ತದೆ. ಸಂತ-ದಾಸ-ವಚನ ಜನಾಂದೋಲನವನ್ನು ಜಾತೀಯ ಮತ್ತು ಮತೀಯ ಕೆಸರಿನಿಂದ ಹೊರತರುವ ಮತ್ತೊಂದು ಆಧ್ಯಾತ್ಮ ಪ್ರಜಾಪ್ರಭುತ್ವದ ಸಂಘರ್ಷ ನಡೆಯಬೇಕು.