ಕಳೆದ ಫೆಬ್ರವರಿ ಇಪ್ಪತ್ತೆರಡರಂದು ಕನ್ನಡನಾಡಿನ ಆಧ್ಯಾತ್ಮ ಜ್ಯೋತಿಯೊಂದು ಅಸ್ತಂಗತವಾಯಿತು. ಅವರೇ ಪ್ರೊ. ಎಸ್.ಕೆ. ರಾಮಚಂದ್ರರಾವ್ (ಜನನ ೯-೨-೧೯೨೭) ನಾನು ದೆಹಲಿಯಲ್ಲಿದ್ದ ಕಾರಣ ಅಂದು ಅವರ ಅಂತಿಮ ದರ್ಶನ ಪಡೆಯಲಾಗಲಿಲ್ಲ.

ಕನ್ನಡಿಗರಿಗೆ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರ ಅನೇಕ ಕೃತಿಗಳ ಪರಿಚಯವಿದೆ. ಅವರ ಪಾಂಡಿತ್ಯದ ದರ್ಶನವಿದೆ. ಅವರ ವಾಕ್ಪಟುತ್ವದ ಬಗ್ಗೆ ಅಭಿಮಾನವಿದೆ. ಎಸ್.ಕೆ. ರಾಮಚಂದ್ರರಾವ್‌ರವರು ಶ್ರೇಷ್ಠ ಮಾನವತಾವಾದಿ. ಜ್ಞಾನ ಪ್ರಸಾರದ ಬಗ್ಗೆ ಬದ್ಧತೆಯುಳ್ಳ ವರಾಗಿ ಪ್ರಗತಿಪರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.

ಕಳೆದ ಐದು ದಶಕಗಳಿಂದ ಆಧ್ಯಾತ್ಮ, ತತ್ವಶಾಸ್ತ್ರ, ಸಂಗೀತ, ಸಾಹಿತ್ಯ ಹಾಗೂ ಮನಃಶ್ಶಾಸ್ತ್ರ ಕ್ಷೇತ್ರಗಳನ್ನು ಸಮೃದ್ಧಗೊಳಿಸಿದರು. ಇವರ ಕೃತಿಗಳಲ್ಲಿ ಧರ್ಮ, ನೀತಿ, ಭಕ್ತಿ, ದರ್ಶನ, ಸಮಾಜ, ಆರೋಗ್ಯ, ಪರಿಸರ ಮತ್ತು ಲೋಕನೀತಿಗಳ ಅಪರಿಮಿತ ವ್ಯಾಪ್ತಿಯಿದೆ. ಅನುಭವದ ಶ್ರೀಮಂತಿಕೆಯಿದೆ. ರೀತಿ ನೀತಿಗಳ  ವಿಶ್ಲೇಷಣೆಯಿದೆ, ನೋವು ನಲಿವಿನ ಚಿತ್ರಣವಿದೆ. ಅಂತರಂಗ ಭಾವಗಳ ಮಿಡಿತವಿದೆ. ಸಮನ್ವಯ ದೃಷ್ಟಿಯ ಚಿಂತನಶೀಲತೆಯಿದೆ. ಶ್ರೀರಾಮಚಂದ್ರರಾವ್ ಅವರ ಗುರುಗಳು  ಆಸ್ಥಾನ ವಿದ್ವಾನ್ ಶ್ರೀಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು. ರಾಯರಿಗೆ ವೇದಾಂತ ದರ್ಶನ ಮಾಡಿಸಿದ ಮಹಾನುಭಾವರು. ಅವರಿಂದ ಅನೇಕ ವರ್ಷಗಳ ಕಾಲ ಜ್ಞಾನ ಸಂಪಾದಿಸಿದ ಮೇಲೆ ರಾಮಚಂದ್ರರಾಯರು ಕೇಳಿದರಂತೆ ‘ಗುರುಗಳೇ ತಮಗೆ ಏನು ಗುರುಕಾಣಿಕೆ ಕೊಡಬೇಕು?’ ಅದಕ್ಕೆ ಅವರ ಗುರುಗಳು ‘ನಾನು ನನ್ನ ಗುರುಗಳಿಂದ ಕಲಿತದ್ದನ್ನು ನಿನಗೆ ಕೊಟ್ಟೆ, ನೀನು ಇದೇ ರೀತಿ ನಿನ್ನ ಮುಂದಿನವರಿಗೆ ವಿದ್ಯೆಯನ್ನು ಕ್ಷೇಮವಾಗಿ ದಾಟಿಸು’ ಎಂದು ಉತ್ತರಿ ಸಿದರು. ಭಾರತದ ಸಾಮಾಜಿಕ ಚರಿತ್ರೆಯನ್ನು ಸ್ಥೂಲವಾಗಿ ಅವಲೋಕಿಸಿದರೆ ನಾವು ಕಲಿತದ್ದನ್ನು ಮುಂದಿನ ಪೀಳಿಗೆಯವರಿಗೆ ಸಮರ್ಪಕವಾಗಿ ಕೊಡದಿದ್ದುದೇ ಈ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ. ಪ್ರೊ. ಎಸ್.ಕೆ. ರಾಮಚಂದ್ರರಾಯರು ಮಾತ್ರ ಗುರುವಿನಾಜ್ಞೆ ಯನ್ನು ತಪ್ಪದೇ ಪಾಲಿಸಿದರು.

ಸಾರ್ವಕಾಲಿಕ ಮತ್ತು ಧರ್ಮ ನಿರಪೇಕ್ಷತೆಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಸಾರಿದ ಅವರೇ ಹೇಳುವಂತೆ : “ಯಾರಿಗಾಗಲಿ, ತನ್ನ ಧರ್ಮದ ದೇವರೇ ದಿಟ ಎನ್ನುವ ಹಟ ಸರಿಯಲ್ಲ. ಪ್ರತಿಯೊಂದು ಧರ್ಮದಲ್ಲೂ ಪರಿಪೂರ್ಣವಾದ ಏಕೈಕವಾದ ಪರತತ್ತ್ವದ ಸೊಲ್ಲೆ ಇರುವುದು. ಸರ್ವಧರ್ಮಸಮನ್ವಯ ಎಂಬ ಮಾತನ್ನು ಆಗಾಗ ಕೇಳುತ್ತೇವೆ. ಇದರ ಅರ್ಥವೇನು? ಎಲ್ಲ ಧರ್ಮಗಳನ್ನೂ ಕೂಡಿಸಿಕೊಳ್ಳಬೇಕೆಂದಲ್ಲ. ಎಲ್ಲ ಧರ್ಮಗಳೂ ಸಮಾನವಾದುವು; ಅವುಗಳಲ್ಲಿ ಒಂದು ಹೆಚ್ಚು ಇನ್ನೊಂದು ಕಡಿಮೆ. ಒಂದು ದಿಟ ಇನ್ನೊಂದು ಹುಸಿ ಎನ್ನುವುದಿಲ್ಲ. ಒಂದರಲ್ಲಿ ಇಲ್ಲದ್ದನ್ನ ಇನ್ನೊಂದರಿಂದ ಆಯ್ದುಕೊಳ್ಳಬೇಕು ಎಂಬರ್ಥವೂ ಇರದು”.

ಅವರ ಪ್ರಗತಿಪರ ವಿಚಾರಗಳು ಬರವಣಿಗೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಅವುಗಳಲ್ಲಿ ಆಷಾಢಭೂತಿತನವಿಲ್ಲ. ಅವರ ಮಾತಿನಲ್ಲೇ ಹೇಳುವುದಿದ್ದರೆ : “ನಮ್ಮ ನಾಡಿನ ಸಂಸ್ಕೃತಿಯ ಮೇಲ್ಮೆಗೆ ಕಾರಣರಾದವರಲ್ಲಿ ಅತಿ ಮುಖ್ಯರೆಂದರೆ ಶ್ರೀರಾಮ, ಶ್ರೀಕೃಷ್ಣ. ಇವರನ್ನು ನಾವು ಅವತಾರ ಪುರುಷರೆಂದು ಇಂದಿಗೂ ಸನ್ಮಾನಿಸುತ್ತಿರುವುದು ಸಹಜವೇ. ಅವರ ಹಿರಿಮೆಯನ್ನು ಕುರಿತ ಅರಿವು ನಮ್ಮ ಜನರಲ್ಲಿ ಇನ್ನೂ ಹೆಚ್ಚಬೇಕು. ಆದರೆ ಅರಿವು ಕುರುಡುನಂಬಿಕೆಯಿಂದಾಗಲೀ ಭಾವುಕತೆಯಿಂದಾಗಲೀ ಬಲಗೊಳ್ಳಲಾರದು; ಐತಿಹಾಸಿಕ ಪ್ರಜ್ಞೆ, ಯುಕ್ತಾಯುಕ್ತ ವಿವೇಚನೆ, ವಿಮರ್ಶೆಗಳು ಅರಿವಿನ ಆಳವನ್ನೂ, ಗುಣವನ್ನೂ ಹೆಚ್ಚಿಸಬಲ್ಲುವು”.

‘ಶ್ರೀರಾಮಾಯಣ ಮಹಾನ್ವೇಷಣಂ’ ಕಾವ್ಯವನ್ನು ಬರೆಯಲು ನಾನು ಸಂಕಲ್ಪಿಸಿದ ಮೇಲೆ ನನ್ನ ನೆರವಿಗೆ ಬಂದ ವಿದ್ವಾಂಸರಲ್ಲಿ ಪ್ರೊ. ಎಸ್.ಕೆ. ರಾಮಚಂದ್ರರಾಯರು ಒಬ್ಬರು. ಮೊದಲ ಸೋಪಾನ ರಚನೆಯಿಂದಲೇ ನಮ್ಮಿಬ್ಬರ ಮಾತುಕತೆ ಪ್ರಾರಂಭವಾಯಿತು. ಕಾವ್ಯದ ಐದು ಸೋಪಾನಗಳು ನಿರ್ವಿಘ್ನವಾಗಿ ಮುಗಿಯುವ ತನಕ ಈ ಮಾತುಕತೆ ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿತ್ತು. ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರಿಗೆ ಜ್ಞಾನವನ್ನು ಮತ್ತೊಬ್ಬರೊಂದಿಗೆ ಹಂಚಬೇಕೆಂಬ ತುಡಿತ ಅತೀವವಾಗಿತ್ತು. ವಾಲ್ಮೀಕಿ ರಾಮಾಯಣ ಕುರಿತಂತೆ ವಿಷಯವನ್ನು ಎತ್ತಿಕೊಂಡರೆ ಅದಕ್ಕೆ ಸಂಬಂಧಪಟ್ಟ ನೂರಾರು ವಿಚಾರಗಳನ್ನು ಹೇಳಿ ನಮ್ಮನ್ನು ಜ್ಞಾನೈಶ್ವರ್ಯವಂತರನ್ನಾಗಿ ಮಾಡುತ್ತಿದ್ದರು.

ಅಪಾರವಾದ ಪಾಂಡಿತ್ಯದಿಂದ ಅವರು ಸಂಪದ್ಭರಿತರಾಗಿದ್ದರೂ ಅದನ್ನು ಅಹಂಕಾರಕ್ಕೆ ಬಳಸಿಕೊಳ್ಳುತ್ತಿರಲಿಲ್ಲ. ಶ್ರೇಷ್ಠವಿದ್ಯೆಯ ಲಕ್ಷಣ ಸೌಜನ್ಯ ಎಂಬುದನ್ನು ತಮ್ಮ ನಡೆ ನುಡಿ ಯಿಂದ ತೋರಿಸಿಕೊಟ್ಟಿದ್ದರು. ‘ಶ್ರೀರಾಮಾಯಣ ಮಹಾನ್ವೇಷಣಂ’ ಕಾವ್ಯದ ತೃತೀಯ ಸೋಪಾನದ ಬಿಡುಗಡೆಗೆ ಆಗಮಿಸಿ ಮಹಾಕಾವ್ಯದ ಕುರಿತು ಮೌಲ್ಯಯುತ ಮಾತು ಗಳನ್ನಾಡಿದ್ದರು.

ಪ್ರೊ. ಎಸ್.ಕೆ. ರಾಮಚಂದ್ರರಾಯರ ಬದುಕು, ಸಾಧನೆ ಹಾಗೂ ಸಿದ್ದಿಗಳನ್ನು ಗಮನಿಸಿದಾಗ ಒಂದು ಜೀವಿತದಲ್ಲಿ ಇಷ್ಟೊಂದೆಲ್ಲ ಸಾಧನೆ ಮಾಡಲು ಸಾಧ್ಯವೇ ಎಂಬ ಉದ್ಧಾರ ಹೊರಡುತ್ತದೆ. ಬಾಲ್ಯದಲ್ಲೇ ತಂದೆ ಕೃಷ್ಣನಾರಾಯಣರವರಿಂದ ಸಂಸ್ಕೃತ ಭಾಷೆಯ ವ್ಯಾಸಂಗಕ್ಕೆ ಭದ್ರ ಅಡಿಪಾಯ ದೊರೆಯಿತು. ವೀಣಾವಾದನ ಹಾಗೂ ಚಿತ್ರಕಲೆಯಲ್ಲಿ ಅಪಾರ ಪಾಂಡಿತ್ಯ ಪಡೆಯಲು ಅವರ ತಂದೆಯೇ ಕಾರಣಕರ್ತರಾಗಿದ್ದರು. ಡಾ. ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು ಸಾಹಿತ್ಯ ಹಾಗೂ ಸಂಗೀತದಲ್ಲಿ ರಾಯರಿಗೆ ಪ್ರಭುತ್ವ ನೀಡಿದರು.  ಪೂಜ್ಯ ಚಂದ್ರಶೇಖರ ಭಾರತಿ ಸ್ವಾಮಿಗಳಿಂದ ಅದ್ವೈತ ಸಿದ್ಧಾಂತದ ಪರಿಚಯವಾಯಿತು. ಹೆಮ್ಮಿಗೆ ದೇಶಿಕಾಚಾರ್ಯರಿಂದ ಆಳ್ವಾರ್‌ರವರ ಸಂಪರ್ಕ ದೊರೆಯಿತು. ಕಾಲೇಜು ವ್ಯಾಸಂಗದ ವೇಳೆಯಲ್ಲೇ ಪಾಳೀ, ಪ್ರಾಕೃತ ಭಾಷೆಗಳ ಮೇಲೆ ಪ್ರಭುತ್ವ ಪಡೆದರು.                          ಡಾ. ಗ್ರಾಫೆ ಎಂಬ ಪಾಶ್ಚಾತ್ಯ ವಿದ್ವಾಂಸ ಫ್ರೆಂಚ್ ಹಾಗೂ ಜರ್ಮನಿ ಭಾಷೆಯನ್ನು ಕಲಿಸಿಕೊಟ್ಟ. ದಲೈಲಾಮರ ದರ್ಶನದಿಂದ ಟಿಬೇಟ್ ಭಾಷೆಯ ಜೊತೆಗೆ ಪಂಚಕ್ರಮ ಎಂಬ ಬೌದ್ಧ ಗ್ರಂಥದ ಅಧ್ಯಯನ ಪೂರ್ಣವಾಯಿತು. ಬರೋಡಾದ ಜಿನವಿಜಯಮುನಿಗಳ ಸನ್ನಿಧಿಯಲ್ಲಿ ಜೈನಧರ್ಮದ ದರ್ಶನವಾಯಿತು. ಕಲ್ಕತ್ತೆಯಲ್ಲಿದ್ದ ಸೋದರ ಮಾವನ ಮನೆಗೆ ಹೋದಾಗ ಬಂಗಾಳಿ ಕಲಿತು ಮೂಲದಿಂದಲೇ ಶ್ರೀರಾಮಕೃಷ್ಣ ಪರಮಹಂಸರ ವಚನಾಮೃತವನ್ನು ಕನ್ನಡಕ್ಕೆ ಅನುವಾದಿಸಿದರು. ಮೂಲತಃ ಮಾಧ್ವ ಸಿದ್ಧಾಂತದ ಅನುಯಾಯಿಯಾದ ಎಸ್.ಕೆ. ರಾಮಚಂದ್ರರಾವ್‌ರವರು ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ, ಜೈನ, ಬೌದ್ಧ, ಸಾಂಖ್ಯ, ಯೋಗ, ಆಗಮ, ಶಿಲ್ಪ, ವ್ಯಾಕರಣ, ಸಂಗೀತ, ಚಿತ್ರಕಲೆ ಮೊದಲಾದ ಹತ್ತಾರು ಜ್ಞಾನ ಕ್ಷೇತ್ರಗಳಲ್ಲಿ ಅಪಾರ ವಿದ್ವತ್ತುಗಳಿಸಿದರು. ಮನಃಶ್ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಎಸ್.ಕೆ. ರಾಮಚಂದ್ರರಾವ್ ಅವರು ತಮ್ಮ ವಿದ್ವತ್ತು ಪ್ರಖರತೆಯಿಂದಾಗಿ ಹಳೆಯ ಕಾಲದ ವಿದ್ವಾಂಸರನ್ನು ನೆನಪಿಗೆ ತರುತ್ತಿದ್ದರು.

ಭಾರತೀಯ ದೇವಾಲಯಗಳ ಜಾನಪದ ಮೂಲದ ಸಾಕ್ಷಾತ್ಕಾರವನ್ನು ಮಾಡಿದ್ದಾರೆ. ನಾಗರಿಕತೆ-ಜಾನಪದ, ಮೇಲು-ಕೀಳು ವರ್ಗದ ಬಗ್ಗೆ ಅವರು ಮಾಡಿದ ವಿಶ್ಲೇಷಣೆ ಅದ್ಭುತ “ನಾವು ಹೇಗೋ ಸಭ್ಯತೆಯ ಜಾಲವನ್ನು ಬೆಳೆಸಿಕೊಂಡು ಈ ಹಂತವನ್ನು ದಾಟಿಬಿಟ್ಟೆವು. ನಾಗರಿಕತೆಯ ವೇಷ ತೊಟ್ಟೆವು. ಈಗಲೂ ಈ ಹಂತದ ಪ್ರಧಾನ ವಿವರಗಳನ್ನು ಉಳಿಸಿ ಕೊಂಡು ಬಂದಿರುವ ಜನ ಕಾಲದ ದೃಷ್ಟಿಯಿಂದ ಹಿಂದುಳಿದವರು ಅಷ್ಟೆ. ಉಳಿದ ಇನ್ನಾವ ಮಾಪನದಿಂದಲೂ ಅವರು ಕೀಳು ಎನ್ನುವ ಹಾಗಿಲ್ಲ. ಧರ್ಮ, ವೈಯಕ್ತಿಕ ಆಚಾರ, ಸಾಮಾಜಿಕ ವ್ಯವಹಾರ, ಭಾವನೆಗಳು, ಕಲೆ, ಕೈಕೆಲಸ ಎಲ್ಲದರಲ್ಲಿಯೂ ಅವರ ಹಿರಿಮೆಯನ್ನು ಕಂಡುಕೊಳ್ಳುವ ಅವಕಾಶ ಈಚೆಗೆ ಹೆಚ್ಚುತ್ತ ಬಂದಿದೆ. ನಮ್ಮಲ್ಲಿ ಮಾಯವಾಗಿರುವ ಹಲವು ಮಾನವೀಯ ಮೌಲ್ಯಗಳು ಅವರಲ್ಲಿ ಇನ್ನೂ ಉಳಿದಿವೆ. ನಮ್ಮ ನಗರ ಆಚಾರ-ವ್ಯವಹಾರಗಳಲ್ಲಿಯೂ ಈ ಹಿಂದಣ ಬುಡಕಟ್ಟಿನ ವಿವರಗಳು ಅಲ್ಲಲ್ಲಿ ಅಡಿಗಡಿಗೆ ನುಸುಳಿಕೊಂಡು ಬರುತ್ತವೆ”.

ಕನ್ನಡ, ಇಂಗ್ಲಿಷ್, ಸಂಸ್ಕೃತ, ಪಾಳೀ ಭಾಷೆಗಳಲ್ಲಿ ರಾಮಚಂದ್ರರಾವ್‌ರವರು ಸುಮಾರು ನೂರ ಇಪ್ಪತ್ತೈದಕ್ಕೂ ಹೆಚ್ಚಿನ ಗ್ರಂಥಗಳನ್ನು ರಚಿಸಿದ್ದಾರೆ. ವೇದಾಂತ, ಬೌದ್ಧ ಮತ್ತು ಜೈನ ಧರ್ಮಗಳ ಮಹತ್ವ. ಮಹಾಕಾವ್ಯಗಳಾದ  ರಾಮಾಯಣ ಮತ್ತು ಮಹಾಭಾರತ, ಇತಿಹಾಸ, ಕಾವ್ಯಮೀಮಾಂಸೆ, ಜಾನಪದ, ಆಯುರ್ವೇದ, ಸಮಾಜಶಾಸ್ತ್ರ, ಮನಃಶ್ಶಾಸ್ತ್ರ, ಹರಿದಾಸ ಸಾಹಿತ್ಯ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ – ಹೀಗೆ ನೂರಾರು ಜ್ಞಾನ ಕ್ಷೇತ್ರಗಳಲ್ಲಿ ಅವರ ಪ್ರತಿಭೆ ಹರಿದಿದೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಬಿಡಿ ಲೇಖನಗಳನ್ನು ರಾಯರು ಬರೆದಿದ್ದಾರೆ.

ಮ್ಯಾಕ್ಸ್‌ಮುಲ್ಲರ್‌ನ ನಂತರ ಋಗ್ವೇದವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದವರು. ನಾಲ್ಕು ಸಂಪುಟಗಳಲ್ಲಿ ಪುರಂದರ ಸಾಹಿತ್ಯವನ್ನು ಹಿಡಿದಿಟ್ಟಿದ್ದಾರೆ. ‘ಮೂರ್ತಿಶಿಲ್ಪ; ನೆಲೆ-ಹಿನ್ನೆಲೆ’, ‘ಭಾರತದ ದೇವಾಲಯ; ನೆಲೆ-ಹಿನ್ನೆಲೆ’ ಕೃತಿಗಳ ಮೂಲಕ ಭಾರತೀಯ ಸಂಸ್ಕೃತಿ ಯಲ್ಲಿ ದೇವಾಲಯಗಳ ಮಹತ್ವವನ್ನು ಕುರಿತು ಸಮರ್ಪಕವಾಗಿ ವಿಶ್ಲೇಷಿಸಿದ್ದಾರೆ. ‘ವೇದಾಂತ’, ‘ಆಯುರ್ವೆದ’, ‘ಸಂಗೀತ’, ‘ಚಿತ್ರಕಲೆ’, ‘ಕಾಷ್ಠಶಿಲ್ಪ’, ‘ಮನಶ್ಶಾಸ್ತ್ರ’, ಮೊದಲಾದ ಕ್ಷೇತ್ರಗಳಿಗೂ ಇವರ ಕಾಣಿಕೆ ದೊಡ್ಡದು.

ಪ್ರೊ. ಎಸ್.ಕೆ. ರಾಮಚಂದ್ರರಾಯರ ಸರಳ ಸ್ವಭಾವದಂತೆ ಅವರ ಕೃತಿಗಳೂ ಸಹ ನಿರಾಡಂಬರ ಸುಂದರಿಯಂತಿವೆ. ನೇರ ಹಾಗೂ ಸರಳವಾಗಿ ವಿಷಯ ಪ್ರತಿಪಾದನೆ ಮಾಡಿ ಮೊದಲ ನೋಟದಲ್ಲೇ ಓದುಗರನ್ನು ಸೆಳೆಯುವ ಅದ್ಭುತ ಕಲಾಗಾರಿಕೆ ಪ್ರೊ. ಎಸ್.ಕೆ. ರಾಮಚಂದ್ರರಾಯರಲ್ಲಿದೆ.

ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರ ಎಲ್ಲಾ ಪುಸ್ತಕಗಳು ಹಾಗೂ ಬಿಡಿ ಲೇಖನಗಳು ಒಂದೆಡೆ ಸಂಗ್ರಹ ರೂಪದಲ್ಲಿ ಬರಬೇಕು. ಈ ಕಾರ್ಯದಿಂದಾಗಿ ಕನ್ನಡನಾಡಿನಲ್ಲಿ ಮುಂದೆ ಸಂಶೋಧನೆ ಕೈಗೊಳ್ಳುವವರಿಗೆ ಅವರ ಕೃತಿಗಳಿಂದ ಮಾರ್ಗದರ್ಶನ ದೊರೆಯುತ್ತದೆ.

ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಯಾವುದೇ ಮತ, ಸಿದ್ಧಾಂತ ಹಾಗೂ ತತ್ವಗಳಿಗೆ ಸೀಮಿತರಾಗದೆ ಜ್ಯೋತಿಯಿದ್ದೆಡೆ ಜ್ಞಾನವಿರುತ್ತದೆಂಬ ನಂಬಿಕೆಯೊಂದಿಗೆ ಹೆಜ್ಜೆ ಹಾಕಿ ಸತ್ಯದ ಜ್ಯೋತಿಯ ಸಾಕ್ಷಾತ್ಕಾರ ಪಡೆದ ಧೀಮಂತ ವಿಶ್ವಮಾನವರು. ಭಾರತೀಯ ಸಾಂಸ್ಕೃತಿಕ ಪರಂಪರೆಯ ಓರ್ವ ಪ್ರವರ್ತಕರು.