ಕಾವ್ಯದ “ಋಜು” ಮಾತೇ. ಅದರ ಪ್ರಾಮಾಣಿಕತೆಯ ಲಕ್ಷಣವೇ, – ರಸ. ಇದೇ ಕಾವ್ಯದ ಸತ್ಯ. ಗಣಿತಜ್ಞನಿಗೆ ಒಂದಕ್ಕೊಂದು ಸೇರಿದರೆ ಎರಡೆಂಬುದು ಸತ್ಯ; ಕಾವ್ಯಜ್ಞನಿಗೆ ಸಾಲೊಮನ್ ದೊರೆಗಿದ್ದ ಅಂತರ್‌ದೃಷ್ಟಿಯು ಸತ್ಯ. ಸಾಲೊಮನ್ನನ ಮುಂದೆ ಇಬ್ಬರು ಹೆಂಗಸರು ಒಂದು ಮಗುವನ್ನು ತಂದಿರಿಸಿ, ಅದು ನನ್ನದು ತನ್ನದೆಂಬ ಜಗಳವನ್ನು ವಿಮರ್ಶೆಗೊಡ್ಡಿದಾಗ, ಆತನು ಆ ಮಗುವನ್ನೆರಡಾಗಿ ಸೀಳಿ ಹಂಚುವೆನೆನ್ನಲು, ಆಗ ಯಾರು ಅದು ಬೇಡವೆಂದು ಬೇಡಿಕೊಂಡಳೋ ಅವಳೇ ಅದರ ನಿಜವಾದ ತಾಯಿ ಎಂದು ತೀರ್ಮಾನಿಸಿದಂತೆ.

ಯಾವುದೇ ಕೃತಿ ಒಂದು ಕಾಲಮಾನ ದೇಶಮಾನದ ಜನಮನೋಜಗತ್ತಿಗೆ ಪ್ರಸ್ತುತ ಎನ್ನಿಸಬೇಕಾದರೆ ಆ ಕಾಲದೇಶಗಳ ಅಂತರಾಳದಲ್ಲಿ ಪ್ರವಹಿಸುವ ವಿಶಿಷ್ಟ ವಿಚಾರಗಳ ಜೀವರೇಖೆಗಳನ್ನು ತನ್ನಲ್ಲಿ ಅತ್ಯಂತ ಸಹಜವಾಗಿ ಧಾರಣ ಮಾಡಿಕೊಂಡಿರಬೇಕಾಗುತ್ತದೆ. “ಪ್ರತಿಯೊಬ್ಬ ಕವಿಯೂ ಅಂದಂದಿನ ಕಾಲದೇಶಗಳ ಯಾವುದೋ ಒಂದು ಬಿಂದುವಿನಲ್ಲಿ ಬದುಕಿರುವ ಕಾರಣ ಅವನು ಅಂದಿನ ಶತಮಾನದ ಸತ್ವದಿಂದ ಅನಿವಾರ‍್ಯವಾಗಿ ಬದ್ಧನಾಗಿ ರುತ್ತಾನೆ. ಆದಕಾರಣ ಅವನ ಕೃತಿ ಅವನಿಗಿಂತ ಹಿಂದಿನ ಶತಮಾನದ ಕವಿಕೃತಿಗಳಿಂದ ಮತ್ತು ಅವನ ನಂತರದ ಮುಂದಿನ ಶತಮಾನದ ಕವಿಕೃತಿಗಳಿಂದ ಸಹಜವಾಗಿಯೇ ಬೇರೆಯಾಗಿರುತ್ತದೆ. ಎಂದರೆ ಪ್ರತಿಯೊಂದು ಶತಮಾನವೂ ತನ್ನದೇ ಆದ ‘ಸಮಕಾಲೀನತೆ’ ಯನ್ನು ಅಂದಂದಿನ ಕೃತಿಗಳಲ್ಲಿ ಪ್ರಕಟಪಡಿಸಿಕೊಂಡಿದೆ. ಕಾಲದಿಂದ ಕಾಲಕ್ಕೆ ಜಗಜೀವನ ದಲ್ಲಾದ ಧಾರ್ಮಿಕ, ರಾಜಕೀಯ, ಸಾಮಾಜಿಕ ಬದಲಾವಣೆಗಳಿಂದ ಆಯಾ ಕಾಲದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ. ಅದರ ಪರಿಣಾಮವಾಗಿ ಹೊಸ ಮೌಲ್ಯಗಳೂ, ಜೀವನದೃಷ್ಟಿ ಗಳೂ ಕಾಣಿಸಿಕೊಳ್ಳುತ್ತವೆ. ಅಂದಂದಿನ ಈ ಸಮಕಾಲೀನತೆಯನ್ನು ಕವಿಜನ್ಯ ಪ್ರಜ್ಞೆ ಗ್ರಹಿಸಿ ಅದಕ್ಕೆ ಅನುಗುಣವಾದ ಅಭಿವ್ಯಕ್ತಿಯನ್ನು ನೀಡುತ್ತದೆ”.

ಕೃತಿ ರಚನೆಯಂತೆ ಕೃತಿಯ ರಸಾಸ್ವಾದನೆಯು ಒಂದು ಸೃಷ್ಟಿ. ಸೃಷ್ಟಿ ಕಾರ್ಯವಲ್ಲದೆ ಸರ್ವಕರ್ಮಗಳೂ ನೀರಸವಾಗುತ್ತದೆ. ಆದ್ದರಿಂದ ಸಾಹಿತ್ಯ ಓದುಗರ ಪ್ರತಿಭೆಯಲ್ಲಿ ಅದು ಮತ್ತೊಮ್ಮೆ ಸೃಷ್ಟಿ ಪಡೆಯುತ್ತದೆ.

ಜ್ಞಾನದ ಮೂಲವನ್ನು ಬೆಳಕಿನ ಪ್ರತಿಮೆಯಲ್ಲಿ ಹುಡುಕುವ ಬದಲು ಕವಿ ಕತ್ತಲೆಯ  ನೆಲೆಯನ್ನು ಅಗೆಯುವ ಪ್ರಯತ್ನ. ಬದುಕಿನ ಬೇರುಗಳನ್ನು ಕಿತ್ತುನೇಡುವ ವರಾಹ ಪ್ರಕೃತಿ. ಸಾಹಿತ್ಯ ಸೃಷ್ಟಿ – ವಚನ ಸಾಹಿತ್ಯ – ಬರಹಗಾರರ ಮತ್ತು ಮಾತುಗಾರರ ಜಗತ್ತಿನ ಸಂಗಮ ಹೊಸ ಸಂಸ್ಕೃತಿ – ಶರಣ ಸಂಸ್ಕೃತಿ – ಕೇವಲ ಧರ್ಮ ಸಂಸ್ಥಾಪಕರಲ್ಲ. ಸಮಾಜ ಸುಧಾರಕರಲ್ಲ. ವಚನ-ಸೃಜನಶೀಲತೆ. ಜಗತ್ತಿನ ಅತ್ಯಂತ ಶ್ರೇಷ್ಠ ಕವಿ – ಕಾವ್ಯಗುಣ, ಮಾನವತೆ. ಬರೀ ಒಣ ನೀತಿ ವಾಕ್ಯಗಳಲ್ಲ ರಸಭರಿತ ಕಾವ್ಯ. ಕನ್ನಡ ಭಾಷೆ – ಸಂಸ್ಕೃತಿ ಬೆಳೆಸಿದ ಅನನ್ಯತೆ. ಸಮಷ್ಟಿಯ ಬದುಕಿನಿಂದ ಹೊರತಾದ ಬದುಕು ಲೇಖಕನಿಗೂ ಇಲ್ಲ ಎನ್ನುವ ಕಲ್ಪನೆ ಆಧುನಿಕ ವಿಚಾರ ವಿಕಾಸ ಕ್ರಮದಲ್ಲಿ ಅನಿವಾರ್ಯ.

ಇಬ್ರಾಹಿಂ ಆದಿಲ್ ಶಾ ಡಕನಿ ಉರ್ದುವಿನಲ್ಲಿ ಒಂದು ಕಾವ್ಯ ಬರೆದಿದ್ದಾನೆ. ಇವನು ಸರಸ್ವತಿ, ಗಣಪತಿ, ಶಿವಪಾರ್ವತಿ, ಇವರ ಬಗ್ಗೆ ಒಂದೊಂದು ಪ್ರಾರ್ಥನ ಶ್ಲೋಕವನ್ನು ‘ಕಿತಾಬೇ ನವರಸ’ದಲ್ಲಿ ಬರೆದಿದ್ದಾನೆ.

ನವರಸ ಪುರವೆಂದು ಅವನು ಕಟ್ಟಿದ – ಸಂಗೀತ ಮಹಲ್ ಕಟ್ಟಿದ ಸ್ಥಳದಲ್ಲಿ;

ಭಾಷೆ ಬೇರೆ ಬೇರೆಯಾದರೇನು ಭಾವ ಒಂದೇ
ಎಲ್ಲಿಯ ಮುಸಲ್ಮಾನ ಎಲ್ಲಿಯ ಬ್ರಾಹ್ಮಣ
ಇಬ್ರಾಹಿಂಗೆ ಬೇಕಾದುದು ವಿದ್ಯೆಯೊಂದೇ
ಅದಕ್ಕಾಗಿ ನೀನು ಒಂದೇ ಮನಸ್ಸಿನಿಂದ ಸರಸ್ವತಿಯನ್ನು ಆರಾಧಿಸು ಎಂದು ಸಾರಿದ.

ಇವನು ಅಕ್ಬರನ ಸಮಕಾಲೀನ. ಅಕ್ಬರ ರಾಜಕೀಯವಾಗಿ ಹಿಂದೂ ಮುಸ್ಲಿಂರನ್ನು ಒಂದುಮಾಡಲು ಪ್ರಯತ್ನಿಸಿದ. ಆದರೆ ಇಬ್ರಾಹಿಂ ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿ ಒಂದುಗೂಡಿಸಲು ಪ್ರಯತ್ನಿಸಿದ. ಅವನ ಕಾಲದಲ್ಲಿ ಮತಾಂತರಕ್ಕೆ ಉತ್ತೇಜನ ನೀಡಿಲ್ಲ.

‘ವಿಶ್ವಮಾನವ’, ಜಗದ ಕವಿ, ‘ಮನುಜಕುಲ ತಾನೊಂದೆವಲಂ’ ಎಂದು ಮೊದಲು ವಿಶ್ವಕ್ಕೆ ಸಾರಿದವನು ಕನ್ನಡದ ಆದಿಕವಿ ಪಂಪ (ಕ್ರಿ.ಶ. ೯೪೧). ಅನಂತರ ಹದಿಮೂರನೆಯ ಶತಮಾನದಲ್ಲಿ ಶರಣ ಅಣ್ಣ ಬಸವಣ್ಣ ‘ಮನುಜಕುಲ’ವನ್ನು ಬೆಳೆಸಲು ಪ್ರಯತ್ನಿಸಿದರು. ವಿಶ್ವಸಾಹಿತ್ಯದಲ್ಲಿಯೇ ಕನ್ನಡ ಕವಿಗಳು ‘ವಿಶ್ವಮಾನವ’ರಾಗಬೇಕೆಂದು ದನಿಯೆತ್ತಿರುವುದು ಕರ್ನಾಟಕಕ್ಕೆ ಸಂದ ಗೌರವವಾಗಿದೆ.

ನಾನೃಷಿ ಕುರುತೇ ಕಾವ್ಯಂ ಋಷಿಯಲ್ಲದವನು ಕವಿಯಾಗಲಾರ ಎಂಬುದೊಂದು ಆರ್ಯೋಕ್ತಿ. ಧ್ಯಾನ, ತಪಸ್ಸು, ನಿರಂತರ ಚಿಂತನೆ. ತನ್ನ ಚಿಂತನೆಯ ಮಂಥನ ಇವುಗಳು ಋಷಿ ಮತ್ತು ಕವಿಗಳಿಬ್ಬರಲ್ಲಿಯೂ ಇರುತ್ತವೆ. ಧ್ಯಾನ ಚಿಂತನೆ ಮಂಥನಗಳ ಜೊತೆಗೆ ಅವರಲ್ಲಿ ಅಹಂಕಾರ ನಿರಸನ, ಔದಾರ್ಯ ಗುಣ, ಪರನಿಂದನೆ ಅಸೂಯೆ ಪಡೆಯದಿರುವುದು. ವಂಚನೆ ಮಾಡದೆ, ಸತ್ಯಪರಿಪಾಲನೆ, ಮುಂತಾದ ಗುಣಗಳನ್ನು ಹೊಂದಿರುತ್ತಾರೆ. ಹೀಗೆ ವಿಶೇಷವಾದ ಗುಣಗಳನ್ನು ಬೆಳೆಸಿಕೊಂಡ ವ್ಯಕ್ತಿ ವಿಶ್ವಮಾನವನಾಗುತ್ತಾನೆ. ಲೋಕಪೂಜ್ಯ ನಾಗುತ್ತಾನೆ. ಅವನು ನಡೆದದ್ದೇ ಮಾರ್ಗವಾಗುತ್ತದೆ. ಅವನ ಆತ್ಮತೇಜೋದ್ಭೂತವಾದ ವಾಕ್ ಪ್ರವಾಹದಲ್ಲಿ ಪ್ರವಾದಿಯ ಭವಿಷ್ಯವಾಣಿಯೂ ಮಂತ್ರದ್ರಷ್ಟಾರನ ಲೋಕಕ್ಷೇಮ ಕಾತರತೆಯೂ ಸಂಗಮಗೊಂಡಿರುತ್ತದೆ. ಪ್ರಖರವಾದ ಪ್ರತಿಭೆ ಪರಚಿತ್ತ ಪ್ರವೇಶ ಶಕ್ತಿ ಸೂಕ್ಷ್ಮ ಸಂವೇದನಾ ಸಾಮರ್ಥ್ಯ. ಕಲ್ಪನಾ ಕೌಶಲ ಮತ್ತು ವಾಕ್‌ಶಕ್ತಿ ಮಹಿಮೆಯಿಂದ ಕವಿ ಸಹಜವಾಗಿಯೇ ಬೋಧನಾ ಸಾಮರ್ಥ್ಯವನ್ನು ಪಡೆದಿರುತ್ತಾನೆ. ತನಗೆ ಹೊಳೆದ ವಸ್ತು ರಹಸ್ಯವನ್ನೂ, ತಾನು ಸಂಚಯಿಸಿದ ಲೋಕಾನುಭವವನ್ನೂ, ಸ್ವಾಯತ್ತವಾದ ಅನುಭವ ಸಂಪತ್ತನ್ನು ಮತ್ತೊಬ್ಬರ ಮನಸ್ಸಿಗೆ ನಾಟುವಂತೆ ಹೇಳುವ ಮಾಂತ್ರಿಕ ಕಲೆ ಶಬ್ಧ ತಂತ್ರಜ್ಞನಾದ ಚೇತನಕ್ಕೆ ಮಾತ್ರ ಸಾಧ್ಯ.

ಕನ್ನಡ ಸಾಹಿತ್ಯಕ್ಕೆ ಸುಮಾರು ೧೫೦೦ ವರ್ಷಗಳ ಖಚಿತವಾದ ಪ್ರಾಚೀನ ಪರಂಪರೆ ಯಿರುತ್ತದೆ. ಮೊಟ್ಟಮೊದಲನೆಯದಾಗಿ ದೊರೆತ ಹಲ್ಮಿಡಿಯ ಕನ್ನಡ ಶಿಲಾ ಲೇಖವು ಕ್ರಿ.ಶ. ೫-೬ನೆಯ ಶತಕದ್ದಾಗಿದೆ. ಭಾಷೆಯೆನ್ನುವುದು ಮನುಷ್ಯ ನಿರ್ಮಿತ ನಿಜ. ಆದರೆ ಅದರಲ್ಲಿ ಶಬ್ದಬ್ರಹ್ಮದ ಬೆಳಕು ಬಿದ್ದಾಗ ಅದನ್ನು ತಡೆದುಕೊಳ್ಳುವ ಶಕ್ತಿ ಭಾಷೆಗೆ ಇರಬೇಕಾ ಗುತ್ತದೆ.

ನಿಜವಾದ ಅರ್ಥದಲ್ಲಿ ಒಬ್ಬ ಲೇಖಕ ಸಮಕಾಲೀನನೂ ಹೌದು. ಸಾರ್ವಕಾಲೀನನೂ ಹೌದು – ಅವನು ತನ್ನ ಸಮಕಾಲೀನ ಪರಿಸರಕ್ಕೆ ಪಡಿಮಿಡಿಯುವ ಸಾಮರ್ಥ್ಯವನ್ನು ಪಡೆದಿದ್ದಾ ನೆಂಬುದಕ್ಕೆ ಅವನ ಕೃತಿ ಸಾಕ್ಷಿಯಾಗಿದೆ ಎನ್ನುವ ಅರ್ಥದಲ್ಲಿ ಅವನು ಸಾರ್ವಕಾಲೀನ. ಎಲ್ಲ ಕಾಲಕ್ಕೂ ನವನವೋನ್ಮೇಷಶಾಲಿಯಾಗುವ ಅರ್ಥಭಾವ ಮೌಲ್ಯಗಳಿಗೆ ಸಾಂಕೇತಿಕವಾದ ವಿಶಿಷ್ಟಾಭಿವ್ಯಕ್ತಿಯನ್ನು ನಿರ್ಮಿಸಿದ್ದಾನೆ ಎಂಬ ಅರ್ಥದಲ್ಲಿ. ಕೃತಿಗಳಲ್ಲಿ ಭಾರತೀಯರ ನಾಡಿನ ಮಿಡಿತ ಕೇಳಿಸುತ್ತದೆ, ಸಂಸ್ಕೃತಿಯ ಗಂಧಗಾಳಿ ಪ್ರವಹಿಸುತ್ತದೆ. ಜನರ ಬದುಕಿನ ಅನಂತ ಅನಂತ ಮುಖಗಳಲ್ಲಿ ಭಾರತೀಯತೆ ಜೀವಂತವಾಗಿ, ಚೈತನ್ಯಪೂರ್ಣವಾಗಿದೆ. ಜನಸಮೂಹದ ಬದುಕಿನ ಗರ್ಭದಲ್ಲಿಯೇ ರೂಪ ಪಡೆಯುತ್ತದೆ. ನೆಲದ ಬದುಕಿನ ಮೇಲೆಯೇ ಅದು ನಿಂತಿರುತ್ತದೆ.

ರವೀಂದರ್ರೊಮ್ಮೆ ಹೇಳಿದರು, ತಮಗೆ ಆದರ್ಶ ಜೀವನದಲ್ಲಿ ವಿಶ್ವಾಸವಿದೆ ಎಂಬುದಾಗಿ. “ಸಣ್ಣದೊಂದು ಹೂವಿನ ಚೆಲುವಿನಲ್ಲಿ ಬಂದೂಕದ ಏಟಿಗಿಂತ ಪ್ರಬಲವಾದ ಶಕ್ತಿಯಿದೆ ಯೆಂಬುದನ್ನು ಬಲ್ಲೆ. ಫಿರಂಗಿಯ ಕಿವುಡೇಳಿಸುವ ಗರ್ಜನೆಗಿಂತ ತೀವ್ರವಾದ ಶಕ್ತಿಯನ್ನು ಪ್ರಕೃತಿ ಹಕ್ಕಿಯ ಹಾಡಿನ ಮೂಲಕ ಅಭಿವ್ಯಕ್ತಪಡಿಸುತ್ತದೆಂದು ನಂಬಿಕೊಂಡಿದ್ದೇನೆ. ಈ ಭೂಮಿಯನ್ನೆಲ್ಲ ಸ್ವರ್ಗ ಆವರಿಸಿದೆಯೆಂದೂ, ಅದು ಕೇವಲ ಕಲ್ಪನೆಯಲ್ಲವೆಂದೂ ಪ್ರತಿಯೊಂದು ವಸ್ತುವಿನ ಗುರಿ ಅದೆಯೆಂದೂ ನಾನು ನಂಬಿದ್ದೇನೆ. ಸೂರ‍್ಯ ರಶ್ಮಿಯಲ್ಲಿ, ತಿರೆಯಹಸುರಿನಲ್ಲಿ, ಲಹರಿಯ ಹೊಳೆಗಳಲ್ಲಿ, ವಸಂತದ ಸಿರಿಯಲ್ಲಿ, ಮಾಗಿಯ ಬೆಳಗಿನ ಜಡತೆಯಲ್ಲಿ ಆ ಸ್ವರ್ಗದ ಕಾಣ್ಕೆಯನ್ನು ಕಾಣುತ್ತೇನೆ. ಈ ಭೂಮಿಯ ಮೇಲೆ ಎಲ್ಲ ಕಡೆಯೂ ಸ್ವರ್ಗದ ಚಿನ್ಮಯತ್ವ ಜಾಗೃತವಾಗಿದ್ದು ತನ್ನ ಸಂದೇಶವನ್ನು ಪ್ರಸಾರ ಮಾಡುತ್ತಿದೆ”.

“ಕವಿಯ ಹೃದಯವೊಂದು ವೀಣೆ, ಲೋಕವದನು ಮಿಡಿವುದು”. ಈ ಸೂಕ್ಷ್ಮ ಗ್ರಹಣಶಕ್ತಿ ಅವರವರ ಸಾಧನೆಗನುಗುಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹನುಮಂತ ಸಂಜೀವನಿ ಪರ್ವತ ತಂದಂತೆ, ಬದುಕಿನ ಖಂಡ ಖಂಡಗಳನ್ನು ಹಾಗೆ ಹಾಗೆಯೇ ಇಲ್ಲಿ ತಂದಿರಿಸಿದಂತಿದೆ.

ನಾನು ನನ್ನ ಕಾವ್ಯದ ಮೂಲಕ ನಡೆಸಿದ ಅನ್ವೇಷಣೆ ಒಂದು ಕನಸಾಗಿರಬಹುದು. ಆದರೆ ಕಾವ್ಯವನ್ನು ಬರೆಯಲು ಪ್ರಾರಂಭವಾದಾಗ ಇದ್ದ ಕಿಡಿಯೊಂದು ಸೂರ್ಯ ಪ್ರಕಾಶದ ಜಾಜ್ವಲ್ಯಮಾನ ಸ್ವರೂಪ ಪಡೆದುದು, ಒಂದು ಕನಸು ಯಾವ ರೀತಿಯಲ್ಲಿ ಭೂಮ್ಯಾಕಾಶ ವನ್ನು ಮೆಟ್ಟಿನಿಲ್ಲಬಲ್ಲುದೆಂಬುದಕ್ಕೆ ಮಹಾಸಾಕ್ಷಿ. ಈ ಕನಸನ್ನು ನಿಮಗೆ ಬಿತ್ತರಿಸಿದ್ದೇನೆ. ನನ್ನ ಹೃದಯದ ಕಂಗಳಿಂದ ನೋಡಿರಿ. ಪ್ರಾಮಾಣಿಕ ಮನಸ್ಸಿನ ಒಳನೋಟವಿರಲಿ. ನನ್ನ ಕನಸಿನ ರತ್ನಗಂಬಳಿಯಲ್ಲಿ ಎಚ್ಚರದಿಂದ ನಿಮ್ಮ ಹೆಜ್ಜೆಗಳನ್ನಿಡಿರಿ.

ಮನಸ್ಸಿನ ರಸವೆಂಬುದು ಊರ್ಜ್ವಾ (energy) ವಿಶೇಷ. ಅವನ ಅಂತಃಕರಣದಲ್ಲಿ ಮಾತ್ರ ಉತ್ಪನ್ನವಾಗುತ್ತದೆ. ಅದು ವಿಶಿಷ್ಟವಾದ ಕಾಂತಕ್ಷೇತ್ರ (Magnetic field) ನಿರ್ಮಿಸಬಲ್ಲುದು. ಈ ಕ್ಷೇತ್ರಕ್ಕೆ ಆಕರ್ಷಿಸಿದವನು ಹರ್ಷದಿಂದ ಉಲ್ಲಸಿತನಾಗುತ್ತಾನೆ. ಆಗ ನಿರ್ಮಲ, ಅನುರಾಗಯುಕ್ತ ಚಿತ್ತ ಸ್ಫೂರ್ತಿ ಹೊರಹೊಮ್ಮುತ್ತದೆ. ವಿಜ್ಞಾನಿಗೆ ಹೇಗೋ ಹಾಗೆ ತನ್ನ ಉಪಾಸನಾ ವಿಷಯದಲ್ಲಿ ಕಲ್ಮಷ ರಹಿತ ಮನಸ್ಸು ಅಗತ್ಯ. ಜ್ಞಾನಾನಂದ ಗಳೆರಡನ್ನು ಅದು ಉತ್ಪಾದಿಸಬಲ್ಲುದು.

೧೯೧೩ರಲ್ಲಿ ರವೀಂದ್ರನಾಥ್ ಠಾಗೋರ್‌ರವರ ಗೀತಾಂಜಲಿ ಕವನ ಸಂಕಲನಕ್ಕೆ ನೋಬೆಲ್ ಪ್ರಶಸ್ತಿ ದೊರಕಿತು. ಆ ನಂತರ ಸಾಹಿತ್ಯದಲ್ಲಿ ಗದ್ಯಕ್ಕಿಂತ ಕಾವ್ಯಾತ್ಮಕವಾಗಿರುವ ಕಿರುಗೀತೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಿತು.

೧೮೨೦ ರಿಂದ ೧೯೨೦ ರವರೆಗಿನ ಕಾಲವನ್ನು ಡಾ. ರಂ.ಶ್ರೀ ಮುಗಳಿಯವರು ಹೊಸ ಸಾಹಿತ್ಯದ ಮೊದಲ ಹಂತವೆಂದು ಗುರುತಿಸುತ್ತಾರೆ. ೧೯೨೧ ರಿಂದ ೧೯೫೮ರವರೆಗೆ ಎರಡನೆಯ ಹಂತ ಎನ್ನುತ್ತಾರೆ. ಈ ಎರಡೂ ಹಂತಗಳಲ್ಲೂ ನವೋದಯದ ಪ್ರಕಾರಕ್ಕೆ ಸೇರಿದ ಹತ್ತಾರು ಭಾವಗೀತ ಸಂಕಲನಗಳು ಹೊರಬಂದವು. ಕೆರೋಡಿ ಸುಬ್ಬರಾಯರು ಇಂಗ್ಲಿಷಿನಿಂದ ಕನ್ನಡಕ್ಕೆ ಭಾವಗೀತೆಗಳನ್ನು ಅನುವಾದಿಸಿದರು. ಎಂ.ಎಲ್. ಶ್ರೀಕಂಠೇಶಗೌಡ, ಎಸ್.ಜಿ. ನರಸಿಂಹಾಚಾರ್ಯ, ಜಯರಾಯಾಚಾರ್ಯ ಮೊದಲಾದವರು ಸಹ ಇಂತಹ ಅನುವಾದ ಕಾರ್ಯವನ್ನು ಮುಂದುವರಿಸಿದರು. ಪಂಜೆ ಮಂಗೇಶರಾಯರ ಪದ್ಯಗಳಲ್ಲಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಸೊಬಗನ್ನು ಕಾಣಬಹುದು. ಇವರೆಲ್ಲ ನವೋದಯ ಸಾಹಿತ್ಯದ ಪೂರ್ವ ಕವಿಗಳೆಂದೇ ಹೇಳಲಾಗಿದೆ.

ಕನ್ನಡದಲ್ಲಿ ನವೋದಯ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದವರು ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತೆಗಳು ಕನ್ನಡದ ಭಾವಗೀತ ಲೋಕಕ್ಕೆ ಹೊಸ ಪ್ರವೇಶ ಮಾರ್ಗವನ್ನು ತೆರೆದಿಟ್ಟಿತು. ಎರಡು ಭಾಷೆಗಳ ಸಂಬಂಧವನ್ನು ಚೆನ್ನಾಗಿ ಅರಿತು ನಮ್ಮ ಭಾಷೆಯ ಮೂಲ ಸೊಗಡನ್ನು ಪ್ರತಿಬಿಂಬಿಸಿದ ಬಿ.ಎಂ.ಶ್ರೀಯವರು ಕನ್ನಡದ ಆಚಾರ್ಯ ಪುರುಷರಲ್ಲಿ ಒಬ್ಬರು. ಬಿ.ಎಂ.ಶ್ರೀಯವರ ಶಿಷ್ಯರಾದ ರಾಷ್ಟ್ರಕವಿ ಕುವೆಂಪುರವರು ಬಿ.ಎಂ.ಶ್ರೀ ಹಾಕಿಕೊಟ್ಟ ಮಾರ್ಗ ವನ್ನು ಸಮರ್ಪಕ ರೀತಿಯಲ್ಲಿ ಮುಂದುವರಿಸಿಕೊಂಡು ಹೋದರು. ರಾಮಕೃಷ್ಣಾಶ್ರಮದ ನೆರಳಿನಲ್ಲಿ ಬೆಳೆದ ಕುವೆಂಪುರವರು ಆಧ್ಯಾತ್ಮ ಹಾಗೂ ವಿಚಾರವಾದವನ್ನು ಸಮತೂಕದಲ್ಲಿ ಬೆರೆಸಿ ಕಾವ್ಯ ರಚಿಸಿದರು. ಅವರ ಪ್ರಕೃತಿ ಕವನಗಳು, ಪ್ರಣಯ ಕವನಗಳು ರಾಷ್ಟ್ರೀಯತೆಯನ್ನು ಹುರಿದುಂಬಿಸುವ ಕವನಗಳ ಜೊತೆ ರೈತರು, ಕಾರ್ಮಿಕರು ಹಾಗೂ ಬಡತವನ್ನು ವಸ್ತುವನ್ನಾಗಿಟ್ಟುಕೊಂಡು ರಚಿಸಿದ ಕವನಗಳು ಸಹ ಮಾನ್ಯ ಮಾಡುವಂತದ್ದು. ಕುವೆಂಪುರವರು ನವೋದಯ ಯುಗದ ಕವಿಗಳಾಗಿದ್ದರೂ ವಸ್ತುವಿನ ಆಯ್ಕೆಯಿಂದಾಗಿ ಯುಗವನ್ನು ಮೀರಿ ಬೆಳೆದಿದ್ದಾರೆ.

ದ.ರಾ. ಬೇಂದ್ರೆಯವರು ಕನ್ನಡದ ಜಾನಪದದ ಸೊಗಡನ್ನು ತಮ್ಮ ಕಾವ್ಯದಲ್ಲಿ ಸೆರೆಹಿಡಿದವರು. ‘ಶ್ರೀನಿವಾಸ’ ಕಾವ್ಯನಾಮದಿಂದ ಖ್ಯಾತರಾಗಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ರವರು ಕಥನ ಕವನಗಳಿಗೆ ಖ್ಯಾತರಾದವರು. ಡಿ.ವಿ.ಜಿ.ಯವರು ನವೋದಯದ ಕಾಲದಲ್ಲಿ ಕಾವ್ಯರಚನೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದರು. ಭಕ್ತಿ ಕವಿಯೆಂದೇ ಖ್ಯಾತರಾಗಿದ್ದ ಪು.ತಿ.ನ.ರವರು ತಮ್ಮ ಕಾವ್ಯದಲ್ಲಿ ಮಾಧುರ‍್ಯತೆಗೆ ಹಾಗೂ ಗೇಯತೆಗೆ ಹೆಚ್ಚಿನ ಮಹತ್ವ ಕೊಟ್ಟವರು. ಪ್ರೊ. ವಿ.ಸೀ., ಕೆ.ಎಸ್. ನರಸಿಂಹಸ್ವಾಮಿ, ಎಂ.ವಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ ಮೊದಲಾದವರು ಈ ನವೋದಯದ ಕಾಲದಲ್ಲಿ ಕೆಲಸ ಮಾಡಿದ್ದಾರೆ.

ನವೋದಯದ ಕಾಲದಲ್ಲಿ ಬರವಣಿಗೆ ಪ್ರಾರಂಭಿಸಿದ ಡಾ. ವಿ.ಕೆ. ಗೋಕಾಕ್‌ರವರು ಬಹುಬೇಗ ತಮ್ಮದೇ ಆದ ದಾರಿಯನ್ನು ಕಂಡುಕೊಂಡರು. ೧೯೪೦ರಲ್ಲಿ ಪ್ರಕಟವಾದ ಅವರ ಸಮುದ್ರಗೀತಗಳು ನವ್ಯ ಕವನಕ್ಕೆ ಪ್ರೇರಣೆ ನೀಡಿದ ಕಾವ್ಯ ಸಂಕಲನ. ಸ್ವಾತಂತ್ರ್ಯೋತ್ತರದ ಭಾರತದ ಪ್ರಗತಿಯ ಬಗ್ಗೆ ನಿರಾಶೆ, ದಿಗ್ಭ್ರಮೆ ಹೊಂದಿದ್ದಾರೆ. ನವ್ಯಕಾವ್ಯ ಹೆಚ್ಚು ಅಂತರ್ಮುಖಿ. ಅದರ ಉದ್ದೇಶ ವಿಶ್ಲೇಷಣೆ ಅಭಿವ್ಯಕ್ತಿಯಲ್ಲಿ ವ್ಯಂಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯ. ೧೯೪೬ರಲ್ಲಿ ‘ಭಾವತರಂಗ’ ಕವನದ ಮೂಲಕ ಕನ್ನಡ ಕಾವ್ಯಲೋಕಕ್ಕೆ ಪ್ರವೇಶಿಸಿದ ಎಂ. ಗೋಪಾಲಕೃಷ್ಣ ಅಡಿಗರು ನವ್ಯಕಾವ್ಯ ಯುಗದ ಪ್ರವರ್ತಕರು. ನವೋದಯ ಮತ್ತು ನವ್ಯ ಎಂಬ ಚೌಕಟ್ಟಿಗೆ ಸಿಲುಕದೆ ಕಾವ್ಯ ಹಾಗೂ ಬದುಕಿನಲ್ಲಿ ಸಮನ್ವಯತೆ ಸಾಧಿಸಿದವರು. ಜಿ.ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯವರು.

ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಕೆ.ಎಸ್. ನಿಸಾರ್‌ಅಹಮದ್‌ರವರು ಆಕರ್ಷಕವಾಗಿ ಹಾಗೂ ಆತ್ಮೀಯವಾಗಿ ಕಾವ್ಯ ಬರೆಯಬಲ್ಲ ಅಪರೂಪದ ಕವಿ. ನವ್ಯಕಾವ್ಯದ ನಂತರ ಬಂಡಾಯ ಮತ್ತು ದಲಿತ ಕಾವ್ಯಗಳು ಕನ್ನಡ ಸಾಹಿತ್ಯದಲ್ಲಿ ಉದಯವಾದವು. ನವ್ಯಕಾವ್ಯದ ವಿಡಂಬನೆಗಿಂತ ಬಂಡಾಯದ ವಿಡಂಬನೆಯ ಅಭಿವ್ಯಕ್ತಿ ಭಿನ್ನವಾಗಿದೆ. ಈ ವಿಡಂಬನೆ ದಲಿತ ಕಾವ್ಯದಲ್ಲಿ ರೋಷವಾಗಿ ಅಭಿವ್ಯಕ್ತವಾಯಿತು.

ಬರೀ ರೋಷ ಮತ್ತು ಆವೇಶಗಳೇ ಕಾವ್ಯವಾಗಲಾರದು. ಕಾವ್ಯಕ್ಕೆ ವಿನ್ಯಾಸವಿರಬೇಕು. ರೋಷ, ಕಹಿ ಹಾಗೂ ವಿಡಂಬನೆಗೆ ಒಂದು ರೂಪ ಕೊಡಬೇಕಾಗುತ್ತದೆ. ಲಯಬದ್ಧವಾದ ಅವಿಭಕ್ತಿ ಇಲ್ಲದಿದ್ದರೆ ಅದು ಕಾವ್ಯ ಎನಿಸಿಕೊಳ್ಳುವುದಿಲ್ಲ. ಬಂಡಾಯ ಹಾಗೂ ದಲಿತ ಕವಿಗಳಲ್ಲಿ ಡಾ. ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಚೆನ್ನಣ್ಣ ವಾಲೀಕರ್, ಅರವಿಂದ ಮಾಲಗತ್ತಿ, ಇಂದೂಧರ ಹೊನ್ನಾಪುರ, ರಂಜಾನ್‌ದರ್ಗ ಮೊದಲಾದವರು ಮುಖ್ಯ ಎನಿಸುತ್ತಾರೆ.

ಕನ್ನಡ ಕಾವ್ಯವನ್ನು ಸೂಕ್ಷ್ಮವಾಗಿ ಸಿಂಹಾವಲೋಕನ ಮಾಡಿದರೆ ನಮ್ಮ ಕವಿಗಳು ಯಾವುದೇ ಪ್ರಕಾರಕ್ಕೆ ಅಂಟಿಕೊಂಡವರಲ್ಲ. ಕಾವ್ಯದ ವಸ್ತುವಿಗೆ ತಕ್ಕಂತೆ ಅಭಿವ್ಯಕ್ತಿ ಮಾಧ್ಯಮ ಗಳನ್ನು ಕಂಡುಕೊಂಡವರು. ಈ ಪರಂಪರೆಗೆ ನಮ್ಮ ಕಾವ್ಯದ ಇತಿಹಾಸವೇ ಕಾರಣವಾಗಿದೆ.

೭ನೇ ಶತಮಾನದ ಬಾದಾಮಿ ಶಾಸನದಲ್ಲಿ ಬರುವ ‘ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪಕವಿಗೆ ಕಲಿಯುಗ ವಿಪರೀತನ್’ ಎಂದು ಹೇಳುವ ಜನಪದ ತ್ರಿಪದಿ ನಮ್ಮ ಕನ್ನಡ ಕಾವ್ಯದ ಸೊಗಸನ್ನು ಎತ್ತಿ ಹಿಡಿಯುತ್ತದೆ.

ಆದಿ ಕವಿ ಪಂಪನ ಬನವಾಸಿ ಪ್ರೇಮವನ್ನು ವರ್ಣಿಸುವ ಕಾವ್ಯಭಾಗ ಭಾವಗೀತೆಯಂತಿದೆ.

ವಚನಕಾರರಾದ ಬಸವಣ್ಣ, ಅಲ್ಲಮಪ್ರಭುಗಳು ಸಹ ಭಾವಗೀತೆಯಲ್ಲಿರುವ ಕಾವ್ಯಾಂಶ ವನ್ನು ತಮ್ಮ ವಚನಗಳಲ್ಲಿ ಹಿಡಿದಿಟ್ಟಿದ್ದಾರೆ. ಹರಿಹರನ ಪುಷ್ಪರಗಳೆ ಒಂದು ಸುಂದರ ಗೀತಕಾವ್ಯ. ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ ಮೊದಲಾದ ನಮ್ಮ ಎಲ್ಲಾ ಕನ್ನಡ ಕವಿಗಳು ಕವಿತೆಯ ಪ್ರಕಾರಕ್ಕೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆಂಬುದು ನನ್ನ ನಂಬಿಕೆ. ಕನ್ನಡದಲ್ಲಿ ಉತ್ತಮ ಕವಿಯಾಗಬೇಕೆಂಬುವವನು ಈ ಎಲ್ಲಾ ಕವಿಗಳಿಂದ ಸ್ಫೂರ್ತಿ ಪಡೆದಿರಬೇಕು. ಪಂಪ, ಬಸವಣ್ಣ, ಹರಿಹರ ಕುಮಾರವ್ಯಾಸ, ಕುವೆಂಪು, ಗೋಕಾಕ, ಬೇಂದ್ರೆ ಮೊದಲಾದ ಕವಿಗಳ ಪರಿಚಯ ಇಲ್ಲದವರು ಹೇಗೆ ತಾನೆ ಕನ್ನಡದಲ್ಲಿ ಉತ್ತಮ ಕವಿಯಾಗಲು ಸಾಧ್ಯ.

ನಾನು ಹಿರಿಯ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ಯಕ್ಷಗಾನ ಭಾಗವತಿಗೆಯ ಪದ್ಯಗಳನ್ನು ಬರೆಯುತ್ತಿದ್ದೆ. ಹಾಗೆ ನಾನು ಕವಿಯಾದೆ. ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ, ಲಕ್ಷ್ಮೀಶ ಜೈಮಿನಿ ಭಾರತ, ಮುದ್ದಣನ ರಾಮಾಶ್ವಮೇಧಂ ಕಾವ್ಯಗಳನ್ನು ಓದಿಲ್ಲದವ ಯಕ್ಷಗಾನದಲ್ಲಿ ಭಾಗವತಿಗೆಯ ಪದ್ಯಗಳನ್ನು ರಚಿಸಲಾರ.

ಪಂಡಿತ ಭುಜಬಲ ಶಾಸ್ತ್ರಿಗಳ ‘ಗುರುದೇವ’ ಪತ್ರಿಕೆಯಲ್ಲಿ ನಾನು ಕಾಲೇಜಿನಲ್ಲಿದ್ದಾಗಲೇ ಭಗವಾನ ಮಹಾವೀರರ ಮೇಲೆ ಕವನ ರಚಿಸಿದ್ದೆ. ಈ ರಚನೆಗೆ ನನಗೆ ಆತ್ಮ ಸಂತೋಷ ತಂದು ಕೊಡಬೇಕೆಂಬ ಉದ್ದೇಶ ಇತ್ತೇ ಹೊರತು ಅದರಿಂದ ಲೌಕಿಕ ಪ್ರಯೋಜನಗಳನ್ನು ಪಡೆಯಬೇಕೆಂಬುದಿರಲಿಲ್ಲ.

ಕವಿ ಯಾವುದೇ ಭ್ರಮೆ ಇಟ್ಟುಕೊಳ್ಳಬಾರದು. ಕವಿತೆಯನ್ನು ಓದಿದ ಓದುಗ ಶಬ್ದಗಳ ಆಚೆಯಿರುವ ಅರ್ಥವನ್ನು ಗುರ್ತಿಸಿ ಸಂತೋಷಪಟ್ಟರೆ ಅದು ಕವಿಯ ಪುಣ್ಯ.

ಜನಪ್ರಿಯತೆಯನ್ನು ತಲೆಗೇರಿಸಿಕೊಂಡ ಕವಿ ಬಹುಬೇಗ ಹಾದಿ ತಪ್ಪುತ್ತಾನೆ. ಪ್ರಶಸ್ತಿ ಹಾಗೂ ಪುರಸ್ಕಾರಗಳು ಅವನನ್ನು ಒಲಿಸಿಕೊಳ್ಳಬಾರದು. ವಿಮರ್ಶಕರ ಮರ್ಜಿ ಹಿಡಿದು ಹೊಗಳಿಸಿಕೊಳ್ಳಲು ಹೋಗಬಾರದು. ತನ್ನ ಭಾವನೆಗಳನ್ನು ನಿಷ್ಠುರವಾಗಿ ಆದರೆ ಸತ್ಯ, ಪ್ರೀತಿ, ಕರುಣೆ ಎಂಬ ಮೂಲ್ಯಗಳೊಡನೆ ಬೆರೆಸಿ ಕಾವ್ಯಾತ್ಮಕವಾಗಿ ಅಭಿವ್ಯಕ್ತಿಸಬೇಕು.

ಕವಿಯಾದವನಿಗೆ ಗದ್ಯ ಎಂದೂ ಒಗ್ಗುವುದಿಲ್ಲ. ನಮ್ಮ ಅನೇಕ ಕವಿಗಳು ಉತ್ತಮ ಗದ್ಯಸಾಹಿತ್ಯವನ್ನು ರಚಿಸಿದರೂ ಅವರು ಮೂಲತಃ ಕವಿಯೆಂದೇ ಪರಿಗಣಿತರಾಗಿದ್ದಾರೆ. ನಾನು ರಚಿಸಿದ ‘ತೆಂಬರೆ’ ಕಾದಂಬರಿ ಸಹ ಗದ್ಯದಲ್ಲಿದ್ದರೂ ಕಾವ್ಯಕ್ಕೆ ಹೆಚ್ಚು ಹತ್ತಿರವಾಗಿದೆ. ಕಾವ್ಯದ ಕಾವ್ಯರಚನೆಯ ಆಕಾಂಕ್ಷೆ ಹೆಚ್ಚಿದ ಕಾರಣ ಶ್ರೀರಾಮಾಯಣ ಮಹಾನ್ವೇಷಣಂ ಮಹಾಕಾವ್ಯ ರಚನೆಗೆ ಕೈಹಾಕಬೇಕಾಯಿತು. ಕುವೆಂಪು ಹೇಳುವಂತೆ ಸಣ್ಣಪುಟ್ಟ ಕೊಳ, ಬಾವಿಗಳಲ್ಲಿ ಈಜಿದ ಮೀನು ವಿಶಾಲವಾದ ಸಾಗರವನ್ನು ಕಂಡುಕೊಳ್ಳುವಂತೆ ಕಾವ್ಯ ರಚನೆಯಲ್ಲಿ ತೊಡಗಿರುವ ಎಲ್ಲರೂ ಮಹತ್ವದ ಕೃತಿ ರಚನೆಗೆ ಕೈಹಾಕಿಯೇ ಹಾಕುತ್ತಾರೆ.

ಸಾಹಿತ್ಯವು ನೂತನ ಯುಗವನ್ನು ಸೃಷ್ಟಿಸುವಂತೆ ಸಮಕಾಲೀನ ಯುಗದ ಪ್ರಭಾವಕ್ಕೂ ಒಳಗಾಗುತ್ತದೆ. ಅದು ಯುಗಜನ್ಯ, ಯುಗಜನಕ ಎರಡೂ ಹೌದು. ಮಹಾಕವಿಗಳ ಕೃತಿಗಳು ಜನಜೀವನದ ಮೇಲೆ ಚಿರಂತನ ಪ್ರಭಾವವನ್ನು ಬೀರಿರುವುದಕ್ಕೆ ಅನೇಕ ನಿದರ್ಶನಗಳುಂಟು. ವ್ಯಾಸ-ವಾಲ್ಮೀಕಿ, ಕಾಳಿದಾಸ-ಶೇಕ್ಸಪಿಯರ್, ಪಂಪ-ರನ್ನ, ಹರಿಹರ-ರಾಘವಾಂಕ, ಚಾಮರಸ-ರಾಘವಾಂಕ, ಚಾಮರಸ-ಕುಮಾರವ್ಯಾಸ, ರತ್ನಾಕರ-ಸರ್ವಜ್ಞ ಇಂತಹ ಕವಿಗಳು ಜನಜೀವನ ದಲ್ಲಿ ಹಾಸುಹೊಕ್ಕಾಗಿರುವುದು ಸರ್ವಶ್ರುತ.

ಕನ್ನಡ ನಾಡಿನ ಜನರ ಕಾವ್ಯ ಪ್ರಯೋಗದ ಪರಿಣಿತಿಯನ್ನು ಕವಿ ಹೀಗೆ ಕೇಳುತ್ತಾನೆ.

ಪದನರಿದು ನುಡಿಯಲುಂ ನುಡಿ
ದುದನರಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್
ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ್ |
ಅಭಿಮಾನಿಗಳತ್ಯುಗ್ರರ್
ಗಂಭೀರ ಚಿತ್ತರ್ ವಿವೇಕಿಗಳ್ ನಾಡವರ್ಗಗಳ್ ||

ಜಾನಪದವನ್ನು ಕಡೆಗಣಿಸಬೇಡಿ – ವಾಲ್ಮೀಕಿ, ರತ್ನಾಕರವರ್ಣಿ, ಅದರಿಂದಲೇ ಮಹಾಕವಿಗಳಾಗಿದ್ದಾರೆ. ಇಂಗ್ಲಿಷ್‌ನ ಬೈರನ್, ಬೇಂದ್ರೆ, ಕುವೆಂಪುರವರನ್ನು ಅದು ಬಿಟ್ಟಿಲ್ಲ. ಬರ್ನ್‌ಸ್ ಮುಂತಾದವರು ಜಾನಪದ ಮೂಲಕವೇ ತೇಜಸ್ಸು-ಓಜಸ್ಸು ಹೆಚ್ಚಿಸಿಕೊಂಡಿದ್ದಾರೆ.

ಹುಟ್ಟಿದ ಒಂದೊಂದು ಮಗುವೂ ಮಾನವತೆಗೆ ಒಂದೊಂದು ಹೊಸ ಆಸೆ, ಹೊಸ ಭರವಸೆಯಾಗುತ್ತದೆ. ಬರೆಯಲ್ಪಡುವ ಒಂದೊಂದು ಹೊಸ ಕವಿತೆಯು ಹಿಗ್ಗಿನ ಕೊಂಬೆಗೆ ಮೂಡಿದ ಒಂದೊಂದು ಹೊಸ ಹೂವಾಗಿರುತ್ತದೆ. ಒಂದು ಪ್ರಕೃತಿಯ ಕೊಡುಗೆಯಾಗುತ್ತದೆ. ಇನ್ನೊಂದು ಪ್ರತಿಭೆಯ ಕೊಡುಗೆಯಾಗಿರುತ್ತದೆ. ಪ್ರಕೃತಿಯು ಅರ್ಧಕ್ಕೆ ನಿಲ್ಲಿಸಿದಾಗ ಪ್ರತಿಭೆ ಪೂರ್ತಿಗೊಳಿಸುತ್ತದೆ. ಪ್ರತಿಭೆ ಇಲ್ಲದಿದ್ದರೆ ಸಹಜತೆ ಇರಬಹುದು. ಸಹಜತೆ ಇಲ್ಲದಿದ್ದಲ್ಲಿ ಕಾವ್ಯವೂ ಇರಬಹುದು. ಕಾವ್ಯವು ಬರುವುದೇ ಅದರಲ್ಲಿ ಗಿಡಕ್ಕೆ ಎಲೆಗಳು ಬಂದಂತೆ ಬರಬೇಕೆಂದು ಇಂಗ್ಲಿಷ್ ಕವಿ ಜಾನ್‌ಕೀಟ್ಸ್ ಹೇಳಿದ್ದಾನೆ. ಕವಿ ಅಲೆಕ್ಸಾಂಡರ್ ಬ್ಲಾಕ್ ಒಳ್ಳೆಯ ಕವಿಯು ಚಿರಂತನ ಸಸ್ಯವಿದ್ದಂತೆ.

‘ಲೋಕವನ್ನು ಒಂದು ಹಾಡಿನಿಂದ ಒಳ್ಳೆಯದನ್ನಾಗಿಸಿರಿ’ ಎಷ್ಟು ಶಕ್ತಿ!

ಪ್ರಾಚೀನ ಮಹಾಕಾವ್ಯಗಳೆಂದರೆ ಅಗೆದು ಮುಗಿಯದ ಗನಿ, ಮೊಗೆದು ಮುಗಿಯದ ಕಡಲು. ಕೈಲಾದ ಮಟ್ಟಿಗೆ ಹೊಸ ಹೊಸ ಭಾವನೆಗಳು ಹುಟ್ಟುತಿರುವಲ್ಲಿ ಹೊಸ ಹೊಸ ಶಬ್ದಗಳು ಬೇಕು.

ಭಾಷೆ ಕೇವಲ ಪದಗಳ ರಾಶಿಯಲ್ಲ, ಜನಾಂಗದ ಚಿಂತನಶೀಲತೆಯ ಸಾಂಕೇತಿಕ ಪ್ರಕ್ರಿಯೆ. ಅದರಲ್ಲಿ ಪ್ರಾದೇಶಿಕ ರಚನೆಯ ಚೌಕಟ್ಟಿನಲ್ಲಿ ರೂಪಗೊಂಡ ಸಾಂಸ್ಕೃತಿಕ ಹಾಗೂ ರೂಪಾತ್ಮಕ ರಚನೆಗಳು ಒಳಗೊಂಡಿವೆ.

ಕವಿ ಇಡೀ ಬದುಕಿನಿಂದ ಜಗತ್ತನ್ನು ಆಸ್ವಾದಿಸುತ್ತಾನೆ. ಬರೀ ಬುದ್ದಿಯಿಂದ ಮಾತ್ರವಲ್ಲ!

—-

ಜನವರಿ ೨೯, ೨೦೦೬ ರಂದು ಬೀದರ್ನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಶ್ರೀ ಎಂ. ವೀರಪ್ಪ ಮೊಯಿಲಿಯವರು ಮಾಡಿದ ಭಾಷಣದ ಮುಖ್ಯಾಂಶಗಳು.