ಕಲೆ ಮಾನವನ ಸೌಂದರ‍್ಯಾನ್ವೇಷಣೆ ಹಾಗೂ ರಸಾನುಭವದ ಒಂದು ನಿರಂತರ ಪ್ರಯೋಗ. ಸೌಂದರ್ಯಮಯವಾದ ಈ ಜಗತ್ತಿನಲ್ಲಿ ಬುದ್ದಿಜೀವಿಯೂ ಭಾವುಕನೂ ಆದ ಮಾನವನು ನೈಸರ್ಗಿಕ ಸಾಧನಗಳಿಂದ ಆನಂದವನ್ನು ಪಡೆಯಲು ಮಾಡಿದ ಸತತ ಪ್ರಯತ್ನವೇ ಕಲೆ ಎನಿಸಿಕೊಳ್ಳುತ್ತದೆ.

ಎಲ್ಲ ಲಲಿತಕಲೆಗಳೂ ಸತ್ಯದಲ್ಲಡಗಿರುವ ಸೌಂದರ್ಯವನ್ನು ಪ್ರಕಟಗೊಳಿಸುತ್ತವೆ. ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡಿ ದೈವತ್ವದತ್ತ ಒಯ್ಯುತ್ತವೆ. ಪರಿಪೂರ್ಣತೆಯತ್ತ ಸಾಗುವುದೇ ಸತ್ಯ. ಆತ್ಮಾನಂದವೇ ಸೌಂದರ್ಯ. ಸುಂದರ ಶಿಲ್ಪಕಲಾಕೃತಿ, ವರ್ಣಚಿತ್ರ, ಸಂಗೀತ ನೃತ್ಯ, ಕಾವ್ಯಾದಿಗಳಲ್ಲಿ ಅಭಿವ್ಯಕ್ತವಾಗುವ ಆನಂದವೇ ಲಲಿತಕಲೆಗಳ ಗುರಿ. ರಸೋಲ್ಲಾಸವೇ ಕಲಾನೈಪುಣ್ಯದ ಫಲ. ಇಂತಹ ಲಲಿತಕಲೆಗಳು ಬೆಳೆದಷ್ಟೂ ಒಂದು ದೇಶದ ಸಂಸ್ಕೃತಿ ಉನ್ನತ ಮಟ್ಟಕ್ಕೇರಿ ಸಭ್ಯ ಸಮಾಜ ನಿರ್ಮಾಣ ಸಾಧ್ಯವಾಗುವುದು. ಕೇವಲ ನಾಗರಿಕತೆಯಿಂದಲೇ ಒಂದು ಸಮಾಜ ಪರಿಪೂರ್ಣವಾಗಲಾರದು. ನಾಗರಿಕತೆ ನಮ್ಮ ಬಾಹ್ಯ ಜೀವನವನ್ನು ಪ್ರತಿಬಿಂಬಿಸುತ್ತದೆ. ಭಾವಶುದ್ದಿ, ಕಲಾಭಿಜ್ಞತೆ ಮತ್ತು ಸಭ್ಯತೆ ಗಳನ್ನು ಬೆಳೆಸಿಕೊಳ್ಳುವುದೇ ಸಂಸ್ಕೃತಿ. ಅದು ನಮ್ಮ ಆಂತರಿಕ ಜೀವನಕ್ಕೆ ಸಂಬಂಧಿಸಿದುದು.

ಸಂಗೀತ ಕಲೆಯ ಮತ್ತೊಂದು ವೈಶಿಷ್ಟ್ಯ. ಅದರಲ್ಲಿ ಉಂಟಾಗುವ ರಸೋತ್ಪಾದನೆ ಸಂತೋಷ, ದುಃಖ, ಬೇಸರ ಮುಂತಾದ ಭಾವನೆಗಳನ್ನು ಸಂಗೀತದ ಮೂಲಕ ಚೆನ್ನಾಗಿ ವ್ಯಕ್ತಪಡಿಸಬಹುದು. ಶೃಂಗಾರ, ವೀರ, ಹಾಸ್ಯಾದಿ ನವರಸಗಳ ಅಭಿವ್ಯಕ್ತಿಯನ್ನೂ ಸಂಗೀತದ ಮೂಲಕ ಸಾಧಿಸಬಹುದೆಂಬುದು ನೃತ್ಯ, ನಾಟಕ, ಗೇಯ ನಾಟಕಗಳಿಂದ ವ್ಯಕ್ತವಾಗುತ್ತದೆ. ಒಟ್ಟಿನಲ್ಲಿ ಮನುಷ್ಯನ ಸಂತೋಷ, ದುಃಖಾದಿ ಭಾವನಾತಿರೇಕ ಸಂಗೀತ ರೂಪದಲ್ಲಿ ಪರಾಕಾಷ್ಠೆ ಹೊಂದುವುದೆಂಬುದು ಎಲ್ಲರ ಅನುಭವ.

ಭಾರತೀಯ ಸಂಗೀತ ವೇದಗಳ ಕಾಲದಿಂದ ಬೆಳೆದು ಬಂದ ಭರತ ಖಂಡದಲ್ಲೆಲ್ಲ ಒಂದೇ ಪದ್ಧತಿಯಾಗಿ ರೂಢಿಯಲ್ಲಿತ್ತು. ಉತ್ತರ ಭಾರತದಲ್ಲಿ ಮೊಗಲ್ ಮತ್ತು ಪರ್ಶಿಯನ್ ಸಂಸ್ಕೃತಿಯ ಪ್ರಭಾವದಿಂದ ಅಲ್ಲಿನ ಸಂಗೀತದಲ್ಲಿ ಸ್ವಲ್ಪ ಬದಲಾವಣೆಗಳಾದವು. ದಕ್ಷಿಣ ಭಾರತ ಇಂತಹ ಅನ್ಯಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾಗದೆ ಭಾರತೀಯ ಸಂಗೀತದ ಮೂಲ ರೂಪವನ್ನು ಉಳಿಸಿಕೊಂಡು ಬಂದಿತು. ಸುಮಾರು ಹನ್ನೆರಡನೆಯ ಶತಮಾನದ ಕಾಲದಲ್ಲಿ ಹಿಂದುಸ್ಥಾನಿ ಮತ್ತು ಕರ್ಣಾಟಕ ಸಂಗೀತವೆಂಬ ವಿಭಜನೆ ಆಯಿತೆಂದು ಹೇಳಬಹುದು. ಈ ಶತಮಾನದ ಕರ್ಣಾಟಕ ಚಕ್ರವರ್ತಿ ಚಾಲುಕ್ಯ ಸೋಮೇಶ್ವರ ಭೂಲೋಕಮಲ್ಲನ “ಮಾನಸೋಲ್ಲಾಸ”ವೆಂಬ ಬೃಹತ್ ಗ್ರಂಥದಲ್ಲಿ ಮೊಟ್ಟಮೊದಲಿಗೆ ದಕ್ಷಿಣ ದೇಶದ ಸಂಗೀತವನ್ನು ‘ಕರ್ಣಾಟಕ ಸಂಗೀತ’ವೆಂದು ಕರೆದು, ಅದರ ಕೆಲವು ವೈಶಿಷ್ಟ್ಯಗಳನ್ನು ಹೇಳಿದ್ದಾನೆ. ಮುಂದೆ ಹದಿಮೂರನೆ ಶತಮಾನದಲ್ಲಿ ಹರಿಪಾಲನ “ಸಂಗೀತ ಸುಧಾಕರ”ವೆಂಬ ಗ್ರಂಥದಲ್ಲಿ ಸ್ಪಷ್ಟವಾಗಿ ಈ ರೀತಿ ಹೇಳಿದೆ.

ತದಪಿ ದ್ವಿವಿಧಂ ಜ್ಞೇಯಂ ದಕ್ಷಿಣೋತ್ತರ ಭೇದತಃ |
ಕರ್ಣಾಟಕ ದಕ್ಷಿಣೇಸ್ಯಾತ್ ಹಿಂದುಸ್ಥಾನಿ ತಥೋತ್ತರೇ |

ಹೀಗೆ ದಕ್ಷಿಣ ಭಾರತದ ಸಂಗೀತವನ್ನು ಕರ್ಣಾಟಕ ಸಂಗೀತವೆಂದೂ, ಉತ್ತರ ಭಾರತದ ಸಂಗೀತವನ್ನು ಹಿಂದುಸ್ಥಾನಿ ಸಂಗೀತವೆಂದೂ ವಿಭಜಿಸಿ ಈ ಎರಡು ಪದ್ಧತಿಗಳಿಗೂ ಹೇಳಿದ್ದಾನೆ. ಇದೇ ಕಾಲದ ವಿದ್ಯಾರಣ್ಯರೂ ಈ ವಿಭಜನೆಯನ್ನು ಹೇಳಿದ್ದಾರೆ. ಈ ಎರಡು ಪದ್ಧತಿಗಳಿಗೂ ಮೂಲ ಒಂದೇ ಆದರೂ ಹಿಂದೂಸ್ಥಾನಿ ಸಂಗೀತ ಮೊಗಲರ ಪ್ರಭಾವಕ್ಕೊಳ ಗಾಗಿ ತನ್ನದೇ ಆದ ಒಂದು ಶೈಲಿಯನ್ನು ರೂಢಿಸಿಕೊಂಡಿತು. ದಕ್ಷಿಣ ಭಾರತದ ಸಂಗೀತ ಯಾವ ಅನ್ಯ ಪ್ರಭಾವಕ್ಕೂ ಒಳಗಾಗದೆ ಶುದ್ಧ ರೂಪವನ್ನು ಉಳಿಸಿಕೊಂಡಿತು. ಇದನ್ನು ಪೋಷಿಸಿ ಬೆಳೆಸಲು ಕರ್ಣಾಟಕವೇ ಕಾರಣವಾದುದರಿಂದ ಇದಕ್ಕೆ ‘ಕರ್ಣಾಟಕ ಸಂಗೀತ’ವೆಂಬ ಹೆಸರು ಬಂದಿದೆ.

ಆದರೆ ಸಾಮಾನ್ಯವಾಗಿ ಹಿಂದುಸ್ಥಾನಿ ಸಂಗೀತದಲ್ಲಿ ಹೆಚ್ಚು ಶ್ರುತಿ ಶುದ್ಧತೆಯೂ, ಕರ್ಣಾಟಕ ಸಂಗೀತದಲ್ಲಿ ಹೆಚ್ಚು ತಾಳ ಪ್ರಸ್ತಾರವೂ ಇರುವುದಾಗಿ ಭಾವಿಸಲಾಗಿದೆ. ಅಂದರೆ, ಹಿಂದುಸ್ಥಾನಿ ಸಂಗೀತದಲ್ಲಿ ತಾಳವಿಲ್ಲವೆಂದಾಗಲಿ, ಕರ್ಣಾಟಕ ಸಂಗೀತದಲ್ಲಿ ಶ್ರುತಿ ಶುದ್ಧತೆ ಇಲ್ಲವೆಂದಾಗಲಿ ಅರ್ಥವಲ್ಲ.

ಕರ್ಣಾಟಕ ಸಂಗೀತದಲ್ಲಿ ಕಂಡುಬರುವ ವಿಶೇಷ ಗಮಕ ಪ್ರಯೋಗಗಳಿಂದ ಹಾಗೂ ತಾಳ ಪ್ರಸ್ತಾರದ ವೈವಿಧ್ಯಗಳು, ಸ್ವರಕಲ್ಪನೆ ಮುಂತಾದುವುಗಳಿಂದ ಬೌದ್ದಿಕ ಹಾಗೂ ಭಾವಪೂರ್ಣವಾದ ಸಂಗೀತದ ಕಲ್ಪನೆಗಳು ಸ್ಫುರಿಸಿ ಶ್ರೋತೃಗಳಿಗೆ ಒಂದು ಶ್ರುತಿಲೀನತೆ ಮೀರಿದ ಅನುಭವ ಉಂಟಾಗುತ್ತದೆ.

ಭಾರತೀಯ ಸಂಗೀತಕ್ಕೆ ಮೂಲ ಆಕರಗಳಾದ ಭರತನ ‘ನಾಟ್ಯಶಾಸ್ತ್ರ’, ಮತಂಗನ ‘ಬೃಹದ್ದೇಶಿ’, ಸಾರಂಗದೇವನ ‘ಸಂಗೀತರತ್ನಾಕರ’ ಮುಂತಾದವು ಎರಡು ಪದ್ಧತಿಗಳಿಗೂ ಸಮಾನವಾದ ಆಧಾರ ಗ್ರಂಥಗಳು. ಸಪ್ತಸ್ವರಗಳು, ಸರಿಗಮ ಪದನಿ ಎಂಬ ಸ್ವರ ಸಂಕೇತಾಕ್ಷರ ಗಳು, ಪ್ರಕೃತಿ ವಿಕೃತಿ ಸ್ವರಗಳು, ಅಭ್ಯಾಸ ಕ್ರಮಗಳಾದ ಸ್ವರಾವಳಿ, ಲಕ್ಷಣಗೀತೆಗಳು ಮುಂತಾದವು ಎರಡು ಪದ್ಧತಿಗಳಿಗೂ ಒಂದೇ. ಆಧಾರ ಶೃತಿಗಾಗಿ ತಂಬೂರಿಯೇ ಶ್ರೇಷ್ಠವಾದುದೆಂದು ಎರಡು ಪದ್ಧತಿಗಳವರೂ ಅಂಗೀಕರಿಸಿದ್ದಾರೆ. ಇಪ್ಪತ್ತೆರಡು ಶ್ರುತಿಗಳ ಉಪಯೋಗವನ್ನು, ಮನೋಧರ್ಮ ಸಂಗೀತದ ರಾಗಾಲಾಪನೆ ಮತ್ತು ಲಯ ವೈವಿಧ್ಯವನ್ನು ಎರಡು ಪದ್ಧತಿಗಳಲ್ಲೂ ಕಾಣಬಹುದು.

ನಮ್ಮಲ್ಲಿ ಸಾಹಿತ್ಯ ರಚನೆ ವೈವಿಧ್ಯಪೂರ್ಣವಾಗಿದೆ. ಅದರಲ್ಲಿ ಸಾಹಿತ್ಯವಿಲ್ಲದ ಗತ್ತುಗಳು ವಿಶೇಷವಾಗಿ ಬಳಕೆಯಲ್ಲಿವೆ. ಹಿಂದುಸ್ಥಾನಿ ಪದ್ಧತಿಯ ಧ್ರುಪದ್ ಗಾಯನ ಕರ್ಣಾಟಕ ಸಂಗೀತದ ಪಲ್ಲವಿ ಗಾಯನವನ್ನು ಹೋಲುತ್ತದೆ. ಸ್ವರ ಕಲ್ಪನೆ ಕರ್ಣಾಟಕ ಸಂಗೀತದಲ್ಲಿ ಇರುವಷ್ಟು ಹಿಂದೂಸ್ಥಾನಿ ಸಂಗೀತದಲ್ಲಿ ಬೆಳೆದಿಲ್ಲ. ಕರ್ಣಾಟಕ ಸಂಗೀತದಲ್ಲಿ ರಾಗಮಾಲಿಕಾ ಶ್ಲೋಕಗಳನ್ನು ಹಾಡುವ ಪದ್ಧತಿ ಬಹಳ ರಂಜನೀಯವಾಗಿರುತ್ತದೆ. ಹಿಂದೂಸ್ಥಾನಿ ಪದ್ಧತಿಯಲ್ಲಿ ಇದು ಕಂಡುಬರುವುದಿಲ್ಲ. ಭಜನ್ ಮತ್ತು ಅಷ್ಟಪದಿಗಳನ್ನು ಎರಡು ಪದ್ಧತಿಗಳವರೂ ಅವರವರ ಶೈಲಿಗಳಲ್ಲಿ ಹಾಡುತ್ತಾರೆ. ಹಿಂದುಸ್ಥಾನಿ ಪದ್ಧತಿಯಲ್ಲಿ ಪಕ್ಕವಾದ್ಯ ದವರಿಗೆ ಹೆಚ್ಚು ಸ್ವಾತಂತ್ರ್ಯವಿರುವುದಿಲ್ಲ. ಕರ್ಣಾಟಕ ಸಂಗೀತದಲ್ಲಿ ಪಕ್ಕವಾದ್ಯದವರಿಗೂ ಸಮಾನಾವಕಾಶ ಕೊಡಲಾಗುತ್ತದೆ. ಕರ್ಣಾಟಕ ಸಂಗೀತದಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಅಂಶ ಅದರ ತಾಳ ಪದ್ಧತಿ. ಇದು ರಾಗದಷ್ಟೇ ಪ್ರಧಾನವಾದುದು.

ಶೇಷಣ್ಣನವರ ವೀಣಾವಾದನದ ಕುಶಲತೆಯು ಹೆಚ್ಚಾಗಿ ಮನೋಧರ್ಮಕ್ಕೆ ಸಂಬಂಧಪಟ್ಟಿದ್ದಿತು. ವೀಣೆ ಅವರ ವಶವರ್ತಿಯಾಗಿತ್ತು. ಅವರ ಹೃದಯದಲ್ಲಿ ತುಂಬಿದ ಮಹಾನಾದ ತರಂಗಗಳು ಕೈಗಳಲ್ಲಿ ಬಂದು ಸುತ್ತಲೂ ಹರಿದು ಸಾಗುತ್ತಿದ್ದವು. ನಾದವನ್ನು ಹಿಡಿತದಲ್ಲಿಟ್ಟುಕೊಂಡು ಭಾವ ಪ್ರಚೋದನೆಗೆ ರಸ ನಿರೂಪಣೆ, ಸಮಯಕ್ಕೆ ಎಷ್ಟೆಷ್ಟು ಬೇಕೋ ಆ ಮರ್ಮವನ್ನು ಕಂಡುಕೊಂಡ ಅದ್ಭುತ ಚಾತುರ್ಯ ಅವರದು. ರಾಗಾಲಾಪನೆ ಮತ್ತು ಸ್ವರಕಲ್ಪನೆಗಳನ್ನು ಮಾಡುವಾಗ ಮನೋರಂಜನೆ ಉಂಟಾಗುವಂತೆ ದಾಟುಸ್ವರ ಪ್ರಯೋಗಗಳನ್ನು ಯಶಸ್ವಿಯಾಗಿ ಪ್ರಯೋಗಿಸುವುದರಲ್ಲಿ ಇವರು ಮೊದಲಿಗರೆಂದು ಹೆಸರು. ಇವರದು ಸ್ವತಂತ್ರ ಮಾರ್ಗವಾಗಿತ್ತು. ಇವರು ಅನುಕರಣ ಪಟುಗಳಾಗಿರಲಿಲ್ಲ.

ಶೇಷಣ್ಣನವರು ವೀಣಾ ಚಕ್ರವರ್ತಿಗಳಾಗಿದ್ದುದಲ್ಲದೆ ವಾಗ್ಗೇಯಕಾರರೂ ಆಗಿದ್ದರು. ಸ್ವರಜತಿ, ವರ್ಣ, ಕೃತಿ, ತಿಲ್ಲಾನ ಮುಂತಾದ ಬೇರೆ ಬೇರೆ ರೀತಿಯ ೫೩ ಸಂಗೀತ ರಚನೆಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಕೆಲವು ಕೃತಿಗಳನ್ನು ಶೇಷದಾಸ ಎಂಬ ಅಂಕಿತದಲ್ಲಿ ರಚಿಸಿದ್ದಾರೆ.

ಈ ಕಾಲದ ಸಂಗೀತದ ತ್ರಿಮೂರ್ತಿಗಳಾಗಿದ್ದ ಶ್ಯಾಮಶಾಸ್ತ್ರಿ, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರಲ್ಲಿ ಶ್ಯಾಮಶಾಸ್ತ್ರಿಗಳೇ ಹಿರಿಯರು.

ಅಕ್ಕನ ವಚನಗಳು ಬಹಳ ರಸವತ್ತಾಗಿವೆ, ಕಾವ್ಯಮಯವಾಗಿವೆ. ಸೌಕುಮಾರ್ಯ, ಮಾಧುರ್ಯ, ಅರ್ಥಭಾವ, ಪದಬಂಧ ಪ್ರೌಢಿಮೆಯನ್ನೊಳಗೊಂಡ ಶ್ರೋತೃಗಳ ಹೃದಯ ವನ್ನು ನಾದಮಯವಾಗಿಸುತ್ತದೆ. ಇವು ಅತ್ಯುತ್ತಮ ಭಾವಗೀತೆಗಳಾಗಿದ್ದು ಹಾಡಲು ಉತ್ತಮವಾಗಿರುವ ರಚನೆಗಳಾಗಿವೆ.

ಆದಿಲ್‌ಶಾಹಿ ರಾಜರುಗಳಲ್ಲಿ ಎರಡನೆಯ ಇಬ್ರಾಹಿಂ ಆದಿಲ್‌ಶಾಹನ ಸಂಗೀತಪ್ರಿಯತೆ ಅಪರೂಪದ್ದಾಗಿತ್ತು. ಸಂಗೀತ ರಾಜಾಶ್ರಯವನ್ನು ಪಡೆಯುವುದು ಇತಿಹಾಸದಲ್ಲಿ ಹೊಸ ವಿಷಯವೇನಲ್ಲ. ಆದರೆ, ಎರಡನೆಯ ಇಬ್ರಾಹಿಂ ಆದಿಲ್‌ಶಾಹಿನಂಥ ಸಂಗೀತಪ್ರಿಯ ಬಾದಶಹ ಮಾತ್ರ ಸಂಗೀತ ಪ್ರಪಂಚದಲ್ಲಿ ಅಪರೂಪ. ಅವನ ಆಸ್ಥಾನದಲ್ಲಿ ಮುನ್ನೂರು ಜನ ಸಂಗೀತಗಾರರಿದ್ದರು. ಆತ ಸ್ವತಃ ಕವಿಯಾಗಿದ್ದನಲ್ಲದೆ ಹೆಸರಾಂತ ಸಂಗೀತಗಾರನಾಗಿದ್ದ. ಆತನ ತಂಬೂರಿಯ ಹೆಸರು ‘ಮೋತಿಖಾನ’ ಎಂದಾಗಿತ್ತು. ಅದರ ಮೇಲೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಸಂಗೀತದ ಮೇಲಿನ ಅವನ ಪ್ರಭುತ್ವದಿಂದಾಗಿ ಜನರು ಅವನನ್ನು “ನಾದಮೂರ್ತಿ’ ಎಂದು ಕರೆಯುತ್ತಿದ್ದರು. ಸಮಕಾಲೀನ ಚಿತ್ರಗಳಲ್ಲಿ ಕೂಡ ಇಬ್ರಾಹಿಂ ವಿವಿಧ ವಾದ್ಯಗಳನ್ನು ನುಡಿಸುವ ದೃಶ್ಯಗಳಿವೆ. ಅವುಗಳೆಲ್ಲ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿವೆ. ಅದು ‘ಈದ್-ಎ-ನವರಸ’ ಎಂದು ಹೆಸರಾಗಿತ್ತು.

ಈ ಸಂಗೀತಗಾರರು ಹಗಲು-ರಾತ್ರಿ ಎನ್ನದೆ ಸಂಗೀತನಿರತರಾಗಿ ಹೊಸ ಹೊಸ ರಾಗಗಳನ್ನು ಸಂಯೋಜಿಸುತ್ತಿದ್ದರು. ಸ್ವತಃ ಇಬ್ರಾಹಿಂ ಹೊಸ ಶೈಲಿಯ ಹಾಡುಗಾರಿಕೆ ಪ್ರಾರಂಭಿಸಿ, ಎರಡು ಹೊಸ ರಾಗಗಳನ್ನು ಸಂಯೋಜಿಸಿದ್ದನು. ಅವುಗಳಲ್ಲಿ ಒಂದಕ್ಕೆ ‘ನವರಸ-ಕಾನಡಾ’ ಎಂದು ಹೆಸರಿಸಿ, ಇನ್ನೊಂದಕ್ಕೆ ‘ನವರಸ-ನೌರೋಜ್’ ಎಂದು ಕರೆಯಲಾಗಿದೆ.

“ಹೇ ತಾಯಿ ಸರಸ್ವತಿಯೇ, ಇಬ್ರಾಹಿಂ ಮೇಲಿನ ನಿನ್ನ ಅನುಗ್ರಹದಿಂದ ಈ ನವರಸ ಕಾವ್ಯವು ಜಗತ್ತಿನಲ್ಲಿ ಬಹುಕಾಲ ಬಾಳುತ್ತದೆ” ಎಂದು ‘ಕಿತಾಬ-ಇ-ನೌರಾಸ’ದಲ್ಲಿ ನಮೂದಿ ಸಲಾಗಿದೆ. ‘ಬಿಸ್ಮಿಲ್ಲಾಹ’ದ ಬದಲು ಸರಸ್ವತಿಯ ಆವಾಹನೆಯೊಂದಿಗೆ ಕಾವ್ಯ ಆರಂಭ ವಾಗುತ್ತದೆ. ಮುಂದಿನ ಗೀತೆಗಳಲ್ಲಿ ಗಣಪತಿ, ಇಂದ್ರ, ಶಿವ, ಪಾರ್ವತಿಯರ ಸ್ತುತಿ ಇದೆ. ಸರಸ್ವತಿ ತನ್ನ ತಾಯಿ, ಗಣಪತಿ ತನ್ನ ತಂದೆ ಎಂದೂ ಇಬ್ರಾಹಿಂ ಒಂದೆಡೆ ಹೇಳುತ್ತಾನೆ. ಇದು ಗಮನಾರ್ಹ. ಸ್ತ್ರೀ ಸೌಂದರ್ಯ, ವಿರಹ ಸಂದರ್ಭಗಳೂ ‘ಕಿತಾಬ-ಇ-ನೌರಾಸ’ದಲ್ಲಿ ಮನೋಹರವಾಗಿ ವರ್ಣಿತವಾಗಿವೆ.