ಪ್ರೊ. ತೀ.ನಂ. ಶ್ರೀಕಂಠಯ್ಯಯನವರ ಜನ್ಮಶತಾಬ್ದಿಯನ್ನು ಆಚರಿಸುತ್ತಿರುವ ವರ್ಷದಲ್ಲಿ ಅವರು ಕನ್ನಡ ಮತ್ತು ಸಾರಸ್ವತ ಜಗತ್ತಿಗೆ ನೀಡಿದ ಶ್ರೇಷ್ಠ ಗ್ರಂಥವಾದ ‘ಭಾರತೀಯ ಕಾವ್ಯಮೀಮಾಂಸೆ’ಯ ವಿಚಾರ ಉಲ್ಲೇಖಿಸುವುದು ಔಚಿತ್ಯಪೂರ್ಣವಾಗಿದೆ.

ಕಾವ್ಯಸ್ವರೂಪ, ಉದ್ದೇಶ, ಪ್ರಯೋಜನ, ಅಲಂಕಾರ, ರೀತಿ, ಧ್ವನಿ, ರಸ ಇತ್ಯಾದಿಗಳ-ಕೂಲಂಕಷ ಪರಿಚಯವಿಲ್ಲದೆ ನಮ್ಮ ಮುಂದಣ ಉತ್ತಮ ಕಾವ್ಯವಿಮರ್ಶೆ ಸಂಭವಿಸಲಾರದು. ಸಾಹಿತ್ಯ ಸೃಷ್ಟಿಯಲ್ಲಿ ಹೇಗೋ ವಿಮರ್ಶೆಯ ದೃಷ್ಟಿಯಲ್ಲಿಯೂ ಹಾಗೆಯೇ ಪಾಶ್ಚಾತ್ಯದ ಅಂಧಾನುಕರಣವಾಗಲಿ, ಭಾರತೀಯತೆಯ ಅಂಧಾನುಸರಣವಾಗಲಿ ಉತ್ತಮ ಸೃಷ್ಟಿಗೆ ಕಾರಣವಾಗದು ಎಂದ ಮೇಲೆ ಕನ್ನಡದ ಕಾವ್ಯವಿಮರ್ಶೆ ಸಮನ್ವಯ ರೂಪವಾದ ಒಂದು ನವವಿಧಾನವನ್ನು ಅನುಸರಿಸಿ ತನ್ನ ವೈಶಿಷ್ಟ್ಯ ತೋರಿ ಲೋಕದ ಕಾವ್ಯ ವಿಮರ್ಶೆಗೆ ತೀ.ನಂ. ಶ್ರೀಯವರು ಅಪೂರ್ವ ಕಾಣ್ಕೆಯನ್ನು ಸಲ್ಲಿಸಿದ್ದಾರೆ. ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳು ಪಾಶ್ಚಾತ್ಯ ಮತ್ತು ಭಾರತೀಯ ಕಾವ್ಯಮೀಮಾಂಸೆಗಳಿಂದ ಮಾತ್ರವಲ್ಲದೆ ತತ್ವಶಾಸ್ತ್ರ, ಯೋಗವಿಜ್ಞಾನ, ಸೌಂದರ್ಯ ಮೀಮಾಂಸೆ ಮತ್ತು ಮನಶ್ಯಾಸ್ತ್ರ – ಇವು ಗಳಿಂದಲೂ ಬೆಳಕು ಪಡೆದು ಸ್ವತಂತ್ರವಾಗಿ ಪೂರ್ಣ ದೃಷ್ಟಿಯ ಕಡೆಗೆ ಮುನ್ನಡೆಯ ಬೇಕಾಗುತ್ತದೆ. ಬಹುಶಃ ಆ ಹೊಸ ಬೆಳಕಿನಲ್ಲಿ ಹಳೆಯ ತತ್ವಗಳು ತಮ್ಮ ನಿಗೂಢ ರಹಸ್ಯಗಳನ್ನೆಲ್ಲ ಬಿಚ್ಚಿಕೊಟ್ಟು ನಮ್ಮನ್ನು ಹೊಸಹೊಸ ರಸಾನುಭವಗಳಿಗೂ ಹೊಸ ಹೊಸ ತುಷ್ಟಿಪುಷ್ಟಿಗಳಿಗೂ ಕೊಂಡೊಯ್ಯಬಹುದು.

ಕಾವ್ಯದ ರಚನೆ ನಮ್ಮ ದೇಶದಲ್ಲಿ ಪ್ರಾಚೀನದ್ದಾದರೂ ಅದರ ವಿವೇಚನೆಯ ಕಡೆಗೆ ಮೇಧಾವಿಗಳ ಮನಸ್ಸು ಬೇಗ ಹರಿದಂತೆ ಕಾಣಿಸುವುದಿಲ್ಲ. ವ್ಯಾಕರಣ, ಛಂದಸ್ಸು ಮೊದಲಾದ  ವೇದದ ಷಡಂಗಗಳಲ್ಲಿ ನಮ್ಮ ಅಲಂಕಾರ ಶಾಸ್ತ್ರ ಸೇರಿಲ್ಲ; ಚತುರ್ದಶ ವಿದ್ಯೆಗಳ ಪಟ್ಟಿಯಲ್ಲಿ ಅದರ ಹೆಸರಿಲ್ಲ. ಯಾಸ್ಕನ ‘ನಿರುಕ್ತ’ದಲ್ಲೂ ಪಾಣಿನಿಯ ‘ಅಷ್ಟಾಧ್ಯಾಯಿ’ಯಲ್ಲೂ ‘ಉಪಮೆ’ಯ ಪ್ರಸ್ತಾಪವೇನೋ ಪ್ರಾಸಂಗಿಕವಾಗಿ ಬಂದಿದೆ. ಇಷ್ಟು ಮಾತ್ರದಿಂದ, ಆ ವೇಳೆಗೆ ಅಲಂಕಾರಶಾಸ್ತ್ರವೇ ಆವಿರ್ಭವಿಸಿದ್ದಿತೆಂದು ಹೇಳಲು ಸಾಧ್ಯವಿಲ್ಲ.

ಕ್ರಿ.ಶ. ೮೦೦ ರಿಂದ ಸುಮಾರು ಇನ್ನೂರೈವತ್ತು ವರ್ಷಗಳನ್ನು ಕಾವ್ಯಮೀಮಾಂಸಾಶಾಸ್ತ್ರದ ಸೃಷ್ಟಿಯುಗವೆನ್ನಬಹುದು. ಧ್ವನಿತತ್ವವು ರೂಪುಗೊಂಡು ಪ್ರಕಾಶಕ್ಕೆ ಬಂದು, ಅದರ ಮೇಲೆ ಖಂಡನ ಮಂಡನ ವಿಮರ್ಶೆ ವಿವರಣಾದಿಗಳು ನಡೆದು, ನಡುನಡುವೆ ಪ್ರತಿಪಕ್ಷಗಳು ಎದ್ದು ಉಡುಗಿಹೋಗಿ, ಕಡೆಗೆ ಧ್ವನಿಪ್ರಸ್ಥಾನವೇ ರೂಢಮೂಲವಾಗಿ ನಿಲ್ಲಲು ಇಷ್ಟು ಕಾಲ ಬೇಕಾಯಿತು. ಈ ಅವಧಿಯಲ್ಲಿ ಉದಿಸಿದಷ್ಟು ಮಂದಿ ಪ್ರತಿಭಾಶಾಲಿಗಳಾದ, ಸೂಕ್ಷ್ಮಮತಿಗಳಾದ ಲಾಕ್ಷಣಿಕರೂ, ಅವರಲ್ಲಿ ಒಬ್ಬರೊಬ್ಬರಿಗೆ ನಡೆದಷ್ಟು ವಿಚಾರ ಘರ್ಷಣವೂ ಅಲಂಕಾರ ಶಾಸ್ತ್ರದ ಚರಿತ್ರೆಯಲ್ಲಿ ಹಿಂದಾಗಲಿ ಮುಂದಾಗಲಿ ಕಾಣಬರು ವುದಿಲ್ಲ. ಹನ್ನೊಂದನೆಯ ಶತಮಾನದ ಕೊನೆಕೊನೆಯ ವೇಳೆಗೆ ಧ್ವನಿಪ್ರಸ್ಥಾನದ ದೃಷ್ಟಿಯಿಂದ ಕಾವ್ಯದ ಎಲ್ಲ ಅಂಶಗಳನ್ನೂ ಸಕ್ರಮವಾಗಿ ಪ್ರತಿಪಾದಿಸುವ ಒಂದು ಪಠ್ಯಪುಸ್ತಕ ಅವಶ್ಯಕವಾಗಿತ್ತು.

ರಸಾನುಭವದ ಸಮಯದಲ್ಲಿ ಸ್ವರಸಮುದಾಯದ ಅರಿವೂ ನಮಗೆ ಇರುತ್ತದೆ. ಅದು ನಿಂತ ಕೂಡಲೇ ರಸವು ವಿಚ್ಛೇದ ಹೊಂದುತ್ತದೆ. ಆದರೆ ಸ್ವರಗಳೇ ರಸವಲ್ಲ ಎಂದರೆ ಗಾನವು ರಸಕ್ಕೆ ವ್ಯಂಜಕ ಎಂದಾಯಿತು.

ಕಾವ್ಯದ ತಿರುಳೂ ರಸವೇ. ಕಾವ್ಯದ ಶರೀರ ಮಾತು; ಆದರೆ ಮಾತೆಲ್ಲವೂ ಕಾವ್ಯವಲ್ಲ. ಶಬ್ದ ಸಾಮ್ರಾಜ್ಯ ಅಪಾರವಾದದ್ದು. ಕಾವ್ಯ ಇದರಲ್ಲಿ ಅಮೂಲ್ಯವಾದ ಒಂದು ಭಾಗ ವೆಂಬುದು ನಿಜ. ಆದರೆ ಭಾಷೆಯೊಂದಿಲ್ಲದಿದ್ದರೆ ನಾಗರಿಕತೆಯೇ ಇರುತ್ತಿರಲಿಲ್ಲ.

ವಾಗ್ದೇವಿಗೆ ಮಾರ್ಗಗಳು ಎರಡು :

ಒಂದು ಶಾಸ್ತ್ರ. ಇನ್ನೊಂದು ಕಾವ್ಯ. ಇವುಗಳಲ್ಲಿ ಮೊದಲನೆಯದು ಪ್ರಜ್ಞೆಯಿಂದ ಜನಿಸಿದ್ದು; ಕೊನೆಯದು ಪ್ರತಿಭೆಯಿಂದ ಉದ್ಭವಿಸಿದ್ದು. ಇನ್ನು ಶಾಸ್ತ್ರ ಕಾವ್ಯಗಳ ಗುರಿಯೇ ಬೇರೆ. ಶಾಸ್ತ್ರದ ಉದ್ದೇಶವು ತತ್ವ ಪ್ರತಿಪಾದನೆ. ಇದು ಸತ್ಯ, ಇದು ಅಸತ್ಯ ಎಂದು ಒರೆಹಚ್ಚಿ ನೋಡುವುದೇ ಇದರ ಕಾರ್ಯ.

ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತ ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ. ಏಕೆಂದರೆ, ಅವನು ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನೂ ಸಾಕ್ಷಾತ್ತಾಗಿ ಕಾಣಬಲ್ಲನು.

ಆನಂದವರ್ಧನನು ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರಚಿಸುವುದೋ ಹಾಗೆ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ. ಅಚೇತನವಾದ ವಸ್ತುಗಳನ್ನು ಸಚೇತನ ವಾಗಿಯೂ, ಸಚೇತವಾದವುಗಳನ್ನು ಅಚೇತನವಾಗಿಯೂ ತನಗೆ ಇಷ್ಟಬಂದಂತೆ ಸ್ವತಂತ್ರತೆಯಿಂದ ವ್ಯವಹಾರಗೊಳಿಸುತ್ತಾನೆ. ಯಾರು ಹೃದಯದಲ್ಲೇ ಕವನ ಮಾಡಿ ಬಚ್ಚಿಡುತ್ತಾನೋ ಅವನು ಹೃದಯಕವಿ ಎಂದು ರಾಜಶೇಖರನು ಹೆಸರು ಕೊಡುತ್ತಾನೆ.

ಕ್ರಿ.ಶ. ಹತ್ತನೆಯ ಶತಮಾನವನ್ನು ನಮ್ಮ ಸಾಹಿತ್ಯದ ಸ್ವರ್ಣಯುಗವೆಂದು ಕರೆಯು ವುದುಂಟು. ಆದರೆ ಈ ಕಾಲದಲ್ಲೆಲ್ಲ ನಮ್ಮವರು ಕಾವ್ಯನಿರ್ಮಾಣದಲ್ಲಿ ಮಗ್ನರಾಗಿದ್ದರೇ ಹೊರತು ಅದರ ಲಕ್ಷಣ ವಿವೇಚನೆಗೆ ಮನಸ್ಸು ಕೊಟ್ಟಂತೆ ತೋರುವುದಿಲ್ಲ. ಭಾರತದ ಪ್ರಾಚೀನ ಲಾಕ್ಷಣಿಕರ ಕಾವ್ಯಮೀಮಾಂಸೆಯನ್ನು ಕುರಿತು ಇದುವರೆಗೆ ತೀ.ನಂ.ಶ್ರೀಯವರ ಕಾವ್ಯಮೀಮಾಂಸೆಯಷ್ಟು ಪ್ರಮಾಣಭೂತವಾದ, ಪರಿಪೂರ್ಣವಾದ ಗ್ರಂಥ ಹೊರ ಬಂದಿರಲಿಲ್ಲ. ಶಬ್ದಾರ್ಥಗಳ ಸಂಬಂಧ, ಭಾವಗಳ ವ್ಯಾಪ್ತಿ, ಶಬ್ದಶಕ್ತಿ, ಧ್ವನಿವ್ಯಾಪಾರ ಮೊದಲಾದವುಗಳ ಬಗ್ಗೆಯಷ್ಟೇ ಅಲ್ಲದೆ, ಪ್ರಾಚೀನ ವಿಮರ್ಶಕರು ಗುರುತಿಸಿದ ಮಹತ್ವದ ಮೌಲ್ಯಗಳಾದ ರಸ, ಭಾವ, ಧ್ವನಿ, ರೀತಿ, ಗುಣ, ಅಲಂಕಾರ ಮೊದಲಾದವುಗಳ ಬಗೆಗೂ ಅಧಿಕಾರಯುತ ಚರ್ಚೆ ಇಲ್ಲಿ ದೊರೆಯುತ್ತದೆ. ಈ ಚರ್ಚೆಗಳ ಮೂಲ ಸ್ವರೂಪದ ಚಿತ್ರವನ್ನು ಸಜೀವವಾಗಿ ಕೊಟ್ಟಿದ್ದರಿಂದ ಎಲ್ಲಿಯೂ ಸಂಶಯಕ್ಕೆ ಆಸ್ಪದ ಉಳಿದಿಲ್ಲ. ನಿರೂಪಣೆಯ ಶೈಲಿ, ಸರಳತೆ, ಸ್ಪಷ್ಟತೆ ಹಾಗೂ ಹೃದಯಂಗಮತೆಗಳ ದೃಷ್ಟಿಯಿಂದ ಅದ್ವಿತೀಯವಾದದ್ದು. ಮುಂದೆ ಬರಲಿರುವ ವಿಮರ್ಶೆಯ ಸಿದ್ಧಾಂತಗಳಿಗೆಲ್ಲ ಮೂಲಭೂತವಾದ ತತ್ವಗಳು ಇಂಥ ಕೃತಿಗಳ ಮೂಲಕವೇ ನಮಗೆ ದೊರೆಯಬೇಕಾದದ್ದು.

ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಬರಬರುತ್ತ ಹೆಚ್ಚು ಗಹನವಾಗುತ್ತ ನಡೆದಿದೆ. ಭಾಷಾಶಾಸ್ತ್ರ, ಮನಃಶಾಸ್ತ್ರ ಹೊಸ ಶಾಸ್ತ್ರಗಳ ಜ್ಞಾನವನ್ನು ವಿಮರ್ಶಕರು ಉಪಯೋಗಿಸುತ್ತಿದ್ದಾರೆ. ಭಾರತೀಯ ಕಾವ್ಯಮೀಮಾಂಸೆಯ ಇನ್ನೊಂದು ವಿಶೇಷವೆಂದರೆ ಅದು ಸಹೃದಯನಿಗೆ ಕೊಟ್ಟ ಮಹತ್ವ ‘ಸರಸ್ವತ್ಯಾಸ್ತ್ಯತಂ ಕವಿ ಸಹೃದಯಾಖ್ಯಂ ವಿಜಯತೇ’ ಎಂದು ಆನಂದ ವರ್ಧನ ಹೇಳುತ್ತಾನೆ. ಕವಿಯ ಕರ್ಮ ಸಫಲವಾಗುವುದು ಸಹೃದಯನಲ್ಲಿಯೇ ಎಂದು ಅವರು ಅರಿತಿದ್ದರು. ವಿಮರ್ಶೆಯೆಂದರೆ ಕವಿಯ ಕೃತಿಯನ್ನಷ್ಟೇ ಪರೀಕ್ಷೆ ಮಾಡುವುದು ವಾಡಿಕೆಯಾಗಿಬಿಟ್ಟಿದೆ.

ರಾಮಾಯಣವನ್ನು ಬರೆಯುವ ಮುನ್ನವೂ ವಾಲ್ಮೀಕಿ ಮಹರ್ಷಿಯಾಗಿಯೇ ಇದ್ದ. ಆದರೆ ಅವನಿಗೆ ಕವಿಯೆಂಬ ಪದವಿ ಪ್ರಾಪ್ತವಾಗಿರಲಿಲ್ಲ. ಭೂತ, ಭವಿಷ್ಯತ್, ವರ್ತಮಾನಗಳನ್ನೆಲ್ಲ ತನ ಅಂತರ್‌ದರ್ಶನದಿಂದ ಅರಿತಿದ್ದರೂ, ರಾಮಾಯಣದಂತಹ ಮಹಾಕಾವ್ಯವನ್ನು ಬರೆಯುವವರೆಗೆ ಅವನಿಗೆ ಕವಿ ಎಂಬ ವಿಖ್ಯಾತಿ ಇಲ್ಲ. ಏಕೆಂದರೆ ದರ್ಶನದಿಂದ (vision) ಮೈದಾಳಿದ ವಾಙ್ಮಯ ರಚನೆ ರಸಾವಹವಾದಾಗ ಮಾತ್ರ ಒಬ್ಬನು ಲೌಕಿಕ ಕವಿ ಎನಿಸುತ್ತಾನೆ. ಕೌಟುಂಬಿಕ, ಸಾಮಾಜಿಕ, ರಾಜಕೀಯ, ಐತಿಹಾಸಿಕ ಇತ್ಯಾದಿ ಎಲ್ಲ ಜೀವನವಲಯಗಳನ್ನೂ ವ್ಯಾಪಿಸಿ, ಮಾನವತೆಯ ಎಲ್ಲ ಮಾನಸಿಕ ಆಸೆ ಆಕಾಂಕ್ಷೆಗಳಿಗೂ ಇಂಬಾಗಿ, ಅವನ ಎಲ್ಲಾ ಸುಖ ದುಃಖಗಳನ್ನೂ ಮಾರ್ದನಿಸುವ ಮಹಿಮೆ ಮಹಾಕಾವ್ಯದ್ದು.

ನಮ್ಮ ಸಾಹಿತ್ಯದ ಅಧ್ಯಯನವೂ ಘನತರವಾಗುವಂತೆ, ಹೆಚ್ಚು ಓಜಸ್ವಿಯಾಗುವಂತೆ ಅದೇ ಮಾದರಿಯಲ್ಲಿ ಮಾರ್ಗದರ್ಶಕ ಕೃತಿಗಳನ್ನು ಕನ್ನಡದಲ್ಲಿ ಒದಗಿಸಿ ನಮ್ಮ ವಿದ್ವತ್ತೆಗೆ ಭದ್ರಬುನಾದಿ ಹಾಕಿದ ಮಹನೀಯರು ಇಂದಿಗೂ ಪ್ರಾತಃಸ್ಮರಣೀಯರಾಗಿದ್ದಾರೆ. ಇವರಲ್ಲಿ ಕಿಟ್ಟೆಲ್, ರೈಸ್ ಮುಂತಾದ ಯುರೋಪಿಯನ್ನರೂ ಇದ್ದಾರೆ. ಆರ್. ನರಸಿಂಹಾಚಾರ್, ಬಿ.ಎಂ.ಶ್ರೀ. ಮುಂತಾದ ಕನ್ನಡಿಗರೂ ಇದ್ದಾರೆ. ಇವರ ಮುಂದಿನ ಪೀಳಿಗೆಯವರಾದ ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಡಿ.ಎಲ್.ಎನ್. ತೀ.ನಂ.ಶ್ರೀ. ಮುಂತಾದವರು ಮೈಸೂರು ವಿಶ್ವವಿದ್ಯಾಲಯದಲ್ಲಿಯೂ, ಪ್ರೊ. ಆರ್.ಎಸ್. ಮುಗಳಿ, ಡಾ. ಎಸ್.ಸಿ. ನಂದಿಮಠ, ಡಾ. ಎ.ಎನ್. ಉಪಾಧ್ಯೆ, ಡಾ. ಮರಿಯಪ್ಪ ಭಟ್ ಮುಂತಾದವರು ಹೆಸರಾಂತ ಪ್ರಾಧ್ಯಾಪಕರು. ಇವರ ಶಿಷ್ಯೋಪಶಿಷ್ಯರೇ ಈಗಲೂ ನಾಡಿನ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವಿದ್ವತ್ತೆಯ ಪತಾಕೆಯನ್ನು ಮೇಲೆತ್ತಿ ಹಾರಿಸುತ್ತಿದ್ದಾರೆ.

ಸೃಜನಶೀಲತೆಗೂ ಪಾಂಡಿತ್ಯಕ್ಕೂ ಸಾಮರಸ್ಯವಿದ್ದಾಗಷ್ಟೇ ಉತ್ತಮೋತ್ತಮವೆಂದು ನಾಲ್ಕು ಕಾಲ ಬಲ್ಲ ವಿಮರ್ಶಕರು ಮೆಚ್ಚುವ ಕೃತಿಯ ಉದಯ ಸಾಧ್ಯವೆಂಬುದನ್ನು ವಿಶ್ವದ ಎಲ್ಲ ಸಾಹಿತ್ಯಗಳ ಇತಿಹಾಸವೂ ಎತ್ತಿ ತೋರಿಸುತ್ತದೆ.

ಆಂಗ್ಲರ ಮಾತೊಂದಿದೆ : ‘ಪರಮ ಶ್ರೇಷ್ಠವಾದ ಸಾಹಿತ್ಯ ಕೃತಿ ಎಂದೆಂದೂ ನವೀನವೇ!’

ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಒಂದು ಸಜೀವನ ವಿಕಾಸ ಪ್ರಕ್ರಿಯೆ. ಮಹಾಕವಿ ಪಟ್ಟವು ಒಬ್ಬನಿಗೆ ಬರುವುದು ಅವನ ಪ್ರತಿಭೆಯ ಮಹಿಮೆಯಿಂದ. ಈ ಬಗೆಯ ಪ್ರತಿಭಾಶಾಲಿ ಅವತರಿಸಿದಾಗ ಸನ್ನಿವೇಶ ಸಲಕರಣೆಗಳು ಹದವಾಗಿದ್ದರೆ ಅವನ ಶಕ್ತಿ ಬೇಗ ಪಾಕ ಹೊಂದುತ್ತದೆ. ಉತ್ತಮ ಫಲವನ್ನು ನೀಡುತ್ತದೆ.

ಪಂಪನ ಕೃತಿಗಳು ಹೊರಬಿದ್ದ ಬಳಿಕ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಯುಗವೇ ಮೊದಲಾಯಿತು. ಅಲ್ಲಿಂದೀಚೆಗೆ ಚಂಪೂಧಾಟಿಯಲ್ಲಿ ಕಾವ್ಯ ಬರೆದವರಿಗೆಲ್ಲ ಕನ್ನಡ ಸಾಹಿತ್ಯದ ಈ ನಂದಾದೀವಿಗೆಯಿಂದ ಎಷ್ಟು ಮಂದಿ ದೊಡ್ಡ ಕವಿಗಳು ತಮ್ಮ ಕಾವ್ಯದ ಸೊಡರುಗಳನ್ನು ಹೊತ್ತಿಸಿಕೊಂಡಿಲ್ಲ. ಗದಾಯುದ್ಧದ ರನ್ನ, ಅಭಿನವ ಪಂಪ ನಾಗಚಂದ್ರ-ಹೀಗೆ ಹೆಸರು ಹೇಳಿದರೆ ಸಾಕು ಇನ್ನೆಷ್ಟೋ ಮಂದಿ ಕವಿಗಳಲ್ಲಿ ಒಬ್ಬನು ಪಂಪನ ರಸವನ್ನು, ಮತ್ತೊಬ್ಬನು ರೀತಿಯನ್ನು, ಇನ್ನೊಬ್ಬನು ಇಂಪನ್ನು…ಹೀಗೆ ತಮ್ಮ ತಮ್ಮ ರುಚಿಗೆ ಅನುಸಾರವಾಗಿ ಮೆಚ್ಚಿದ್ದಾರೆ, ಬಯಸಿದ್ದಾರೆ.

ಸಮಕಾಲೀನ ಕವಿಗಳಿಗೆ ಸಮಕಾಲೀನ ವಿಮರ್ಶಕರಿಂದ ಎಂದೂ ನ್ಯಾಯ ಸಲ್ಲಲಾರದು ಎಂಬ ಮಾತು ಸಂಪೂರ್ಣ ಸತ್ಯವಲ್ಲದಿದ್ದರೂ, ಸಮಕಾಲೀನ ಕೃತಿಗಳ ಬಗೆಗೆ ಸಮಕಾಲೀನ ವಿಮರ್ಶಕರಿಂದ ಎಂದೆಂದೂ ಅನ್ಯಾಯವೇ ಆಗುತ್ತದೆಂಬ ಭಾವನೆ ನಿಜವಲ್ಲ. ಆದರೆ ವಿಮರ್ಶೆಗೆ, ಕಾಲಾತೀತವಾದ ಒಂದು ನಿಲುವಿಗೆ ಪ್ರಾಪ್ತವಾಗುವ ಮನೋಧರ್ಮ ವಿಮರ್ಶಕನಿಗೆ ಒದಗಿದಾಗಲೇ ವಿಮರ್ಶನ ಕ್ರಿಯೆ ಹೆಚ್ಚು ನಿರ್ದುಷ್ಟವೂ, ಪೂರ್ಣವೂ ಆಗುವುದೆಂಬುದರಲ್ಲಿ ಸಂದೇಹವಿಲ್ಲ.

ಯಾವುದೇ ಜನಾಂಗದ ಇತಿಹಾಸದಲ್ಲಿ ಸೃಜನಶೀಲವಾದ ಸಾಹಿತ್ಯ ಮೊದಲು ಹುಟ್ಟಿ ಆ ಸಾಹಿತ್ಯದ ಸ್ವರೂಪ – ಲಕ್ಷಣಗಳನ್ನು ವಿವರಿಸುವ ವಿಮರ್ಶೆ ನಂತರ ಬೆಳೆದು ಬಂದಿರುವುದು ಸಾಮಾನ್ಯ ವಾಡಿಕೆ. ಇಷ್ಟೇ ಅಲ್ಲ, ಸಾಹಿತ್ಯ ಇಲ್ಲವೆ ವಿಮರ್ಶಾ ಚಟುವಟಿಕೆಯ ಬುನಾದಿಯನ್ನು ಇಲ್ಲಿಂದಲೇ ಪ್ರಾರಂಭವಾಯಿತೆಂದು ಸುನಿರ್ದಿಷ್ಟವಾಗಿ ಬೆರಳಿಟ್ಟು ತೋರಿ ಸುವುದು ದುಸ್ತರವಾದ ಕೆಲಸ. ಅನೇಕ ಜನರು ನಡೆದು ಹೋಗಿ ರಾಜಮಾರ್ಗ ನಿರ್ಮಿತವಾಗುವ ಪೂರ್ವದಲ್ಲಿಯೇ ಕಾಲುದಾರಿಗಳು, ಬಿಡಿಬಿಡಿಯಾದ ಹೆಜ್ಜೆಯ ಗುರುತುಗಳು ಇರುವುದುಂಟು. ಆದರೆ, ಅವು ಯಾರ ಹೆಜ್ಜೆಗಳು, ಎಂದು ಇಟ್ಟವುಗಳು ಎಂಬುದನ್ನು ಗುರುತಿಸಿ ಹೇಳುವುದು ಸಾಧ್ಯವಾಗದೇ ಇರಬಹುದು.

ಲಾಂಜ್ಯಾನಸ್‌ನ್ನು ಕಾವ್ಯದ ಮೌಲ್ಯಮಾಪನದ ವಿಷಯವಾಗಿ ಪ್ರತಿಪಾದಿಸುವ ಒಂದೆರಡು ಸೂತ್ರಗಳನ್ನು ಇಲ್ಲಿ ಪರಾಮರ್ಶಿಸಬಹುದಾಗಿದೆ: ಯಾವುದು ಕೇಳಿದಷ್ಟು ಸಲವೆಲ್ಲಾ ಹೊಸ ಹೊಸ ಚಿಂತನೆಗಳಿಗೆ ಆಹಾರ ಒದಗಿಸಬಲ್ಲುದೋ, ಯಾವುದನ್ನು ಕೇಳಿದಾಗ ನಿರೋಧಿ ಸುವುದು ಅಸಾಧ್ಯವೋ, ಯಾವುದರ ನೆನಪು ಎಂದೆಂದೂ ಮಾಸಿಹೋಗದಷ್ಟು ಗಟ್ಟಿಮುಟ್ಟಾದುದೋ- ಅದು ನೈಜ ಮಹೋನ್ನತಿಯ ಎಲ್ಲ ಕಾಲದಲ್ಲಿಯೂ ಎಲ್ಲ ಜನರನ್ನು ಯಾವುದು ಮೆಚ್ಚಿಸಬಲ್ಲದೋ ಅದು ಮಹೋನ್ನತಿಯು. ಅಲ್ಲ ಕಾಲದಲ್ಲಿಯೂ ಎಲ್ಲ ಜನರನ್ನು ಯಾವುದು ಮೆಚ್ಚಿಸಬಲ್ಲದೋ ಅದು ಮಹೋನ್ನತಿಯ ನೈಜ ಸುಂದರ ಪರಿಣಾಮ. ಕೆಲವು ವಿಮರ್ಶಕರಲ್ಲಿ ಒಂದೊಂದು ಪ್ರಕಾರದ ಪ್ರಾಧಾನ್ಯತೆ ಕಂಡು ಬರುತ್ತದೆಯೆಂದು ಮಾತ್ರ ಸೂಚಿಸಬಹುದು. ಅವುಗಳೆಂದರೆ ನೀತಿನಿಷ್ಠ ವಿಮರ್ಶಾ ವಿಧಾನ, ಮಾನಸಶಾಸ್ತ್ರೀಯ ವಿಮರ್ಶಾ ವಿಧಾನ, ಸಮಾಜಶಾಸ್ತ್ರೀಯ ವಿಮರ್ಶಾವಿಧಾನ, ತಂತ್ರನಿಷ್ಠ ವಿಮರ್ಶಾ ವಿಧಾನ.

ಸಾಹಿತ್ಯವು ನೂತನ ಯುಗವನ್ನು ಸೃಷ್ಟಿಸುವಂತೆ ಸಮಕಾಲೀನ ಯುಗದ ಪ್ರಭಾವಕ್ಕೂ ಒಳಗಾಗುತ್ತದೆ. ಅದು ಯುಗಜನ್ಯ, ಯುಗಜನಕ ಎರಡೂ ಹೌದು. “Literature creates, literature is the creature of the age” ಎಂಬಿವೆರಡೂ ಋತವಾಕ್ಯಗಳು, ಮಹಾಕವಿಗಳ ಕೃತಿಗಳು ಜನಜೀವನದ ಮೇಲೆ ಚಿರಂತನ ಪ್ರಭಾವವನ್ನು ಬೀರಿರುವುದಕ್ಕೆ ಅನೇಕ ನಿದರ್ಶನ ಗಳುಂಟು. ವಾಸ್ಯ-ವಾಲ್ಮೀಕಿ, ಕಾಳಿದಾಸ-ಶೇಕ್ಸಪಿಯರ್, ಪಂಪ-ರನ್ನ, ಹರಿಹರ-ರಾಘವಾಂಕ, ಚಾಮರಸ-ಕುಮಾರವ್ಯಾಸ, ರತ್ನಾಕರ-ಸರ್ವಜ್ಞ ಇಂತಹ ಕವಿಗಳು ಜನಜೀವನದಲ್ಲಿ ಹಾಸುಹೊಕ್ಕಾಗಿರುವುದು ಸರ್ವಶ್ರುತ.