ಅಕ್ಟೋಬರ್ ಹತ್ತರಂದು ರಾಷ್ಟ್ರದ ಚೇತನ ಮತ್ತು ಸತ್ಯದ ಪ್ರವಾದಿ ಶಿವರಾಮ ಕಾರಂತರ ೧೦೩ನೇ ಹುಟ್ಟುಹಬ್ಬ ಆಚರಿಸಿದೆವು. ಸುಮಾರು ೮೦ ವರ್ಷಗಳಷ್ಟು ಕಾಲ ತಮ್ಮ ಸೃಜನಶೀಲತೆಯನ್ನು ಮೆರೆದವರು. ವೈಚಾರಿಕ ಪ್ರಜ್ಞೆಯನ್ನು ಉಳಿಸಿಕೊಂಡವರು. ಅವರ ‘ಯಕ್ಷಗಾನ ಬಯಲಾಟ’ ಕೃತಿಗೆ ಸ್ವೀಡನ್ ದೇಶದ ಅಕಾಡೆಮಿ ಪ್ರಶಸ್ತಿ ದೊರಕಿತು. ಸ್ವಿಡನ್ ದೇಶದ ಅಕಾಡೆಮಿ ಪ್ರಶಸ್ತಿ. ಯಕ್ಷಗಾನ ಬ್ಯಾಲೆಗಳನ್ನು ಸೃಷ್ಟಿಸಿ, ಹಳೆಯದನ್ನು ವರ್ತಮಾನದ ಬೆಳಕಿನಲ್ಲಿ ಸಂಸ್ಕರಿಸಿದರು. ಇಂಗ್ಲೆಂಡಿನ ಪ್ರತಿಷ್ಠಿತ ಮ್ಯಾಂಚೆಸ್ಟರ್ ಗಾರ್ಡಿಯನ್ ಪತ್ರಿಕೆ ಸೆಪ್ಟೆಂಬರ್ ೩೦, ೧೯೮೨ರಲ್ಲಿ ಹೀಗೆ ಬರೆಯಿತು: “ಭಾರತ ದೇಶದ ನಾಟಕ ಪರಂಪರೆಯಲ್ಲಿ ಸುಲಭದಲ್ಲಿ ನಿರೀಕ್ಷಿಸಬಹುದಾದ ಯಕ್ಷಗಾನದಂತಹ ಕಲಾ ಪ್ರಕಾರ  ಈ ತನಕ ಲಂಡನಿಗೆ ಬಂದಿರಲಿಲ್ಲ ಎಂದರೆ ಆಶ್ಚರ್ಯವೇ ಸರಿ. ಕಥಾ ನಿರೂಪಣೆಯ ದೃಶ್ಯಾವಳಿ, ಜಿಗಿತ, ನೆಗೆತ, ಗಿರಕಿ, ಮೊಣಕಾಲೂರಿ ಸುತ್ತುವರಿತ – ಇವೆಲ್ಲ ಕುಣಿತ ಗಳೊಂದಿಗೆ, ಗೊಂಬೆಯಂತೆ ಮುಖವರ್ಣಿಕೆ, ಕಣ್ಣು ಕೋರೈಸುವ ವೇಷಭೂಷಣ – ಜತೆಗೆ ಭಾವ ಚಿಮ್ಮುವ ಸಂಗೀತ. ಇದನ್ನು ಕಂಡಾಗ, ಚೆಕೊವಸ್ಕಿಯ ಬ್ಯಾಲೆಟ್ ಲೋಕದ ನೆನಪು ಬರುತ್ತಿತ್ತು”.

ಕಾರಂತರದು ಒಂದು ಸಾಹಸಮಯ. ಬದುಕು ಅವರು ‘ಸಮಾಜಮುಖಿ’ಯಾಗಿ ಬದುಕಿದ್ದಾರೆ. ಪುಟ್ಟ ಊರಿನಲ್ಲಿ ಹುಟ್ಟಿದ ಕಾರಂತರು ವಿಶ್ವಮಾನ್ಯ ವ್ಯಕ್ತಿತ್ವಕ್ಕೆ ಬೆಳೆದಂತೆ ಕಡಲ ದಂಡೆಯ ತೊಟ್ಟಿಲಲ್ಲಿ ಬೆಳೆದ ಯಕ್ಷಗಾನ ಕಾರಂತರ ಕೈವಾಡದಿಂದಾಗಿ ಏಳು ಸಮುದ್ರ ದಾಟಿ ಪ್ರಪಂಚವನ್ನೆಲ್ಲ ಸುತ್ತಾಡಲು ಬೇಕಾದ ಬಲ ಸಂಪಾದಿಸಿಕೊಂಡಿತು. ಕಾರಂತರ ವ್ಯಕ್ತಿತ್ವದಲ್ಲಿರುವ ಒಂದು ಗುಣ ಅವರು ತಮ್ಮ ಆತ್ಮಸಾಕ್ಷಿಗನುಗುಣವಾಗಿ ಬದುಕಿದ್ದು; ಅವರೇ ಹೇಳುವಂತೆ ‘ನನ್ನ ಬಾಳ್ವೆ ನನ್ನ ಅಧಿಕಾರ’ “ನನ್ನದು ಯಾವೊಂದು ಸಿದ್ಧಾಂತವನ್ನು ಕುರಿತು, ಬದ್ಧವಾದ ಸಾಹಿತ್ಯದ ರೀತಿಯಲ್ಲ. ನಾನು, ನನ್ನ ಅನುಭವಕ್ಕೂ, ಆತ್ಮಸಾಕ್ಷಿಗೂ ಬದ್ಧನು” ಅವರೇನೂ ನಾಸಿಕ್ತರಾಗಿರಲಿಲ್ಲ. ಮೂಲಭೂತವಾದಿಯೂ ಆಗಿರಲಿಲ್ಲ.

ಅವರ ಕಾದಂಬರಿಗಳು ಸತ್ಯದ ಶಿಲಾಶಾಸನಗಳಂತೆ. ಕೆ.ಕೆ. ಹೆಬ್ಬಾರ್‌ರವರು ಕಾರಂತರ ‘ಸಂಪೂರ್ಣ ನೋಟ’ ಎಂಬ ಚಿತ್ರ ರೂಪಕದಲ್ಲಿ ಕಾರಂತರ ವಿಶ್ವರೂಪವನ್ನು ಚಿತ್ರಿಸಿದರು. ಚತುರ್ಮುಖ ಬ್ರಹ್ಮರೂಪ-ಎಡಭಾಗದಲ್ಲಿ ನಾಲ್ಕು ಕೈಗಳು, ದೂರದ ನೆಟ್ಟ ನೋಟದಲ್ಲಿ ಉಲ್ಲಾಸ, ಯಾತನೆ, ಸೋಜಿಗತನ, ವಿಚಾರಿಸುವ ಹುಟ್ಟುಗುಣ ಬೆರೆತಿವೆ. ಈ ಎಡದಿಕ್ಕಿನ ಒಂದು ಕೈ ಮೇಲೆತ್ತಿದೆ. ಅದು ಚಂದ್ರನತ್ತ ಬೆರಳುಮಾಡಿ ಏನೋ ಸಂಕೇತ ನೀಡಿದೆ. ಉಳಿದ ಮೂರು ಕೈಗಳಲ್ಲಿ ಹಸ್ತಲಿಖಿತ ಪ್ರತಿಗಳಿವೆ. ಬಲಗೈ ಅದರ ಶೋಧವನ್ನು ಚಂದ್ರನ ಹೊಳಪಿನ ಕಡೆಗೆ ಒಯ್ಯುತ್ತದೆ. ಇಷ್ಟಾದರೂ ಕಾಲುಗಳು ಭೂಮಿಯ ಮೇಲೆ ಗಟ್ಟಿಯಾಗಿ ನಿಂತಿವೆ. ನಿಜ ಜೀವನದಲ್ಲಿ ಕಾರಂತರು ಹರಿದು ಹಾಕಿದ ಜನಿವಾರ ಮಾತ್ರ ಹೆಬ್ಬಾರರ ಚಿತ್ರದಲ್ಲಿ ಇನ್ನೂ ಇದೆ, ಅಲ್ಲೇ ಇದೆ, ಕಾರಂತರ ಎದೆಯ ಮೇಲೆ ಅವರು ಬುದ್ದಿಜೀವಿ ಬ್ರಾಹ್ಮಣರಾಗಿದ್ದ ಕಲ್ಪನೆ!

‘ಚೋಮನದುಡಿ’, ಅದ್ಭುತವಾದ ಕಾದಂಬರಿ; ‘ನನಗಾಗಿ ನೇಗಿಲು ಹಿಡಿಯಲಾಗದಿರುವಾಗ ಪರರಿಗಾಗಿ ಏಕೆ ಅದನ್ನು ಹಿಡಿಯಲಿ’? ಎಂಬ ಮಾತಿನ ಸ್ವಾಭಿಮಾನದ ಹಸಿವು ಜಗತ್ತನ್ನೇ ತಲ್ಲಣಗೊಳ್ಳಬಹುದೆಂದು ನೆನಪಿಸುತ್ತದೆ. ‘ಮರಳಿ ಮಣ್ಣಿಗೆ’ ಒಂದು ಮಹಾಕಾದಂಬರಿ-ನೂರು ವರ್ಷದ ಹರವು ಇದ್ದ ಏಕೈಕ ಕಾದಂಬರಿ. ಈ ರೀತಿಯ ಗುಣಾತ್ಮಕ ಚಿತ್ರಣಗಳನ್ನು ವಿಲಿಯಂ ಮೇಕ್‌ಪೀಸ್ ಢ್ಯಾಕರೇ (vanity fair), ಸರ್ ಥಾಮಸ್ ಹಾರ್ಡಿ ವೆಸೆಕ್ಸ್ ಪ್ರಾಂತ್ಯದ ಜನರನ್ನೊಳಗೊಂಡ ಕಾದಂಬರಿಗಳಲ್ಲಿ ಒದಗಿಸಿದ್ದಾರೆ. ಅವರಲ್ಲಿ ಕುತೂಹಲ ಸ್ಫೂರ್ತಿ ಕೊನೆಯವರೆಗೂ ಇತ್ತು. ಹಿಂದೆ ಚರಿತ್ರೆಯಲ್ಲಿ ಬರುವ ಚೀನೀ ಯಾತ್ರಿಕ ಹ್ಯೂವೆನ್‌ತ್ಸಾಂಗ್‌ನಂತೆ ಕಾಲಿಗೆ ಚಕ್ರಗಳನ್ನು ಕಟ್ಟಿಕೊಂಡು ಓಡಾಡುವ ಪ್ರವೃತ್ತಿ. ಬಟ್ರೆಂಟ್ ರಸ್ಸೆಲ್‌ರಂತಹ ಉದಾತ್ತ ವಿಚಾರಗಳ ಸೃಷ್ಟಿಕರ್ತರು, ನಿರ್ಣಾಯಕ ಸಾಹಿತ್ಯದ ವಿಶ್ವಾಮಿತ್ರರು!

ಅವರಷ್ಟು ಗದ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಯಾರೂ ಇಲ್ಲ. ೫೬ ನಾಟಕಗಳು ಪ್ರಕಟಗೊಂಡಿವೆ. ಬರೆದವುಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಒಟ್ಟು ೪೭ ಕಾದಂಬರಿಗಳು. ಮೊದಲ ಕೃತಿಯಲ್ಲಿ ಇರುವ ಮೊನಚನ್ನು ಕೊನೆಯವರೆಗೂ ಉಳಿಸಿಕೊಂಡರು. ಹಲವರಲ್ಲಿ ಏಕತಾನತೆ ಕಾಡುತ್ತದೆ. ವಿಷಯಗಳ ಪುನರುಕ್ತಿ ಹಾಗೂ ಯಾಂತ್ರಿಕವಾದ ನಿರೂಪಣೆಯಿಂದಾಗಿ ಅಪ್ರಸ್ತುತನಾಗುತ್ತಾರೆ. ಆದರೆ ಕಾರಂತರು ಇಳಿವಯಸ್ಸಿನಲ್ಲೂ ತಮ್ಮ ಕೃತಿಗಳ ಮೂಲಕ ತಮ್ಮತನ ಹೊರಹೊಮ್ಮಿಸಿರುವುದನ್ನು ಕಾಣಬಹುದು. ಯಾವುದೇ ಲೇಖಕರು ಸಾಮಾನ್ಯವಾಗಿ ಶೃಂಗಾರ ಅಥವಾ ದಾಂಪತ್ಯ ಜೀವನವನ್ನು ಕೃತಿಯ ಕೇಂದ್ರಬಿಂದುವನ್ನಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಕಾರಂತರು ಯಾವಾಗಲೂ ಅಸಹಾಯಕ ವ್ಯಕ್ತಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಕೃತಿ ರಚಿಸಿ ಯಶಸ್ಸು ಪಡೆದಿದ್ದಾರೆ. ಇದು ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿಯೇ ಅಪೂರ್ವವಾದ ಘಟನೆ. ಕಾರಂತರು ಬದುಕಿನ ಮುಸ್ಸಂಜೆಯಲ್ಲಿರುವ ವ್ಯಕ್ತಿಗಳನ್ನು ಆರಿಸಿಕೊಂಡು ಕಥಾವಸ್ತುವನ್ನು ನಿರೂಪಿಸುತ್ತಾರೆ. ಟಾಲ್‌ಸ್ಟಾಯ್ ಬಿಟ್ಟರೆ ಇಂತಹ ಕಾರ್ಯ ಬೇರೆ ಯಾರದೂ ಇಲ್ಲ.

ಸಮಕಾಲೀನ ರಾಜಕೀಯದ ಬಗ್ಗೆ ಕಾರಂತರು ಪ್ರತಿಕ್ರಿಯಿಸಿದ ಕ್ರಮ ಹೀಗಿದೆ : ‘ಸ್ವಾತಂತ್ರ್ಯ ದೊರಕಿದಂದಿನಿಂದ ನಾವು ಆಡುತ್ತಿದ್ದ ಆಟದಲ್ಲಿ – ಯಾವ ಜಾತಿಗೆ ಸೇರಿದ, ಯಾವ ಮತಕ್ಕೆ ಸೇರಿದ ಅಭ್ಯರ್ಥಿಯನ್ನು ಕೂಡಿಸಿಕೊಂಡರೆ ನಮ್ಮ ರಾಜಕೀಯ ಸ್ಥಾನ ಭದ್ರ ಗೊಳ್ಳುತ್ತದೆ ಎಂಬ ಒಂದೇ ತಂತ್ರ ನಮ್ಮನ್ನು ನಡೆಯಿಸುತ್ತಿದೆ. ಆ ಆಟದಲ್ಲಿ, ಬಹುಸಂಖ್ಯಾತರ ಮತ ಮುಖ್ಯ-ಸಮಾನತೆಯಾಗಲಿ, ನ್ಯಾಯವಾಗಲಿ ಮುಖ್ಯವಲ್ಲ”. ಅವರು ಎಂದೂ ಸಮೂಹಸನ್ನಿಗೆ ಒಳಗಾಗಲಿಲ್ಲ. ಅವರು ಕಲೆ ಮತ್ತು ಸಾಹಿತ್ಯ ವಿಮರ್ಶಕರನ್ನು ತನ್ನ ಹರಿತವಾದ ನಾಲಗೆಯಿಂದ ಚುರುಕುಗೊಳಿಸಿದರು.

“ವಿಮರ್ಶಕರು ಅಪ್ರಾಮಾಣಿಕನಾದರೆ, ಗಾಳಿ ಬಂದಂತೆ ತೂರುವ ವ್ಯಕ್ತಿಯಾದರೆ, ಕಲಾವಿದನನ್ನು ತನ್ನ ಹಿರಿಮೆಗೆ ಬಳಸಿಕೊಳ್ಳುವ ವಂಚಕನಾದರೆ, ಸಮಾಜಕ್ಕೆ ಅವನಿಂದ ಅಷ್ಟೇ ಹಾನಿಯುಂಟು. ಎಪ್‌ಸ್ಟಿನನ್ನು ಕಂಡು ನಕ್ಕವರು, ಗಾಗಿನ್, ಸಿಜಾನರನ್ನು ಮೂದಲಿಸಿದರು. ಜೋಲಾ, ಯೂಜಿನ್‌ಸೂ-ಇವರನ್ನು ಬಹಿಷ್ಕರಿಸಿದವರು ಸಮಾಜಕ್ಕೆ ಈ ಬಗೆಯಲ್ಲಿ ಅಪಕಾರ ಮಾಡಿದವರೇ. ಹೊಣೆಯರಿದ ವಿಮರ್ಶಕರಿಂದ ಹೀಗಾಗುವ ಸಂಭವ ಹೆಚ್ಚು”.

ಅದೊಮ್ಮೆ, ಕೇಂದ್ರ ಸಾಹಿತ್ಯ ಅಕಾಡೆಮಿಯವರು ಶಿವರಾಮ ಕಾರಂತರ ‘ಮೂಕಜ್ಜಿಯ ಕನಸ್ಸಿ’ನ ಬಗ್ಗೆ ಉಪನ್ಯಾಸ ಗೈಯಲು ನನ್ನನ್ನು ಆಹ್ವಾನಿಸಿದ್ದರು. ಆ ಉಪನ್ಯಾಸದ ಪಠ್ಯವನ್ನು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ – Shivaram Karant – The Prphet of Trust (ಶಿವರಾಮ ಕಾರಂತ ಸತ್ಯದ ಪ್ರವಾದಿ) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದರು. ಅದರ ಪ್ರತಿಯನ್ನು ಶಿವರಾಮ ಕಾರಂತರಿಗೆ ಅತ್ಯಂತ ಭಯಭೀತನಾಗಿಯೇ ಕಳುಹಿಸಿದೆ. ಒಂದೇ ವಾರದಲ್ಲಿ ಅವರಿಂದ ಉತ್ತರ ಬಂತು; ಆದರೆ, ಆತಂಕದಿಂದ ಎರಡು ದಿವಸ ಲಕೋಟೆಯನ್ನು ತೆರೆಯಲೇ ಇಲ್ಲ. ನನ್ನ ಪತ್ನಿ ಮಾಲತಿಯವರು ‘ಕಾರಂತರು ನಿಮಗೆ ಬಯ್ಯಲು ಸಾಧ್ಯವೇ ಇಲ್ಲ, ತೆರೆಯಿರಿ’ ಎಂದು ತೆರೆದಾಗ ಆಶ್ಚರ್ಯಚಕಿತನಾದೆ. ನನ್ನ ಬಾಳಿನಲ್ಲಿ ಎಂದೂ ಮರೆಯದ ಕ್ಷಣವಾಯಿತು ಅದರ ಕೆಲವು ಭಾಗ ಹೀಗಿದೆ.

“….ಇಂದು ನೀವು ಕಳುಹಿಸಿದ ದಿಲ್ಲಿ ಅಕಾಡೆಮಿ ಭಾಷಣದ-ನಕಲು ಓದಿ ನನಗೆ ಆಶ್ಚರ್ಯವಾಯಿತು. ನನ್ನ ಬಗ್ಗೆ ಸಾಕಷ್ಟು ಜನ ಹೊಗಳಿದ್ದಾರೆ – ನನ್ನ ಕಾದಂಬರಿಗಳಲ್ಲಿ ತಾವು ಮೆಚ್ಚಿದ ಅನುರಕ್ತಿಯ ವಿಷಯಗಳಿಗಾಗಿ ಕೊಂಡಾಡಿದ್ದಾರೆ. ಈ ದೃಷ್ಟಿಯಿಂದ ಹಲವು ಶ್ರದ್ಧಾಳುಗಳನ್ನು ಕೆರಳಿಸಿದ ಮೂಕಜ್ಜಿಯ ಕತೆಯ ಬಗ್ಗೆ ಮೂಕಜ್ಜಿ ಸಾಂಪ್ರದಾಯಿಕರನ್ನು ಕೆರಳಿಸಿದ್ದರೆ ನೀವು ಆ ಕಥಾನಕದ ಯಾವತ್ತೂ ಸಂದಿಗ್ಧ ಸಮಸ್ಯೆಗಳ ಬಗ್ಗೆ ಹರಿಯಿಸಿದ ನೋಟ – ಈತನಕ ಯಾರೂ ಮಾಡದ ಕೆಲಸ – ನಿಮ್ಮ Appraisal ನನ್ನ ಕಲ್ಪನೆಗೆ ಸರಿಯಾದ ವಿಮರ್ಶೆ ಇದೆನಿಸಿದೆ. ನಿಮ್ಮ ಅಷ್ಟೊಂದು ಆಳವಾದ ವಿವೇಚನೆಯನ್ನು ಕಂಡು ಸಂತೋಷವೂ, ಆಶ್ಚರ್ಯವೂ ಆಯಿತು. ಯಾರೂ ಈ ತನಕ ಈ ಕಾದಂಬರಿಗೆ, ಮುಖ್ಯವಾಗಿ ಮೂಕಜ್ಜಿಗೆ ನ್ಯಾಯ ಸಲ್ಲಿಸಿದವರಿಲ್ಲ. ಅನೇಕರಿಗೆ ಅವಳು ಮೂರ್ತಿಭಂಜಕಳಾಗಿಯೇ ಕಾಣಿಸಿದ್ದಳು!”

ಕನ್ನಡದ ಕವಿಶ್ರೇಷ್ಠ ವೀ.ಸೀ.ಯವರು ಕಾರಂತರ ಕಾಲಾತೀತ ವಿಸ್ಮಯಕರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂತೆ ‘ಕಾಲನಟ’ನೆಂಬ ಶೀರ್ಷಿಕೆಯಲ್ಲಿ ಕವನ ರಚಿಸಿದ್ದಾರೆ. ಅದರ ಕೆಲವು ಸಾಲುಗಳು ಇಲ್ಲಿ ಪ್ರಸ್ತುತ :

“ಮೈಗೆ ಬಣ್ಣ ಬಳಿದುಕೊಂಡು ಕಾಗದಗಳ ಕುಚ್ಚನುಟ್ಟು
ಕಾಲಗೆಜ್ಜೆ ಝಣರೆನುತಿರೆ ಕುಣಿಸುತ್ತಾನೆ
ಹೊಸತು ಕಾಲ ಪುರುಷನಿವನು ಕುಣಯುತಾನೆ.”
………………………………………….
ಧಿಂಮಿ ಧೃಕಿಟ ಧೀಂನ ಝಣುತ, ಧೀಂ ತಕಿಟಿತ ಧೀಂ ಧೀಂನ
ಧಿತ್ತಾರಿತ ಝಂ ತಳಾಂಗು ಕುಣಿಯುತಾನೆ
ಚೆಲುವು ನೋಟ ಕಣ್ಗೆಕಟ್ಟಿ ಮೆರೆಸುತಾನೆ.
ಚಿಗರಿಯಂತೆ ಜಿಗಿಯುತಾನೆ!
ಬುಗುರಿಯಂತೆ ತಿರುಗುತಾನೆ!
ದಿಸೆಯ ಚಾಚಿ ಹಿಂಡುತಾನೆ!
ಕ್ರಾಂತಿಗಿಟ್ಟು ತೊಳಸುತಾನೆ!