ಪ್ರೊ. ಎಂ. ಮರಿಯಪ್ಪ ಭಟ್ಟ ಅವರು ಕರ್ನಾಟಕದ ಹೊರಗಿನ ತಮಿಳುನಾಡಿನಲ್ಲಿ ನೆಲೆಸಿ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ತಮ್ಮ ನಯ, ವಿನಯ ಹಾಗೂ ಸಾತ್ವಿಕ ಗುಣಗಳಿಂದ ತಮಿಳಿನ ವಿದ್ವಾಂಸರನ್ನು ಬಳಸಿಕೊಂಡು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಇಲಾಖೆ ಕಟ್ಟಿದ ಕೀರ್ತಿ ಅವರದು. ಶ್ರೀ ಮರಿಯಪ್ಪ ಭಟ್ಟ ಅವರು ಮದ್ರಾಸ್ ವಿಶ್ವವಿದ್ಯಾನಿಲಯದ ಮೂಲಕ ಮಾಡಿದ ಕನ್ನಡ ಸೇವೆ ಅನನ್ಯವಾದುದು.

ಪುತ್ತೂರು ಬಳಿಯ ಹಳ್ಳಿಯೊಂದರಲ್ಲಿ ೨೭ನೇ ಜುಲೈ ೧೯೦೬ರಲ್ಲಿ ಜನಿಸಿದ ಪ್ರೊ. ಮರಿಯಪ್ಪ ಭಟ್ಟರವರು ಪ್ರಾರಂಭದಿಂದಲೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದವರು. ೧೯೨೪ರಲ್ಲಿ ಉನ್ನತ ಶ್ರೇಣಿಯಲ್ಲಿ ಇಂಟರ್ ಮಿಡಿಯಟ್ ಉತ್ತೀರ್ಣ ರಾಗಿದ್ದರು. ಗಣಿತ ಅವರ ಪ್ರಿಯ ವಿಷಯವಾದರೂ ಬಹುಬೇಗ ಸಾಹಿತ್ಯಾಧ್ಯಯನಕ್ಕೆ ಮುಂದಾದರು. ಉಗ್ರಾಣ ಮಂಗೇಶರಾಯರು, ಮುಳಿಯ ತಿಮ್ಮಪ್ಪಯ್ಯ ಮೊದಲಾದ ವಿದ್ವನ್ಮಣಿಗಳ ಪ್ರಭಾವದಿಂದ ಅವರು ಕನ್ನಡ ಸಾಹಿತ್ಯದ ಪುರೋಭಿವೃದ್ದಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ನೇಮಕಗೊಂಡ ಎಂ. ಮರಿಯಪ್ಪ ಭಟ್ಟರವರು ಉತ್ತಮ ಸಂಶೋಧಕರು.

೧೯೫೫-೫೬ರಲ್ಲಿ ಅವರಿಗೆ ಇಂಗ್ಲೆಂಡ್‌ಗೆ ಹೋಗುವ ಅವಕಾಶ ಸಿಕ್ಕಿತು. “ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್” ಎಂಬ ಸಂಸ್ಥೆಯಲ್ಲಿ ಕೆಲಸ ಮಾಡಿ ಭಾಷಾವಿಜ್ಞಾನದ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಿದ್ದರು. ಪ್ರೊ. ಮರಿಯಪ್ಪ ಭಟ್ಟರು ಬಹುದೊಡ್ಡ ಭಾಷಾವಿಜ್ಞಾನಿಗಳು. ಭಾರತದ ಹಿರಿಯ ಭಾಷಾವಿಜ್ಞಾನಿಗಳಲ್ಲಿ ಪ್ರಮುಖರು.

ಹಸ್ತಪ್ರತಿಯ ಮೂಲಕ ಹಳಗನ್ನಡ ಕಾವ್ಯಗಳನ್ನು ಸಂಪಾದಿಸಿ ಪ್ರಕಟಿಸಿದ ಕೆಲವೇ ಲೇಖಕರಲ್ಲಿ ಮರಿಯಪ್ಪ ಭಟ್ಟರು ಒಬ್ಬರು. ಸುಮಾರು ಹತ್ತು ಗ್ರಂಥಗಳನ್ನು ಅವರು ಪ್ರಕಟಿಸಿದ್ದಾರೆ. ‘ಖಗೇಂದ್ರ ಮಣಿದರ್ಪಣ’, ‘ಅಭಿನವ ಮಂಗರಾಜ ನಿಘಂಟು’, ‘ಗುಣಚಂದ್ರನ ಛಂದಸ್ಸಾರ’, ‘ವರ್ಧಮಾನ ಪುರಾಣ’, ‘ಪಾರ್ಶ್ವನಾಥ ಪುರಾಣ’, ‘ಜಾತಕ ತಿಲಕ’, ‘ವಿಷ್ಣುಪುರಾಣ’, ‘ಸಂಗೀತ ರತ್ನಾಕರ’, ‘ವ್ಯವಹಾರ ಗಣಿತ’ ಹಾಗೂ ‘ಸದ್ಗುರು ರಹಸ್ಯ’ – ಇವು ಅವರು ಸಂಪಾದಿಸಿದ ಕೃತಿಗಳು. ಪ್ರತಿಯೊಂದು ಕೃತಿಗೂ ದೀರ್ಘವಾದ ಮುನ್ನುಡಿ ಬರೆದು ಕವಿಯ ಕಾಲ, ಜೀವನ, ಆ ಕಾಲದ ಸಾಮಾಜಿಕ ಪರಿಸ್ಥಿತಿ ಮುಂತಾದ ವಿಚಾರಗಳನ್ನು ಚರ್ಚಿಸಿದ್ದಾರೆ. ಈ ಗ್ರಂಥದಿಂದ ಸಾಹಿತ್ಯ ಚರಿತ್ರೆಯ ರಚನೆಗೆ ತುಂಬಾ ಅನುಕೂಲವಾಗುತ್ತದೆ. ಕನ್ನಡನುಡಿ ಇವರಿಂದ ಸಂಪನ್ನವಾಯಿತು.

‘ಕವಿ ರನ್ನನು ಚಿತ್ರಿಸಿದ ಸಮಾಜ’ ಎಂಬ ಅವರ ಪ್ರಬಂಧ ಹತ್ತನೆಯ ಶತಮಾನದ ಸಮಾಜದ ತಿಳಿವಿಗೆ ತುಂಬಾ ಸಹಕಾರಿಯಾಗಿದೆ. ಸಾಹಿತ್ಯ, ಇತಿಹಾಸ, ಭಾಷಾವಿಜ್ಞಾನ, ಸಮಾಜಶಾಸ್ತ್ರ ಮೊದಲಾದ ಅನೇಕ ಅಧ್ಯಯನ ವಿಷಯಗಳಿಗೆ ಈ ಮಹಾಪ್ರಬಂಧ ಸಹಕಾರಿಯಾಗುತ್ತದೆ. ಅದೇ ರೀತಿ ‘ಮತ್ಸ್ಯಪುರಾಣ’ದಲ್ಲಿ ಅಡಕವಾಗಿರುವ ಇತಿಹಾಸ, ‘ಕನ್ನಡ ಶತಕಗಳು’ ಹಾಗೂ ‘ಕೆಲವು ಕನ್ನಡ ಶಾಸನದ ಕವಿಗಳು’ ಲೇಖನಗಳು ಸಹ ಇಂದಿಗೂ ಉಪಯುಕ್ತವಾಗಿವೆ. ಪ್ರತಿಯೊಂದು ಲೇಖನವು ಆಳವಾದ ಸಂಶೋಧನೆಯನ್ನು ಹೊಂದಿದ್ದು, ಆಯಾಯ ಕ್ಷೇತ್ರದ ಅಧ್ಯಯನಶೀಲರಿಗೆ ಮಾರ್ಗದರ್ಶನ ನೀಡುತ್ತವೆ.

‘ತುಳುನಾಡಿನಲ್ಲಿ ಕೆಲವು ಮನೆಗಳ ಮತ್ತು ಕುಲಗಳ ಹೆಸರುಗಳು’ ಎಂಬ ಲೇಖನ ಹೊಸ ದಿಕ್ಕನ್ನು ಸೂಚಿಸುತ್ತದೆ. ತುಳುನಾಡಿನಲ್ಲಿ ರಾಹು, ಕೇತುಗಳನ್ನು ಹೊರತುಪಡಿಸಿ ಇತರ ವಾರಗಳ ಹೆಸರನ್ನು ಜನರಿಗಿಡಲಾಗುತ್ತದೆ. ಐತ, ಚೋಮ, ಅಂಗಾರ, ಬೂದ, ಗುರುವ, ತುಕ್ರ(ಶುಕ), ತನಿಯ(ಶನಿ), ಮೊದಲಾದ ಹೆಸರುಗಳು ತುಳುನಾಡಿನಲ್ಲಿ ಕಾಣಬರುತ್ತವೆ. ಕಂಗಿಲ, ಕುಕ್ಕಿಲ, ಪಿಲತ್ತಡ್ಕ, ಮನೋಳಿತ್ತಾಯ, ಮೂಡಿಲ್ತಾಯ, ಹೊಳ್ಳ ಮೊದಲಾದ ಮನೆತನದ ಹೆಸರುಗಳು ಮೇಲ್ನೋಟಕ್ಕೆ ವಿಚಿತ್ರ ಶಬ್ಧವಾಗಿರಬಹುದು. ಅವುಗಳ ಹಿಂದೆ ಸ್ವಾರಸ್ಯಕರವಾದ ಚರಿತ್ರೆಯಿದೆಂಬುದನ್ನು ತೋರಿಸಿಕೊಟ್ಟವರು ಪ್ರೊ. ಮರಿಯಪ್ಪ ಭಟ್ಟರು. ತುಳುಗಾದೆ ಕುರಿತಂತೆ ಅವರ ಪ್ರಬಂಧವೊಂದು ತುಳುಸಂಸ್ಕೃತಿಯ ಅಧ್ಯಯನಕ್ಕೆ ತುಂಬಾ ಸಹಾಯಕವಾಗಿದೆ.

ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಮತ್ತು ಪ್ರಾಕೃತವನ್ನು ಕುರಿತು ಅವರು ವ್ಯಾಪಕ ಅಧ್ಯಯನ ನಡೆಸಿದ್ದಾರೆ. ಹವ್ಯಕ ಭಾಷೆ ಕುರಿತಂತೆ ಶಾಸ್ತ್ರೀಯ ಅಧ್ಯಯನ ನಡೆಸಿದ ಕೀರ್ತಿ ಇವರದು. ಮದ್ರಾಸ್ ವಿಶ್ವವಿದ್ಯಾನಿಲಯದ ಸಹಾಯದಿಂದ ಅವರು ಒಂದು ಸಾವಿರ ಪುಟದ ಕಿಟಲ್ ನಿಘಂಟನ್ನು ಪುನರ್‌ಸಂಪಾದನೆ ಮಾಡಿಸಿದ್ದಾರೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯ ಅಥವಾ ಸಂಘಸಂಸ್ಥೆ ಮಾಡದ ಕಾರ್ಯವನ್ನು ಮದ್ರಾಸ್ ವಿಶ್ವವಿದ್ಯಾನಿಲಯ ಪ್ರೊ. ಮರಿಯಪ್ಪ ಭಟ್ಟರಿಂದಾಗಿ ಮಾಡಿದೆ. ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ ಪ್ರೊ. ಮರಿಯಪ್ಪ ಭಟ್ಟರ ಉತ್ತಮ ಕೃತಿಗಳಲ್ಲಿ ಒಂದು. ಸಿಂಹಾವಲೋಕನದಿಂದ ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಲ್ಲಿ ಅಧ್ಯಯನ ಮಾಡಿದ್ದಾರೆ.

ಪ್ರೊ. ಎಂ. ಮರಿಯಪ್ಪ ಭಟ್ಟರು ತಾವು ಗಳಿಸಿದ ಶ್ರೀಮಂತ ಅನುಭವ ಮತ್ತು ಪಾಂಡಿತ್ಯದ ಮೇಲೆ ಕಿಟಲ್-ಕನ್ನಡ-ಆಂಗ್ಲ ಶಬ್ದಕೋಶವನ್ನು ಪರಿಷ್ಕರಿಸಿದರು. ಅದರ ಜೊತೆಯಲ್ಲಿ ಮ್ಯಾನರ್‌ನ ತುಳು ಶಬ್ಧಕೋಶನವನ್ನು ಶಂಕರ ಕೆದಿಲಾಯರ ಸಹಯೋಗ ದೊಂದಿಗೆ ಪರಿಷ್ಕರಿಸಿ ಮದ್ರಾಸ್ ವಿಶ್ವವಿದ್ಯಾನಿಲಯದ ಮೂಲಕ ಪ್ರಕಟಿಸಿದರು (೧೯೬೭). ಈ ಎರಡು ಬೃಹತ್ ಭಾಷಾ ಸೇವೆಗಳಿಂದ ಭಟ್ಟರು ‘ಅಭಿನವ ಕಿಟಲ್’ ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದಿ ಪಡೆದರು.

ಹವ್ಯಕ-ಆಂಗ್ಲ ಶಬ್ದಕೋಶ ಆ ಭಾಷೆಯ ವಿಶಿಷ್ಟ ರೂಪುರೇಷೆಯನ್ನು ಚಿತ್ರಿಸುತ್ತಿದೆ. ಶಬ್ಧಕೋಶ ಸಿದ್ಧಪಡಿಸುವಾಗ ಅವರು ಕಿಟಲ್ ಮಾದರಿಯನ್ನು ಅನುಸರಿಸಿದರು. ಅಲ್ಲದೆ ರೋಮನ್ ಲಿಪಿಯನ್ನು ಬಳಸಿದರು. ಒಂದು ಶಬ್ಧಕ್ಕೆ ಸಹೋದರಿ ಭಾಷೆಗಳನ್ನು ಸರಿ ಹೋಲಿಕೆ ತಂದುದೇ ಮಾತ್ರವಲ್ಲದೆ ಕನ್ನಡ ಲಿಪಿಯೊಂದಿಗೆ ಸರಿದೂಗಿಸಿಕೊಂಡರು. ಕನ್ನಡ, ತುಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಸಮಾನ ಉಪಯೋಗದ ಬಗ್ಗೆ ಕೂಡ ವಿಶೇಷವಾದ ಧ್ವನಿ ಮತ್ತು ಸಮಾನತೆಯನ್ನು ಗುರುತಿಸಿದರು. ಉದಾಹರಣೆ: ‘ಅಕ್ಕ’ ಎಂಬ ಶಬ್ದ ಹಿರಿಯ ಸಹೋದರಿಗೆ ಸಂಬಂಧಪಟ್ಟಿದ್ದು. ಇದು ಎಲ್ಲ ಭಾಷೆಯಲ್ಲಿ ಕೂಡ ಸಮಾನವಾಗಿದೆ.  ತವರಿನ ಮೂಲ ಲಿಪಿ ಮತ್ತು ಶಬ್ದಗಳನ್ನೇ ಉಪಯೋಗ ಮಾಡಿಕೊಂಡು ಸಂಸ್ಕೃತ ಮತ್ತು ಹಿಂದಿಯ ಯಾವ ನೆರಳೂ ಕೂಡ ಹವ್ಯಕ ಭಾಷೆಗೆ ಸೋಂಕದ ರೀತಿಯಲ್ಲಿ ತನ್ನ ಭಾಷೆಯ ಸ್ವಂತಿಕೆ ಮತ್ತು ಮೂಲ ಮಾತೃತ್ವವನ್ನು ಮೆರೆಸಿದರು. ಇದೊಂದು ಅದ್ಭುತ ಸಾಧನೆ.

ಪ್ರೊ. ಮರಿಯಪ್ಪ ಭಟ್ಟರವರು ದೂರದ ಮದ್ರಾಸ್‌ನಲ್ಲಿ ನೆಲೆಸಿ ತಮ್ಮ ತಾಯ್ನೆಲಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯದ ಅಭಿವೃದ್ದಿಗೆ ಬದುಕನ್ನು ಮೀಸಲಿಟ್ಟಿದ್ದಾರೆ. ಅವರು ಬಹುದೊಡ್ಡ ವಿದ್ವಾಂಸರು. ಪಾಂಡಿತ್ಯ ಹಾಗೂ ಪ್ರತಿಭೆ ಎರಡನ್ನೂ ಸಮಾನವಾಗಿ ಹೊಂದಿದ್ದ ಸುಸಂಸ್ಕೃತ ವ್ಯಕ್ತಿ. ಆದರೆ ಕನ್ನಡ ನಾಡು ಅವರನ್ನು ಬಹುಬೇಗ ಮರೆತಿರುವುದು ದುರ್ದೈವದ ಸಂಗತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಕನ್ನಡ ಸಾಹಿತಿಗಳ ಪರಿಚಯ ಸಾಲುದೀಪ ಗ್ರಂಥದಲ್ಲಿ ಅವರ ಬಗ್ಗೆ ಉಲ್ಲೇಖವೇ ಇಲ್ಲ. ಅವರ ಶತಮಾನೋತ್ಸವದ ವಿಚಾರ ಕರ್ನಾಟಕ ಸರ್ಕಾರ ಪೂರ್ತಿ ಮರೆತಂತಿದೆ. ಪ್ರೊ. ಮರಿಯಪ್ಪ ಭಟ್ಟ ಅವರನ್ನು ನೋಡಿದ್ದ, ಅವರ ಜೊತೆ ಕೆಲಸ ಮಾಡಿರುವ ಅನೇಕ ಹಿರಿಯ ವ್ಯಕ್ತಿಗಳು  ಇಂದಿಗೂ ಕನ್ನಡ ನಾಡಿನಲ್ಲಿದ್ದಾರೆ. ಅಂತಹವರ ಅನುಭವವನ್ನು ಬಳಸಿಕೊಂಡು ಪ್ರೊ. ಮರಿಯಪ್ಪ ಭಟ್ಟರನ್ನು ಕುರಿತಂತೆ ಒಂದು ಸಂಸ್ಮರಣ ಗ್ರಂಥವನ್ನು ತರುವ ಅಗತ್ಯವಿದೆ.

ಕನ್ನಡ ಮತ್ತು ತುಳು ಭಾಷಾವಿಜ್ಞಾನ ವೈಭವವನ್ನು ಮೆರೆಸಿದ ಅದ್ವಿತೀಯ ವಿದ್ವಾಂಸ ಪ್ರೊ. ಎಂ. ಮರಿಯಪ್ಪ ಭಟ್ಟರನ್ನು ಕಡಿಮೆ ಪಕ್ಷ ಅವರ ಶತಮಾನೋತ್ಸವದ ಸಂದರ್ಭದಲ್ಲಾದರೂ ಜ್ಞಾಪಿಸೋಣ. ಕನ್ನಡ ಮತ್ತು ತುಳು ಭಾಷೆ ಶ್ರೀಮಂತಗೊಳಿಸಿದ ಅದ್ವಿತೀಯ ವಿದ್ವಾಂಸರಿಗೆ ನಮನವನ್ನು ಸಲ್ಲಿಸೋಣ. ನಮ್ಮಂತಹವರು ಅವರ ಭಾಷಾವಿಜ್ಞಾನ ಕಲಿತೇ ಕನ್ನಡ ಭಾಷಾ ಪ್ರಭುತ್ವವನ್ನು ಪಡೆದೆವು. ಅಂತಹ ಅಪರೂಪದ ಒಬ್ಬ ಶ್ರೇಷ್ಠ ಕನ್ನಡಿಗನಿಗೆ ಸಲ್ಲಬೇಕಾದ ಮರ್ಯಾದೆ ಮುಂದಾದರೂ ಬರಲಿ. ಅವರ ಕಾಲದಲ್ಲಿ ಕನ್ನಡ ರಾಜ್ಯೋತ್ಸವದಂತಹ ಪ್ರಶಸ್ತಿಗಳು ಅಥವಾ ಕನ್ನಡ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮರೀಚಿಕೆಯಾಗಿಯೇ ಉಳಿಯಿತು. ಅಂದಿನ ಸಮಕಾಲೀನ ವಿದ್ವಾಂಸರಲ್ಲಿ ಅಪ್ರತಿಮರಾಗಿದ್ದರು. ಬಹುಶಃ ರಾಷ್ಟ್ರಕವಿ ಗೋವಿಂದ ಪೈಗಳ ಸರಿಸಮಾನರಾಗಿ ನಿಲ್ಲಬಲ್ಲ ಒಬ್ಬ ವಿದ್ವಾಂಸ ಸಾಹಿತ್ಯ ಅಥವಾ ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದು ವನಕುಸುಮವಾಗಿಯೇ ಬಾಡಿ ಹೋದರು.

ಚರಿತ್ರೆಯನ್ನು ತಮ್ಮ ತಮ್ಮ ಅನುಕೂಲ ದೃಷ್ಟಿಯಿಂದ ತಿರುಚಿ ತಮ್ಮ ಮೂಲಭೂತ ಪ್ರತಿಗಾಮಿ ತತ್ವಗಳಿಗೆ ಒಗ್ಗಿಸಿಕೊಂಡು ಪೂರ್ವಾಗ್ರಹ ಪೀಡಿತರಾಗಿ ವ್ಯಾಖ್ಯಾನ ಮಾಡುವ ಸಂಶೋಧಕ ಮತ್ತು ಇತಿಹಾಸಕಾರರುಳ್ಳ ಪ್ರಸಕ್ತ ಕಾಲದಲ್ಲಿ ಪ್ರೊ. ಎಂ. ಮರಿಯಪ್ಪ ಭಟ್ಟರಂತಹ ನಿರ್ಮಲ, ವಸ್ತುನಿಷ್ಠ ಮತ್ತು ಎಲ್ಲ ವಿಷಮತೆ ಮತ್ತು ಪೂರ್ವ ಕಲ್ಪಿತ ಭಾವನೆಯನ್ನು ಮೆಟ್ಟಿನಿಂತ  ಮನೋಭೂಮಿಕೆಯುಳ್ಳ ವಿದ್ವಾಂಸರ ಆದರ್ಶ ಎಲ್ಲರ ಕಣ್ತೆರೆಸಬೇಕು.

ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅವರ ಅಮೂಲ್ಯ ಕೃತಿಗಳನ್ನು ಕನ್ನಡಿಗರಿಗೆ ಮತ್ತೊಮ್ಮೆ ಪರಿಚಯಿಸಲಿ, ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಅಧ್ಯಕ್ಷರಾದ ಡಾ. ಚಂದ್ರಶೇಖರ ಪಾಟೀಲರವರು ಮುಂಚೂಣಿ ಯಲ್ಲಿ ನಿಂತು ಅವರ ಶತಮಾನೋತ್ಸವ ನೆರವೇರಿಸಿದ್ದಕ್ಕಾಗಿ ಅಭಿನಂದನೆಗಳು. ಕನ್ನಡ ಸಾಹಿತ್ಯ, ಭಾಷೆ ಪ್ರೊ. ಎಂ. ಮರಿಯಪ್ಪ ಭಟ್ಟರಂತವರ ಗೈಮೆಯಿಂದಲೇ ಪುಟಗೊಂಡು ಪ್ರಜ್ವಲಿಸಿದೆ. ಅವರಂತವರು ಹಚ್ಚಿದ ಕನ್ನಡ ಭಾಷಾ ಸಂಪದದ ನಂದಾದೀಪ ನಾಡಿನ ನೆಲದಲ್ಲಿ ಎಂದೂ ಬತ್ತಿ ಹೋಗದಿರಲಿ.