ಬುಧವಾರ  ೧೨ರಂದು ಕನ್ನಡನಾಡಿನ ಧ್ರುವತಾರೆಯೊಂದು ಅಸ್ತಂಗತವಾಯಿತು. ಆ ಧ್ರುವತಾರೆಯೇ ದಾದಾಸಾಹೇಬ್ ಪಾಲ್ಕೆ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ರಾಜಕುಮಾರ್. ಅಂತೆಯೇ ರಾಜಕುಮಾರ್ ನಿಧನರಾಗಿ ಹಲವು ದಿನಗಳ ನಂತರ ಅವರನ್ನು ನೆನೆದಾಗ ಅವರ ವ್ಯಕ್ತಿತ್ವ ಹಾಗೂ ಸಾಧನೆ ಸ್ಫುಟವಾಗಿ ಕಣ್ಣೆದುರು ನಿಲ್ಲುತ್ತದೆ. ಅನೇಕ ಜನರಿಗೆ ಡಾ. ರಾಜಕುಮಾರ್ ನಿಧನರಾದಾಗ ಏಕೆ ಅಂತಹ ಪರಿಸ್ಥಿತಿ ಉದ್ಭವವಾಯಿ ತೆಂಬುದು ಊಹಿಸಲಿಕ್ಕೆ ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆ ಕೊಂಚಮಟ್ಟಿಗೆ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ಎಡವಿರುವುದು ನಿಜ. ದುಷ್ಕರ್ಮಿಗಳು, ಸಮಾಜಘಾತಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ಆತಂಕದ ಸ್ಥಿತಿ ನಿರ್ಮಾಣಕ್ಕೆ ಕಾರಣರಾಗಿರುವುದೂ ಸತ್ಯ. ಎಂದೂ ಕನ್ನಡನಾಡು ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ರಾಜಕುಮಾರ್ ಅವರ ದಿqsರನೆ ಆದ ಸಾವಿನ ಸುದ್ದಿಯನ್ನು ನಮ್ಮ ಜನ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಯಾವುದೇ ನರಳಿಕೆ, ಸೊರಗುವಿಕೆಯಿಲ್ಲದೆ ಇಚ್ಛಾಮರಣಿಯಂತೆ ಪಯಣಿಸಿದ ಡಾ. ರಾಜಕುಮಾರ್ ಮಹಾಭಾಗ್ಯಶಾಲಿಗಳು.

ಡಾ. ರಾಜಕುಮಾರ್ ಅವರನ್ನು ಕನ್ನಡನಾಡಿನ ಜನತೆ ಎಂದೂ ಒಬ್ಬ ವ್ಯಕ್ತಿಯಾಗಿ ಕಂಡೇ ಇರಲಿಲ್ಲ ಅಥವಾ ಅವರು ಕುಟುಂಬವೊಂದರ, ಸಮುದಾಯವೊಂದರ ಪ್ರತಿನಿಧಿ ಎಂಬುದು ಅವರ ಮನಸ್ಸಿನಲ್ಲಿರಲಿಲ್ಲ. ಗುಲ್ಬರ್ಗ, ಕೊಪ್ಪಳ, ಕೋಲಾರ, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಉತ್ತರಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಹಾಸನ ಹೀಗೆ ರಾಜ್ಯದ ಯಾವ ಭಾಗಕ್ಕೆ ಹೋದರೂ ಡಾ. ರಾಜಕುಮಾರ್ ಒಂದೇ ರೀತಿಯ ಜನಪ್ರಿಯತೆಯನ್ನು ಪಡೆದಿದ್ದರು. ತಾಯಿ ತನ್ನ ಮಗುವಿಗೆ ಬೇರೆ ಬೇರೆ ರೀತಿ ಅಲಂಕರಿಸಿ ನೋಡಿ ಹರ್ಷಪಡುವಂತೆ ಕನ್ನಡ ಜನತೆ ಅವರನ್ನು ಕಣ್ಣಪ್ಪನಾಗಿ, ರಣಧೀರ ಕಂಠೀರವನಾಗಿ, ಇಮ್ಮಡಿ ಪುಲಕೇಶಿಯಾಗಿ, ಶ್ರೀಕೃಷ್ಣದೇವರಾಯನಾಗಿ, ಕನಕದಾಸರಾಗಿ, ಮಂತ್ರಾಲಯದ ರಾಘವೇಂದ್ರ ಗುರುಗಳಾಗಿ, ಸಂಧ್ಯಾರಾಗದ ಅಪೂರ್ವ ಗಾಯಕನಾಗಿ, ಬಂಗಾರದ ಮನುಷ್ಯನಾಗಿ ಕಂಡಿದ್ದಾರೆ. ಡಾ. ರಾಜಕುಮಾರ್ ಅವರ ಎಲ್ಲ ಪಾತ್ರಗಳು ಒಂದೇ ಸಮನಾದ ಜನಪ್ರಿಯತೆ ಪಡೆಯಲು ಮುಖ್ಯಕಾರಣ ಸಮಸ್ತ ಜನ ತಮ್ಮ ಆಸೆ ಆಕಾಂಕ್ಷೆಗಳನ್ನು ಆಯಾ ಪಾತ್ರಗಳ ಮೂಲಕ ಹೊರಹೊಮ್ಮಿಸಿದೆ ಅನ್ನಬಹುದು. ಅಂದರೆ ರಾಜಕುಮಾರ್ ಕೇವಲ ನಟರು ಮಾತ್ರವಲ್ಲ ಸಮಷ್ಟಿ ಜನರ ಮೌಲ್ಯಗಳ ಪ್ರತಿನಿಧಿಯಾಗಿದ್ದರು.

ನಟ ಹಾಗೂ ಜನ ತಮ್ಮಿಬ್ಬರ ಮಧ್ಯೆ ಇರುವ ಭೇದವನ್ನು ತೊಡೆದು ಹಾಕಿ ಏಕೀಭವಿಸಿರುವುದು ಕರ್ನಾಟಕದ ರಂಗಪ್ರಪಂಚದಲ್ಲಿ ಅತ್ಯದ್ಭುತವಾದ ಘಟನೆ. ಡಾ. ರಾಜಕುಮಾರ್‌ರವರಂತೆ ಜನರ ನಾಡಿಮಿಡಿತವನ್ನು ಅರಿತ ಮತ್ತೊಬ್ಬ ನಟರಿಲ್ಲ. ಹೀಗಾಗಿ ಅವರು ಬಯಸದಿದ್ದರೂ ಕನ್ನಡನಾಡಿನ ಸಾಂಸ್ಕೃತಿಕ ನಾಯಕತ್ವ ಕಳೆದ ಐವತ್ತು ವರ್ಷಗಳಿಂದಲೂ ಅವರ ಪಾಲಿಗೆ ದೊರೆತಿದೆ.

ಡಾ. ರಾಜಕುಮಾರ್ ಅವರು ತಮ್ಮ ವೈಯಕ್ತಿಕ ಬದುಕು ಹಾಗೂ ಕಲಾವಿದನ ಬದುಕು  ಬೇರೆ ಬೇರೆ ಎಂದು ಭಾವಿಸಿದವರಲ್ಲ. ತೆರೆಯ ಮೇಲೆ ನಾಯಕ ಅನುಸರಿಸುವ ಆದರ್ಶ ಹಾಗೂ ಮುಗ್ಧತೆ ಅವರ ವೈಯಕ್ತಿಕ ಬದುಕಿನಲ್ಲೂ ಕಾಣಬರುತ್ತಿತ್ತು. ಇದು ಕೂಡ ಅವರನ್ನು ಜನಪ್ರಿಯತೆಯ ತುತ್ತತುದಿಗೇರಿಸಿತು.

ಡಾ. ರಾಜಕುಮಾರ್ ಅವರು ಕಲಾವಿದರಾಗಿ ಸೀಮಿತವಾಗದೆ ಕರ್ನಾಟಕದ ಸಾಂಸ್ಕೃತಿಕ ಪುರೋವೃದ್ದಿಗೂ ಪರೋಕ್ಷವಾಗಿ ಕಾರಣವಾಗಿರುವುದನ್ನು ನಾವುಗಳು ಗುರುತಿಸಬೇಕು. ೧೯೮೦ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ಕನ್ನಡ ಚಲನಚಿತ್ರ ಬಹುಮಟ್ಟಿಗೆ ತಮಿಳುನಾಡಿನಲ್ಲಿ ಬೇರುಬಿಟ್ಟಿತ್ತು. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಹಾಗೂ ಇತರ ಗಣ್ಯರನ್ನು ಒಮ್ಮೆ ಮಾತನಾಡಿಸಿದೆ. ಕರ್ನಾಟಕದಲ್ಲೇ ಕನ್ನಡ ಚಲನಚಿತ್ರ ಬೇರೂರುವಂತೆ ಪ್ರಯತ್ನ ಮಾಡಬೇಕೆಂದು ಚಿಂತಿಸಿ ಅವರೊಡನೆ ಸಮಾಲೋಚಿಸಿ ಕನ್ನಡ ಚಲನಚಿತ್ರಗಳಿಗೆ ಶೇಕಡಾ ಐವತ್ತರಷ್ಟು ಮನರಂಜನಾ ತೆರಿಗೆಯನ್ನು ಇಳಿಸುವ ಅವರ ಪ್ರಸ್ತಾವವನ್ನು ಸರ್ಕಾರ ಒಪ್ಪಿಕೊಂಡಿತು. ಡಾ. ರಾಜಕುಮಾರ್ ಕಂಡರೆ ಚಿತ್ರಜಗತ್ತಿಗಿರುವ ಅಪಾರ ಭಕ್ತಿ, ರಾಜಕುಮಾರ್ ಅವರಿಗಿಂತ ವಯಸ್ಸಿನಲ್ಲಿ ಹಿರಿಯರಾದ ಅನೇಕರು ರಾಜಕುಮಾರ್ ಅವರ ಮಾತಿಗೆ ಅತಿಹೆಚ್ಚು ಬೆಲೆ  ಕೊಡುತ್ತಿದ್ದರು. ಅಂದಾಕ್ಷಣ ರಾಜಕುಮಾರ್ ತಮ್ಮ ಯಾವ ಅಭಿಪ್ರಾಯವನ್ನೂ ಇತರರ ಮೇಲೆ ಹೇರುತ್ತಿರಲಿಲ್ಲ.

ಇದೇ ಸಂದರ್ಭದಲ್ಲಿ ಡಾ. ರಾಜಕುಮಾರ್‌ರವರಿಗೆ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಕೊಟ್ಟಿತು. ಈ ಪ್ರಶಸ್ತಿಯನ್ನು ಪಡೆಯುವ ಸಂದರ್ಭ ದಲ್ಲಿ ರಾಜಕುಮಾರ್ ಅವರ ಜೊತೆ ದೆಹಲಿಗೆ ಹೋಗಿದ್ದೆ. ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರನ್ನು ರಾಜಕುಮಾರ್ ಅವರು ಕುಟುಂಬ ಸಮೇತ ಭೇಟಿಯಾಗಿದ್ದರು. ಇಷ್ಟು ಹೊತ್ತಿಗಾಗಲೇ ರಾಜಕುಮಾರ್ ಅವರು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಿಗರ ಕಣ್ಮಣಿಯಾಗಿದ್ದರು. ಅವರು ರಾಜಕೀಯಕ್ಕೆ ಧುಮುಕಬಹುದೆಂದು ವದಂತಿ ಕೂಡಾ ಪಸರಿಸಿತ್ತು. ಶ್ರೀಮತಿ ಇಂದಿರಾಗಾಂಧಿ ಅವರು ಡಾ. ರಾಜಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಡಾ. ರಾಜಕುಮಾರ್ ಅವರು “ತಮಗೆ ರಾಜಕಾರಣದಲ್ಲಿ ಆಸಕ್ತಿಯಿಲ್ಲವೆಂದೂ, ಕಲಾಸೇವೆಯೊಂದೇ ತಮ್ಮ ಜೀವನದ ಗುರಿಯೆಂದೂ ಶ್ರೀಮತಿ ಇಂದಿರಾಗಾಂಧಿ ಅವರ ಬಡವರ ಪರವಾದ ಕಾರ್ಯಕ್ರಮಗಳು ಕುರಿತು ತಮಗೆ ಅಪಾರವಾದ ಮೆಚ್ಚುಗೆಯಿದೆ”ಯೆಂದು ಹೇಳಿದ್ದುಂಟು.

ಡಾ. ರಾಜಕುಮಾರ್ ಅವರು ಮನಸ್ಸು ಮಾಡಿದ್ದರೆ ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿದ್ದಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟುವುದು ಕಷ್ಟಕರ ಕೆಲಸವಾಗಿರಲಿಲ್ಲ. ಅದರಲ್ಲಿ ಅವರು ಯಶಸ್ಸು ಕೂಡಾ ಪಡೆಯುತ್ತಿದ್ದರೇನೋ. ಆದರೆ ಕರ್ನಾಟಕ ರಾಷ್ಟ್ರೀಯ ಮುಖ್ಯವಾಹಿನಿಯಿಂದ ಬಹುದೂರ ಉಳಿದ ರಾಜ್ಯವಾಗುತ್ತಿತ್ತು. ಕರ್ನಾಟಕವನ್ನು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿರುವಂತೆ ಮಾಡಿದ ಕೀರ್ತಿ  ಡಾ. ರಾಜಕುಮಾರ್ ಅವರಿಗೆ ಸಲ್ಲಬೇಕು. ಅವರ ರಾಷ್ಟ್ರಪ್ರೇಮ ಅಸದೃಶವಾದುದು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾಂವನಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಏರ್ಪಟ್ಟಿತ್ತು. ಚಿಂದೋಡಿ ಲೀಲಾ ಅವರ ರಂಗಭೂಮಿಯ ಸೇವೆಯನ್ನು ಗುರುತಿಸಿ ಡಾ. ರಾಜಕುಮಾರ್ ಅಕಾಡೆಮಿಯ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಜೀವನದ ಅತ್ಯುತ್ತಮ ರಂಗ ಸಾಧನೆಗಾಗಿ ಪ್ರಶಸ್ತಿಯನ್ನು ಕೂಡಾ ಪಡೆದರು. ಆಗ ಎಲ್ಲ ಗಣ್ಯರು ಒಕ್ಕೊರಲಿನಿಂದ ಡಾ. ರಾಜಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರ ರಂಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿಗೆ ಪ್ರಶಸ್ತಿ ನೀಡುವ ಡಾ. ರಾಜಕುಮಾರ್ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿತು.

ಡಾ. ಎಚ್. ನರಸಿಂಹಯ್ಯ ಶಿಕ್ಷಣ ಸಮಿತಿ ಒಂದರಿಂದ ನಾಲ್ಕನೆಯ ತರಗತಿ ತನಕ ಮಾತೃಭಾಷೆಯಲ್ಲೇ ಮಗುವಿಗೆ ಶಿಕ್ಷಣ ಕೊಡಬೇಕೆಂದು ಶಿಫಾರಸ್ಸು ಮಾಡಿತು. ಇದನ್ನು ಅನುಷ್ಠಾನ ಮಾಡಬೇಕೆಂದು ಸಾಹಿತಿ ಕಲಾವಿದರು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಡಾ. ರಾಜಕುಮಾರ್ ಅವರು ಕೂಡಾ ಇದೊಂದು ಅಗತ್ಯವಾದ ಕನ್ನಡದ ಕೆಲಸ, ಡಾ. ನರಸಿಂಹಯ್ಯ ಸಮಿತಿಯ ವರದಿಯನ್ನೂ ಸರಕಾರ ಅನುಷ್ಠಾನ ಮಾಡಬೇಕೆಂದು ಆಗ್ರಹಪಡಿಸಿದಾಗ ಸರ್ಕಾರ ಅವರ ಸಲಹೆಯನ್ನು ಒಪ್ಪಿಕೊಂಡಿತು. ಡಾ. ರಾಜಕುಮಾರ್ ಅವರು ಅತ್ಯಂತ ಸರಳ ವ್ಯಕ್ತಿ, ಜನಸಾಮಾನ್ಯರಲ್ಲಿ ಒಬ್ಬ ಎಂಬ ಭಾವನೆಯನ್ನು ಸದಾ ಬೆಳೆಸಿಕೊಂಡ ಕಾರಣ ಅವರ ವ್ಯಕ್ತಿತ್ವದಲ್ಲೇ ವಿನಯ ಎಂಬುದು ಮಡುಗಟ್ಟಿತ್ತು. ಪ್ರತಿಭೆ, ವಿನಯ, ಮೌಲ್ಯಗಳ ಆರಾಧನೆ ಹಾಗೂ ಸುಸಂಸ್ಕೃತ ನಡವಳಿಕೆಗಳಿಂದಾಡಾ. ರಾಜಕುಮಾರ್ ಇಂದಿಗೆ ಮಾತ್ರವಲ್ಲ ಎಂದೆಂದಿಗೂ ಕನ್ನಡಿಗರ ಅಭಿಮಾನದ ದೇವತೆಯಾಗಿದ್ದಾರೆ.