ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ತಮ್ಮದೇ ಆದ ಸಾಂಸ್ಕೃತಿಕ ನೆಲೆಯನ್ನು ಹೊಂದಿವೆ. ನಂಬಿಕೆ ಸಂಪ್ರದಾಯಗಳೇ ಹಬ್ಬಕ್ಕೆ ಮೂಲ. ಹಬ್ಬಗಳಿಗೆ ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳು ದೊರಕಿವೆ. ಅದರಲ್ಲೂ ಯುಗಾದಿ, ದೀಪಾವಳಿ, ವಿಜಯದಶಮಿ, ಮೊದಲಾದ ಹಬ್ಬಗಳಿಗೆ ರಾಷ್ಟ್ರೀಯ ಪರಂಪರೆಯ ಹಿನ್ನೆಲೆಯಿದೆ. ಯುಗಾದಿ ಹಬ್ಬದಲ್ಲಿ ಚಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂಬ ಎರಡು ವಿಭಿನ್ನ ಆಚರಣೆಯಿದೆ. ಚಾಂದ್ರಮಾನ ಯುಗಾದಿಯನ್ನು ಕರ್ನಾಟಕ ಮತ್ತು ಆಂಧ್ರಪ್ರದೇಶದವರು ಆಚರಿಸಿದರೆ ಸೌರಮಾನ ಯುಗಾದಿ ಕರ್ನಾಟಕದ ಕರಾವಳಿ ತೀರ, ತಮಿಳುನಾಡು ಮತ್ತು ಇತರ ಪ್ರದೇಶಗಳಿಗೆ ಅನ್ವಯವಾಗುತ್ತದೆ.

ಯುಗಾದಿಯಂತೂ ಕವಿಗಳಿಗೆ, ಕಲಾವಿದರಿಗೆ ನಿರಂತರವಾದ ಸ್ಫೂರ್ತಿಯನ್ನುಕೊಟ್ಟ ಹಬ್ಬ. ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ವರಕವಿ ದ.ರಾ. ಬೇಂದ್ರೆಯವರ ಹಾಡು ಕನ್ನಡ ನಾಡಿನ ಪ್ರತಿಯೊಬ್ಬರಿಗೂ ಸುಪರಿಚಿತವಾದುದು. ‘ಯುಗಾದಿಯಲ್ಲಿ ಉಂಡು ದೀಪಾವಳಿಯಲ್ಲಿ ಮೀಯುವುದು’ ಎಂಬ ಗಾದೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಯುಗಾದಿ ಮೂಲತಃ ಸಂತೋಷ ಹಾಗೂ ಬಂದು ಮಿತ್ರರ ಜೊತೆ ಸೇರಿ ಸಂಭ್ರಮಿಂದ ಆಚರಿಸುವ ಹಬ್ಬವಾಗಿದೆ.

ಯುಗಾದಿ ಹಬ್ಬ ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಖಗೋಳ ವಿಜ್ಞಾನಕ್ಕಿಂತ ಹಿಂದಿನಿಂದಲೂ ಈ ಹಬ್ಬ ಚಾಲ್ತಿಯಲ್ಲಿರಬೇಕೆಂದು ಹೇಳಲಾಗಿದೆ. ವಸಂತೋದಯವೊಂದು ನಿಸರ್ಗಲೀಲೆಯಾಗಿ ಮಾನವನ ಬುದಕಿಗೆ ಸ್ಫೂರ್ತಿ ನೀಡಿ ಅವನ ಹೊಸ ಆಸೆ ಆಕಾಂಕ್ಷೆಗಳಿಗೆ ಗರಿ ಮೂಡಿಸಿದೆ. ಈ ಹಬ್ಬವು ಹೊಸ ವರ್ಷದ ಆರಂಭದ ದಿನವೂ ಹೌದು.

ಯುಗಾದಿಯ ಸಂದರ್ಭದಲ್ಲಿ ಬಳಸುವ ಬೇವು ಬೆಲ್ಲ ಭಾಷೆಸಂಸ್ಕೃತಿಯ ಹಾಗೂ ಜೀವನದ ದೃಷ್ಟಿಕೋನಕ್ಕೆ ಪ್ರತೀಕವಾಗಿ ಸದಾ ಬಳಸುವ ನುಡಿಗಟ್ಟು ಭಗವದ್ಗೀತೆಯಲ್ಲಿ ಬರುವ ಸಮಚಿತ್ತದ ದೃಷ್ಟಿಕೋನವನ್ನು ಸೂಚಿಸುತ್ತದೆ. ಬೇವು-ಬೆಲ್ಲ  ಎಂಬುದು ಬದುಕಿನ ಕಹಿ-ಸಿಹಿಯ ಸಂಕೇತ. ಬದುಕಿನಲ್ಲಿ ಯಾವಾಗಲೂ ಬೆಲ್ಲವನ್ನು ನಿರೀಕ್ಷಿಸುವಂತಿಲ್ಲ ಅಥವಾ ಎಲ್ಲರ ಬದುಕಿನಲ್ಲೂ ಸದಾಕಾಲ ಬೇವೇ ಇರುವುದಿಲ್ಲ. ಯಾರ ಬದುಕಿನಲ್ಲೂ ಸದಾ ಸಹಿಸಲಾರದಷ್ಟು ಸಂಕಷ್ಟಗಳು ತುಂಬಿರುವುದಿಲ್ಲ ಎಂಬುದು ಜ್ಞಾನಿಗಳ ಮಾತು.

ಬೇವಿಗೆ ಇತ್ತೀಚೆಗೆ ವಿಶೇಷವಾದ ಮಹತ್ವವಿದೆ. ಹಾಗೆಯೇ ಕಷ್ಟ ಸುಖಗಳನ್ನು ಅನುಭವಿಸಿದ ವ್ಯಕ್ತಿ ಬದುಕಿನಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಎಂಬುದನ್ನು ನಾವೆಲ್ಲ ಕಂಡಿದ್ದೇವೆ. ‘ಸವಾಲಿಲ್ಲದ ಬದುಕು ಎಂತಹದು?’ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಶಿಕ್ಷಣ, ಆರೋಗ್ಯ, ಕೃಷಿ, ವ್ಯಾಪಾರ ಹೀಗೆ ಯಾವ ಕ್ಷೇತ್ರಗಳಲ್ಲೂ ಸವಾಲುಗಳಿಲ್ಲ ಎಂಬುದಿಲ್ಲ. ಸವಾಲುಗಳಿದ್ದರೆ ನಿರಂತರ ಎಚ್ಚರ ಪ್ರಜ್ಞೆ ನಮ್ಮೊಡನೆ ಇರುತ್ತದೆ. ಇದು ವ್ಯಕ್ತಿಯ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಯಾವುದೇ ವ್ಯಕ್ತಿ ದೊಡ್ಡದಾಗಿ ಬೆಳೆಯಬೇಕೆಂದು ಆಶಿಸಿದರೆ ಅವನು ಸವಾಲನ್ನು ಎದುರಿಸಲು ಹಿಂಜರಿಯಬಾರದು. ಬೇವನ್ನು ತಿಂದು ಅರಗಿಸಿಕೊಳ್ಳಬಲ್ಲ. ದೃಢಕಾಯನಾದವ ಹಾಗೆಯೇ ದುಃಖವನ್ನು ಅನುಭವಿಸುವ ವ್ಯಕ್ತಿ ಮಾತ್ರ ಸಮಾಜಮುಖಿಯಾಗಿರುತ್ತಾನೆ.

ನಮ್ಮ ಎಲ್ಲ ಹಬ್ಬಗಳು ಗ್ರಾಮೀಣ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ರೂಪಿತ ವಾದ ಹಬ್ಬಗಳಾಗಿವೆ. ಆದರೆ ಅದರ ಹಿಂದಿರುವ ಮೌಲ್ಯಗಳನ್ನು ನಾವು ಗಮನಿಸುವುದು ಕಡಿಮೆ. ಯುಗಾದಿ ಅಂತಹ ಗ್ರಾಮೀಣ ಪರಿಸರದ ಹಬ್ಬಗಳಲ್ಲೊಂದು. ಯುಗಾದಿ ಹಬ್ಬದ ನಂತರದ ದಿನಗಳನ್ನು ರೈತ ಕೃಷಿಯ ಆರಂಭದ ದಿನಗಳೆಂದು ಭಾವಿಸುತ್ತಾನೆ. ಯುಗಾದಿ ಹಬ್ಬದ ನಂತರ ರೈತ ತನ್ನ ಹೊಲಕ್ಕೆ ಕೆರೆಯಿಂದ ಗೋಡು ಮಣ್ಣು ಹೊಡೆಯುತ್ತಾನೆ. ಈ ಮಣ್ಣು ಅತ್ಯಂತ ಫಲವತ್ತಾಗಿದ್ದು, ರೈತ ಗೊಬ್ಬರಕ್ಕಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಉಳಿಸುತ್ತಿತ್ತು. ಕೆರೆಯಲ್ಲಿ ಹೊಳೆತ್ತುವ ಕಾರ್ಯ ಸಹ ರೈತನಿಂದಲೇ ನಡೆಯುತ್ತಿದ್ದು, ಜಲಸಂರಕ್ಷಣೆಯ ಕಾರ್ಯವೂ ಆಗುತ್ತಿತ್ತು. ಈ ಅವಧಿಯಲ್ಲೇ ರೈತ ತನ್ನೂರಿನ ಕೆರೆ, ಕಾಲುವೆ ಹಾಗೂ ಇತರೇ ಸಾರ್ವಜನಿಕ ನೀರಿನ ಸ್ಥಳಗಳನ್ನು ಅಚ್ಚುಕಟ್ಟು ಮಾಡಿಕೊಳ್ಳುತ್ತಿದ್ದ. ಈ ಕೆಲಸ ಪರಂಪರಾನುಗತವಾಗಿ ನಡೆಯುತ್ತಿತ್ತು. ಭಾರತವನ್ನಾಳಿದ ಮುಸ್ಲಿಂ ಅರಸರು ಕೂಡಾ ಇದನ್ನು ಪೋಷಿಸಿಕೊಂಡು ಬಂದಿದ್ದರು.

ರೈತ ಯುಗಾದಿಯ ನಂತರ ತನ್ನ ಮುಂದಿನ ಕೃಷಿಗೆ ಎತ್ತು ಏರಿಗಳನ್ನು ಅಣಿಮಾಡಿ ಕೊಳ್ಳುತ್ತಿದ್ದ. ಹೊಲ ಉಳಲು ಬೇಕಾದ ಎತ್ತು, ಕೋಣಗಳನ್ನು ಪಳಗಿಸಿಕೊಂಡು ವ್ಯವಸಾಯದ ಕೆಲಸಕ್ಕೆ ಸಜ್ಜಾಗುತ್ತಿದ್ದನು. ಈಗ ಮಾವಿನಕಾಯಿ ಅವನ ಕೈಗೆ ಬರುವ ಸಂಭ್ರಮ, ಅದಕ್ಕೆ ಮುಂಚೆ ಮಾವಿನ ಉಪ್ಪಿನಕಾಯಿ ಮಾಡುವ ಸಂಭ್ರಮ ಎಲ್ಲ ಕಡೆ ಕಂಡುಬರುತ್ತದೆ. ಬಡವ-ಶ್ರೀಮಂತ ಭೇದವಿಲ್ಲದೆ ಎಲ್ಲರೂ ಉಪ್ಪಿನಕಾಯಿ ಹಾಕುವ ಪ್ರಕ್ರಿಯೆ ನಡೆಯುತ್ತದೆ. ಯುಗಾದಿಯ ನಂತರ ಹತ್ತಾರು ಜಾತ್ರೆಗಳು ಬರುವುದುಂಟು. ಈ ಎಲ್ಲ ಸಡಗರ ಸಂಭ್ರಮದ ಕೂಟಗಳು, ಆಯಾ ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ಗುಣಗಳು ಈ ಜಾತ್ರೆಗಳಲ್ಲಿ ಪ್ರತಿಫಲನವಾಗುತ್ತವೆ. ಮಾರ್ಚ್‌ನಿಂದ ಜೂನ್ ತನಕ ಬೇಸಿಗೆಯ ಕಾಲ ಕೃಷಿಕರ ದೃಷ್ಟಿಯಿಂದ ತುಂಬ ಪ್ರಾಮುಖ್ಯವಾದ ಕಾಲ. ಅವನಿಗೆ ಸ್ವಲ್ಪ ಬಿಡುವು ದೊರೆಯುವುದು ಇದೇ ಸಂದರ್ಭ. ಹೊಸ ಎತ್ತುಕೊಳ್ಳುವುದು, ಜಾತ್ರೆಗೆ ಹೋಗುವುದು, ಮದುವೆ ಮುಂಜಿ ಮೊದಲಾದ ಶುಭಕಾರ್ಯ ಮಾಡುವುದು, ರಾಮಾಯಣ, ಮಹಾಭಾರತ, ಮಹಾಕಾವ್ಯಗಳಿಂದ ಪ್ರಸಂಗಗಳನ್ನು ಆಯ್ದ ನಾಟಕ, ಯಕ್ಷಗಾನ ಆಡುವುದು, ಜಾನಪದ ಕ್ರೀಡೆಗಳನ್ನು ಆಡುವುದು, ಗ್ರಾಮದ ಸಂಪನ್ಮೂಲ ಹೆಚ್ಚಳಿಕೆ, ಬಿಟ್ಟಿ ದುಡಿಮೆ ಇವೆಲ್ಲವೂ ಅವನ ಚಟುವಟಿಕೆಗಳು.

ಆದರೆ ಇಂದು ನಮ್ಮ ಎಲ್ಲ ಹಬ್ಬಗಳು ಗ್ರಾಮೀಣ ಪರಿಸರದ ಮೌಲ್ಯಗಳನ್ನು ಕಳೆದುಕೊಂಡು ನಗರಕ್ಕೆ ಸೀಮಿತವಾದಂತಿದೆ. ಇಲೆಕ್ಟ್ರಾನಿಕ್ ಮತ್ತು ಇತರೇ ಮಾಧ್ಯಮದವರು ಬಿಂಬಿಸುವ ಘಟನೆಗಳೇ ಹಬ್ಬದ ನೈಜ ಆಚರಣೆಯ ನಿಜವಾದ ಹಬ್ಬ ಎಂಬ ಭ್ರಮೆ ಹುಟ್ಟಿಸುವಂತಾಗಿದೆ. ಹಬ್ಬಗಳು ಪ್ರಾದೇಶಿಕ ಮಹತ್ವವನ್ನು ಕಳೆದುಕೊಂಡಿದೆ. ಇದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಸಮಾಜ ತನಗೆ ತಾನೆ ಕಟ್ಟಿಕೊಂಡಿರುವ ಕೃತಕ ಗೋಡೆಯನ್ನು ಕೆಡವಬೇಕು. ಸ್ವಚ್ಛಂದ ಗಾಳಿಯಿಲ್ಲದೆ ಉಸಿರಾಡುವುದು ಹೇಗೆ? ಮನುಷ್ಯ ಸ್ವಚ್ಛಂದವಾಗಿ ಬದುಕುವುದು ಹೇಗೆ ಅವಶ್ಯವೋ ಹಾಗೇ ವಿಶಾಲ ದೃಷ್ಟಿಕೋನದಲ್ಲಿ ಬದುಕುವುದು ಅಷ್ಟೇ ಆವಶ್ಯಕ. ಸಮಾಜ ಬಹುಬೇಗ ಈ ಪರಿವರ್ತನೆಯನ್ನು ಪಡೆದು ಕೊಳ್ಳದಿದ್ದರೆ ತನ್ನ ಸ್ವಂತ ನೆಲೆಯನ್ನೇ ಕಳೆದುಕೊಳ್ಳುವ ಅಪಾಯವಿದೆ. ಪ್ರಮಾಥಿ ಸಂವತ್ಸರ ಕಳೆದು ಈಗ ಪ್ರಾರಂಭವಾಗುವ ವ್ಯಯ ಸಂವತ್ಸರವು ಹೊಸ ಆಶೋತ್ತರಗಳನ್ನು ಕಟ್ಟಿಕೊಡಲಿ.