ಒಂದು ಮನ್ವಂತರದಲ್ಲಿ ಓರ್ವ ಬಿಸ್ಮಿಲ್ಲಾಖಾನ್ ಮಾತ್ರ ಉದಯವಾಗಲು ಸಾಧ್ಯ. ಶೆಹನಾಯ್‌ಯನ್ನು ಶಾಸ್ತ್ರೀಯ ಸಂಗೀತದ ಕೇಂದ್ರ ಸ್ಥಾನಕ್ಕೊಯ್ದು ಪಂಚಭೂತಗಳಲ್ಲಿ ಲೀನವಾದರು. ದೇವರು ಕೂಡ ಅವರ ಶೆಹನಾಯ್ ಕೇಳುತ್ತಿದ್ದರು ಎಂಬುದು ಪ್ರತೀತಿ. ಅವರೊಂದು ಅತ್ಯಮೂಲ್ಯ ಅನರ್ಘ್ಯರತ್ನ. ಬಿಹಾರಿನ ದಂಬರೋನ್‌ನಲ್ಲಿ ಜನ್ಮತಾಳಿದ ಬಿಸ್ಮಿಲ್ಲಾಖಾನ್‌ರವರು ಕಾಶಿ ವಿಶ್ವನಾಥ ದೇವಾಲಯದಲ್ಲಿ ಶೆಹನಾಯ್ ಬಾರಿಸುತ್ತಿದ್ದ ಅವರ ಮಾವ ಆಲಿಬಕ್ಸ್ ವಿಲಾಯತ್‌ರಿಂದ ತರಬೇತಿಯನ್ನು ಪಡೆದರು. ದಂಬರೋನ್‌ನಲ್ಲಿ ಅವರ ಹೆಸರಿನಲ್ಲಿ ಸಭಾಭವನವನ್ನು ನಿರ್ಮಿಸಲು ಶಂಕುಸ್ಥಾಪನಾ ಸಮಾರಂಭವನ್ನು ಅನೇಕ ದಶಕಗಳ ಹಿಂದೆ ಅಂದಿನ ಸರ್ಕಾರ ಯೋಚಿಸಿತ್ತು. ಆದರೆ ಅವರ ಕೊನೆಯುಸಿರಿನ ತನಕ ತಮ್ಮ ತವರು ಗ್ರಾಮಕ್ಕೆ ಭೇಟಿ ಕೊಡುವ ಅವರ ಸದಿಚ್ಛೆ ಈಡೇರಲೇ ಇಲ್ಲ.

ಶೆಹನಾಯ್ ಮೌನವಾದರೂ ಬಿಸ್ಮಿಲ್ಲಾಖಾನ್‌ರವರ ಸಂಗೀತದ ಲಹರಿ ಜಗವಿಡೀ ಹರಡಿ ತನ್ನ ಸಿಂಚನವನ್ನು ನೀಡುತ್ತಿದೆ. ೧೯೪೭ರ ಆಗಸ್ಟ್ ೧೫ರಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಜವಾಹರಲಾಲ್ ನೆಹರೂರವರು ತ್ರಿವರ್ಣ ಧ್ವಜ ಅರಳಿಸುತ್ತಿದ್ದಾಗ ಶೆಹನಾಯ್ ಬಾರಿಸಿದ ಪರಮೋಚ್ಚ ಕೀರ್ತಿ ಅವರ ಪಾಲಿಗೆ ಬಂತು. ಎಷ್ಟೋ ಸಂಪತ್ತು ಅವರ ಮನೆ ಬಾಗಿಲಿಗೆ ಹರಿದರೂ ಆಟೋರಿಕ್ಷಾದಲ್ಲಿಯೇ ಪಯಣಿಸುತ್ತಿದ್ದರು. ಬನಾರಸ್‌ನಲ್ಲಿ ಹರಿಯುವ ಗಂಗಾನದಿ ಅವರ ಉಸಿರಾಗಿತ್ತು. ಜಲದ ನೀರವ ಧ್ವನಿ ಅವರ ಶೆಹನಾಯ್‌ನಲ್ಲಿ ಎರಕವಾಗಿ ಲೀನವಾಗುವುದನ್ನು ಕಾಣುತ್ತೇವೆ. ಅತ್ಯಂತ ಶಿಖರಪ್ರಾಯ ಕೀರ್ತಿ ಪಡೆದಿದ್ದರೂ ಕೊನೆಗೆ ಒಬ್ಬ ಅನಾಥನಂತೆ ಕಿಲುಬು ಕಾಸು ಇಲ್ಲದೆ ಅಗಲಿದುದು ಒಂದು ದುರಂತ.

ಅವರು ಸರ್ವಧರ್ಮ ಸಮನ್ವಯತೆಯ ಓರ್ವ ಪ್ರತೀಕವಾಗಿದ್ದರು. ಬಿಸ್ಮಿಲ್ಲಾಖಾನ್ ರವರ ಶೆಹನಾಯ್ ರಾಷ್ಟ್ರದ ಒಬ್ಬ ಸಾಮಾನ್ಯ ಮನುಷ್ಯರಿಂದ ರಾಷ್ಟ್ರಪತಿಯವರೆಗೆ ಅಪ್ಯಾಯಗೊಳಿಸುವ ಮತ್ತು ರಾಷ್ಟ್ರೀಯ ಐಕ್ಯತೆಯ ಸಂದೇಶವನ್ನು ಬೀರುವ ದಿವ್ಯ ಸಂಕೇತವಾಗಿತ್ತು.

ಶ್ರೀ ವಾಜಪೇಯಿಯವರು ಪ್ರಧಾನಮಂತ್ರಿ ಆಗಿದ್ದಾಗ ತನ್ನ ಜೀವನೋಪಾಯಕ್ಕಾಗಿ ಗ್ಯಾಸ್ ಏಜನ್ಸಿಯನ್ನು ಕೇಳಿದ್ದರೂ, ಅನೇಕ ಸಚಿವರ ಮತ್ತು ಪಕ್ಷದ ನಾಯಕರಿಗೆ ಸಾವಿರಾರು ಗ್ಯಾಸ್ ಏಜೆನ್ಸಿ ಅಥವಾ ಪೆಟ್ರೋಲ್‌ಬಂಕ್‌ಗಳನ್ನು ನೀಡಿದ್ದರೂ, ಭಾರತರತ್ನ ಬಿಸ್ಮಿಲ್ಲಾ ಖಾನ್‌ರವರಿಗೆ ನಿರಾಕರಿಸಲಾಯಿತು. ಬಿಸ್ಮಿಲ್ಲಾರವರು ಭಾರತದ ಏಕೆ ಜಗತ್ತಿನ ಇತಿಹಾಸದಲ್ಲಿ ಅಮರರಾಗಿದ್ದಾರೆ.

ಗಂಗಾ-ಜಮುನದ ಸಂಗಮದಂತೆ ಹಿಂದೂ ಮುಸಲ್ಮಾನ ಜನಾಂಗದ ಸಂಗಮ ಅವರ ಸಂಗೀತದಲ್ಲಿ ರೂಪುಗೊಂಡಿತ್ತು. ತಮ್ಮ ಸಂಗೀತದ ಎಳೆ ಎಳೆಗಳಲ್ಲಿ ಎರಡು ಮತ ಸಿದ್ಧಾಂತಗಳ ಎರಕವನ್ನು ಹೊಯ್ದಿದ್ದರು. ಮರಣ ಹೊಂದುವ ಕೆಲವು ಗಂಟೆಗಳ ಮೊದಲು ಕೂಡ ತುಮರಿಯನ್ನು ಗುಣುಗುಣಿಸಿದ್ದು, ಅವರ ಸಂಗೀತದ ತನ್ಮಯತೆಯನ್ನು ಎತ್ತಿ ತೋರಿಸುತ್ತದೆ. ಅವರ ಜೀವನದ ಸುತ್ತ ಸಂಗೀತ ತನ್ನ ಸುಂದರ ಬಿಡಿಸಲಾಗದ ಬಳ್ಳಿಯನ್ನು ಹೆಣೆದಿತ್ತು. ತನ್ನನ್ನು ಆಸ್ಪತ್ರೆಗೆ ಸಾಗಿಸಿದಾಗಲೂ ಶೆಹನಾಯ್‌ಯನ್ನು ಅವರ ಪಕ್ಕದಲ್ಲೇ ಇಡಲಾಗಿತ್ತು. ಯಾಕೆಂದರೆ ಒಮ್ಮೆ ಕಣ್ತೆರೆದು ನೋಡಿದಾಗ ಶೆಹನಾಯ್ ಅವರ ಮನಸ್ಸನ್ನು ತಣಿಸುತ್ತಿತ್ತು. ವಾರಣಾಸಿಯ ಬಗ್ಗೆ ಅವರಿಗೆ ಅಪಾರವಾದ ಪ್ರೇಮವಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರ ವಿಶೇಷ ಚಿಕಿತ್ಸೆಗಾಗಿ ವಾರಣಾಸಿಯಿಂದ ಬೇರೆ ನಗರಕ್ಕೆ ಸ್ಥಳಾಂತರ ಗೊಳಿಸಬೇಕೆಂದು ಯೋಚಿಸಿದಾಗ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ್ದರು. ತನ್ನ ಮರಣ ಮಾತ್ರ ತನ್ನ ಪ್ರಿಯವಾದ ನಗರದಿಂದ ಬೇರ್ಪಡಿಸಬಹುದೇ ಹೊರತು ಅನ್ಯಥಾ ಸಾಧ್ಯವಿಲ್ಲವೆಂಬ ಮಾತನ್ನು ಆಗಾಗ ಹೇಳುತ್ತಿದ್ದರು.

ಶೆಹನಾಯ್‌ಗೆ ತನ್ನದೇ ಆದ ವ್ಯಾಖ್ಯೆಯನ್ನು ಸಂಗೀತ ಸಾಮ್ರಾಜ್ಯದಲ್ಲಿ ನೀಡಿದ್ದರು. ತನ್ನ ಭೌತಿಕ ಸಂಪತ್ತನ್ನು ಹುಡುಕಾಡಿಕೊಂಡು ಪರದೇಶಗಳಿಗೆ ಹೋದವರಲ್ಲ. ಈ ದೇಶದ ಪುಣ್ಯ ನೆಲದಲ್ಲೇ ಅವರ ಜೀವನ ಅಥವಾ ಸಂಸ್ಕೃತಿ ಕಿತ್ತೊಗೆಯದ ಅನ್ಯೋನ್ಯ ಸಂಬಂಧವನ್ನು ಬೆಳೆಸಿತ್ತು. ಕರ್ನಾಟಕ ಕೊಳಲಿನ ದಿಗ್ಗಜರಾದ ಮಹಾಲಿಂಗಮ್‌ರಂತೆ ಕ್ರಾಂತಿಕಾರಿ ಹೊಸ ತಂತ್ರವನ್ನು ಶೆಹನಾಯ್‌ನಲ್ಲಿ ಉಪಯೋಗಿಸಿ ಅದನ್ನೇ ಪರಂಪರೆಯಾಗಿ ಸಂಗೀತ ಸಾಮ್ರಾಜ್ಯಕ್ಕೆ ನೀಡಿದರು. ಸಂಗೀತ ಸಾಮ್ರಾಜ್ಯದ ಆಚಾರ್ಯಪುರುಷರಾದ ಬಿಸ್ಮಿಲ್ಲಾ ಖಾನ್‌ರವರು ಸಂಗೀತ ಕ್ಷೇತ್ರದಲ್ಲಿ ಒಬ್ಬ ಯುಗಪುರುಷರೆಂದರೂ ಸರಿಹೊಂದಬಲ್ಲುದು. ವಾರಣಾಸಿಯ ಅವರ ಮನೆ ಜಗತ್ತಿನ ಸಂಗೀತಗಾರರ ಯಾತ್ರಾಸ್ಥಳವಾಗಿತ್ತು. ಅಲ್ಲಿ ಶೆಹನಾಯ್ ಬಿಟ್ಟರೆ ಯಾವುದೇ ಆಸ್ತಿ ಅಥವಾ ಖಣಜವಿರಲಿಲ್ಲ. ಅವರು ಒಬ್ಬ ಪವಿತ್ರ ಮುಸಲ್ಮಾನರಾಗಿದ್ದರು. ಅದೇ ರೀತಿಯಲ್ಲಿ ಸರಸ್ವತಿಯ ಆರಾಧಕರೂ ಆಗಿದ್ದರು. ಸಂಗೀತದ ಬಹುಮುಖೀ ಸಂಸ್ಕೃತಿಯ ಒಂದು ಶ್ರೇಷ್ಠ ಸಂಕೇತ.

ಒಮ್ಮೆ ಹೀಗೆಂದು ಹೇಳಿದರು: ‘ನಾನು ರಘುಪತಿ ರಾಘವ ರಾಜಾರಾಮ್ ಹಾಡಿದಾಗ ಮಕ್ಕಳಿಂದ ಕೈಚಪ್ಪಾಳೆಯ ತಾಡನವಾಗುತ್ತಿತ್ತು. ಆಗ ನಾನು ಅತ್ಯಂತ ಸಂತೃಪ್ತಿಯ ಗಳಿಗೆ ಯನ್ನು ಅನುಭವಿಸುತ್ತಿದ್ದೆ. ಸಂಗೀತಕ್ಕೆ ಮತವಿಲ್ಲ. ನಾನು ನನ್ನ ಸಂಗೀತಕ್ಕಾಗಿ ಜಗತ್ತಿನ ಎಲ್ಲಾ ಕಡೆಯಿಂದಲೂ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದೆ’.

ಜಗತ್ತಿಡೀ ತಿರುಗಿದರೂ ಅವರು ವಾರಣಾಸಿಯ ಮಣ್ಣಿನ ಮಗನಾಗಿದ್ದರು. ತನ್ನ ಕುಟುಂಬದ ಸುಮಾರು ೪೦೦ ಸದಸ್ಯರ ದಾತಾರರಾಗಿದ್ದರು. ಅಷ್ಟು ಮಾತ್ರವಲ್ಲ, ತನ್ನ ಹಳೆಯ ಸ್ನೇಹಿತರೂ ಅಥವಾ ಸಂಗೀತದ ಸಂಗಾತಿಗಳನ್ನು ತನ್ನ ಕುಟುಂಬಗಳಿಗಿಂತಲೂ ಹೆಚ್ಚು ಪ್ರೀತಿಸುತ್ತಿದ್ದರು. ಅನೇಕ ಬಾರಿ ತನ್ನ ಸಂಗೀತದ ಸಾಮರ್ಥ್ಯಗಳನ್ನು ಅವರೇ ಹೇಳಿಕೊಂಡಂತೆ: ‘ಸಂಗೀತ ನೂರಾರು ಸಮಸ್ಯೆಗಳನ್ನು ಪರಿಹಾರ ಮಾಡಬಲ್ಲುದು. ಅಲ್ಲದೆ ಅನೇಕ ಸಮರಗಳನ್ನು ಕೂಡ ನಿವಾರಿಸಬಲ್ಲುದು’ ಇಂತಹ ಅಚಲ ವಿಶ್ವಾಸ ಸಂಗೀತದಲ್ಲಿತ್ತು.

ಬಿಸ್ಮಿಲ್ಲಾಖಾನ್‌ರವರ ಜೀವನಗಾಥೆಯನ್ನು ಅಧ್ಯಯನ ಮಾಡಿದಾಗ ನಮ್ಮ ದೇಶದ ಸ್ಥಿರ ಆಸ್ತಿಗಳನ್ನು ಯಾವ ರೀತಿಯಲ್ಲಿ ನಾವು ನಡೆಸಿಕೊಳ್ಳುತ್ತಿದ್ದೇವೆ, ಎಷ್ಟು ನಿರ್ಲಕ್ಷ್ಯತೆ ನಮ್ಮಲ್ಲಿದೆ ಎಂಬುದರ ಅರಿವಾಗುತ್ತಿದೆ.

ಮಹಾರಾಷ್ಟ್ರದ ನಾಸಿಕ್‌ನ ದುರ್ಗಾದಾಸ್ ಠಾಕೂರ್ ಎಂಬುವರು ೫೦ ಶೆಹನಾಯ್ ಗಳನ್ನು ಬಿಸ್ಮಿಲ್ಲಾಖಾನ್‌ರವರಿಗೆ ನೀಡಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ೪೦ ವರ್ಷದಿಂದ ಅವರು ದುರ್ಗಾದಾಸ ಠಾಕೂರ್‌ರಿಂದಲೇ ಶೆಹನಾಯ್‌ಯನ್ನು ಖರೀದಿ ಮಾಡು ತ್ತಿದ್ದರು. ಅಂದರೆ ಒಮ್ಮೆ ಅವರ ಸಂಪರ್ಕಕ್ಕೆ ಬಂದವರು ಎಂದೂ ದೂರವಿರುತ್ತಿರಲಿಲ್ಲ. ಪ್ರೀತಿ, ವಿಶ್ವಾಸದ ಒಂದು ಮಹಾನ್ ಸಂಕೇತವೇ ಆಗಿದ್ದರು. ಅಪಾರ ಅಭಿಮಾನಿಗಳ ಸಂಗಾತಿಗಳ ಪ್ರೇಮ ಬಂಧುರ ಸಂಬಂಧಗಳಿಂದ ಬಿಸ್ಮಾಲ್ಲಾ ಕಳಚಿಕೊಂಡು ಒಂದು ರೀತಿಯಲ್ಲಿ ದೇಶಕ್ಕೆ ದೇಶವೇ ಅನಾಥ ಭಾವವನ್ನು ಅನುಭವಿಸುತ್ತಿದೆ. ಇನ್ನೋರ್ವ ಇಂತಹ ಸಂಗೀತ ಸಾಮ್ರಾಟ ಮತ್ತೆ ದೇಶದಲ್ಲಿ ಉದಯವಾಗುವನೋ ಎಂಬ ಪ್ರಶ್ನೆ ಭಾರತದ ಜನರನ್ನು ಕಾಡುತ್ತಿದೆ. ಅಂತಹ ಸರಳತೆ ಮತ್ತು ಸಜ್ಜನಿಕೆಯ ಮಹಾನ್‌ಮೂರ್ತಿ ಭಾರತೀಯ ಹೃದಯದಲ್ಲಿ ವೈಭವದಿಂದ ಮಿಂಚುತ್ತಿದ್ದಾರೆ.