ಕರ್ನಾಟಕದ ರಾಜ್ಯಭಾಷೆ ಕನ್ನಡ. ಇದಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸಾಹಿತ್ಯಕ್ಕೆ ಕೂಡ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ರಾಜ್ಯಾಂಗದಲ್ಲಿ ಉಲ್ಲೇಖಗೊಂಡ ೧೫ ರಾಷ್ಟ್ರ ಭಾಷೆಗಳಲ್ಲಿ ಒಂದಾಗಿರುವ ಕನ್ನಡ, ಸಂಸ್ಕೃತದ ಅನಂತರ ಪ್ರಾಚೀನವಾದುದು. ಸಾಹಿತ್ಯ, ಕಾವ್ಯ, ವಾಙ್ಮಯ, ಆಧುನಿಕ ವಿಜ್ಞಾನಗಳನ್ನು ಅಭಿವ್ಯಕ್ತಿಸುವ ಶಕ್ತಿಶಾಲಿ ಭಾಷೆ ಕನ್ನಡ. ಅದು ಸ್ವೀಕಾರ ಭಾಷೆ. ತನ್ನ ಅಗತ್ಯವನ್ನು ಸಮಂಜಸವಾಗಿ ಈಡೇರಿಸಿಕೊಳ್ಳಬಹುದಾದ ಉಜ್ವಲ ಪರಂಪರೆಯ ಭಾಷೆ. ಕರ್ನಾಟಕದ ಸಿಂಹಾಸನವೇರಿ ಜನರ ಆಶೋತ್ತರಗಳನ್ನು ಈಡೇರಿಸುವುದು ಕರ್ನಾಟಕತ್ವದ ಗುರಿ. ಒಂದು ಭಾಷೆ ತನ್ನ ಜನಮನವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುತ್ತದೆ. ಭಾರತ ದೇಶ ಬಲಿಷ್ಠವಾಗಬೇಕೆಂಬುದು ನಮ್ಮೆಲ್ಲರಂತೆ ಪ್ರಥಮ ಪ್ರಧಾನಿ ಶ್ರೀಜವಾಹರಲಾಲ್ ನೆಹರೂರವರ ಬಯಕೆಯಾಗಿತ್ತು. ಭಾರತದ ಭಾಷೆಗಳೆಲ್ಲವೂ ರಾಷ್ಟ್ರಭಾಷೆ ಎಂದು ಗುರುತಿಸಿದ ಶ್ರೇಷ್ಠ ಭಾರತೀಯರು ಅವರಾಗಿದ್ದರು.

ನಮ್ಮ ಭವಿಷ್ಯದ ಕುರಿತು ನಮ್ಮ ಭಾಷೆಯ ಮುಖಾಂತರ ಸ್ವತಂತ್ರವಾಗಿ ಯೋಚನೆ ಮಾಡುವ ಅವಕಾಶ ಭಾರತೀಯನಿಗಿದೆ. ಸುಮಾರು ೮೯ ವರ್ಷಗಳ ಕಾಲ ಆಂಗ್ಲ ಭಾಷೆ ಪ್ರಥಮ ಸ್ಥಾನದಲ್ಲಿದೆ. ಆದರೆ ಸುಮಾರು ಎರಡೂವರೆ ಸಾವಿರ ವರ್ಷಗಳ ಕಾಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದ ಕನ್ನಡ ಭಾಷೆಗೆ ಆಂಗ್ಲಭಾಷೆ ಪರ‍್ಯಾಯ ಭಾಷೆಯಾಗಲು ಸಾಧ್ಯವಿಲ್ಲ. ಅಲ್ಲದೆ ದೇಶಭಾಷೆಗಳ ಪಾಠ ಹೇಳಲು ಆಂಗ್ಲ ಭಾಷೆ ಒಂದೇ ತಕ್ಕುದೆಂದು ಹೇಳುವುದು ಎಂದೆಂದೂ ಸೂಕ್ತವಲ್ಲ. ಪರಕೀಯ ಭಾಷೆ ತಮ್ಮದಾಗಿಸಿ ನಮ್ಮ ಜನಾಂಗದ ಬದುಕನ್ನು ಬರಿದುಮಾಡುವ ಪ್ರವೃತ್ತಿ ನಿಲ್ಲಬೇಕು. ಆಂಗ್ಲ ಭಾಷೆ ಪ್ರಪ್ರಥಮ ಸ್ಥಾನ ಪಡೆದಿರುವ ಫಲವಾಗಿ ದೇಶ ಭಾಷೆಗಳು ಮೂಲೆ ಪಾಲಾಗಿವೆ. ರಾಷ್ಟ್ರ ಜೀವನವನ್ನು ಉನ್ನತ ಸ್ತರಗಳತ್ತ ಪ್ರೇರೇಪಿಸಲು ಪಿತ್ರಾರ್ಜಿತದಲ್ಲಿ ಏನೂ ಇಲ್ಲ ಎಂಬಂತೆ ನಡೆದು ಕೊಳ್ಳುತ್ತಿದ್ದೇವೆ.

ರಾಷ್ಟ್ರದ ಮತ್ತು ನಾಡಿನ ಅತ್ಯುನ್ನತ ಚಿಂತನೆ ಜನರ ಭಾಷೆಯಲ್ಲಿ ನಡೆಯಬೇಕು. ಆಗ ಮಾತ್ರ ಸ್ವತಂತ್ರ ಚಿಂತನೆ ಸಾಧ್ಯ. ರವೀಂದ್ರನಾಥ ಠಾಗೋರ್‌ರವರು ಶಿಕ್ಷಣದ ಕುರಿತು ಹೀಗೆಂದರು: ‘ನಮ್ಮ ತಾಯ್ನುಡಿಯಲ್ಲಿ ಪಾಠ ಹೇಳಿದ ಕಾರಣದಿಂದ ನಮ್ಮ ಬುದ್ದಿ ಎಚ್ಚರಗೊಂಡಿತು. ಕಲಿಯಲು ಮೊದಲು ಮಾಡಿದ ದಿನದಂದು ಒಟ್ಟು ಬುದ್ದಿ ಎಚ್ಚೆತ್ತು ಕೊಳ್ಳದಿದ್ದರೆ ಅದರ ಸಂಪೂರ್ಣ ಶಕ್ತಿ ಕೊನೆಗಾದರೂ ಬೆಳೆಯದೆ ನಿಲ್ಲುತ್ತದೆ. ನಮ್ಮ ಸುತ್ತೆಲ್ಲ ಇಂಗ್ಲಿಷಿನಲ್ಲಿ ಪಾಠ ಹೇಳಬೇಕೆಂದು ಜನ ಕಿರಿಚುತ್ತಿದ್ದಾಗ ನಮ್ಮ ಮೂರನೆಯ ಅಣ್ಣ ಧೈರ್ಯ ಮಾಡಿ ನಮ್ಮನ್ನು ಎಲ್ಲಾ ವಿಷಯವನ್ನೂ ಬಂಗಾಳಿಯಲ್ಲಿ ಕಲಿಯುವ ಕ್ರಮದಲ್ಲಿ ನಡೆಸಿದರು. ಸ್ವರ್ಗದಲ್ಲಿರುವ ಆತನಿಗೆ ನಾನು ಕೃತಜ್ಞತೆಯಿಂದ ಪ್ರಣಾಮ ಸಲ್ಲಿಸುತ್ತೇನೆ’.

ಮಹಾತ್ಮಾಗಾಂಧಿಯವರು ಭಾಷಾವಾರು ಪ್ರಾಂತ್ಯದ ಬಗ್ಗೆ ತಮ್ಮ ೧೯೪೬ ಮತ್ತು ೧೯೪೮ರ ‘ಹರಿಜನ’ ಪತ್ರಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ೧೯೪೬ರ ‘ಹರಿಜನ’ ಪತ್ರಿಕೆಯಲ್ಲಿ ಅವರು ಹೇಳಿದ ಮಾತು ಗಣನೀಯ ‘ನಾನು ನನ್ನ ತಾಯಿಯ ಮೊಲೆ ಹಾಲಿನಂತೆಯೇ ಮಾತೃಭಾಷೆಗೆ ಅಂಟಿಕೊಳ್ಳುತ್ತೇನೆ. ಆಂಗ್ಲ ಭಾಷೆ ಪ್ರಪಂಚದ ಭಾಷೆ ಹೌದು. ಆದರೆ ನಮ್ಮ ಮಾತೃಭಾಷೆಯ ಸ್ಥಾನವನ್ನು ಆ ಭಾಷೆ ಆಕ್ರಮಿಸಲು ಬಿಡಲಾರೆ. ಆದರೆ ಅದಕ್ಕೆ ಶಾಲೆ ಮತ್ತು ಕಾಲೇಜಿನ ಶಿಕ್ಷಣದಲ್ಲಿ ಎರಡನೇ  ಭಾಷೆಯ ಸ್ಥಾನ ಮಾತ್ರ ನೀಡಬಲ್ಲೆವು’.

ನಾಡಿನ ಮತ್ತು ರಾಷ್ಟ್ರದ ಅತಿಶ್ರೇಷ್ಠ ಆಲೋಚನೆ ಹಿಂದಿನಿಂದಲೂ ಭಾರತೀಯ ಮಾತೃಭಾಷೆಯಲ್ಲಿ ನಡೆದಿದೆ. ಜಗತ್ತಿಗೆ ಬೆಳಕನ್ನು ಕೊಡತಕ್ಕ ನಾಗರಿಕತೆಯ ದೀಪಸ್ತಂಭ ಭಾರತದಲ್ಲಿದೆ. ಆದುದರಿಂದಲೇ ಕನ್ನಡ ನಾಡಿನ ಭಾಷೆ ಅತಿಶ್ರೇಷ್ಠವಾಗಿದೆಯೆಂದರೆ ಅದು ಸಂಕುಚಿತ ಭಾವನೆಯೆಂದು ಅರ್ಥೈಸಕೂಡದು. ಈ ದೇಶಕ್ಕೆ ಸ್ವಾತಂತ್ರ್ಯವನ್ನು ಸಾಧಿಸಿಕೊಟ್ಟ ಮಹಾತ್ಮಾಗಾಂಧೀಜಿಯವರು ಮಾತೃಭಾಷೆಯ ವಿಚಾರದಲ್ಲಿ ಸಾರಿಸಾರಿ ಹೇಳಿದರು – ‘ನಮಗೆ ದೊರೆತಿರುವ ಸ್ವಾತಂತ್ರ್ಯ ಸಿದ್ದಿಸಬೇಕಾದರೆ ನಮ್ಮ ಮಾತೃಭಾಷೆಯಲ್ಲೇ ಆಲೋಚನೆ ನಡೆಯಬೇಕು’. ಅವರಂದಂತೆ ‘ಆಂಗ್ಲ ಭಾಷಾ ಮಾಧ್ಯಮದ ಶಿಕ್ಷಣ ನಮ್ಮ ಬುದ್ದಿಮತ್ತೆ ಯನ್ನು ಮತ್ತು ನಮ್ಮ ನಾಗರಿಕತೆಯನ್ನು ಪುಡಿಪುಡಿ ಮಾಡಿವೆ’ : ‘ಆಂಗ್ಲ ಭಾಷೆ ತನ್ನ ಸ್ಥಾನದಲ್ಲೇ ಇರಬೇಕು. ಅಂದರೆ ಅದು ಅಂತಾರಾಷ್ಟ್ರೀಯ ಸಂಪರ್ಕ ಭಾಷೆಯಾಗಿದೆ. ನಮ್ಮವರು ಕಲಿತಾಗ ನಮ್ಮ ನಮ್ಮ ಮಾತೃಭಾಷೆ ತನ್ನ ಸ್ಥಾನವನ್ನು ನಾಡಿನ ಜನರ ಮನಸ್ಸಿನಲ್ಲಿ ಪಡೆದಾಗ ನಮ್ಮ ದಾಸ್ಯದಿಂದ ನಾವು ಮತ್ತು ನಮ್ಮ ಮೆದುಳು ವಿಮೋಚನೆ ಹೊಂದುತ್ತದೆ….’ ದೇಶ ಭಾಷೆಗಳಿಂದ ಕಲಿತ ವಿದ್ಯೆ ಸಮರ್ಥವಾಗುತ್ತದೆ. ಆಂಗ್ಲ ಭಾಷೆಯ ಮೂಲಕ ಕಲಿತದ್ದು ಬಂಜೆಯಾಗುತ್ತದೆ. ನಮ್ಮ ಭಾಷೆಗಳಲ್ಲಿ ಉನ್ನತ ಕವಿಗಳು, ಸಾಹಿತಿಗಳು, ಜ್ಞಾನಿಗಳು ಮತ್ತು ಚಿಂತಕರು ಆಗಿ ಹೋಗಿದ್ದಾರೆ. ಇನ್ನೂ ಬೆಳಗುತ್ತಿದ್ದಾರೆ. ಆದರೆ ಆ ಭಾಷಾ ಶಕ್ತಿ ಸಾಮರ್ಥ್ಯವನ್ನು ಇಂದು ಕಳೆದುಕೊಳ್ಳುತ್ತಿದ್ದೇವೆ. ಸೀಮಿತವಾದ ಮತ್ತು ಆಂಶಿಕವಾದ ಮಾಹಿತಿ ತಂತ್ರಜ್ಞಾನದ ಭ್ರಮೆಯಲ್ಲಿ ಆಂಗ್ಲ ಭಾಷಾ ಪ್ರಭುತ್ವವನ್ನು ಆಹ್ವಾನಿಸಿ ನಮ್ಮ ಸಮಗ್ರ ಪ್ರಗತಿಯ ಹೆದ್ದಾರಿಯನ್ನು ಕಡಿಯಬಾರದು. ರಾಜಕಾರಣ, ಧರ್ಮ, ವಾಙ್ಮಯ, ಇತಿಹಾಸ, ಕಲೆ, ಸಂಸ್ಕೃತಿ, ವಿಜ್ಞಾನ, ತಾಂತ್ರಿಕ ಮುಂತಾದ ಯಾವತ್ತೂ ಕ್ಷೇತ್ರದಲ್ಲಿ ಕರ್ನಾಟಕತ್ವ ವಿಜೃಂಭಿಸಬೇಕು. ಆಗ ಮಾತ್ರ ನಾಡಿಗೆ ಮುಕ್ತಿ, ವಿಮೋಚನೆ, ಸೃಜನಶೀಲ ಜ್ಞಾನ ಸಮೃದ್ದಿಯೇ ಜಾಗತಿಕ ಓಟದಲ್ಲಿ ಪ್ರಧಾನವೇ ಹೊರತು ಕೃತಕ, ತಾತ್ಕಾಲಿಕ ಎರವಲು ತಂದ ಭಾಷಾನುಕರಣೆಯಲ್ಲ.

ನಮ್ಮ ಮಾತೃಭಾಷಾ ಮಾಧ್ಯಮವನ್ನು ೧ನೇ ತರಗತಿಯಿಂದ ೪ನೇ ತರಗತಿಯವರೆಗೆ ಪ್ರಾರಂಭವಾಗುವ ಪ್ರಸ್ತಾವ ೧೯೯೩ರಲ್ಲೆ ಅನುಷ್ಠಾನಕ್ಕೆ ಬಂದಿತ್ತು. ಭಾರತದ ಉಚ್ಚ ನ್ಯಾಯಾಲಯದಲ್ಲಿ ಕೂಡ ಇದಕ್ಕೆ ಮನ್ನಣೆ ದೊರಕಿದೆ. ಆದರೆ ನ್ಯಾಯಾಲಯದ ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲ್ಪಟ್ಟ ಆಜ್ಞೆಯನ್ನು ಕೂಡಲೇ ಅನುಷ್ಠಾನ ಮಾಡಲು ಕರ್ನಾಟಕ ಸರ್ಕಾರ ಕ್ರಮಕೈಗೊಳ್ಳಬೇಕು. ಈ ಮಾಧ್ಯಮದ ನೀತಿಯನ್ನು ೫ ತರಗತಿಯಿಂದ ೭ನೇ ತರಗತಿಯವರೆಗೆ ೨ ವರ್ಷಗಳ ಒಳಗಡೆ, ೮ನೇ ತರಗತಿಯಿಂದ ೧೦ನೇ ತರಗತಿವರೆಗೆ ರಿಂದ ೩ ವರ್ಷಗಳ ಒಳಗಡೆ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲು ಯಾವುದೇ ತಾಂತ್ರಿಕ ಅಥವಾ ಶೈಕ್ಷಣಿಕ ಅಡಚಣೆ ಬರುವುದಿಲ್ಲ. ರಾಷ್ಟ್ರ ಸಂಪರ್ಕ ಭಾಷೆಯಾದ ಹಿಂದಿ ಮತ್ತು ಅಂತಾರಾಷ್ಟ್ರೀಯ ಸಂಪರ್ಕ ಭಾಷೆಯಾದ ಆಂಗ್ಲ ಭಾಷೆಯನ್ನು ಕೂಡ ಯಾವ ಹಂತದಲ್ಲಿ ಎರಡು ಮತ್ತು ಮೂರನೇ ಭಾಷೆಯಾಗಿ ಅಳವಡಿಸಬೇಕೆಂಬ ವಿಚಾರದಲ್ಲಿ ಶಿಕ್ಷಣತಜ್ಞರ ಒಂದು ಸಮಿತಿಯನ್ನು ರಚಿಸಿ ಆರು ತಿಂಗಳ ಒಳಗಡೆ ವರದಿಯನ್ನು ತರಿಸಿ ೨೦೦೬-೦೭ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲು ಕ್ರಮ ತೆಗೆದುಕೊಳ್ಳುವುದು ವಿಹಿತ. ಭಾಷಾ ಮಾಧ್ಯಮ ಗೊಂದಲಗಳ ಬೀಡಾಗದೆ ಸ್ಪಷ್ಟವಾದ ಶೈಕ್ಷಣಿಕ ಸಿದ್ಧಾಂತವಾಗಿ ಹೊರಹೊಮ್ಮ ಬೇಕು. ಆದರೆ ಕನ್ನಡ, ಹಿಂದಿ ಅಥವಾ ಆಂಗ್ಲ ಭಾಷೆಯ ಈಗಿನ ಶೈಕ್ಷಣಿಕ ಮಟ್ಟದ ದೌರ್ಬಲ್ಯ ನಿವಾರಿಸಿ ಶಕ್ತಿಯುತವಾದ ಭಾಷಾ ಸಮೃದ್ದಿಯ ಕಡೆಗೆ ವಿದ್ಯಾರ್ಥಿ ಸಮುದಾಯ ವನ್ನು ಒಯ್ಯುವ ದಿಶೆಯಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ.