ಆಂಗ್ಲ ಭಾಷೆ ಜಗತ್ತಿನ ಬೆರಳೆಣಿಕೆಯ ಹಿರಿಯ ಭಾಷೆಗಳಲ್ಲಿ ಒಂದಾಗಿದೆ. ಈ ಭಾಷೆ ಮಾತಾಡುವವರು ಅಥವಾ ತಿಳಿದವರು ಸದ್ಯ ೫೦ ಕೋಟಿ (೫೦೦ ಮಿಲಿಯ) ಜನರಿದ್ದಾರೆ. (ಮಲೆಯಾಳ ಮನೋರಮ ವಾರ್ಷಿಕ ಪುಸ್ತಕ). ಚೀನದ ಮೆಂಡೆರೀನ್ ಭಾಷೆ ಸುಮಾರು ೯೫ ಕೋಟಿ (೯೫೦ ಮಿಲಿಯ) ಜನರ ಆಡುಭಾಷೆಯಾಗಿದೆ. ಹಿಂದಿ ಭಾಷೆಯು ಸುಮಾರು ೪೫ ಕೋಟಿ (೪೫೦ ಮಿಲಿಯ) ಜನರು ತಿಳಿದ ಭಾಷೆಯಾಗಿ ಭಾರತದಲ್ಲೂ ವಿದೇಶಗಳಲ್ಲೂ ಹರಡಿ, ವಿಶ್ವಸಂಸ್ಥೆಯ ಸಭೆಗಳಲ್ಲೂ ಕೇಳಿಸಿದೆ. ತಮಿಳು ಮತ್ತು ಕನ್ನಡ ಭಾಷೆಗಳು ತಲಾ ೫ ಕೋಟಿ ಜನರು ಮೀರಿದಂತೆ ಹರಡಿದ ಭಾಷೆಯಾಗಿ ಪರಿಗಣಿತವಾಗಿದೆ. ತೆಲುಗು, ಮಲಯಾಳಂ ಮತ್ತು ಮರಾಠೀ ಭಾಷೆಗಳು ಕೂಡಾ ಅಷ್ಟೇ ಪ್ರಮಾಣದಲ್ಲಿ ಬೆಳೆದಿವೆ.

ಬಹು ಜನ-ಜನಾಂಗಗಳ ಭೂಖಂಡಗಳ ಅಧಿಕೃತ ಭಾಷೆಯಾಗಿ ಮಾನ್ಯತೆ ಪಡೆದ ಈ ಆಂಗ್ಲ ಭಾಷೆಯನ್ನು ಕಾಮನ್‌ವೆಲ್ತ್ ರಾಷ್ಟ್ರಗಳ ಒಕ್ಕೂಟದಲ್ಲೂ ಅಮೆರಿಕ-ಆಫ್ರಿಕ-ಆಸ್ಟ್ರೇಲಿಯಾ-ಏಷ್ಯಾ ಖಂಡಗಳಲ್ಲೂ ಜನರು ಬಳಸಿಕೊಳ್ಳುತ್ತಿದ್ದಾರೆ. ಅದು ಹೆಚ್ಚೆಚ್ಚಾಗಿ ಇತರ ಭಾಷಾ ಪದಗಳನ್ನು, ಹಿಂದಿ ಶಬ್ದಗಳೂ ಸೇರಿದಂತೆ, ತನ್ನ ಶಬ್ದಾರ್ಥಕೋಶಗಳಲ್ಲಿ ಸೇರಿಸಿ ವಿಸ್ತರಿಸಿದೆ. ಅವು ೭೦ ರಾಷ್ಟ್ರಗಳಲ್ಲಿ ಪ್ರಥಮ ಭಾಷಾ ಸ್ಥಾನಮಾನ ಪಡೆದ ವಿಶ್ವಭಾಷೆ ಆಂಗ್ಲ ಭಾಷೆಗೆ ಮೆರುಗುತಂದಿದೆ.

ಈ ಆಂಗ್ಲ ಭಾಷೆಯನ್ನು ಭಾರತದ ಬೃಹತ್ ರಾಜ್ಯಗಳಲ್ಲೊಂದಾದ ಉತ್ತರಪ್ರದೇಶವು ೧ನೇ ದರ್ಜೆಯಿಂದ ಪಠ್ಯಕ್ರಮದಲ್ಲಿ ಉಪಯೋಗಿಸಿದೆ. ಆಂಧ್ರದಲ್ಲಿ ಔಪಚಾರಿಕವಾಗಿ ಐದನೇ ತರಗತಿಯಿಂದ, ಆದರೆ ಅನೌಪಚಾರಿಕವಾಗಿ ಮೂರನೇ ತರಗತಿಯಿಂದಲೇ, ಆಂಗ್ಲ ಭಾಷಾ ಪ್ರಯೋಗ ತರಲಾಗಿದೆ. ತಮಿಳುನಾಡಿನಲ್ಲಿ ಐದನೇ ದರ್ಜೆಗೆ ಮೊದಲು ಆಂಗ್ಲ ಭಾಷೆ ನಿಷಿದ್ಧವಾದರೂ, ಐದರಿಂದ ಮುಂದೆ ಅದರ ಬಳಕೆ ಸ್ವೀಕೃತವಾಗಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ೧ ರಿಂದ ೪ನೇ ದರ್ಜೆಯ ತನಕ ಈಚೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೊಸ ಅಪ್ಪಣೆ ಸಿಗುತ್ತಿಲ್ಲ. ಭಾರತದ ಆಂಗ್ಲ ಭಾಷಾ ಪರಿಚಿತರು ಐದರಲ್ಲೊಬ್ಬರಿದ್ದಾರೆ, ಅಂದರೆ ಶೇಕಡ ೨೦ರಷ್ಟು ಎನ್ನಬಹುದು.

ಕಳೆದ ಸಹಸ್ರಮಾನದಲ್ಲಿ ಜನರು ಪಡೆದ ವಿಶ್ವಕೊಡುಗೆಗಳಲ್ಲಿ ಆಂಗ್ಲಭಾಷೆ ಮತ್ತು ವಿದ್ಯುತ್ ಗಣಕಯಂತ್ರ ಮಹತ್ತರ ಸ್ಥಾನದಲ್ಲಿವೆ ಮತ್ತು ಅಪಾರ ಜನಪ್ರಿಯತೆಗಳಿಸಿವೆ. ಅವೆರಡೂ ಜ್ಞಾನದ ಭಂಡಾರಗಳೆಂದರೆ ಅತಿಶಯವಲ್ಲ. ಆಂಗ್ಲ ಭಾಷೆಯು ಹೊಸ ಹುಡುಕಾಟದ ಸೆಲೆಯಾಗಿದೆ.

ಗಣಕಯಂತ್ರವು ಈ ಮಹಾನ್ ಶೋಧಕ್ಕೆ ಆಸರೆಯಾಗಿದೆ. ಎರಡೂ ಗೋಡೆಗಳಿಲ್ಲದ ಮತ್ತು ಗಾಳಿ ಬೀಸುವ ಜಗತ್ತಿನ ನಿರ್ಮಾಣಕ್ಕೆ ನಾಂದಿಯಾಗಿ ನಿಂತಿವೆ. ತುತ್ತೂರಿ ಊದಿವೆ. ನಮ್ಮ ಐದಾರು ಲಕ್ಷ ಹಳ್ಳಿಗಳು ಕ್ರಮೇಣ ಹೊರಜಗತ್ತಿನ ಪರಿಸರಪ್ರದೇಶ ಮಾಡುತ್ತಿದ್ದಂತೆ, ನಾನಾ ಜನಾಂಗಗಳು ಪರಸ್ಪರ ಸಮೀಪ ಬರಲು ಆಂಗ್ಲಭಾಷೆ ಅಮೂಲ್ಯವಾದ ಸಾಧನವಾಗಿದ್ದು, ಅದರ ಅರಿವು ಪ್ರಮುಖ ಸೊತ್ತಾಗಿ ಕಾಪಾಡುತ್ತದೆ. ಭೂಗೋಲದ ಸಂಪರ್ಕ ಮಾಧ್ಯಮವಾಗಿರುವ ಅಂತಾರಾಷ್ಟ್ರೀಯ ಮಾಹಿತಿ ಜಾಲಕ್ಕೆ (ಇಂಟರ್‌ನೆಟ್) ಆಂಗ್ಲ ಭಾಷೆಯು ನಿರ್ವಿವಾದ ಆಯ್ಕೆಯಾಗಿ ಹರಡಿದೆ. ಈ ವಿಶಾಲ ಜಾಲದಲ್ಲಿ ಆಂಗ್ಲ ಬಳಕೆ ಶೇಕಡ ೯೯ರಷ್ಟಿದೆ ಎಂಬುದು ಸ್ವತಃಸಿದ್ಧ. ಉಳಿದ ಶೇಕಡ ೧ರಷ್ಟೂ ಬಳಕೆಗೆ ಇತರ ಯಾವ ಭಾಷೆಯೂ ಜಾಲದಲ್ಲಿ ಮುನ್ನುಗ್ಗಿಲ್ಲ.

ಗ್ರಾಮೀಣ ಭಾರತದ ವಿದ್ಯುತ್, ಗಣಕೀಕರಣ ಮತ್ತು ಕೃಷಿ ವ್ಯವಸಾಯಗಳ ಅಧಿಕಾಧಿಕ ವ್ಯಾಪಾರೀಕರಣದಲ್ಲಿ ರಫ್ತು ಮಾಡುವ ಕಡೆಗೆ ವಿಶೇಷ ಮುನ್ನಡಿಯಿಡಲಾದರೆ, ಅವು ಆಂಗ್ಲ ಪದೋಚ್ಚಾರ ಬಳಕೆಗಳ ಕೌಶಲ್ಯಗಳನ್ನು ತಿಳಿದ ಗುಂಪಿನ ವಿಸ್ತಾರಕ್ಕೆ ಅನುಕೂಲತೆ ಮಾಡಿ ಕೊಡುವುದು ಖಂಡಿತ. ಈ ಪ್ರವೃತ್ತಿಗಳು ಭಾರತದ ಆರ್ಥಿಕತೆ ವಿಕಾಸ ಮತ್ತು ಭೌಗೋಲಿಕ ರೂಪದ ಧಾರಣಾ ಪ್ರಕ್ರಿಯೆಗಳ ಅಂಗವಾಗಿ ನಿಂತಿವೆ.

ಗಣಕಯಂತ್ರದ ಬಹುಮುಖ ವಿಕಾಸಶಕ್ತಿ, ಅನೇಕ ಮಾಧ್ಯಮಗಳ ಮೂಲಕ ಸಂಪರ್ಕ ಮತ್ತು ಮಾಹಿತಿ ಮಹಾಜಾಲ ಇವು ಇಂದಿನ ವಿದ್ಯಾಭ್ಯಾಸ ದೃಶ್ಯಾವಳಿಯಲ್ಲಿ ಅವಕಾಶಗಳ ಸುರಿಮಳೆಯನ್ನೇ ತಂದಿವೆ. ಅಂಚಿಲ್ಲದ ವಿಶ್ವವ್ಯಾಪೀ ಜಾಲ(WWW)ದೊಡನೆ ಸೆಣಸಾಡಿ, ಅದನ್ನು ಬಳಸಲು ಮತ್ತು ವಿವೇಕಯುತವಾಗಿಯೂ ಸೃಜನಶೀಲವಾಗಿಯೂ ಜಾಲಾಡಿಸಲು,  ನಾವು ತತ್ಪರರಾಗಬೇಕಾಗಿದೆ.

ವಸಾಹತುಶಾಹಿಯ ದೇಣಿಗೆಯಾದ ಈ ಆಂಗ್ಲಭಾಷೆಯ ಕಲಿಕೆ, ನಮಗೆಲ್ಲರಿಗೂ ಆಧುನಿಕತೆ ಹಾಗೂ ಪ್ರಗತಿಗೆ ನೆರವಾಗಿ ನಿಂತಿರುವುದು ನಾವೆಂದೂ ಮರೆಯಲಾಗದ ಸತ್ಯಾಂಶವಾಗಿದೆ. ಅದನ್ನು ಆಮದು ಮಾಡಿಕೊಂಡಾಗ, ಅದು ಸಾಮಾಜಿಕ ಶ್ರೇಣಿಗಳಲ್ಲಿ ದುರ್ಬಲರನ್ನು ಪೀಡಿಸಿ ಶೋಷಿಸುತ್ತಿದ್ದ ಅಲ್ಪರ ವಿರುದ್ಧ ವಿಮೋಚನೆಯ ವಾಹಿನಿಯಾಗಿ ನಿಲ್ಲುವ ವಚನ ಪಾಲಿಸಲು ಬದ್ಧವಾಗಿತ್ತು. ಆದರೆ ಆಂಗ್ಲ ಭಾಷೆಯನ್ನು ಭಾರತಕ್ಕೆ ಆವಾಹಿಸಿದ ಕ್ರಮದಿಂದ ಅದು ಆಳುವ ಬಿಳಿಜನರ ಸಾರ್ವಜನಿಕ ಪೀಡೆಗೆ ನೆರವಾದ ಸಾಧನವಾಗಿ ನಿಂತು, ಭಾರತ ಮತ್ತು ಅದರ ನಿವಾಸಿಗಳ ಸ್ವತಂತ್ರ ಚೈತನ್ಯವನ್ನು ಬಗ್ಗು ಬಡೆಯಲು ಬಳಸಲಾಯಿತು. ನಮ್ಮ ಸಾಮೂಹಿಕ ಅನುಭವಗಳು, ವಿವೇಕ ಪ್ರಜ್ಞೆ ಮತ್ತು ಸುಸಂಸ್ಕೃತಿಗಳು ಆಧುನಿಕತೆಯ ಗುಂಗಿನಲ್ಲಿ ಮೊಟಕುಗೊಳ್ಳುವ ಹಾಗಿದೆ, ಅದೂ ಪ್ರಾದೇಶಿಕ ನಾಗರಿಕತೆ ಮತ್ತು ಸ್ವದೇಶೀ ವಿವೇಚನೆಗಳ ಆಹುತಿಯೊಂದಿಗೆ. ಇದರಿಂದ ಸಾಂಸ್ಕೃತಿಕ ಆತ್ಮನಾಶವುಂಟಾಗಿ, ಆಂಗ್ಲ ಭಾಷೆಯು ವಸಾಹತುಶಾಹಿಯ ಮಾರಕಾಸ್ತ್ರವಾಗಿ ನಿಂತು ಮಾಡಿದ ಅದರ ಪ್ರಾರಂಭಿಕ ಹೊಡೆತಗಳು ಇಂದು ಮಾಯವಾಗುತ್ತಿದೆ.

ಮನುಕುಲದ ಇತಿಹಾಸದಲ್ಲಿ ಆಂಗ್ಲ ಭಾಷೆಯನ್ನು ಭಾರತವು ಕಲಿತುಕೊಂಡ ಮಟ್ಟಿಗೆ ಬೇರೆ ಯಾವ ಪರಕೀಯ ಭಾಷೆಯನ್ನೂ ವಿದೇಶೀಯರು ಕಲಿತ ಯೋಗ್ಯ ನಿದರ್ಶನವಿಲ್ಲ.

೨೧ನೇ ಹೊಸ ಶತಮಾನ ಮತ್ತು ೩ನೇ ಸಹಸ್ರಮಾನದ ಹೊಸ್ತಿಲಲ್ಲಿ ನಿಂತ ನಮಗೆ ಭಾರತೀಯ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆ ಕಲಿಸುವ ಧೋರಣೆಗಳ ಬಗ್ಗೆ ಸ್ಪಷ್ಟೀಕರಣ ನೀಡುವ ಅಗತ್ಯ ಬಲವಾಗಿದೆ. ಭಾಷಾ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಪಡೆದವರು ಆಂಗ್ಲ ಸಾಹಿತ್ಯವನ್ನು ಅಪಾರವಾಗಿ ಓದಿಕೊಳ್ಳುವ ಅವಶ್ಯಕತೆಯಿದೆ. ಅದರಿಂದ ಹೊರಗಿನ ಸಾಹಿತ್ಯ ವಲಯದ ಕಿಟಕಿಗಳು ತೆರೆದುಕೊಂಡು, ತುಲನಾತ್ಮಕ ಬಹುರೂಪೀ ಅಧ್ಯಯನಗಳಿಗೆ ಅವಕಾಶವಾದೀತು. ಆದರೆ ಗಣಕಯಂತ್ರಗಳ ಯುಗವು ಬರೇ ಬಳಕೆಯನ್ನೇ ನಂಬಿದಂತಿದೆ. ಆಂಗ್ಲ ಭಾಷೆಯ ಕಲಿಕೆಯು (ಹಾಗಾಗಿ) ವ್ಯಾವಹಾರಿಕವಾಗಿರಬೇಕಾಗುವುದು. ಆಂಗ್ಲರ ಈ ಭಾಷೆಯು ಸುಸಂಸ್ಕೃತ ರೂಪದಲ್ಲಿ ಇಂದು ಇಡೀ ವಿಶ್ವದ ಭಾಷೆಯಾಗಿ ನಿಮಿರಿನಿಂತಿದೆ.

ವ್ಯಾವಹಾರಿಕ ಇಂಗ್ಲಿಷ್ ಜ್ಞಾನವನ್ನು ಕಲಿಸಿಕೊಡಬೇಕು. ಹಾಗೆನ್ನುವಾಗ, ಒಂದು ನಿರ್ದಿಷ್ಟ ದರ್ಜೆ ತಲುಪಿದಾಗ, ಎಲ್ಲಾ ಆಂಗ್ಲ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕುವುದು ಸರಿಯಲ್ಲವೆನಿಸಿ, ಬದಲಾಗಿ ಅವರಿಗೆ ಅಭಿವ್ಯಕ್ತ ಮಾಡಲು ನೆರವಾಗುವಂತೆ ವಿಜ್ಞಾನ, ಕಾನೂನು ಮತ್ತು ವಾಣಿಜ್ಯ ಮುಂತಾದ ಶಾಸ್ತ್ರಗಳಲ್ಲಿ ಅವರನ್ನು ವರ್ಗೀಕರಿಸಿ ಬೇರ್ಪಡಿಸಬೇಕಾಗುವುದು. ಈ ದಾರಿಗಳು ತಮ್ಮದೇ ಗುರಿ ಹೊಂದಿದ್ದು ಅಪೇಕ್ಷೆಗಳು ಸಹ ಬೇರೆಯಾಗಿವೆ. ಭಾಷಾಶಾಸ್ತ್ರದಲ್ಲಿ ನಮೂದಿಸಿದ ಈ ವಿವಿಧ “ದಾಖಲೆ ಪುಸ್ತಕ”ಗಳ ಬಗ್ಗೆ ಗಂಭೀರ ಸಂಶೋಧನೆ ನಡೆಯಬೇಕು. ಪ್ರತಿಯೊಂದು ಸಂಪರ್ಕದ ವಲಯ ಹಾಗೂ ಪ್ರತಿಕ್ರಿಯೆ-ಪ್ರಕ್ರಿಯೆಗಳ ಅಧ್ಯಯನವಾದರೆ ಲೇಸು. ಅವುಗಳ ಅವಶ್ಯಕತೆ ಗಳನ್ನು ಪೂರೈಸುವ ಮಾರ್ಗಗಳನ್ನು ಕಂಡುಹಿಡಿಯುವಂತಾಗಬೇಕು.

ಪಠ್ಯಪುಸ್ತಕಗಳನ್ನು ಪುನಃ ಬರೆಯಿಸುವ ಅಗತ್ಯವಿದೆ. ಕೆಳಗಿನ ದರ್ಜೆಗಳ ಪುಸ್ತಕಗಳನ್ನೂ ಎಲ್ಲ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿಟ್ಟರೂ ಪುನರ್ರಚಿಸಬೇಕಾದೀತು. ನಮ್ಮ ಉದ್ದೇಶಗಳ ಪೈಕಿ ಆದ್ಯತಾಪಟ್ಟಿಯಿರುವ ಬಗ್ಗೆ ನಮ್ಮಲ್ಲಿ ತೀರ ಸ್ಪಷ್ಟತೆಯಿರಬೇಕು. ಈ ಉದ್ದೇಶಗಳೆಂದರೆ, ಭಾಷೆಯಲ್ಲಿ ಓದುವುದು, ಬರೆಯುವುದು, ಮಾತಾಡುವುದು ಮತ್ತು ಗ್ರಹಿಸುವುದು. ಅವು ಗಳಲ್ಲಿ ಪ್ರತಿಯೆಂದು ತನ್ನದೇ ಆದ ವಲಯದಲ್ಲಿ ಆದ್ಯತೆ-ಉನ್ನತಿ ಪಡೆಯಬೇಕು.

ಆಂಗ್ಲ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಕಲಿಸುವ (ಮಾತೃಭಾಷೆ ಯಾ ರಾಜ್ಯಭಾಷೆ ಪ್ರಥಮವಾದುದು) ಈ  ವಲಯದಲ್ಲಿ ಇತ್ತೀಚೆಗಿನ ಸಂಶೋಧನೆಯನ್ನು ನಾವು ಬಳಸಬೇಕು. ಮಾತಾಡಲು ಅಥವಾ ಬರೆಯಲು ಶುದ್ಧ ಆಂಗ್ಲ ಭಾಷೆಯನ್ನು ನಮ್ಮ ಮಕ್ಕಳು ನೂರಕ್ಕೆ ನೂರಾಗಿ ರಕ್ತಗತ ಮಾಡಿಕೊಳ್ಳಬೇಕಾಗಿಲ್ಲ. ಅಮೆರಿಕ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಇಂಗ್ಲಿಷಿನ ವಿವಿಧ ರೂಪಾಂತರಗಳಿವೆ.

ಇಂಗ್ಲಿಷ್ ಭಾಷೆಯನ್ನು ಕಲಿಸುವ ನಿಟ್ಟಿನಲ್ಲಿ ಖಾಸಗಿ ಸಾಹಸಗಳನ್ನು ಉತ್ತೇಜಿಸುವುದು ಲೇಸು. ಆದರೆ ಗುಣಮಟ್ಟ ಹಾಳಾಗಬಾರದು, ಅಲ್ಲಿ ರಾಜಿಯಾಗುವ ಮಾತಿಲ್ಲ. ಇನ್ನು ಆಂಗ್ಲ ಸಾಹಿತ್ಯ ಮತ್ತು ಅದರ ಕಲಿಕೆಯ ಬಗ್ಗೆ ಹೇಳುವುದಾದರೆ, ಅದರ ಸಿರಿವಂತಿಕೆಯನ್ನು ನಾವು ಹೊಗಳಿ ಅಟ್ಟಕ್ಕೇರಿಸಬೇಕಾಗಿಲ್ಲ. ಆಂಗ್ಲ ಭಾಷೆಯ ಕಲಿಕೆಯ ಮಟ್ಟಿಗೆ ಭಾರತದುದ್ದಗಲಗಳಿಗೂ ನಾವು ಏಕರೂಪದ ಮಾದರಿಯನ್ನು ಅನುಸರಿಸುವ ಬಗ್ಗೆ ಎಚ್ಚರವಹಿಸಬೇಕು. ಈ ಮಾತಿನ ಒಂದಂಶವೆಂದರೆ, ಶಬ್ದೋಚ್ಚಾರಗಳಲ್ಲಿ ಏಕರೂಪತೆ ಮೂಡಿಬರಬೇಕು.

ಭಾರತದ ಹೆಚ್ಚಿನ ರಾಜ್ಯಗಳಲ್ಲಿರುವ ಅರ್ಧಕ್ಕಿಂತ ದೊಡ್ಡ ಪಾಲಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಉತ್ತೀರ್ಣರಾಗದೆ ಢುಮುಕಿ ಹೊಡೆಯುತ್ತವೆ. ಚೀನಾ ಮತ್ತು ಜಪಾನ್ ದೇಶಗಳ ಮಾದರಿಯನ್ನು ಮುಂದಿಟ್ಟುಕೊಂಡು, ಭಾರತದಲ್ಲೂ ಆಯಾ ಮಾತೃಭಾಷಾ ಮಾಧ್ಯಮದ ವಿದ್ಯೆಯನ್ನು ಬೆಂಬಲಿಸುವುದರ ಜೊತೆಗೆ, ನಮ್ಮ ಸಾರ್ವಜನಿಕ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನೂ ಪ್ರೋಬಂದರೆ ಲೇಸು. ಆದರೆ ಮಾತೃಭಾಷೆಯ ಪ್ರಾಧಾನ್ಯತೆಯನ್ನು ಅಲ್ಲಗಳೆಯಲಾರದು. ರಾಜ್ಯಭಾಷೆ ಮತ್ತು ರಾಷ್ಟ್ರಭಾಷೆಯ ಅನಿವಾರ್ಯತೆಯ ಬಗ್ಗೆ ಎಚ್ಚರವಿರಬೇಕು. ಆಂಗ್ಲಭಾಷೆ ರಾಜ್ಯ ಮತ್ತು ರಾಷ್ಟ್ರಭಾಷೆಯ ಮಹತ್ವದ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳುವುದು ಅತ್ಯವಶ್ಯಕ. ಜಾಗತೀಕರಣದ ಬಿರುಗಾಳಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಭಾಷಾ ಸ್ವಂತಿಕೆಯನ್ನು ಮರೆತಾಗ ಸಾಂಸ್ಕೃತಿಕ ಮತ್ತು ಬೌದ್ದಿಕ ದಾಸ್ಯಕೂಪಕ್ಕೆ ನಮ್ಮನ್ನು ನಾವು ತಳ್ಳಿದಂತಾಗುತ್ತದೆ. ಆದರೆ ಭಾಷಾ ದ್ವೇಷದ ಕಿಡಿ ಹಚ್ಚಿದಾಗ ಸಾಂಸ್ಕೃತಿಕ, ಬೌದ್ದಿಕ, ಆರ್ಥಿಕ ವ್ಯಾಪಕತೆಯಿಂದ ನಮ್ಮ ರಾಜ್ಯಗಳು ಮತ್ತು ರಾಷ್ಟ್ರ ವಿಮುಖವಾಗುತ್ತದೆ.

ಇಷ್ಟಾದರೂ ಇಂಗ್ಲಿಷ್ ಭಾಷೆಯೊಂದೇ ಈ ಅಂತಾರಾಷ್ಟ್ರೀಯ ಮಾಹಿತಿಜಾಲದ ಏಣಿಯ ಮೆಟ್ಟಲುಗಳನ್ನೇರಲು ಜನರನ್ನು ಸಬಲೀಕರಿಸುವುದು. ಆಂಗ್ಲ ಸಾಹಿತ್ಯದ ಪ್ರವೇಶ ಪರೀಕ್ಷೆಯನ್ನು ಪಾಸು ಮಾಡುವ ತರುಣರು ಅದರ ಹಿರಿಯ ಲೇಖಕರ ಒಂದೇ ಒಂದು ಕೃತಿಯನ್ನು ಕಣ್ಣೆತ್ತಿ ನೋಡದೆ, ಯಾವುದೇ ಸುಲಭದ ಕೈಪಿಡಿಯನ್ನು ಬಾಯಿಪಾಠ ಮಾಡಿ, ಅದರಲ್ಲಿರುವ ಬೇಯಿಸಿದ ವೃತ್ತಾಂತವನ್ನು ನುಂಗಿಕೊಳ್ಳಲು ಪ್ರಾಯಶಃ ಸಲಹೆ ಪಡೆದಿರುತ್ತಾನೆ. ಹೊರತು ತನ್ನ ವ್ಯಕ್ತಿತ್ವ ವಿಕಾಸಕ್ಕೆ ಅಗತ್ಯವಾದ ದಾರಿ ಹುಡುಕಿಕೊಳ್ಳ ಲಾರದವನಾಗುತ್ತಾನೆ.