‘ಗಮಕ ಕಲೆ ಭಾರತದ ೬೪ ಪ್ರಾಚೀನ ಲಲಿತಕಲೆಗಳಲ್ಲಿ ಒಂದು’ ಎಂದು ಕನ್ನಡದ ಪ್ರಸಿದ್ಧ ಸಾಹಿತಿ ಡಿ.ವಿ.ಜಿ. ಹೇಳುತ್ತಾರೆ.

ವಾಲ್ಮೀಕಿ ರಾಮಾಯಣವನ್ನು ಲವ-ಕುಶರು ರಾಮನ ಆಸ್ಥಾನದಲ್ಲಿ ಗಮಕದ ಮೂಲಕ ಹಾಡಿದರೆಂದು ಹೇಳಿದ್ದಾರೆ. ಕೇವಲ ಶ್ರುತಿಯ ಮೂಲಕ ಹಾಡುವ ಗಾಯನ ಗಮಕ. ಹಾಗೆ ನೋಡಿದರೆ ನಾರದ ಮುನಿಗಳು ಗಮಕ ಕಲೆಯ ಪಿತಾಮಹರು. ಪ್ರಾಚೀನ ಮಹಾಕಾವ್ಯವಾದ ಮಹಾಭಾರತದಲ್ಲಿ ಗಮಕದ ಬಗ್ಗೆ ಪ್ರಸ್ತಾಪವಿದೆ.

ಭಾರತದಂತಹ ಅನಕ್ಷರಸ್ಥರು ಹೆಚ್ಚಿರುವ ಸ್ಥಳದಲ್ಲಿ ಜನರನ್ನು ಸಂಘಟಿಸುವುದು ಹಾಗೂ ಅವರಲ್ಲಿ ಭಾವೈಕ್ಯ ಉಳಿಸುವ ಕೆಲಸವನ್ನು ಸಾಹಿತ್ಯ ಮತ್ತು ಸಂಸ್ಕೃತಿಗಳು ಮಾತ್ರ ಮಾಡಬೇಕು. ಇಂತಹ ಕೆಲಸ ಮಾಡಲು ಗಮಕ ಕಲೆ ಮಾತ್ರ ಸಮರ್ಥವಾಗಿದೆ. ಗಮಕ ಕಲೆ ಇಲ್ಲದಿದ್ದರೆ ಮಹಾಕಾವ್ಯಗಳು, ನಮ್ಮ ಇತರ ಸಾಹಿತ್ಯ ಸಂಪತ್ತು ಜನರ ಮನದಲ್ಲಿ ಹೇಗೆ ಉಳಿಯುತ್ತಿತ್ತು?

ರಾಮಾಯಣ ಮಹಾಭಾರತ ಭಾಗವತ ಹಾಗೂ ಪುರಾಣಗಳು ಜನರನ್ನು ಸದಾ ಕ್ರಿಯಾಶೀಲರನ್ನಾಗಿಸಿದೆ. ಅವರಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅರಿವನ್ನು ಜಾಗೃತಗೊಳಿಸಿದೆ. ಇಂತಹ ಜಾಗೃತಿ ಅವರಿಗೆ ಮೂಡಲು ಅವರ ಮನದಲ್ಲಿ ಈ ಕಾವ್ಯವನ್ನು ಬಿತ್ತಿದ ಗಮಕಿಗಳು ಕಾರಣವೆಂದು ಹೇಳಬೇಕು.

ಹರಿಹರನ ವಿವಿಧ ರಗಳೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸನ ಭಾರತ, ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ, ಲಕ್ಷ್ಮೀಶನ ಜೈಮಿನಿ ಭಾರತ, ಕನಕದಾಸರ ನಳಚರಿತ್ರೆ, ಷಡಕ್ಷರ ಕವಿಯ ರಾಜಶೇಖರ ವಿಳಾಸ, ರತ್ನಾಕರವರ್ಣಿಯ ಭರತೇಶ ವೈಭವ ಮೊದಲಾದ ಅನೇಕ ಕಾವ್ಯಗಳು ಇಂದು ಜನಮನದಲ್ಲಿ ನಿಂತಿದ್ದರೆ ಅದಕ್ಕೆ ಈ ನಾಡಿನ ಗಮಕಿಗಳ ಅಪೂರ್ವ ಸೇವೆ ಕಾರಣವಾಗಿದೆ.

ಆಧುನಿಕ ಕಾಲದಲ್ಲೂ ರಾಷ್ಟ್ರಕವಿ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಜನಮನದಲ್ಲಿ ಬೇರೂರಲು ಗಮಕಿಗಳು ಕಾರಣಕರ್ತರಾಗಿದ್ದಾರೆಂಬುದು ಅತಿಶಯೋಕ್ತಿ ಮಾತ್ರ. ಗ್ರಾಮಗ್ರಾಮಗಳಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಲು ಗಮಕಿಗಳು ಅಪೂರ್ವ ಸೇವೆ ಮಾಡಿದ್ದಾರೆ. ಗಮಕ ಕಲೆಯನ್ನು ಸಾರೋದ್ಧಾರವಾಗಿ ಬೆಳಸಿದ್ದಾರೆ.

೧೯೧೬ರಲ್ಲಿ ವಯಸ್ಕರ ಶಿಕ್ಷಣ ಸಮಿತಿ ಪ್ರಾರಂಭವಾದ ಸಂದರ್ಭದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು ಅನಕ್ಷರತೆಯನ್ನು ಹೊಡೆದೋಡಿಸಲು ಹಾಗೂ ವಯಸ್ಕರ ಶಿಕ್ಷಣ ವನ್ನು ಬೆಳೆಸಲು ಗಮಕ ಕಲೆ ತುಂಬಾ ಉಪಯುಕ್ತವೆಂದು ಅದಕ್ಕೆ ಪ್ರೋಕೊಟ್ಟಿದ್ದರು. ಇಂದು ಸಾಕ್ಷರತಾ ಆಂದೋಳನದಲ್ಲಿ ಗಮಕ ಕಲೆಯನ್ನು ಸಮರ್ಥವಾಗಿ ಬಳಸಿಕೊಳ್ಳ ದಿರುವುದು ದುರ್ದೈವದ ಸಂಗತಿ.

ಗಮಕ ಕಲೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಮೂಲ್ಯ ಕಾಣಿಕೆ ಕೊಟ್ಟಿರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಂದು ಗಮಕದ ಮೂಲಕ ಸ್ವಾತಂತ್ರ್ಯದ ಸಂದೇಶವನ್ನು ಪ್ರಸಾರ ಮಾಡಿದ್ದನ್ನು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ಧವನಹಳ್ಳಿ ಕೃಷ್ಣಶರ್ಮರು ಕೂಡ ಉಲ್ಲೇಖಿಸಿದ್ದಾರೆ.

ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಮೊದಲ ಬಾರಿಗೆ ಸಂಸ್ಕೃತಿ ಇಲಾಖೆ ಪ್ರಾರಂಭವಾಯಿತು. ಅದು ಅನೇಕ ಪ್ರಾಚೀನ ಕಾವ್ಯಗಳನ್ನು ಸುಲಭ ಬೆಲೆಗೆ ಪ್ರಕಟಿಸಿತು ಹಾಗೂ ಗಮಕ ಕಲೆಗೆ ಪ್ರೋಕೊಡುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಪ್ರೊ. ಎ.ಎನ್. ಮೂರ್ತಿರಾಯರು ಈ ಇಲಾಖೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದರು. ಇವರ ಈ ಕಾರ್ಯ ಭಾರತ ಸರ್ಕಾರಕ್ಕೆ ಪ್ರೇರಣೆ ನೀಡಿ ಅಲ್ಲೂ ಕೂಡ ಸಂಸ್ಕೃತಿ ಇಲಾಖೆ ಪ್ರಾರಂಭವಾಗಿದ್ದು, ಐತಿಹಾಸಿಕ ಸಂಗತಿ.

ಗಮಕ ಕಲೆಗೆ ದುಡಿದ ಅನೇಕ ಮಹನೀಯರು ಕನ್ನಡ ನಾಡಿನಲ್ಲಿ ಇದ್ದಾರೆ. ಕನಕಪುರಂದರ ಪ್ರಶಸ್ತಿ ಪುರಸ್ಕೃತರಾದ ಗಮಕಿ ರಾಘವೇಂದ್ರರಾಯರು, ಭಾರತದ ಬಿಂದುರಾಯರು, ಜೋಳದರಾಶಿ ದೊಡ್ಡಣ್ಣ ಗೌಡರು, ಶಿವಮೊಗ್ಗದ ಕೇಶವಮೂರ್ತಿ, ಮೈಸೂರಿನ ಬಿ.ಎಸ್. ಕೌಶಿಕ್, ಗೌರಮ್ಮ, ಬೆಂಗಳೂರಿನ ಶಕುಂತಲ ಪಾಂಡುರಂಗರಾವ್, ಎಂ.ಎಸ್. ಶೀಲ, ಸುಕನ್ಯಾ ಪ್ರಭಾಕರ್, ನಾಗವಲ್ಲಿ ನಾಗರಾಜ್, ಕಮಲಾ ರಾಮಕೃಷ್ಣ, ಆಕಾಶವಾಣಿಯ ಸತ್ಯನಾರಾಯಣ, ಮಂಡ್ಯದ ನಾರಾಯಣಗೌಡ, ತುಮಕೂರಿನ ಸುನಂದಮ್ಮ ಹೀಗೆ ನಾಡಿನಾದ್ಯಂತ ಇರುವ ಅನೇಕ ಗಮಕ ಕಲಾವಿದರು ಅಪೂರ್ವ ರೀತಿಯಲ್ಲಿ ಸಾಹಿತ್ಯ ಸೇವೆ ಮಾಡಿದ್ದಾರೆ.

ಗಮಕ ಎಂದರೆ ಕೇವಲ ಹಾಡುವುದಲ್ಲ. ಕವಿಯ ಭಾವನೆಗಳನ್ನು ಸುಮಧುರವಾದ ರೀತಿಯಲ್ಲಿ ಪ್ರತಿಬಿಂಬಿಸಿ ಅವುಗಳನ್ನು ಸಹೃದಯರ ಮನಕ್ಕೆ ಮುಟ್ಟುವಂತೆ ಮಾಡುವ ವಿಶೇಷ ಕಲೆ ಗಮಕಿಗಳದ್ದು. ಸಾಹಿತ್ಯದ ಪರಿಜ್ಞಾನವಿಲ್ಲದ ಅಂದರೆ ಛಂದಸ್ಸು, ವ್ಯಾಕರಣ ಹಾಗೂ ಭಾಷೆಯ ಬೆಳವಣಿಗೆಯ ಬಗ್ಗೆ ಜ್ಞಾನ ಇಲ್ಲದವ ಎಂದೂ ಉತ್ತಮ ಗಮಕಿ ಯಾಗಲಾರ.

ಗಮಕ ಕಲಾ ಪರಿಷತ್ತ್‌ನ್ನು ನಿರ್ಮಿಸಿ ಗಮಕಿಗಳು ಶ್ರೇಯಸ್ಸಿಗೆ ದುಡಿದ ಜಿ. ನಾರಾಯಣ ರವರು ಈ ಸಂದರ್ಭದಲ್ಲಿ ಅಭಿನಂದನಾರ್ಹರು. ಗಮಕ ಕಲೆಗೆ ಅತಿ ಹೆಚ್ಚಿನ ಪ್ರೋದೊರೆಯಬೇಕಾಗಿದೆ. ನಮ್ಮ ಪ್ರಾಚೀನ ಕಾವ್ಯಗಳು ಮನೆಮನೆಗೆ ತಲುಪಲು ಗಮಕಿಗಳು ನಿಷ್ಠೆಯಿಂದ ಸೇವೆ ಸಲ್ಲಿಸಬೇಕಾಗಿದೆ. ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕ, ಹರಿಹರ, ಷಡಕ್ಷರ ದೇವ, ರತ್ನಾಕರವರ್ಣಿ, ಕುವೆಂಪು, ಡಿ.ವಿ.ಜಿ., ಮಾಸ್ತಿ, ಪು.ತಿ.ನ. ಗೋಕಾಕ್ ಅವರುಗಳ ಕಾವ್ಯಗಳು ಇಂದಿಗೂ ಬಹುಸಂಖ್ಯಾತರಿಗೆ ಅಪರಿಚಿತವಾಗಿವೆ. ಅವುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ವಿದ್ಯಾವಂತರೆನಿಸಿಕೊಂಡವರೂ ಅಸಮರ್ಥವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯ ಪರಂಪರೆಯನ್ನು ಜನರ ಬಳಿಗೆ ಕೊಂಡೊಯ್ಯಲು ಗಮಕಿಗಳು ಹಾಗೂ ವ್ಯಾಖ್ಯಾನಕಾರರು ನಿಷ್ಠೆಯಿಂದ ಕೆಲಸ ಮಾಡಬೇಕು. ಸರ್ಕಾರ ಗಮಕ ಕಲಾ ಪರಿಷತ್ತಿಗೆ ವಿಶೇಷ ಅನುದಾನವನ್ನು ನೀಡಿ ಈ ಕಾವ್ಯಗಳ ರಸಘಟ್ಟಗಳನ್ನು ಕ್ಯಾಸೆಟ್, ಸಿ.ಡಿ. ಮಾಡಿಸಿ ಎಲ್ಲಾ ಜನತೆಗೂ ತಲುಪಿಸುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ಗಮಕ ನಿಧಿಯನ್ನು ರಾಜ್ಯ ಸರ್ಕಾರ ಸ್ಥಾಪಿಸುವ ಅಗತ್ಯವಿದೆ.

ನಾಡಿನ ಕಾವ್ಯ ಖಣಜದ ಉತ್ಖನ ಮಾಡುವ ಕೆಲಸ ಗಮಕಿಗಳಿಂದ ಮಾತ್ರ ಸಾಧ್ಯ. ಈ ಬಗ್ಗೆ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು ಮತ್ತು ಇನ್ನಿತರ ಸಾಹಿತ್ಯಿಕ ಸಂಸ್ಥೆಗಳು ಗಮಕ ಕಲಾಕ್ಷೇತ್ರಕ್ಕೆ ವಿಶೇಷ ಗಮನಹರಿಸಬೇಕು. ನಮ್ಮಲ್ಲಿ ಮಾತುಗಾರರ ಮತ್ತು ಬರಹಗಾರರ – ಎರಡು ಸಾಂಸ್ಕೃತಿಕ ಜಗತ್ತಿನ ಮಧ್ಯೆ ಸಂಹನಿಸಬೇಕಾದರೆ ಗಮಕ ಕಲೆ  ಪರಿಣಾಮಕಾರಿಯಾದ ಮಾಧ್ಯಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ನಮ್ಮಲ್ಲಿ ಅಸಂಖ್ಯಾತ ಮಹಾಕಾವ್ಯಗಳು ಇನ್ನೂ ಸಂಶೋಧನೆಯಿಲ್ಲದೆ, ಪರಿಷ್ಕರಣೆಯಾಗದೆ, ಪ್ರಕಟವಾಗದೆ ಗುಪ್ತವಾಗಿ ಉಳಿದಿವೆ. ಅವುಗಳನ್ನು ಪ್ರಕಟಿಸುವ ಜೊತೆಯಲ್ಲಿ ಗಮಕದ ಮೂಲಕ ಪ್ರಸಿದ್ಧಗೊಳಿಸುವ ವೇದಿಕೆಗಳು ಸಿದ್ಧವಾಗಬೇಕು. ಗಮಕಿಗಳಿಗೆ ಮಹಾಕಾವ್ಯವನ್ನು ಓದುವ, ಅಭ್ಯಾಸ ಮಾಡುವ ಮತ್ತು ಸರಿಯಾದ ಛಂದಸ್ಸು ಮತ್ತು ವ್ಯಾಕರಣದ ಪರಿಚಯ ಮಾಡುವ ನಿರಂತರ ತರಬೇತಿ ನೀಡಬೇಕಾಗಿದೆ. ಸರಿಯಾದ ಗಮಕಿ ಮತ್ತು ವ್ಯಾಖ್ಯಾನಕಾರರು ಇಲ್ಲದೇ ಇದ್ದಲ್ಲಿ ಅತ್ಯುತ್ತಮ ಮಹಾಕಾವ್ಯದ ಸೌಂದರ್ಯ ಕೆಡುವ ಸಾಧ್ಯತೆಯಿದೆ. ಆದುದರಿಂದ ಗಮಕದಂತಹ ಶಾಸ್ತ್ರೀಯ ಕ್ಷೇತ್ರ ವಿಪುಲವಾಗಿ ಬೆಳೆಯುವ ಅನುಕೂಲ ಸಂದರ್ಭಗಳನ್ನು ಬೆಳೆಸುವುದು ಅನಿವಾರ‍್ಯ.