ಕನ್ನಡದ ಶ್ರೇಷ್ಠ ಜನಪ್ರಿಯ ಕವಿ ಪ್ರೊ. ಕೆ.ಎಸ್. ನಿಸಾರ್‌ಅಹಮದ್ ಅವರ ಮತ್ತು ನನ್ನ ಸ್ನೇಹ ಮೂರು ದಶಕಗಳಷ್ಟು ಹಳೆಯದು. ಶ್ರೇಷ್ಠತೆ ಮತ್ತು ಜನಪ್ರಿಯತೆ ಕವಿಯೊಬ್ಬನಲ್ಲಿ ಮೇಳೈಸಿರುವುದು ಅಪರೂಪ. ಇಂಥ ಅಪರೂಪದ ಕವಿಗಳ ಸಾಲಿಗೆ ಸೇರಿದವರು ನಿಸಾರರು. ಪ್ರಾರಂಭ ಕಾಲದಿಂದ ಇಲ್ಲಿಯವರೆಗೂ ಈ ಎರಡು ಗುಣಗಳ ನಂಟನ್ನು ಹದಗೆಡದಂತೆ ಕಾಪಾಡಿಕೊಂಡು ಬಂದಿದ್ದಾರೆ. ಕವಿ ಯಾರೆಂದು ಗೊತ್ತಿಲ್ಲದ ಕಾಲದಲ್ಲಿ ‘ಬೆಣ್ಣೆ ಕದ್ದ ನಮ್ಮ ಕೃಷ್ಣ’, ‘ಎಲ್ಲ ಮರೆತಿರುವಾಗ’, ‘ಜೋಗದ ಸಿರಿ ಬೆಳಕಿನಲ್ಲಿ’, ‘ಕನ್ನಡವೆಂದರೆ ಬರಿ ನುಡಿಯಲ್ಲ’, ‘ಕುರಿಗಳು ಸಾರ್ ಕುರಿಗಳು’, – ಮತ್ತಿತರ ಕವಿತೆಗಳು ಶಿಷ್ಟವರ್ಗದ ಮತ್ತು ಸಾಮಾನ್ಯ ಜನರ ಬಾಯಲ್ಲಿ ನಲಿದಾಡುತ್ತಿದ್ದುವು. ನಿಜವಾದ ಸಾಹಿತ್ಯದ ಗುರಿ ಇದೇ ಅಲ್ಲವೆ? ಇವೊತ್ತಿನ ಕಂಪ್ಯೂಟರ್ ಯುಗದಲ್ಲೂ ಕೂಡ ನಿಸಾರರ ಕವಿತೆಗಳನ್ನು ಜನ ಮೆಚ್ಚಿ ಓದುತ್ತಾರೆ, ಹಾಡುತ್ತಾರೆ ಎಂದರೆ ಇದು ಅವರ ಹೆಗ್ಗಳಿಕೆಗೆ ಸಾಕ್ಷಿ.

ನನಗೆ ತಿಳಿದ ಮಟ್ಟಿಗೆ ನಿಸಾರರು ಐದು ದಶಕಗಳಿಗೂ ಮೀರಿ ಕವನ ರಚನೆಯಲ್ಲಿ ತೊಡಗಿದ್ದಾರೆ. ಕಾವ್ಯಾಭಿವ್ಯಕ್ತಿ ಇವರ ಪ್ರಧಾನ ಕಾಳಜಿಯಾದರೂ ವೈಚಾರಿಕ ಬರಹಗಳು, ಸಾಹಿತ್ಯ ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳಲ್ಲಿಯೂ ಕೂಡ ಆಸಕ್ತಿಯಿದೆ. ಅಲ್ಲೆಲ್ಲ ಮೌಲಿಕವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಇವರ ಬರವಣಿಗೆಗೆ ಅವರದೇ ಆದ ಸ್ವಂತದ ಛಾಪು ಇದೆ. ವಸ್ತು ವೈವಿಧ್ಯವನ್ನು ಮತ್ತು ಬಳಸುವ ರೂಪಕ, ಸಂಕೇತ, ಉಪಮೆ, ಪ್ರತಿಮೆಗಳಲ್ಲಿ ಸ್ವವಿಶಿಷ್ಟತೆಯನ್ನು, ಅಚ್ಚಳಿಯದ ಅತಿಶಯವಾದ ಅನನ್ಯತೆಯನ್ನು ಇವರ ರಚನೆ ಗಳಲ್ಲಿ ಕಾಣಬಹುದು. ಇವರ ವೈಚಾರಿಕ ಸ್ವೋಪಜ್ಞತೆ, ಧರ್ಮ ನಿರಪೇಕ್ಷತೆ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯಾಗಿವೆ.

ನಿಸಾರರು ಭಿನ್ನಸಂಸ್ಕೃತಿ ಮತ್ತು ಅನ್ಯ ಪರಂಪರೆಯನ್ನು ಅರಗಿಸಿಕೊಂಡು ತಾಯ್ನುಡಿ ಯಲ್ಲದ, ಪರಿಸರದ ಭಾಷೆಯಲ್ಲಿ ಸಾಹಿತ್ಯ ಸಾಧನೆಯಲ್ಲಿ ತೊಡಗುವುದು ಎಂದರೆ, ಅನೇಕ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭವನ್ನು ಆಹ್ವಾನಿಸಿಕೊಂಡಂತೆಯೇ. ಇಂಥ ಸವಾಲುಗಳನ್ನು ಅವರು ನಿಭಾಯಿಸಿದ ಬಗ್ಗೆ, ತಮ್ಮ ಶ್ರದ್ಧೆ ನಂಬಿಕೆಗಳಿಗೆ ಧಕ್ಕೆ ಬರದ ಹಾಗೆ ಎಚ್ಚರ ವಹಿಸಿದ ಬಗ್ಗೆ ನನ್ನಲ್ಲಿ ಕುತೂಹಲ ಆಸಕ್ತಿಗಳು ಮೂಡಿವೆ. ಈ ನಿಟ್ಟಿನಲ್ಲಿ ನಿಸಾರ್ ಅವರು ಮಾಡಿರುವ ಸಮನ್ವಯರೂಪದ ಸಾಧನೆ ಪ್ರಜಾತಂತ್ರವನ್ನು ಒಪ್ಪಿ ಕೊಂಡಿರುವ ನನಗೆ, ನನ್ನಂಥ ಲೆಕ್ಕವಿರದಷ್ಟು ನಾಗರಿಕರಿಗೆ ಹೆಮ್ಮೆ ಬರಿಸಿದೆ.

ಮೊದಲಿನಿಂದಲೂ ಗುಂಪುಗಳಿಂದ ಸಿಡಿದು ನಿಂತು ಮುಂದುವರೆದಿರುವ ಅವರಿಗೆ ಹಲವು ಬಾರಿ ನಿಸ್ಸಂಗಭಾವ, ತಬ್ಬಲಿತನಗಳು ಅಮರಿದ್ದುಂಟು. ಅವರು ಅಂತರ್ಮುಖಿಯಾಗುವಂತೆ, ಕವನ ರಚನೆ, ಅಧ್ಯಯನ, ಚಿಂತನೆಗಳಲ್ಲಿ ತೊಡಗುವಂತೆ ಈ ಏಕಾಕಿತನದ ಬದುಕು ಪ್ರೇರೇಪಿಸಿದೆ.

ಅವರೇ ಹೇಳುವಂತೆ: “ಎರಡು ಸಂಸ್ಕೃತಿಗಳ ನಡುವೆ ನಿಂತು ಬರೆಯಬೇಕಾದ ನನ್ನಂಥ ಕೃತಿಕರ್ತನಿಗೆ ಅನುಕೂಲಗಳೂ ಇವೆ; ಅಡಚಣೆಗಳೂ ಇವೆ”.

ಕವಿ ಅನೇಕ ಬಾರಿ ತನ್ನ ದೈನಿಕ ಕಷ್ಟಕೋಟಲೆ, ಸಮಸ್ಯೆಗಳ ಮೇಲೆ, ಬಹುಸಂಖ್ಯಾತ ವ್ಯವಸ್ಥೆಯಿಂದ ಆಗುತ್ತಿರುವ ಅನ್ಯಾಯದ ಮೇಲೆ ಸದಾ ಕಾವು ಕೂತು ಹತಾಶೆಯ ಏಕರೂಪತೆಯ ತತ್ತಿಗಳನ್ನು ತಯಾರಿಸುತ್ತಾ ಹೋಗುತ್ತಾನೆ. ವ್ಯಕ್ತಿತ್ವದಲ್ಲಿ ಸಂಕುಚಿಸುತ್ತಾ ಹೋಗಿ, ಗೋಳುಕರೆ, ಪ್ರತಿಭಟನೆ ಆಕ್ರೋಶಗಳನ್ನೇ ಕಾರುವ ಯಾಂತ್ರಿಕ ಕ್ರಿಯೆಯ ಕೈಗೊಂಬೆಯಾಗುತ್ತಾನೆ. ಅವರ ಕವನವೊಂದರಲ್ಲಿ ಅವರು ಸಿಡಿಲಿನಂತೆ ಆರ್ಭಟಿಸುತ್ತಾರೆ:

ಇದು ಸಿಡಿಲಿನ ನುಡಿ; ಇದು ಮಡಿಯದ ನುಡಿ,
ಎಂದೆಂದಿಗು ಇದು ಮೊಳಗುವುದು,
ನೂರು ನಿಯಮಗಳ ಕಾರ್ಮುಗಿಲೋಳಿ
ಮುಸುಕಿದರೂ ತೊಳತೊಳಗುವುದು.

ಇಂದಿನ ಕವಿಗಳಲ್ಲಿ ಕೆಲವರು ತಮ್ಮ ಹಿಂದಿನ ತಲೆಮಾರಿನ ಕವಿಗಳನ್ನು ಹಾಗೂ ಸಮಾಜದ ಗಣ್ಯ ವಯೋವೃದ್ಧರನ್ನು ವ್ಯಂಗ್ಯ ವಿಡಂಬನೆಗಳಿಂದ ಕಾಣುವುದೇ ಪ್ರಗತಿಪರವಾದ ಮತ್ತು ಅತ್ಯಾಧುನಿಕವಾದ ದೃಷ್ಟಿ ಎಂದು ಬೀಗುತ್ತಿರುವಾಗ, ನಿಸಾರರು ಈ ಹಿರಿಯರಿಂದ ಕಲಿಯಬೇಕಾದ ಉತ್ತಮಾಂಶಗಳನ್ನೆಲ್ಲ ಗ್ರಹಿಸಿಕೊಂಡು ಮನನ ಮಾಡಿ ತಮ್ಮ ಬದುಕಿಗೆ ಯಾವುದು ಸಂಗತವೋ ಅವುಗಳನ್ನು ಬಳಸಿಕೊಳ್ಳಲು ಹಿಂಜರಿಯಲಿಲ್ಲ. ಈ ಕಾರಣದಿಂದ ಅವರ ಜೀವನದ ಕಾಣ್ಕೆ ವಿಶಾಲವಾಗಿದೆ; ನೋಟ ಸಮಗ್ರವಾಗಿದೆ; ಅವರ ಭಾವಕೋಶ ಶ್ರೀಮಂತವಾಗಿದೆ. ವ್ಯಂಗ್ಯ ವಿಡಂಬನೆಗಳನ್ನು ನಿಸಾರರು ಬಳಸುವುದಿಲ್ಲ ಎಂದಲ್ಲ, ಬಳಸಿದರೂ ಅವು ಸಾಮಾಜಿಕ ಪ್ರತಿಭಟನೆಯ, ನ್ಯೂನತೆಗಳನ್ನು ಗುಣಪಡಿಸುವ ಚಿಕಿತ್ಸಕ ಬುದ್ದಿಯಿಂದ ಪ್ರೇರಿತವಾಗಿಯೇ ಹೊರತು ಸಿನಿಕತನದ ಪ್ರತೀಕವಾಗಿಲ್ಲ. ಪರಂಪರೆಯ ಬಗ್ಗೆ ಗೌರವವಿದ್ದೂ ಹೊಸದನ್ನು ಪ್ರಯೋಗಶೀಲವಾಗಿ ಸಾಧಿಸಬೇಕೆನ್ನುವ ನಿರಂತರ ಹಂಬಲ ಬರವಣಿಗೆಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ವ್ಯಾಪಕತೆಗೆ ಮುಖ್ಯ ಕಾರಣವಾಗಿದೆ.

ನಾಡುನುಡಿಗಳ ಅತಿಶಯವಾದ ಅಕ್ಕರೆ, ಗೌರವಗಳು ‘ನಿತ್ಯೋತ್ಸವ’ದಂಥ ಅಪೂರ್ವ ಭಾವಗೀತೆಯನ್ನು ಬರೆಸಿತು. ವಿಚಾರದೃಷ್ಟಿ ಮತ್ತು ಭಾವದ ಆರ್ದ್ರತೆಗಳನ್ನು ಮೇಳೈಸಿಕೊಂಡು ಇಂಥ ರಚನೆಗಳು ಒಂದು ಸಮಸ್ಥಿತಿಯನ್ನುಂಟುಮಾಡಿದವು. ಯಾವ ಪಂಥಕ್ಕೂ ಬದ್ಧರಾಗದೆ, ಕಾವ್ಯ ಜೀವನದುದ್ದಕ್ಕೂ ಆಯ್ಕೆಯ ವಿಷಯದಲ್ಲಿ ತೋರಿರುವ ಧೈರ್ಯ, ಪ್ರಾಮಾಣಿಕತೆ, ಸ್ವಾತಂತ್ರ್ಯ ಶ್ಲಾಘನೀಯವಾದದ್ದು; ಕಿರಿಯ ಕವಿಗಳಿಗೆ ಪರಿಪಾಲನಯೋಗ್ಯ ಎನ್ನಿಸು ವಂಥದ್ದು.

ಭಾರತದ ಬಗ್ಗೆ ಹಾಡುವಂತೆ ಕವಿ ಕನ್ನಡ ನಾಡು-ನುಡಿಗಳ ಬಗ್ಗೆ ಸಹ ತುಂಬು ಅಭಿಮಾನದಿಂದ ಹಾಡುತ್ತಾರೆ. ಕನ್ನಡಾಂಬೆಗೆ ನಿತ್ಯ ಉತ್ಸವಗಳನ್ನೇ ಮಾಡುತ್ತಾರೆ. ಕರ್ನಾಟಕದ ಮಹಿಮೆ, ಮೇಲ್ಮೆ ಮತ್ತು ಆಶಯ ನಿತ್ಯೋತ್ಸವ ಕವನದಲ್ಲಿ ಹರಳುಗಟ್ಟಿದೆ. ಅವರಲ್ಲಿ ಬದುಕಿನ ಚೆಲುವು, ಪ್ರೀತಿ, ಅದಮ್ಯ ನುಡಿ ಮತ್ತು ನಾಡಿನ ಪ್ರೇಮ ಅರಳಿ ನಿಲ್ಲುತ್ತದೆ.

ಇವರದು ನಗರ ಕೇಂದ್ರಿತ ಬದುಕಾದ್ದರಿಂದ ಈ ವರ್ಗದ ನೋವು, ನಲಿವು, ಆಸೆ, ನಿರಾಸೆ ಇವರ ಕಾವ್ಯವನ್ನು ಪ್ರವೇಶಿಸಿವೆ. ಇವರ ಹಾಗೆ ನಗರದ ಮಧ್ಯಮ ವರ್ಗದ ಬದುಕನ್ನು ನಿಚ್ಚಳವಾಗಿ ಮತ್ತು ಹೃದಯಂಗಮವಾಗಿ ಕಟ್ಟಿಕೊಟ್ಟವರು ಕನ್ನಡ ಕಾವ್ಯದ ಸಂದರ್ಭದಲ್ಲಿ ವಿರಳ.

‘ಶಿಲುಬೆಗೇರಿದ್ದಾನೆ’ ಎಂಬ ಅವರ ಕವನದಲ್ಲಿ ಏಸುಕ್ರಿಸ್ತನ ವ್ಯಕ್ತಿತ್ವಕ್ಕೆ ಚಾರಿತ್ರಿಕಯುಗದ ಹಿನ್ನೆಲೆಯನ್ನು ಕವಿ ನಿಸಾರ್ ಅಹಮದ್ ಬೆಸೆದಿದ್ದಾರೆ.

ನೀವು ಬಡಿದ ಸುತ್ತಿಗೆಗಳು
ಮೊಳೆಗಳು
ಮಕುಟಕೆ ಹೆಣೆದ ಮುಳ್ಳುಗಳು
ಹಬ್ಬಿಸಿದ ಸುಳ್ಳುಗಳು
ರೋಂ ನಗರದ ಕಿಡಿಯನ್ನೆಬ್ಬಿಸುವ ಕೊಂಬುಗಳು
ಕಾಲರಾಯನ ಗುಜುರಿ ಸೇರಿಲ್ಲ
ದ್ವೇಷವೆ ಮೆರೆಸಿವೆ ಅಷ್ಟೆ,
ಎಲ್ಲ ಕೇಡುಗಳು.

ಎಂದು ಕ್ರಿಸ್ತನನ್ನು ಶಿಲುಬೆಗೇರಿಸಿದವರನ್ನು ಮೂದಲಿಸುವುದರಲ್ಲಿ ಕೇಡು ಅವ್ಯಾಹತವಾಗಿ ನಡೆದು ಬಂದಿರುವುದನ್ನು ಕವಿ ಎಚ್ಚರಿಕೆಯಿಂದ ಹೇಳುತ್ತಾರೆ. ಕ್ರಿಸ್ತ ‘ಶೋಷಿತರ ಕಂಬನಿ ಯೊರಸಿ’ ಶಿಲುಬೆಗೇರಿದ ಎನ್ನುವ ಕವಿಯ ಮಾತು ಇಡೀ ಅವನ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಬೆಳಗಿಸುತ್ತದೆ.

ನಿಸಾರ್ ಅಹಮದ್ ಅವರ ನಿಜವಾದ ಕಾವ್ಯಸಿದ್ದಿಯಿರುವುದು ಭಾಷಾ ಪ್ರಯೋಗದಲ್ಲಿ; ಭಾಷೆಯ ಬಗೆಗಿನ ಅಪಾರವಾದ ಕಾಳಜಿ ಮತ್ತು ಶ್ರದ್ಧಾಪೂರ್ಣ ಗೌರವಗಳ ಅಭಿವ್ಯಕ್ತಿಯಲ್ಲಿ. ಕನ್ನಡ ಭಾಷಾ ಸಂಪತ್ತನ್ನು ವರ್ಧಿಸಬೇಕೆಂಬ ತುಡಿತದಿಂದ ಉರ್ದು, ಅರಬ್ಬೀ, ಫಾರ್ಸಿ, ಇಂಗ್ಲಿಷ್ ಪದಗಳನ್ನು ಬಳಸಿ ತಮ್ಮದೇ ಆದ ಹೆಚ್ಚುಗಾರಿಕೆಯನ್ನು ಮೆರೆದಿದ್ದಾರೆ.

ವಿಷಯ ಎಷ್ಟೇ ಗಹನವಾದದ್ದಾಗಲಿ, ಎಷ್ಟೇ ಸಂಕೇತಪ್ರಾಯದ್ದಾಗಿರಲಿ, ಹೆಚ್ಚು ಜನರಿಗೆ ತಿಳಿಯುವ ಮಾತಿನಲ್ಲಿ ವ್ಯಕ್ತಗೊಳಿಸಬೇಕೆಂಬ ಹಿರಿಯಾಸೆ ಅವರ ಕಾವ್ಯದುದ್ದಕ್ಕೂ ತೋರಿಬಂದಿರುವ ಮುಖ್ಯ ಅಂಶ. ಇದನ್ನು ಇವರು ಸಾಧಿಸಿರುವ ಹಾಗೆ ಇವರ ಜೊತೆಯಲ್ಲಿ ಬರೆಯುತ್ತಿರುವ ಅನೇಕರಿಗೆ ಸಾಧ್ಯವಾಗಿಲ್ಲ ಎಂದರೆ ಅತ್ಯುಕ್ತಿಯಲ್ಲ.

ವ್ಯಕ್ತಿಯಾಗಿ ನಾನು ಕಂಡಂತೆ ನಿಸಾರರು ಸರಳ ಸಜ್ಜನಿಕೆಯ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ. ಬದುಕಿನ ಚೆಲುವು, ಸಂತೋಷಗಳಲ್ಲಿ ನಿಸಾರರಿಗೆ ಗಾಢವಾದ ಆಸಕ್ತಿ ಇದೆ. ಈ ಗುಣ ಅವರ ವ್ಯಕ್ತಿತ್ವದ ಮೂಲಧಾತುವಾಗಿರುವುದರಿಂದ ಅವರ ಕವನಗಳಲ್ಲೂ ಕೂಡ ಈ ಗುಣ ರೂಪಿಸಿರುವ ಮೌಲ್ಯವನ್ನು ಗುರುತಿಸಬಹುದು. ನವೋದಯ, ನವ್ಯ – ಈ ಎರಡೂ ಮಾರ್ಗಗಳಲ್ಲಿ ಸವ್ಯಸಾಚಿಯಂತೆ ಇವರು ಯಶಸ್ವಿಯಾಗಿ ಕೆಲಸವನ್ನು ನಿರ್ವಹಿಸಿದ್ದಾರೆ.

ಶಿವಮೊಗ್ಗದಲ್ಲಿ ಜರುಗಲಿರುವ ೭೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗೂ ಬೆಳೆದು ಬಂದಿರುವ ಕಾವ್ಯ ಪರಂಪರೆಯನ್ನು ಪ್ರತಿನಿಧಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ, ನಿಸಾರರು ಸಮಾಜದ ವ್ಯಕ್ತಿಯಾಗಿ, ಸಾಂಸ್ಕೃತಿಕ ವಕ್ತಾರರಾಗಿ, ಭಾರತೀಯ ಸಂಸ್ಕೃತಿಯ ಸಮರ್ಥ ಪ್ರತಿನಿಧಿಯಾಗಿ ನಮ್ಮೆಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ.