ಸುದೀರ್ಘ ಐತಿಹಾಸಿಕ ಪರಂಪರೆಯುಳ್ಳ ಕನ್ನಡನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಮಹನೀಯರ ಸಂಖ್ಯೆ ಯಥೇಚ್ಛವಾಗಿದೆ. ಚಲನಶೀಲ ಸಮಾಜವು ಇಂತಹ ಮಹನೀಯರಿಂದ ಸದಾಕಾಲ ಪ್ರೇರಣೆ ಪಡೆಯಬೇಕು.

ಹೊಸ ಧರ್ಮಗಳ ಸ್ಥಾಪಕರೆಂದು ಖ್ಯಾತರಾದ ಮಹಾವೀರ, ಗೌತಮಬುದ್ಧ ಅವರುಗಳು ಭಾರತೀಯ ಸಮಾಜದ ಮೇಲೆ ಬೀರಿದ ಪ್ರಭಾವ ಅಗಣಿತವಾದುದು. ಅದೇ ಪರಂಪರೆಗೆ ದಕ್ಷಿಣ ಭಾರತದ ಮೂವರು ಆಚಾರ್ಯರಾದ ಶಂಕರ, ರಾಮಾನುಜ ಮತ್ತು ಮಧ್ವಾ ಚಾರ್ಯರು ಹಾಗೂ ಬಸವಣ್ಣನವರು ಸೇರ್ಪಡೆಯಾಗುತ್ತಾರೆ. ನಮ್ಮ ಯುವ ಜನತೆ ಅವರನ್ನು ಸದಾ ನೆನೆಯುವಂತೆ ಮಾಡಬೇಕಾದುದು ಅತ್ಯಂತ ಅವಶ್ಯಕ.

ಈಗ ಜನ್ಮ ಶತಮಾನೋತ್ಸವಗಳ ಭರಾಟೆ, ರಾಷ್ಟ್ರಕವಿ ಕುವೆಂಪು (ಜನನ: ೧೯೦೪) ಅವರ ಜನ್ಮ ಶತಮಾನೋತ್ಸವವನ್ನು ಸರ್ಕಾರ ಆಚರಿಸಿತಷ್ಟೆ. ಅದೇ ರೀತಿ ಕಡಲ ತೀರ ಭಾರ್ಗವ ಡಾ. ಶಿವರಾಮ ಕಾರಂತ (ಜನನ: ೧೯೦೨) ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಗಿದೆ. ಸರ್ಕಾರ ಶತಮಾನೋತ್ಸವ ಆಚರಣಾ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ತಾನು ಘೋಷಿಸಿದ ವಿಚಾರಗಳನ್ನು ಅನುಷ್ಠಾನ ಮಾಡಿದೆ ಎಂಬುದನ್ನು ಅದು ಆತ್ಮಶೋಧನೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.

ಈ ವರ್ಷ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜನನ: ೧೯೦೨), ಪೊ. ತೀ.ನಂ. ಶ್ರೀಕಂಠಯ್ಯ (ಜನನ: ೧೯೦೬), ಅವರುಗಳ ಜನ್ಮಶತಮಾನೋತ್ಸವ ಬರುತ್ತದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕಾದಂಬರಿಕಾರರಾಗಿ, ಗಾಂಧಿ ವಿಚಾರ ಸಾಹಿತ್ಯದ ಅನುವಾದಕರಾಗಿ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಪ್ರೊ. ತೀ.ನಂ. ಶ್ರೀಕಂಠಯ್ಯ ಅವರು ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ಭಾಷಾ ವಿಜ್ಞಾನಿ, ಕಾವ್ಯ ಮೀಮಾಂಸಕ ಹಾಗೂ ಗ್ರಂಥ ಸಂಪಾದಕ. ಪ್ರೊ. ಡಿ.ಎಲ್. ನರಸಿಂಹಾಚಾರ್ ಅವರು ಪ್ರಕಾಂಡ ವಿದ್ವಾಂಸರು. ಅಶೋಕನ ಶಿಲಾಶಾಸನದಲ್ಲಿ ಇಸಿಲ ಎಂಬ ಕನ್ನಡ ಪದವನ್ನು ಅವರು ಸಂಶೋಧಿಸಿದ ಆಧಾರದಿಂದಾಗಿಯೇ ಇಂದು ನಾವು ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲು ಕೇಂದ್ರ ಸರಕಾರದ ಮುಂದೆ  ಹಕ್ಕೊತ್ತಾಯ ಮಾಡುತ್ತಿದ್ದೇವೆ. ಕನ್ನಡದ ಮೊದಲ ಗದ್ಯಕೃತಿ ವಡ್ಡಾರಾಧನೆ ಹಾಗೂ ಶ್ರೇಷ್ಠ ವ್ಯಾಕರಣ ಕೃತಿ ಶಬ್ದಮಣಿದರ್ಪಣಂ ಕೃತಿಗಳನ್ನು ಅವರು ಮೂಲ ತಾಳೆಗರಿಯಿಂದಲೇ ಪರಿಶೋಧಿಸಿ ನಮಗೆ ಕೊಟ್ಟಿದ್ದಾರೆ. ಗ್ರಂಥ ಸಂಪಾದನೆಯನ್ನು ಎಷ್ಟು ಅಚ್ಚುಕಟ್ಟಾಗಿ ಮಾಡಬೇಕೆಂಬುದಕ್ಕೆ ಅವರ ಕೃತಿಗಳು ಸದಾ ಉದಾಹರಣೆಯಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ-ಕನ್ನಡ ನಿಘಂಟಿಗೆ ಪ್ರೊ. ಡಿ.ಎಲ್. ನರಸಿಂಹಾಚಾರ್ ಅವರ ಕೊಡುಗೆ ಅನನ್ಯವಾಗಿದೆ. ಅವರ ‘ಪಂಪ ಭಾರತ ದೀಪಿಕೆ’ ಕೃತಿಯು ಎಲ್ಲ ವಿದ್ವಾಂಸರಿಗೆ ಮಾರ್ಗದರ್ಶನ ನೀಡುವಂಥದ್ದು.

ಕನ್ನಡ ಸಾಹಿತ್ಯ ಚರಿತ್ರೆಯನ್ನು ವೈಜ್ಞಾನಿಕವಾಗಿ ರಚಿಸಿ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಾ. ರಂ.ಶ್ರೀ. ಮುಗಳಿಯವರು ಮೂಲತಃ ಕವಿಗಳು ಹಾಗೂ ಕಾದಂಬರಿಕಾರರು. ಅವರ ಇತರ ಸಾಹಿತ್ಯ ಕೃತಿಗಳ ಬಗ್ಗೆ ಮೌಲ್ಯಮಾಪನ ನಡೆದೇ ಇಲ್ಲ.

ಶತಮಾನೋತ್ಸವ ಸಂದರ್ಭದಲ್ಲಿ ನಮ್ಮ ಉದ್ದೇಶಗಳು ನಿರ್ದಿಷ್ಟವಾಗಿರಬೇಕು. ಯಾವ ಕವಿ, ಲೇಖಕ ಅಥವಾ ಬರಹಗಾರರನ್ನು ಗುರಿಯಾಗಿಟ್ಟು ಶತಮಾನೋತ್ಸವ ಆಚರಿಸುತ್ತೇ ವೆಂಬುದನ್ನು ಪರ್ಯಾಲೋಚಿಸಿ ನಿರ್ಧರಿಸಬೇಕು. ಸಮರ್ಪಕ ರೀತಿಯಲ್ಲಿ ಕಾರ್ಯಕ್ರಮದ ನೀಲಿ ನಕಾಶೆ ತಯಾರು ಮಾಡಿಕೊಳ್ಳಬೇಕು. ಕುವೆಂಪು, ಕಾರಂತ, ಗೊರೂರು, ತೀ.ನಂ.ಶ್ರೀ., ಡಿ.ಎಲ್.ಎನ್., ರಂ.ಶ್ರೀ. ಮುಗಳಿ ಅವರುಗಳನ್ನು ಕನ್ನಡನಾಡು ಯಾವುದಕ್ಕೆ ಜ್ಞಾಪಿಸಿಕೊಳ್ಳುತ್ತದೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ಕಾರಂತರ ಮೂಕಜ್ಜಿಯ ಕನಸುಗಳು, ಗೊರೂರು ಅವರ ಗರುಡಗಂಬದ ದಾಸಯ್ಯ, ತೀ.ನಂ.ಶ್ರೀ. ಅವರ ಭಾರತೀಯ ಕಾವ್ಯ ಮೀಮಾಂಸೆ, ಡಿ.ಎಲ್.ಎನ್. ಅವರ ಶಬ್ದಮಣಿದರ್ಪಣಂ ಹಾಗೂ ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆ ಗ್ರಂಥಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಮಹಾಕಾವ್ಯ, ಕಾದಂಬರಿ, ಪ್ರಬಂಧ, ಕಾವ್ಯಮೀಮಾಂಸೆ, ವ್ಯಾಕರಣ ಹಾಗೂ ಸಾಹಿತ್ಯ ಚರಿತ್ರೆ ಪ್ರಕಾರಗಳಿಗಾಗಿ ಖ್ಯಾತರಾಗಿದ್ದಾರೆ. ಈ ಮಹನೀಯರನ್ನು ಕುರಿತು ಕಾರ್ಯಕ್ರಮ ನಿರೂಪಿಸುವಾಗ ಈ ವಿಚಾರ ನೆನಪಿನಲ್ಲಿರಬೇಕು. ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸಾಹಿತಿಗಳ ರಾಶಿಗಟ್ಟಲೆ ಪುಸ್ತಕಗಳನ್ನು ಮುದ್ರಿಸಿ ಗೋಡೌನ್‌ಗೆ ತುಂಬಿ ಯಾವಾಗಲೋ ಅದನ್ನು ಅರ್ಧ ಬೆಲೆಗೆ ಮಾರುವುದು, ಆ ಹಿರಿಯರುಗಳಿಗೆ ಗೌರವ ತೋರಿದಂತಿಲ್ಲ. ಕುವೆಂಪು, ಕಾರಂತ, ಮುಗಳಿ ಅವರುಗಳ ಜನ್ಮಶತಮಾನೋತ್ಸವ ವನ್ನು ಒಂದೇ ರೀತಿ ಆಚರಿಸಬೇಕೆಂಬ ನಿಯಮವಲ್ಲ.

ಆಯಾಯ ಕವಿಯ ವೈಶಿಷ್ಟ್ಯಕ್ಕೆ ಅನುಗುಣವಾಗಿ ಕಾರ್ಯಕ್ರಮ ನಿರೂಪಿಸಬಹುದು. ಪ್ರತಿಯೊಂದು ಕವಿಯ ಜನ್ಮ ಶತಮಾನೋತ್ಸವವು ಒಂದೊಂದು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮವು ನಮ್ಮ ಪ್ರಾಚೀನ ಮತ್ತು ಆಧುನಿಕ ಕವಿಗಳ ನೆನಪನ್ನು ನಮ್ಮ ಜನತೆಗೆ ಬರಬೇಕು. ಶತಮಾನೋತ್ಸವಗಳು ಏಕತಾನತೆಗೆ ಬಲಿ ಯಾದರೆ ನಮ್ಮ ಎಲ್ಲಾ ಕವಿಗಳು ಅಮುಖ್ಯರಾಗುತ್ತಾರೆ. ಇದು ಪೂರ್ಣ ಸರ್ಕಾರಿ ಕಾರ್ಯಕ್ರಮವಾದರೂ ಜನತೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಜನತೆಯ ವಿಶ್ವಾಸ ಗಳಿಸಲಾಗದ, ಅವರ ಹೃದಯ ಮುಟ್ಟದ ಕಾರ್ಯಕ್ರಮಗಳಿಂದ ಏನು ಪ್ರಯೋಜನ?

ಈ ಸಾಹಿತ್ಯ ಪುರುಷರ ಜನ್ಮಶತಮಾನೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಬೇಕೇ ಅಥವಾ ಇಡೀ ಕನ್ನಡ ನಾಡು ಅವರನ್ನು ನೆನೆಯಬೇಕೇ ಎಂಬುದು ವಾಸ್ತವಿಕವಾಗಿ ಚರ್ಚೆಗೆ ಒಳಗಾಗಬೇಕಾದ ವಿಚಾರ. ಮಗ ತನ್ನ ಮೃತ ತಂದೆ ತಾಯಿಗೆ ಭೀತಿಯಿಂದಲೋ ಅಥವಾ ಒತ್ತಾಯದಿಂದಲೋ ವರ್ಷಕ್ಕೊಮ್ಮೆ ತಿಥಿ ಮಾಡುತ್ತಾನೆ. ಅಲ್ಲಿ ಪ್ರೀತಿ ಕೆಲವೊಮ್ಮೆ ಗೌಣವಾಗುತ್ತದೆ. ಆದರೆ ಯಾವುದೇ ಧಾರ್ಮಿಕ ಕ್ರಿಯೆಯನ್ನು ಮಾಡದೆ ಪ್ರತಿದಿನ ತನ್ನ ತಂದೆ ತಾಯಿಯನ್ನು ನೆನೆಯುವ ಮಕ್ಕಳೇ ನಿಜವಾದ ಮಾತಾಪಿತೃ  ಭಕ್ತರು. ತಮ್ಮ ಮಾತಾಪಿತೃಗಳ ಹೆಸರನ್ನು ಚಿರಸ್ಥಾಯಿಗೊಳಿಸಲು ಸಮಾಜೋಪಯೋಗಿ ಕೆಲಸ ಮಾಡುವವರು ಶ್ರೇಷ್ಠ ವ್ಯಕ್ತಿಗಳು.

ನಮ್ಮ ಸಂಸ್ಕೃತಿಯ ನಿರ್ಮಾಪಕರಾದ ಸಾಹಿತಿಗಳನ್ನು ನೆನೆಯಲು ಸರ್ಕಾರ ಆರ್ಥಿಕ ಸಹಾಯ ಮಾಡಬೇಕಾದುದು ಅದರ ಕರ್ತವ್ಯವೇನೋ ನಿಜ. ಆದರೆ ಸಂಸ್ಕೃತಿ ಇಲಾಖೆಯ ಜೊತೆಗೆ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ ಹಾಗೂ ಇತರ ಇಲಾಖೆಗಳು ಕೂಡ ಈ ಮಹನೀಯರ ಆಶಯಗಳನ್ನು ಜನತೆಗೆ ಮುಟ್ಟಿಸುವ ಪ್ರಯತ್ನ ಮಾಡುವ ಅವಶ್ಯಕತೆಯಿದೆ. ಭಾಷೆ ಹಾಗೂ ಅದರ ಶ್ರೆಯಸ್ಸಿಗೆ ದುಡಿದ ವ್ಯಕ್ತಿ ಒಂದು ಪ್ರಕಾರಕ್ಕೆ ಸೀಮಿತಗೊಂಡವರಲ್ಲ. ವಾಲ್ಮೀಕಿ, ಕಾಳಿದಾಸ, ಷೇಕ್ಸ್‌ಪಿಯರ್, ಪಂಪ, ಕುವೆಂಪು ಇವರೆಲ್ಲ ಇಡೀ ಜನಾಂಗವನ್ನು ಹಾಗೂ ದೇಶವನ್ನು ಪ್ರತಿನಿಧಿಸುತ್ತಾರೆ. ಅವರ ವಿಚಾರಧಾರೆಗಳು ಸದಾಕಾಲ ಜನಮನವನ್ನು ಆಳುತ್ತವೆ. ಇದೊಂದು ಚಿರಂತನ ಸತ್ಯವೂ ಹೌದು. ಈ ಹಿನ್ನೆಲೆಯಲ್ಲಿ ನಮ್ಮ ಸ್ಥಳೀಯ ಸಂಸ್ಥೆಗಳು ಅಂದರೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಪುರಸಭೆ, ನಗರಸಭೆಗಳು ತಮ್ಮ ಆದ್ಯತಾ ಕಾರ್ಯಕ್ರಮಗಳಲ್ಲಿ ಈ ಮಹಾಪುರುಷರ ಚಿಂತನೆಗಳನ್ನು ಜನತೆಗೆ ಮುಟ್ಟಿಸುವತ್ತ ಚಿಂತನೆ ಮಾಡಬೇಕಾದುದು ಇಂದಿನ ಅಗತ್ಯವಾಗಿದೆ. ತಮಗೆ ತೋಚಿದಂತೆ ಕಾರ್ಯಕ್ರಮ ಮಾಡು ವುದಲ್ಲ. ರಾಜ್ಯಮಟ್ಟದಲ್ಲಿ ಸಮಾಲೋಚಿಸಿ ನಿರ್ಧರಿತವಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರೆ ಸಾಕು. ಸ್ಥಳೀಯ ಜನರ ಸಾಹಿತ್ಯಾಸಕ್ತಿ ಹೆಚ್ಚಳವಾದರೆ ನಮ್ಮ ಶತಮಾನೋತ್ಸವ ಆಚರಣೆಗಳು ಅರ್ಥ ಪೂರ್ಣವಾದಂತೆ ಎಂದು ಭಾವಿಸಬೇಕು.

ನೀವು ಸಂಸ್ಕೃತಿಯನ್ನು ರಕ್ಷಿಸಿದರೆ ಸಂಸ್ಕೃತಿ ನಿಮ್ಮನ್ನು ರಕ್ಷಿಸುತ್ತದೆ. ಸಂಸ್ಕೃತಿ ರಕ್ಷಿತವಾದರೆ ಇಡೀ ದೇಶ ರಕ್ಷಿತವಾಗುತ್ತದೆ ಎಂಬ ಮಾತನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಮಾನವ ಸಂಸ್ಕೃತಿಯನ್ನು ಎತ್ತಿ ಹಿಡಿದ ನಮ್ಮ ಕನ್ನಡ ಸಾಹಿತ್ಯದ ಮಹಾಪುರುಷರನ್ನು ನಾವು ಸದಾಕಾಲ ನೆನೆಯುವ ಮಹತ್ಕಾರ್ಯ ಈಗ ಆಗಬೇಕಾಗಿದೆ.