೧೯೧೦ ರಿಂದ ೧೯೧೭ರವರೆಗೆ ಮೈಸೂರಿನ ದಿವಾನರಾಗಿದ್ದ ಡಾ. ವಿಶ್ವೇಶ್ವರಯ್ಯನವರು ತನ್ನ ಕೌಶಲ್ಯವನ್ನು ರಾಷ್ಟ್ರವಿಡೀ ಪ್ರದರ್ಶಿಸಿದ್ದರು. ಬಾಂಬೆ ವಿಶ್ವವಿದ್ಯಾನಿಲಯ ದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮುಂಬಯಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ೧೮೮೪ ರಂದು ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು. ಅನಂತರ ನಾಸಿಕ್, ಖಾಂದೇಶ್ ಮತ್ತು ಪೂನಾ ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆ ವಿನ್ಯಾಸಗೊಳಿಸಿದರು. ಸೂರತ್ ಪಟ್ಟಣದಲ್ಲಿ ತಪತಿ ನದಿಯಿಂದ ಕುಡಿಯುವ ನೀರನ್ನು ಒದಗಿಸಿದರು. ೧೮೯೯ ರಿಂದ ಪೂನಾ ಜಿಲ್ಲೆಯ ನೀರಾವರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ನೀರಿನ ದುಂದುವ್ಯಯವನ್ನು ತಪ್ಪಿಸುವ ಶಿಸ್ತು ಮತ್ತು ಸಂಯಮದ ನೀತಿಯನ್ನು ರೈತರಲ್ಲಿ ಮೂಡಿಸಿದರು. ಕಡಕ್‌ವಾಸ್ಲಾದಲ್ಲಿ ಸ್ವಯಂಚಾಲಿತ ಗೇಟುಗಳನ್ನು ಅಣೆಕಟ್ಟಿಗೆ ಅಳವಡಿಸಿ ನೀರಾವರಿಗೆ ಹೊಸ ಮನ್ವಂತರವನ್ನು ರಾಷ್ಟ್ರದಲ್ಲೆ ಪ್ರಾರಂಭಿಸಿದರು. ಪೂನಾದಲ್ಲಿ ಸೆನಿಟರಿ ಇಂಜಿನಿಯರ್ ಆಗಿ ಗೋಪಾಲಕೃಷ್ಣ ಗೋಖಲೆ ಅಧ್ಯಕ್ಷತೆಯಲ್ಲಿದ್ದ ಮುನ್ಸಿಪಾಲಿಟಿಗೆ ಕೊಳಚೆ ಒಳಚರಂಡಿಯ ಯೋಜನೆಯನ್ನು ಜಾರಿ ಗೊಳಿಸಿದರು. ಕೊಲ್ಲಾಪುರ, ಬೆಳಗಾಂವ, ಬಿಜಾಪುರ ಮತ್ತು ಧಾರವಾಡ ಪಟ್ಟಣಗಳಿಗೂ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸಿದರು.

ಕೃಷ್ಣರಾಜಸಾಗರದ ಆಣೆಕಟ್ಟನ್ನು ೧೨೪ ಅಡಿ ಎತ್ತರಕ್ಕೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿ ನೀರಾವರಿ ಮನ್ವಂತರಕ್ಕೆ ನಾಂದಿ ಹಾಡಿದರು. ಶಿವನಸಮುದ್ರದ ಹೈಡ್ರೋಇಲೆಕ್ಟ್ರಿಕ್ ಪವರ್ ಸ್ಟೇಶನ್‌ನಲ್ಲಿ ನಿಗದಿತ ಅವಧಿಯಲ್ಲಿ ಜುಲೈ ೧೯೫೧ ರಿಂದ ಪ್ರಾರಂಭವಾಗಿ ರಾಷ್ಟ್ರದ ವಿದ್ಯುತ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ವಹಿಸಿದರು. ಮೈಸೂರು ರಾಜ್ಯ ರಾಷ್ಟ್ರದ ವಿದ್ಯುತ್ ಕ್ಷೇತ್ರದಲ್ಲಿ ಶ್ರೇಷ್ಠ ಮಾನ್ಯತೆಯನ್ನು ಪಡೆಯಿತು.

೧೯೧೨ರಲ್ಲಿ ಮೈಸೂರು ರಾಜ್ಯದ ದಿವಾನರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಶಿಕ್ಷಣ, ಕೈಗಾರಿಕೆ, ವಾಣಿಜ್ಯ, ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯಲ್ಲಿ ಅದ್ಭುತ ಸಾಧನೆ ಮಾಡಿ ಇಡೀ ರಾಜ್ಯದ ಘನತೆಯನ್ನು ಅಭಿವೃದ್ದಿಯ ಹೆದ್ದಾರಿಯಲ್ಲಿ ತೊಡಗಿಸಿದರು.

ಹಲವು ಪ್ರಥಮಗಳನ್ನು ತನ್ನ ಆಡಳಿತೆಯಲ್ಲಿ ಸಾಧಿಸಿದ ಹೆಗ್ಗಳಿಕೆ ವಿಶ್ವೇಶ್ವರಯ್ಯ ನವರದು. ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಬೇರ್ಪಡಿಸಿದ್ದು ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆ, ಮುನ್ಸಿಪಾಲಿಟಿ ಮತ್ತು ಜಿಲ್ಲಾ ಬೋರ್ಡ್‌ಗಳ ಸಂವಿಧಾನ ಅಥವಾ ಕಾರ್ಯಗಳನ್ನು ಬದಲಾಯಿಸಿ ಅಧಿಕಾರೇತರ ಪ್ರತಿನಿಧಿಗಳನ್ನು ಸಕ್ರಿಯವಾಗಿ ತೊಡಗಿಸಿದರು. ಸರ್ಕಾರಿ ಕೆಲಸದಲ್ಲಿ ಶಿಸ್ತು, ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ Efficiency Auditನ್ನು ನಿರೂಪಿಸಿದರು. ಅಲ್ಲದೆ ಆಡಳಿತ ವ್ಯವಸ್ಥೆಯ ಹೊಸ ಪರಿಕ್ರಮಣವನ್ನು ಪ್ರಾರಂಭಮಾಡಿ ಅದಕ್ಕೆ ಬೇಕಾದ ಆಡಳಿತ ಸೂತ್ರಗಳನ್ನು ಕೂಡ ರೂಪಿಸಿದರು. ಆರ್ಥಿಕ ಪರಿಷತ್ತನ್ನು ಪ್ರಾರಂಭ ಮಾಡಿ ಅವುಗಳ ಮೂಲಕ ಕೈಗಾರಿಕಾ ಮತ್ತು ವಾಣಿಜ್ಯ, ಶಿಕ್ಷಣ ಮತ್ತು ಕೃಷಿಗೆ ಸಂಬಂಧಪಟ್ಟ ಮೂರು ಸಮಿತಿಗಳನ್ನು ಕೂಡ ರಚನೆ ಮಾಡಿ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯನ್ನು ದೃಢಪಡಿಸಿದರು. ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಅಕಾಡೆಮಿ, ಮೈಸೂರು ವಿಶ್ವವಿದ್ಯಾನಿಲಯ, ಕೃಷಿ ಶಾಲೆ, ಮೆಕಾನಿಕಲ್ ಇಂಜಿನಿಯರಿಂಗ್ ಶಾಲೆ, ಕೈಗಾರಿಕಾ ಶಾಲೆ, ಬೆಂಗಳೂರು ಇಂಜಿನಿಯರಿಂಗ್ ಕಾಲೇಜು, ಮೈಸೂರಿನಲ್ಲಿ ಮಹಾರಾಣಿ ಕಾಲೇಜು, ಸೆಂಟ್ರಲ್ ಜಿಲ್ಲಾ ವರ್ಕ್ಸ್‌ಶಾಪ್, ಸೆಂಚುರಿ ಕ್ಲಬ್, ನಂದಿಯಲ್ಲಿ ಹಿಲ್ಸ್‌ಸ್ಟೇಶನ್, ಮೈಸೂರು ಕಬ್ಬಿಣ, ಸಾಬೂನು ಕಾರ್ಖಾನೆ ಇವೆಲ್ಲ ಅವರ ಸಾಧನೆಯ ಹೆಗ್ಗುರುತುಗಳು. ಮೈಸೂರಿನ ರೈಲ್ವೆ ಇಲಾಖೆಗೆ ಕೂಡ ಪುನಶ್ಚೇತನ ನೀಡಿದರು. ಅವರ ಆಡಳಿತೆಯಲ್ಲಿ ರಾಜಸ್ವ ಹೆಚ್ಚಳ ಅವರ ಹಣಕಾಸಿನ ನಿರ್ವಹಣೆಯ ಚಾಣಾಕ್ಷತೆಗೆ ಕಳಶಪ್ರಾಯ. ಮೈಸೂರು ರಾಜ್ಯದ ಪ್ರಗತಿಯ ಜೊತೆಯಲ್ಲಿ ರಾಷ್ಟ್ರದ ಆರ್ಥಿಕ ಮತ್ತು ಪ್ರಗತಿಯ ಧ್ರುವತಾರೆಯಾಗಿ ಮೆರೆದರು. ೧೯೨೩ರಲ್ಲಿ ಭಾರತ ವಿಜ್ಞಾನ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಸಂಶೋಧನೆಗೆ ಚಾಲನೆ ನೀಡಿದ್ದು ಮಾತ್ರವಲ್ಲದೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರಗತಿಗೆ ಪ್ರದಾನ ಸಂಚಾಲಕರಾದರು ಮತ್ತು ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿಯ ನಿರ್ದೇಶಕರಾಗಿ ೧೯೨೭ ರಿಂದ ೧೯೫೫ರವರೆಗೆ ಕಾರ್ಯನಿರ್ವಹಿಸಿದರು.

ಭಾರತದ ಯೋಜನಾ ಪ್ರಯೋಗಗಳ ಮೂಲಸ್ಫೂರ್ತಿಯಾಗಿದ್ದು ಮಾತ್ರವಲ್ಲದೆ ಭಾರತದ ಆರ್ಥಿಕ ಪುನಶ್ಚೇತನದ ಬಗ್ಗೆ ಅನೇಕ ಗ್ರಂಥಗಳನ್ನು ರಚಿಸಿದರು. ಅವರ ಮುಖ್ಯ ವಾದ ಘೋಷಣೆ “ಸಂಶೋಧಿಸು, ಕಲಿ ಮತ್ತು ಸಂಘಟಿಸು”. ಬಹುಶಃ ಮುಂದಿನ ರಾಷ್ಟ್ರ ನಾಯಕರು ವಿಶ್ವೇಶ್ವರಯ್ಯನವರ ದಾರ್ಶನಿಕ ಘೋಷಣೆಯ ಕೊಂಡಿಯನ್ನು ಹಿಡಿದು ರಾಷ್ಟ್ರದ ಪ್ರಗತಿಯ ರಥವನ್ನು ಮುನ್ನಡೆಸಿದ ರೀತಿ ಸ್ಮರಣೀಯ.

ಮೈಸೂರು ರಾಜ್ಯದ ಕೃಷಿ, ರೇಷ್ಮೆ ಕೃಷಿ ಮತ್ತು ತೋಟಗಾರಿಕೆಯ ಅಭಿವೃದ್ದಿಯಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಪ್ರಧಾನವಾಗಿತ್ತು. ಇಡೀ ರಾಜ್ಯದ ಕೈಗಾರಿಕೆಯ ಉತ್ತೇಜನಕ್ಕೆ ವ್ಯಾಪಕವಾದ ಸಮೀಕ್ಷೆಯನ್ನು ನಡೆಸಿ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಸಂಚಾಲನೆಯನ್ನು ನೀಡಿದರು. ಇಂದು ಜಾಗತಿಕವಾಗಿ ಯೋಚನೆ ಮಾಡುವ ಕಾಲದಲ್ಲಿ ವಿಶ್ವೇಶ್ವರಯ್ಯನವರ ಜಾಗತಿಕ ಮನೋಭೂಮಿಕೆ ಉಲ್ಲೇಖನೀಯ. ಮೈಸೂರು ರಾಜ್ಯವನ್ನು ಅವರು ಬ್ರಿಟಿಷ್ ವಸಾಹತುಶಾಹಿ ರಾಷ್ಟ್ರಗಳಾದ ಕೆನಡ ಮತ್ತು ಆಸ್ಟ್ರೇಲಿಯಕ್ಕೆ ಹೋಲಿಸಿ ರಾಜ್ಯವನ್ನು ಆರ್ಥಿಕ ವಾಗಿ ಉನ್ನತ ಸ್ತರಕ್ಕೇರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಅಂದು ಲಾರ್ಡ್ ಡೆನ್‌ಮಾನ್, ಆಸ್ಟ್ರೇಲಿಯಾದ ಗವರ್ನರ್ ಜನರಲ್‌ರವರು ಉಲ್ಲೇಖಿಸಿದಂತೆ ‘ಐದು ಲಕ್ಷ ಜನಸಂಖ್ಯೆಯಿರುವ ರಾಜ್ಯವೊಂದು ಜಗತ್ತಿನಲ್ಲಿ ಆಸ್ಟ್ರೇಲಿಯದಷ್ಟು ಸಂಪದ್ಭರಿತ ವಾಗಲು ಸಾಧ್ಯವೇ?’ ಇನ್ನು ಮುಂದೆ ಹೋಗಿ “ಮೈಸೂರು ರಾಜ್ಯದ ಪ್ರಗತಿ ಮತ್ತು ಸಂಪನ್ನತೆ ವಿಸ್ಮಯಕರ” ಎಂದು ಉದ್ಗಾರಗೈದರು. ಇಂದು ಮುಂದಿನ ಕರ್ನಾಟಕದ ಬೆಳವಣಿಗೆಗೆ ವಿಶ್ವೇಶ್ವರಯ್ಯನವರ ಅದ್ಭುತ ಸಾಧನೆ, ಒಂದು ಸವಾಲೇ ಸರಿ!

ವಿಶ್ವೇಶ್ವರಯ್ಯನವರು ಸಂಪನ್ಮೂಲ ಮತ್ತು ಅವಕಾಶಗಳ ಅಪವ್ಯಯದ ವಿಚಾರದಲ್ಲಿ ನೀಡಿದ ವ್ಯಾಖ್ಯಾನ ಮತ್ತು ಸದುಪಯೋಗದ ಬಗ್ಗೆ ಮಾಡಿದ ಮಾರ್ಗದರ್ಶನ ಇಂದಿಗೂ ಪ್ರಸಕ್ತ. ನಿರಕ್ಷರತೆ, ಅನಾರೋಗ್ಯದಿಂದಾಗುವ ಅಪಾರ ಸಂಪನ್ಮೂಲ ನಷ್ಟದ ಬಗ್ಗೆ ವಿಶೇಷವಾದ ಕಳವಳ ಅವರಿಗಿತ್ತು. ಜಾತೀಯ ಕಲಹ ಮತ್ತು ಗ್ರಾಮ-ಗ್ರಾಮದ ಕಲಹದಿಂದ ಆಗುತ್ತಿರುವ ಮಾನವೀಯ ಸಂಪನ್ಮೂಲದ ಅಪವ್ಯಯ, ದುರಾಸೆಯಿಂದ ಮಾಡುತ್ತಿರುವ ಅಕ್ರಮ ದಾಸ್ತಾನು ಮತ್ತು ಕಳ್ಳ ವ್ಯಾಪಾರದ ಬಗ್ಗೆ ಅವರಲ್ಲಿ ವಿಶೇಷವಾದ ರೋಷವಿತ್ತು. ಪರಸ್ಪರ ಸೌಹಾರ್ದತೆಯಿರುವ ಸಮಾಜದಲ್ಲಿ ಉಂಟಾಗುವ ಕ್ಲೇಷ-ಕ್ಷೋಭೆ ಮತ್ತು ಪರಸ್ಪರ ಭಿನ್ನಾಭಿಪ್ರಾಯ ದೇಶದ ಬೆಳವಣಿಗೆಗೆ ಕುಂಠಿತವಾಗುತ್ತಿರುವ ಬಗ್ಗೆ ಚಿಂತನೆ ನಡೆಸಿದ್ದರು. ಅವರು ಮಾನವೀಯ ಮತ್ತು ಭೌತಿಕವಾಗಿ ಆಗುತ್ತಿರುವ ಅಪವ್ಯಯದ ವಿರುದ್ಧ ಸಮರವನ್ನೇ ಸಾರಿದರು. ಇಂತಹ ಸೈದ್ಧಾಂತಿಕ ಭದ್ರ ಬುನಾದಿಯ ಮೇಲೆ ರಾಷ್ಟ್ರವನ್ನು ಕಟ್ಟುವ ಕನಸು ಅವರದ್ದಾಗಿತ್ತು.

ಹಲವು ಸಂಪ್ರದಾಯ, ಮನಃಕ್ಲೇಷ ಮತ್ತು ಪ್ರಗತಿಗೆ ಕುಂಠಿತವಾದ ಮೂಢ ನಂಬಿಕೆಗಳ ಬಗ್ಗೆ ವಿಶೇಷವಾದ ಪ್ರತಿಭಟನೆಯ ಮನೋಭೂಮಿಕೆಯನ್ನು ವಿಶ್ವೇಶ್ವರಯ್ಯನವರು ಬೆಳೆಸಿಕೊಂಡಿದ್ದರು. ಜನರ ಮನಸ್ಸಿನಲ್ಲಿ ಆರ್ಥಿಕ ಪ್ರಗತಿಯ ಬಗ್ಗೆ ವಾಸ್ತವಿಕ ಮತ್ತು ಸೈದ್ಧಾಂತಿಕವಾದ ಚಿಂತನೆ. ಮೂಡಿಸಿದುದು ಕೃಷಿ ಮತ್ತು ಇನ್ನಿತರ ಆರ್ಥಿಕ ಚಟುವಟಿಕೆ, ಕೃಷಿ ಮತ್ತು ಕೈಗಾರಿಕೆಗಳಲ್ಲಿ ಮಾನವೀಯ ಕೌಶಲ್ಯ ತನ್ಮೂಲಕ ಉತ್ಕೃಷ್ಟ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಕಟ್ಟಬೇಕೆಂಬ ಮುಂದಾಲೋಚನೆಯಿಂದ ಅವರ ಮನಸ್ಸು ಸಂಪನ್ನ ವಾಗಿತ್ತು. ಅಭಿವೃದ್ದಿ ಹೊಂದಿದ ರಾಷ್ಟ್ರಗಳಂತೆ ಭಾರತ ಕೂಡಾ ಪ್ರಗತಿ ಮತ್ತು ಸಂಶೋಧನೆಯ ಹಾದಿಯಲ್ಲಿ ನಡೆದಾಗ ಪರಿವರ್ತನಶೀಲವಾಗಿ ವಿಧಿ ಬರಹವನ್ನು ತೊಡೆದು ಆರ್ಥಿಕ ತಳಹದಿಯಲ್ಲಿ ಮಾತ್ರ ಮಾನವನ ಮುಕ್ತಿ ಸಾಧ್ಯವೆಂಬುದರ ಬಗ್ಗೆ ಬಲವಾದ ಅಭಿಪ್ರಾಯ ಅವರಲ್ಲಿ ಮೂಡಿತ್ತು. ಆರ್ಥಿಕ ಮತ್ತು ಸಾಮಾಜಿಕ ಬಿಡುಗಡೆಯ ಹರಿಕಾರರಾಗಿ ಧಾರ್ಮಿಕ ಮೋಕ್ಷಕ್ಕಿಂತಲೂ ಆರ್ಥಿಕ ಮೋಕ್ಷದ ಬಗ್ಗೆ ಚಿಂತನೆಯನ್ನು ನಡೆಸಿದ ಒಬ್ಬ ಆರ್ಥಿಕ ಪ್ರವಾದಿಯಾಗಿದ್ದರು. ಆದುದರಿಂದ ವಿಶ್ವೇಶ್ವರಯ್ಯನವರ ಸರ್ವ ಚಿಂತನೆ ಅಂದು-ಇಂದು-ಮುಂದಿನ ಹಸಿರು ನಿಶಾನೆಯಾಗಿ ಸದಾ ಚಿರಂತನವಾಗಿರುತ್ತದೆ.