ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮ (UNDP)ದ ೨೦೦೫ರ ಪ್ರಕಾರ ಮಾನವ ಸಂಪನ್ಮೂಲ ವರದಿಯಲ್ಲಿ ಭಾರತಕ್ಕೆ ಮಾನವ ಸಂಪನ್ಮೂಲ ಅಭಿವೃದ್ದಿಯಲ್ಲಿ ೧೭೭ ರಾಷ್ಟ್ರಗಳಲ್ಲಿ ೧೨೭ನೇ ರ‍್ಯಾಂಕ್‌ನ್ನು ನೀಡಿ ಚಕಿತಗೊಳಿಸಿದೆ. ಭಾರತೀಯ ಮಾನವ ಸಂಪನ್ಮೂಲ ಮೌಲ್ಯವನ್ನು ೦.೬೦೨ ಎಂದು ಪರಿಗಣಿಸಿ ಮಧ್ಯಮ ಮಾನವ ಸಂಪನ್ಮೂಲ ರಾಷ್ಟ್ರಗಳ ಶ್ರೇಣಿಗೆ ಭಾರತವನ್ನು ಸೇರಿಸಿದೆ. ಈ ವರ್ಗೀಕರಣ ೧೯೯೦ರಿಂದ ನಮ್ಮ ಪಾಲಾಗಿರುವುದು ದುರ್ದೈವವೇ ಸರಿ. ಸಬ್ ಸಹರನ್ ಆಫ್ರಿಕಾ ಮತ್ತು ಏಶಿಯಾ ಖಂಡದ ಅನೇಕ ಹಿಂದುಳಿದ ಅಥವಾ ಅಭಿವೃದ್ದಿಶೀಲ ರಾಷ್ಟ್ರಗಳು ಉನ್ನತೀಕರಣ ಹೊಂದುತ್ತಿರುವಾಗ ಭಾರತ ಇನ್ನೂ ತಳಮಟ್ಟದಲ್ಲಿಯೇ ಸಿಲುಕಿ ತೊಳಲಾಡುತ್ತಿರುವುದು ಅಪಮಾನದ ಸಂಗತಿ. ಬಾಂಗ್ಲಾದೇಶ ಕೂಡ ಉನ್ನತ ಸೂಚ್ಯಂಕ ಶ್ರೇಣಿಗೆ ಏರುತ್ತಿದೆ. ಚೀನಾದ ಮಾನವ ಸಂಪನ್ಮೂಲ ಮೌಲ್ಯ ೦.೭೫೫. ೨೦೦೫ರ ವರದಿ ಪ್ರಕಾರ ವಯಸ್ಕರ ಸಾಕ್ಷರತೆ ಶೇಕಡಾ ೬೧, ಯುವಕರ ಸಾಕ್ಷರತೆ ಶೇಕಡಾ ೭೬.೪, ಶಾಲಾ ಸೇರ್ಪಡೆ ಶೇಕಡಾ ೬೦. ವರದಿಯೊಂದರ ಪ್ರಕಾರ ಒಂದು ಡಾಲರ್‌ಗಿಂತ ಕಡಿಮೆ ದಿನದ ಸಂಪಾದನೆಯ ಜನಸಂಖ್ಯೆಯ ಪ್ರಮಾಣ ಶೇಕಡಾ ೩೪.೭, ಅಥವಾ ರಾಷ್ಟ್ರೀಯ ಬಡತನದ ರೇಖೆಯೊಳಗಿರುವ ಜನಸಂಖ್ಯೆಯ ಪ್ರಮಾಣ ಶೇಕಡಾ ೨೮.೬. ದೇಶದ ಮಾನವ ಸಂಪನ್ಮೂಲವನ್ನು  ಹಿಂದೆ ತಳ್ಳುತ್ತಿರುವ ಪ್ರಮುಖವಾದ ಪಿಡುಗು ಆರೋಗ್ಯ ಸೂಚ್ಯಂಕ. ಶಿಕ್ಷಣ, ಆದಾಯ ಮತ್ತು ಬಡತನದ ಪ್ರಮಾಣದಲ್ಲೂ ಸರಿತೂಗಿಸಲಾಗಲಿಲ್ಲ. ಎಳೆ ಶಿಶುಗಳ ಮರಣದ ಸೂಚ್ಯಂಕ (೧೦%) ೧೯೭೦ರಲ್ಲಿ ೧೨೭, ಬಾಂಗ್ಲಾದೇಶದಲ್ಲಿ ೧೪೫. ಆದರೆ ೨೦೦೩ರಲ್ಲಿ ಈ ಪ್ರಮಾಣ ಭಾರತದಲ್ಲಿ ೬೩ಕ್ಕೆ ಇಳಿದರೆ, ಬಾಂಗ್ಲಾದೇಶದಲ್ಲಿ ೪೬ಕ್ಕೆ ಗಣನೀಯವಾಗಿ ಇಳಿಮುಖವಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳ ಮರಣದ ಸೂಚ್ಯಂಕದಲ್ಲಿಯೂ ಪರಿವರ್ತನೆಯಿಲ್ಲ. ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮ (UNDP)ದ ಪ್ರಕಾರ ೧೯೯೦ರಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ರಾಷ್ಟ್ರೀಯ ವರಮಾನದ (GDP) ಶೇಕಡಾ ೧.೩ರಷ್ಟು ಖರ್ಚು ಮಾಡಿದ್ದರೆ ಅದೇ ಪ್ರಮಾಣ ಇಂದಿಗೂ ಮುಂದುವರಿದುದು ಶೋಚನೀಯ! ಶಿಕ್ಷಣಕ್ಕೆ ೧೯೯೦ರಲ್ಲಿ ರಾಷ್ಟ್ರೀಯ ವರಮಾನದ ಶೇ. ೩.೭ರಷ್ಟು ಖರ್ಚಾಗಿದ್ದರೆ ಇಂದು ಶೇ. ೪.೧ರಷ್ಟು ವಿನಿಯೋಗವಾಗುತ್ತಿದೆ. ಯು.ಪಿ.ಎ. ಸರಕಾರ ತನ್ನ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ವಾಗ್ದಾನದ ಪ್ರಕಾರ ಶಿಕ್ಷಣಕ್ಕೆ ಶೇಕಡಾ ೬ ಮತ್ತು ಆರೋಗ್ಯ ಬಾಬ್ತಿಗೆ ಶೇಕಡಾ ೨ ರಿಂದ ೩ರವರೆಗೆ ವಿನಿಯೋಗ ಮಾಡಲಿದೆ. ಇದೇ ಪ್ರಕಾರ ರಕ್ಷಣಾ ವೆಚ್ಚ ರಾಷ್ಟ್ರೀಯ ವರಮಾನದ ಶೇ. ೨.೭ ರಿಂದ ಶೇ. ೨.೧ಕ್ಕೆ ಇಳಿಮುಖವಾಗಿವೆ.

ಆರ್ಥಿಕ ಉದಾರೀಕರಣ ಮತ್ತು ವ್ಯಾಪಾರದ ಜಾಗತೀಕರಣ ಬಡತನದ ರೇಖೆಯೊಳ ಗಿರುವ ಜನರನ್ನು ಮೇಲಕ್ಕೆತ್ತಲು ಎಷ್ಟು ಸಹಕಾರಿಯಾಗಬಲ್ಲುದು? ಜಾಗತೀಕರಣದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರೀ ಕ್ಷೇತ್ರದ ದುರುಪಯೋಗ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳ ಏಕಮುಖಿ ಉದಾರೀಕರಣ ಮೂರನೇ ಜಗತ್ತಿನ ಸಾಮಾನ್ಯ ಜನತೆಯನ್ನು ಅತ್ಯಂತ ಅಸಹಾಯಕ ಪರಿಸ್ಥಿತಿಗೆ ದಬ್ಬಿದೆ. ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಬಡಜನತೆ ಸಹ ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ. ೨೦೦೫ರ UNDP ವರದಿ ಪ್ರಕಾರ ಶ್ರೀಮಂತ ರಾಷ್ಟ್ರಗಳಲ್ಲಿ “ಎರಡು ಶ್ರೀಮಂತ ರಾಷ್ಟ್ರಗಳಾದ ಮೆಕ್ಸಿಕೊ ಮತ್ತು ಅಮೆರಿಕಾದಲ್ಲಿ ಬಡ ಮಕ್ಕಳ ಸಂಖ್ಯೆ ಶೇ. ೨೦ರಷ್ಟು ಹೆಚ್ಚಿದೆ” ೧೯೯೦ರ ಅಂತ್ಯಕ್ಕೆ ಇಂಗ್ಲೆಂಡಿನ ಬಡಮಕ್ಕಳ ಸ್ಥಿತಿ ಅತ್ಯಂತ ಭೀಕರ ಹಂತವನ್ನು ತಲುಪಿತ್ತು. ಇತ್ತೀಚಿನ ಇಂಗ್ಲೆಂಡಿನ ಬಡಮಕ್ಕಳ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ, “ಕಾರ್ಮಿಕ ಮಾರುಕಟ್ಟೆಯ ಬೆಳವಣಿಗೆ, ಮೇಲ್‌ಸ್ತರದ ಸಮುದಾಯದ ಐಶ್ವರ್ಯ ಕೇಂದ್ರೀಕರಣದಿಂದ ಇಂತಹ ಮಕ್ಕಳ ದಾರುಣಸ್ಥಿತಿ ಹೆಚ್ಚು ಬದಲಾಯಿಸಲಾಗಿಲ್ಲ” ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಇಂಗ್ಲೆಂಡ್ ಮಕ್ಕಳ ಬಡತನದ ಪ್ರಮಾಣ ಏಕಪಾಲಕ ಅವಲಂಬನೆ (single parent families) ಮತ್ತು ಎರಡು ಪಾಲಕರ ನಿರುದ್ಯೋಗದಿಂದ ಮತ್ತಷ್ಟು ಉಲ್ಪಣಗೊಂಡಿದೆ. ಒಟ್ಟಿನಲ್ಲಿ ವರದಿಯ ಪ್ರಕಾರ “ಇಂಗ್ಲೆಂಡ್‌ನ ಅತ್ಯಂತ ಬಡತನದಲ್ಲಿರುವ ಶೇಕಡಾ ೨೦ರಷ್ಟು ಜನಸಂಖ್ಯೆಯ ಆದಾಯ ಝೆಕ್ ರಿಪಬ್ಲಿಕ್‌ನ ಶೇ. ೨೦ರಷ್ಟು ಪ್ರಮಾಣದಲ್ಲಿದೆ. ಆದುದರಿಂದ ಮುಂದು ವರಿದ ಅಥವಾ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಬಡತನ – ಶ್ರೀಮಂತರ ಮಧ್ಯೆಯಿರುವ ಕಂದಕದ ಭಯಾನಕ ಚಿತ್ರವನ್ನು ಬಿಂಬಿಸುತ್ತದೆ. ವಿಶ್ವಸಂಸ್ಥೆ ಮಕ್ಕಳ ನಿಧಿ (UNIEF) ಕೂಡಾ ಈ ಚಿತ್ರಣಕ್ಕೆ ಸಹಮತವನ್ನು ನೀಡುವುದರ ಜತೆಯಲ್ಲಿ ೨೪ ಶ್ರೀಮಂತ ರಾಷ್ಟ್ರಗಳ ಪೈಕಿ ೧೭ ರಾಷ್ಟ್ರಗಳಲ್ಲಿ ೧೯೯೦ರಲ್ಲಿ ಬಡಮಕ್ಕಳ ಪ್ರಮಾಣ ಏರುಮುಖವಾಗಿತ್ತು. ಬಡ ಮಕ್ಕಳ ಪ್ರಮಾಣವನ್ನು ಆಯಾಯ ರಾಷ್ಟ್ರದ ಒಟ್ಟು ರಾಷ್ಟ್ರೀಯ ಸರಾಸರಿಯ ಶೇಕಡಾ ೫೦ಕ್ಕಿಂತ ಕಡಿಮೆ ವರಮಾನದ ಕುಟುಂಬಗಳ ಮಾನದಂಡದಿಂದ ಗುರುತಿಸಲಾಗಿದೆ. ಈ ಮಾನದಂಡದ ಪ್ರಕಾರ ಜಗತ್ತಿನ ಶ್ರೀಮಂತ ರಾಷ್ಟ್ರಗಳ ೪೦-೫೦ ಮಿಲಿಯ ಮಕ್ಕಳು ಬಡತನದ ಕಕ್ಷೆಯಲ್ಲಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅಮೆರಿಕಾ ದೇಶದ ವಿನಿಯೋಗ ಗರಿಷ್ಠಮಟ್ಟದ್ದು. ಉಳಿದ ಶ್ರೀಮಂತ ರಾಷ್ಟ್ರಗಳಿಗಿಂತ (OCFC) ಎರಡು ಪಟ್ಟು ಹೆಚ್ಚು ವಿನಿಯೋಗ ಮಾಡಲಾಗುತ್ತದೆ. ಆದರೂ ಅಮೆರಿಕಾದ ಆರೋಗ್ಯ ಸೂಚ್ಯಂಕವನ್ನು ಅದರ ರಾಷ್ಟ್ರೀಯ ವರಮಾನಕ್ಕೆ ಹೋಲಿಸಿದಾಗ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲ ಎನ್ನಬಹುದು. ಮಲೇಷ್ಯಾದ ರಾಷ್ಟ್ರೀಯ ವರಮಾನ ಅಮೆರಿಕಾದ ೧/೪ ಅಂಶವಾದರೂ ಮಕ್ಕಳ ಮರಣದ ಪ್ರಮಾಣ ಸರಿಸಮಾನವಾಗಿದೆ.

ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮ (UNDP)ದ ವರದಿಯ ಪ್ರಕಾರ “ಅಸಮಾನ ಆರೋಗ್ಯ ಸವಲತ್ತುಗಳ ಬಳಕೆ ಜನಾಂಗ ಭೇದಗಳ ಪ್ರತಿಫಲನವಾಗಿದೆ. ಅಸಮಾನತೆಗಳನ್ನು ವಿಶ್ಲೇಷಿಸಿದಾಗ ಇದು ಸ್ಪಷ್ಟವಾಗುತ್ತದೆ. ಅಧ್ಯಯನವೊಂದರ ಆಧಾರದ ಮೇಲೆ ಆಫ್ರಿಕ-ಅಮೆರಿಕದವರು (ನಿಗ್ರೋ) ಮತ್ತು ಬಿಳಿ ಅಮೆರಿಕನ್ನರ ಆರೋಗ್ಯ ಸೌಲಭ್ಯಗಳ ಅಂತರವನ್ನು ಹೋಗಲಾಡಿಸಿದಾಗ ಸುಮಾರು ೮೫,೦೦೦ ಜೀವಗಳನ್ನು ಪ್ರತಿವರ್ಷ ಉಳಿಸಲು ಅಮೆರಿಕ ದಲ್ಲಿ ಸಾಧ್ಯವಾಗುತ್ತದೆ. ಅಮೆರಿಕದ ನ್ಯೂವೊರ್ಲಿಯನ್ಸ್‌ಲ್ಲಿ ನಡೆದ ಕತ್ರಿನಾ ಅನಾಹುತದ ಅನಂತರ ನಡೆದ ಭೀಕರ ದುರ್ಘಟನೆಗಳನ್ನು ಮತ್ತು ಅಮೆರಿಕಾ ಸರ್ಕಾರ ಅದನ್ನು ನಿಭಾಯಿಸಲು ಪಟ್ಟ ಬವಣೆ ಗಮನಿಸಿದಾಗ ಅವರ ಅಸಮಾನತೆಯ ದೈತ್ಯ ಸ್ವರೂಪವನ್ನು ಪರಿಚಯ ಮಾಡಿಕೊಂಡಂತಾಗುತ್ತದೆ. ಐಶ್ವರ್ಯದ ಸುಪ್ಪತ್ತಿಗೆಯ ಕೆಳಗೆ ಭೀಕರ ಸುರಂಗ ಜ್ವಾಲಾಮುಖಿಯು ಅಗ್ನಿಯನ್ನು ಹೊರಸೂಸುತ್ತಿದೆ!