ಇತ್ತಿಚೆಗೆ ಸಂಸತ್‌ನಲ್ಲಿ ಮಂಜೂರಾದ ಗ್ರಾಮೀಣ ಖಾತರಿ ಯೋಜನೆಯು ರಾಷ್ಟ್ರದಲ್ಲಿ ಒಂದು ಹೊಸ ಆಯಾಮವನ್ನು ತೆರೆಯಲಿದೆ. ಈ ಯೋಜನೆ ಅಕ್ಟೋಬರ್ ೨, ೨೦೦೫ ಮಹಾತ್ಮಾಗಾಂಧಿಯವರ ಅಥವಾ ಜವಾಹರಲಾಲ್ ನೆಹರೂರವರ ಹುಟ್ಟು ಹಬ್ಬದಂದು ಅನುಷ್ಠಾನವಾಗುವ ಸಂಭವವಿದೆ. ಈ ಯೋಜನೆಯ ಶೇ. ೫೦ ಪಾಲು ಲಾಭವನ್ನು ಮಹಿಳೆಯರಿಗಾಗಿ ಮೀಸಲಾಗಿರುವ ಪ್ರಸ್ತಾವವಿದೆ. ನೂರು ದಿವಸಗಳ ಉದ್ಯೋಗ ಖಾತರಿ ಯೋಜನೆ ರಾಷ್ಟ್ರದ ೨೦೦ ಜಿಲ್ಲೆಗಳಲ್ಲಿ ಈ ವರ್ಷ ಜಾರಿಗೆ ಬರಲಿದ್ದು ಡಿಸೆಂಬರ್ ೨೦೦೫ – ಮಾರ್ಚ್ ೨೦೦೬ರವರೆಗೆ ಅಂದರೆ ನಾಲ್ಕು ತಿಂಗಳ ಅವಧಿಗೆ ೪ ಸಾವಿರ ಕೋಟಿ ರೂ.ಗಳು ಬೇಕಾಗುತ್ತದೆ. ಈ ಯೋಜನೆ ರಾಷ್ಟ್ರದ ೬೦೦ ಜಿಲ್ಲೆಗಳಿಗೆ ಅನ್ವಯಿಸಿದಾಗ ಸುಮಾರು ೫೦,೦೦೦ ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ರಾಷ್ಟ್ರದ ರಕ್ಷಣಾ ಸಚಿವರಾದ ಪ್ರಣಬ್‌ಕುಮಾರ್ ಮುಖರ್ಜಿಯವರ ನೇತೃತ್ವದ ಸಮಿತಿ ೧೫೦ ಮಿಲಿಯ ಕುಟುಂಬಕ್ಕೆ ಅನ್ವಯಿಸಿದಾಗ ೧.೫೦ ಕೋಟಿ ರೂ. ಬೇಕಾಗ ಬಹುದೆಂಬ ಅಭಿಪ್ರಾಯ ನೀಡಿರುತ್ತಾರೆ. ೪೦ ಮಿಲಿಯ ಬಡತನದ ರೇಖೆಯ ಒಳಗಿರುವ ಜನರಿಗೆ ಅನ್ವಯಿಸಿದರೆ ವರ್ಷಕ್ಕೆ ೪೦,೦೦೦ ಕೋಟಿ ರೂ. ಬೇಕಾಗುತ್ತದೆ. ಬಹುಶಃ ರಕ್ಷಣಾ ವೆಚ್ಚದ ಶೇ. ೧೦-೧೫ರಷ್ಟು ಅನುದಾನ ಕಡಿತ ಮಾಡಿದಾಗ ಅನೇಕ ವಿವಿಧ ಅನಾವಶ್ಯಕವಾದ ಯೋಜನೆಗಳನ್ನು ಕಡಿತಗೊಳಿಸಿದಾಗ ಇಷ್ಟು ಮೊತ್ತದ ಹಣವನ್ನು ಸಂಯೋಜಿಸುವುದು ಕಷ್ಟ ಸಾಧ್ಯವಾಗಲಿಕ್ಕಿಲ್ಲ.

ಗ್ರಾಮೀಣ ಪ್ರದೇಶದ ಶೇ. ೭೫ ಜನಸಂಖ್ಯೆ ಬಡತನದಲ್ಲಿದ್ದು ೨೪೦೦ ಕ್ಯಾಲರೀಸ್ ಗಿಂತಲೂ ದಿವಸಕ್ಕೆ ಕಡಿಮೆ ಆಹಾರ ಸೇವನೆ ಮಾಡುತ್ತಿರುವ ಈ ಕಾಲದಲ್ಲಿ ಬಡತನದ ರೇಖೆಯೊಳಗಿನ ತಾಂತ್ರಿಕ ಕಾರಣದಿಂದ ಉಳಿದ ಜನಸಂಖ್ಯೆಯನ್ನು ಉದ್ಯೋಗ ಖಾತರಿ ಯೋಜನೆಯಿಂದ ಹೊರತುಪಡಿಸುವುದು ಆರ್ಥಿಕ, ಸಾಮಾಜಿಕ ದೃಷ್ಟಿಯಿಂದ ಸೂಕ್ತ ವಾಗಿರುವುದಿಲ್ಲ. ಎನ್.ಡಿ.ಎ. ಸರ್ಕಾರ ಅಧಿಕಾರದಲ್ಲಿರುವಾಗ ಸಹಸ್ರಾರು ಗ್ರಾಮೀಣ ಪ್ರದೇಶದ ರೈತ ಮತ್ತು ಕಾರ್ಮಿಕರು ಆತ್ಮಾಹುತಿ ಮಾಡಿಕೊಳ್ಳುವ ಹತಾಶ ಪ್ರಸಂಗಕ್ಕೆ ಇಳಿದಿದ್ದರು. ಕೇರಳದಲ್ಲೇ ಸುಮಾರು ೧೭ ಸಾವಿರ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಉಳಿದ ಭಾಗದಲ್ಲಿ ೧೪ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ೧೪ ವರ್ಷದಿಂದ ಉದ್ಯೋಗ ನಿರ್ಮಿತಿ ಪ್ರಪಾತಕ್ಕೆ ಇಳಿದಿದೆ. ಶೇಕಡಾ ೭೬ರಷ್ಟು ಉದ್ಯೋಗ ಇಳಿಮುಖ ರಾಷ್ಟ್ರವನ್ನು ಕಂಗೆಡಿಸಿದೆ. ಇದನ್ನು ತಡೆಹಿಡಿಯುವ ನಿರ್ದಿಷ್ಟವಾದ ಯಾವ ಯೋಜನೆಗಳು ಫಲಕಾರಿಯಾಗಿಲ್ಲ. ಪಂಜಾಬ್ ಮತ್ತು ಹರಿಯಾಣದ ರೈತರು ಕೂಡ ತಮ್ಮ ಆಂತರಿಕ ಮಾರುಕಟ್ಟೆಯನ್ನು ಕಳೆದುಕೊಂಡರು. ೨೬ ಮಿಲಿಯನ್ ಟನ್ ಆಹಾರ ಧಾನ್ಯಗಳು ಮಾರುಕಟ್ಟೆಯಲ್ಲಿದ ದಾಸ್ತಾನು ಆಗುವ ದುಸ್ಥಿತಿ ಒದಗಿತು. ಬಹುಶಃ ಎನ್.ಡಿ.ಎ. ಸರ್ಕಾರದ ಸೋಲಿಗೂ ಮತ್ತು ಆಗ ನಡೆದ ಅನೇಕ ರಾಜ್ಯ ಸರ್ಕಾರಗಳ ಸೋಲಿಗೂ ಇದೊಂದು ಪ್ರಮುಖ ಕಾರಣವಿರಬಹುದು. ಇವುಗಳಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕವೂ ಸೇರಿದೆ.

ಹತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ಗ್ರಾಮೀಣ ಅಭಿವೃದ್ದಿಗೆ ೨೦೦೨ ರಿಂದ ೨೦೦೭ರವರೆಗೆ ಮೂರು ಲಕ್ಷ ಕೋಟಿ ಮಾತ್ರ ಖರ್ಚು ಮಾಡಲಾಗಿತ್ತು. ಆದುದರಿಂದಲೇ ಗ್ರಾಮೀಣ ಯೋಜನೆಗಳ ಒಟ್ಟು ಪರಿಣಾಮ ಗ್ರಾಮೀಣ ಜೀವನದಲ್ಲಿ ಅತ್ಯಂತ ಕನಿಷ್ಠ ವಾಗಿತ್ತು.

ಈಗ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ GDPಯ ಶೇ. ೧ ಖರ್ಚಾ ಗುವುದಿದ್ದಲ್ಲಿ ಹಣಕಾಸಿನ ಒಟ್ಟು ವ್ಯವಸ್ಥೆಯ ಮೇಲೆ ಇದೊಂದು ದೊಡ್ಡ ಆಘಾತವನ್ನು ಉಂಟುಮಾಡಲು ಸಾಧ್ಯವಿಲ್ಲ. ಆದರೆ ಇಲ್ಲಿಯವರೆಗೆ ಗ್ರಾಮೀಣ ಪ್ರದೇಶದ ಯೋಜನೆಗಳು ಅಂದರೆ ಗ್ರಾಮೀಣ ರೋಜಗಾರ್ ಯೋಜನೆ ನಡೆದು ಬಂದ ದಾರಿ ಅವಲೋಕಿಸಿದರೆ ಅಪಾರವಾದ ದುರುಪಯೋಗ ಮತ್ತು ಭ್ರಷ್ಟಾಚಾರದಿಂದ ನಿಜವಾದ ಪ್ರಯೋಜನ ನೈಜ ಫಲಾನುಭವಿಗಳಿಗೆ ದೊರಕದ ದುರಂತ ಪರಿಸ್ಥಿತಿ ನಮ್ಮ ಮುಂದಿದೆ. ಅನೇಕ ಬಾರಿ ಇದೊಂದು ಮಧ್ಯವರ್ತಿ, ದಲ್ಲಾಳಿಗಳು, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಗುತ್ತಿಗೆದಾರರ ಸಂಪತ್ತಿನ ಖಣಿಯಾಗಿ ಪರಿವರ್ತನೆಗೊಂಡಿದೆ. ಉದಾಹರಣೆಗೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಗೆ ಭಾರತದ ಆಹಾರ ನಿಗಮ ೧,೨೦,೧೧೩ ಟನ್ ಆಹಾರ ಧಾನ್ಯಗಳನ್ನು ತಲುಪಿಸ ಬೇಕೆಂದಿದ್ದರೂ, ಜಿಲ್ಲಾ ಪಂಚಾಯತ್‌ಗಳು ಆಹಾರ ಧಾನ್ಯಗಳ ಪಡೆದ ಲೆಕ್ಕ ೧,೧೩,೯೦೦ ಟನ್‌ಗಳು. ಆದರೆ ಆ ರಾಜ್ಯಗಳ ನಾಗರಿಕ ಸರಬರಾಜು ಇಲಾಖೆ ಹಂಚಿದ ಒಟ್ಟು ಆಹಾರ ಧಾನ್ಯ ೧,೧೩,೫೧೦ ಟನ್‌ಗಳು. ಅಂದರೆ ಶೇ. ೫.೬೫ ಪ್ರಮಾಣದಾಹಾರ ಸರಬರಾಜು ವ್ಯವಸ್ಥೆಯಲ್ಲಿ ಕಣ್ಮರೆಯಾಗಿದೆ. ಅದೇ ಪ್ರಕಾರ ಒಬ್ಬ ಪರಿಣಿತ ಕಾರ್ಮಿಕನಿಗೂ ರೂ. ೮೪ ಮತ್ತು ಪರಿಣಿತರಲ್ಲದ ಕಾರ್ಮಿಕನಿಗೆ ರೂ. ೬೩.೨೩ ಕೂಲಿ ಕೊಡಬೇಕೆಂಬ ನಿಯಮವಿದ್ದರೂ ಅವರು ಪಡೆದಂತಹ ಕೂಲಿ ರೂ. ೩೧ ರಿಂದ ೬೦ರವರೆಗೆ ಅಂದರೆ ಫಲಾನುಭವಿಗಳು ಪಡೆದ ಸರಾಸರಿ ಕೂಲಿ ರೂ. ೫೮.೪೮. ಅದೇ ಪ್ರಕಾರ ರಾಷ್ಟ್ರದ ಒಟ್ಟು ೨೦ ರಾಜ್ಯಗಳಲ್ಲಿ ಒಬ್ಬರಿಗೆ ಸರಾಸರಿ ೫ ಕೆ.ಜಿ. ಧಾನ್ಯ ನೀಡಬೇಕೆಂದು ನಿಯಮವಿದ್ದರೂ ಅವರು ಸರಾಸರಿ ಪಡೆದ ಧಾನ್ಯ ೩.೧೦ ಕೆ.ಜಿ. ಮತ್ತು ೪.೧೮ ಕೆ.ಜಿ. ಗೋಧಿ. ಅನೇಕ ಕಡೆಗಳಲ್ಲಿ ಆಹಾರ ಧಾನ್ಯ ಮತ್ತು ಕೂಲಿ ಹಣದ ಬಿಡುಗಡೆ ಬರಿ ಕಾಗದ ಪತ್ರಗಳಲ್ಲಿಯ ಹೆಚ್ಚಿನ ಉದ್ಯೋಗ ನಿರ್ಮಿತಿ ಅಥವಾ ಕಾಮಗಾರಿಗಳ ವ್ಯವಸ್ಥೆ ಅತ್ಯಂತ ನಿರಾಶದಾಯಕವಾಗಿತ್ತು. ಬಹುಶಃ ಈಗ ಅನುಷ್ಠಾನಕ್ಕೆ ಅಣಿಯಾಗುತ್ತಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೂರಕ್ಕೆ ನೂರು ಪಾಲು ಜಾರಿಯಾಗಬೇಕಾದರೆ ಆಡಳಿತದ  ಪರಿಕ್ರಮದಲ್ಲಿ ಕ್ರಾಂತಿಕಾರಿ ಬದಲಾವಣೆ ಅಗತ್ಯವಿದೆ. ಸೋರಿಕೆಯ ಮತ್ತುದುರುಪಯೋಗ ತಡೆಗಟ್ಟಲು ಉಗ್ರಕ್ರಮ ಮಾತ್ರವಲ್ಲದೆ ಪರಿಣಾಮಕಾರಿ ಆಡಳಿತ ವ್ಯವಸ್ಥೆಯನ್ನು ಎಲ್ಲಾ ಹಂತದಲ್ಲಿ ಪುನರ್ವ್ಯವಸ್ಥೆ ಯಾಗಬೇಕಾಗಿದೆ.

ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ. ೬೦ ಜನಸಂಖ್ಯೆ ತನ್ನನ್ನು ತೊಡಗಿಸುತ್ತದೆ. ಅವರಿಗೆ ಸಲ್ಲತಕ್ಕ ಸಾಮಾಜಿಕ ಭದ್ರತೆ, ಕನಿಷ್ಠ ಸವಲತ್ತು ಅನಿವಾರ‍್ಯವಾಗುತ್ತದೆ. ಗ್ರಾಮೀಣ ಭಾರತ ಆಹಾರ ಧಾನ್ಯ ಮತ್ತು ಉದ್ಯೋಗಕ್ಕಾಗಿ ಹಾತೊರೆಯುತ್ತಿದೆ. ಹಿಂದಿನ ಎನ್.ಡಿ.ಎ. ಸರ್ಕಾರ ಆಡಳಿತದಲ್ಲಿ ೧೭ ಮಿಲಿಯ ಟನ್ ಆಹಾರ ಧಾನ್ಯ ಜೂನ್ ೨೦೦೨ ರಿಂದ ಅಕ್ಟೋಬರ್ ೨೦೦೩ರವರೆಗೆ ತನ್ನ ಗೋದಾಮುಗಳಿಂದ ರಫ್ತು ಮಾಡಿತ್ತು. ಆ ಸಂದರ್ಭದಲ್ಲಿ ೧೫ ವರ್ಷಗಳಿಂದ ಸತತವಾದ ಅತ್ಯಂತ ಭೀಕರ ಬರಗಾಲ ರಾಷ್ಟ್ರವನ್ನು ಬಾಧಿಸುತ್ತಿತ್ತು. ಗರಿಷ್ಠ ಮಟ್ಟದಲ್ಲಿ ಕಾಮಗಾರಿಗಾಗಿ ಆಹಾರ ಧಾನ್ಯವನ್ನು ಉಪಯೋಗಿಸಿ ಉದ್ಯೋಗ ನಿರ್ಮಾಣ ಮಾಡುವುದರ ಬದಲು ಸುಮಾರು ೪೦ ಮಿಲಿಯ ಟನ್ ಹೆಚ್ಚಿನ ದಾಸ್ತಾನನ್ನು ಜನರ ಬರಿಹೊಟ್ಟೆಯ ಮೇಲೆ ಸ್ಥಾಪಿಸಲಾಗಿತ್ತು. ಬಡವರ ಖರೀದಿಸುವ ಶಕ್ತಿ ಸಂಪೂರ್ಣ ಕುಸಿತವಾದಾಗ ಈ ಬಗ್ಗೆ ಯಾವುದೇ ಕಾರ್ಯಕ್ರಮದಲ್ಲಿ ತೊಡಗಲಿಲ್ಲ. ಒಂದು ಕಡೆ ರೈತ ಮತ್ತೊಂದು ಕಡೆ ರೈತ ಮತ್ತು ಕೃಷಿ ಕಾರ್ಮಿಕರು, ಕೆಲಸವಿಲ್ಲದೆ ತಡವರಿಸುತ್ತಿರುವ ಅಪಾರ ಗ್ರಾಮೀಣ ಜನಸಂಖ್ಯೆ ಇವುಗಳನ್ನು ನಿರ್ಲಕ್ಷಿಸಿದ ಸರ್ಕಾರದ ಈ ನಿರ್ಲಕ್ಷ್ಯದಿಂದ ಸಮುದಾಯದ ನೆಮ್ಮದಿ ಕೆಡುತ್ತದೆ. ಇಂದು ದೇಶದಲ್ಲಿ ಜಾರಿಗೊಳ್ಳುತ್ತಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರೈತರು, ರೈತ ಕಾರ್ಮಿಕರು ಗ್ರಾಮೀಣ ಜೀವನ ನೆಚ್ಚಿ ಬದುಕುತ್ತಿರುವ ಜನತೆಗೆ ಕಾಮಧೇನುವಾಗುತ್ತದೆ. ಆದರೆ ಈ ನಿರ್ವಹಣೆ ಪಾರದರ್ಶಕ ವಾಗಿರಬೇಕು ಮತ್ತು ಯಾವುದೇ ರೀತಿಯ ಸೋರಿಕೆಯಿಂದ ವಿರಹಿತವಾಗಿರಬೇಕು. ಅದಕ್ಕೆ ಅನುಗುಣವಾದ ಆಡಳಿತ ಪರಿಕ್ರಮ ಜೋಡಿಸಿ ಎಲ್ಲಾ ಹಂತದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಜನಪ್ರತಿನಿಧಿ ಮತ್ತು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ವ್ಯವಸ್ಥೆ ಇರಬೇಕು.

ಇತ್ತೀಚೆಗೆ ಯೋಜನಾ ಆಯೋಗ ಕೂಡ ಒಂದು ಯೋಜನೆಯನ್ನು ಸಿದ್ಧಪಡಿಸಿ ಪ್ರತೀ ಹಿಂದುಳಿದ ಜಿಲ್ಲೆಗಳಿಗೆ ೧೦೦ ಕೋಟಿಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಹೆಚ್ಚುವರಿ ೪೦ ಕೋಟಿ ರೂ.ಗಳಿಂದ ಭಾರತ ನಿರ್ಮಾಣ ಯೋಜನೆಯಲ್ಲಿ ಕೂಡ ಅಳವಡಿಸಿಕೊಳ್ಳಲು ನಿರ್ಣಯ ಮಾಡಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜೊತೆಯಲ್ಲಿ ಗ್ರಾಮೀಣ ಪ್ರದೇಶದ ಕನಿಷ್ಠ ಅವಶ್ಯಕತೆಗಳಾದ ಕುಡಿಯುವ ನೀರು, ನೈರ್ಮಲ್ಯ, ರಸ್ತೆ ಸಂಪರ್ಕ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಎಲ್ಲಾ ಹಂತದಲ್ಲಿ ಹೆಚ್ಚಿಸುವ ನಿರಂತರ ಪ್ರಕ್ರಿಯೆ ಕೂಡ ನಡೆಯುವಂತೆ ನೋಡಿಕೊಳ್ಳತಕ್ಕದ್ದು. ಇದರಿಂದ ಬಡತನದ ರೇಖೆಯನ್ನು ದಾಟಿ ಮುಂದೆ ಬಂದ ಜನಸಮುದಾಯ ಸ್ವಾವಲಂಬನೆಯ ಜೀವನ ನಡೆಸಲು ಸಾಧ್ಯವಿದೆ. ಇಂತಹ ಪ್ರಕ್ರಿಯೆಗಳು ರಾಷ್ಟ್ರದ ಬಡತನದ ನಿರ್ಮೂಲನಕ್ಕೆ ರಾಮಬಾಣವಾಗಿ ಪರಿವರ್ತನೆಯಾಗಲು ಕಾರಣೀಭೂತವಾಗುತ್ತದೆ. ಇದೊಂದು ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಯ ಪ್ರೇರಕ ಶಕ್ತಿಯಾಗಲು ಕಾರಣವಾಗುತ್ತದೆ.