ಮೀಸಲಾತಿಯ ಪ್ರತಿಭಟನೆ ಉಲ್ಬಣವಾದಾಗ ಓರ್ವ ಪ್ರತಿಷ್ಠಿತ ಉದ್ಯಮಿ ‘ಭಾರತದ ಕ್ರಿಕೆಟ್ ತಂಡದಲ್ಲಿಯೂ ಮೀಸಲಾತಿಯನ್ನು ಏಕೆ ಜಾರಿಗೊಳಿಸಬಾರದು’ ಎಂದು ಅಣಕವಾಡಿದ್ದನ್ನು ಕೇಳಿದ್ದೇವೆ. ಅದೊಂದು ರಾಷ್ಟ್ರದ ಮೀಸಲಾತಿಯ ಸಿದ್ಧಾಂತದ ಬಗ್ಗೆ ಒಂದು ಕೊಂಕು ನುಡಿಯಾದರೂ ಕೆಲವರ ಕುತೂಹಲವನ್ನು ಕೆರಳಿಸಿತು. ಜಾಗತಿಕ ನೋಟವನ್ನು ಹರಿಸಿದಾಗ ಈಗ ಜರ್ಮನಿಯಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್ ಕಪ್ ಒಂದು ವಿಶಿಷ್ಟ ಮತ್ತು ಬಹುಮುಖೀ ಚಿತ್ರವನ್ನು ನೀಡುತ್ತದೆ. ಮೀಸಲಾತಿ ಜಗತ್ತಿನ ಅತ್ಯುತ್ತಮ ಕ್ರೀಡಾ ಪರಿಷತ್ತುಗಳಲ್ಲಿ ಕೂಡ ಅನುಸರಿಸಲ್ಪಡುತ್ತಿರುವ ವಿಚಾರ ಸೋಜಿಗ ವಾದರೂ ವಾಸ್ತವ.

ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಸುಮಾರು ೩೨ ರಾಷ್ಟ್ರಗಳು ವರ್ಲ್ಡ್ ಕಪ್‌ಗೆ ಆಯ್ಕೆ ಯಾಗುತ್ತವೆ. ಆಯ್ಕೆ ಮಾಡುವ ಸಂದರ್ಭದಲ್ಲಿ ಫಿಫಾ ರಾಷ್ಟ್ರಗಳನ್ನು ಮೀಸಲಾತಿಯ ಆಧಾರದ ಮೇಲೆ ಮಾಡುತ್ತದೆ. ಈ ಬಗ್ಗೆ ಎಂಟು ವಿಭಾಗಗಳನ್ನಾಗಿ ವಿಭಜಿಸಲಾಗುತ್ತದೆ. ಅವುಗಳೆಂದರೆ ಆಫ್ರಿಕಾ, ಏಷ್ಯಾ, ಯುರೋಪಿಯನ್, ಉತ್ತರ ಅಮೆರಿಕ ಮತ್ತು ಕೆರಿಬಿಯನ್, ದಕ್ಷಿಣ ಅಮೆರಿಕ ಮತ್ತು ಓಸೇನಿಯಾ ವಿಭಾಗ. ಪ್ರತಿ ಒಂದು ವಿಭಾಗದಲ್ಲಿ ನಿರ್ದಿಷ್ಟ ಆಯ್ಕೆಯ ಗುಣಾಂಕಗಳನ್ನು ಪಡೆಯಬೇಕಾಗಿದೆ. ಇದನ್ನು ಹಿಂದುಳಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳನ್ನು ಸಮನ್ವಯಗೊಳಿಸಿ ನಿರೂಪಿಸಲಾಗುತ್ತದೆ.

ಈ ಮೀಸಲಾತಿಯನ್ನು ೧೯೭೮ ಅಥವಾ ೧೯೮೨ರಲ್ಲಿ ರೂಢಿಗೆ ತಂದ ನಂತರ ಪ್ರತಿ ವರ್ಲ್ಡ್ ಕಪ್‌ನಲ್ಲಿ ಹೆಚ್ಚಾಯಿತೇ ವಿನಾ ಕಡಿಮೆಯಾಗಲಿಲ್ಲ. ಇದರಿಂದಾಗಿ ಜಗತ್ತಿನ ಉತ್ಕೃಷ್ಟ (ವಲ್ಡ್ ಕ್ಲಾಸ್) ಆಫ್ರಿಕಾದ ಕ್ರೀಡಾಳುಗಳು ಪ್ರಕಾಶಮಾನಕ್ಕೆ ಬಂದಿರುವುದು ಮಾತ್ರವಲ್ಲದೆ ವರ್ಲ್ಡ್ ಕಪ್‌ನ ಕೀರ್ತಿ ಮತ್ತು ಪ್ರಸಿದ್ದಿ ಏರಿತು.

ವರ್ಲ್ಡ್ ಕಪ್ ಅರ್ಹತೆಗೆ ಒಳಪಡಿಸುವ ವಿಧಿವಿಧಾನದಿಂದಾಗಿ ಆಫ್ರಿಕಾ, ಏಷ್ಯಾ ಮತ್ತು ಇನ್ನಿತರ ಹಿಂದುಳಿದ ರಾಷ್ಟ್ರಗಳು ಸೀಮಿತವಾದ (Soccer Football) ಭೌತಿಕ ಸಂಪನ್ಮೂಲ ಗಳಿಲ್ಲದಿದ್ದರೂ ವರ್ಲ್ಡ್ ಕಪ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತವೆ. ತನ್ಮೂಲಕ ಜಾಗತಿಕ ಅತ್ಯುತ್ಕೃಷ್ಟ ಕ್ರೀಡಾಳುಗಳು ಹಿಂದುಳಿದ ಸಾಕ್ಕರ್ ವಿಭಾಗಗಳಾದ ಆಫ್ರಿಕಾ ಮತ್ತು ಏಷ್ಯಾಖಂಡಗಳಿಂದ ಸುಮಾರು ಹದಿನೈದು ವರ್ಷಗಳಿಂದ ಹೊರಬರುತ್ತಿದ್ದಾರೆ.

ಈ ರೀತಿಯ ಮೀಸಲಾತಿ ಆಧಾರ ಮತ್ತು ಶಕ್ತಿಯಿಂದ ಆಫ್ರಿಕಾ ಮತ್ತು ಏಷ್ಯಾ ರಾಷ್ಟ್ರಗಳು ವರ್ಲ್ಡ್ ಕಪ್ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ವರೆಗೂ ಮುನ್ನುಗುತ್ತಿದ್ದಾರೆ. ಮುಂದೆ ವರ್ಲ್ಡ್ ಕಪ್‌ನ್ನು ಗಳಿಸುವ ಅತಿದೊಡ್ಡ ಭೀಮ ಹೆಜ್ಜೆಯನ್ನು ಇಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಯಾವುದೇ ಸ್ಪರ್ಧಾತ್ಮಕ ಕಣದಲ್ಲಿ ಮುನ್ನುಗ್ಗುವ ಅವಕಾಶವನ್ನು ನೀಡಿದ್ದೇ ಆದರೆ ಯಾವುದೇ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶ, ದೇಶ ಅಥವಾ ಹಿಂದುಳಿದ ಜನಾಂಗ, ವರ್ಗ ತನ್ನ ಶಕ್ತಿಯನ್ನು ತಾನು ಕಂಡುಕೊಂಡು ವಿಕ್ರಮ ಸ್ವರೂಪ ಪಡೆಯಲು ಸಾಧ್ಯವಿದೆಯೆಂಬುದನ್ನು ಸಾದರಗೊಳಿಸುತ್ತದೆ.

ಇಂತಹ ಜಾಗತಿಕ ಸತ್ಯಗಳನ್ನು ತಿಳಿದೂ ತಿಳಿಯದಂತೆ ನಮ್ಮ ದೇಶದ ಕ್ರೀಡಾ, ಶಿಕ್ಷಣ ಮತ್ತು ಔದ್ಯಮಿಕ ಕ್ಷೇತ್ರದ ದಿಗ್ಗಜರು ವ್ಯವಹರಿಸುತ್ತಿದ್ದಾರೆ. ಭಾರತೀಯ ಅದರಲ್ಲಿಯೂ ಉನ್ನತ ಸ್ತರದಲ್ಲಿರು ವ್ಯಕ್ತಿಗಳ ಇಂದಿನ ಮನೋಸ್ಥಿತಿ ಬದಲಾಗದಿದ್ದರೆ ಜಗತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಭಾರತೀಯರು ಅಪ್ರಸ್ತುತರಾಗುತ್ತಾರೆ ಎಂಬುದು ಕಹಿಯಾದರೂ ಕಟುಸತ್ಯ.

ಸಾಕ್ಕರ್, ಜಗತ್ತಿನ ಅತ್ಯಂತ ರೋಚಕ ಮತ್ತು ಪ್ರಸಿದ್ದಿಯ ಕ್ರೀಡಾ ಕ್ಷೇತ್ರ. ಇಡೀ ಜಗತ್ತಿನ ಗಮನವನ್ನು ಸೆಳೆಯುವುದು ಮಾತ್ರವಲ್ಲದೆ, ರಾತ್ರಿ ಹಗಲು ಜನರನ್ನು ಮುದಗೊಳಿ ಸುತ್ತಿದೆ. ಕ್ರೀಡಾ ಪ್ರತಿಭೆಯ ಅತ್ಯುತ್ಕೃಷ್ಟ ಪ್ರದರ್ಶನ ಇಲ್ಲಿ ನಡೆಯುವುದಲ್ಲದೆ ಜಗತ್ತಿನ ಬೇರೆ ಬೇರೆ ಪ್ರದೇಶದ ಪ್ರತಿ ರಾಷ್ಟ್ರಗಳು ಇದರಲ್ಲಿ ಭಾಗವಹಿಸುವ ಸಮಾನ ಅವಕಾಶವನ್ನು ದೊರಕಿಸಲಾಗಿದೆ.

ಯಾವುದೇ ದುರ್ಬಲ ವರ್ಗಕ್ಕೆ ಸಮಾನ ಅವಕಾಶವನ್ನು ನೀಡಿದ್ದೇ ಆದರೆ ಮತ್ತು ಅಂತಹ ಸ್ಪರ್ಧಾತ್ಮಕ ಕಣವನ್ನು ಪ್ರವೇಶಿಸಿದಾಗ ದುರ್ಬಲವರ್ಗ ಬಲಿಷ್ಠವಾದ ಸಮಾಜವನ್ನು ಎದುರಿಸಬಲ್ಲುದು. ಸುಪ್ತ ಪ್ರತಿಭೆ ಇಂತಹ ಸಮಾನ ಅವಕಾಶ ಇಲ್ಲದೇ ಇದ್ದಾಗ ಅರಳಲು ಅಥವಾ ಸ್ಫೋಟವಾಗಲು ಅವಕಾಶವೇ ಇರುವುದಿಲ್ಲ. ಇಂತಹ ಸಮಾನತೆಯ ಪ್ರತಿಭಾ ಕ್ಷೇತ್ರವನ್ನು ವಿಸ್ತರಿಸುತ್ತದೆ. ವೈವಿಧ್ಯತೆಯ ದಿಗಂತವನ್ನು ತೆರೆಸುತ್ತದೆ.

ಅಮೆರಿಕದ Front page magazine.com ಮಾರ್ಚ್ ೨೧, ೨೦೦೬ ರಂದು ಅಮೆರಿಕದ ನ್ಯಾಷನಲ್ ಫುಟ್ ಬಾಲ್ ಟೀಮ್‌ನವರು ಕಡಿಮೆ ಪಕ್ಷ ಒಬ್ಬರನ್ನಾದರೂ ಅಲ್ಪಸಂಖ್ಯಾತ ಕಪ್ಪು ಜನರನ್ನು ಕೋಚಿಂಗ್ ಉದ್ಯೋಗಕ್ಕೆ ಸೇರಿಸಬೇಕೆಂದೂ, ಸಾಮಾಜಿಕ ಮತ್ತು ಉದ್ಯೋಗ ಸ್ಥಿರೀಕರಣ ಯೋಜನೆಯಲ್ಲಿ ಇದೊಂದು ಅವಿಭಾಜ್ಯ ಅಂಗವಾಗಿರ ಬೇಕೆಂದು ಆಗ್ರಹಿಸಿದ ಮೇಲೆ ೨೦೦೨ರಲ್ಲಿ ಶಾಸನವೊಂದು ಜಾರಿಗೆ ಬಂದು ಅದರ ಪ್ರಕಾರ ಸುಮಾರು ನಾಲ್ಕು ವರ್ಷಗಳ ಹಿಂದೆ ಅಮೇರಿಕದ ನ್ಯಾಷನಲ್ ಫುಟ್ ಬಾಲ್ ಲೀಗ್ ಈ ಕಾನೂನು ಉಲ್ಲಂಘಿಸಿದ ಬಗ್ಗೆ ಡೆಟ್ರಾಯಿಟ್ ಲಾಯನ್ಸ್ ಸಂಸ್ಥೆಗೆ ದಂಡ ಹೇರಿತು.

ಆದುದರಿಂದ ಜನಾಂಗೀಯ, ವರ್ಣೀಯ ಅಥವಾ ಬೇರೆ ಬೇರೆ ರೀತಿಯಲ್ಲಿ ನಡೆಯುವ ಜಗತ್ತಿನ ತಾರತಮ್ಯದ ಬಗ್ಗೆ ಜಗತ್ತಿನ ರಾಷ್ಟ್ರಗಳಲ್ಲಿ ಸಂಘರ್ಷ ನಡೆದು ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಶಾಸನ ಮತ್ತು ಆಡಳಿತಾತ್ಮಕ ಕ್ರಮಗಳು ಜಾರಿಯಲ್ಲಿ ಬಂದಿರುವುದನ್ನು  ಕಾಣುತ್ತೇವೆ. ಆದರೆ ಈ ಬದಲಾವಣೆಗಳು ಅಥವಾ ತಾರತಮ್ಯಗಳನ್ನು ಹೋಗಲಾಡಿಸುವ ಶಾಸನಾತ್ಮಕ ಪ್ರಕ್ರಿಯೆಗಳ ವಿರುದ್ಧ ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ಕೂಡ ಪ್ರತಿಭಟನೆ ಬಂದಿಲ್ಲ.

ಸಮಾನ ಅವಕಾಶಗಳಿಗೆ ರಾಷ್ಟ್ರರಾಷ್ಟ್ರಗಳಲ್ಲಿ ಜನಾಂದೋಲನಗಳು ನಡೆಯುತ್ತಿರುವ ಈ ಕಾಲದಲ್ಲಿ ಸೈದ್ಧಾಂತಿಕ ನಿಲುವಿಗೆ ಅಸಮಾನತೆಯ ನಿವಾರಣೆಗೆ ಪ್ರಾಚೀನ ಕಾಲದಿಂದಲೂ ಬೆಂಬಲ ನೀಡುತ್ತಿರುವ ಭಾರತದ ನೆಲದಲ್ಲಿ ಇಂತಹ ವಿರೋಧಾಭಾಸ ನಡೆಯುತ್ತಿರುವುದು ಅತ್ಯಾಶ್ಚರ್ಯ. ವೇದ ಉಪನಿಷತ್ತುಗಳ ಕಾಲದಿಂದ ಸಾರ್ವತ್ರಿಕವಾಗಿ ಜಾತ್ಯತೀತವಾದ ಸಮಾನತೆಗೆ ಹೆಸರಾದ ದೇಶದಲ್ಲಿ ಸ್ತ್ರೀ ಸಮಾನತೆ ಸೇರಿ, ಡಾ. ಅಂಬೇಡ್ಕರ್ ನೇತೃತ್ವದಲ್ಲಿ ರೂಪಿಸಿದ ಭಾರತದ ಸಂವಿಧಾನದ ಸಮಾನತೆಯ ವಿಧಿ ವಿಧಾನಗಳನ್ನು ಕೂಡ ಉಪೇಕ್ಷಿಸಿ ರಾಷ್ಟ್ರದ ಪರಿವರ್ತನೆಯ ಗಾಲಿಯನ್ನು ಕೆಸರಿನಲ್ಲಿ ಹುದುಗಿಸುವ ಕಾರ್ಯ ಪ್ರತಿಗಾಮಿ ಪ್ರವೃತ್ತಿಯಾಗಿದೆ.

ಇಂತಹ ಸಮಾನತೆಯ ಬೇಡಿಕೆಗೆ ಸ್ಪಂದಿಸುವ ಬದಲು ಅಂತಹ ಸಿದ್ಧಾಂತಗಳ ಮೇಲೆ ಸಮಾಧಿಯ ಚಪ್ಪಡಿಗಳನ್ನು ಹೇರುವ ಇಂದಿನ ಕಾರ್ಯ ದುರುದ್ದೇಶದಿಂದ ಕೂಡಿದೆ. ಸಾಮಾಜಿಕ ಪರಿವರ್ತನೆಯ ಮಂಥನ ಮತ್ತು ತುಮುಲದ ಇಂದಿನ ಕಾಲದಲ್ಲಿ ಭಾವೋನ್ಮಾದ ದಿಂದ ಮುನ್ನುಗ್ಗುವ ಬದಲು ಅತ್ಯಂತ ಸಹನೆ ಮತ್ತು ಸಹಭಾವದಿಂದ ವಿಚಾರ ಮಾಡುವುದು ಅನಿವಾರ‍್ಯವಾಗಿದೆ. ಪ್ರತಿಭೆಯನ್ನು ಸಂಕುಚಿತ ದ್ವೀಪದಲ್ಲಿ ಅಡಗಿಸುವುದರ ಬದಲು ವಿಶಾಲ ಕ್ಷೇತ್ರ ಫಲವತ್ತಾದ ಭೂಮಿಯಲ್ಲಿ ಉಳುಮೆ ಮಾಡಿ ಸಂಪನ್ನ ಬೆಳೆಯನ್ನು ಬೆಳೆಸುವ ಹೊಸ ಪ್ರಕ್ರಿಯೆ ಪ್ರಾರಂಭವಾಗಬೇಕು.

ರಾಷ್ಟ್ರದ ಎರಡನೇ ಆಡಳಿತ ಸುಧಾರಣಾ ಆಯೋಗ ಹೊರಡಿಸಿದ ಪ್ರಶ್ನಾವಳಿ ಮತ್ತು ಅದಕ್ಕೆ ಬಂದಂತಹ ಜನಾಭಿಪ್ರಾಯ ಪ್ರಕಾರ ಭಾರತದ ಸಾರ್ವಜನಿಕ ಅಶಾಂತಿ ಮತ್ತು ಸಾಮಾಜಿಕ ಸಂಘರ್ಷಗಳಿಗೆ ಪ್ರಮುಖ ಕಾರಣಗಳು ೧. ಮತಾಂಧತೆ, ೨. ಜಾತಿಯ ತಾರತಮ್ಯ.

ಆದುದರಿಂದ ಜಾತಿ ಮತ್ತು ಸಂಘರ್ಷದ ಯಥಾಸ್ಥಿತಿಯಿಂದ ಬಿಡುಗಡೆ ಹೊಂದ ಬೇಕಾದರೆ ಸರ್ವರಿಗೂ ಅವಕಾಶವಿದೆಯೆಂಬ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಶ್ವಾಸಾರ್ಹತೆಯ ವಿಪುಲವಾದ ಕ್ಷೇತ್ರವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯಬೇಕಾಗಿದೆ. ಅಮೆರಿಕ, ಯುರೋಪಿನಂತಹ ರಾಷ್ಟ್ರಗಳು ಇಂತಹ ಸಂಘರ್ಷದ ಅಗ್ನಿ ಪಥವನ್ನು ಸುಗಮವಾಗಿ ದಾಟಿ ಬರುತ್ತಿರುವಾಗ ನಾವೇಕೆ ಯೋಚಿಸಿ ಕಾರ್ಯೋನ್ಮುಖರಾಗಬಾರದು? ಅಮೆರಿಕ, ಯುರೋಪಿನಂತಹ ರಾಷ್ಟ್ರಗಳಲ್ಲಿ ಕೂಡ ಎಲ್ಲ ಕ್ಷೇತ್ರಗಳಲ್ಲಿಯೂ ಬೇರೆ ಬೇರೆ ವಿಧಿ ವಿಧಾನಗಳ ಮೀಸಲಾತಿ, ಸಮಾನತೆಯ ಸ್ಥಿರೀಕರಣ, ವೈವಿಧ್ಯಗಳ ಕ್ರೋಡೀಕರಣದ ಹೆಸರಿನಲ್ಲಿ ಸ್ಪರ್ಧಾ ಕಣದ ದುರ್ಬಲ ವರ್ಗಗಳಿಗೆ ಮಹಾದ್ವಾರಗಳನ್ನು ತೆರೆಯುತ್ತಿರುವಂತಹ ಆಧುನಿಕ ಯುಗದಲ್ಲಿ ಭಾರತೀಯ ಮನೋಭೂಮಿಕೆ ಬದಲಾಗದಿದ್ದಲ್ಲಿ ಕಾಲದ ಪ್ರವಾಹದ ವಿರುದ್ಧ ಈಜಾಡಿದಂತಾಗುತ್ತದೆ.