೨೧ನೇ ಶತಮಾನವೊಂದು ಜ್ಞಾನಯುಗ. ಆಯಾಯ ದೇಶದ ಶಕ್ತಿ ಜ್ಞಾನವನ್ನು ಭೌತಿಕ ಮತ್ತು ಸಾಮಾಜಿಕ ಸಂಪತ್ತನ್ನಾಗಿ ಪರಿವರ್ತಿಸುವುದನ್ನು ಹೊಂದಿಕೊಂಡಿರುತ್ತದೆ. ಇದಕ್ಕೆ ಅನುಗುಣವಾದ ಅನ್ವೇಷಣಾ ಪ್ರವೃತ್ತಿ ಜೋಡಿಸಿದಾಗ ಮಾತ್ರ ಇದು ಫಲೀಕರಣ ವಾಗುತ್ತದೆ. ಮುಂದೆ ಕಾಣುವ ಮಾರುಕಟ್ಟೆಗಳು ಜ್ಞಾನದ ಮಾರುಕಟ್ಟೆಗಳಾಗುತ್ತವೆ. ಮುಂದೆ ಬರುವ ಸಮರಗಳು ಸಾಮಾನ್ಯವಾಗಿರುವ ಅಥವಾ ಪರಂಪರಾಗತವಾದ ಕೋವಿ,  ಮಿಸಾಯಿಲ್‌ಗಳಿಂದ ನಡೆಯುವುದಿಲ್ಲ, ಅದರ ಬದಲಾಗಿ ಜ್ಞಾನದ ಮಾರುಕಟ್ಟೆಯಲ್ಲಿ ಮತ್ತು ಮಾಹಿತಿ ಮತ್ತು ಜ್ಞಾನದ ನ್ಯೂಕ್ಲಿಯರ್ ಬಾಂಬುಗಳ ಮೂಲಕ ನಡೆಯುತ್ತವೆ. ಯುದ್ಧಗಳು ಪೇಟೆಂಟ್ ರೈಟ್ಸ್‌ಗಳ ಸಮರಾಂಗಣದಲ್ಲಿ ನಡೆದಾಗ ದುಬಾರಿಯಾದ ಖರ್ಚಿನಿಂದ ಅಂತ್ಯವಾಗುತ್ತದೆ. ಇತ್ತೀಚೆಗೆ ಈಸ್ಟ್ರನ್ ಕ್ರಾಡಿಕ್ ಮತ್ತು ಕಾಲ್‌ರೈಸ್ ಸಂಸ್ಥೆಗಳ ಮಧ್ಯೆ ಪೇಟೆಂಟ್ ರೈಟ್ಸ್‌ಗಳ ಸಮರ ನಡೆದ ಮೇಲೆ ೧ ಬಿಲಿಯನ್ ಡಾಲರ್‌ಗಳ ಪಾವತಿಯ ಅನಂತರ ಸಮರ ಅಂತ್ಯವಾಯಿತು. ಹಿಂದಿನ ಒಂದು ಶತಮಾನದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ತೈಲಗಳ ಉದ್ಯಮಿಗಳಾಗಿದ್ದರು. ಅದು ಜಾನ್ ರಾಕ್‌ಫೆಲ್ಲರ್, ಬ್ರುನೈ ಸುಲ್ತಾನ್‌ವರೆಗೆ ಇಂತಹ ಶ್ರೀಮಂತ ವರ್ಗ ಹರಡಿತ್ತು. ಆದರೆ ಈಗ ಅತ್ಯಂತ ಶ್ರೀಮಂತ ವ್ಯಕ್ತಿ ಜ್ಞಾನದ ಕ್ಷೇತ್ರದಿಂದ ಉತ್ಪಾದನೆಯಾಗಿದ್ದಾರೆ. ಬಿಲ್‌ಗೇಟ್ಸ್ ಇದಕ್ಕೊಂದು ಜ್ವಲಂತ ಉದಾಹರಣೆ. ನಮ್ಮ ದೇಶದ ಎನ್.ಆರ್. ನಾರಾಯಣಮೂರ್ತಿ ಮತ್ತು ಅಜೀಂ ಪ್ರೇಂಜಿ ಅಂತಹವರ ಆವಿರ್ಭಾವ ಕೂಡ ಜಗತ್ತಿನ ಜ್ಞಾನ ಸಂಪತ್ತಿನ ಉತ್ಕ್ರಮಣದ ಸೂಚನೆಗಳಾಗಿವೆ.

ಪ್ರತಿಯೊಬ್ಬ ವ್ಯಕ್ತಿಗೆ ಜ್ಞಾನದ ಹೆಬ್ಬಾಗಿಲನ್ನು ತೆರೆದಾಗ ಅವನು ಜ್ಞಾನದ ಕರ್ಮಚಾರಿ ಯಾಗುತ್ತಾನೆ. ಆದುದರಿಂದ ಯಾವ ರಾಷ್ಟ್ರ ಜ್ಞಾನದ ಸಮುದಾಯವನ್ನು ಸಿದ್ಧಪಡಿ ಸುವುದಿಲ್ಲವೋ ಆ ದೇಶ ಪತನವಾಗುತ್ತದೆ. ಇಂತಹ ಜ್ಞಾನದ ಸಮುದಾಯ ಜಗತ್ತಿಗೆ ನಾಯಕತ್ವವನ್ನು ಕೊಡುವ ಶಕ್ತಿಯನ್ನು ಪಡೆಯುತ್ತದೆ. ಒಂದು ಕಾಲದಲ್ಲಿ ಭಾರತ ಜ್ಞಾನಕ್ಷೇತ್ರದ ಮೂಲಕ ಜಗತ್ತಿನ ನಾಯಕತ್ವ ಪಡೆದಿತ್ತು. ಭಾರತ ಪುನರುತ್ಥಾನ ಪಡೆಯ ಬೇಕಾದರೆ ಜ್ಞಾನ ಸಮುದಾಯದ ವೇಗ ಮತ್ತು ಸಂಕಲ್ಪದ ಮೂಲಕ ಸಾಧಿಸಬಹುದು. ಆದುದರಿಂದ ನಮ್ಮ ರಾಷ್ಟ್ರ ಜ್ಞಾನದ ಸಮುದಾಯವಾಗಬೇಕು. ಅದು ಸಾಧ್ಯವಾಗಬೇಕಾದರೆ ಪ್ರತಿಯೊಬ್ಬ ಭಾರತೀಯ ಜ್ಞಾನದ ಕರ್ಮಚಾರಿಯಾಗಬೇಕು. ವಿಜ್ಞಾನಿ ಮತ್ತು ತಂತ್ರಜ್ಞ ಮಾತ್ರ ಜ್ಞಾನದ ಕರ್ಮಚಾರಿ ಎಂಬ ಹಳೆ ವ್ಯಾಖ್ಯಾನ ಇಂದು ಮರೆಯಾಗಿದೆ.

ಕೃಷಿ ಮತ್ತು ಕ್ಷೀರಕ್ರಾಂತಿ ಕೂಡ ಆಯಾಯ ಕ್ಷೇತ್ರದ ಜ್ಞಾನದ ಕ್ರೋಡೀಕರಣದಿಂದ ಸಾಧ್ಯವೆನಿಸಿದೆ. ಅಂತಹ ಜ್ಞಾನ ವಿಸ್ತರಣೆಯ ಪ್ರಕ್ರಿಯೆ ಕೃಷಿ ಉದ್ಯಮದ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ವೇಗವಾಗಿ ಹರಡಿದಾಗ ಮಾತ್ರ ಜಗತ್ತಿನ ಪ್ರಗತಿಯ ಓಟದಲ್ಲಿ ಭಾರತ ಕೂಡ ಸಹಭಾಗಿಯಾಗಲು ಸಾಧ್ಯವಿದೆ.

ಹಣದ ಬಂಡವಾಳದ ಕೊರತೆಯಿರುವ ಭಾರತದಲ್ಲಿ ಜ್ಞಾನ ಬಂಡವಾಳದ ಮೂಲಕ ಅತ್ಯಂತ ಶ್ರೀಮಂತ ರಾಷ್ಟ್ರವಾಗಲು ಸಾಧ್ಯವಿದೆ. ಜ್ಞಾನ ಉದ್ಯಮದ ಉದಯ ಭಾರತಕ್ಕೆ ಸಂತಸದ ಸಂದೇಶವನ್ನು ತರುತ್ತಿದೆ. ಆದರೆ ಅದರ ಸಂಪೂರ್ಣ ಉಪಯೋಗ ಮಾಡುವ ದೂರದರ್ಶಿತ್ವ, ಸಕ್ರಿಯ ಯೋಜನೆ ಮತ್ತು ಸ್ಥೈರ್ಯದಿಂದ ಮುನ್ನುಗ್ಗುವ ಅಪಾಯವನ್ನು ಎದುರಿಸುವ ಮನೋಭೂಮಿಕೆ ಸಿದ್ಧವಾಗಬೇಕು. ಜ್ಞಾನ ಉದ್ಯಮಗಳಾದ ಸಾಫ್ಟವೇರ್, ಬಯೋಟೆಕ್ಲೋಲಜಿ, ತಾಂತ್ರಿಕ ಸೇವೆ ಮುಂತಾದ ಸ್ಪರ್ಧಾತ್ಮಕ ವಾತಾವರಣದಲ್ಲಿ ದೇಶವನ್ನು ಮುನ್ನಡೆಸುವ ಕುಶಲತೆ ಇಂದು ಬೇಕಾಗಿದೆ. ಅದಕ್ಕೆ ಬೇಕಾದ ದಕ್ಷತೆ ಮತ್ತು ಕುಶಲತೆ ಇಂತಹ ಉದ್ಯಮಗಳ ಪ್ರಗತಿಗೆ ಅನಿವಾರ‍್ಯ. ಇದಕ್ಕೆ ಅನುಗುಣವಾದ ಸರ್ಕಾರದ ಕಾರ್ಮಿಕ ಕಾನೂನುಗಳು ಮತ್ತು ಬಂಡವಾಳ ಹೂಡಿಕೆಯ ವಿಧಿವಿಧಾನಗಳು ರೂಪುಗೊಳ್ಳಬೇಕು. ಇಂಟೆಲ್, ಮೈಕ್ರೊಸಾಫ್ಟ್, ಏಪಲ್ ಮುಂತಾದ ಜಗತ್ಪ್ರಸಿದ್ಧ ಕಂಪನಿಗಳು ಇಂತಹ ಹೊಸ ವಿಧಾನ ವೆಂಚರ್ ಕ್ಯಾಪಿಟಲ್ ಫೈನಾನ್ಸಿಂಗ್‌ಗಳ ಆಧಾರದ ಮೇಲೆಯೇ ತಮ್ಮ ಸಂಪದ್ಭರಿತ ಸೌಧಗಳನ್ನು ನಿರ್ಮಿಸಲು ಸಾಧ್ಯವಾಯಿತು. ಅಂತಹ ಬಂಡವಾಳ ಹೂಡಿಕೆಯ ಸಂಸ್ಥೆಗಳ ಕೊರತೆ ಭಾರತವನ್ನು ಬಾಧಿಸುತ್ತಿದೆ.

ಜಪಾನಿನಂತಹ ರಾಷ್ಟ್ರಗಳು ಖರೀದಿ ಮತ್ತು ಅದರ ಆಮದು ವಸ್ತುಗಳಿಗೆ ಹೆಚ್ಚು ಬೆಲೆಗಳ ಪ್ರಭಾವವಲಯಗಳನ್ನು ನಿರ್ಮಿಸುವ ಆಧಾರದಿಂದ ಪ್ರಗತಿಯನ್ನು ಪಡೆಯುತ್ತವೆ. ಆದರೆ ನಮ್ಮಲ್ಲಿ ಒಂದು ರೀತಿಯ ತಟಸ್ಥ ನೀತಿಯಿಂದ ಅತ್ಯಧಿಕ ಭೌತಿಕ ಮತ್ತು ಮಾನವ ಸಂಪನ್ಮೂಲವಿದ್ದರೂ ಅವುಗಳ ಮೂಲಕ ಹೆಚ್ಚು ಸಂಪತ್ತನ್ನು ನಿರ್ಮಿಸುವ ಪ್ರಭಾವವಲಯ ದಿಂದ ಅಶಕ್ತರಾಗಿದ್ದೇವೆ.

ಭಾರತ ಸಾಂಪ್ರದಾಯಿಕ ಜ್ಞಾನ ಕ್ಷೇತ್ರದಲ್ಲಿ ಮತ್ತು ಜೈವಿಕ ವೈವಿಧ್ಯದಲ್ಲಿ ಜಗತ್ತಿನ ಶೇ. ೮ರಷ್ಟು ಪಾಲನ್ನು ನೀಡುತ್ತಿದೆ. ಇದರ ಮೂಲಕ ಜಗತ್ತಿಗೆ ನಾಯಕತ್ವವನ್ನು ಕೊಡುವ ಶಕ್ತಿಯನ್ನು ಪಡೆದಿದೆ. ಆದರೆ Exim Bankನ ವ್ಯಾವಹಾರಿಕ ಕ್ಷೇತ್ರವನ್ನು ತೆಗೆದುಕೊಂಡರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔಷಧಿಗೆ ಸಂಬಂಧಪಟ್ಟ ಗಿಡಮೂಲಿಕೆಯೇ ೬೦ ಬಿಲಿಯನ್ ಡಾಲರ್‌ನ್ನು ವ್ಯವಹಾರದಲ್ಲಿ ಭಾರತದ ಮಾರುಕಟ್ಟೆಯ ಪಾಲು ಶೇ. ೨.೫ರಷ್ಟು ಮಾತ್ರ. ಜಗತ್ತಿನಲ್ಲಿ ವ್ಯವಹಾರ ಶೇ. ೭ರಷ್ಟು ವಾರ್ಷಿಕ ವೇಗದಲ್ಲಿ ಸಾಗುತ್ತಿದೆ. ಭಾರತದ ಕೊಡುಗೆ ಆಮೆಯ ವೇಗದಲ್ಲಿ ಸಾಗುತ್ತಿದೆ. ಇದೊಂದು ಉದಾಹರಣೆ ಮಾತ್ರ. ಆದರೆ ಹಲವಾರು ಕ್ಷೇತ್ರದ ಸಿಂಹಾವಲೋಕನದ ಬಗ್ಗೆ ಇಂತಹ ವಿಸ್ತಾರವಾದ ಸಂಪದ್ಭರಿತ ಜ್ಞಾನಕ್ಷೇತ್ರ ಇದ್ದರೂ ಇಲ್ಲದಂತೆ ಭಾರತ ತನ್ನ ಮಾನಸಿಕ ಬಡತನವನ್ನು ವ್ಯಕ್ತಪಡಿಸುತ್ತಿದೆ.

೨೧ನೇ ಶತಮಾನ ಏಷ್ಯಾಖಂಡದ ಶತಮಾನವೆಂದೇ ಹೇಳಲಾಗುತ್ತಿದೆ. ಆದುದರಿಂದ ಭಾರತ ತನ್ನ ನಾಯಕತ್ವವನ್ನು ಸ್ಥಿರೀಕರಿಸಲು ಅನೇಕ ಸಾಧ್ಯತೆಗಳಿವೆ. ಭಾರತದ ಭೌತಿಕ ಬಂಡವಾಳದ ಅಪಾರ ಕಣಜದ ಮೂಲಕ ಮೂಲಕ ಆರ್ಥಿಕ ಶಕ್ತಿಯ ಪ್ರಗಲ್ಭವಾದ ಔನ್ನತ್ಯದ ಸ್ಥಾನವನ್ನು ಪಡೆಯಲು ಸಾಧ್ಯವಿದೆ. ಭಾರತದ ಶಕ್ತಿಯ ಬಗ್ಗೆ ಸಾಕಷ್ಟು ವ್ಯಾಖ್ಯಾನಗಳಾಗಿವೆ. ಆದರೆ ಅದರ ಕಾರ್ಯಾಚರಣೆಯ ಬಗ್ಗೆ ಮಾತ್ರ ನಾವು ಸಾಗುತ್ತಿರುವ ವೇಗ ಅಗಣ್ಯ. ಭಾರತ ಸೈದ್ಧಾಂತಿಕ ಜಗತ್ತಿನ ನಾಯಕತ್ವದ ಉತ್ತುಂಗ ಶಿಖರಕ್ಕೆ ಏರಬೇಕಾದರೆ ಜ್ಞಾನ ಸಮುದಾಯದ ವಿಸ್ತಾರ ಮತ್ತು ಹರವು ಸೀಮಾತೀತವಾಗಿ ಬೆಳೆಯಬೇಕು. ಶೇ. ೧ ಶತಶಕ ಪದವೀಧರರುಳ್ಳ ಭಾರತ, ಶೇ. ೮ ಶತಶಕ ಮಾತ್ರ ಮೆಟ್ರಿಕ್ಯುಲೇಶನ್‌ನ ಅನಂತರ ಉನ್ನತ ಶಿಕ್ಷಣಕ್ಕೆ ಸೇರುವ ಜನಸಂಖ್ಯೆಯ ಮೂಲಕ ಜಗತ್ತಿನ ಸ್ಪರ್ಧಾತ್ಮಕ ಜ್ಞಾನಕ್ಷೇತ್ರದ ಉತ್ತರಾಧಿಕಾರಿಗಳಾಗಲು ನಮಗೆ ಸಾಧ್ಯವಿಲ್ಲ.

ಜ್ಞಾನ ಸಮುದಾಯದ ಸ್ಫೋಟವಾದಾಗ ಮಾತ್ರ ಪ್ರಾಜ್ವಲ್ಯಮಾನವಾದ ಹೊಸ ಜಗತ್ತಿಗೆ ನಾವು ಪ್ರವೇಶ ಮಾಡಬಹುದು. ಇಲ್ಲದಿದ್ದಲ್ಲಿ ಬೆರಳೆಣಿಕೆಯಲ್ಲಿ ಕೆಲವರು ಪರಿವರ್ತನೆಯ ಲಾಭವನ್ನು ಪಡೆಯಬಹುದು. ದೇಶ ಪ್ರಗತಿಪರ ಜ್ಞಾನ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಸ್ಥಿರಪಡಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಬೇಕಾದ ಉದಾತ್ತತೆಯ ಮತ್ತು ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಮನೋಭೂಮಿಕೆಯನ್ನು ಸಜ್ಜುಗೊಳಿಸಬೇಕಾಗಿದೆ.

ಜವಾಹರಲಾಲ್ ನೆಹರೂ ತನ್ನ ದೂರದರ್ಶಿತ್ವದಿಂದ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನಸೌಧದ ಅಸ್ತಿಭಾರವನ್ನು ಹಾಕಿದರು. ಆ ಸಂಸ್ಥೆಗಳಲ್ಲಿ  Indian Institute of Science, Indian Institute of Managements, Indian Institute of Technologyಗಳು ಪ್ರಮುಖವಾಗುತ್ತವೆ. ಅದೇ ಪ್ರಕಾರ CSIR ಮತ್ತು ಅದಕ್ಕೆ ಹೊಂದಿಕೊಂಡಿರುವ ವೈಜ್ಞಾನಿಕ ಸಂಸ್ಥೆಗಳನ್ನು ಕೂಡ ಪ್ರಾರಂಭ ಮಾಡಿದರು. ಆ ಸಂಸ್ಥೆಗಳ ಔನ್ನತ್ಯವನ್ನು ಕಾಪಾಡಿಕೊಂಡು ನಾವು ಬರಬೇಕಾಗಿದೆ. ಆದರೆ ಇಂತಹ ಸಂಸ್ಥೆಗಳನ್ನು ವಿಸ್ತಾರವಾಗಿ ಬೆಳೆಸಿಕೊಂಡು ಅತಿ ವಿಸ್ತೃತವಾದ ಜ್ಞಾನ ಸಮುದಾಯವನ್ನು ಸೃಜಿಸುವುದರಲ್ಲಿ ವಿಫಲರಾಗಿದ್ದೇವೆ. ಇದನ್ನು ಪರಿಹರಿಸಲೆಂದೇ ಈಗಿನ ಪ್ರಧಾನ ಮಂತ್ರಿಯವರಾದ ಡಾ. ಮನಮೋಹನ್‌ಸಿಂಗ್‌ರವರು ವಿಸ್ತರಣೆಯ ಅತಿದೊಡ್ಡ ವಿಕ್ರಮ ಹೆಜ್ಜೆಗಳನ್ನು ಹಾಕಿದ್ದಾರೆ. ಬಹುಶಃ ಇನ್ನೊಂದು ಐದು ವರ್ಷದ ನಂತರ ಭಾರತ ಸರ್ಕಾರ ವಿನಿಯೋಗ ಮಾಡುವ ಸಂಶೋಧನೆ ಮತ್ತು ಜ್ಞಾನ ಸಮುದಾಯವನ್ನು ಸೃಜಿಸುವ ಕ್ಷೇತ್ರದಲ್ಲಿ ಬಹುದೊಡ್ಡ ಬಂಡವಾಳವನ್ನು ಹಾಕಿದಾಗ ಮಾತ್ರ ಭಾರತ ತನ್ನ ಶ್ರೇಷ್ಠತೆಯನ್ನು ಜ್ಞಾನಕ್ಷೇತ್ರದಲ್ಲಿ ಭದ್ರಗೊಳಿಸಲು ಸಾಧ್ಯವಿದೆ. ಅದಕ್ಕೆ ಅನುಗುಣವಾದ ಸಾಹಸ ರಾಜಕೀಯ ಇಚ್ಛಾಶಕ್ತಿ ಮತ್ತಷ್ಟು ಬೆಳೆಯಬೇಕಾಗಿದೆ. ಅದರ ಜೊತೆಯಲ್ಲಿ ಜ್ಞಾನಯುಗದ  ಕ್ಷೇತ್ರದಲ್ಲಿ ಈಗಾಗಲೇ ಸೇರಿದ ಭಾರತೀಯ ಜ್ಞಾನ ಪ್ರವರ್ತಕರು ತಮ್ಮ ಸಹಯೋಗವನ್ನು ಮತ್ತು ಬೆಂಬಲವನ್ನು ನೀಡುವುದು ಅನಿವಾರ‍್ಯವಾಗಿದೆ.