‘ಅಮೆರಿಕ ಹೊರಗಿನವರಿಂದ ನಿರ್ನಾಮವಾಗಲು ಸಾಧ್ಯವಿಲ್ಲ, ನಾವು ಎಡವಿದರೆ ಅಥವಾ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಾಗ ನಮ್ಮನ್ನು ನಾವು ನಿರ್ನಾಮ ಮಾಡಿಕೊಂಡಂತಾಗುತ್ತದೆ’ ಎಂದು ಹೇಳಿದ್ದರು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್.

ಟ್ರಾನ್ಸ್‌ಫರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ದಕ್ಷಿಣ ಏಷ್ಯಾದ ಐದು ದೇಶಗಳ ಸಮೀಕ್ಷೆಯಿಂದ ಹೊರಬಂದ ವರದಿ ಪ್ರಕಾರ ಭಾರತದ ಕರ್ನಾಟಕ ಭ್ರಷ್ಟಾಚಾರದಲ್ಲಿ ನಾಲ್ಕನೆ ಸ್ಥಾನವನ್ನು ಪಡೆದಿದೆ. ಪ್ರಥಮ ಸ್ಥಾನ ಬಿಹಾರಕ್ಕೆ ಮತ್ತು ಭ್ರಷ್ಟಾಚಾರ ಅತ್ಯಂತ ಕಡಿಮೆಯುಳ್ಳ ರಾಜ್ಯ ಕೇರಳವಾಗಿದೆ. ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಸಿದ ಸಮೀಕ್ಷೆಗೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ವಿದ್ಯುತ್, ಕಂದಾಯ, ತೆರಿಗೆ, ಪೊಲೀಸು ಮತ್ತು ನ್ಯಾಯಾಂಗ ಇಲಾಖೆಗಳನ್ನು ಪರಿಗಣಿಸಲಾಗಿದೆ. ಈ ರ‍್ಯಾಂಕಿಂಗ್‌ನ ಬಗ್ಗೆ ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು ‘ಕರ್ನಾಟಕ ಭ್ರಷ್ಟಾಚಾರದಲ್ಲಿ ಒಂದನೇ ಸ್ಥಾನದಲ್ಲಿರಬೇಕಿತ್ತು. ನಾಲ್ಕನೆ ಸ್ಥಾನ ಸರಿಯಲ್ಲ’ವೆಂದಿದ್ದಾರೆ. ಹಲವು ವರ್ಷ ಗಳಿಂದ ಲೋಕಾಯುಕ್ತರಾಗಿದ್ದವರು ಈ ರೀತಿಯ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಲೋಕಾಯುಕ್ತ ಸಂಸ್ಥೆಯ ಪ್ರಸ್ತುತತೆಗೇ ಸವಾಲನೊಡ್ಡಿದಂತಾಗುತ್ತದೆ!

ಆಡಳಿತ ಪರಿಕ್ರಮದಲ್ಲಿ ಆಡಳಿತ ಯಂತ್ರದ ಅಥವಾ ಆಡಳಿತಗಾರರ ಮನೋಧರ್ಮ ಮತ್ತು ಚಿಂತನ ಮಾರ್ಗ ಬದಲಾಗಬೇಕು. ಬ್ರಿಟಿಷರ ವಸಾಹತುಶಾಹಿ ಪ್ರವೃತ್ತಿ ಇನ್ನೂ ನಮ್ಮ ಆಡಳಿತ ಪರಿಕ್ರಮದಲ್ಲಿ ಹಾಸುಹೊಕ್ಕಾಗಿದೆ. ಆಳುವವರು ಮತ್ತು ಪ್ರಜೆಗಳು, ಸರಕಾರ ಮತ್ತು ಪ್ರಜೆಗಳು, ಉಚ್ಚ ಮತ್ತು ಕೆಳವರ್ಗದವರು, ಉಚ್ಚಜಾತಿ ಮತ್ತು ಕೀಳುಜಾತಿ ಇತ್ಯಾದಿ ಭ್ರಮೆಗಳು ವಾಸ್ತವಗಳಾಗಿ ಸಾಮಾಜಿಕ ನ್ಯಾಯವನ್ನು ಅಪಹರಿಸುವುದರ ಜೊತೆ ಯಲ್ಲಿ ಆಡಳಿತದ ಪರಿಭಾಷೆ ಮತ್ತು ಪಾರದರ್ಶಕತೆಯನ್ನು ಹಾಳುಗೆಡಹುತ್ತಿವೆ. ಮಾಹಿತಿ ತಂತ್ರ ಮತ್ತು ವಿಜ್ಞಾನ ಬೆಳವಣಿಗೆಯ ಈ ಕಾಲದಲ್ಲಿಯೂ ಗೌಪ್ಯ ಆಡಳಿತೆಯ ಪರಿಕ್ರಮಗಳು ಅಸಾಧುವಾಗಿವೆ. ಪ್ರಸ್ತುತ ರಾಜಕೀಯ ಅಥವಾ ಆರ್ಥಿಕ ಸಿದ್ಧಾಂತಗಳು ಜಗತ್ತನ್ನು ವಿಂಗಡಿಸಿಲ್ಲ. ಬದಲಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತನ್ನು ಬೇರ್ಪಡಿಸಿದೆ. ಜಗತ್ತಿನ ತಂತ್ರಜ್ಞಾನದ ಒಟ್ಟು ಬೇಡಿಕೆಯನ್ನು ಶೇ. ೧೫ರಷ್ಟು ಜನರು ಒದಗಿಸುವ ಈ ಕಾಲದಲ್ಲಿ ಆಡಳಿತ ಮತ್ತು ಅಭಿವೃದ್ದಿಯ ಹೊಸ ಚಿಂತನೆಗಳು ದಿಕ್ಸೂಚಿಗಳಾಗದಿದ್ದರೆ ಪ್ರಗತಿ ಸಾಧ್ಯವಿಲ್ಲ.

ಆಡಳಿತ ಪ್ರಕ್ರಿಯೆ ಮತ್ತು ಮೌಲ್ಯ ಸೃಷ್ಟಿ ನಮ್ಮ ದೇಶದ ಪ್ರಮುಖ ಆದ್ಯತೆಗಳಾಗಿರ ಬೇಕು. ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ನಮ್ಮ ಆಡಳಿತೆಯ ಎಲ್ಲ ಸ್ತರಗಳ ಬೀಜಮಂತ್ರಗಳಾಗಿರಬೇಕು. ವಿಕೇಂದ್ರೀಕರಣ ಮತ್ತು ನಾಗರಿಕರ ಭಾಗವಹಿಸುವಿಕೆ ಆಡಳಿತದ ಮುಖ್ಯ ಸೂತ್ರಗಳಾಗಿರಬೇಕು. ಸ್ವಾತಂತ್ರ್ಯ ಪಡೆದ ೫೮ ವರ್ಷಗಳ ಅನುಭವದ ಮೇಲೆ ರಾಜಕೀಯ ಮತ್ತು ಅಧಿಕಾರಿಶಾಹಿಗಳು ವಿವಿಧ ಸ್ತರದ ಜವಾಬ್ದಾರಿಯನ್ನು ನಿಯಂತ್ರಿಸಲು ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕಾ ಶಾಸನ ಅನಿವಾರ್ಯ. ಆಗ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ವಿಳಂಬ ನೀತಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಸ್ವಚ್ಛಂದತೆಗೆ ಪೂರ್ಣವಿರಾಮ ಹಾಕಬಹುದು.

ಜಾಗತಿಕ ಬ್ಯಾಂಕಿನ ಸೆಪ್ಟೆಂಬರ್ ೨೦೦೪ರ ವರದಿಯ ಪ್ರಕಾರ ಉದ್ಯಮ ಸ್ಥಾಪನೆ ಮಾಡುವುದಕ್ಕಾಗಿಯೇ ಶೇ. ೫೦ರಷ್ಟು ರಾಷ್ಟ್ರೀಯ ವರಮಾನ ಭಾರತದಲ್ಲಿ ಖರ್ಚಾಗುತ್ತದೆ. ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಟ್ಟು ೫೩,೦೦೦ ಕೋಟಿ ರೂಪಾಯಿ ಆರ್ಬಿಟ್ರೇಶನ್ ಕೇಸುಗಳಲ್ಲಿ ಸಿಲುಕಿಕೊಂಡಿದೆ. ನಮ್ಮಲ್ಲಿ ಒಂದು ಒಪ್ಪಂದ ಜಾರಿ ಮಾಡಲು ೪೨೫ ದಿವಸಗಳು ಬೇಕಾಗುತ್ತದೆ. ಇಂತಹ ಅನೇಕ ಅಡೆತಡೆಗಳು ಭಾರತದಲ್ಲಿ ಭ್ರಷ್ಟಾಚಾರ ಮತ್ತು ವಿಳಂಬ ನೀತಿಗೆ ಹೆಚ್ಚಾಗಲು ಕಾರಣವಾಗಿವೆ.

ಮನುಸ್ಮೃತಿಯಿಂದ ಹಿಡಿದು ಸಂವಿಧಾನದ ಆರ್ಟಿಕಲ್ ೩೧೧ರವರಗೆ ಬೇರೆ ಬೇರೆ ವರ್ಣ, ಜಾತಿ ಮತ್ತು ಆಡಳಿತ ಸೂತ್ರವನ್ನು ಹಿಡಿದು ಪ್ರಭುಗಳಿಗೆ ಕಾನೂನು ಮತ್ತು ಹೊಣೆಗಾರಿಕೆಯಿಂದ ವಿನಾಯತಿ ನೀಡುವ ಪ್ರಕ್ರಿಯೆ ರಾಷ್ಟ್ರದಲ್ಲಿ ವ್ಯಾಪಕವಾಗಿ ನಡೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಒಂದು ಹಂತದಲ್ಲಿ ವಸಾಹತುಶಾಹಿ ಪರವಾದ ಆಡಳಿತ ರಂಗವನ್ನು ತೀವ್ರವಾಗಿ ಬದಲಾವಣೆ ಮಾಡುವ ಚಿಂತನೆ ಮಾಡಿದ್ದರು. ಬಹುಶಃ ಅಂತಹ ಕ್ರಾಂತಿಕಾರೀ ಬದಲಾವಣೆ ಇಂದಿನ ಅವಶ್ಯಕತೆಯಾಗಿದೆ. ಒಂದು ಕಡೆ ಜ್ಞಾನ ಅಥವಾ ಮಾಹಿತಿ ಆಧಾರಿತ ಸಮಾಜ, ಮತ್ತೊಂದೆಡೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಖಾಸಗಿ ಕ್ಷೇತ್ರವಿದ್ದರೆ ಈ ಎಲ್ಲಾ ಬದಲಾವಣೆಗಳ ಸೋಂಕು ಕೂಡ ತಟ್ಟಲಾಗದ ಓಬಿರಾಯನ ಕಾಲದ ಆಡಳಿತ ವಿಧಾನ ತಕ್ಷಣ ಬದಲಾಗಲೇಬೇಕು. ಆಡಳಿತದ ವಿಳಂಬ ನೀತಿ, ನಕಾರಾತ್ಮಕ ಧೋರಣೆ ಮತ್ತು ಭ್ರಷ್ಟ ನೀತಿಗಳು ದೇಶದ ಪ್ರಗತಿಯನ್ನು ಹಿಂದಕ್ಕೆ ತಳ್ಳುತ್ತವೆ. ಪ್ರಬಲ ರಾಷ್ಟ್ರಗಳ ಹೆದ್ದಾರಿಗೆ ಭಾರತ ಸೇರದಂತೆ ತಡೆಗಟ್ಟುತ್ತವೆ.

ಜವಾಹರಲಾಲ್ ನೆಹರೂರವರು ಸ್ವಾತಂತ್ರ್ಯ ಸಿಕ್ಕಿದ ಕೆಲವೇ ವರ್ಷದಲ್ಲಿ ಅವರ ಪಕ್ಷಕ್ಕೆ ಸೇರಿದ ಮುದ್ಗಲ್ ಎಂಬ ಸಂಸದರು ಯಾವುದೋ ಒಂದು ಶಿಫಾರಸ್ಸು ಮಾಡಿದರೆಂಬ ಕಾರಣದಿಂದ ಸಂಸದೀಯ ಸಮಿತಿಯ ವಿಚಾರಣೆಯ ನಂತರ ಸಂಸತ್ ಸದಸ್ಯತ್ವವನ್ನೇ ರದ್ದು ಮಾಡುವ ನಿರ್ಣಯ ಸಂಸತ್ತಿನ ಮುಂದಿಟ್ಟಾಗ ಅಂಗೀಕೃತವಾಯಿತು. ಇಂತಹ ಆದರ್ಶಗಳು ನಮ್ಮ ದೇಶದ ಸಾರ್ವಜನಿಕ ಜೀವನದಲ್ಲಿ ಪ್ರಾಧಾನ್ಯತೆ ಪಡೆಯಬೇಕು. ಅಧಿಕಾರ, ಹೊಣೆಗಾರಿಕೆ ಮತ್ತು ಸಾಧನೆಗಳು ಅಧಿಕಾರ ಪರಿಧಿಯ ಅವಿಭಾಜ್ಯ ಅಂಗಗಳಾಗ ಬೇಕು. ಇವುಗಳ ಉಲ್ಲಂಘನೆ ರಾಷ್ಟ್ರದಲ್ಲಿ ಅಪರಾಧಗಳೆಂದು ಪರಿಗಣಿಸಬೇಕು.

ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಹಲವು ಸೀಮಿತ ಉದಾಹರಣೆಗಳನ್ನು ಹೊಂದಿಕೊಂಡು ತಮ್ಮ ವರದಿಯನ್ನು ನೀಡಿರಬಹುದು. ಅದನ್ನು ಎಷ್ಟರಮಟ್ಟಿಗೆ ಸಾರ್ವತ್ರಿಕ ವಾದ ಅರ್ಹತಾ ಪತ್ರವೆಂದು ಪರಿಗಣಿಸಬಹುದೋ ಹೇಳಲಾಗುವುದಿಲ್ಲ. ಆ ವರದಿ ಯಲ್ಲಿಯೇ ಹೇಳಿರುವಂತೆ ೩೦೦೦ ಸ್ಯಾಂಪಲ್‌ಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿ, ಭಾರತಕ್ಕೆ ಸ್ಯಾಂಪಲ್‌ಗಳ ಸಂಖ್ಯೆ ಜಾಸ್ತಿಯಿರಬೇಕೆಂದು ಅಭಿಪ್ರಾಯಪಡಲಾಗಿದೆ. ಆ ವರದಿಯನ್ನೇ ಸಾಕ್ಷ್ಯಾಧಾರವನ್ನಾಗಿ ಉಪಯೋಗ ಮಾಡಿಕೊಂಡು ತಮ್ಮ ತೀರ್ಪುಗಳನ್ನು ನೀಡುವಂತಿಲ್ಲ. ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ವರದಿ ಪ್ರಕಾರ ಭಾರತವನ್ನು ೧೩೩ ರಾಷ್ಟ್ರಗಳಲ್ಲಿ ೮೩ನೇ ಭ್ರಷ್ಟ ರಾಷ್ಟ್ರವೆಂದು ಗುರುತಿಸಲಾಗಿದೆ. ಅದೊಂದು ನಮ್ಮ ದೇಶದ ಮತ್ತು ರಾಜ್ಯದ ವಸ್ತುಸ್ಥಿತಿಗೆ ನೀಡಿದ ಕೆಂಪು ನಿಶಾನೆ ಎಂದು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಅನುಷ್ಠಾನ ಗೊಳಿಸದಿದ್ದರೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆಯುಂಟಾಗಬಹುದು. ಈ ಲೇಖಕ ತೆರಿಗೆ ಸುಧಾರಣಾ ಆಯೋಗ ಮತ್ತು ಕಂದಾಯ ಸುಧಾರಣಾ ಆಯೋಗದ ಮೂಲಕ ನೀಡಿದ್ದ ವರದಿ ಆಡಳಿತ ಪರಿಕ್ರಮ ಮಾದರಿಗಳನ್ನು ಕೂಡ ಶಿಫಾರಸ್ಸು ಮಾಡಿದೆ. ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಬೇಕು. ಬರೀ ಲೋಕಾಯುಕ್ತರ ದಾಳಿಗಳೇ ಪರಿಹಾರ ಗಳಲ್ಲ. ಆಡಳಿತ ಪರಿಕ್ರಮದ ವ್ಯಾಪಕವಾದ ಬದಲಾವಣೆಯೇ ಭ್ರಷ್ಟಾಚಾರದ ನಿರ್ಮೂಲನಕ್ಕೆ ಏಕೈಕ ಮಾರ್ಗ.

ಸಂಯುಕ್ತ ರಾಷ್ಟ್ರೀಯ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ರವರ ಹೇಳಿಕೆ ಪ್ರಕಾರ ‘ಭ್ರಷ್ಟಾಚಾರ ಸಮಾಜವನ್ನು ಕ್ಷೀಣಿಸುವ ಅತ್ಯಂತ ಕೆಟ್ಟ ಪ್ಲೇಗ್ ಮಾರಿ ಯಾಗಿದೆ. ಇದು ಪ್ರಜಾಪ್ರಭುತ್ವ ಕಾನೂನಿನ ವ್ಯವಸ್ಥೆಯನ್ನು ಕೆಡಿಸಿ, ಮಾನವ ಹಕ್ಕುಗಳನ್ನು ಮುರಿದು, ಮಾರುಕಟ್ಟೆಗಳಲ್ಲಿ ವಿಕಲ್ಪತೆಯನ್ನು ಕಲ್ಪಿಸಿ, ಜೀವನ ಮೌಲ್ಯಗಳನ್ನು ಹಿಂಜುತ್ತದೆ. ವ್ಯವಸ್ಥಿತ ಅಪರಾಧ ಜಾಲ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನು ಹೆಚ್ಚಿಸಿ ಮಾನವ ಸಮುದಾಯಕ್ಕೆ ಅಪಾಯವನ್ನು ತಂದೊಡ್ಡುತ್ತದೆ’ ಈ ಸಂದೇಶಕ್ಕೆ ಭಾರತ ಎಚ್ಚರಿಕೆಯಿಂದ ಸ್ಪಂದಿಸಬೇಕಾಗಿದೆ.