ಜಪಾನಿನ ಪ್ರಧಾಮಂತ್ರಿ ಕೊಯ್ಜಿಮಿಯವರು ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಲಿಬರಲ್ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷರಾಗಿ ತಮ್ಮ ಪ್ರಧಾನಿ ಪಟ್ಟವನ್ನು ತೊರೆಯಲಿದ್ದಾರೆ. ಪರಿವರ್ತನೆಯ ಹರಿಕಾರರಾಗಿ ಜಪಾನಿನ ರಾಜಕೀಯ ಮತ್ತು ಪ್ರಗತಿಯ ಚಿತ್ರವನ್ನೇ ಬದಲಾವಣೆ ಮಾಡಿರುವ, ಆತ್ಮವಿಶ್ವಾಸದ ಪ್ರತೀಕರಾಗಿರುವ ಕೊಯ್ಜಿಮಿಯವರು ದೇಶಕ್ಕೆ ‘ಸುಧಾರಣೆ ಇಲ್ಲದೆ ಅಭಿವೃದ್ದಿ ಇಲ್ಲ’ವೆಂಬ ಘೋಷಣೆಯನ್ನು ಸಾರಿ ಇಡೀ ಜಪಾನಿನ ಆರ್ಥಿಕ ನಕಾಶೆಯಲ್ಲಿ ಬೃಹತ್ ಪರಿವರ್ತನೆಯನ್ನು ತಂದರು. ಇದು ಜಪಾನಿನ ಹೊಸ ಯುಗವೆಂದರೂ ಅತಿಶಯೋಕ್ತಿಯಲ್ಲ. ಅಂತಾರಾಷ್ಟ್ರೀಯ ಸಂಬಂಧದಲ್ಲಿ ದೇಶದ ರಾಜಕೀಯದಲ್ಲಿ ಮತ್ತು ಆರ್ಥಿಕ ವಾತಾವರಣದಲ್ಲಿ ಹಿಂದೆ ಅಥವಾ ಮುಂದೆ ಕಾಣದ ಮತ್ತು ಕಾಣಲಾಗದ ಪರಿಸ್ಥಿತಿಯನ್ನು ನಿರ್ಮಿಸಿದರು. ಇವರು ಪ್ರಧಾನಿಯಾಗುವ ಮೊದಲು ಅಂದರೆ ೨೦೦೧ನೇ ಇಸವಿಯ ಹಿಂದೆ ಜಪಾನಿನಲ್ಲಿ ೧೨ ವರ್ಷಗಳ ಕಾಲ ಹತ್ತು ಪ್ರಧಾನಿಗಳು ಆಗಿ ಹೋಗಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಸ್ಥಗಿತವಾಗಿತ್ತು. ವಿದೇಶ ನೀತಿ ದಿಕ್ಕಾ ಪಾಲಾಗಿತ್ತು. ಕೊಯ್ಜಿಮಿ ದೇಶವನ್ನು ಅಭೂತಪೂರ್ವವಾಗಿ ಆಳಿದ್ದು ಮಾತ್ರವಲ್ಲ; ತನ್ನ ದೂರದರ್ಶಿತ್ವದಿಂದ ದೇಶದಲ್ಲಿ ಜನಪ್ರಿಯರಾಗಿದ್ದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜಪಾನಿನ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ್ದರು. ರಾಷ್ಟ್ರದ ಆರ್ಥಿಕ ಪುನರುತ್ಥಾನ ಮಾತ್ರವಲ್ಲ, ವಿದೇಶಿ ಸಂಬಂಧದಲ್ಲಿಯೂ ಸಮರೋತ್ತರ ಕಾಲದಲ್ಲಿ ಅಭೂತ ಪೂರ್ವ ಸಿದ್ದಿಯನ್ನು ಪಡೆದರು.

ಸಂಪೂರ್ಣವಾಗಿ ಅತಂತ್ರವಾಗಿದ್ದ ಅಥವಾ ಅರಾಜಕತೆಯಿಂದ ತುಂಬಿದ್ದ ಜಪಾನಿನ ರಾಜಕೀಯ ನಕಾಶೆಯನ್ನು ಬದಲಾಯಿಸಿದ ಅವರೊಬ್ಬ ಅತ್ಯಂತ ನವ್ಯ ಮತ್ತು ಅಪರೂಪದ ರಾಜಕಾರಣಿ. ಜನತೆಯ ಜೊತೆಯಲ್ಲಿ ನೇರವಾಗಿ ಮಾತನಾಡಿದರು. ಅದು ವಿಶೇಷವಾದ ಮತ್ತು ಪಕ್ಷಾತೀತವಾದ ಭೂಮಿಕೆಯನ್ನು ಸಿದ್ಧಪಡಿಸಿತು. ಅದರಿಂದಾಗಿಯೇ ಸಮಗ್ರವಾದ ಬದಲಾವಣೆಯ ರಾಷ್ಟ್ರೀಯ ಕಾರ್ಯಕ್ರಮವನ್ನು ದೇಶಕ್ಕೆ ನೀಡಲು ಸಾಧ್ಯವಾಯಿತು. ಅವರು ನಿವೃತ್ತಿಯಾದಾಗ, ಜಪಾನಿನ ಅತ್ಯಂತ ಗರಿಷ್ಠ ಸಮಯ ಆಳಿದ ಪ್ರಧಾನಿಗಳಲ್ಲಿ ಮೂರನೆ ಯರು ಮಾತ್ರವಲ್ಲ, ಜನಪ್ರಿಯತೆಯನ್ನು ಉಳಿಸಿಕೊಂಡು ಅಧಿಕಾರವನ್ನು ಬಿಟ್ಟ ಏಕೈಕ ಪ್ರಧಾನಿಯಾಗುತ್ತಾರೆ. ಪಕ್ಷದ ಆಂತರಿಕ ಕಲಹವನ್ನು ನಿಲ್ಲಿಸಿ ಪಕ್ಷಕ್ಕೆ ಭದ್ರತೆಯನ್ನು ನೀಡಿದರು. ಕಳೆದ ಮೂರು ವರ್ಷದಿಂದ ಅತ್ಯಂತ ಸುಭದ್ರ ಆರ್ಥಿಕ ಸೌಧವನ್ನು ನಿರ್ಮಾಣ ಮಾಡಿದರು. ಕಳೆದ ಮೂರು ವರ್ಷದಿಂದ ನಿಕಿಸ್ಟಾಕ್ ಮಾರ್ಕೆಟ್ ಇಂಡೆಕ್ಸ್ ಶೇಕಡ ೬೬ಕ್ಕೆ ಏರಿತ್ತು. ಐದು ವರ್ಷದಲ್ಲಿ ಆರ್ಥಿಕತೆಯ ಇಳಿಮುಖ ಕೊನೆಗೊಂಡಿತು. ತಮ್ಮ ಎಲ್ಲಾ ಕಾರ್ಯಕ್ರಮದಲ್ಲಿ ನವ್ಯತೆಯನ್ನು ರೂಢಿಸಿಕೊಂಡರು. ಕಳೆದ ವರ್ಷ ತನ್ನ ಪಕ್ಷದ ಆಂತರಿಕ ಕಲಹದ ವಿರುದ್ಧ ಸಮರವನ್ನೇ ಹೂಡಿ ಪಾರ್ಲಿಮೆಂಟನ್ನು ವಿಸರ್ಜಿಸಿ ಚುನಾವಣೆ ನಡೆಸಿ ಮತ್ತೊಮ್ಮೆ ಯಶಸ್ವಿಯಾಗಿ ಅಧಿಕಾರಕ್ಕೆ ಬಂದರು. ಕೊಯ್ಜಿಮಿ ಆಡಳಿತಶಾಹಿಯ ಹಿಡಿತದಿಂದ ದೇಶದ ಪ್ರಗತಿಯನ್ನು ಬಿಡುಗಡೆ ಮಾಡಿದರು. ಪಟ್ಟಭದ್ರ ಹಿತಾಸಕ್ತಿಗಳನ್ನು ಸದೆಬಡಿದು ಸುಧಾರಣೆಯ ಹೆದ್ದಾರಿಯಲ್ಲಿ ದೇಶವನ್ನು ಕೊಂಡೊಯ್ದರು.

ಕೊಯ್ಜಿಮಿಯವರ ವಿಶೇಷತೆ ಎಂದರೆ ರಾಷ್ಟ್ರದ ಜನರನ್ನು ಪ್ರಜಾಪ್ರಭುತ್ವದ ಪ್ರಕ್ರಿಯೆ ಯಲ್ಲಿ ತೊಡಗಿಸಿ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನೇ ಪುನರುತ್ಥಾನಗೊಳಿಸಿದರು. ಜಗತ್ತಿನ ಆರ್ಥಿಕ ಮುಖ್ಯ ಪ್ರವಾಹದಲ್ಲಿ ಸದೃಢ ಜಪಾನನ್ನು ಸೇರಿಸಿದ ಕೀರ್ತಿ ಅವರಿಗೆ ಸಲ್ಲತಕ್ಕದ್ದು. ಅಮೆರಿಕದ ಜೊತೆಯಲ್ಲಿ ಸುಭದ್ರ ಸಂಬಂಧವನ್ನು ಬೆಳೆಸಿಕೊಂಡರು. ಬಹುಶಃ ಅಮೆರಿಕದ ಜೊತೆಯಲ್ಲಿ ಇಷ್ಟು ಅನ್ಯೋನ್ಯತೆ ಗಳಿಸಿದ ಜಪಾನ್ ಪ್ರಧಾನಮಂತ್ರಿಯವರು ಇನ್ನೊ ಬ್ಬರಿಲ್ಲ. ವೃತ್ತಿಪರ ರಾಜಕಾರಣಿಗಳೇ ಪ್ರಭುತ್ವವನ್ನು ಗುತ್ತಿಗೆ ತೆಗೆದುಕೊಂಡಿರುವ ಇಂದಿನ ಕಾಲದಲ್ಲಿ ಡಾ. ಮನಮೋಹನ್‌ಸಿಂಗ್ ಮತ್ತು ಕೊಯ್ಜಿಮಿ ಹೊಸ ಮನ್ವಂತರವನ್ನು  ರಾಜಕೀಯ ನೆಲೆಯಲ್ಲಿ ಸ್ಥಾಪಿಸಿದರು. ಇದೊಂದು ಅನುಕರಣೀಯ ಮತ್ತು ಆದರ್ಶ ಪ್ರಕ್ರಿಯೆ ಎನಿಸುತ್ತದೆ. ತಮ್ಮ ಪಕ್ಷದ ಜನರೇ ತಮ್ಮನ್ನು ಸಹಿಸದಿದ್ದಾಗ ಕೊಯ್ಜಿಮಿ ಪುನಃ ಮತದಾರರ ಅಭಯಹಸ್ತವನ್ನು ಪಡೆದು ಮತ್ತೆ ಜನಾಭಿಪ್ರಾಯವನ್ನು ಸ್ಥಿರೀಕರಿಸಿದರು. ಒಂದು ರೀತಿಯಲ್ಲಿ ಜನರಿಂದ ನೇರವಾಗಿ ಅಧಿಕಾರದ ಮನ್ನಣೆಯನ್ನು ಪಡೆದು ಪ್ರಗತಿಪರ ಸುಧಾರಣಾ ಪಥದಲ್ಲಿ ದೇಶವನ್ನು ಮುನ್ನಡೆಸಿಕೊಂಡು ಹೋದರು. ಬಹುಶಃ ಜಗತ್ತಿನ ರಾಜಕೀಯದಲ್ಲಿ ಇದೊಂದು ಹೊಸ ತಿರುವು. ಪ್ರಗತಿ ಮತ್ತು ಸುಧಾರಣೆಯ ದೀಕ್ಷೆಯೊಂದಿಗೆ ರಾಜಕೀಯ ಹಿಡಿತವನ್ನು ಬಲಪಡಿಸಿಕೊಂಡ ದಾಖಲೆ ಕೊಯ್ಜಿಮಿಯವರದ್ದು. ದೇಶದ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಪ್ರಧಾನ ಪಾತ್ರವನ್ನು ವಹಿಸದೆ ಪ್ರಗತಿಯ ಹೊಸ ಪರಂಪರೆ ಯನ್ನು ಹಾಕಿಕೊಟ್ಟರು. ಇಂತಹ ದಾರಿಗೆ ಜನಮನ್ನಣೆಯೂ ದೊರಕಿತು.

ಬಹುಶಃ ಭಾರತದ ಪ್ರಧಾನಿ ಡಾ. ಮನಮೋಹನ್‌ಸಿಂಗ್ ಕೂಡ ತಮ್ಮ ಪ್ರಗತಿಪರ ಮತ್ತು ಸುಧಾರಣಾ ಪರಂಪರೆಯನ್ನು ಮುಂದಿಟ್ಟುಕೊಂಡು ದೇಶದ ವರ್ತಮಾನ ಮತ್ತು ಭವಿಷ್ಯದ ಸುಭದ್ರ ಹೆದ್ದಾರಿಯಲ್ಲಿ ಸಾಗುತ್ತಿದ್ದಾರೆ. ಅದಕ್ಕೆ ಅನುಗುಣವಾದ ಬೆಂಬಲ ಜನರಿಂದ ದೊರಕಿದಾಗ ಭಾರತ ಪ್ರಗತಿ ಶಿಖರ ಏರುವುದರಲ್ಲಿ ಅನುಮಾನವಿಲ್ಲ.

ಉತ್ತರ ಕೊರಿಯಾ ಕ್ಷಿಪಣಿ ಹಾರಿಸುವ ಸಿದ್ಧತೆಯಲ್ಲಿದ್ದಾಗ ಜಪಾನಿನಷ್ಟು ಬಲವಾಗಿ ವಿರೋಧ ಮಾಡಿದ ದೇಶ ಇನ್ನೊಂದಿಲ್ಲ. ಆರ್ಥಿಕ ನಿರ್ಬಂಧವನ್ನು ಕೂಡ ಹಾಕುವ ನಿರ್ಣಯವನ್ನು ಸಂಯುಕ್ತ ರಾಷ್ಟ್ರದ ಭದ್ರತಾ ಸಮಿತಿಯಲ್ಲಿ ತರಲಾಯಿತು. ಇದು ಜಪಾನಿನ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ನಿರ್ಣಯವಾಗಿತ್ತು. ಹೀಗೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಸ್ವಂತಿಕೆ, ಸ್ಥೈರ್ಯ ಮತ್ತು ಕ್ರಿಯಾಶೀಲತೆಯನ್ನು ಕೊಯ್ಜಿಮಿ ಜಪಾನಿನ ಪ್ರಧಾನಮಂತ್ರಿಯಾಗಿ ಮೆರೆದರು. ಒಬ್ಬ ಆರ್ಥಿಕತಜ್ಞ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಆಡಳಿತವನ್ನು ನಿರ್ವಹಿಸಿದ ಪ್ರಸಂಗವನ್ನು ಭಾರತದಲ್ಲಿ ಡಾ. ಮನಮೋಹನ್ ಸಿಂಗ್‌ರವರ ವ್ಯಕ್ತಿತ್ವದಲ್ಲಿ ಕಾಣಬಹುದು. ಇಂತಹ ಅಪರೂಪದ ನಾಯಕಮಣಿಗಳಲ್ಲಿ ಡಾ. ಮನಮೋಹನ್‌ಸಿಂಗ್ ಮತ್ತು ಕೊಯ್ಜಿಮಿ ಅಗ್ರಗಣ್ಯರಾಗುತ್ತಾರೆ.